Wednesday, January 27, 2021

ಸಂಪಾದಕರ ಡೈರಿಯಿಂದ

 ವಿಜ್ಞಾನ ಶಿಕ್ಷಣ ಇಂದು ಸಂಕ್ರಮಣ ಸ್ಥಿತಿಯಲ್ಲಿದೆ. ಅದರಲ್ಲಿಯೂ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕಲಿಕೆಯನ್ನು ಆಸಕ್ತಿದಾಯಕವಾಗಿಸುವಲ್ಲಿ ಶಿಕ್ಷಕರ ಜವಾಬ್ದಾರಿ ಮಹತ್ತರವಾದುದು. ವಿದ್ಯಾರ್ಥಿಗಳ ಮನಸ್ಸನ್ನು ಅವಿಷ್ಕಾರಗಳ ಕಡೆಗೆ ಆಕರ್ಷಿಸುವ ರೀತಿಯ ಬೋಧನೆ ಅವಶ್ಯವಿದೆ. ವಿಜ್ಞಾನದ ಪರಿಕಲ್ಪನೆಗಳನ್ನು ಸರಳವಾಗಿ ಮತ್ತು ಸುಲಲಿತವಾಗಿ ಅವರಿಗೆ ತಲುಪಿಸಬೇಕಿದೆ. ಇದಕ್ಕೆ ಪೂರಕವಾಗಿ ವಿಜ್ಞಾನ ಶಿಕ್ಷಕರಾಗಿ ನಾವು ತಯಾರಾಗಬೇಕಿದೆ. ನಮ್ಮ ಜ್ಞಾನವನ್ನು ಪಠ್ಯಪುಸ್ತಕಗಳಿಗೇ ಸೀಮಿತಗೊಳಿಸಿಕೊಳ್ಳದೆ, ವಿಸ್ತರಿಸಿಕೊಳ್ಳಬೇಕಿದೆ. ಇಂದು ಅಂತರಜಾಲದ ಕೃಪೆಯಿಂದಾಗಿ ಮಾಹಿತಿಗಳಿಗೆ ಕೊರತೆಯಿಲ್ಲ. ಆದರೆ ಅದನ್ನು ಸೂಕ್ತವಾಗಿ ನಾವು ಬಳಸಿಕೊಳ್ಳಬೇಕಿದೆ. ತಂತ್ರಜ್ಞಾನವು ನೀಡಿರುವ ಸಾಧನಗಳನ್ನು ಬಳಸಿಕೊಂಡು ಈ ನಿಟ್ಟಿನಲ್ಲಿ ನೀವುಗಳು ಮಾಡುತ್ತಿರುವ ಪ್ರಯತ್ನಗಳಿಗೆ ಪೂರಕವಾದ ಒಂದು ಪ್ರಯತ್ನವೇ ಈ ‘ವಿಜ್ಞಾ’.

ಶಿಕ್ಷಣ ಕ್ಷೇತ್ರದಲ್ಲಿನ ನನ್ನ ಸೇವೆಯ 50ನೇ ವರ್ಷಕ್ಕೆ 2021ರಲ್ಲಿ ಕಾಲಿಡುತ್ತಿರುವ ಸಂದರ್ಭದಲ್ಲಿ ಪ್ರೌಢಶಾಲಾ ಹಂತದವರೆಗಿನ ವಿಜ್ಞಾನ ಶಿಕ್ಷಕರಿಗೆ, ಮತ್ತು ತನ್ಮೂಲಕ ವಿಜ್ಙಾನದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂಥ ಕೊಡುಗೆಯನ್ನೇನಾದರೂ ನೀಡಬೇಕೆಂಬ ವಿಚಾರ ನನ್ನಲ್ಲಿ ಮಡುಗಟ್ಟಿತ್ತು. ವಿಜ್ಞಾನ ವಿಷಯಗಳ ಮಂಥನಕ್ಕೆ ಸಂಬಂಧಿಸಿದಂತೆ ಇ-ಪತ್ರಿಕೆಯೊಂದನ್ನು ಪ್ರಾರಂಭಿಸುವ ಬಗ್ಗೆ ಯೋಚಿಸಿದ್ದೆ. ನನ್ನ ಜೊತೆ ನಿರಂತರ ಸಂಪರ್ಕದಲ್ಲಿರುವ ಕೆಲವು ಉತ್ಸಾಹಿ ವಿಜ್ಞಾನ ಶಿಕ್ಷಕರ ಜೊತೆಗೆ ಸಮಾಲೋಚಿಸಿದಾಗ ಅವರಿಂದ ದೊರೆತ ಸಕಾರಾತ್ಮಕ ಪ್ರತಿಕ್ರಿಯೆ ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು. ಕೂಡಲೇ ಕಾರ್ಯಪ್ರವೃತ್ತವಾದ ಆ ಶಿಕ್ಷಕರ ತಂಡ ಕೆಲವೇ ದಿನಗಳಲ್ಲಿ ನನ್ನ ಕನಸಿಗೆ ಒಂದು ಮೂರ್ತರೂಪ ಕೊಡುವಲ್ಲಿ ಯಶಸ್ವಿಯಾಯಿತು. ಅದರ ಫಲವೇ ಈಗ ನಿಮ್ಮ ಮುಂದಿರುವ ‘ಸವಿಜ್ಞಾನ’ ಎಂಬ ಬ್ಲಾಗ್.

ಕನ್ನಡ ಸಾಹಿತ್ಯದ ದಿಗ್ಗಜರಲ್ಲೊಬ್ಬರಾದ ಡಾ.ಡಿ.ವಿ.ಗುಂಡಪ್ಪ ತಮ್ಮ ‘ಮಂಕುತಿಮ್ಮನ ಕಗ್ಗ’ ಕೃತಿಯಲ್ಲಿ ಹೇಳಿರುವಂತೆ,
ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು |
ಹೊಸ ಯುಕ್ತಿ ಹಳೆ ತತ್ವದೊಡಗೂಡೆ ಧರ್ಮ |
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ |
ಜಸವು ಜನ ಜೀವನಕೆ ಮಂಕುತಿಮ್ಮ |

ಈ ಮೊದಲ ಸಂಚಿಕೆ ಒಂದು ರೀತಿಯಲ್ಲಿ ಪ್ರಾಯೋಗಿಕ ಸಂಚಿಕೆ. ಈ ಬಾರಿಯ ಸಂಚಿಕೆಯಲ್ಲಿ ಹಲವು ವಿಶಿಷ್ಟ ವಿಷಯಗಳ ಬಗ್ಗೆ ಲೇಖನಗಳಿವೆ. ಓದಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. ಇಷ್ಟವಾದಲ್ಲಿ ಬೇರೆಯವರಿಗೂ ತಿಳಿಸಿ.

ಸವಿಜ್ಞಾನದ ಮುಂದಿನ ಸಂಚಿಕೆಗಳಲ್ಲಿ ವಿಜ್ಞಾನದ ಕುತೂಹಲಕಾರಿ ಅಂಶಗಳ ಜೊತೆಗೆ, ವಿವಿಧ ವಿಷಯಗಳ ಬಗ್ಗೆ ವಿಚಾರಪೂರಿತ ಲೇಖನಗಳು, ಭಾರತೀಯ ಮತ್ತು ವಿದೇಶಿ ವಿಜ್ಞಾನಿಗಳ ಪರಿಚಯ, ಅವರ ಜೀವನದಲ್ಲಿ ನಡೆದ ಪ್ರೇರಣಾದಾಯಕ ಘಟನೆಗಳು, ಮುಂತಾದ ಹಲವು ಆಯಾಮಗಳ ವೈವಿಧ್ಯಮಯ ಹೂರಣ ಇರಬೇಕೆಂಬುದು ನಮ್ಮ ಆಶಯ. ಸವಿಜ್ಙಾನದ ಮೂಲಕ ಸವಿಯಾದ ಜ್ಞಾನವನ್ನು ಪಸರಿಸುವ ನಮ್ಮ ಈ ವಿಜ್ಞಾನ ಪರಿಚಾರಿಕೆಯ ಕೆಲಸದಲ್ಲಿ ನೀವೂ ಸಹ ಭಾಗವಹಿಸಬಹುದು. ನಿಮ್ಮಲ್ಲಿರುವ ಕ್ರಿಯಾಶೀಲತೆಯನ್ನು ಪ್ರೇರೇಪಿಸುವಲ್ಲಿ ‘ಸವಿಜ್ಞಾನ’ ಯಶಸ್ವಿಯಾದರೆ, ನಮ್ಮ ಶ್ರಮ ಸಾರ್ಥಕ.

ಡಾ.ಟಿ.ಎ.ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು

No comments:

Post a Comment