Monday, October 4, 2021

ಸವಿಜ್ಞಾನ ತಂಡದ ಸಾಧಕ ಶಿಕ್ಷಕರ ಪರಿಚಯ

ಞಸವಿಜ್ಞಾನ ತಂಡದ ಸಾಧಕ ಶಿಕ್ಷಕರ ಪರಿಚಯ

ಸವಿಜ್ಞಾನ  ತಂಡದ ಸದಸ್ಯರ, ಲೇಖಕರ ಶೈಕ್ಷಣಿಕ, ಸಾಮಾಜಿಕ ಬದ್ಧತೆ ಸೇವೆಗಳನ್ನು ಗುರುತಿಸಿ ಸರ್ಕಾರ ಹಾಗೂ ಹಲವಾರು ಸಂಘ ಸಂಸ್ಥೆಗಳು ಜಿಲ್ಲಾ, ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿವೆ.

ವಿವಿಧ ಪ್ರಶಸ್ತಿ ವಿಜೇತ ಶಿಕ್ಷಕರು   

  • ರಾಜ್ಯಮಟ್ಟದ ಅತ್ಯುತ್ತಮ ಪ್ರಶಸ್ತಿ ವಿಜೇತ ಪರಮೇಶ್ವರಯ್ಯ ಸೊಪ್ಪಿನಮಠ.
  •  2021ನೇ ಸಾಲಿನ ರಾಜ್ಯಮಟ್ಟದ ISBR ಗುರು ಶ್ರೇಷ್ಠ ಪ್ರಶಸ್ತಿ ವಿಜೇತ ಲಕ್ಷ್ಮೀಪ್ರಸಾದ್ ನಾಯಕ್
  •  ಜಿಲ್ಲಾ ಮಟ್ಟದ ಶಿಕ್ಷಕ  ಪ್ರಶಸ್ತಿ ವಿಜೇತ ವಿಜಯಕುಮಾರ್‌- ಚಂದ್ರಕಲಾ ದಂಪತಿಗಳು
  •  ನೇಷನ್ಬಿಲ್ಡರ್ಪ್ರಶಸ್ತಿ ವಿಜೇತ ಶಿವಕುಮಾರ್ಕೆ.ಟಿ.
  • ನೇಷನ್ಬಿಲ್ಡರ್ಪ್ರಶಸ್ತಿ ವಿಜೇತ ಅನಿಲ್ಕುಮಾರ್ಸಿ. ಎನ್‌.
  •  ಚಿಣ್ಣರ ಪಾಲಿನ  ಪಾಲಿನ ಚಿನ್ಮಯ ಜ್ಞಾನಿ ಈ ಶ್ರೀಧರ ಮಯ್ಯ

ಕನ್ನಡ ಶಿಕ್ಷಣರತ್ನ ಪರಮೇಶ್ವರಯ್ಯ ಸೊಪ್ಪಿನಮಠ 

ಲೇಖಕರು: ಗುರುದತ್ 

     1974 ಸೆಪ್ಟೆಂಬರ್ 21ರಂದು ಬಳ್ಳಾರಿ-ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿಯಲ್ಲಿ ಜನನ. ಪ್ರಾಥಮಿಕದಿಂದ ಪಿ.ಯು.ವರೆಗೂ ಹಗರಿಬೊಮ್ಮನಹಳ್ಳಿಯಲ್ಲಿ ವಿದ್ಯಾಭ್ಯಾಸ. ಶಿಕ್ಷಕ ತರಬೇತಿಯು ತುಮಕೂರಿನ ಸಿದ್ಧಗಂಗಾಮಠದಲ್ಲಿ ಆಯಿತು. ತದನಂತರ ದೂರಶಿಕ್ಷಣದ ಮುಖಾಂತರ ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಬಿ.ಎ ಪದವಿ ಹಾಗೂ ಎಂ.ಎ. (ಕನ್ನಡ) ಸ್ನಾತಕೋತ್ತರ ಶಿಕ್ಷಣ. ಎಂ.ಎ. (ಪತ್ರಿಕೋದ್ಯಮ) ಸ್ನಾತಕೋತ್ತರ ಶಿಕ್ಷಣ ಕನ್ನಡ ವಿ.ವಿ. ಹಂಪಿಯಲ್ಲಿ ನಡೆಯಿತು. ಪ್ರಸ್ತುತ ಕನ್ನಡ ವಿ.ವಿ. ಹಂಪಿಯ ಕನ್ನಡ ಅಧ್ಯಯನ ವಿಭಾಗದಲ್ಲಿ “ಮಕ್ಕಳ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ” ವಿಷಯದ ಮೇಲೆ ಪಿಹೆಚ್.ಡಿ. ಅಧ್ಯಯನ.

ಶಿಕ್ಷಕನಾಗಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ, ಪ್ರಸ್ತುತ ಮಾಲವಿಯ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಣೆ. ಶೈಕ್ಷಣಿಕ, ಸಾಹಿತ್ಯ, ಸಮಾಜಸೇವೆ ಮತ್ತು ಸಂಘಟನೆಗಳಲ್ಲಿ ಆಸಕ್ತಿ. ಓದುವ ಮತ್ತು ಬರವಣಿಗೆ ಹವ್ಯಾಸ. 

ಸೊಪ್ಪಿನಮಠ ಅವರು ಸ.ಮಾ.ಹಿ.ಪ್ರಾ.ಶಾಲೆ ಮಾಲವಿಯಲ್ಲಿ ಕಳೆದ ಐದು ವರ್ಷಗಳಿಂದ ಅತ್ಯಂತ ಕ್ರಿಯಾಶೀಲವಾಗಿ ತಮ್ಮನ್ನು ಶಾಲಾ ಕೆಲಸಗಳಲ್ಲಿ ಇವರು ತೊಡಗಿಸಿಕೊಂಡಿದ್ದಾರೆ. ಅದರ ಫಲವಾಗಿ ಶಾಲೆಯ ಚಿತ್ರಣವನ್ನೇ ಸಂಪೂರ್ಣ ಬದಲಾಗಿದೆ. ಖಾಸಗಿ ಶಾಲೆಗಿಂತ ಯಾವುದರಲ್ಲಿಯೂ ಕಡಿಮೆ ಇಲ್ಲ ಎನ್ನುವ ಹಂತಕ್ಕೆ ಬೆಳೆದು ನಿಂತಿದೆ. ಶಾಲೆಯ ಎಲ್ಲಾ ಶಿಕ್ಷಕರ, ಹಿರಿಯ ವಿದ್ಯಾರ್ಥಿಗಳ, ಗ್ರಾಮದ ದಾನಿಗಳ, ಬೇರೆ ಸ್ಥಳದ ದಾನಿಗಳ, ಎಸ್.ಡಿ.ಎಂ.ಸಿ, ಜನ ಪ್ರತಿನಿಧಿಗಳನ್ನು ಸೇರಿದಂತೆ ಎಲ್ಲರ ನೆರವಿನ ಮಹಾಪೂರವನ್ನೇ ಶಾಲೆಗೆ ಹರಿದುಬರುವಂತೆ ಇವರು ಮಾಡಿದ್ದಾರೆ. ಆ ಮೂಲಕ ಇದು ಮಾಲವಿ ಶಾಲೆಯೇ!! ಎಂದು ಎಲ್ಲರೂ ಅಚ್ಚರಿ ಪಡುವಂತೆ ಆಕರ್ಷಮಯವಾಗಿಸುವಲ್ಲಿ ಇವರ ಶ್ರಮ ಪ್ರಶಂಸನಾರ್ಹ

ರಾಜ್ಯ ಹಂತದ ಸಂಪನ್ಮೂಲ ವ್ಯಕ್ತಿಯಾಗಿ, ಪಠ್ಯ ಪುಸ್ತಕ ರಚನಾ ಸಮಿತಿ ಸದಸ್ಯರಾಗಿಯೂ ಸೊಪ್ಪಿಮಠ ಅವರು ಸೈ ಎನಿಸಿಕೊಂಡಿದ್ದಾರೆ. ಗುರಚೇತನ, ಇಂಡಕ್ಷನ್ ಸೇರಿದಂತೆ ಅನೇಕ ತರಬೇತಿಗಳ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿರುವ ಪರಮೇಶ್ವರಯ್ಯರವರು, ಆ ಜ್ಞಾನವನ್ನು ಶಾಲೆಯ ಮಕ್ಕಳಿಗೆ ತಲುಪಿಸುತ್ತಾ, ಇತರೆ ಶಿಕ್ಷಕರ ಜೊತೆ ಮುಕ್ತವಾಗಿ ಹಂಚಿಕೊಳ್ಳುವ ಇವರ ಕಾರ್ಯ ಶ್ಲಾಘನೀಯವಾಗಿದೆ. ಎಸ್.ಎಸ್.ಎಲ್.ಸಿ./ಪಿ.ಯು.ಸಿ. ನಂತರದ ಕೋರ್ಸ್ ಕುರಿತು ಆಕಾಶವಾಣಿ-ವಿವಿಧ ಕಾಲೇಜುಗಳಲ್ಲಿ ಉಪನ್ಯಾಸ ನೀಡಿದ್ದಾರೆ. ಬಳ್ಳಾರಿ ಡಯಟ್‍ವತಿಯಿಂದ ಅನೇಕ ಅಧ್ಯಯನಗಳನ್ನು ಕೈಗೊಂಡು, ಸಮಗ್ರ ವರದಿಯನ್ನು ಸಲ್ಲಿಸಿ, ಉತ್ತಮ ಸಂಶೋಧಕರೆಂದು ಗುರುತಿಸಿಕೊಂಡಿದ್ದಾರೆ. 

ಸಾಹಿತ್ಯ ಕ್ಷೇತ್ರದ ಲೇಖನ ಮತ್ತು ಕೃತಿಗಳ ರಚನೆಯಲ್ಲಿಯೂ ಸೊಪ್ಪಿಮಠರವರು ತಮ್ಮನ್ನು ಹೆಚ್ಚು ತೊಡಗಿಕೊಂಡಿದ್ದಾರೆ. ಶಿಕ್ಷಣ ಸೇರಿದಂತೆ ಇವರು ಬರೆದಿರುವ 650ಕ್ಕೂ ಹೆಚ್ಚು ಲೇಖನಗಳು ರಾಜ್ಯದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮಾಜಿ ಶಿಕ್ಷಣ ಸಚಿವರಾದ ಸುರೇಶಕುಮಾರ್ ಅವರು ಇವರ ಬರವಣಿಗೆಯನ್ನು ಖುದ್ದು ಪ್ರಶಂಸಿಸಿದ್ದಾರೆ. ಇವರು ಇದುವರೆಗೂ ಶಿಕ್ಷಣ, ವ್ಯಕ್ತಿ ಪರಿಚಯ, ಮಕ್ಕಳ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಹತ್ವಪೂರ್ಣ 15 ಕೃತಿಗಳನ್ನು ರಚಿಸಿದ್ದಾರೆ. ಇವರ ಇತ್ತೀಚಿನ ಕನ್ನಡ ಕಹಳೆ ಕೃತಿ ಹೆಚ್ಚು ಸದ್ದು ಮಾಡಿತು. 

ಸೊಪ್ಪಿಮಠ ಅವರ ‘ಎಜುಸ್ಯಾಟ್- ಒಂದು ಶಿಕ್ಷಣ ಕ್ರಾಂತಿ’ ಲೇಖನ ಗುಲ್ಬರ್ಗಾ ವಿ.ವಿ. ಕನ್ನಡ ಪಠ್ಯದಲ್ಲಿ ಮತ್ತು ‘ರವೀಂದ್ರನಾಥ್ ಟ್ಯಾಗೋರ’  ಲೇಖನ  ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆ ಪ್ರಕಟಿಸಿರುವ 6ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿದ್ದು ಇವರ ಬರವಣಿಗೆ ಮಹತ್ವ ತಿಳಿಸುತ್ತವೆ. ಶಿಕ್ಷಕ ನಿರಂತರ ವಿದ್ಯಾರ್ಥಿಯಾಗಿರಬೇಕು ಎನ್ನುವ ಮಾತಿಗೆ ಮಕ್ಕಳ ಸಾಹಿತ್ಯದ ಕುರಿತು ಪಿಎಚ್.ಡಿ ಅಧ್ಯಯನ ಮಾಡುತ್ತಿರುವುದು ಇವರ ಅಧ್ಯಯನಶೀಲತೆಗೆ ಹಿಡಿದ ಕನ್ನಡಿಯಾಗಿದೆ. 

ಎಪಿಎಫ್ ಮತ್ತು ಡಿಎಸ್‍ಇಆರ್‍ಟಿಗಳ ಪ್ರಕಾರ ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಸಾಧನೆಯ ಹತ್ತು ಶಿಕ್ಷಕರ ಪಟ್ಟಿಯಲ್ಲಿ ಇವರೂ ಒಬ್ಬರಾಗಿದ್ದಾರೆ. ಇವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ಜೆ.ಸಿ. ರಾಜ್ಯ ಗುರು ಪುರಸ್ಕಾರ ಪ್ರಶಸ್ತಿ, ಉದಯೋನ್ಮುಖ ಬರಹಗಾರ ಪ್ರಶಸ್ತಿ, ಸ.ಜ. ನಾಗಲೋಟಿಮಠ ರಾಜ್ಯ ಆದರ್ಶ ಶಿಕ್ಷಕ ಪ್ರಶಸ್ತಿ, ಶಿಕ್ಷಣ ಸಿರಿ ರಾಜ್ಯ ಪ್ರಶಸ್ತಿ, ಜನನಿ ಸಾಹಿತ್ಯ ರತ್ನ ಪ್ರಶಸ್ತಿ, ಆಜೂರು ಪ್ರತಿಷ್ಠಾನದ ಉತ್ತಮ ಕೃತಿ ಪ್ರಶಸ್ತಿಯಂತಹ ಅನೇಕ ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿವೆ. ಇವೆಲ್ಲ ಪ್ರಶಸ್ತಿಗೆ ಮುಕುಟಪ್ರಾಯ ಎನ್ನುವಂತೆ ಈ ಸಾಲಿನ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಶಿಕ್ಷಣ ಇಲಾಖೆಯ ಅಮೂಲ್ಯ ಆಸ್ತಿಯಾಗಿರುವ, ಸವಿಜ್ಞಾನ ಪತ್ರಿಕೆಯ ಲೇಖಕರೂ ಆಗಿರುವ ತಮ್ಮ ಸಾಧನೆಯ ಮೂಲಕ ಶಿಕ್ಷಕರಿಗೆ ಮಾದರಿಯಾಗಿರುವ ಪರಮೇಶ್ವರಯ್ಯ ಸೊಪ್ಪಿನಮಠರವರಿಗೆ ಸವಿಜ್ಞಾನ ತಂಡವು ಉಜ್ವಲ ಭವಿಷ್ಯವನ್ನು ಹಾರೈಸುತ್ತಾ ಅಭಿನಂದನೆಗಳನ್ನು ಸಲ್ಲಿಸುತ್ತದೆ. 



*--------------------------*-----------------------*------------------------------*

2021ನೇ ಸಾಲಿನ ರಾಜ್ಯಮಟ್ಟದ ISBR ಗುರು ಶ್ರೇಷ್ಠ ಪ್ರಶಸ್ತಿ ವಿಜೇತ ಲಕ್ಷ್ಮೀಪ್ರಸಾದ್ ನಾಯಕ್


    ನಮ್ಮ ಸ
-ವಿಜ್ಞಾನ ಇ-ಪತ್ರಿಕೆ ತಂಡದ ಸದಸ್ಯರಾದ ಶ್ರೀ ಲಕ್ಷ್ಮೀ ಪ್ರಸಾದ್ ನಾಯಕ್ ರವರ ಶಿಕ್ಷಣ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ISBR ಶಿಕ್ಷಣ ಸಂಸ್ಥೆ 2021ನೇ ಸಾಲಿನ ರಾಜ್ಯಮಟ್ಟದ ಪ್ರತಿಷ್ಠಿತ ಗುರು ಶ್ರೇಷ್ಠ ಪ್ರಶಸ್ತಿಯನ್ನು ದಿ.07/09/2021 ರಂದು ಪ್ರದಾನ ಮಾಡಿತು.

ಮೂಲತಃ ಉಡುಪಿ ಜಿಲ್ಲೆಯ ಬ್ರಹ್ಮಾವರದವರಾದ ಶ್ರೀಯುತ ಲಕ್ಷ್ಮೀ ಪ್ರಸಾದ್ ನಾಯಕ್ ರವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಸೂಕ್ಷ್ಮಾಣು ಜೀವಿ ಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವಿಯನ್ನು ಅಲ್ಲದೆ ಬಿ.ಎಡ್ ಮತ್ತು ಎಂ.ಫಿಲ್ ಪದವಿಯನ್ನು ಪಡೆದು 2001ರಲ್ಲಿ ತಮ್ಮ ವೃತ್ತಿ ಜೀವನವನ್ನು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜ್ ಮಡಿಕೇರಿಯಲ್ಲಿ ಪ್ರಾರಂಭಿಸಿದರು, ಹಲವಾರು ವರ್ಷಗಳ ಕಾಲ ಆಚಾರ್ಯ ಕಾಲೇಜ್ ಬೆಂಗಳೂರಿನಲ್ಲಿ ಉಪನ್ಯಾಸಕರಾಗಿ, HODಯಾಗಿ ಸೇವೆ ಸಲ್ಲಿಸಿ 2013ರಲ್ಲಿ ಸರ್ಕಾರಿ ಪ್ರೌಢಶಾಲೆ (RMSA - ಕನ್ನಡ) ಕೆಂಗೇರಿ ಬೆಂಗಳೂರು ದಕ್ಷಿಣ ವಲಯ-1ರಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಕರ್ತವ್ಯಕ್ಕೆ ಸೇರಿದರು. ಪರಿಣಾಮಕಾರಿ ನಾವಿನ್ಯ ರೀತಿಯ ಬೋಧನಾ ವಿಧಾನದ ಮೂಲಕ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿರುವ ಇವರು ಪಾಠ ಮಾಡುವ ವೇಳೆ ಬಳಸುವ ಸ್ಮರಣ ತಂತ್ರಗಳು ಮಕ್ಕಳಿಗೆ ಬಹಳ ಇಷ್ಟ .

ರಾಜ್ಯ ಪಠ್ಯಪುಸ್ತಕ ಪರಿಷ್ಕರಣ ಸಮಿತಿಹಾಗೂ NCERT ವಿಜ್ಞಾನ ಪಠ್ಯಪುಸ್ತಕ ಭಾಷಾಂತರ ಸಮಿತಿಯ ಸದಸ್ಯರಾಗಿ ಕಾರ್ಯವನ್ನು ನಿರ್ವಹಿಸಿರುತ್ತಾರೆ . ಪ್ರೌಢಶಾಲಾ ವಿಜ್ಞಾನ ಶಿಕ್ಷಕರ ತರಬೇತಿ ಮಾಡ್ಯೂಲ್  ರಚನೆ ಹಾಗೂ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಹಲವಾರು  ವಿಜ್ಞಾನ ಶಿಕ್ಷಕರ ತರಬೇತಿ ಕಾರ್ಯಕ್ರಮಗಳಲ್ಲಿ  ಕಾರ್ಯವನ್ನು ನಿರ್ವಹಿಸಿರುತ್ತಾರೆ. ಅಲ್ಲದೆ TALP ಗಣಕ ಯಂತ್ರ ತರಬೇತಿ ಕಾರ್ಯಗಾರದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ  ಶಿಕ್ಷಕರಿಗೆ ತರಬೇತಿಯನ್ನು ನೀಡಿರುತ್ತಾರೆ.

    ಕಳೆದ 9 ವರ್ಷಗಳಿಂದ ಡಯಟ್, ಬೆಂಗಳೂರು ನಗರ, ಪರೀಕ್ಷಾ ಮಂಡಳಿಯವರು ನಡೆಸುವ ಪ್ರಶ್ನಾಪತ್ರಿಕಾ ಕಾರ್ಯಾಗಾರ, ವಿಜ್ಞಾನ ಪಾಸಿಂಗ್ ಪ್ಯಾಕೇಜ್ ಸಿದ್ಧತೆ ಡಿ.ಎಸ್..ಆರ್.ಟಿ ಯವರ ಇ-ಕಂಟೆಂಟ್ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿರುತ್ತಾರೆ. 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಇಲಾಖೆ ಆಯೋಜಿಸಿದ ಫೋನ್-ಇನ್ ಕಾರ್ಯಕ್ರಮ, ಪರೀಕ್ಷಾ ಮಂಡಲಿಯವರ ಸಹಾಯವಾಣಿ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ. ಕಂಟೆಂಟ್ ರಿಡಕ್ಷನ್ ಸಮಿತಿಯ ಸದಸ್ಯನಾಗಿ ಕೆಲಸ ಮಾಡಿರುತ್ತಾರೆ. ಡಿ.ಎಸ್..ಆರ್.ಟಿ ಯವರ ರೇಡಿಯೋ ಮತ್ತು ಚಂದನ ವಾಹಿನಿಯ ಪರೀಕ್ಷಾವಾಣಿ ಕಾರ್ಯಕ್ರಮದಲ್ಲೂ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿರುತ್ತಾರೆ. ಕೋರೋನಾ ಸಂಕಷ್ಟದ ಸಮಯದಲ್ಲಿ ಚಂದನವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಂವೇದ -ಕ್ಲಾಸ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಿಜ್ಞಾನಪಠ್ಯ ಬೋಧನೆ  ಹಾಗೂ ಬಸವ ವಾಹಿನಿಯಲ್ಲಿ ಪ್ರಸಾರವಾಗುವ ವಿದ್ಯಾರ್ಥಿಮಿತ್ರ ಕಾರ್ಯಕ್ರಮದ ಮೂಲಕ ರಾಜ್ಯದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುತ್ತಾರೆ.

ಅಮೃತಾ ಒ-ಲ್ಯಾಬ್ ವಿಡಿಯೋ ಡಬ್ಬಿಂಗ್ ಕಾರ್ಯಾಗಾರ, - ಕಂಟೆಂಟ್ ಅಭಿವೃದ್ಧಿ ತಂಡದಲ್ಲಿ ರಾಜ್ಯ ಸಂಪನ್ಮೂಲವ್ಯಕ್ತಿಯಾಗಿ ರಜಾ ಅವಧಿಯಲ್ಲಿ ವಿಡಿಯೋ ಹಾಗೂ ಇ-ಕಂಟೆಂಟ್ ತಯಾರಿಸಿ ದೀಕ್ಷಾ ಪ್ಲಾಟ್ ಫೋರಂನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಈ ಬಾರಿ ಕೋವಿಡ್-19 ರ ಸಂಕಷ್ಟದ ಸಮಯದಲ್ಲಿ ಸತತ 57 ದಿನಗಳ ರಾಜ್ಯಾದ್ಯಂತ ವಿದ್ಯಾರ್ಥಿಗಳಿಗೆ ಪರೀಕ್ಷಾಕಿರಣ ಸಂಪನ್ಮೂಲ ತಯಾರಿಕೆ, ಮಾಜಿ ಶಿಕ್ಷಣ ಸಚಿವರಾದ ಸುರೇಶ್‌ ಕುಮಾರ್‌ರವರ ವಿಕಸನ ಕಾರ್ಯಕ್ರಮ, ರಾಜ್ಯ ಸಂಪನ್ಮೂಲವ್ಯಕ್ತಿಗಳು ಮತ್ತು ರೋಟರಿ ಬೆಂಗಳೂರು ಸಹಯೋಗದ ಸಿಂಚನ ಮತ್ತು ಯೂತ್ ಫಾರ್ ಸೇವಾ ಸಂಸ್ಥೆಯ ಸಹಯೋಗದಲ್ಲಿ ವಿದ್ಯಾಮಿತ್ರ ಕಾರ್ಯಕ್ರಮಗಳ ಮೂಲಕ ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಆನ್ಲೈನ್ ತರಗತಿಗಳನ್ನು ನಡೆಸಿ ಕೊಟ್ಟಿರುತ್ತಾರೆ . ಕ್ಲಾಸ್ ಸ್ಟುಡಿಯೋ ಮತ್ತು ದಿಗ್ವಿಜಯ ವಾಹಿನಿಯ ಸಹಯೋಗದಲ್ಲಿ ಆಯೋಜಿಸಿದ ಮಂಥನ ಪರೀಕ್ಷಾ ಸಿದ್ಧತಾ ವೆಬಿನಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ.

ಪಠ್ಯೇತರ ಚಟುವಟಿಕೆಗಳಲ್ಲೂ ಇವರು ಸದಾ ಮುಂದೆ ಉತ್ತಮ ಕ್ರೀಡಾಪಟುವಾಗಿರುವ ಇವರು 2020ನೇ ಸಾಲಿನ ರಾಜ್ಯ ಸರ್ಕಾರಿ ಕ್ರೀಡಾಕೂಟದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬೆಂಗಳೂರು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ದಾವಣಗೆರೆಯಲ್ಲಿ ಅಕ್ಟೋಬರ್ 21 ರಂದು ನಡೆಯಲಿರುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಉತ್ತಮಹಾಡುಗಾರರು ಕೂಡಾ ಆಗಿರುತ್ತಾರೆ.

ಇಷ್ಟು ಕಡಿಮೆ ಅವಧಿಯಲ್ಲಿ ಇಲಾಖೆಯ ಹಲವುಕಾರ್ಯಗಳಲ್ಲಿ ತೊಡಗಿಸಿಕೊಂಡು ಮಕ್ಕಳ ಸರ್ವತೋಮುಖ ಅಭಿವೃದ್ಧಿಯೇ ಅಂತಿಮ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಉತ್ಸಾಹಿ ಯುವ ಶಿಕ್ಷಕರಾದ ನಮ್ಮ ತಂಡದ ಸದಸ್ಯರಾದ ಶ್ರೀಯುತ ಲಕ್ಷ್ಮೀಪ್ರಸಾದ್ ನಾಯಕ್ ರವರಿಗೆ ಸವಿಜ್ಞಾನ ಇ-ಪತ್ರಿಕೆ ತಂಡ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ ಶುಭ ಹಾರೈಸುತ್ತದೆ.





****

ಒಗಟಿನ ಶಿಕ್ಷಕ ವಿಜಯಕುಮಾರ್ 


            ಒಗಟುಗಳು ಯಾರಿಗೆ ಇಷ್ಟವಾಗಲ್ಲ ? ಆದರೆ ಆ ಒಗಟುಗಳನ್ನು ಯಾರು ರಚಿಸಿದರು ?! ಗೊತ್ತಿಲ್ಲ. ಸರ್ಕಾರಿ ಪ್ರೌಢಶಾಲೆ, ಕಾವಲ್‌ ಬೈರಸಂದ್ರ, ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ. ವಿಜಯಕುಮಾರ್.ಹೆಚ್.ಜಿ ರವರು ವಿಜ್ಞಾನ ಗಣಿತ ವಿಷಯದಲ್ಲಿ ಒಗಟುಗಳನ್ನು ರಚಿಸುವುದರಲ್ಲಿ ಪರಿಣಿತರು. ಅವರ ಒಗಟುಗಳು ಉತ್ತರ ಗೊತ್ತಿದೆ ಅನ್ನಿಸಿದರು ಸುಳುಹು ಸುಲಭವಾಗಿರುವುದಿಲ್ಲ, ಓದುಗರ ಮಸ್ತಿಷ್ಕಕ್ಕೆ ಸಾಕಷ್ಟು ಕಸರತ್ತು ನೀಡುತ್ತದೆ. ವ್ಯಂಗ್ಯ ಚಿತ್ರಗಳ ಮೂಲಕ ವಿಜ್ಞಾನದ ಪರಿಕಲ್ಪನೆಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಅವರ ಪರಿ ಅನನ್ಯ. ಕ್ರಿಯಾ ಶೀಲ ವ್ಯಕ್ತಿತ್ವದ ಇವರು ಸತತವಾಗಿ ೧೦ನೇ ತರಗತಿಯಲ್ಲಿ ಉತ್ತಮ ಫಲಿತಾಂಶ ನೀಡುತ್ತಾ ವಿಜಯಶಾಲಿ ಶಿಕ್ಷಕ ಎನಿಸಿಕೊಂಡಿದ್ದಾರೆ. ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ವಿಜಯಪತಾಕೆ ಹಾರಿಸಿದ್ದಾರೆ. ವಿಜ್ಞಾನದ ನಾಟಕಗಳನ್ನು ಯಶಸ್ವಿಯಾಗಿ ನಿರ್ದೇಶಿಸಿ, ಬಹುಮಾನಗಳನ್ನು ಪಡೆದು ಎಲ್ಲರ ಮೆಚ್ಚುಗೆಗೆ ಒಳಗಾಗಿದ್ದಾರೆ. ಅಗಸ್ತ್ಯ ಇಂಟರ್‌ ನ್ಯಾಷನಲ್‌ ಫೌಂಡೇಶನ್‌ ನೊಂದಿಗೆ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ನೆಹರು ತಾರಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ಮತ್ತು ವಸ್ತು ಸಂಗ್ರಹಾಲಯದಿಂದ ಆಯೋಜಿತವಾಗುವ ವಸ್ತು ಪ್ರದರ್ಶನಗಳಲ್ಲಿ ಭಾಜವಹಿಸಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುತ್ತಾರೆ.


ಬಾಲವಿಜ್ಞಾನ, ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡು ರಾಜ್ಯಾದ್ಯಂತ  ಓದುಗರ  ಅಭಿಮಾನಕ್ಕೆ ಪಾತ್ರರಾಗಿದ್ದಾರೆ. “ಸವಿಜ್ಞಾನ” ಬ್ಲಾಗ್‌ನಲ್ಲಿ ವಿಜ್ಞಾನ ಲೇಖನಗಳಲ್ಲದೆ, ನಿರಂತರವಾಗಿ ವಿಜ್ಞಾನದ ಓಗಟುಗಳು ಹಾಗೂ ವ್ಯಂಗ್ಯ ಚಿತ್ರಗಳು ಪ್ರಕಟಗೊಂಡು ಶಿಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.  ಕ್ರಿಯಾಶೀಲ ಶಿಕ್ಷಕ ವಿಜಯಕುಮಾರ್.ಹೆಚ್.ಜಿ ರವರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಅವರಿಗೆ ಸವಿಜ್ಞಾನ ತಂಡದಿಂದ ಹೃತ್ಪೂರ್ವಕ ಅಭಿನಂದನೆಗಳು.

****

                                                        ತಂತ್ರಜ್ಞಾನ ಪ್ರವೀಣೆ ಶಿಕ್ಷಕಿ ಚಂದ್ರಕಲಾ 


    ಬೋಧನೆಯಲ್ಲಿ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಳವಡಿಸಿ, ಕ್ರಿಯಾತ್ಮಕ ವಿಧಾನಗಳ ಮೂಲಕ ನಾವಿನ್ಯತೆಯ ಮೂಲಕ ಜಿಲ್ಲೆಯಾದ್ಯಂತ ಹೆಸರಾದ ಶ್ರೀಮತಿ. ಚಂದ್ರಕಲಾ. ಆರ್‌ ರವರು ಕರ್ನಾಟಕ ಪಬ್ಲಿಕ್‌ ಶಾಲೆ, ಕೊಡಿಗೇಹಳ್ಳಿ, ಬೆಂಗಳೂರಿನಲ್ಲಿ ಕಾರ್ಯನಿವರ್ಹಿಸುತ್ತಿದ್ದು   ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯಾಗಿದ್ದಾರೆ. ಶಾಲೆಯಲ್ಲಿ ಸತತವಾಗಿ ಉತ್ತಮ ಫಲಿತಾಂಶ ನೀಡುತ್ತಿದ್ದು, ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ  ಕಾರ್ಯ ನಿವರ್ಹಿಸಿ ಶಿಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿಜ್ಞಾನ ನಾಟಕ ಸ್ಪರ್ದೆಗಳಲ್ಲಿ ವಿದ್ಯಾರ್ಥಿ ತಂಡಗಳನ್ನು ತರಭೇತಿಗೊಳಿಸಿ ಬಹುಮಾನಗಳನ್ನು ಪಡೆದಿರುತ್ತಾರೆ. KCST ವತಿಯಿಂದ ಆಯೋಜೆತವಾದ  EYES ON NATURE- ಕಾರ್ಯಕ್ರಮದಲ್ಲಿ ಮಾರ್ಗದರ್ಶಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದಾರೆ. INDIA INTERNATIONAL SCIENCE FESTIVAL ನಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ತಯಾರಿ ಮಾಡಿದ ಹೆಗ್ಗಳಿಕೆಯು ಇವರಿಗೆ ಸಲ್ಲಬೇಕು. ನೆಹರು ತಾರಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಸ್ತು ಸಂಗ್ರಹಾಲಯದ  ವತಿಯಿಂದ ಆಯೋಜಿಸಲ್ಪಡುವ ಕಾರ್ಯಗಾರಗಳಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅಗಸ್ತ್ಯ  ಇಂಟರ್‌ ನ್ಯಾಷನಲ್‌ ಫೌಂಡೇಶನ್‌ ನೊಂದಿಗೆ ವಿಜ್ಞಾನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುತ್ತಾರೆ.  ಶಿಕ್ಷಕರಾದವರು ನಿರಂತರ ಕಲಿಕೆಯಲ್ಲಿ ತೊಡಗಿರಬೇಕು ಎಂಬ ಧ್ಯೇಯವನ್ನು ಪಾಲಿಸುತ್ತಾ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.


ಅವರಿಗೆ ಸವಿಜ್ಞಾನ ತಂಡದಿಂದ ಅಭಿನಂದನೆಗಳು.       

****

ರಾಷ್ಟ್ರ ನಿರ್ಮಾಣ ಕಾಯಕ ಯೋಗಿ ಕೆಟಿ ಶಿವಕುಮಾರ್ 


ಇತ್ತೀಚೆಗೆ ರೋಟರಿ ಸಂಸ್ಥೆ ಬೆಂಗಳೂರು ಶ್ರೀಯುತ ಶಿವಕುಮಾರ್ ಕೆ. ಟಿ. ಅವರಿಗೆ ನೇಷನ್ ಬಿಲ್ಡರ್ ಅವಾರ್ಡ್ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿತು.

2004ರಲ್ಲಿ ಶಿಕ್ಷಣ ಇಲಾಖೆಯನ್ನು ಸೇರಿದ ಶ್ರೀಯುತ ಕೆ.ಟಿ ಶಿವಕುಮಾರ್ ರವರು ಕಳೆದ ಒಂದು ದಶಕದಿಂದ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ.

ಗಣಿತ-ವಿಜ್ಞಾನ ಶಿಕ್ಷಕರ ವೇದಿಕೆ ಐಟಿ ಫಾರ್ ಚೇಂಜ್ ನ ಸಕ್ರಿಯ ಸದಸ್ಯರಾಗಿ ಹಲವಾರು ಸಂಪನ್ಮೂಲಗಳನ್ನು ಸೃಜಿಸಿದ್ದಾರೆ. 2012ರಲ್ಲಿ ಮಾದರಿ ಸಿಸಿಇ ಪಾಠ ಯೋಜನೆ 8ರಿಂದ 10ನೇ ತರಗತಿಯ ವಿಜ್ಞಾನ ವಿಷಯದಲ್ಲಿ,

2016 ರಿಂದ 18 ರವರೆಗೆ ಗುರುಚೇತನ ಶಿಕ್ಷಕರ ವೃತ್ತಿಪರ ಅಭಿವೃದ್ಧಿಗಾಗಿ ಪ್ರಾಥಮಿಕ ಶಾಲೆಯ ಶಿಕ್ಷಕರಿಗಾಗಿ ತರಬೇತಿ ಸಾಹಿತ್ಯ ರಚನೆ ಮತ್ತು ತರಬೇತುದಾರರಾಗಿ, ಮೆಂಟರ್ ಆಗಿ  ಕಾರ್ಯನಿರ್ವಹಿಸಿದ್ದಾರೆ. ನಿಮಗೆಲ್ಲ ತಿಳಿದಿರುವಂತೆ ನಿಷ್ಠ ಕೋರ್ಸಿನ ಸಾಹಿತ್ಯದ ಅನುವಾದಕರಾಗಿ, ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಎಂಟನೇ ತರಗತಿಯ NCERT ವಿಜ್ಞಾನ ಪಠ್ಯಪುಸ್ತಕದ ಭಾಷಾಂತರಕಾರರಾಗಿ ಕಾರ್ಯನಿರ್ವಹಿಸಿದ್ದಾರೆ. 8, 9, 10ನೇ ತರಗತಿಯ ವಿಜ್ಞಾನ ವಿಷಯದ ಶಿಕ್ಷಕರ ತರಬೇತಿ ಸಾಹಿತ್ಯದ ರಚನೆಯಲ್ಲಿ ಪಾಲ್ಗೊಂಡು ಶಿಕ್ಷಕರಿಗೆ ರಾಜ್ಯಮಟ್ಟದ ತರಬೇತಿಯನ್ನು ನಡೆಸಿ ಕೊಟ್ಟಿರುತ್ತಾರೆ. ತಮ್ಮದೇ ಯುಟ್ಯೂಬ್ ಚಾನೆಲ್ ಮೂಲಕ ಅನೇಕ ವಿಜ್ಞಾನಕ್ಕೆ ಸಂಬಂಧಪಟ್ಟಂತಹ ವಿಡಿಯೋಗಳನ್ನು ತಯಾರಿಸಿ ಅಪ್ಲೋಡ್ ಮಾಡಿರುತ್ತಾರೆ.

ಕೋವಿಡ್ ಸಂದರ್ಭದಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಮತ್ತು ರೋಟರಿ ನಡೆಸಿಕೊಟ್ಟ ವಿಜ್ಞಾನ ಸಿಂಚನ ಪುನರ್ಮನನ ತರಗತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿರುತ್ತಾರೆ.


ರೋಟರಿಯಿಂದ ನೇಷನಲ್ ಬಿಲ್ಡರ್ ಅವಾರ್ಡ್ ಪ್ರಶಸ್ತಿಯನ್ನು ಪಡೆದುಕೊಂಡ ಈ  ಸಂದರ್ಭದಲ್ಲಿ ಸವಿಜ್ಞಾನ ತಂಡದ ಸದಸ್ಯರಾದ  ಶ್ರೀಯುತ ಕೆ.ಟಿ ಶಿವಕುಮಾರ್ ಅವರ ಸೇವೆ ಹೀಗೆ ಸತತವಾಗಿ ವಿಜ್ಞಾನ ಕ್ಷೇತ್ರಕ್ಕೆ ದೊರೆಯಲಿ ಎಂದು   ಸವಿ ಜ್ಞಾನ ತಂಡವು  ಹಾರೈಸುತ್ತಾ ಅವರಿಗೆ ಶುಭವನ್ನು ಕೋರುತ್ತದೆ.

****
ಗಣಿತ ಕಬ್ಬಿಣದ ಕಡಲೆಯೊ, ಸುಲಿದ ಬಾಳೆ ಹಣ್ಣೊ!!!!!!!
        ಗಣಿತ ಕಬ್ಬಿಣದ ಕಡಲೆ ಎಂಬುದು ಸಾಮಾನ್ಯ ಅಭಿಪ್ರಾಯ, ಆದರೆ ಸರ್ಕಾರಿ ಪ್ರೌಢಶಾಲೆ, ಅರಲಾಳುಸಂದ್ರ, ರಾಮನಗರ ಜಿಲ್ಲೆಯ ಶಿಕ್ಷಕ‌ ಶ್ರೀ ಅನಿಲ್‌ ಕುಮಾರ್.ಸಿ,ಎನ್ ರವರ ಸೃಜನಾತ್ಮಕ ಗಣಿತ ಬೋಧನೆ ಕೇಳಿದರೆ ನಿಮ್ಮ ಅಭಿಪ್ರಾಯ  ಬದಲಿಸಿಕೊಳ್ಳುತ್ತೀರಿ. ಮೃದು ಮಿತ ಭಾಷಿಯಾದ ಇವರ ತಂತ್ರಜ್ಞಾನ ಆಧಾರಿತ ಗಣಿತ ಬೋಧನೆ ವಿದ್ಯಾರ್ಥಿಗಳಿಗೆ ಆಪ್ಯಾಯಮಾನವೆನಿಸುತ್ತದೆ. ಸತತ ಪರಿಶ್ರಮ ಮತ್ತು ತೊಡಗಿಸಿಕೊಳ್ಳುವಿಕೆಯಿಂದ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕರಿಂದಯಲೂ ಪ್ರಶಂಸೆಗೆ ಒಳಗಾಗಿದ್ದಾರೆ. 2015 ರಲ್ಲಿ ಗಣಿತ ಪಠ್ತಪುಸ್ತಕ ಪರಿಷ್ಕರಣ ಸಮಿತಿ ಸದಸ್ಯರಾಗಿ ಅಮೂಲ್ಯ ಕೊಡುಗೆ ನೀಡಿದ್ದಾರೆ. 2018 ರಲ್ಲಿ  ಗಣಿತ ಪಠ್ತಪುಸ್ತಕ ತರ್ಜುಮೆ ಸಮಿತಿ ಸದಸ್ಯರಾಗಿ ಮೌಲ್ಯಾತ್ಮಕ ಕಾರ್ಯ ನಿರ್ವಹಿಸಿದ್ದಾರೆ. ʼಪ್ರಮೇಯʼ, ʼಗಣಿತೊನ್ಮಾದʼ  ಹಾಗೂ ʼಗಣಿತ ಚೇತನʼ ಶಿಕ್ಷಕ ಮಾರ್ಗದರ್ಶಿ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.  ವಿದ್ಯಾರ್ಥಿಗಳಿಗಾಗಿ ʼವಿಶ್ವಾಸ ಕಿರಣʼ, ʼಯಶಸ್ಸುʼ  ಮತ್ತು ʼಪರೀಕ್ಷಾ ಕಿರಣʼ ಎಂಬ ಸಂಪನ್ಮೂಲಗಳನ್ನು ಕೊಡುಗೆಯಾಗಿ ನೀಡಿ ರಾಜ್ಯಾಂದ್ಯಂತ  ಗಣಿತ ಸುಲಭ ಕಲಿಕೆಗೆ ವಿದ್ಯಾರ್ಥಿಗಳಿಗೆ ಸಹಕರಿಸಿದ್ದಾರೆ. ಇವತ ನಿಸ್ಸೃಹ ಸೇವೆಗಾಗಿ 2017 ರಲ್ಲಿ “ಜಿಲ್ಲಾ ಉತ್ತಮ ಶಿಕ್ಷಕ” ಪ್ರಶಸ್ತಿ ಇವರ ಮುಡಿಗೇರಿದೆ.  ಇವರ ಸೃಜನಾತ್ಮಕ ಬೋಧನೆಗಾಗಿ ಟೈಮ್ಸ್‌ ಆಫ್‌ ಇಂಡಿಯಾದ “ಬೆಸ್ಟ್‌ ಟೀಚಿಂಗ್‌ ಪ್ರಾಕ್ಟೀಸ್”‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸತತವಾಗಿ  2018, 2019, 2020 ರಲ್ಲಿ ಮೂರು ವರ್ಷಗಳೂ  ಏರ್ಟೆಲ್‌ ಭಾರತಿ ನಡೆಸುವ ಮಾದರಿ ತಯಾರಿಕೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಹೆಗ್ಗಳಿಕೆ ಅವರದು. 2020ರಲ್ಲಿ ಅಗಸ್ತ್ಯ ಫೌಂಡೇಷನ್‌ ನಡೆಸುವ ರಾಷ್ಟ್ರ ಮಟ್ಟದ ಮಾದರಿ ತಯಾರಿಕೆ ಸ್ಪರ್ದೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ರಾಷ್ಟ್ರ ಮನ್ನಣೆಗೆ ಪಾತ್ರರಾಗಿದ್ದಾರೆ.  2019ರಲ್ಲಿ ದಕ್ಷಿಣ ವಲಯ ಮಟ್ಟದ ವಿಜ್ಞಾನ ಪ್ರದರ್ಶನದಲ್ಲಿ ಭಾಗವಹಿಸಿ ತಮ್ಮ ಕೌಶಲ್ಯ ಪ್ರದರ್ಶಿಸಿ ಮಾಡಿ ಎಲ್ಲರ ಮನ ಗೆದ್ದಿದ್ದಾರೆ, ಅದಲ್ಲದೆ ʼಸವಿಜ್ಞಾನʼ  ದ ಲೇಖನಗಳಿಂದಾಗಿ ಓದುಗರ ಪ್ರಶಂಸೆಗೆ ಒಳಗಾಗಿದ್ದಾರೆ. ಅವರ ಸಾಧನೆಯ ಪಟ್ಟಿ ಬಹಳ ದೊಡ್ಡದು, ಇದೆಲ್ಲದಕ್ಕೂ ಮುಕುಟ ಪ್ರಾಯದಂತೆ, ರೋಟರಿ  ಸಂಸ್ಥೆಯವರು ನೀಡುವ "ನೇಷನ್‌ ಬಿಲ್ಡರ್‌" ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅವರಿಗೆ ಸವಿಜ್ಞಾನ ತಂಡದಿಂದ ಹೃತ್ಪೂರ್ವಕ ಅಭಿನಂದನೆಗಳು. 

                                                                            ****

ಚಿಣ್ಣರ ಪಾಲಿನ  ಪಾಲಿನ ಚಿನ್ಮಯ ಜ್ಞಾನಿ ಈ ಶ್ರೀಧರ ಮಯ್ಯ



    ಎರಡು ದಶಕಗಳಿಂದ ಶೈಕ್ಷಣಿಕ ರಂಗದಲ್ಲಿ ವಿಶಿಷ್ಟ ಬೋಧನಾ ಶೈಲಿ ಹಾಗೂ ಆಕರ್ಷಕ‌ ಮಾತಿನ ಶೈಲಿಯಿಂದ ಜನಜನಿತರಾದ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಗುತ್ತೂರು ಇಲ್ಲಿನ ವಿಜ್ಞಾನ ಶಿಕ್ಷಕರಾದ ಶ್ರೀಎಂ.ಎನ್.ಶ್ರೀಧರ ಮಯ್ಯ 2021ನೇ ಸಾಲಿನ ರಾಜ್ಯ ಮಟ್ಟದ ಚಿನ್ಮಯಜ್ಞಾನಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಅತ್ಯುತ್ತಮ  ಕಾರ್ಯಕ್ರಮ ನಿರೂಪಕರಾದ ಶ್ರೀಯುತರು, ಪ್ರಯೋಗಗಳ ಮೂಲಕ ವಿಜ್ಞಾನ‌ ಕಲಿಕೆ ,  ವಿಜ್ಞಾನ ಪಠ್ಯಪುಸ್ತಕ ಭಾಷಾಂತರ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಣೆ , You tube ಚಾನಲ್ ಮೂಲಕ ವಿಜ್ಞಾನ ಬೋಧನೆ,  ರಾಜ್ಯ ಮಟ್ಟದ ವಿಜ್ಞಾನ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿರುವುದು, ಇನ್ಸ್ಪೈರ್ ಅವಾರ್ಡ್ ನ‌ ವಿಭಾಗ ಮಟ್ಟದ  ರಾಜ್ಯಮಟ್ಟದ ತೀರ್ಪುಗಾರರಾಗಿ ಕಾರ್ಯ ನಿರ್ವಹಣೆ, ಸ್ನೇಹಿತರ ಸಹಕಾರದೊಂದಿಗೆ ಸಾಧನೆಯತ್ತ ಹೆಜ್ಜೆಗಳು, ಗೆಲುವು ನನ್ನದೇ NSR ಪಾಸಿಂಗ್ ಪ್ಯಾಕೇಜ್, ಕಣಜ, ಬೆಳಕು, ಜ್ಞಾನ ನಿಧಿ, ಗವಿ, ವಿಜ್ಞಾನ ಕಿರಣದಂತಹ 8, 9ಮತ್ತು 10 ನೇ ತರಗತಿ ವಿಜ್ಞಾನ ಪಠ್ಯ ವಿಷಯಗಳಿಗೆ ಸಂಬಂಧಿಸಿದ ಮಾರ್ಗದರ್ಶಿ ಪುಸ್ತಕ ರಚನೆ, DSERT ಹಾಗೂ ಸಾ.ಶಿ.ಇಲಾಖೆ ದಾವಣಗೆರೆ ವತಿಯಿಂದ ತರಬೇತಿ ಮಾಡ್ಯೂಲ್ ತಯಾರಿಕೆ, ದೀಕ್ಷಾ ಪೋರ್ಟಲ್‌ನಲ್ಲಿ ಪರಿಶೀಲಕರಾಗಿ ಕಾರ್ಯ, ಹೀಗೆ ಅನೇಕ ಶೈಕ್ಷಣಿಕ ಕಾರ್ಯಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.  ಬಾಲವಿಜ್ಞಾನ ಹಾಗೂ ಅನೇಕ ದಿನ ಪತ್ರಿಕೆಗಳಲ್ಲಿಯೂ ಇವರ ವಿಜ್ಞಾನ ಲೇಖನಗಳು ಪ್ರಕಟವಾಗಿವೆ.  ಶ್ರೀಧರ ಮಯ್ಯರವರು ಕೆ ಆರ್ ವಿ ಪಿ ವತಿಯಿಂದ ಪ್ರತಿ ವರ್ಷ ನಡೆಯುವ ವಿಜ್ಞಾನ‌ ಯೋಜನಾ ವರದಿ ಮಂಡನೆಯಲ್ಲಿ ಕಳೆದ ಹತ್ತು ವರ್ಷಗಳಿಂದ  ತಮ್ಮ ಶಾಲಾ ವಿದ್ಯಾರ್ಥಿಗಳನ್ನು  ರಾಜ್ಯ ಮಟ್ಟದ ಸ್ಪರ್ಧೆಗೆ ಸಜ್ಜುಗೊಳಿಸಿದ್ದಾರೆ. 2013ರಲ್ಲಿ ಇಲಾಖೆಯಿಂದ ಜಿಲ್ಲಾ ಪ್ರಶಸ್ತಿ ಹಾಗೂ 2016 ರಲ್ಲಿ ಶಿಕ್ಷಕ ಕಲ್ಯಾಣ ನಿಧಿಯಿಂದ ರಾಜ್ಯ ಪ್ರಶಸ್ತಿಗಳೂ ಲಭಿಸಿವೆ.

ಸವಿಜ್ಞಾನ ಬಳಗದ ಸದಸ್ಯರಾದ ಶ್ರೀಯುತ ಶ್ರೀಧರ ಮಯ್ಯರವರಿಂದ ಇನ್ನಷ್ಟು ಶೈಕ್ಷಣಿಕ ಕಾರ್ಯಗಳು ನಡೆಯಲಿ. ಭವಿಷ್ಯ ಉಜ್ವಲವಾಗಲಿ ಎಂದು ನಮ್ಮ ಹಾರೈಕೆಗಳು. 

 



2 comments:

  1. This comment has been removed by the author.

    ReplyDelete
  2. ಏನು ಹೇಳಲಿ ನಿಮ್ಮ ಗುಣವ ...ಅಷ್ಟಿಷ್ಟೆಂದು ಎಣಿಸಿಲ್ಲ
    ಶ್ರೀಯುತ ಪರಮೇಶ್ವರಯ್ಯ ಸೊಪ್ಪಿಮಠ ..ಕೆ ಟಿ.ಶಿವಕುಮಾರ್, ಲಕ್ಷ್ಮೀ ಪ್ರಸಾದ್ ನಾಯಕ್ ,ಶ್ರೀಧರ ಮಯ್ಯ ಮತ್ತು ಅನಿಲ್ ಸರ್ ನಿಮ್ಮೆಲ್ಲರಿಗೂ ಅಭಿನಂದನೆಗಳು ತಾವೆಲ್ಲರೂ ಕೂಡ ಸವಿಜ್ಞಾನ ಮಾಸಪತ್ರಿಕೆಯ ರೂವಾರಿಗಳು.ತಾವೆಲ್ಲರೂ ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಅಪಾರ ಮತ್ತು ಅಗಣಿತ.ತಾವೆಲ್ಲರೂ ಕೂಡ ಅನೇಕ ವಿಜ್ಞಾನ ಶಿಕ್ಷಕರಿಗೆ ಹಾಗೂ ತಮ್ಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಅನೇಕ ಮಕ್ಕಳಿಗೆ ಸ್ಫೂರ್ತಿಯಾಗಿದ್ದೀರಿ.ಹೂವಿನ ಜೊತೆ ನಾರೂ ಸ್ವರ್ಗಕ್ಕೆ ಸೇರಿತ್ತು ಎಂಬಂತೆ ..ನಿಮ್ಮೊಂದಿಗೆ ಕೆಲಸ ಮಾಡಿ ನಾವೂ ಕೂಡ ಸ್ವಲ್ಪ ಯಶಸ್ಸನ್ನು ಕಂಡಿದ್ದು ನಿಮ್ಮೆಲ್ಲರ ಸ್ನೇಹದ ಸಂಕೋಲೆಯ ಶುಭಸಂಕೇತವಾಗಿದೆ. ತಮ್ಮೆಲ್ಲರನ್ನು ಪರಿಚಯಿಸಿದ ಲೇಖಕರಿಗೂ ನನ್ನ ಅನಂತಾನಂತ ವಂದನೆಗಳು
    ವಿಜಯಕುಮಾರ್ ದಂಪತಿಗಳಿಬ್ಬರೂ ಕೂಡ ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಹಾಗೂ ಅವರಲ್ಲಿರುವ ಸಂಪನ್ಮೂಲ ಅಪಾರ.ಇಂದಿನ ಕಾಲದಲ್ಲಿ ದಂಪತಿಗಳಿಬ್ಬರೂ ಶಿಕ್ಷಕರಾಗಿ ಪ್ರಾಮಾಣಿಕ ಸೇವೆ ಮಾಡುತ್ತಾ ಅನೇಕ ಜನರಿಗೆ ಸ್ಫೂರ್ತಿಯಾಗಿರುವುದು ಬಹಳ ವಿರಳ.. ತಾವಿಬ್ಬರೂ ಅತ್ಯುತ್ತಮ ಕೆಲಸ ಮಾಡುತ್ತಾ ತಮ್ಮ ಕಾರ್ಯತತ್ಪರತೆಯಿಂದ ತಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡುತ್ತಾ.. ಅನೇಕ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಸ್ಫೂರ್ತಿಯಾಗಿ ಪ್ರೋತ್ಸಾಹವನ್ನು ನೀಡುತ್ತಾ.. ತಮ್ಮಲ್ಲಿರುವ ಅಗಾಧ ಸಂಪನ್ಮೂಲದ ಹಂಚಿಕೆಯನ್ನು ಮಾಡಿಕೊಳ್ಳುತ್ತಾ ..ಅತ್ಯುತ್ತಮ ಕೆಲಸ ಮಾಡುತ್ತಿದ್ದೀರಿ ..ದಂಪತಿಗಳಿಬ್ಬರಿಗೂ ನನ್ನ ಅಭಿನಂದನೆಗಳು

    ReplyDelete