Tuesday, May 4, 2021

ಸಂಪಾದಕರ ಡೈರಿಯಿಂದ

ಸಂಪಾದಕರ ಡೈರಿಯಿಂದ

ಇದು ‘ಸವಿಜ್ಞಾನ’ದ ಐದನೆಯ ಸಂಚಿಕೆ. ಕಳೆದ ನಾಲ್ಕು ಸಂಚಿಕೆಗಳಿಗೆ ನಾಡಿನ ಶಿಕ್ಷಕ ಮಿತ್ರರು ಹಾಗೂ ವಿಜ್ಞಾನಾಸಕ್ತರು ನೀಡಿರುವ ಪ್ರತಿಕ್ರಿಯೆ ಆಶಾದಾಯಕವಾಗಿದೆ. ಅದರಲ್ಲಿಯೂ, ನಮ್ಮಲ್ಲಿ ಪ್ರಕಟವಾಗುತ್ತಿರುವ ಸಾಂದರ್ಭಿಕ ಲೇಖನಗಳ ಬಗ್ಗೆ ಹಾಗೂ ಸಾಧಕರ ಪರಿಚಯ ಲೇಖನಗಳ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದಿದೆ. ಏಪ್ರಿಲ್ ೨೨ರ  ‘ವಿಶ್ವ ಭೂ ದಿನ’ಕ್ಕೆ ಸಂಬಂಧಿಸಿದಂತೆ ಪ್ರಕಟವಾದ ‘ ಭೂಮಿ ಅಂದರೆ ಏನರ್ಥ? ‘ ಲೇಖನವು ಓದುಗರನ್ನು ಅಂತರಾವಲೋಕನಕ್ಕೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಗಣಿತಜ್ಞ ವಿ.ಎಸ್. ಶಾಸ್ತ್ರಿಯವರ ‘ಗಣಿತವನ’ ದ ಪರಿಚಯ ಹಲವಾರು ಶಿಕ್ಷಕರನ್ನು ಅಲ್ಲಿಗೆ ಭೇಟಿ ನೀಡುವಂತೆ ಪ್ರೇರೇಪಣೆ ನೀಡಿದೆ. ಲೇಖನಗಳು ಓದುಗರಿಗೆ ಪ್ರೇರಣಾದಾಯಕವಾಗುತ್ತಿದೆ ಎಂದಲ್ಲಿ ನಾವು ನಮ್ಮ ಗುರಿಯತ್ತ ಸಾಗುತ್ತಿದ್ದೇವೆ ಎಂಬ ನಂಬಿಕೆ ನಮಗೆ ಮೂಡಿದೆ.

ಮೇ ತಿಂಗಳ ಸಂಚಿಕೆಯಲ್ಲಿ ವಿ.ಎಸ್. ಶಾಸ್ತ್ರಿಯವರ ಶ್ರಮದ ಇನ್ನೊಂದು ಮುಖವಾದ ಅವರ ವೈಯುಕ್ತಿಕ ವಸ್ತು ಸಂಗ್ರಹಾಲಯದ ಪರಿಚಯ ಲೇಖನವಿದೆ. ಸಸ್ಯಗಳು ಸುವರ್ಣ ಅನುಪಾತವನ್ನು ಅಳವಡಿಸಿಕೊಂಡಿರುವ ಬಗ್ಗೆ ಒಂದು ಲೇಖನವಿದೆ. ಅರಣ್ಯದ ರೋಚಕತೆಗಳನ್ನು ಪರಿಚಯಿಸುವ ಪ್ರಯತ್ನವಿದೆ. ಚಾರ್ಲ್ಸ್ ಡಾರ್ವಿನ್ ಬಗ್ಗೆ ಕುತೂಹಲಕರ ಮಾಹಿತಿ ನೀಡುವ ಲೇಖನವಿದೆ. ಹಾಲಿನ ಉಪಯುಕ್ತತೆಯನ್ನು ಪರಿಚಯಿಸುವ ಲೇಖನವೂ ಇದೆ. ಜೊತೆಗೆ, ಮಾನ್ಯ ಪ್ರಧಾನಮಂತ್ರಿಗಳ ‘ಆತ್ಮ ನಿರ್ಭರ ಭಾರತ’ ಕಾರ್ಯಕ್ರಮದ ಅಡಿಯಲ್ಲಿ ನಡೆದ ‘ಆಟಿಕೆ ಮೇಳ’ದಲ್ಲಿ ರಾಜ್ಯ ಶಿಕ್ಷಣ ಇಲಾಖೆಯ ಸಹಯೋಗದ ಬಗ್ಗೆ ಒಂದು ವರದಿಯೂ ಇದೆ. ಈ ಸಂಚಿಕೆಯಿಂದ ‘ತೆರೆ ಮರೆಯ ಸಾಧಕರು’ ಶೀರ್ಷಿಕೆಯಲ್ಲಿ ಪ್ರತಿ ತಿಂಗಳು ಒಬ್ಬ ಕ್ರಿಯಾಶೀಲ ಶಿಕ್ಷಕರ ಸಾಧನೆಯ ಪರಿಚಯ ಮಾಡಿಕೊಡಲಾಗುತ್ತದೆ. ಎಂದಿನಂತೆ, ನಿಮ್ಮನ್ನು ರಂಜಿಸಲು ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳೂ ಇವೆ.

ರಾಷ್ಟ್ರದಾದ್ಯಂತ ಕೋವಿಡ್-೧೯ರ ಎರಡನೆಯ ಅಲೆಯ ತೀವ್ರತೆ ಕಾಡುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಜವಾಬ್ದಾರಿ ಎಂದಿಗಿಂತ ಹೆಚ್ಚಿದೆ. ಅನಗತ್ಯ ಓಡಾಟವನ್ನು ನಿಲ್ಲಿಸಿ, ಎಲ್ಲೆಡೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು, ಸೂಕ್ತವಾದ ಮಾಸ್ಕ್ ಧರಿಸುವ ಮೂಲಕ ಮಾತ್ರ ಸೋಂಕು ಹರಡುವುದನ್ನು ನಿಯಂತ್ರಿಸಬಹುದಾಗಿದೆ. ಜವಾಬ್ದಾರಿಯುತ ನಾಗರೀಕರಾದ ನಾವು ಈ ನಿಯಮಗಳನ್ನು ಪಾಲಿಸುವುದಷ್ಟೇ ಅಲ್ಲದೆ, ಈ ನಿಟ್ಟಿನಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸಿ, ಈ ಸಂಕಷ್ಟದಿಂದ ಪಾರಾಗುವಂತೆ ಮಾಡಬೇಕಿದೆ. ಇದನ್ನು ಸದಾ ನೆನಪಿನಲ್ಲಿಟ್ಟುಕೊಂಡು ಈ ಸಂಚಿಕೆಯನ್ನು ಆಸ್ವಾದಿಸುವಿರಲ್ಲವೇ ?

 

ಡಾ, ಟಿ.ಎ.ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು


No comments:

Post a Comment