Friday, June 4, 2021

ಶಿಕ್ಷಣದಲ್ಲಿ ಆಟಿಕೆಗಳ ಬಳಕೆ – ಒಂದು ಪ್ರಯೋಗ

ಶಿಕ್ಷಣದಲ್ಲಿ ಆಟಿಕೆಗಳ ಬಳಕೆ ಒಂದು ಪ್ರಯೋಗ

ಲೇಖಕರು:   ಅನಿಲ್ ಕುಮಾರ್ ಸಿ.ಎನ್. 
ಸರ್ಕಾರಿ ಪ್ರೌಢಶಾಲೆ  ಅರಳಾಳುಸಂದ್ರ,
ರಾಮನಗರ ತಾ|| 
ರಾಮನಗರ ಜಿಲ್ಲೆ 

 ಆಟಿಕೆಗಳು ಅಂದ್ರೆ ಏನೋ ಖುಷಿ, ಮನಸ್ಸಿಗೆ ಹಿತ, ಕೈಗೆ ಸಿಕ್ಕ ಆಟಿಕೆಯನ್ನು ಹಿಡಿದು ಒಮ್ಮೆಯಾದರು ಆಟವಾಡಿಯೇ ತೀರಬೇಕೆನ್ನುವ ಬಯಕೆ. ಕಿರಿಯರಿಂದ ಹಿರಿಯರವರೆಗೆ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲಿಯೂ ಮಕ್ಕಳಿಗೆ ಆಟಿಕೆಗಳೊಂದಿಗೆ ಸಮಯ ಕಳೆಯುವುದೆಂದರೆ ಎಲ್ಲಿಲ್ಲದ ಪ್ರೀತಿ. ಮಕ್ಕಳು ಆಟಿಕೆಗಳನ್ನು ಇಷ್ಟ ಪಡುವಷ್ಟು ಅಥವಾ ಅದರೊಟ್ಟಿಗೆ ಕಾಲ ಕಳೆಯುವುದಕ್ಕೆ ತೋರಿಸುವಷ್ಟು ಅಸಕ್ತಿಯನ್ನು ಪಾಠ ಕಲಿಯಲು ನೀಡುವುದಿಲ್ಲ ಎಂದು ಶಿಕ್ಷಕರಾದ ನಾವುಗಳು ಬಹಳಷ್ಟು ಬಾರಿ ಗಮನಿಸಿ, ಮಕ್ಕಳಿಗೂ ಹೇಳಿದ್ದುಂಟು. ಹೌದಲ್ವಾ?

ಒಮ್ಮೆ ನನ್ನ ತರಗತಿಯಲ್ಲಿ ವಿದ್ಯಾರ್ಥಿಯೊಬ್ಬನು ಎಂದು ನಿಂತುಸಾರ್, ಇವತ್ತು ಪಾಠ ಬೇಡ ಸರ್, ಯಾಕೋ ಬೇಜಾರಾಗ್ತಿದೆ, ಯಾವುದಾದರೂ ಆಟ ಆಡಿಸಿಎಂದ. ಉಳಿದ ವಿದ್ಯಾರ್ಥಿಗಳು ಸಹ ಅವನ ಮಾತಿಗೆ ತಲೆದೂಗಿದರು. ಎಲ್ಲರೂ ಒಟ್ಟಾಗಿಆಟ ಆಡಿಸಿ ಸರ್, ಆಟ ಆಡಿಸಿ ಸರ್ಎಂದು ಕೂಗಲಾರಂಭಿಸಿದರು. ಬಹತೇಕ ನಮ್ಮೆಲ್ಲರ ಅನುಭವ ಅದೇ ಅಲ್ವೇ? ಹೀಗಿರುವಾಗ ನನ್ನ ಪಾಠ ಆಲಿಸುವ ಮನಸ್ಥಿತಿಯಲ್ಲಿ ಅವರಿಲ್ಲ ಎನ್ನುವುದು ಖಾತ್ರಿಯಾಯಿತು. ಇಂತಹ ಪರಿಸ್ಥಿತಿಯಲ್ಲಿ ಬಲವಂತದ ಮಾಘಸ್ನಾನ ಮಾಡಿಸುವುದು ಒಂದೇ. ಗೋರ್ಕಲ್ಲ ಮೇಲೆ ನೀರು ಸುರಿಯುವುದೂ ಒಂದೇ ಅಲ್ವಾ ? ಹಾಗಾಗಿ ವಿಜ್ಞಾನದ ಪರಿಕಲ್ಪನೆಗಳು  ಈಗ ಅವರಿಗೆ ರುಚಿಸುವುದಿಲ್ಲವೆಂದರಿತು ಅವರ ಇಚ್ಛೆಯಂತೆ ಆಟವಾಡಿಸಲು ನಿರ್ಧರಿಸಿದೆ. ಏಕೆಂದರೆ ಭೌತಶಾಸ್ತ್ರದಲ್ಲಿನ ಕೆಲವು ಪರಿಕಲ್ಪನೆಗಳು ಅಮೂರ್ತವಾಗಿವೆ ಎಂದು ನಾವೆಲ್ಲರೂ ಎಷ್ಟೋ ಬಾರಿ ಚರ್ಚಿಸಿದ್ದೇವೆ ಅಲ್ಲವೇ? ಅವುಗಳನ್ನು ಮೂರ್ತ ರೂಪಕ್ಕೆ ತಂದು ಕೊಡುವುದು ನಮ್ಮೆಲ್ಲರ ಹೊಣೆ.

ಹೀಗಿರುವಾಗ ಮಕ್ಕಳು ಯಾವುದನ್ನು ಇಷ್ಟಪಡುತ್ತಾರೆ ಎಂಬುದನ್ನು ಅರಿತು ಅದೇ ಮಾರ್ಗದಲ್ಲಿ ನಾವೇಕೆ ಅವರಿಗೆ ಬೋಧನ ಕಲಿಕಾ ಪ್ರಕ್ರಿಯೆಗಳನ್ನು ನಡೆಸಬಾರದು? ಶಿಕ್ಷಕರಾಗಿ ಪಠ್ಯವಸ್ತುವನ್ನು ತಲುಪಿಸುವ ಬದಲಾಗಿ ಸುಗಮಕಾರರಾಗಿ ಅವರ ಜ್ಞಾನವನ್ನು ಕಟ್ಟಿಕೊಳ್ಳಲು ಅವಕಾಶಗಳನ್ನು ಏಕೆ ನೀಡಬಾರದು? ಎಂದು ಯೋಚಿಸಿ, “ಮಕ್ಕಳೇ, ಆಟವಾಡಬೇಕು ಅಂದರೆ ಆಟಿಕೆ ಬೇಕಲ್ವಾ? ಹಾಗಾಗಿ ಆಟಿಕೆಯೊಂದನ್ನು ತಯಾರಿಸೋಣವೇ ?” ಎಂದು ಕೇಳಿದೆ. ಮಕ್ಕಳೆಲ್ಲರೂ ಬಹಳ ಖುಷಿಯಿಂದ ಒಪ್ಪಿಕೊಂಡರು.  ಪಠ್ಯಕ್ಕೆ ಅನುಗುಣವಾದ ಒಂದು ಆಟಿಕೆಯನ್ನು ತಯಾರಿಸಲು ಬೇಕಾದ ಕಚ್ಚಾ ವಸ್ತುಗಳನ್ನು ತರಲು ಕೊಠಡಿಯಿಂದ ನಮ್ಮ ಶಾಲೆಯ ಅಂಗಳದಲ್ಲಿನ ಶಾಲಾ ಕೈತೋಟಕ್ಕೆ ಬಂದೆವು.

  ನಮ್ಮೆಲ್ಲರಲ್ಲೂ ಮಗುವಿನ ಮನಸ್ಸಿದೆ. ತುಂಟತನವಿದೆ, ಕುಣಿದು ಕುಪ್ಪಳಿಸಿ ಆನಂದಿಸುವ ಉತ್ಸಾಹವೂ ಇದೆ. ಜಾತ್ರೆಗಳಿಗೆ ಹೋದಾಗ ಹಲವಾರು ಅಟಿಕೆಗಳನ್ನು ನೋಡಿ ಆಕರ್ಷಿತರಾಗಿರುತ್ತೇವೆ. ಬಾಲ್ಯದ ಫ್ಲ್ಯಾಷ್ ಬ್ಯಾಕಿಗೂ ಹೋದದ್ದಿದೆ. ಜಾತ್ರೆಯಲ್ಲಿ ನನ್ನನ್ನು ಹೆಚ್ಚು ಕಾಡಿದ್ದು ಶಬ್ದ ಮಾಡುತ್ತಾ ತಿರುಗುವ ಗಿರ್ಗಿಟ್ಟಲೆ. ಹೌದು ನಾವೆಲ್ಲರೂ ಗಿರ್ಗಿಟ್ಟಲೆ ತಿರುಗಿಸಿ ಖುಷಿಪಟ್ಟಿದ್ದುಂಟು ಅಲ್ಲವೇ? ಇಂತಹ ಆಟಿಕೆಗಳು ಎಲ್ಲಾ ಕಾಲದ ಮಕ್ಕಳನ್ನೂ ಬೇಗ ಆಕರ್ಷಿಸುತ್ತವೆ.

ನಾನು ಚಿಕ್ಕವನಿರುವಾಗ ಗಿರ್ಗಿಟ್ಟಲೆಯನ್ನು, ಕೊಡಿಸುವಂತೆ ನನ್ನ ತಂದೆಯ ಬಳಿ ಹಠ ಹಿಡಿದಾಗ ಅವರು ಮನೆಗೆ ಬಂದು, ಕೇವಲ ತೆಂಗಿನ ಗರಿಯ ಕಡ್ಡಿ ಮತ್ತು ಎಳೇ ತೆಂಗಿನಕಾಯಿ(ಪೀಚು, ಸಾಮಾನ್ಯವಾಗಿ ತೆಂಗಿನಮರದ ಬುಡದಲ್ಲಿ ಬಿದ್ದಿರುತ್ತದೆ) ಬಳಸಿ ಅಂತಹದೊಂದು ಗಿರ್ಗಿಟ್ಟಲೆಯನ್ನು ತಯಾರಿಸಿ ಕೊಟ್ಟಿದ್ದರು. ಅಂದು ಆದರೊಂದಿಗೆ ಆಟವಾಡಿ ಪಟ್ಟ ಸಂಭ್ರಮಕ್ಕೆ ಎಣೆಯೇ ಇರಲಿಲ್ಲ. ಆಟಿಕೆಯ ಹಿಂದಿನ ವೈಜ್ಞಾನಿಕ ತತ್ವ, ಕಾರ್ಯ ವೈಖರಿ ಅಥವಾ ವೈಜ್ಞಾನಿಕ ಹಿನ್ನಲೆ ತಿಳಿದಿರಲಿಲ್ಲ.

ಇಂತಹದೊಂದು ಆಟಿಕೆಯನ್ನು ಅಂದು ನಾನು ಮತ್ತು ನನ್ನೆಲ್ಲ ವಿದ್ಯಾರ್ಥಿಗಳು ತಯಾರಿಸಿ ಅದರೊಟ್ಟಿಗೆ ಆಟವಾಡಿ ಸಂಭ್ರಮಿಸಿದೆವು. ಆಟಿಕೆಯನ್ನು ತಯಾರಿಸುವ ಬಗೆ ಹೇಗೆ ಎಂದು ಯೋಚಿಸುತ್ತಿದ್ದೀರಾ? ಬನ್ನಿ ಹಾಗಾದರೆ ಆಟಿಕೆಯನ್ನು ತಯಾರಿಸುವುದು ಹೇಗೆ ಎಂದು ತಿಳಿಯೋಣ.

ಈಗಾಗಲೇ ಹೇಳಿದ ಆಟಿಕೆಗೆ ಬೇಕಾಗುವ ಸಾಮಗ್ರಿಗಳು : ತೆಂಗಿನ ಗರಿಯ ಕಡ್ಡಿ ಮತ್ತು ಎಳೇ ತೆಂಗಿನಕಾಯಿ(ಪೀಚು)


ಚಿತ್ರದಲ್ಲಿ ತೋರಿಸಿರುವಂತೆ ಕಡ್ಡಿಗಳನ್ನು ಹಿಡಿದು ತಿರುಗಿಸಲು ಆರಂಭಿಸಿ. ಹೇಗಿದೆ ಗಿರ್ಗಿಟ್ಲೇ ?

ಆಟಿಕೆಯ ಮೂಲಕ ಶಬ್ದ ಹೇಗೆ ಉಂಟಾಗುತ್ತದೆ? ಎನ್ನುವ ಪರಿಕಲ್ಪನೆಯನ್ನು ವಿವರಿಸಲು ಸಹಕಾರಿಯಾಗಿದೆ. ಇಲ್ಲಿ ವಿಶೇಷ ಎಂದರೆ ಆಟವಾಡುತ್ತಲೇ ವಿದ್ಯಾರ್ಥಿಗಳು ಸುಲಭವಾಗಿಯೇ ಶಬ್ದದ ಪರಿಕಲ್ಪನೆ ಅರಿತುಕೊಳ್ಳಬಹುದು.

ಶಬ್ಬವು ವಸ್ತುಗಳ ಕಂಪನದಿಂದ ಉಂಟಾಗುತ್ತದೆ ಎಂಬುದು ನಮಗೆ ತಿಳಿದಿದೆ. ಇಲ್ಲಿ U ಆಕಾರದ ಕಡ್ಡಿ ಮತ್ತು ನೇರವಾದ ಕಡ್ಡಿಗಳು, ಗಿರ್ಗಿಟ್ಲೇಯನ್ನು ತಿರುಗುವಂತೆ ಮಾಡಿದಾಗ ಪರಸ್ಪರ ಸ್ಪರ್ಶಿಸುತ್ತಾ ಒಂದನ್ನೊಂದು ಕಂಪಿಸುವಂತೆ ಮಾಡುತ್ತವೆ. ಆದ್ದರಿಂದ ಶಬ್ದ ಉಂಟಾಗುತ್ತದೆ. ಶಬ್ದದ ಉತ್ಪಾದನೆ, ಪ್ರಸರಣ ಮತ್ತಿತರ ಪರಿಕಲ್ಪನೆಗಳನ್ನು ಮಕ್ಕಳು ಸುಲಭವಾಗಿ ಅರ್ಥೈಸಿಕೊಳ್ಳುತ್ತಾರೆ. ಆಟಿಕೆಯನ್ನು ತಯಾರಿಸಿ ಆಟವಾಡಿದ ಮಕ್ಕಳಿಗೆ ಆನಂದವೋ ಆನಂದ, ನನಗೋ ನನ್ನ ಅಂದಿನ ತರಗತಿಯ ಒಂದು ಪರಿಕಲ್ಪನೆಯನ್ನು ಮಕ್ಕಳಲ್ಲಿ ಸ್ವಯಂ ಕಲಿಕೆ ಅನುವು ಮಾಡಿಕೊಟ್ಟ ರೀತಿಗೆ ಖುಷಿ.

( ಆಟಿಕೆಯ ತಯಾರಿಯ ವಿಡಿಯೋದ ಲಿಂಕನ್ನು ಈ ಕೆಳಗೆ ನೀಡಿದೆ)

ಇನ್ನಷ್ಟು ಆಟಿಕೆಗಳಿಗಾಗಿ ಕೆಳಗಿನ ವಿಡಿಯೋ ನೋಡಿ:


ಬಹಳ ಖರ್ಚು ಮಾಡಿ ಆಟಿಕೆಗಳನ್ನು ತಯಾರಿಸುವ ಅವಶ್ಯಕತೆಯಿಲ್ಲ. ಬದಲಿಗೆ ನಮ್ಮ ಸುತ್ತಲಿನ ಪರಿಸರದಲ್ಲಿ ಸಿಗುವ ವಸ್ತುಗಳಿಂದಲೇ ಆಟಿಕೆಗಳನ್ನು ತಯಾರಿಸಿದರೆ, ಅದನ್ನು ಮಕ್ಕಳೂ ತಾವೇ ತಯಾರಿಸಿ ಆಟಿಕೆಯ ಹಿಂದಿನ ತತ್ವ, ಕಾರ್ಯ ವಿಧಾನವೈಜ್ಞಾನಿಕ ಹಿನ್ನಲೆ ಹೀಗೆ ಹಲವಾರು ಅಂಶಗಳ ಮೇಲೆ ಯೋಚಿಸಲು ಆಟಿಕೆಯೇ ಪ್ರೇರೇಪಿಸುತ್ತದೆ. ತನಗೆ ಅರಿವಿಲ್ಲದಂತೆಯೇ ಆಟಿಕೆಯ ಬಗ್ಗೆ ಅರಿಯಲು ಮುಂದಾಗುತ್ತಾರೆ. ಇಷ್ಟಾದರೆ ಸಾಕಲ್ಲವೇ?  ನಮ್ಮ ಮುಂದಿನ ದಾರಿ ಸುಗಮವಾದಂತೆ. ಜ್ಞಾನವನ್ನು ಕಟ್ಟಿಕೊಳ್ಳಲು ಅನುಭವಜನ್ಯ ಕಲಿಕೆಯೇ ರಹದಾರಿ.

ನಾವಿಗಾಗಲೇ ಹಲವು ಬೋಧನ ಕಲಿಕಾ ಉಪಕರಣಗಳನ್ನು ತಯಾರಿಸಿ ತರಗತಿಯಲ್ಲಿ ಬಳಸಿದ್ದೇವೆ. ಮೂಲಕ ಕಲಿಕೆಯಲ್ಲಿ ಗುಣಾತ್ಮಕ ಹೆಚ್ಚಳವನ್ನು ಗಮನಿಸಿದ್ದೇವೆ. ಅದರ ಜೊತೆಗೆ ನಮ್ಮ ಹೊಸ ಕಲಿಕೆ ನಮ್ಮ ವೈಯಕ್ತಿಕ ಬದುಕಿಗೂ ಹೊಸತನವನ್ನು ನೀಡಿದೆ. ಏಕತಾನತೆಯ ಬದುಕಿನಿಂದ ನಮ್ಮನ್ನು ಪಾರು ಮಾಡಿದೆ. ಅಲ್ವಾ?  ಶೈಕ್ಷಣಿಕ ಮನೋವಿಜ್ಞಾನವೂ ಇದನ್ನೇ ಹೇಳುತ್ತದೆ. ಅಲ್ವೇ? ನೋಡಿ ಕಲಿಗಿಂತ ಮಾಡಿ ಕಲಿ ಉತ್ತಮ. ಮಾಡಿ ಕಲಿತ ಕಲಿಕೆಯ ಅನುಭವ ಮಕ್ಕಳ ಮನೋಭಾವನೆಯಲ್ಲಿ ಸಕಾರಾತ್ಮಕ ಬದಲಾವಣೆ ತರುವುದರ ಜೊತೆಗೆ ಗುಣಾತ್ಮಕ ಶಿಕ್ಷಣಕ್ಕೆ ಇಂಬುಕೊಡುತ್ತದೆ. ಹಾಗೆಯೇ ನಾವು ಅರ್ಥಮಾಡಿಕೊಳ್ಳಬೇಕಾದ್ದು ಎಲ್ಲಾ ಆಟಿಕೆಗಳು ಬೋಧನೋಪಕರಣಗಳಾಗಬಲ್ಲವು ಆದರೇ ಎಲ್ಲಾ ಬೋಧನೋಪಕರಣಗಳೂ ಆಟಿಕೆಗಳಲ್ಲ.

ತಿಂಗಳ ಸಂಚಿಕೆಯಲ್ಲಿ ಒಂದು ಆಟಿಕೆಯನ್ನು ನಾವು ಪರಿಚಯಮಾಡಿಕೊಡೆವು. ನನಗೆ ಗೊತ್ತು ಇನ್ನು ಮುಂದೆ ಜಾತ್ರೆಗೆ ಹೋದಾಗ ತಮ್ಮೆಲ್ಲರ ಕಣ್ಣು ಆಟಿಕೆಗಳ ಮೇಲೆ ಹೆಚ್ಚಾಗಿರುತ್ತದೆ.  ಅವುಗಳನ್ನು ತಯಾರಿಸಿ, ಮಕ್ಕಳಿಗೆ ಆಡಲು ಕೊಟ್ಟು ಕಲಿಕೆಯನ್ನು ಉತ್ತೇಜಿಸುವ ಯೋಚನೆ ನಿಮ್ಮ ಮನಸ್ಸಿನಲ್ಲಿ ಮೂಡುತ್ತಿದೆ ಎಂದು.

ನಿಮಗೂ ಇಂತಹ ಆಟಿಕೆಗಳನ್ನು ತಯಾರಿಸುವ ವಿಧಾನ ತಿಳಿದ್ದಿದ್ದರೆ ಅಥವಾ ಇಂತಹ ಆಟಿಕೆಗಳ ನೀವು ತಯಾರಿಸಿದ್ದೀರಿ ಎಂದಾದರೆ ಅವುಗಳನ್ನು ನಮ್ಮ ಸವಿಜ್ಞಾನದ ಓದುಗರೊಂದಿಗೆ ಹಂಚಿಕೊಳ್ಳಿ.

ಧನ್ಯವಾದಗಳು


ಗಿರಿಗಿಟ್ಲೆ ತಯಾರಿಕಾ ಹಂತಗಳು


ಈ ಲೇಖನದ ಪಿ.ಡಿ.ಎಫ಼್. ಫೈಲ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ: 

ಶಿಕ್ಷಣದಲ್ಲಿ ಆಟಿಕೆಗಳ ಬಳಕೆ – ಒಂದು ಪ್ರಯೋಗ





19 comments:

  1. Wonderful... Sir, please share your number, I would like to arrange online classes for kids. Please

    ReplyDelete
  2. ಒಳ್ಳೆಯ ಪ್ರಯತ್ನ ಮುಂದಿನ ದಿನಗಳಲ್ಲಿ ಗಣಿತ ಮತ್ತು ಭೌತಶಾಸ್ತ್ರ ಕ್ಕೆ ಅನುಕೂಲವಾಗುವಂತಹ ಇತರೆ ವಿವಿಧ ಆಟಿಕೆಗಳ ಬಗ್ಗೆ ಹಂಚಿಕೊಳ್ಳಿ ನಿಮ್ಮ ಮೊದಲ ಪ್ರಯತ್ನ ತುಂಬಾ ಚೆನ್ನಾಗಿದೆ ಯಶಸ್ವಿಯಾಗಲಿ

    ReplyDelete
  3. ತುಂಬಾ ಚೆನ್ನಾಗಿದೆ ನಿಮ್ಮ ಆರ್ಟಿಕಲ್.we need this in now a days situation to create interest in maths. InspiratioAl congratulations

    ReplyDelete
  4. Good article sir, expecting more science articles from you in future...
    👌

    ReplyDelete
  5. ಎಲ್ಲೋ ಸಿಗುವ ಆಟಿಕೆಗಳನ್ನು ತಂದು ಮಕ್ಕಳಮುಂದೆ ರಾಶಿ ಹಾಕಿ ಆಡಿಕೊಳ್ಳಿ ಅನ್ನೋದಕ್ಕಿಂತ ಮಕ್ಕಳೇ ತಯಾರಿಸುವಂತೆ ಪ್ರೇರೇಪಿಸಿವುದು ಕ್ರಿಯಾಶೀಲತೆಯನ್ನು ಬೆಳೆಸುತ್ತದೆ,ಉತ್ತಮ ಲೇಖನ, ಧನ್ಯವಾದಗಳು

    ReplyDelete
  6. ಪ್ರಸ್ತುತ ಬೋಧನ ಪದ್ದತಿಯನ್ನು ಉತ್ತಮ ಪಡಿಸಿಕೊಳ್ಳಲು ನಿಮ್ಮ ಲೇಖನ ಉಪಯುಕ್ತವಾಗಿದೆ.ನಿಮ್ಮ ಲೇಖನದಲ್ಲಿ ವ್ಯಕ್ತಪಡಿಸಿರುವಂತೆ ಆಟಿಕೆಗಳಿಂದ ಮಕ್ಕಳಿಗೆ ಉಂಟಾಗುವ ಆಸಕ್ತಿ ಮತ್ತು ಕುತೂಹಲಗಳಿಂದ ವೈಜ್ಞಾನಿಕ ಪರಿಕಲ್ಪನೆಗಳನ್ನು ಪರಿಣಾಮಕಾರಿಯಾಗಿ ತಿಳಿಸಬಹುದು

    ReplyDelete
  7. ಒಳ್ಳೆಯ ಮಾಹಿತಿ..... ಇನ್ನಷ್ಟು ಪ್ರಯತ್ನಗಳನ್ನು ಶೇರ್ ಮಾಡಿ....ಆಟಿಕೆಗಳಿಂದ ಕಲಿಕೆ ಸುಲಭ ಮತ್ತು ಸಮೃದ್ಧಿ... ಧನ್ಯವಾದಗಳು ಅನಿಲ್ sir

    ReplyDelete
  8. It was educative,narrative,interesting
    All the best anil

    ReplyDelete
  9. Wonderful job ,this will create interest in students and we can motivate the students in learning process from anitha BSVP girls

    ReplyDelete
  10. Superb article.

    This type of innovative and creative learning experiences may create long lasting learning in children beside creating lot of interest due to their involvement.

    Keep it up and try to create such things in mathematics too.

    ReplyDelete
  11. Super Anil sir this is wonderful concept to understand basic physics

    ReplyDelete