Monday, October 4, 2021

ಬಾನಾಡಿಗಳ ಬೆನ್ನುಹತ್ತಿ

ಬಾನಾಡಿಗಳ ಬೆನ್ನುಹತ್ತಿ

 ಡಿ. ಕೃಷ್ಣಚೈತನ್ಯ 

ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.

ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.

ಕೊಡಗು ಜಿಲ್ಲೆ.

ಹಾಯ್ ಸ್ನೇಹಿತರೆ, ಹಿಂದಿನ, ಸಂಚಿಕೆಗಳಲ್ಲಿ ಪಕ್ಷಿಗಳಿಗೆ ಸಂಬಂಧಿಸಿದಂತೆ ಎರಡು ಲೇಖನಗಳನ್ನು ಓದಿರುತ್ತೀರಿ. ಆ ಎರಡೂ ಲೇಖನಗಳಲ್ಲಿ, ಪಕ್ಷಿಗಳನ್ನು ಹೇಗೆ ವೀಕ್ಷಣೆ ಮಾಡಬೇಕು ಮತ್ತು ಹಕ್ಕಿಗಳ ಬಗ್ಗೆ ಒಂದು ಕಿರು ಪರಿಚಯವನ್ನೂ ಮಾಡಿಕೊಂಡಿದ್ದೀರಿ. ಇಂದಿನಿಂದ ಪಕ್ಷಿಗಳ ಬಗ್ಗೆ ಇನ್ನಷ್ಟು ಮಾಹಿತಿ ನೀಡುವ ಸರಣಿಯನ್ನು ಪ್ರಾರಂಭಿಸುತ್ತಿದ್ದೇನೆ. ಅದನ್ನು ತಾವೆಲ್ಲರೂ ಪರಾಮರ್ಶಿಸಿ, ತಮ್ಮ ಮಕ್ಕಳು ಹಾಗೂ ವಿದ್ಯಾರ್ಥಿಗಳಿಗೆ ತಲುಪಿಸಿ, ಅವುಗಳ ಉಳಿವಿಗೆ ಸಹಕರಿಸುತ್ತೀರಿ ಎನ್ನುವ ಆಶಯ ಮತ್ತು ಭರವಸೆ ನನ್ನದು. ಬನ್ನಿ, ಪಕ್ಷಿಗಳ ಪ್ರಪಂಚಕ್ಕೆ ಹೋಗೋಣ.

ಮರವಾಸಿ ಹಕ್ಕಿಗಳು

ಬದನಿಕೆ (Pale-billed Flower pecker) ಇದರ ವೈಜ್ಞಾನಿಕ ಹೆಸರು Dicaeum erythrorhynchosನಮ್ಮ ದೇಶದ ಅತ್ಯಂತ ಸಣ್ಣ ಹಕ್ಕಿಯಾಗಿದ್ದುಗುಬ್ಬಚ್ಚಿಗಿಂತಲೂ ಚಿಕ್ಕದಾಗಿದೆ. ಭಾರತದಲ್ಲಿ ಸುಮಾರು ಆರು ಬಗೆಯ ಹಾಗೂ ಕರ್ನಾಟಕದಲ್ಲಿ ಥಿಕ್ ಬಿಲ್ಡ್ ಫ್ಲವರ್ ಪೆಕರ್ಪೇಲ್ ಬಿಲ್ಡ್ ಫ್ಲವರ್ ಪೆಕರ್ ಮತ್ತು ನೀಲಿಗಿರಿ ಫ್ಲವರ್ ಪೆಕರ್ ಎಂಬ ಮೂರು ಬಗೆಯ ಬದನಿಕೆಗಳು ಕಂಡುಬರುತ್ತವೆ. ಈಶಾನ್ಯ ರಾಜ್ಯಗಳಲ್ಲಿ ಪ್ಲೈನ್ ಫ್ಲವರ್ ಪೆಕರ್ ಮತ್ತು ಎಲ್ಲೊ ವೆಂಟೆಡ್ ಫ್ಲವರ್ ಪೆಕರ್‍ಗಳು ಹಾಗೂ ಅಂಡಮಾನ್‍ನಲ್ಲಿ ಅಂಡಮಾನ್ ಫ್ಲವರ್ ಪೆಕರ್‍ಗಳು ಕಾಣಸಿಗುತ್ತವೆ.

ಇದರ ದೇಹದಲ್ಲಿ ತಿಳಿ ಹಳದಿ ಬಣ್ಣದ ಛಾಯೆಯಿದ್ದು, ತಿಳಿ ಬೂದು ಬಣ್ಣದ ಗರಿಗಳನ್ನು ಪ್ರಧಾನವಾಗಿ ಹೊಂದಿದೆ. ಕೊಕ್ಕು ತಿಳಿಗೆಂಪಾಗಿದ್ದು ತುದಿಯಲ್ಲಿ ಸ್ವಲ್ಪ ತಿಳಿಗಪ್ಪು ಬಣ್ಣವಿದೆ. ಬೆನ್ನು, ರೆಕ್ಕೆಯ ಗರಿಗಳು ಸ್ವಲ್ಪ ಕಪ್ಪು ಬಣ್ಣದಲ್ಲಿದ್ದು, ಹಳದಿ ಛಾಯೆ ಎಲ್ಲಾ ಭಾಗಗಳಲ್ಲೂ ಕಾಣುತ್ತದೆ. ಬಾಲ ಚಿಕ್ಕದಾಗಿದೆ. ಕುತ್ತಿಗೆ, ಎದೆ, ಹೊಟ್ಟೆಯ ಭಾಗಗಳು ಬಿಳಿ ಮತ್ತು ನಸು ಹಳದಿ ಪುಕ್ಕಗಳನ್ನು ಹೊಂದಿವೆ.

 

ಚಿತ್ರ: ಪೇಲ ಬದನಿಕೆ (Pale-billed Flower pecker)  

ಚಿತ್ರ: ಪೇಲ ಬದನಿಕೆ(Nilgiri Flower pecker)

ತೀಕ್ಷ್ಣವಾದ ಚಿಕ್.. ಚಿಕ್.. ಕೂಗು ಅವುಗಳನ್ನು ಗಮನಿಸುವಂತೆ ಮಾಡಿದರೆ, ಅಷ್ಟೇ ವೇಗವಾಗಿ ಒಂದು ರೆಂಬೆಯಿಂದ ಮತ್ತೊಂದು ರೆಂಬೆಗೆ ಹಾರುತ್ತಿರುತ್ತವೆ. ಸಿಂಗಪೂರ್ ಚೆರ್ರಿ (ತಪ್ಪಾಗಿ ಸಾಮಾನ್ಯವಾಗಿ ಗಸಗಸೆ) ಮರಕ್ಕೆ ತಪ್ಪದೆ ಭೇಟಿಕೊಟ್ಟು ಅದರ ಹಣ್ಣನ್ನು ಜಬ್ಬಿ ತಿಂದು ಸಿಪ್ಪೆಯನ್ನು ಬಿಸಾಡುತ್ತವೆ. ಅದಕ್ಕೆ ಇಷ್ಟವಾದ ಮತ್ತೊಂದು ಹಣ್ಣು ಎಂದರೆ ಬಂದಳಿಕೆ.

ದಪ್ಪ ಕೊಕ್ಕಿನ ಬದನಿಕೆ (Thick-billed flower pecker) ಇದರ ವೈಜ್ಞಾನಿಕ ಹೆಸರು Dicaeum agile. ಇದರಲ್ಲಿ ಕೊಕ್ಕು ಪೇಲ್ ಬಿಲ್ಡ್ ಫ್ಲವರ್ ಪೆಕರ್ ಗಿಂತ ಚಿಕ್ಕದಾಗಿದ್ದು ಗಾತ್ರದಲ್ಲಿ ತುಸು ದಪ್ಪವಾಗಿರುತ್ತದೆ. ಎದೆ, ಹೊಟ್ಟೆ, ಕಿಬ್ಬೊಟ್ಟೆ, ಮತ್ತು ಬಾಲದ ತುದಿಯಲ್ಲಿ ಬಿಳಿ ಬಣ್ಣ ಪ್ರಧಾನವಾಗಿ ಕಾಣುತ್ತದೆ. ಕಣ್ಣಿನ ಸುತ್ತಲೂ ಕೆಂಪು ಬಣ್ಣ ಉಂಗುರದಂತಿದೆ.

ಪೇಲ ಬದನಿಕೆ (Nilgiri Flower pecker) ಇದರ ವೈಜ್ಞಾನಿಕ ಹೆಸರು Dicaeum concolor ಇದರಲ್ಲಿ ಕೊಕ್ಕು ತುಸು ಕಪ್ಪಾಗಿದ್ದು ಸ್ವಲ್ಪ ನೇರವಾಗಿರುತ್ತದೆ. ರೆಕ್ಕೆಯ ಮೇಲಿನ ಗರಿಗಳು ತುಸು ಕಪ್ಪಾಗಿರುತ್ತವೆ. ದೇಹದ ಮೇಲಿನ ಗರಿಗಳಲ್ಲಿ ಹಳದಿ ಛಾಯೆ ಪೇಲ್ ಬಿಳ್ದನಲ್ಲಿ  ಅಷ್ಟು ಇರುವುದಿಲ್ಲ. ಚಿಕ್..ಚಿಕ್..ಚಿಕ್..ಎಂದು ಸ್ವಲ್ಪ ದೀರ್ಘವಾಗಿ ನಿರಂತರವಾಗಿ ಕೂಗುತ್ತಿರುತ್ತವೆ. ಇವುಗಳ ಪ್ರಮುಖ ಆಹಾರ ಹಣ್ಣುಗಳು.

ಸಂತಾನೋತ್ಪತ್ತಿ: ಫೆಬ್ರುವರಿ-ಜೂನ್ ಅವಧಿಯಲ್ಲಿ 3-15 ಮೀ. ಎತ್ತರದ ಕೊಂಬೆಗಳಲ್ಲಿ ತೂಗಾಡುವ ಗೂಡನ್ನು ಕಟ್ಟುತ್ತವೆ. ಗೂಡು ಸಹ ಚಿಕ್ಕದಾಗಿದ್ದು ಹೆಚ್ಚು ಕಡಿಮೆ ಸೂರಕ್ಕಿಯ ಗೂಡನ್ನು ಹೋಲುತ್ತದೆ. ಬಿಳಿಯಾದ 2 ಮೊಟ್ಟೆ ಇಟ್ಟು ಮರಿಮಾಡತ್ತವೆ. ಗಂಡು ಮತ್ತು ಹೆಣ್ಣು, ಎರಡೂ ಹಕ್ಕಿಗಳು ಸಹ ಪೋಷಣೆಯಲ್ಲಿ ತೊಡಗುತ್ತವೆ.

2. ಗುಬ್ಬಚ್ಚಿ (House Sparrow)

ಇದರ ವೈಜ್ಞಾನಿಕ ಹೆಸರು Passer domesticus. ನಮಗೆ ಚಿರಪರಿಚಿತವಾದ, ಸಾಮಾನ್ಯವಾಗಿ ಪ್ರಪಂಚದ ಎಲ್ಲಾ ಪ್ರದೇಶದಲ್ಲೂ ಕಾಣಸಿಗುವ, ನೋಡಲು ಇದೇ ಸಣ್ಣ ಹಕ್ಕಿ ಎಂದೆನಿಸಿದರೂ ಸುಮಾರು 15 ಸೆ.ಮೀ ಗಾತ್ರವಿರುವ ಹಕ್ಕಿ.. ಗಂಡು ಮತ್ತು ಹೆಣ್ಣು ಗುಬ್ಬಚ್ಚಿ ಒಂದೇ ತೆರನಾಗಿಲ್ಲ. ಹೆಣ್ಣು ಗುಬ್ಬಚ್ಚಿಯು ಬೆನ್ನಿನ ಮೇಲೆ ತಿಳಿ ಕಂದು ಬಣ್ಣದ ಗರಿಗಳ ಮೇಲೆ ಕಪ್ಪು ಬಣ್ಣದ ಚುಕ್ಕೆಗಳು, ಕಣ್ಣಿನ ಮೇಲೆ ತಿಳಿ ಕಂದು ಬಣ್ಣದ ಹುಬ್ಬು, ಬೂದು ಬಣ್ಣದ ಕುತ್ತಿಗೆ, ಎದೆ, ಹೊಟ್ಟೆ ಮತ್ತು ತಿಳಿ ಕೆಂಪು ಬಣ್ಣದ ಕಾಲುಗಳು ಇದ್ದರೆ, ಗಂಡಿನ ಕುತ್ತಿಗೆಯ ಮೇಲೆ ಮತ್ತು ಬೆನ್ನಿನ ಮೇಲ್ಭಾಗದಲ್ಲಿ ಗಾಢ ಕಂದುಬಣ್ಣದ ಗರಿಗಳಿದ್ದು, ಅಲ್ಲಲ್ಲಿ ಕಪ್ಪುಬಣ್ಣವಿದೆ.

ಚಿತ್ರ: ಹೆಣ್ಣುಗುಬ್ಬಚ್ಚಿ

ಚಿತ್ರ: ಗಂಡುಗುಬ್ಬಚ್ಚಿ

ಹೆಣ್ಣಿಗಿರುವಂತೆ ಹುಬ್ಬಿನಲ್ಲಿ ಬಣ್ಣವಿಲ್ಲ. ಕೆನ್ನೆ, ಹೊಟ್ಟೆ ಮತ್ತು ವೆಂಟ್ ಭಾಗದಲ್ಲಿ ಬಳಿ ಬಣ್ಣದ ಗರಿಗಳಿವೆ. ಕೊಕ್ಕಿನ ಕೆಳಭಾಗ ಮತ್ತು ಎದೆಯ ಭಾಗದಲ್ಲಿ ಕಪ್ಪು ಬಣ್ಣದ ಗರಿಗಳಿದ್ದರೆ, ಹಣೆಯ ಭಾಗದಲ್ಲಿ ಬೂದು ಬಣ್ಣದ  ಗರಿಗಳಿವೆ. ಬಾಲ ಮದ್ಯಮ ಉದ್ದವಿದ್ದು ಮೇಲ್ಭಾಗದಲ್ಲಿ ಕಂದು ಮತ್ತು ಕಪ್ಪು ಬಣ್ಣದ ಗರಿಗಳಿವೆ. ಚಿರ್ರಕ್..ಚಿರ್ರಕ್‍ ಎಂದು ಸದ್ದು ಮಾಡುವ ಇವು, ಮಿಶ್ರಾಹಾರಿಗಳು. ಕೊಕ್ಕು ಚೂಪಾಗಿದ್ದು ಭತ್ತವನ್ನು ಒಡೆದು ಅಕ್ಕಿ ಕಾಳನ್ನು ತಿನ್ನಲು ಸೂಕ್ತವಾಗಿದೆ.

ಇತ್ತೀಚೆಗೆ ಹೆಚ್ಚಿದ ಮೊಬೈಲ್ ಬಳಕೆಯಿಂದಾಗಿ ಇವುಗಳ ಸಂತತಿಗೆ ಸಂಚಕಾರ ಬಂದಿದೆ. ಮೊಬೈಲ್ ಸಂಪರ್ಕಗಳಿಗೆ ಬಳಸುವ ಸೂಕ್ಷ್ಮ ತರಂಗಗಳಿಂದಾಗಿ ಇವುಗಳ ಸಂತತಿ ಕಡಿಮೆಯಾಗಿ, ಇನ್ನೇನು ಕಣ್ಮರೆಯಗುತ್ತಿವೆಯೇನೋ ಎಂಬ ಅಭಿಪ್ರಾಯಕ್ಕೆ ಬರಲಾಗಿತ್ತು.‌ ಹೆಂಚಿನ ಮನೆಗಳ ಬದಲಾಗಿ ಕಟ್ಟುತ್ತಿರುವ ಆರ್.ಸಿ.ಸಿ ಮನೆಗಳೂ ಸಹ ಅವುಗಳ ಸಂತತಿ ಕಡಿಮೆಯಾಗಲು ನೆರವಾಗಿರುವುದನ್ನು ಯಾರೂ ಅಲ್ಲಗಳೆಯಲಾಗದು. ಆದರೆ, ಇತ್ತೀಚಿನ ದಿನಗಳಲ್ಲಿ ಅವು ಬದಲಾದ ಸನ್ನಿವೇಶಕ್ಕೆ ಒಗ್ಗಿಕೊಳ್ಳುತ್ತಾ ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿವೆಯೇನೋ ಎಂಬಂತೆ, ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಪಕ್ಷಿಪ್ರಿಯರು ಮಣ್ಣಿನಿಂದ ನಿರ್ಮಿಸಿದ ಸಣ್ಣ ಸಣ್ಣ ಮಡಕೆಗಳನ್ನು ರಂಧ್ರ ಕೊರೆದು ಇಡುತ್ತಿರುವುದು ಅವುಗಳ ಸಂರಕ್ಷಣೆಗೆ ಸಹಕಾರಿಯಾಗಿದೆ. ಸಣ್ಣ ಸಣ್ಣ ಹುಳುಗಳು, ಕಾಳು, ಭತ್ತ ಇವುಗಳ ಪ್ರಮುಖ ಆಹಾರ.

ಸಂತಾನೋತ್ಪತ್ತಿ: ಮನೆಗಳ ಹೆಂಚು ಮತ್ತು ಗೋಡೆಗಳ ನಡುವಿನ ಸಂದು, ಮಧ್ಯಮ ಗಾತ್ರದ ಕೊಳವೆಗಳ ಭಾಗ, ಗೋಡೆಗಳಲ್ಲಿರುವ ಬಿಲ ಹೀಗೆ ವೈವಿಧ್ಯಮಯ ಜಾಗಗಳಲ್ಲಿ ಹುಲ್ಲು, ಹತ್ತಿ ಮತ್ತು ನಾರುಗಳನ್ನು ಉಪಯೋಗಿಸಿ ಗೂಡು ನಿರ್ಮಿಸುತ್ತವೆ. ತಿಳಿಹಸಿರು ಬಣ್ಣದ 3-5 ಮೊಟ್ಟೆಗಳನ್ನು ಇಟ್ಟು ಮರಿಮಾಡುತ್ತವೆ. ಇಡೀ ವರ್ಷ ಮರಿ ಮಾಡುವ ಸಾಮರ್ಥ್ಯ ಇರುವುದರಿಂದ, ಸಂತಾನೋತ್ಪತ್ತಿಗೆ ನಿರ್ದಿಷ್ಟ ಅವಧಿ ಇಲ್ಲ.

3. ಕೆಮ್ಮೀಸೆ ಪಿಕಳಾರ (Red-whiskered Bulbul


 ಚಿತ್ರ: ಹೆಣ್ಣು ಕೆಮ್ಮೀಸೆ ಪಿಕಳಾರ                                                     ಚಿತ್ರ: ಗಂಡು   

ಇದರ ವೈಜ್ಞಾನಿಕ ಹೆಸರು Pycnonotus jocosus. ಪಕ್ಷಿಗಳ ಗಾತ್ರವನ್ನು ಆಧಾರವಾಗಿ ತೆಗೆದುಕೊಂಡರೆ, ಗುಬ್ಬಚ್ಚಿಯ ನಂತರದ ಸ್ಥಾನ ಇದಕ್ಕೆ ಸಲ್ಲುತ್ತದೆ. ಸುಮಾರು 20 ಸೆಂಮೀ ಗಾತ್ರವಿರುವ ಇದು ನಮ್ಮ ದೇಶದಲ್ಲಿ, ಕಾಡು,ಗಿಡ ಮರಗಳಿರುವ ಅನೇಕ ರಾಜ್ಯಗಳಲ್ಲಿ ಕಾಣಸಿಗುತ್ತವೆ. ತಲೆಯ ಮೇಲಿನ ನೇರವಾದ ಕಪ್ಪುಜುಟ್ಟು, ಕೆನ್ನೆಯ ಮೇಲಿರುವ ಕೆಂಪು ಮೀಸೆ ಮತ್ತು ಅದರ ಕೆಳಗಿರುವ ಬಿಳಿಯ ಮಚ್ಚೆಯಿಂದಾಗಿ, ಆಕರ್ಷಕವಾಗಿ ಕಾಣುತ್ತದೆ. ತಿಳಿಗಪ್ಪು ಮಿಶ್ರಿತ ಕಂದು ಪುಕ್ಕಗಳ ಬೆನ್ನು, ಸ್ವಲ್ಪಉದ್ದವಾದ ಬಾಲ, ಕುತ್ತಿಗೆ ಮತ್ತು ಹೊಟ್ಟೆಯುದ್ದಕ್ಕೂ ಇರುವ ಬಿಳಿಪುಕ್ಕ, ಹಿಂಭಾಗದ ತಲೆಯಿಂದ ಎದೆಯ ಸುತ್ತಲೂ ಇರುವ ಕಪ್ಪು ಪಟ್ಟೆಯ ಗರಿಗಳಿವೆ. ಗಂಡಿಗೂ ಮತ್ತು ಹೆಣ್ಣಿಗೂ ಇರುವ ಒಂದೇ ಒಂದು ವ್ಯತ್ಯಾಸ ಎಂದರೆ, ಹೆಣ್ಣಿನ ಎದೆಯ ಮೇಲಿನ ಪಟ್ಟಿಯ ಮದ್ಯದಲ್ಲಿ ಸಂದು ಇರುವುದು. ಸ್ವಲ್ಪ ಬಾಗಿರುವ ಕೊಕ್ಕು, ಕಾಲು ಮತ್ತು ಕಣ್ಣು ಕಪ್ಪಾಗಿವೆ. ಬಾಲದ ಬುಡದಲ್ಲಿಯೂ ಕೆಂಪು ಬಣ್ಣದ ಪುಕ್ಕಗಳಿವೆ. ಮರಿಗಳು ಬೆಳೆಯುವ ಸಂದರ್ಭದಲ್ಲಿ ಕೆಂಪು ಮೀಸೆ ಕಾಣುವುದಿಲ್ಲ. ಆಹಾರ, ಕೀಟಗಳು, ಹಣ್ಣು, ಹುಳುಗಳು

ಸಂತಾನೋತ್ಪತ್ತಿ: ಫೆಬ್ರವರಿ-ಆಗಸ್ಟ್ ಅವಧಿಯಲ್ಲಿ ಸಣ್ಣ ಸಣ್ಣ ಸಪೂರವಾದ ಕಡ್ಡಿಗಳು, ತೆಂಗಿನನಾರು, ಎಲೆ, ಹತ್ತಿ ಮುಂತಾದ ವಸ್ತುಗಳಿಂದ ಬಟ್ಟಲಿನ ಆಕಾರದ ಗೂಡನ್ನು ಪೊದೆ, ಗಿಡಗಳ ರೆಂಬೆಗಳು ಕೂಡುವ ಜಾಗದಲ್ಲಿ, ಕಿಟಕಿಗಳ ಸರಳು ಮತ್ತು ಗಾಜಿನ ಸಂದುಗಳಲ್ಲಿ ನಿರ್ಮಿಸುತ್ತವೆ. 2-4 ತಿಳಿಗೆಂಪು-ಮೊಟ್ಟೆಗಳ ಮೇಲೆ ಕೆಂಪು ಚುಕ್ಕೆಗಳಿರುವ ಮೊಟ್ಟೆಗಳನ್ನಿಟ್ಟು ಗಂಡು-ಹೆಣ್ಣುಗಳೆರಡೂ 12- 13 ದಿನ ಕಾವು ಕೊಡುತ್ತವೆ.


ಮೊಟ್ಟೆ ಒಡೆದು ಹೊರಬರುವ ಮರಿಗಳನ್ನು ಪಾಲನೆ ಮಾಡುವ ಕೆಲಸ ನಿರ್ವಹಿಸುತ್ತವೆ. ಕೇವಲ ಹನ್ನೆರಡು ದಿನಗಳಲ್ಲೆ ಮರಿಗಳು ಬೆಳೆದು ಹಾರಲು ಪ್ರಾರಂಭಿಸುತ್ತವೆ ಎಂದರೆ ಎಷ್ಟು ವೇಗವಾಗಿ ಬೆಳವಣಿಗೆ ಹೊಂದುತ್ತವೆ ಎಂಬುದನ್ನು ಊಹಿಸಿಕೊಳ್ಳಬಹುದು. ಹುಳು, ಮಿಡತೆ, ಸಣ್ಣ ಸಣ್ಣ ಹಣ್ಣು ಮುಂತಾದವುಗಳನ್ನು ತಿನ್ನಿಸಿ ಮರಿಗಳನ್ನು ಬೆಳಸುತ್ತವೆ.

4. ಕೆಂಪು ಕಿಬ್ಬೊಟ್ಟೆಯ ಪಿಕಳಾರ (Red-vented Bulbul)

 



    ಇದರ ವೈಜ್ಞಾನಿಕ ಹೆಸರು Pycnonotus cafer. ಕಾಶ್ಮೀರ ಹೊರತು ಪಡಿಸಿ ಭಾರತದಾದ್ಯಂತ ಕಂಡುಬರುವ ಇದು, ಗಾತ್ರದಲ್ಲಿ ಕೆಮ್ಮೀಸೆ ಪಿಕಳಾರವನ್ನು ಹೋಲುತ್ತದೆ. ಇದಕ್ಕೆ ಕೆಮ್ಮೀಸೆ ಪಿಕಳಾರದಂತೆ ತಲೆಯ ಮೇಲಿನ ಜುಟ್ಟು, ಕೆನ್ನೆಯ ಮೇಲಿರುವ ಕೆಂಪು ಮೀಸೆ ಮತ್ತು ಬಿಳಿಯ ಮಚ್ಚೆ ಇರುವುದಿಲ್ಲ. ತಲೆ ಮತ್ತು ಕುತ್ತಿಗೆ ಗಾಢ ಕಪ್ಪು ಬಣ್ಣ, ದೇಹದ ಮೇಲಿರುವ ಗರಿಗಳು ಬೂದು ಬಣ್ಣದಲ್ಲಿದ್ದು ಹೊಟ್ಟೆ ಹಾಗೂ ಬೆನ್ನಿನ ಭಾಗದಲ್ಲಿ ಗರಿಗಳ ಅಂಚಿನಲ್ಲಿ ಅರ್ಧ ವೃತ್ತಾಕಾರದ ಬಿಳಿ ಗೆರೆಗಳು ಕಂಡುಬರುತ್ತದೆ. ದ್ವಾರ(ವೆಂಟ್)ದ ಬಳಿ ಕೆಂಪು ಬಣ್ಣದ ಪುಕ್ಕಗಳಿವೆ. ಹಾಗಾಗಿಯೇ, ಇದಕ್ಕೆ ರೆಡ್ ವೆಂಟೆಡ್ ಬುಲ್ಬುಲ್ ಎಂಬ ಹೆಸರು ಬಂದಿದೆ. ಬಾಲವು ಸಾಧಾರಣವಾಗಿದ್ದು ಅದರ ಅಂಚಿನಲ್ಲಿಯೂ ಬಿಳಿ ಪಟ್ಟೆ ಇದೆ.

ಆಹಾರ: ಹಣ್ಣು, ಕೀಟ, ಚಿಕ್ಕಚಿಕ್ಕ ಕಾಯಿ, ಕಾಳು, ತರಕಾರಿ ಮತ್ತು ಹೂವಿನ ಮಕರಂದ. 

ಸಂತಾನೋತ್ಪತ್ತಿ: ಫೆಬ್ರವರಿ-ಮೇ ಅವಧಿಯಲ್ಲಿ ಸಣ್ಣಕಡ್ಡಿ, ನಾರುಗಳನ್ನು ಬಳಸಿ ಕಪ್ ಆಕಾರದಲ್ಲಿ ಬಳ್ಳಿ, ಪೊದೆ, ಮರಗಳ ರೆಂಬೆಗಳ ಸಂದುಗಳಲ್ಲಿ ಗೂಡು ಕಟ್ಟುತ್ತದೆ. ತಿಳಿಗೆಂಪು ಬಿಳಿ ಚುಕ್ಕಿಗಳಿರುವ 2-3 ಮೊಟ್ಟೆಗಳನ್ನಿಟ್ಟು ಮರಿಮಾಡುವ ಇವು ಮರಿಗಳ ಪಾಲನೆಯಲ್ಲಿ ತೊಡಗುತ್ತವೆ. ಆದರೆ, ಈ ಮೇಲಿನ ಎರಡೂ ಪಿಕಳಾರ ಹಕ್ಕಿಗಳಲ್ಲಿ ಒಂದು ಕುತೂಹಲಕರವಾದ ವಿಷಯವಿದೆ. ಅದು ಏನು? ಎಂದರೆ ಮರಿಗಳಿಗೆ ಆಹಾರ ನೀಡಿದ ತಕ್ಷಣ ಮರಿಗಳು ಬಿಳಿ ಬಣ್ಣದ ಉಂಡೆಯಂತೆ ಹೇಸಿಗೆ(ಮಲವಿಸರ್ಜನೆ) ಹಾಕುತ್ತವೆ. ಆ ಹೇಸಿಗೆಯನ್ನು ಪಿಕಳಾರಗಳು ಬಿಸಾಡದೆ ಸೇವಿಸುವುದು. ಕಾರಣ ಏನು ಎಂದು ನೋಡಿದಾಗ ಅಹಾರವು ಮರಿಗಳಲ್ಲಿ ಸಂಪೂರ್ಣವಾಗಿ ಜೀರ್ಣವಾಗದೆ ಉಳಿಯುತ್ತದೆ ಮತ್ತು ಅದರಲ್ಲಿ ಪೋಷಕಾಂಶಗಳು ಇನ್ನೂ ಉಳಿದಿದ್ದು ಅದೂ ಸಹ ಉತ್ತಮ ಆಹಾರವೇ ಎನ್ನುವುದು. ಎಂಥಾ ಸೋಜಿಗ ಅಲ್ಲವೇ?

ಪೋಷಕ ಹಕ್ಕಿಯು ಗುಟುಕು ನೀಡಿದ ನಂತರ ಮರಿಗಳ ಮಲ ತಿನ್ನುವುದನ್ನು ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

https://www.youtube.com/watch?v=NeFGFPFTNEE

12 comments: