Tuesday, May 4, 2021

ಆತ್ಮ ನಿರ್ಭರ ಭಾರತಕ್ಕೆ ಅಡಿಗಲ್ಲಾದ ರಾಷ್ಟ್ರೀಯ ಆಟಿಕೆ ಮೇಳ -2021

ಆತ್ಮ ನಿರ್ಭರ ಭಾರತಕ್ಕೆ ಅಡಿಗಲ್ಲಾದ ರಾಷ್ಟ್ರೀಯ ಆಟಿಕೆ ಮೇಳ -2021 

ಲೇಖಕರು: ಚನ್ನಪ್ಪ ಕೆ.ಎಂ

ಸಹ ಶಿಕ್ಷಕರು

ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ)

ದೇವನಹಳ್ಳಿ. ಬೆಂಗಳೂರು ಗ್ರಾಮಾಂತರ ಜಿಲ್ಲೆ


ಭಾರತಕ್ಕೆ ಅಗತ್ಯವಿರುವ ಆಟಿಕೆಗಳ ಪೈಕಿ ಪ್ರತಿಶತ 80ರಷ್ಟು ಆಟಿಕೆಗಳನ್ನು ಭಾರತವು ಹೊರದೇಶಗಳಿಂದ ಅದರಲ್ಲೂ ಪ್ರಮುಖವಾಗಿ ಚೀನಾದಿಂದ ಆಮದು ಮಾಡಿಕೊಳ್ಳುತ್ತಿದೆ. ಆಮದು ಮಾಡಿಕೊಳ್ಳುತ್ತಿರುವ ಆಟಿಕೆಗಳ ವಹಿವಾಟು ಅಂದಾಜು ಸರಾಸರಿ ವಾರ್ಷಿಕ  6.7 ಲಕ್ಷ ಕೋಟಿ.

ಈ ಆಟಿಕೆಗಳು ಕಳಪೆ ಗುಣಮಟ್ಟದ ಮತ್ತು ಅಗ್ಗದ ಆಟಿಕೆಗಳಾಗಿರುವುದು ಕಂಡುಬಂದಿದೆ. ಇವುಗಳು  ಭಾರತೀಯ ಆಟಿಕೆ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡುತ್ತಿವೆ. ಆಮದು ಮಾಡಿಕೊಳ್ಳುತ್ತಿರುವ ಆಟಿಕೆಗಳಲ್ಲಿ ಅತಿ ಹೆಚ್ಚಿನವು ಪ್ಲಾಸ್ಟಿಕ್ ಆಟಿಕೆಗಳೇ ಆಗಿವೆ. ಅವುಗಳಲ್ಲಿ  ಶೇಕಡ 30ರಷ್ಟು ದೊಡ್ಡಪ್ರಮಾಣದ ರಾಸಾಯನಿಕಗಳು ಮತ್ತು ಭಾರ ಲೋಹಗಳನ್ನು  ನಿಗದಿತ ಮಟ್ಟಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ  ಹೊಂದಿರುವುದು  ಕಂಡುಬಂದಿದ್ದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿವೆ.   ಇವುಗಳನ್ನು ನಿಯಂತ್ರಿಸುವುದು ಆಟಿಕೆಗಳ ತಯಾರಿಕೆಯಲ್ಲಿ ಸ್ವಾವಲಂಬನೆಯನ್ನು  ಪಡೆದುಕೊಳ್ಳುವುದು ಹಾಗೂ  ಭಾರತೀಯ ಆಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಷ್ಟ್ರೀಯ ಆಟಿಕೆ ಮೇಳ 2020  ಎಂಬ ವಿನೂತನ ಕಾರ್ಯಕ್ರಮವನ್ನು ಇತ್ತೀಚಿಗೆ ರಾಷ್ಟ್ರಮಟ್ಟದಲ್ಲಿ ಆನ್ಲೈನ್  ಪೋರ್ಟಲ್ ನಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.  ಇದರ ಮತ್ತೊಂದು ಪ್ರಮುಖ  ಉದ್ದೇಶವೆಂದರೆ ಭಾರತಿಯ ಕುಶಲಕರ್ಮಿಗಳಿಗೆ ಮತ್ತು ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವುದು.  ಭಾರತೀಯ ಸಂಸ್ಕೃತಿಗೆ ಅನುಗುಣವಾದ ಆಟಿಕೆಗಳನ್ನು ತಯಾರಿಸವುದು ಹಾಗೂ ಆಟಿಕೆ ಕ್ಷೇತ್ರದಲ್ಲಿ ಸಂಶೋಧನೆಗೆ ಅವಕಾಶ ಕಲ್ಪಿಸುವುದು ಮತ್ತು ಉದ್ಯೋಗವಕಾಶಗಳನ್ನು ಹೆಚ್ಚಿಸುವುದಾಗಿದೆ.

ಭಾರತವು ಶ್ರೀಮಂತ ಮತ್ತು ಬಹುಮುಖ ಆಟಿಕೆ ಉತ್ಪಾದನಾ ಕ್ಷೇತ್ರವನ್ನು ಹೊಂದಿರುವುದರಿಂದ ಅದನ್ನು ಬಲಗೊಳಿಸುವ ನಿಟ್ಟಿನಲ್ಲಿ ರೂಪಿತವಾದ ಈ ಕಾರ್ಯಕ್ರಮವು ಮೊಟ್ಟಮೊದಲ ಬಾರಿಗೆ ಫೆಬ್ರವರಿ 27 ರಿಂದ ಮಾರ್ಚ್ 2-2021ರ ತನಕ ಜರುಗಿ ಜನಮನ್ನಣೆಗೆ ಪಾತ್ರವಾಯಿತು. ನವೀನ ಆಟಿಕೆಗಳಿಗೆಗಳ ಪರಿಕಲ್ಪನೆಗಳಿಗೆ ಟಾಯ್ಕತಾನ್, ಟಾಯ್ ಫೇರ್ ಎಂಬ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭಾರತೀಯ ನಾಗರಿಕತೆಇತಿಹಾಸ, ಸಂಸ್ಕೃತಿ, ಪುರಾಣ ಮತ್ತು ನೀತಿ ಕಥೆಗಳನ್ನು ಆಧರಿಸಿದ ಆಟಿಕೆಗಳ ಅಭಿವೃದ್ಧಿ ಎಂಬ ಆಶಯದಡಿ ಭಾರತೀಯ ಪ್ರತಿಭೆಗಳಿಗೆ ಒಂದು ದೊಡ್ಡ ಅವಕಾಶವನ್ನು ಈ ಕಾರ್ಯಕ್ರಮವು ಕಲ್ಪಿಸಿಕೊಟ್ಟಿತು.   ಈ ಕಾರ್ಯಕ್ರಮದಲ್ಲಿ ರಾಷ್ಟ್ರಾದ್ಯಂತ ಶಿಕ್ಷಕರುಆಟಿಕೆ ತಜ್ಞರು, ಕುಶಲಕರ್ಮಿಗಳು ಕಾನ್ಪುರ ಮತ್ತು ಗಾಂದೀನಗರ ಐ ಐ ಟಿಗಳೂ  ಕೂಡ ಭಾಗವಹಿಸಿದ್ದವು. ನೂತನ ಮಾರ್ಪಾಡುಗಳೊಂದಿಗೆ ದೇಸೀಯ ಆಟಿಕೆಗಳು ಪ್ರದರ್ಶನಗೊಂಡವು. ಈ ಕಾರ್ಯಕ್ರಮಕ್ಕೆ ಸುಮಾರು 26,10,106 ಜನರು ನೊಂದಾಯಿಸಲ್ಪಟ್ಟಿದ್ದರು, 1,074 ಪ್ರದರ್ಶಕರು,  100ಕ್ಕೂ ಹೆಚ್ಚು ಸಂಪನ್ಮೂಲವ್ಯಕ್ತಿಗಳು ಪ್ರಮುಖ ಭಾಷಣಕಾರರಾಗಿ  ಕಾರ್ಯಕ್ರಮಕ್ಕೆ ಮೆರುಗು ನೀಡಿದರು. 4.2 ಮಿಲಿಯನ್ ಗಿಂತ ಹೆಚ್ಚು ಜನರು ಈ ಆನ್ಲೈನ್ ಪ್ರದರ್ಶನಕ್ಕೆ ಭೇಟಿ ನೀಡಿದ್ದರು. 

ಈ ಕಾರ್ಯಕ್ರಮದಲ್ಲಿ ಡಿ.ಎಸ್.ಇ.ಆರ್.ಟಿ ಕರ್ನಾಟಕವು ಕೂಡ ಪ್ರದರ್ಶಕರಾಗಿ ಭಾಗವಹಿಸಿತ್ತು. ಡಿಎಸ್ಇಆರ್ ಟಿ ಯ ನಿರ್ದೇಶಕರಾದ ಶ್ರೀ ಮಾರುತಿ M. R ರವರ ಹಾಗೂ  ಜಂಟಿನಿರ್ದೇಶಕರಾದ ಶ್ರೀಮತಿ ಗಾಯತ್ರಿದೇವಿಯವರ ಮಾರ್ಗದರ್ಶನದಲ್ಲಿ ನೋಡಲ್ ಅಧಿಕಾರಿಯಾ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ ಮಹದೇವ್‌ರವರ ಮೇಲುಸ್ತುವಾರಿಯಲ್ಲಿ ರಾಜ್ಯ ಸಂಪನ್ಮೂಲ ಶಿಕ್ಷಕರ ತಂಡವು ಗಣಿತದ ವಿಷಯವಾಗಿ ಸುಮಾರು 40 ಕ್ಕಿಂತಲೂ ಹೆಚ್ಚಿನ ಆಟಿಕೆಗಳನ್ನು ಅಭಿವೃದ್ದಿಪಡಿಸಿ ಪ್ರದರ್ಶನಕ್ಕೆ ಇಟ್ಟಿತ್ತು. ತಂಡದಲ್ಲಿ ಖ್ಯಾತ  ಒರಿಗಾಮಿ ತಜ್ಞರಾದ VSS ಶಾಸ್ತ್ರಿಯವರು ಮಾರ್ಗದರ್ಶಕರಾಗಿ, ರಾಜ್ಯ ಗಣಿತ ಸಂಪನ್ಮೂಲ ವ್ಯಕ್ತಿಗಳಾದ T. K. ಪ್ರಸನ್ನ ಮೂರ್ತಿಯವರ ನಾಯಕತ್ವದಲ್ಲಿ   ರಾಜ್ಯ ಸಂಪನ್ನೂಲ  ಶಿಕ್ಷಕರುಗಳಾದ  ಶ್ರೀ ಚನ್ನಪ್ಪ ಕೆ.ಎಂ, ಶ್ರೀ ನಾಗೇಶ್, ಶ್ರೀ ಅನಿಲ್ ಕುಮಾರ್ , ಶ್ರೀ ಸುನಿಲ್ ಕುಮಾರ್ ಜೋಶಿ, ಶ್ರೀ ಸ್ವಾಮಿ H R ಹಾಗೂ ಶಿಕ್ಷಕಿ ಶ್ರೀಮತಿ ಅನಂತಲಕ್ಷ್ಮಿ ತಂಡದಲ್ಲಿದ್ದರು ಹಾಗೂ ತಾಂತ್ರಿಕ ಸಲಹೆಗಾರರಾದ ಗುರುರಾಜ್ ಹಾಗೂ ಶ್ರೀಮತಿ ಪಾರ್ವತಿವರು ಕಾರ್ಯಕ್ರಮದ ಸಂಯೋಜಕರಾಗಿದ್ದರು. ಸಂಘಟಿತ ಪ್ರಯತ್ನ, ಹಿರಿಯರಿಂದ ಸೂಕ್ತ ಹಿಮ್ಮಾಹಿತಿ ಹಾಗೂ ನೂತನ ಲೋಚನೆಗಳ ಪರಿಣಾಮವಾಗಿ ಒಟ್ಟಾರೆ ತಂಡವು ಯಶಸ್ವಿಯಾಗಿ ಪಾಲ್ಗೊಂಡು ಪ್ರಶಂಸೆಗೆ ಪಾತ್ರವಾಯಿತು.

ಓಹ್‌ !! ಅಲ್ಲಿ ಪ್ರದರ್ಶನಗೊಂಡ ಆಟಿಕೆಗಳನ್ನು ಮಾಡುವುದು ನಮಗೂ ತಿಳಿದರೆ ಎಷ್ಟು ಒಳ್ಳೇದಿತ್ತು ಎಂದು ಅನಿಸುತ್ತಿದೆಯೇ? ಖಂಡಿತ ಮುಂದಿನ ಸಂಚಿಕೆಗಳಲ್ಲಿ  ನಿಮ್ಮ ನಿರೀಕ್ಷೆಯಂತೆ ನಿಮಗೆ ಗಣಿತ ವಿಜ್ಞಾನದ ಅನೇಕ ಆಟಿಕೆಗಳನ್ನು ಮಾಡುವುದು ಹೇಗೆ ? ಅವುಗಳ ಕಾರ್ಯತತ್ವವೇನು? ವೈಜ್ಞಾನಿಕ ಹಿನ್ನಲೆ ಏನು ?ಮೊದಲಾದ ವಿಷಯಗಳನ್ನು ಕುರಿತ ಲೇಖನಗಳನ್ನು ನಮ್ಮ ಲೇಖಕರು ಮಾಹಿತಿ ನೀಡಲಿದ್ದಾರೆ. ಹಾಗೆಯೇ ನೀವೂ ಇಂತಹ ಸರಳ ಆಟಿಕೆಗಳ ತಯಾರಿಕೆಯ ಕುರಿತಂತೆ ಲೇಖನ ಬರೆಯಬಹುದು. 


ಈ ಲೇಖನದ ಪಿ.ಡಿ.ಎಫ಼್. ಫೈಲ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಲು 

ಇಲ್ಲಿ ಕ್ಲಿಕ್ ಮಾಡಿ 👉 ಆತ್ಮ ನಿರ್ಭರ ಭಾರತಕ್ಕೆ ಅಡಿಗಲ್ಲಾದ ರಾಷ್ಟ್ರೀಯ ಆಟಿಕೆ ಮೇಳ - 2021



 





2 comments: