Saturday, September 4, 2021

ಜೀವಶಾಸ್ತ್ರದ ಗುರು ತಿಲಕ, ಸಮಾಜ ಸೇವಾ ರತ್ನ - ಆಚಾರ್ಯ ಡಾಕ್ಟರ್‌ ಟಿ.ಎ. ಬಾಲಕೃಷ್ಣ ಅಡಿಗ

ಜೀವಶಾಸ್ತ್ರದ ಗುರು ತಿಲಕ, ಸಮಾಜ ಸೇವಾ ರತ್ನ - ಆಚಾರ್ಯ ಡಾಕ್ಟರ್‌  ಟಿ.. ಬಾಲಕೃಷ್ಣ ಅಡಿಗ

ಸಂದರ್ಶಕರುರಾಮಚಂದ್ರ ಭಟ್ಬಿ.ಜಿ.

ಶ್ರೀನಿವಾಸ್‌ .

ಸವಿಜ್ಞಾನ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾಕ್ಟರ್ಟಿ.ಬಾಲಕೃಷ್ಣ ಅಡಿಗರು ಪ್ರಾಣಿಶಾಸ್ತ್ರದ ಪ್ರಾಧ್ಯಾಪಕರು, ಶಿಕ್ಷಣತಜ್ಞರು, ಸಂಘಟನಾ ಚತುರರು, ಲೇಖಕರು, ವಿಜ್ಞಾನ ಸಂವಹನಕಾರರು, ದಕ್ಷ ಆಡಳಿತಗಾರರು ಹಾಗೂ ನಮ್ಮ ನಡುವಿನ ಶ್ರೇಷ್ಠ ಆಚಾರ್ಯರು. ಜೀವಶಾಸ್ತ್ರದ ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾದ, ಶಿಕ್ಷಕರ ಸ್ಫೂರ್ತಿಯ ಸೆಲೆಯಾದ ಡಾ.ಬಾಲಕೃಷ್ಣ ಅಡಿಗರು ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟು 50 ವರ್ಷಗಳು ತುಂಬಿದವು. ಈ ಸಾರ್ಥಕ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಸವಿಜ್ಞಾನ ಸಂಪಾದಕೀಯ ಮಂಡಲಿ ಅವರನ್ನು ಸಂದರ್ಶಿಸಿತು. ಅವರೊಂದಿಗೆ ಸಮಯ ಕಳೆಯುವುದೇ ಕಲಿಕೆಯ ಕಡಲಿಗೆ ಇಳಿದಂತೆ. ಅವರ ಬದುಕು ಇತರರಿಗೆ ಆದರ್ಶವಾಗಬಲ್ಲದು. 5 ದಶಕಗಳ ಶೈಕ್ಷಣಿಕ ಕೈಂಕರ್ಯ, ಅಪಾರ ಆಡಳಿತಾನುಭವ, ಹಲವಾರು ದಂತಕತೆಗಳ ಜೊತೆಗಿನ ಒಡನಾಟ, ಸಾಧನೆ ಹಾಗೂ ಸವಿಜ್ಞಾನ ಜೀವತಳೆದ ಮಾಹಿತಿಗಳನ್ನು ನಮ್ಮ ಓದುಗ ಬಂಧುಗಳಿಗೆ ಹಂಚುವ ಉದ್ದೇಶದಿಂದ ಈ ಸಂದರ್ಶನವನ್ನು ನಡೆಸಿದೆವು.

ಬಡ, ಅವಕಾಶವಂಚಿತ ಕುಟುಂಬದ ವಿದ್ಯಾರ್ಥಿಗಳಿಗಾಗಿಯೇ ಶಾಲೆಯೊಂದನ್ನು ತೆರೆಯಲು ಬೆಂಗಳೂರಿನ ತಮ್ಮ ನಿವೇಶನವನ್ನೇ ದಾನವಾಗಿ ನೀಡಿ, ದಾನಿಗಳ ನೆರವಿನಿಂದ ಸುಸಜ್ಜಿತ ಶಾಲಾ ಕಟ್ಟಡವನ್ನು ನಿರ್ಮಿಸಿ, ವಾರ್ಷಿಕ ಶುಲ್ಕ, ಡೊನೇಶನ್ ತೆಗೆದುಕೊಳ್ಳದೆಯೇ ಕೇವಲ ಮಾಸಿಕ ಶುಲ್ಕ ಪಡೆದು ದಾನಿಗಳ ಸಹಕಾರದೊಂದಿಗೆ ಉತ್ತಮ ಶಿಕ್ಷಣ, ಕಂಪ್ಯೂಟರ್ ಶಿಕ್ಷಣ, ಮಧ್ಯಾಹ್ನದ ಬಿಸಿಯೂಟ ನೀಡುತ್ತಿರುವ ಅಪರೂಪದ ಖಾಸಗಿ ಶಾಲೆಯನ್ನು ಕಳೆದ ಎರಡು ದಶಕಗಳಿಂದ ಸದ್ದಿಲ್ಲದೆ, ಖ್ಯಾತಿಯ ಹಂಗಿಲ್ಲದೆ ನಡೆಸಿಕೊಂಡು ಬರುತ್ತಿರುವ ಅಪರೂಪದ ವ್ಯಕ್ತಿ ನಮ್ಮ ಪ್ರೀತಿಯ ಮಹಾಗುರುಗಳು.  ಈಗ 600ಕ್ಕೂ ಹೆಚ್ಚು ಮಕ್ಕಳು ಓದುತ್ತಿರುವ ಶಾಲೆ 95% ಕ್ಕಿಂತ ಹೆಚ್ಚಿನ ಫಲಿತಾಂಶವನ್ನು ನೀಡುತ್ತಲೇ ಬಂದಿದೆ.  

ಕಳೆದೆರಡು ದಶಕಗಳಿಂದ ಪಠ್ಯಪುಸ್ತಕ ರಚನಾ ಸಮಿತಿಗಳ ಸದಸ್ಯರಾಗಿ, ಪರಿಶೀಲಕರಾಗಿ, ಅಧ್ಯಕ್ಷರಾಗಿ ಹಲವಾರು ಶಿಕ್ಷಕರಿಗೆ ತರಬೇತಿಯನ್ನು ನೀಡಿ ಲಕ್ಷಾಂತರ ವಿದ್ಯಾರ್ಥಿಗಳನ್ನು ಸಂಪಾದಿಸಿರುವ ಅಪರೂಪದ ಶಿಕ್ಷಣತಜ್ಞರಿವರು. ಸಮಾಜಮುಖಿ ಶೈಕ್ಷಣಿಕಕಾರ್ಯ  ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡುತ್ತದೆ.  

ಒಮ್ಮೆ ದುರಾದೃಷ್ಟವಶಾತ್ಚಾರ್ಮಾಡಿ ಘಾಟಿಯಲ್ಲಿ ಅಡಿಗರ ಕಾರು ಅಪಘಾತಕ್ಕೊಳಗಾಯಿತು. ಕಾರು 200 ಅಡಿ ಪ್ರಪಾತಕ್ಕುರುಳಿದರೂ ಸಣ್ಣ ಪುಟ್ಟ ಗಾಯಗಳೊಂದಿಗೆ ಬದುಕುಳಿದದ್ದು ನಮ್ಮ ಸುಕೃತವೇ ಸರಿ. ನಮ್ಮ ನಾಡಿನ ವಿಜ್ಞಾನ ಕ್ಷೇತ್ರಕ್ಕೆ ದೊರೆತ ಮಹಾ ಭಾಗ್ಯವೇ ಸರಿ.

ಸಪ್ನ ಜ್ಞಾನದೀಪ ಮಾಲೆಯ ಪ್ರಾಣಿಶಾಸ್ತ್ರ ಎಂಬ ಕೃತಿ, ಪಿಯು ವಿದ್ಯಾರ್ಥಿಗಳಿಗೆ ಜೀವಶಾಸ್ತ್ರದ ಪಠ್ಯಪುಸ್ತಕ, ವಿಸ್ಮಯ ವಿಜ್ಞಾನ ಮಾಲಿಕೆಯ ವೈವಿಧ್ಯಮಯ ಜೀವಲೋಕ, ಜೀವ ಜಗತ್ತು ಎಂಬ ವಿಷಯ ವಿಶ್ವಕೋಶದ ಸಂಪಾದಕನಾಗಿ ಕಾರ್ಯ ಹೀಗೆ ಹತ್ತು ಹಲವು ಮಜಲುಗಳಲ್ಲಿ ಅವರಿಂದ ಅವ್ಯಾಹತವಾಗಿ ವಿಜ್ಞಾನ ಸಾಹಿತ್ಯ ಕೃಷಿ ನಡೆಯುತ್ತಲೇ ಇದೆ. ಇದೆಲ್ಲದರ ಜೊತೆಗೆ ಅವರ  ವಿದ್ಯಾರ್ಥಿಗಳು, ಶಿಕ್ಷಕರು, ಸ್ನೇಹಿತರು, ಬಂಧುಗಳು ಸೇರಿ ನೀಲಾವರ ಸುರೇಂದ್ರ ಅಡಿಗರ ಸಂಪಾದಕತ್ವದಲ್ಲಿ ಅಡಿಗರ ಬದುಕು ಬರಹ ಸಾಧನೆಗಳನ್ನು ತಿಳಿಸುವ  ಜೀವ ಭಾವಗಳ ಗಾರುಡಿಗ ಟಿ.. ಬಾಲಕೃಷ್ಣ ಅಡಿಗಎಂಬ ಸುಂದರ ಕೃತಿಯನ್ನು ಸೋಮಯಾಜಿ ಪ್ರಕಾಶನದ ಮೂಲಕ ಹೊರತಂದಿದ್ದಾರೆ. ಇದು ಅವರ ಬದುಕನ್ನು ಅನನ್ಯವಾಗಿ ಕಟ್ಟಿಕೊಟ್ಟಿದೆ. ಇವೆಲ್ಲವೂ ನಮಗೆ ಮಾರ್ಗದರ್ಶಿ. ಇಂತಹ ಅಗಾಧ ಪ್ರತಿಭೆಯ ಪರಿಚಯ ನಮ್ಮನ್ನೂ ಹೊಸತನದ ಹುಡುಕಾಟದತ್ತ ಒಯ್ಯಬಹುದು ಎಂಬ ಸದುದ್ದೇಶದಿಂದ ನಡೆಸಿದ ಸಂದರ್ಶನದ ಸಾರವನ್ನು ನಮ್ಮ ಓದುಗರಿಗಾಗಿ ಇಲ್ಲಿ ನೀಡಿದೆ.

ಸಂ : ನಮಸ್ಕಾರ ಸರ್‌ 1971 ರಿಂದ ಇಲ್ಲಿಯವರೆಗೆ ನಿರಂತರವಾಗಿ ಶೈಕ್ಷಣಿಕ ಕೈಂಕರ್ಯದಲ್ಲಿ ತೊಡಗಿಸಿಕೊಂಡು ಸುವರ್ಣ ಸಂಭ್ರಮ ಆಚರಿಸುತ್ತಿರುವ ಈ ಹೊತ್ತಿನಲ್ಲಿ ನಿಮಗೆ ವಿಶೇಷ ಅಭಿನಂದನೆಗಳು. 5 ದಶಕಗಳ ಸುದೀರ್ಘ ಶೈಕ್ಷಣಿಕ ಬದುಕನ್ನು ಸಿಂಹಾವಲೋಕನ ಮಾಡಿದಾಗ ನಿಮ್ಮಲ್ಲಿ ಮೂಡುವ ಭಾವನೆಗಳೇನು?

ಬಾಲಕೃಷ್ಣ ಅಡಿಗ: 1971 ರಲ್ಲಿ ವಿಜಯ ಕಾಲೇಜಿನ ಮೊದಲ ಬ್ಯಾಚಿನ ಬಿಎಸ್ಸಿ (CBZ) ವಿದ್ಯಾರ್ಥಿ ಬೆಂಗಳೂರು ವಿವಿಯಿಂದ ಚಿನ್ನದ ಪದಕದೊಂದಿಗೆ ಉತ್ತೀರ್ಣನಾದೆ. ಇದು ನಾನು ಓದಿದ ಕಾಲೇಜಿನಲ್ಲಿ Demonstrator  ಹುದ್ದೆಗೆ ಸೇರಿಕೊಳ್ಳುವಂತೆ ಮಾಡಿತು. ಶೈಕ್ಷಣಿಕ ರಂಗಕ್ಕೆ ಕಾಲಿಟ್ಟು ಹಂತಹಂತವಾಗಿ M.Sc ಮತ್ತು PhDಗಳನ್ನು ಮುಗಿಸಿ ಅದೇ ಕಾಲೇಜಿನಲ್ಲಿ ಉಪನ್ಯಾಸಕನಾಗಿ, ಪ್ರವಾಚಕನಾಗಿ, ಪ್ರಾಧ್ಯಾಪಕನಾಗಿ, ಪ್ರಾಂಶುಪಾಲನಾಗಿ ಕೆಲಸ ಮಾಡುವಂತೆ ಮಾಡಿತು. ಈಗ BHS ಆಡಳಿತ ಮಂಡಳಿಯ ಸದಸ್ಯನಾಗಿ ಕಾರ್ಯನಿರ್ವಹಿಸುವ ಅವಕಾಶವನ್ನು ಒದಗಿಸಿಕೊಟ್ಟಿತು. ಒಂದೇ ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿ ಪ್ರವೇಶಿಸಿ ಈ ಹಂತಕ್ಕೆ ಬರಲು ಕಾರಣ ವಿಜಯಾ ಕಾಲೇಜಿನ ಶ್ರೇಷ್ಠ ಉಪನ್ಯಾಸಕ ಪರಂಪರೆ.



MSc ಯಲ್ಲಿ ಮೊದಲ rankನೊಂದಿಗೆ ಪಡೆದ ಚಿನ್ನದ ಪದಕ ಹಾಗೂ B.Sc ಯಲ್ಲಿ ಪಡೆದ ಶ್ರೀಮತಿ ರಾಜರತ್ನಂ ಚಿನ್ನದ ಪದಕ   

ಸಂ :  ಸರ್, ನೀವು ಅಪರೂಪದ ವಿಶಿಷ್ಟ ಬರವಣಿಗೆ ಶೈಲಿಯನ್ನು ರೂಢಿಸಿಕೊಂಡಿದ್ದೀರಿ. ಇದರ ಹಿನ್ನೆಲೆ ಏನು ಸರ್?

ಬಾಲಕೃಷ್ಣ ಅಡಿಗ: Demonstrator ಹುದ್ದೆಯಲ್ಲಿದ್ದಾಗ ಪ್ರಯೋಗಶಾಲಾ ತರಗತಿಗಳನ್ನು ಮಾತ್ರ ತೆಗೆದುಕೊಳ್ಳುತ್ತಿದ್ದೆ. ನಂತರ ಉಪನ್ಯಾಸಕ ಹುದ್ದೆಗೆ ಬಡ್ತಿ ಹೊಂದಿದೆ. ಆಗ ಥಿಯರಿ ತರಗತಿಗಳನ್ನು ತೆಗೆದುಕೊಳ್ಳಲು ತರಗತಿಗೆ ಕಾಲಿರಿಸಿದರೆ ಅಲ್ಲೋ ಜನಸಾಗರ!!! 120ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು!!! ಬೋರ್ಡಿನಲ್ಲಿ ಬರೆದರೆ ಹಿಂದಿನ ಸಾಲಿನ ವಿದ್ಯಾರ್ಥಿಗಳಿಗೆ ಕಾಣಿಸ್ತಾ ಇಲ್ಲ ಎನ್ನುವ ದೂರು. ಹೀಗಾಗಿ ನಾನು ಏನಾದರೂ ಮಾಡಲೇಬೇಕು ಎಂದು ಯೋಚಿಸಿದೆ.  ಅಲ್ಲದೆ ತಾಂತ್ರಿಕ ಪದಗಳನ್ನು ವಿದ್ಯಾರ್ಥಿಗಳು ತಪ್ಪಿಲ್ಲದೆ ಬರೆಯಬೇಕೆಂದರೆ ನಾನು ಕ್ಯಾಪಿಟಲ್ ಲೆಟರ್ಸ್ ಬಳಸಬೇಕೆಂದು ಅನಿಸಿತು. ಹೀಗೆ ಮೊದಲು ನಿಧಾನವಾದರೂ ವರ್ಷದ ಕೊನೆಯಲ್ಲಿ ಬರೆಯುವ ವೇಗ ಹೆಚ್ಚಿತು. ವಿದ್ಯಾರ್ಥಿಗಳು ನನ್ನ ವಿಶಿಷ್ಟ ಶೈಲಿಯನ್ನು ಮೆಚ್ಚಿಕೊಂಡರು. ಜೊತೆಗೆ ಜೀವಶಾಸ್ತ್ರದ ಅನೇಕ ಪರಿಕಲ್ಪನೆಗಳನ್ನು ಚಿತ್ರದ ಮೂಲಕ ವಿವರಿಸುವುದು ಅತ್ಯುತ್ತಮ ಎಂದು ಭಾವಿಸಿ ವಿದ್ಯಾರ್ಥಿಗಳಿಗೆ ಚಿತ್ರ ಬರೆಯುವ ಕೌಶಲ ಕಲಿಸುತ್ತಾ ಬೋಧಿಸಲಾರಂಭಿಸಿದೆ. ಅನೇಕ ಬಾರಿ ಈ ಚಿತ್ರಗಳು ಮುಂದಿನ ನನ್ನ ತರಗತಿಯವರೆಗೂ ಅಲ್ಲಿಯೇ ಇರುತ್ತಿದ್ದವು!!! ನಾನೇ ಅಳಿಸಬೇಕಾದ ಪ್ರಸಂಗವೂ ಬರುತ್ತಿತ್ತು. ಏಕೆಂದರೆ ನನ್ನ ಸಹೋದ್ಯೋಗಿಗಳು ನೀವು ಇಷ್ಟು ಸುಂದರವಾಗಿ ಬಿಡಿಸಿದ ಚಿತ್ರಗಳನ್ನು ಅಳಿಸುವುದೇ? ಛೇ!! ಎಂದು ಹೇಳುತ್ತಿದ್ದರು. ಯಾವುದೇ ತರಗತಿ ಇರಲಿ ಪೂರ್ವ ಸಿದ್ಧತೆ ಇಲ್ಲದೇ ಹೋಗುತ್ತಿರಲಿಲ್ಲ. ವಿಜ್ಞಾನ ಬೋಧನೆಯಲ್ಲಿ ನೀವೆಲ್ಲರೂ ಇಂತಹ ಕೌಶಲಗಳನ್ನು ಅಳವಡಿಸಿಕೊಳ್ಳುವುದರಿಂದ ನಿಮ್ಮ ತರಗತಿಗಳನ್ನು ಆಹ್ಲಾದಕರವಾಗಿಸಬಹುದು.  ಇದು ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ.

ಸಂ: ಖಂಡಿತ ಸರ್. ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ಪ್ರಶ್ನೆ ಹಾಗಾದರೆ ನಿಮ್ಮ ಅನುಭವದಲ್ಲಿ ತರಗತಿಗಳನ್ನು ಇನ್ನಷ್ಟು ವಿದ್ಯಾರ್ಥಿ ಸ್ನೇಹಿಯಾಗಿಸಲು ಯಾವ ರೀತಿಯ ಸುಗಮಗಾರಿಕೆಯನ್ನು ನಾವು ಅಳವಡಿಸಿಕೊಳ್ಳಬೇಕು ?

ಬಾಲಕೃಷ್ಣ ಅಡಿಗ: ಯಾವುದೇ ಪರಿಕಲ್ಪನೆ, ಸಿದ್ಧಾಂತ, ನಿಯಮ ಹೀಗೆ  ಯಾವುದೇ ಇರಲಿ, ಮೊದಲು ನಾವದನ್ನು ಸ್ಪಷ್ಟವಾಗಿ ಗ್ರಹಿಸಿಕೊಂಡು ನಮ್ಮದಾಗಿಸಿಕೊಳ್ಳುವುದು ಬಹಳ ಮುಖ್ಯ . ಅದರ  ಐತಿಹಾಸಿಕ ಹಿನ್ನೆಲೆ, ಮುನ್ನೆಲೆಗಳನ್ನು ಅರಿತುಕೊಂಡಿರಬೇಕು.

ವಿಜ್ಞಾನದ ಜೊತೆಗೆ ಇತರ ವಿಷಯಗಳ ಜ್ಞಾನ ಹಾಗೂ ವಿಜ್ಞಾನದ ಇತರ ಶಾಖೆಗಳ ಅರಿವೂ ಅತ್ಯವಶ್ಯಕ. ಇದು ನಿಮ್ಮ ವಿಷಯವನ್ನು ಆಳವಾಗಿ ವಿಶ್ಲೇಷಿಸಿ, ವಿದ್ಯಾರ್ಥಿಗಳಿಗೆ ಜ್ಞಾನ ಕಟ್ಟುವ ಪ್ರಕ್ರಿಯೆಯ ಸುಗಮಗಾರಿಕೆಗೆ ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ನಾನು ಮಂಕುತಿಮ್ಮನ ಕಗ್ಗವನ್ನು ಜೀವಶಾಸ್ತ್ರಕ್ಕೆ ಸಂಬಂಧಿಸಿದ ಪರಿಕಲ್ಪನೆಗಳ ಜೊತೆ ಮೇಳೈಸಿ  ಬೋಧಿಸುತ್ತೇನೆ. ಇದು ಪಾಠದಲ್ಲಿ ಹೊಸತನವನ್ನು ತರುವುದರ ಜೊತೆಗೆ ವಿಷಯದೆಡೆಗೆ ವಿದ್ಯಾರ್ಥಿಗಳ ಆಸಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ನಿಮ್ಮ ಬಗ್ಗೆ ಅರಿವಿಲ್ಲದಂತೆಯೇ ಗೌರವ ಭಾವನೆಯನ್ನು ಮೂಡಿಸುತ್ತದೆ. ನನ್ನ ಗುರುಗಳಾದ ಪ್ರೊ. ಜಿ ವೆಂಕಟಸುಬ್ಬಯ್ಯ, ಪ್ರೊ. M J ಸೂಂದರ್ರಾಮ್‌ , ಎಂ.. ವೆಂಕಟಾಚಾರ್‌, ಟಿ.. ವೈದ್ಯೇಶ್ವರ್ಮೊದಲಾದ   ಶ್ರೇಷ್ಟ  ಆಚಾರ್ಯರ  ಗರಡಿಯಲ್ಲಿ ಇಂತಹ ಅನೇಕ ತಂತ್ರಗಳನ್ನು ಕಲಿತಿದ್ದೇನೆ.

ಗುರುಗಳಾದ ಪ್ರೊ. ಜಿ.ವಿ. ಮತ್ತು ಪ್ರೊ.ಎಂ.ಜೆ. ಸುಂದರ ರಾಂ ಅವರೊಂದಿಗೆ  ಪ್ರೊ. ಆಡಿಗರು

ಲಿತದ್ದು ಕೈಯಗಲ
.  ಕಲಿಯಬೇಕಾದದ್ದು ಕಡಲಗಲ ಎನ್ನುವುದನ್ನು ಪ್ರತಿಯೊಬ್ಬರೂ ಅರಿತು ಪಾಲಿಸಿದರೆ ನೀವು ಅಪ್ಡೇಟ್ಆಗುತ್ತೀರಿ. ಕ್ರಮೇಣ ಶ್ರೇಷ್ಠ ಗುರುಪರಂಪರೆಯ ಪ್ರತಿನಿಧಿಯಾಗುತ್ತೀರಿ. ನೀವು ಉತ್ತಮ ಶಿಕ್ಷಕರಾಗಿ ಪರಿವರ್ತನೆಗೊಳ್ಳುತ್ತೀರಿ. ಕೇವಲ ಪರೀಕ್ಷಾ ದೃಷ್ಟಿಯಿಂದ ಬೋಧಿಸದೆ ವಿದ್ಯಾರ್ಥಿಗಳೇ ಜ್ಞಾನವನ್ನು ಕಟ್ಟಿಕೊಳ್ಳುವಂತೆ ಮಾಡಬೇಕಿದೆ. ಈಗ NEP ಇದಕ್ಕೆ ಒತ್ತು ನೀಡಿರುವುದು ನಿಮಗೆ ತಿಳಿದಿದೆ. ವಿಷಯವನ್ನು ವಿದ್ಯಾರ್ಥಿಗಳೇ ಚಿಂತಿಸಿ ಕುತೂಹಲಕರ ಪ್ರಶ್ನೆಗಳನ್ನು ಕೇಳುವಂತೆ ಬೋಧಿಸುವತ್ತ ಗಮನಹರಿಸಬೇಕು.

ಸಂ : ಸರ್‌, ಅನೇಕ ಬಾರಿ ನಮಗೆ ತರಗತಿಗೆ ಅಗತ್ಯ ಪರಿಕರಗಳು, ಸೌಲಭ್ಯಗಳು ಶಾಲೆಯಲ್ಲಿ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಬೋಧಿಸುವುದು ಹೇಗೆ?

ಬಾಲಕೃಷ್ಣ ಅಡಿಗಹೌದು ಅನೇಕ ಬಾರಿ ನಮಗೆ ಇಂತಹ ಪರಿಸ್ಥಿತಿ ಎದುರಾಗುತ್ತದೆ. ಕತ್ತಲಿದೆ ಎಂದು ದೂರುವ ಬದಲು ನೀವೇ ಅಲ್ಲೊಂದು ಕ್ಯಾಂಡಲ್ ಹಚ್ಚಿ. ಅದರ ಬೆಳಕು ದೂರದವರೆಗೆ ಚೆಲ್ಲಿ ಇತರರಿಗೆ ದಾರಿದೀಪವಾಗುತ್ತದೆ. ಹಾಗೆಯೇ ನಮ್ಮ ಇತಿಮಿತಿಯಲ್ಲಿ ಸಾಧ್ಯವಾದುದನ್ನು ಮಾಡೋಣ. ನೀವು ಪ್ರಯತ್ನಪಟ್ಟರೆ ಹತ್ತಾರು ಕೈಗಳು ನಿಮ್ಮ ಸಹಾಯಕ್ಕೆ ಬರುತ್ತವೆ. ನನ್ನದೇ ಅನುಭವವನ್ನು ಹೇಳುವುದಾದರೆ ಬೆಂಗಳೂರಿನ ಗಾರ್ವೆಭಾವಿಪಾಳ್ಯದಲ್ಲಿ ನನ್ನದೊಂದು ನಿವೇಶನವಿತ್ತು. ಒಮ್ಮೆ ಆ ನಿವೇಶನವನ್ನು ನೋಡಲು ಹೋಗಿದ್ದೆ. ಅಲ್ಲಿ ಹೋಗಿ ನೋಡಿದರೆ ಅಲ್ಲಿನ ಜನರ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ಬಹಳ ಕೆಳಮಟ್ಟದಲ್ಲಿದ್ದುದನ್ನು ನೋಡಿ ಶಿಕ್ಷಣದಿಂದ ಬದಲಾವಣೆ ಸಾಧ್ಯ ಅಂತ ಮನಸ್ಸಿಗೆ ಅನಿಸಿತು. ನನ್ನ ನಿವೇಶನವನ್ನು ದಾನವಾಗಿ ಕೊಟ್ಟು ಒಂದು ಟ್ರಸ್ಟ್ ಅನ್ನು ಸ್ಥಾಪಿಸಿ ಈ ಮಕ್ಕಳಿಗಾಗಿ ಒಂದು ಶಾಲೆ ನಡೆಸಬೇಕೆಂದು ತೀರ್ಮಾನಿಸಿದೆ. ಸಮಾನ ಮನಸ್ಕ ಸ್ನೇಹಿತರ ಸಹಾಯದಿಂದ ಈ ಕಾರ್ಯಕ್ಕೆ ಇಳಿದೇ ಬಿಟ್ಟೆ. ಈಗ ಶಾಲೆಯಲ್ಲಿ 600 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.  ಇದ್ದು ಹಲವರು ಈ ಕೆಲಸದಲ್ಲಿ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ಇಂತಹ ಹಲವಾರು ನಿದರ್ಶನಗಳು ನನ್ನ ಬದುಕಿನಲ್ಲಿ ನಡೆಯುತ್ತಲೇ ಇವೆ.  ಧನಾತ್ಮಕ ಚಿಂತನೆ ನಿಮ್ಮಲ್ಲಿದ್ದರೆ ಯಶಸ್ಸು ನಿಮ್ಮದಾಗುತ್ತದೆ.

ಸಂ :  ಹೌದು ಸರ್.‌  ನಿಮ್ಮ ಅನುಭವ ನಮ್ಮೆಲ್ಲರಿಗೂ ಮಾರ್ಗದರ್ಶಿ ಸರ್.  

ಶಿಕ್ಷಣ ರಂಗ, ಸಾಹಿತ್ಯ, ರೇಡಿಯೋ, ದೂರದರ್ಶನ ಕಾರ್ಯಕ್ರಮಗಳು, ನಿಯತಕಾಲಿಕಗಳಲ್ಲಿ ಜಾಗೃತಿ ಮೂಡಿಸುವ ಲೇಖನಗಳ ಮೂಲಕ ಸಾರ್ವಜನಿಕ ರಂಗದಲ್ಲಿ ಮನೆಮಾತಾಗಿದ್ದೀರಿ. ಹಲವು ಸಂಸ್ಥೆಗಳನ್ನೂ ಹುಟ್ಟು ಹಾಕಿದ್ದೀರಿ. ಕೃತಿಗಳನ್ನು ರಚಿಸಿದ್ದೀರಿ. ಈಗ ಸವಿಜ್ಞಾನ ಎಂಬ ಇ-ಮಾಸಪತ್ರಿಕೆಯನ್ನು ಹುಟ್ಟುಹಾಕಿ ಅನೇಕ ಶಿಕ್ಷಕರನ್ನು ತೊಡಗಿಸಿಕೊಳ್ಳುವಂತೆ ಮಾರ್ಗದರ್ಶನ ನೀಡುತ್ತಿದ್ದೀರಿ. ನಿಮಗೆ ಇಂತಹ ಆಲೋಚನೆ ನಿಮಗೆ ಹೇಗೆ ಬಂತು?

ಬಾಲಕೃಷ್ಣ ಅಡಿಗಎಂಬತ್ತರ ದಶಕದಲ್ಲಿ ಬರವಣಿಗೆಯ ಹವ್ಯಾಸ ಪ್ರಾರಂಭಿಸಿದೆ. ಮೊದಲು ವಿದ್ಯಾರ್ಥಿಗಳಿಗಾಗಿ ಕಾಲೇಜು ಮ್ಯಾಗ್ಜಿನ್ ಪ್ರಾರಂಭಿಸಿ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ನಾನೂ ಬರೆಯಲಾರಂಭಿಸಿದೆ. ಈ ಬರವಣಿಗೆಯನ್ನು ಎಲ್ಲರೂ ಮೆಚ್ಚಿಕೊಂಡರು. ನಂತರ ಆಕಾಶವಾಣಿಯಲ್ಲಿ ವಿಜ್ಞಾನ ಕಾರ್ಯಕ್ರಮಗಳಿಗೆ ಸ್ಕ್ರಿಪ್ಟ್ ಬರೆದು ಕಾರ್ಯಕ್ರಮ ನೀಡಿದೆ. ಹೀಗೆ ಬರವಣಿಗೆಯಲ್ಲಿ ಆತ್ಮವಿಶ್ವಾಸ ಹೆಚ್ಚಿಸಿತು. ಹೀಗೆ ಬರವಣಿಗೆ ಹವ್ಯಾಸವಾಗಿ ಹಲವಾರು ಕೃತಿ ರಚನೆಗೆ ಕಾರಣವಾಯಿತು.

ಲಾಕ್ಡೌನ್ ಅವಧಿಯಲ್ಲಿ ಸಾಕಷ್ಟು ಜನರು ಹೊರ ಹೋಗಲಾರದೆ ಮನೆಯಲ್ಲಿಯೇ ಕಾಲಕಳೆಯುವ ಸಮಸ್ಯೆ ಉಂಟಾಯಿತು. ಈ ಸಂದರ್ಭದಲ್ಲಿ ಶಿಕ್ಷಕರ ಸಮಯವನ್ನು ಪೂರ್ಣವಾಗಿ ಅಧ್ಯಯನ ಮತ್ತು ಲೇಖನ ಬರೆಯುವ ಕಾರ್ಯದಲ್ಲಿ ತೊಡಗಿಸಿಕೊಂಡರೆ ಹೇಗೆ ಎಂಬ ಆಲೋಚನೆ ಬಂತು. ಹಲವಾರು ಜನರೊಂದಿಗೆ ಚರ್ಚಿಸಿ ಒಂದು ಕ್ರಿಯಾಯೋಜನೆಯನ್ನು ಹಾಕಿಕೊಂಡೆ.  ನಂತರ ನಿಮ್ಮೊಂದಿಗೂ ಪ್ರಸ್ತಾಪಿಸಿ ಚರ್ಚಿಸಿದೆ. ಮುಂದಿನ ಆಗು-ಹೋಗುಗಳೆಲ್ಲ ನಿಮಗೇ ತಿಳಿದಿದೆ.

ಸಂ :  ಹೌದು ಸರ್ , ನಮಗೆ ಇದರಿಂದ ಸಾಕಷ್ಟು ಪ್ರಯೋಜನವಾಯಿತು. ಸಾಕಷ್ಟು ಜನ ಶಿಕ್ಷಕರ ಪ್ರತಿಭೆಯ ಅನಾವರಣಕ್ಕೆ ಅವಕಾಶವಾಯಿತು. ಅನೇಕರು ಇದರಲ್ಲಿ ಬರುವ ಲೇಖನಗಳ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಲವಾರು ದಿನಾಚರಣೆಗಳ ಬಗ್ಗೆ ಮುಂಚಿತವಾಗಿ ತಿಳಿಸುವುದರಿಂದ ಉತ್ತಮ ಕಾರ್ಯಕ್ರಮವನ್ನು ಶಾಲೆಯಲ್ಲಿ ಹಮ್ಮಿಕೊಳ್ಳಲು ಸಹಾಯವಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಒಗಟುಗಳು, ವ್ಯಂಗ್ಯ ಚಿತ್ರಗಳು ಮಕ್ಕಳ ಮನಸ್ಸನ್ನೂ ಗೆದ್ದಿವೆ.

ಬಾಲಕೃಷ್ಣ ಅಡಿಗ: ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಲೇಖಕರು ಪತ್ರಿಕೆಯನ್ನು ಓದಿ ತಾವು ಕೂಡ ಲೇಖನ ಬರೆಯುವಂತಾಗಬೇಕು. ಹೆಚ್ಚು ಹೆಚ್ಚು ಸೃಜನಶೀಲ, ಸಂಶೋಧನಾ, ಅನುಭವಜನ್ಯ ವಿಮರ್ಶಾತ್ಮಕ ಲೇಖನಗಳು ಬರುವಂತಾಗಬೇಕು.  ಅಧ್ಯಾಪನದೊಂದಿಗೆ ಅಧ್ಯಯನವೂ ಸೇರಿದಾಗ ಅಪೂರ್ವ ಕೃತಿಗಳು ಬರಲು ಸಾಧ್ಯ. ಹಾಗಾಗಿ ನೀವೆಲ್ಲರೂ  ತ್ರಿಕರಣಪೂರ್ವಕ ಜ್ಞಾನದಾಸೋಹಿಗಳಾಗಬೇಕು.

ಉಪ್ಪಿಷ್ಟು ಹುಳಿಯಿಷ್ಟು ಕಾರ ಸಿಹಿಯಷ್ಟಿಟ್ಟು |

ಒಪ್ಪಿರ್ದೊಡದು ಭೋಜ್ಯವಂತು ಜೀವಿತಮುಂ ||

ತಪ್ಪು ಸರಿ ಬೆಪ್ಪು ಜಾಣಂದಕುಂದುಗಳ ಬಗೆ |

ಯಿಪ್ಪತ್ತು ಸೇರೆ ರುಚಿ ಮಂಕುತಿಮ್ಮ ||

ಎಂಬಂತೆ ನಮ್ಮ ಬದುಕನ್ನು ಹಸನಾಗಿಸಿಕೊಳ್ಳಬೇಕು.


ಸಂ :  ಸರ್ , ನಿಮ್ಮ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಗಳನ್ನು ಗುರುತಿಸಿ ಸಾಕಷ್ಟು ಸಂಸ್ಥೆಗಳು ಗೌರವಿಸಿವೆ. ಈ ಕುರಿತು ಒಂದಷ್ಟು ಮಾಹಿತಿ ನೀಡಿ. ಇದರಿಂದ ಅನೇಕ ಶಿಕ್ಷಕರಿಗೂ ಪ್ರೇರಣೆ ದೊರಕಬಹುದು.

ಬಾಲಕೃಷ್ಣ ಅಡಿಗ: ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಉಕ್ತಿಯಂತೆ ನೀವು ನಿಷ್ಕಾಮಕರ್ಮಿಗಳಾಗಿ. ಫಲಾಫಲಗಳ ಗೊಡವೆ ಬೇಡ. ಉತ್ತಮ ಫಲ ಖಂಡಿತ ಸಿಕ್ಕೇ ಸಿಗುತ್ತದೆ.

ನನಗೆ ದೊರೆತ ಬಹುತೇಕ ಪುರಸ್ಕಾರಗಳಲ್ಲಿ ನನಗೆ ತಿಳಿಯದಂತೆ ಆಯ್ಕೆಗೊಂಡೆ. ಪ್ರಮುಖ ಪುರಸ್ಕಾರಗಳೆಂದರೆ ಬೆಂಗಳೂರಿನ ಕನ್ನಡ ಯುವಜನ ಸಂಸ್ಥೆಯ ಪ್ರಥಮ ಕನ್ನಡ ಸಮ್ಮೇಳನದಲ್ಲಿ ಗೌರವ ಸನ್ಮಾನ. 2004ರಲ್ಲಿ ಜ್ಞಾನ ಮಂದಾರ ಸಾಂಸ್ಕೃತಿಕ ಶೈಕ್ಷಣಿಕ ಸಮಿತಿಯು ನನ್ನ ಸಮಾಜ ಸೇವೆಯನ್ನು ಗುರುತಿಸಿ ಸಮಾಜರತ್ನ ಎಂಬ ಬಿರುದನ್ನು ನೀಡಿತು. 2006ರಲ್ಲಿ ಬೆಂಗಳೂರಿನಲ್ಲಿ ನಡೆದ ಶಿಕ್ಷಕರ ಸಮಾವೇಶದಲ್ಲಿಜೀವಶಾಸ್ತ್ರದ ನಡೆದಾಡುವ ವಿಶ್ವಕೋಶ ಎಂಬ ಬಿರುದನ್ನು ನೀಡಿತು. 2007ರಲ್ಲಿ ಸಮಾಜ ಸೇವಾ ಸಂಸ್ಥೆ ಆದರ್ಶ ಶಿಕ್ಷಕ ಪ್ರಶಸ್ತಿಯ ಜೊತೆಗೆ ಗುರುತಿಲಕ ಎಂಬ ಬಿರುದು ನೀಡಿತು. 2009 ರಲ್ಲಿ ಭಾರತೀಯ ವಿದ್ಯಾಭವನ ಶೈಕ್ಷಣಿಕ ಸೇವೆಗಾಗಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ನೀಡಿತು.  



2011ರಲ್ಲಿ ನನ್ನ 60ನೇ ಹುಟ್ಟು ಹಬ್ಬದಂದು ಪಾರಿಸಾರಿಕ ಕ್ಷೇತ್ರಕ್ಕೆ ನನ್ನ ಕೊಡುಗೆಯನ್ನು ಪರಿಗಣಿಸಿ ಬಿ.ಬಿ.ಎಂ.ಪಿ ಕೆಂಪೇಗೌಡ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿತು. ಕನ್ನಡ ಭಾಷಾ ಅಭಿವೃದ್ಧಿಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ FM ರೇಡಿಯೋ ಬಳಗ ವರ್ಷದ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಿತು. ಹೀಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ.




ಸಂ  :  ಸರ್,‌ ಕೊನೆಯದಾಗಿ ನಮ್ಮ ಸವಿಜ್ಞಾನ ಓದುಗರಿಗೆ ನಿಮ್ಮ ಸಲಹೆ ಏನು?

ಬಾಲಕೃಷ್ಣ ಅಡಿಗಇನ್ನೇನು ಇಷ್ಟರಲ್ಲೇ  ನಮ್ಮ ರಾಜ್ಯವೂ NEP ಯನ್ನು ಹಂತ ಹಂತವಾಗಿ  ಜಾರಿ ಮಾಡುತ್ತಿದೆ. ಸ್ಥಾನಿಕ ಪತ್ರ (Position paper) ಸಿದ್ಧವಾಗುತ್ತಿದೆ. ಈ ಸಂದರ್ಭದಲ್ಲಿ ನಾವೂ ಹೊಸ ಸವಾಲಿಗೆ ಸಿದ್ಧರಾಗಬೇಕಿದೆ. ನಾವೀನ್ಯಯುತ ಕಲಿಕಾ ವಿಧಾನಗಳನ್ನು ಅಳವಡಿಸಿ ಭವ್ಯ ಭಾರತದ ಭವಿಷ್ಯವನ್ನು ರೂಪಿಸಬೇಕಿದೆ. ತಂತ್ರಜ್ಞಾನವನ್ನೂ ಬಳಸಿಕೊಳ್ಳಬೇಕಿದೆ. ನೀವೆಲ್ಲರೂ ಇಂತಹ ಸಾಮರ್ಥ್ಯವನ್ನು ಹೊಂದಿರುವಂತಹ ಶಿಕ್ಷಕರೇ. ವಿಷಯ ಕಲಿಕೆಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಸಹಪಠ್ಯ ಚಟುವಟಿಕೆಗಳಿಗೂ ನೀಡಬೇಕು. ವಿದ್ಯಾರ್ಥಿಗಳನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಇವು ಕಲಿಕೆಗೆ ಪೂರಕವಷ್ಟೇ ಅಲ್ಲದೇ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಸಮಯದ ಸದುಪಯೋಗಕ್ಕೆ ಇಂತಹ ಚಟುವಟಿಕೆಗಳು  ಅತ್ಯವಶ್ಯಕ. ವಿದ್ಯಾರ್ಥಿಗಳು ಸವಿಜ್ಞಾನದಂತಹ ಪತ್ರಿಕೆಗಳನ್ನು ಓದಲಿ. ಅವರದೇ ಲೇಖನಗಳನ್ನು ಶಾಲಾಮಟ್ಟದಲ್ಲಾದರೂ ಬರೆಯಲಿ.  ಹಾಗೆಯೇ ರಾಜ್ಯದೆಲ್ಲೆಡೆಯಿಂದ ಶಿಕ್ಷಕರು ಸವಿಜ್ಞಾನಕ್ಕೆ ಲೇಖನಗಳನ್ನು ಬರೆಯಲಿ. ಅದಿತಿ, ಬೋಧ, ಆಚರಣ, ಪ್ರಸರಣ ಎಂಬ ಮಾತಿನಂತೆ ಅಧ್ಯಯನ, ಅಧ್ಯಾಪನದಿಂದ ದೊರೆತ ನಿಮ್ಮ ಜ್ಞಾನವನ್ನು ಸಮಾಜಕ್ಕೆ ಹಂಚಿ. ಜೊತೆಯಲ್ಲಿ ಸಾಗೋಣ . ಎಲ್ಲರಿಗೂ ಶುಭವಾಗಲಿ.

ಸಂ : ಧನ್ಯವಾದಗಳು ಸರ್.‌  

ಬಾಲಕೃಷ್ಣ ಅಡಿಗರೊಂದಿಗೆ ಸಂದರ್ಶಕರು

38 comments:

  1. Very useful article about TAB sir

    ReplyDelete
  2. ಗುರುಗಳ ಬಗ್ಗೆ ಗೌರವ ಹೆಚ್ಚಾಗುವಂತಹ ಮಾಹಿತಿ ಪೂರ್ಣ ಸಂದರ್ಶನ, ಧನ್ಯವಾದಗಳು ಸರ್.

    ReplyDelete
  3. ಉತ್ತಮ ಸಂದರ್ಶನ, ಅಭಿನಂದನೆಗಳು

    ReplyDelete
  4. ಅತ್ಯುತ್ತಮ , ಅನುಭವೀ ವ್ಯಕ್ತಿಯವರನ್ನು ಸಂದರ್ಶಸಿ ಶಿಕ್ಷಕ ಸಮುದಾಯಕ್ಕೆ ಉತ್ತಮ ಮಾರ್ಗದರ್ಶನ ಸಿಗುವಂತೆ ಮಾಡಿದ್ದೀರಿ ಅಭಿನಂದನೆಗಳು

    ReplyDelete
  5. Nimmanta gurugalannu paded sisyarellaru danya sir

    ReplyDelete
  6. It was my preivilege to work under you TAB Sir.. My respects and regards to you.... a Sudheendra Hebbar, Lecturer in Biology, Sri Ramakrishna Vidyashala, Yadavagiri, Mysore

    ReplyDelete
  7. ಅತ್ಯುತ್ತಮ ಸಂದರ್ಶನ. ಉತ್ತಮ ಮಾಹಿತಿ ಓದಿದ ಅನುಭವವಾಯಿತು.

    ReplyDelete
  8. 🙏ಭೋದನೆಯಲ್ಲಿ ತನ್ಮಯತೆ ಸಾಧಿಸುವ ಹಾದಿಯಲ್ಲಿರುವ ಶಿಕ್ಷಕರಿಗೆ TAB ಸರ್ ಮಾದರಿ

    ReplyDelete
  9. Hearty congratulations guruji 🙏

    ReplyDelete
  10. ನಿಮ್ಮ ಶೈಕ್ಷಣಿಕ ಅನುಭವಗಳು ನಮಗೆ ದಾರಿ ದೀಪ ಸರ್ ನಿಮಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು

    ReplyDelete
  11. ಅದ್ಭುತ, ಅನುಕರಣೀಯ ಮತ್ತು ಹೆಮ್ಮೆಯ ಸಾಧನೆ. ಉತ್ತಮ ಸಂದರ್ಶನ, ಅಭಿನಂದನೆಗಳು

    ReplyDelete
    Replies
    1. ಅದ್ಭುತ, ಅನುಕರಣೀಯ ಮತ್ತು ಹೆಮ್ಮೆಯ ಸಾಧನೆ. ಉತ್ತಮ ಸಂದರ್ಶನ,ಅಭಿನಂದನೆಗಳು

      Delete
    2. I am proud to have worked Under DrTAB sir. A meaning ful journey as a teacher, writer and an able administrator.

      Delete
  12. ಡಾ.ಬಾಲಕ್ರಷ್ಣ ಅಡಿಗ ಅವರ ಸಾಧನೆ ಅನುಕರಣೀಯ, ವಿಶಿಷ್ಟ ಹಾಗೂ ಹೆಮ್ಮೆ ಪಡುವಂತಹದು.
    ಉತ್ತಮ ಸಂದರ್ಶನ, ಅಭಿನಂದನೆಗಳು

    ReplyDelete
  13. Thank you very much for the insight. Was knowing only tip of the ice burg so far!
    Wishing him many more such milestones and a great health.
    Sri Gurubhyo Namaha..

    ReplyDelete
  14. Namaskara Adigare
    Your dedication sincerity in profession is a model that any teacher can treat on to succeed as teachers
    Vandanegalu
    Venkatesh bs

    ReplyDelete
  15. Pl read as any teacher can tread on….

    ReplyDelete
  16. very useful and encouraging aspects were told by TAB Sir

    ReplyDelete
  17. Proud to have been his classmate and now associated with him in Jeeva Vijaya
    Ravikumar

    ReplyDelete
  18. Excellent...I am one among thousands of students who got the opportunity to witness Sir's classes in Vijaya college.

    ReplyDelete
  19. ಉತ್ತಮ ಸಂದರ್ಶನ, ಉಪಯುಕ್ತ ಮಾಹಿತಿ ಅಭಿನಂದನೆಗಳು ಸರ್.

    ReplyDelete
  20. I am one of his students in Vijaya college

    ReplyDelete
  21. Very nice and impressive article

    ReplyDelete
  22. You are an inspiration for most of us and keep guiding us sir. Thank you so much sir.

    ReplyDelete
  23. ಈ ಸಂದರ್ಶನದಿಂದ ನಮ್ಮ ಗುರುಗಳ ಆದರ್ಶಪ್ರಾಯ ವ್ಯಕ್ತಿತ್ವದ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿದೆ. ಡಾ. ಬಾಲಕೃಷ್ಣ ಅಡಿಗ ಸರ್ ಅವರಿಗೆ ಅಭಿಮಾನ ಪೂರ್ವಕ ಅಭಿನಂದನೆಗಳು. ಸಂದರ್ಶಕರಿಗೆ ಧನ್ಯವಾದಗಳು

    ReplyDelete
  24. ಜೀವಶಾಸ್ತ್ರದ ವಿಶ್ವಕೋಶ ಎಂದೇ ಪರಿಚಿತರಾಗಿರುವ ಡಾ.ಬಾಲಕೃಷ್ಣ ಅಡಿಗರ ವ್ಯಕ್ತಿತ್ವವನ್ನು ಪರಿಚಯ ಮಾಡುವುದರ ಮೂಲಕ ಅವರಿಗೆ ಕೊಡುಗೆ ನೀಡಿದವರಿಗೆ ಅಭಿನಂದನೆಗಳು

    ReplyDelete
  25. It was great pleasure to work with you sir. We were involved in many P U Board specially confidential works.
    You have been a guide and Philosopher. God bless you and your family.
    Maj R Shankar Jadhav.
    Retd Principal BEL College Bangalore.

    ReplyDelete
  26. A great Person very unique and inspiring so many people

    ReplyDelete
  27. ನಿಮ್ಮೆಲ್ಲಾ ಪ್ರೋತ್ಸಾಹದ ನುಡಿಗಳು ಇನ್ನಷ್ಟು ಹುರುಪನ್ನು ತುಂಬಿವೆ. ಎಲ್ಲಾ ಓದುಗ ಬಂಧುಗಳಿಗೆ ನುಡಿನಮನಗಳು

    ReplyDelete
  28. Very impressive article. Thanks to Adiga sir and Ramachandra Bhat sir

    ReplyDelete
  29. ನಮ್ಮೆಲ್ಲರ ಸ್ಪೂರ್ತಿ ಯಾದ ಮಹಾನ್ ವ್ಯಕ್ತಿಯ ಸಂದರ್ಶನ ಉತ್ತಮವಾಗಿದೆ
    ಅವರ ಜೀವನಗಾಥೆಯೂ ನಮಗೆ ಸ್ಪೂರ್ತಿ

    ReplyDelete
  30. ಅರ್ಥಪೂರ್ಣ ಲೇಖನ ಸರ್, ಗುರುಗಳು ಅಸಂಖ್ಯಾತ ವಿದ್ಯಾರ್ಥಿಗಳ ದಾರಿದೀಪವಾಗಿದ್ದಾರೆ. ನಮನಗಳು.

    ReplyDelete
  31. ಅತ್ಯುತ್ತಮ ಸಂದರ್ಶನ. ಹಾಗೂ ಅಡಿಗ sir ರವರು ನಮಗೆಲ್ಲರಿಗೂ ಯಾವಾಗಲೂ ಸ್ಪೂರ್ತಿಯ ಸಂಕೇತ

    ReplyDelete
  32. Great achievements in silence
    Sir
    It's really a rich achievement which you have made silently over the years and a major contribution to the society.
    We have earlier learnt from what you taught in the classroom that's the basis of our Livelihood. But with the above activities you have been making us learn even after so many years in the larger classroom of life thus enabling us to lead a more enriching Life by following in your footsteps.

    N Ravindra

    ReplyDelete
  33. ಸಂದರ್ಶನ ಲೇಖನಕ್ಕೆ ಪ್ರತಿಕ್ರಯಿಸಿದ ಪ್ರತಿಯೊಬ್ಬರಿಗೂ ನನ್ನ ವೈಯುಕ್ತಿಕ ಧನ್ಯವಾದಗಳು.

    ReplyDelete