Wednesday, August 4, 2021

ಭವಿಷ್ಯದಲ್ಲಿ ಕೃತಕ ಬುದ್ಧಿವಂತಿಕೆಯ ವಿಶ್ವರೂಪ !

ಭವಿಷ್ಯದಲ್ಲಿ ಕೃತಕ ಬುದ್ಧಿವಂತಿಕೆಯ ವಿಶ್ವರೂಪ !

ಲೇಖಕರು:
ವೆಂಕಿ ರಾಘವೇಂದ್ರ 

ಭಾರತಿ ಮಣೂರ್


ಇಮೇಲ್ ಬರೆಯಲು ಕಂಪ್ಯೂಟರ್ ಕೀಪ್ಯಾಡ್ ಮೇಲೆ ಬೆರಳಾಡಿಸಿ ಹಲೋ ಎಂಬ ಪದವನ್ನು ಟೈಪ್ ಮಾಡುವಷ್ಟರಲ್ಲಿ ಸ್ಕ್ರೀನ್ ಮೇಲೆ ಸರ್/ಮಾಡಮ್ ಎಂಬ ಪದ ಮೂಡುತ್ತದೆ. ಇದನ್ನು ನೋಡಿದ ತಕ್ಷಣ ಈ ಯಂತ್ರ ನಿಜವಾಗಿ ನನ್ನನ್ನು ಅರ್ಥಮಾಡಿಕೊಂಡಿದೆಯಾ ಎಂಬ ಪ್ರಶ್ನೆ ಮನಸ್ಸಿನಲ್ಲಿ ಸಹಜವಾಗೇ ಮೂಡುತ್ತದೆ. ಒಂದು ರೋಮ್ಯಾಂಟಿಕ್ ಹಾಡನ್ನು ಸವಿದರೆ, ಸ್ವಲ್ಪ ಹೊತ್ತಿನಲ್ಲಿ ಅಂತಹುದೇ ಹಾಡುಗಳನ್ನು ನನಗೋಸ್ಕರ ಹುಡುಕಿ ಕೊಡುವ ಯೂಟ್ಯೂಬ್ ನನ್ನ ಆತ್ಮೀಯ ಎಂದೆನಿಸುತ್ತದೆ. ನನ್ನನ್ನು ನನಗಿಂತ ಚನ್ನಾಗಿ ಅರ್ಥಮಾಡಿಕೊಳ್ಳಬಲ್ಲ ಒಂದು ಯಂತ್ರ ಇದೆ ಮತ್ತು ಅದು ಯೋಚಿಸಬಲ್ಲದು ಎಂದರೆ ನಿಜವಾಗಿಯೂ ಆಶ್ಚರ್ಯಮಾತ್ರವಲ್ಲದೆ ಅದ್ಭುತವೂ ಎನಿಸುತ್ತದೆ. ಯಂತ್ರದ ಈ ನಡುವಳಿಕೆಗೆ ಕಾರಣ ಅದರಲ್ಲಿ ಅಳವಡಿಸಲಾದ ಕೃತಕ ಬುದ್ಧಿವಂತಿಕೆ. ಈ ಜಾಣ್ಮೆಯ ಪರಿಧಿ ಎಷ್ಟು ದೊಡ್ಡದೆಂದರೆ, ಅಮೇರಿಕಾದ ಟುನೈಟ್ ಶೋಬೊಟಿಕ್ಸ ಟಿ.ವಿ ಕಾರ್ಯಕ್ರಮದಲ್ಲಿ, ನಿರೂಪಕ ಜಿಮ್ಮಿ ಫಾಲೊನ್ ರವರು ಅತಿಥಿಯಾಗಿ ಆಹ್ವಾನಿಸಿದ ಸೋಫಿಯಾ ತನ್ನ ಹಾಸ್ಯದಿಂದ ವೀಕ್ಷಕರನ್ನು ನಗೆಯ ಸಾಗರದಲ್ಲಿ ತೇಲಿಸುತ್ತಾರೆ. ಇಷ್ಟಕ್ಕೂ ಯಾರೀ ಸೋಫಿಯಾ? ಸೋಫಿಯಾ ಸೌದಿ ಅರೇಬಿಯಾದ ಗೌರವ ಪ್ರಜೆಯಾಗಿರುವ ಒಂದು ಸಾಮಾಜಿಕ ರೋಬೋಟ್. ಕೃತಕ ಬುದ್ಧಿವಂತಿಕೆಯನ್ನು ಹೊಂದಿರುವ ರೋಬೋಟ್ ದೃಶ್ಯ, ಸಂಭಾಷಣೆ ಮತ್ತು ಭಾವನಾತ್ಮಕ ದತ್ತಾಂಶಗಳನ್ನು ಸಂಸ್ಕರಿಸಬಲ್ಲದು, ಅಲ್ಲದೆ ಜನರೊಡನೆ ಸಂಬಂಧಗಳನ್ನು ಬೆಳೆಸಬಲ್ಲದು. ಮಂಗನಿಂದ ಮಾನವನಾಗಲು ಮನುಷ್ಯ ಸಾವಿರಾರು ವರ್ಷಗಳನ್ನು ತೆಗೆದುಕೊಂಡರೆ ಒಂದೇ ಒಂದು ಪೀಳಿಗೆಯಲ್ಲಿ ಎದುರಿನ ವ್ಯಕ್ತಿಯ ಭಾವನೆಗಳನ್ನು ಅರ್ಥೈಸಿಕೊಂಡು ಸ್ಪಂಧಿಸುವ ಈ ರೋಬೋಟ್ ಗಳ ಬೆಳವಣಿಗೆ ನಿಜಕ್ಕೂ ಕುತೂಹಲಕಾರಿ.

ಕೃತಕ ಬುದ್ಧಿವಂತಿಕೆಯು ವಿಜ್ಞಾನಿಗಳ, ಸಂಶೋಧಕರ ಸಾಕು ಮಗುವಷ್ಟೇ, ಮೂಲವಾಗಿ ಇದು ಭಾವನೆಗಳ ಬೆನ್ನೇರಿ, ತರ್ಕಗಳ ಮೆಟ್ಟಿಲುಗಳನ್ನು ಹತ್ತಿ, ಕಲ್ಪನಾಲೋಕದಲ್ಲಿ ವಿಹರಿಸಿ, ಯೋಚನೆಗಳನ್ನು ನಿಜರೂಪಕ್ಕೆ ತರುವ ಸಾಧ್ಯತೆಗಳನ್ನು ಸೃಷ್ಟಿಸಿದ ಕವಿ, ತತ್ವಜ್ಞಾನಿ, ಹಾಗೂ ಕತೆಗಾರರ ಕನಸಿನ ಕೂಸು. ೧೭೨೬ ರಲ್ಲಿ ಪ್ರಕಟವಾದ ಗಲಿವರ್ ನ ಪ್ರಯಾಣ ಎಂಬ ಇಂಗ್ಲೀಷ್ ಸಾಹಿತ್ಯದ ಪ್ರಥಮ ಪುಸ್ತಕ ಇದಕ್ಕೆ ಸಾಕ್ಷಿಯಾಗಿದೆ. ಇದರಲ್ಲಿ ಬಳಸಲಾದ ಪದ ಇಂಜಿನ್ ಈಗಿನ ಕಂಪ್ಯೂಟರ್ ಪದಕ್ಕೆ ಉಲ್ಲೇಖವಾಗಿದೆ. ೧೯೨೧ರಲ್ಲಿ ತೆರೆಕಂಡ ರೋಸ್ಸುಮ್ಸ್ ಯುನಿವರ್ಸಲ್ ರೋಬೋಟ್ ಎಂಬ ವೈಜ್ಞಾನಿಕ ನಾಟಕ, ವೈಜ್ಞಾನಿಕ ಕಾದಂಬರಿಗಳಿಗೆ ಮಾತ್ರವಲ್ಲದೇ ಇಂಗ್ಲೀಷ ಭಾಷೆಗೂ ಒಂದು ಹೊಸ ಪದವನ್ನು ನೀಡಿತು. ಅಮೇರಿಕಾದ ಕಂಪ್ಯೂಟರ್ ವಿಜ್ಞಾನಿ, ಪ್ರವರ್ತಕ ಮತ್ತು ಸಂಶೋಧಕ ಜಾನ್ ಮೆಕಾರ್ಥಿ ಅವರನ್ನು ಕೃತಕ ಬುದ್ಧಿಮತ್ತೆಯ (ಎ.ಐ) ತಂದೆ ಎಂದು ಕರೆಯಲಾಗಿದೆ ಮತ್ತು ಈ ಕ್ಷೇತ್ರಕ್ಕೆ ಕೃತಕ ಬುದ್ಧಿವಂತಿಕೆ ಎಂಬ ಪದ ಬಳಸಿದ ಕೀರ್ತಿ "ಮಸಾಚುಸೆಟ್ಸ ಇನಸ್ಟಿಟ್ಯೂಟ್ಸ ಆಫ್ ಟೆಕ್ನಾಲಾಜಿ”ಯ ಪ್ರಖ್ಯಾತ ವಿಜ್ಞಾನಿ ಮಾರ್ವಿನ್ ಮಿನ್ಸ್ಕಿಯವರಿಗೆ ಸಲ್ಲುತ್ತದೆ.

೨೧ನೇ ಶತಮಾನದ ಒಂದು ದೊಡ್ಡ ಕ್ರಾಂತಿ ಈ ಕೃತಕ ಬುದ್ಧಿವಂತಿಕೆ. ಯಂತ್ರಗಳು ಮನುಷ್ಯನಂತೆಯೇ ಬುದ್ಧಿವಂತಿಕೆಯನ್ನು ಬಳಸಿ ಸಮಸ್ಯೆಗಳನ್ನು ಪರಿಹರಿಸುತ್ತವೆ, ಇದು ಹೇಗೆ ಸಾಧ್ಯ? ಉತ್ತರ ಇಲ್ಲಿದೆ. ಯಂತ್ರ ಕಲಿಕೆ, ಕೃತಕ ಬುದ್ಧಿವಂತಿಕೆಗೆ ಬೆನ್ನೆಲುಬಾಗಿ ಕೆಲಸಮಾಡುತ್ತದೆ, ಇದು ಯಂತ್ರಗಳಿಗೋಸ್ಕರ ತಯಾರಿಸಿದ ಕ್ರಮವಿಧಿ (ಅಲ್ಗೊರಿದಮ್)ಯ ಸಹಾಯದಿಂದ ದತ್ತಾಂಶಗಳನ್ನು ಅರ್ಥಮಾಡಿಕೊಳ್ಳುತ್ತದೆ, ಅವುಗಳ ನಡುವಿನ ಸಂಬಂಧವನ್ನು ಕಂಡುಹಿಡಿಯುತ್ತದೆ ಮತ್ತು ಅದೇ ಮಾಹಿತಿಯನ್ನು ಬಳಸಿ ತನ್ನ ಕಲಿಕೆಯನ್ನು ಹೆಚ್ಚಿಸಿಕೊಳ್ಳುತ್ತದೆ. ಒಂದು ಚಿತ್ರದ ಮಾಹಿತಿಯನ್ನು ಚಿತ್ರಬಿಂಬ (ಪಿಕ್ಸೆಲ್)ಗಳಲ್ಲಿ ಪಡೆದು ಸಂಸ್ಕರಿಸಿ, ಆ ಚಿತ್ರವನ್ನು ನಿಖರವಾಗಿ ಹೆಸರಿಸುತ್ತದೆ ಮತ್ತು ಮಾಹಿತಿಯನ್ನು ಸ್ಮರಣೆಯಲ್ಲಿ ಉಳಿಸಿಕೊಂಡು ಮುಂದಿನ ಸಲ ಅದೇ ಮಾಹಿತಿಯ ದತ್ತಾಂಶ ಸಿಕ್ಕಾಗ ತನ್ನಲ್ಲಿ ಈಗಾಗಲೇ ಇರುವ ಸ್ಮರಣೆಯನ್ನು ಬಳಸಿ ದತ್ತ ಚಿತ್ರವನ್ನು ಗುರುತಿಸುತ್ತದೆ. ಕಲಿಯುವುದನ್ನು ಕಲಿಯುವ ಈ ಯಂತ್ರ ಮಾನವಕುಲಕ್ಕೆ ಒಂದೆಡೆ ಭರವಸೆಯಾದರೆ, ಇನ್ನೊಂದೆಡೆ ವಿನಾಶದ ಬಿರುಗಾಳಿಯನ್ನು ಎಬ್ಬಸುವಂಥದ್ದು. ಒಟ್ಟಿನಲ್ಲಿ "ಜೀನ"ನ್ನು ಬಾಟಲಿಯಿಂದ ಹೊರಗೆ ತೆಗೆದಾಗಿದೆ ಇನ್ನು ಒಳಗೆ ಹಾಕುವ ಹಾಗಿಲ್ಲ. ಆದರೆ, ಇದರ ಸದ್ಭಳಕೆಯನ್ನು ಹೇಗೆ ಮಾಡಬೇಕು ಎಂಬುದು ಮನುಷ್ಯನ ಬುದ್ಧಿವಂತಿಕೆಯನ್ನು ಅವಲಂಬಿಸಿದೆ.

ಕಂಪ್ಯೂಟರ್ ತಂತ್ರಜ್ಞಾನದ ಅನಭಿಷಕ್ತ ದೊರೆ ಗೂಗಲ್, ತನ್ನೆಲ್ಲಾ ಬೆಳವಣಿಗೆಗಳನ್ನು ಕೃತಕ ಬುದ್ಧಿವಂತಿಕೆಯ ಆಳ ಕಲಿಕೆಯ ಮೂಲಕ ಸಾಧಿಸುತ್ತಿದೆ. ಗೂಗಲ್ ನ ಹೊಸ ವೈಶಿಷ್ಟ್ಯಗಳಾದ ಭಾಷೆ, ಭಾಷಾಂತರ, ಭಾವಚಿತ್ರ ಗುರುತಿಸುವುದು ಇವೆಲ್ಲವೂ ಕೃತಕ ಬುದ್ಧಿವಂತಿಕೆಯ ಕೊಡುಗೆಗಳೇ. ಅಲ್ಲದೇ ಗೂಗಲ್ ವಿಡಿಯೋ ವಿಶ್ಲೇಷಣೆ, ಭಾಷೆ ಸಂಸ್ಕರಣೆ, ಮುಂತಾದವು ಇದರ ಬ್ರೇನ್ ಪ್ರಾಜೆಕ್ಟುಗಳು. ಗೂಗಲ್ ನ ಆಳ ಕಲಿಕೆಯನ್ನು ಬಳಸಿದ ಇನ್ನೊಂದು ಮಹಾತ್ಕಾಂಕ್ಷಿ ಯೋಜನೆ ಎಂದರೆ, ಯೂ ಟ್ಯೂಬ್ ಬಳಕೆದಾರರಿಗೆ ಅವರ ಬಳಕೆಯ ಅನುಭವವನ್ನು ಆದರಿಸಿ ವಿಡಿಯೋಗಳನ್ನು ಶಿಫಾರಸ್ಸು ಮಾಡುವುದು. ಅಷ್ಟೆ ಅಲ್ಲದೇ, ಯೂ ಟ್ಯೂಬ್ ನಲ್ಲಿ ತಮ್ಮ ವಿಷಯಗಳನ್ನು ಪ್ರಕಟಿಸುವ ಸಮೂಹಕ್ಕೆ ರಕ್ಷಣೆ, ಪ್ರಸಾರವಾಗುತ್ತಿರುವ ಕಾರ್ಯಕ್ರಮವನ್ನು ಆಧರಿಸಿ ಜಾಹಿರಾತುಗಳನ್ನು ಪ್ರದರ್ಶಿಸಿ ಆರ್ಥಿಕ ವಹಿವಾಟು ಮತ್ತು ವ್ಯಾಪಾರದ ಒಂದು ಸಾಮ್ರಾಜ್ಯವನ್ನೇ ನಿರ್ಮಾಣ ಮಾಡುತ್ತಿದ್ದಾರೆ. ಐಪ್ಯಾಡ್ ನಲ್ಲಿರುವ “ಸಿರಿ", ಅಮೆಜಾನ್ ನ “ಅಲೆಕ್ಸಾ” ಮತ್ತು ಮೈಕ್ರೊಸಾಫ್ಟ ನ "ಕೊರ್ಟಾನಾ" ಮುಂತಾದವರು ಆಗಲೇ ವರ್ಣಿಸಿರುವ ಸೋಫಿಯಾರ ಗುಣಗಳ್ಳೊಳಗೊ೦ಡಿರುವ ಸಂಬಂಧಿಗಳು. ಈ ಬೆಳವಣಿಗೆಗಳ ಮಧ್ಯ ವೈಯಕ್ತಿಕ ಮಾಹಿತಿ ಮತ್ತು ಗೌಪ್ಯತೆಯ ಕಡೆಯೂ ಗಮನ ಹರಿಸಬೇಕಿದೆ.

ಯಂತ್ರ ಕಲಿಕೆ (machine learning) ಮತ್ತು ಕೃತಕ ಬುದ್ಧಿವಂತಿಕೆ[[ಚಿಡಿಣiಜಿiಛಿiಚಿಟ iಟಿಣeಟಟigeಟಿಛಿe]]ಯನ್ನು ಪ್ರಗತಿಪರ ಕಾರ್ಯಗಳಿಗೆ ಬಳಸಿಕೊಳ್ಳುವಲ್ಲಿ ಮುಂದಾದ ಖಾಸಗಿ ಸಂಸ್ಥೆಗಳ ಪಟ್ಟಿಯಲ್ಲಿ ಇಲಾನ್ ಮಸ್ಕ ರವರ ಹೆಸರು ಮೊದಲನೆಯ ಸ್ಥಾನದಲ್ಲಿದೆ. ಇವರು ಕೃತಕ ಬುದ್ಧಿವಂತಿಕೆಗೆ ಸಂಬಂಧಿಸಿದಂತೆ ಎರಡು ಸಂಸ್ಥೆಗಳ ಸ್ಥಾಪನೆಯಿಂದಾಗಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ನ್ಯೂರೊ-ಲಿಂಕ್" ಕಂಪನಿ, ಮೆದುಳು ಮತ್ತು ಕೃತಕ ಬುದ್ಧಿವಂತಿಕೆಯನ್ನು ಅಧ್ಯಯನ ಮಾಡುತ್ತದೆ. ಪ್ರಸ್ತುತ ಕೃತಕ ಬುದ್ಧಿವಂತಿಕೆಯ ಬೆಳವಣಿಗೆಯನ್ನು ಗಮನಿಸಿದರೆ, ಮುಂದೊಂದು ದಿನ ಇದು ಮನುಷ್ಯನ ಬುದ್ಧಿವಂತಿಕೆಯನ್ನು ಮೀರಿಸುವಲ್ಲಿ ಯಾವುದೇ ಸಂಶಯ ಇಲ್ಲ, ಹಾಗಾದ ಸಂದರ್ಭದಲ್ಲಿ ಈ ರೋಬೋಟ್ ಗಳನ್ನು ನಿಯಂತ್ರಿಸುವವರು ಯಾರು? ಅದಕ್ಕಾಗಿ ಮಾನವನ ತಯಾರಿ ಏನು? ಇಂತಹ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವಲ್ಲಿ ಈ ಸಂಸ್ಥೆ ಆಸಕ್ತಿ ವಹಿಸುತ್ತದೆ. ಮನುಷ್ಯನ ಮಿದುಳು ದತ್ತಾಂಶ, ಆಗಮನಾಂಗ(ಇನಪುಟ್), ನಿರ್ಗಮನಾಂಗ(ಔಟ್ ಪುಟ್), ಮತ್ತು ಸಂಸ್ಕರಿಸುವಿಕೆ ಗಳ ಮೇಲೆ ಕೆಲಸ ಮಾಡುತ್ತದೆ. ಮಾನವನ ಕಣ್ಣು ಆಗಮನಾಂಗ ಮಾಹಿತಿಯನ್ನು ಬಹಳ ವೇಗವಾಗಿ ಪಡೆಯುತ್ತದೆ. ಆದರೆ ಈ ಮಾಹಿತಿಯ ಸಂಸ್ಕರಣ ಮತ್ತು ನಿರ್ಗಮನ ಮಾತ್ರ ಬಹಳ ನಿಧಾನವಾಗಿದೆ. ಇಲ್ಲಿ ಸಂಸ್ಕರಣ ಮತ್ತು ನಿರ್ಗಮನಾಂಗ ಕ್ರಿಯೆಗಳ ವೇಗವನ್ನು ಹೆಚ್ಚಿಸಲು, ಮಾನವನ ಮಿದುಳಿನಲ್ಲಿ ನರಗಳ ದಾರದ ಪಟ್ಟಿಯನ್ನು ಅಳವಡಿಸಿದರೆ, ಮಿದುಳಿನ ಕಾರ್ಯವಿಧಾನ ವೇಗವಾಗುವುದಲ್ಲದೆ ಬೇಕೆಂದಾಗ ತನ್ನ ವೈಯುಕ್ತಿಕ ಕಂಪ್ಯೂಟರ್ಗೆ ತನ್ನನ್ನು ತಾನು ಜೋಡಿಸಿಕೊಂಡು ದೂರದಿಂದಲೇ ಮಾಹಿತಿಯನ್ನು ಅದಲು-ಬದಲು ಮಾಡಿಕೊಳ್ಳಬಹುದು. ಇವರ ಇನ್ನೊಂದು ಸಂಸ್ಥೆ ಟೆಸ್ಲಾ ಮೋಟರ್ಸ ಚಾಲಕರಹಿತ ವಿದ್ಯುತ್ ಕಾರುಗಳನ್ನು ತಯಾರಿಸುವಲ್ಲಿ ನಿರತವಾಗಿದೆ. ವಾಹನದ ಪೂರ್ತಿ ಕಾರ್ಯವಿಧಾನವನ್ನು ನಿಯಂತ್ರಿಸುವ ಜವಾಬ್ಧಾರಿ ಕೃತಕ ಬುದ್ಧಿವಂತಿಕೆಯ ಮೇಲಿರುವುದು ಇಲ್ಲಿ ವಿಶೇಷ. ಅಮೆರಿಕದಲ್ಲಿ ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ವಿಯಾದ ಸೈಬರ್ ಟ್ರಕ್ ಎಂಬ ಹೆಸರಿನ ಕಾರುಗಳು ಇನ್ನು ಕೆಲವೇ ವರ್ಷಗಳಲ್ಲಿ ಎಲ್ಲಾ ದೇಶಗಳ ಮಾರುಕಟ್ಟೆಗಳಿಗೆ ಲಗ್ಗೆಯಿಡಬಹುದು.

ಇಸ್ರೇಲ್ ನ ಖ್ಯಾತ ಇತಿಹಾಸಕಾರ ಮತ್ತು ಬರಹಗಾರ ಸೆಪಿಯನ್ಸ ಎಂಬ ಅತ್ಯಂತ ಜನಪ್ರಿಯ ಪುಸುಸ್ತಕದ ಕರ್ತೃ ಪ್ರೊಫೆಸರ್ ಯುವಾಲ್ ನೊಹ ಹೆರಾರಿಯವರು ಕೃತಕ ಬುದ್ಧಿವಂತಿಕೆಯ ಘಾತೀಯ ಬೆಳವಣಿಗೆ ಕುರಿತು ಹೀಗೆ ಹೇಳುತ್ತಾರೆ, ೨೦೩೫ ರ ಅಸುಪಾಸಿನಲ್ಲಿ ನಮ್ಮ ಜನಸಂಖ್ಯೆಯ ಬಹುಭಾಗ ಜನ ತಾಂತ್ರಿಕವಾಗಿ ಅಪ್ರಯೋಜಕರಾಗುತ್ತಾರೆ. ಅಲ್ಲದೆ ಕೆಲವೇ ಕೆಲವು ವರ್ಷಗಳಲ್ಲಿ ಬಹಳಷ್ಟು ಜನ ವೈದ್ಯರು ಮತ್ತು ಚಾಲಕರು ನಿರುದ್ಯೋಗಿಗಳಾಗುತ್ತಾರೆ. ಏಕೆಂದರೆ ಇವರ ಕೌಶಲಗಳನ್ನು ಕೃತಕ ಬುದ್ಧಿವಂತಿಕೆಯ ರೋಬೋಟ್ ಯಂತ್ರಗಳು ಹೊಂದಿರುತ್ತವೆ. ಜೊತೆಗೆ ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಮಾನವನಿಗಿಂತ ಯಂತ್ರಗಳ ನಿಖರತೆಯನ್ನು ನಂಬುತ್ತಾರೆ" ಎ೦ದು ಅವರ ಅಭಿಪ್ರಾಯ. ಇದಕ್ಕೆ ಪರಿಹಾರಗಳನ್ನು ಕಾದುನೋಡಬೇಕು ಎಂಬ ಆಯ್ಕೆಯ ಮೇಲೆ ಬಿಟ್ಟರೂ ಕೂಡ, ಭಾವನಾತ್ಮಕ ಬುದ್ಧಿವಂತಿಕೆ ಮತ್ತು ಮಾನಸಿಕ ಸಮತೋಲನ ಕೌಶಲ ಕಲಿಯುವ, ಬದಲಾಗುವ ಮತ್ತು ಮರುಶೋಧಿಸುವ ಪ್ರಕ್ರಿಯೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂಬ ಸುಳುಹನ್ನು ನೀಡುತ್ತಾರೆ.

ಕೃತಕ ಬುದ್ಧಿವಂತಿಕೆಯ ಸಂಶೋಧನೆಯಲ್ಲಿ ದಾಪುಗಾಲಿಡುತ್ತಿರುವ ಮೈಕ್ರೊಸಾಫ್ಟ ಸಂಸ್ಥೆಯಲ್ಲಿ ಲೀಡ್ ಕ್ಲೌಡ್ ಆರ್ಕಿಟೆಕ್ಟ ಆಗಿರುವ ಹಾಗು ಬಾಸ್ಟನ್ ನಗರವಾಸಿ ಶ್ರಿನಿ ಅಂಬಾತಿಯವರು ಹೀಗೆ ಹೇಳುತ್ತಾರೆ, "ಕೃತಕ ಬುದ್ಧಿವಂತಿಕೆ ಎಲ್ಲಾ ಹಂತಗಳಲ್ಲಿ ಮನುಷ್ಯನನ್ನು ಬೆಳೆಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ, ಅವರ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ತ್ವರಿತವಾಗಿ ಹೊಸತನವನ್ನು ನೀಡುತ್ತದೆ. ಜೊತೆಗೆ ಸಾಮಾನ್ಯ ಕಾರ್ಯಗಳಿಂದ ಬಿಡುವು ನೀಡುತ್ತದೆ. ಇದರಿಂದ ಉಳಿತಾಯವಾದ ಸಮಯವನ್ನು ಮಾನವ ತನ್ನ ಯೋಗಕ್ಷೇಮವನ್ನು ಹೆಚ್ಚಿಸಿಕೊಳ್ಳಲು ಮತ್ತು ಜವಾಬ್ಧಾರಿಯಿಂದ ಬದುಕಲು ಬಳಸಬಹುದು.

ಪ್ರಸ್ತುತ ಜನಾಂಗ ಕೃತಕ ಬುದ್ಧಿವಂತಿಕೆ, ಯಂತ್ರ ಕಲಿಕೆ, ಆಳ ಕಲಿಕೆ ಇವೆಲ್ಲವನ್ನೂ ಕಲಿಯುವಲ್ಲಿ ಬಹಳ ಆಸಕ್ತಿ ತೋರಿಸುತ್ತಿದೆ. ಆದರೆ ಇವೆಲ್ಲವನ್ನು ಕಲಿಯಲು ಕೇವಲ ತಾಂತ್ರಿಕ ಕೋರ್ಸಗಳ ಮೊರೆ ಹೋಗುತ್ತಿರುವುದು ಮಾತ್ರ ವಿಪರ್ಯಾಸ. ಯಾವುದೇ ಒಂದು ಆಲೋಚನೆ ಮೊದಲು ಮೊಳಕೆಯೊಡೆಯುವುದು ಮನುಷ್ಯನ ಮಿದುಳಿನಲ್ಲಿ ನಂತರ, ಅದು ಅರಿವಿನ ಪರಿಧಿಯಲ್ಲಿ ಒಂದು ಸ್ಪಷ್ಟ ಆಕಾರವನ್ನು ಪಡೆಯುತ್ತದೆ. ಈ ಎಲ್ಲ ಪ್ರಕ್ರಿಯೆಗಳ ಕೀಲಿಕೈ ಮನುಷ್ಯನ ಕಲ್ಪನಾಶಕ್ತಿ. ಈ ಕಲ್ಪನಾ ಶಕ್ತಿ ಬೆಳೆಯಬೇಕಾದರೆ, ಮನುಷ್ಯ ಜೀವನವನ್ನು ಅದರ ನೈಜರೂಪದಲ್ಲಿ ಅನುಭವಿಸುವುದು ಮೊದಲ ಹಂತವಾಗುತ್ತದೆ. ಅದಕ್ಕಾಗಿಯೇ ಕಥೆ, ಕವಿತೆ, ಕಾದಂಬರಿ, ಚಿತ್ರಕಲೆ, ಮುಂತಾದವುಗಳ ಅರಿವು ಮೂಲಭೂತವೆನಿಸುತ್ತದೆ. ಆಶ್ಚರ್ಯವೆಂದರೆ, ಕಲಾವಿದ ಮತ್ತು ಸಂಶೋಧಕ ಇಬ್ಬರೂ ನಮ್ಮ ಮಿದುಳಿನಲ್ಲಿ ವಾಸಿಸುತ್ತಾರೆ. ಅವರಿಬ್ಬರನ್ನು ತಾರತಮ್ಯವಿಲ್ಲದೇ ಬಳಿಸಿಕೊಂಡಾಗ ಪ್ರತಿಯೊಬ್ಬರಲ್ಲೂ ಒಬ್ಬ ಲಿಯೋನಾರ್ಡೊ-ಡಿ-ವಿಂಚಿ ಅಥವಾ ಒಬ್ಬಳು ಮೇರಿ ಕ್ಯೂರಿ ಉದಯಿಸಬಹುದು.

( ಆಕರ : ಪ್ರಜಾವಾಣಿ )





No comments:

Post a Comment