Thursday, November 4, 2021

ಜೀವ ಹೇಗೆ ಹುಟ್ಟಿದರೇನಂತೆ? - ಭಾಗ 2 - ಸೂಕ್ಷ್ಮಜೀವಿಗಳ ಆವಿಷ್ಕಾರ

ಜೀವ ಹೇಗೆ ಹುಟ್ಟಿದರೇನಂತೆ?

ಭಾಗ 2 - ಸೂಕ್ಷ್ಮಜೀವಿಗಳ ಆವಿಷ್ಕಾರ

ಡಾ. ಎಂ. ಜೆ. ಸುಂದರ್ ರಾಮ್ 

ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು ಮತ್ತು ವಿಜ್ಞಾನ ಸಂವಹನಕಾರರು 


ಹದಿನೇಳನೇ ಶತಮಾನದಲ್ಲಿ  ಫ್ರಾನ್ಸ್, ಇಂಗ್ಲೆಂಡ್, ಇಟಲಿಗಳಲ್ಲಿ ಅರಿಸ್ಟಾಟಲ್‍ರ ವಿಜ್ಞಾನವನ್ನು ಧಿಕ್ಕರಿಸುವ ಕೆಲವು ಮೇಧಾವಿ ವಿಜ್ಞಾನಿಗಳು ಒಗ್ಗೂಡಿ, ಕಣ್ಣಾರೆ ಕಂಡ ಹಾಗೂ ಪ್ರಯೋಗಗಳಿಂದ ದೊರೆತ ಫಲಿತಾಂಶವಲ್ಲದೆ ಮತ್ಯಾವುದನ್ನೂ ಒಪ್ಪಲು ಸಿದ್ಧರಿಲ್ಲವೆಂದು ಘೋಷಿಸಿದರು.

ಇದೇ ಸಮಯದಲ್ಲಿ ಸ್ವಯಂಜನನ ವಾದದ ಬಿರುಗಾಳಿ ಮತ್ತೊಂದೆಡೆ ಹೆಚ್ಚು ರಭಸದಿಂದ ಬೀಸತೊಡಗಿತು. ಈ ಸಲ ಅದು ಹಾಲೆಂಡಿನ ಡೆಲ್ಫ್ಟ್ ನಗರದಲ್ಲಿ ಪ್ರಾರಂಭವಾಯಿತು. ವಿಜ್ಞಾನ ಇನ್ನೂ ಶೈಶವಾಸ್ಥೆಯಲ್ಲಿದ್ದ ಕಾಲವದು. ಮನುಷ್ಯನ ದೇಹದೊಳಗೆ ಏನಿದೆ ಎಂಬ ಕುತೂಹಲದಿಂದ ಹೆಣವನ್ನು ಕತ್ತರಿಸುವ ದುಸ್ಸಾಹಸ ಮಾಡಿದ ಸರ್ವೆಟಿಸ್ (Servete) ಎಂಬ ವಿಜ್ಞಾನಿಯನ್ನು ಜೀವಂತ ಸುಟ್ಟು ದಹನಮಾಡಿದ ಕಾಲವದು. ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ ಎಂದು ಗುಡುಗಿದ ಗೆಲಿಲಿಯೋನನ್ನು ಸೆರೆಹಿಡಿದು ಕಾರಾಗೃಹದಲ್ಲಿಟ್ಟಿದ್ದ ಕಾಲವದು. ಇಂತಹ ಕಾಲದಲ್ಲಿ ಸೂಕ್ಷದರ್ಶಕ ಬಳಕೆಗೆ ಬಂದಿತು.



 

ಇದನ್ನು ನಿರ್ಮಿಸಿದವನು ಆಂಟೋನಿ ವಾನ್ ಲೀವೆನ್‍ಹಾಕ್ (Antony Von Leewenhoeck). ಆತ ಭೂತ ಕನ್ನಡಿಗಳನ್ನು ಸಾಣೆ ಹಿಡಿಯುವ ಕೆಲಸದಲ್ಲಿ ನಿಸ್ಸೀಮನಾಗಿದ್ದ. ತಾನು ತಯಾರಿಸಿದ ಸೂಕ್ಷ್ಮದರ್ಶಕದ ಮೂಲಕ ಸುತ್ತ ಮುತ್ತ ಸಿಕ್ಕಿದ ಎಲ್ಲ ವಸ್ತುಗಳನ್ನೂ ನೋಡಿ ಆನಂದ ಪಡುತ್ತಿದ್ದ. ಡೆಲ್ಫ್ಟ್ ನಗರದ ಹೊರಗಿನ ಕೆರೆಯ ನೀರನ್ನು ಸೀಸೆಯೊಂದರಲ್ಲಿ ಶೇಖರಿಸಿ ತಂದು ಅದನ್ನು ತನ್ನ ಸೂಕ್ಷ್ಮದರ್ಶಕದ ಮೂಲಕ ವೀಕ್ಷಿಸಲು ಕುಳಿತ. ಅಪ್ಪನ ಈ ಹುಚ್ಚು ಸಾಹಸವನ್ನು ಕುತೂಹಲದಿಂದ ನೋಡುತ್ತ ಕುಳಿತಿದ್ದಳು ಅವನ 19 ವಯಸ್ಸಿನ ಮಗಳು.

ಕೆರೆ ನೀರಿನ ಹನಿಯೊಂದನ್ನು ತನ್ನ ಸೂಕ್ಷ್ಮದರ್ಶಕದ ಮೂಲಕ ವೀಕ್ಷಿಸತೊಡಗಿದ್ದ ಲೀವೆನ್‍ಹಾಕ್ ಇದ್ದಕ್ಕಿದ್ದಂತೆ, ಸಮೀಪದಲ್ಲಿದ್ದ ಮಗಳತ್ತ ನೋಡುತ್ತ, ಅವಳನ್ನು ತಿವಿಯುತ್ತ, ಆನಂದಾಶ್ಚರ್ಯಗಳಿಂದ ಉದ್ರಿಕ್ತನಾಗಿ ಕೂಗಿಕೊಂq ’ಬಾ ಮಗಳೇ, ನೋಡಿಲ್ಲಿ! ಈ ನೀರಿನ ಹನಿಯಲ್ಲಿ ಅದೆಷ್ಟು ಸೂಕ್ಷ್ಮಜೀವಿಗಳು ಹರಿದಾಡುತ್ತಿವೆ! ಎಷ್ಟು ಚೆಂದ! ಸೂಕ್ಷ್ಮಜೀವಿಗಳ ಹೊಸ ಜಗತ್ತನ್ನೇ ಕಂಡು ಹಿಡಿದುಬಿಟ್ಟೆ, ನೋಡಿದೆಯಾ!’

ಅಪ್ಪನ ಚೀತ್ಕಾರದಿಂದ ಕ್ಷಣಕಾಲ ತಬ್ಬಿಬ್ಬಾದ ಮಗಳು ಸೂಕ್ಷ್ಮದರ್ಶಕದ ಮೂಲಕ ಸೂಕ್ಷ್ಮಜೀವಿಗಳನ್ನು ವೀಕ್ಷಿಸಿ ಖುಷಿಪಟ್ಟಳು. ಈ ದೃಶ್ಯವನ್ನು ಲೀವೆನ್‍ಹಾಕ್ ಇತರರಿಗೂ ತೋರಿಸಿದ. ಇದನ್ನು ನೋಡಿದವರಲ್ಲಿ  ಇಂಗ್ಲೆಂಡಿನ ರಾಯಲ್ ಸೊಸೈಟಿಯ ಸದಸ್ಯರಾದ ರೆನೀರ್‍ಡಿಗ್ರಾಫ್ ಕೂಡಒಬ್ಬರು. ಅವರು ಕೂಡಲೇ ಈ ವಿಷಯವನ್ನು ಸೊಸೈಟಿಗೆ ಪತ್ರದ ಮೂಲಕ ತಿಳಿಸಿದರು.

ತಾನು ಕಂಡುಹಿಡಿದಿದ್ದ ಹೊಸ ಸೂಕ್ಷ್ಮ ಪ್ರಪಂಚದ ಮಾಹಿತಿಯ ವಿವರವನ್ನು ರಾಯಲ್ ಸೊಸೈಟಿಗೆ  ಒದಗಿಸಬೇಕೆಂದು ಲೀವೆನ್‍ಹಾಕ್‍ಗೆ ಸೊಸೈಟಿಯ ಕಾರ್ಯದರ್ಶಿ ರಾಬರ್ಟ್ ಹುಕ್(Robert Hooke) ಪತ್ರ ಬರೆದರು. ತಾನು ಕಂಡದ್ದನ್ನು ಕಂಡಂತೆ ರಾಯಲ್ ಸೊಸೈಟಿಗೆ ಲೀವೆನ್‍ಹಾಕ್ ಲಿಖಿತ ಮುಖೇನ ತಿಳಿಸಿದನು.

ರಾಬರ್ಟ್ ಹುಕ್ ಸದಸ್ಯರಿಗೆ ಪತ್ರದ ವಿಷಯವನ್ನು ಓದಿ ತಿಳಿಸಿದಾಗ ವಿಜ್ಞಾನಿಗಳಿಗೆ ಸೋಜಿಗವೆನಿಸಿತು. ಕೆಲವರಂತೂ ವಿಷಯವನ್ನು ಕೇಳಿ ಘೊಳ್ಳೆಂದು ಗಹಗಹಿಸಿ ನಕ್ಕು ಬಿಟ್ಟರು !

ರಾಯಲ್ ಸೊಸೈಟಿಯ ಬಹುತೇಕ ಸದಸ್ಯರಿಗೆ ಕುತೂಹಲ ತಡೆಯಲಾಗಲಿಲ್ಲ. ಅವರಿಗೆ ಸೂಕ್ಷ್ಮ ಜೀವಿಗಳನ್ನು ವೀಕ್ಷಿಸುವ ಹಂಬಲವಾಯಿತು. ಸಂಸ್ಥೆಯ ಕಾರ್ಯದರ್ಶಿ ರಾಬರ್ಟ್ ಹುಕ್‍ರಿಗೆ ಈ ಕೆಲಸವನ್ನು ವಹಿಸಲಾಯಿತು. ಒಂದು ದಿನ ಸದಸ್ಯರೆಲ್ಲ ಸಭೆ ಸೇರಿದರು. ಹುಕ್ ಕೆರೆ ನೀರನ್ನು ಒಂದು ಸೀಸೆಯಲ್ಲಿ ಶೇಖರಿಸಿ ತಂದರು. ತಾವು ತಯಾರಿಸಿದ್ದ ಅತ್ಯುತ್ತಮ ಸೂಕ್ಷ್ಮದರ್ಶಕದ ಮೂಲಕ ವೀಕ್ಷಿಸತೊಡಗಿದರು. ಸೂಕ್ಷ್ಮಜೀವಿಗಳನ್ನು ವೀಕ್ಷಿಸುವ ನಿರೀಕ್ಷೆಯಲ್ಲಿದ್ದ ಸಭೆ ನಿಶ್ಶಬ್ದವಾಯಿತು. ಎಲ್ಲರೂ ಹುಕ್‍ರನ್ನೇ ದಿಟ್ಟಿಸಿ ನೋಡುತ್ತ ಕುಳಿತರು. ಇನ್ನು ಕೆಲವೇ ನಿಮಿಷಗಳಲ್ಲಿ ತಾವೆಲ್ಲ ಮೊಟ್ಟಮೊದಲಿಗೆ ಸೂಕ್ಷ್ಮಜೀವಿಗಳ ದರ್ಶನ ಮಾಡುವ ಭಾಗ್ಯವನ್ನು ನೆನೆದು ಖುಷಿಪಡುತ್ತಿದ್ದರು.

ಸೂಕ್ಷ್ಮಜೀವಿಗಳನ್ನು ಹುಡುಕುತ್ತಿದ್ದ ಹುಕ್ ತಮ್ಮ ಪೀಠದಿಂದ ಮೇಲೆದ್ದರು. ಕೂಡಲೇ ನಿಶ್ಶಭ್ಧವಾಗಿದ್ದ ಸಭೆ ಜೀವಂತವಾಯಿತು. ಸದಸ್ಯರೆಲ್ಲರೂ ಎದ್ದು ನಿಂತು ಹುಕ್ ಕಡೆ ನಿರೀಕ್ಷೆಯಿಂದ ನೋಡಲು ಆರಂಭಿಸಿದರು. ಹುಕ್ ತಾವು ವೀಕ್ಷಿಸುತ್ತಿದ್ದ ನೀರಿನ ಹನಿಯನ್ನು ಬಟ್ಟೆಯಿಂದ ಒರೆಸಿದರು. ಇನ್ನೊಂದು ಹನಿಯನ್ನು ಸೀಸೆಯಿಂದ ತೆಗೆದು ಸೂಕ್ಷ್ಮದರ್ಶಕದ ಕೆಳಗಿಟ್ಟು ಮತ್ತೆ ವೀಕ್ಷಿಸತೊಡಗಿದರು. ಸ್ವಲ್ಪ ಸಮಯದ ನಂತರ ತಮ್ಮ ಕಣ್ಣುಗಳನ್ನು ಉಜ್ಜಿಕೊಳ್ಳುತ್ತಾ, ತಾವು ತಂದಿದ್ದ ಕೆರೆ ನೀರಿನ ಸೀಸೆಯನ್ನು ಮೇಲೆತ್ತಿ, ಅದನ್ನೇ ದಿಟ್ಟಿಸಿ ನೋಡುತ್ತಾ ನಿಂತರು. ಗಾಜಿನ ಕಡ್ಡಿಯಿಂದ ಸೀಸದ ನೀರನ್ನು ಕಲಕಿದರು. ಅದರಿಂದ ಒಂದು ಹನಿ ನೀರನ್ನು ತೆಗೆದು ಮತ್ತೆ ಸೂಕ್ಷ್ಮದರ್ಶಕದ ಅಡಿ ಇಟ್ಟು ವೀಕ್ಷಿಸತೊಡಗಿದರು. ಎಷ್ಟೇ ಪ್ರಯತ್ನಪಟ್ಟರೂ ಸೂಕ್ಷ್ಮಜೀವಿಗಳು ಕಾಣಿಸಲೇ ಇಲ್ಲ. ಸಭೆಯ ಗಂಭೀರತೆ ಕ್ರಮೇಣ ಕರಗುತ್ತಾ ಬಂದಿತು. ಸದಸ್ಯರು ಒಬ್ಬರ ಮುಖವನ್ನೊಬ್ಬರು ನೋಡುತ್ತಾ ನಿಂತರು. ಕೆಲವರು ಬೇಸರದಿಂದ ಆಕಳಿಸಿದರು, ಮೈಮುರಿದರು. ಲೀವೆನ್ ಹಾಕ್ ತಮಗೆ ಸುಳ್ಳು ಮಾಹಿತಿ ಕೊಟ್ಟಿರಬಹುದೆಂದು ಕೆಲವರು ಸಂಶಯಪಟ್ಟರು. ಹುಕ್ ಬಳಸಿದ ಸೂಕ್ಷ್ಮದರ್ಶಕದ ಸಾಮಥ್ರ್ಯ ಸಾಲದೆಂದು ಕೆಲವರು ಅಭಿಪ್ರಾಯಪಟ್ಟರು. ಒಟ್ಟಿನಲ್ಲಿ ಅಂದಿನ ಸಭೆ ನಿರಾಶಾದಾಯಕವಾಗಿ ಕೊನೆಗೊಂಡಿತು. ಹುಕ್‍ಗೆ ಆದ ನಿರಾಸೆ, ಬೇಸರ, ಜಿಗುಪ್ಸೆ, ಅವಮಾನ, ಮುಖಭಂಗ ಅಷ್ಟಿಷ್ಟಲ್ಲ.

ತಮ್ಮ ಪ್ರಯೋಗದ ನ್ಯೂನ್ಯತೆಗಳೇನಿರಬಹುದೆಂದು ಹುಕ್ ಪರಿಶೀಲಿಸತೊಡಗಿದರು. ಬಳಸಿದ ಸೂಕ್ಷ್ಮದರ್ಶಕದ ಮಸೂರಗಳ ಸಾಮಥ್ರ್ಯ ಕಡಿಮೆ ಇದ್ದುದು ಅವರಿಗೆ ಮನವರಿಕೆಯಾಯಿತು. ಹುಕ್ ತಮ್ಮ ಸೂಕ್ಷ್ಮದರ್ಶಕಕ್ಕೆ ಅತಿ ಹೆಚ್ಚು ಸಾಮಥ್ರ್ಯವಿರುವ ಭೂತಕನ್ನಡಿಯನ್ನು ಸಾಣೆಹಿಡಿದು ಜೋಡಿಸಿದರು.ತಮ್ಮ ಮನೆಯಲ್ಲಿ ತಾವೊಬ್ಬರೇ ತಮ್ಮ ಹೊಸ ಸೂಕ್ಷ್ಮದರ್ಶಕದಲ್ಲಿ ಕೆರೆನೀರಿನ ಹನಿಯನ್ನು ವೀಕ್ಷಿಸಿದಾಗ, ಅದುವರೆಗೆ ತಲೆ ಮರೆಸಿಕೊಂಡಿದ್ದ ಸೂಕ್ಷ್ಮಜೀವಿಗಳು ಈ ಸಲ ಕಾಣಿಸಿದವು.ಅಬ್ಬ ! ಅವರ ಮೈ ಝುಂ ಎಂದಿತು.

1677ನೇ ನವೆಂಬರ್15ನೇ ದಿನಾಂಕ ಹುಕ್ ತಮ್ಮ ಹೊಸ ಸೂಕ್ಷ್ಮದರ್ಶಕವನ್ನೂ ಕೆರೆನೀರನ್ನೂ ಹೊತ್ತು ಸೊಸೈಟಿಯ ಪ್ರಯೋಗಾಲಯಕ್ಕೆ ದೌಡಾಯಿಸಿದರು. ಈ ಸಲವಾದರೂ ತಮಗೆ ಸೂಕ್ಷ್ಮಜೀವಿಗಳ ದರ್ಶನವಾಗುವುದೆಂದು ಸದಸ್ಯರೆಲ್ಲರೂ ಹಾಜರಾದರು. ಸಡಗರದಿಂದ ಸದಸ್ಯರು ಹುಕ್‍ರ ಸುತ್ತ ಮುತ್ತಿಕೊಂಡರು. ಸಭೆ ಮತ್ತೆ ಗಂಬೀರವಾಯಿತು. ಹುಕ್ ಈ ಸಲ ತಮ್ಮ ಸೂಕ್ಷ್ಮದರ್ಶಕದ ಮೂಲಕ ಅವರಿಗೆ ಸೂಕ್ಷ್ಮಜೀವಿಗಳ ದರ್ಶನಮಾಡಿಸಿದರು. ಸೂಕ್ಷ್ಮಜೀವಿಗಳನ್ನು ಮೊಟ್ಟಮೊದಲಿಗೆ ವೀಕ್ಷಿಸಿದ ಸದಸ್ಯರಿಗೆ ಆದ ಸಂತೋಷ ಹೇಳತೀರದು. ಆ ಸಂತೋಷವನ್ನು ನೀವೂ ಅನುಭವಿಸಲು ಕೆಳಗಿನ ಲಿಂಕನ್ನು ಕ್ಲಿಕ್ಕಿಸಿ. 

https://www.youtube.com/watch?v=7JwVfAldL2o

ನಿರ್ಜೀವ ವಸ್ತುಗಳಿಂದ ಜೀವಸೃಷ್ಠಿ ಮಾಡುವ ಸುಲಭ ಸೂತ್ರವೊಂದನ್ನು ಸ್ವಯಂಜನನ ವಾದಿಗಳು ಕಂಡುಹಿಡಿದರು. ಒಣಹುಲ್ಲನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ, ಗಾಜಿನ ಪಾತ್ರೆಯಲ್ಲಿಟ್ಟು, ಸುಮಾರು ಎರಡು ಲೋಟ ನೀರು ಬೆರಸಿ, ಕುದಿಸಿದರೆ ಒಣಹುಲ್ಲಿನ ಕಲಕ(Hay infusion) ತಯಾರಾಗುತ್ತದೆ. ಈ ಕಲಕವನ್ನು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿದಾಗ ಸೂಕ್ಷ್ಮಜೀವಿಗಳ ಸುಳಿವೇ ಇರುವುದಿಲ್ಲ. ಬಿಸಿ ತಡೆಯಲಾರದೆ ಅವೆಲ್ಲ ಸತ್ತಿದ್ದವು.

ಕಲಕವನ್ನು ಒಂದೆಡೆ ಇಟ್ಟಿದ್ದರೆ 4-5 ದಿನಗಳಲ್ಲಿ ಅದರಲ್ಲಿ ಸೂಕ್ಷ್ಮಜೀವಿಗಳು ಪ್ರತ್ಯಕ್ಷವಾಗುತ್ತವೆ ! ಸೂಕ್ಷ್ಮಜೀವಿಗಳು ಹೀಗೆ ಮತ್ತೆ ಕಾಣಿಸಿಕೊಂಡರೆ ಅವು ಸ್ವಯಂಜನನದ ಮೂಲಕವೇ ಹುಟ್ಟಿರಬೇಕು ಎಂಬುದು ಸ್ವಯಂಜನನವಾದಿಗಳ ತರ್ಕವಾಗಿತ್ತು.

ಹತ್ತೊಂಭತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಸ್ವಯಂಜನನವನ್ನು ಸಮರ್ಥಿಸುವ ಪುಸ್ತಕವೊಂದು ಹೊರಬಿತ್ತು. ಇದನ್ನು ಬರೆದವರು ಫ್ರಾನ್ಸ್ ದೇಶದ ಪ್ರಕೃತಿ ಇತಿಹಾಸ ಸಂಗ್ರಹಾಲಯದ ಮುಖ್ಯಾಧಿಕಾರಿ ಫೀಲಿಕ್ಸ್ ಆರ್ಕಿಮಿಡೆ ಪೌಷೆ(Felix Archemede Pouchet). ಪೌಷೆಯ ಹೆೀಳಿಕೆಯನ್ನು ಓದಿದ ವಿಶ್ವದ ಅತಿ ಶ್ರೇಷ್ಠ ಜೀವರಸಾಯನಶಾಸ್ತ್ರಜ್ಞ ಲೂಯಿ ಪಾಶ್ಚರ್(Louis Pasteur) ಅದನ್ನು ಒಪ್ಪಲಿಲ್ಲ. ಈ ಸಮಸ್ಯೆಯನ್ನು ಒಟ್ಟಾಗಿ ಬಗೆಹರಿಸಿಯೇ ತೀರುವೆನೆಂದು ಪಾಶ್ಚರ್ ಕಣಕ್ಕಿಳಿದರು. ಸೂಕ್ಷ್ಮ ಜೀವಿಗಳು ಅತಿ ಹಗುರವಾಗಿದ್ದು ಗಾಳಿಯಲ್ಲಿ ತೇಲುತ್ತಿರುತ್ತವೆಂದೂ, ಅವು ಅಲ್ಲಲ್ಲಿ ಉದುರಿ ಬೀಳುತ್ತಿರುವುವೆಂದೂ ಪಾಶ್ಚರ್ ಅಭಿಪ್ರಾಯ ಪಟ್ಟರು. ಸೂಕ್ಷ್ಮಜೀವಿಗಳು ದೂಳಿನ ಮೇಲೆ ಸವಾರಿ ಮಾಡುತ್ತ ಧೂಳಿನ ಮೂಲಕ ಸ್ಥಳಾಂತರ ಗೊಳ್ಳುತ್ತಿರುತ್ತವೆ. ಜನನಿಬಿಡವಾದ ರಸ್ತೆಗಳಲ್ಲಿ ಧೂಳು ಹೆಚ್ಚಾಗಿರುವುದರಿಂದ ಸೂಕ್ಷ್ಮಜೀವಿಗಳೂ ಹೆಚ್ಚಾಗಿರುತ್ತವೆ; ಕಟ್ಟಡಗಳೊಳಗೆ ಮತ್ತು ಪರ್ವತ ಶಿಖರಗಳಲ್ಲಿ ಬೀಸುವ ಗಾಳಿಯಲ್ಲಿ ಧೂಳಿನ ಪ್ರಮಾಣ ತುಂಬ ಕಡಿಮೆ ಇರುವುದರಿಂದ ಸೂಕ್ಷ್ಮಜೀವಿಗಳೂ ಅತ್ಯಂತ ವಿರಳವಾಗಿರುತ್ತವೆ ಎಂದು ಪಾಶ್ಚರ್ ತರ್ಕಿಸಿದರು.


By https://wellcomeimages.org/indexplus/obf_images/26/e8/af7d19bb2818b99e1e0a50b2cd67.jpgGallery: https://wellcomeimages.org/indexplus/image/V0004765.htmlWellcome Collection gallery (2018-03-29): https://wellcomecollection.org/works/at87hgw9 CC-BY-4.0, CC BY 4.0, https://commons.wikimedia.org/w/index.php?curid=36415299

ತಮ್ಮ ವಾದವನ್ನು ಸಮರ್ಥಿಸಲು ಪಾಶ್ಚರ್ ಒಂದು ಪ್ರಯೋಗವನ್ನು ಯೋಜಿಸಿದರು. 60 ಕುಪ್ಪಿ (ಫ್ಲಾಸ್ಕ್)ಗಳನ್ನು ತಂದು, ಕಲಕವನ್ನು ತಯಾರಿಸಿ ಆ ಎಲ್ಲ ಕುಪ್ಪಿಗಳಲ್ಲೂ ಅದನ್ನು ತುಂಬಿದರು. ಬಳಿಕ ಎಲ್ಲ ಕುಪ್ಪಿಗಳ ಕಲಕಗಳನ್ನೂ ಕುದಿಸಿದಾಗ ಕಲಕದಲ್ಲಿದ್ದ ಸೂಕ್ಷ್ಮಜೀವಿಗಳೆಲ್ಲ ಸತ್ತಿದ್ದವು. ಎಲ್ಲ ಕುಪ್ಪಿಗಳ ಬಾಯನ್ನು ಮೊಹರು ಮಾಡಿ, ಅವನ್ನು ಮೂರು ಗುಂಪುಗಳಾಗಿ ವಿಂಗಡಿಸಿದರು. ಪ್ರತಿ ಗುಂಪಿನಲ್ಲೂ 20 ಕುಪ್ಪಿಗಳಿದ್ದವು.

ಕೆಲವು ದಿನಗಳ ಬಳಿಕ ಮೊಹರು ಮಾಡಿದ ಕುಪ್ಪಿಗಳ ಮೊದಲ ಗುಂಪನ್ನು ತೆಗೆದುಕೊಂಡು, ಹೇಸರಕತ್ತೆಯನ್ನೇರಿ, ಆಲ್ಪ್ಸ್ ಪರ್ವತದ 15,800 ಅಡಿ ಎತ್ತರದಲ್ಲಿ ಮೌಂಟ್ ಬ್ಲಾಂಕ್ ಎಂಬ ಶಿಖರವನ್ನು ತಲುಪಿ, 20  ಕುಪ್ಪಿಗಳ ಮೊಹರನ್ನು ಒಡೆದು ಸುಮಾರು 30 ನಿಮಿಷಗಳ ಕಾಲ ಗಾಳಿಗೆ ತೆರೆದಿಟ್ಟರು. ನಂತರ, ಮೊದಲಿನಂತೆ ಅವನ್ನು ಮೊಹರು ಮಾಡಿ ಪ್ರಯೋಗಾಲಯಕ್ಕೆ ತಂದರು. ಎರಡನೆ ಗುಂಪಿನ 20 ಕುಪ್ಪಿಗಳನ್ನು ಊರಿನ ಪುರಭವನಕ್ಕೆ ಕೊಂಡೊಯ್ದು, ಭವನದೊಳಗೆ ಅವುಗಳ ಮೊಹರನ್ನೊಡೆದು, 30 ನಿಮಿಷಗಳವರೆಗೆ ಗಾಳಿಗೆ ತೆರೆದಿಟ್ಟು, ಮತ್ತೆ ಮೊಹರು ಮಾಡಿ ಪ್ರಯೋಗಾಲಯಕ್ಕೆ ತಂದರು. ಮೂರನೆ ಗುಂಪಿನ 20 ಕುಪ್ಪಿಗಳನ್ನು ಜನನಿಬಿಡವಾದ ನಗರದ ಪೇಟೆಯ ಚೌಕಕ್ಕೆ ತಂದು, ಅವುಗಳ ಮೊಹರನ್ನೂ ಒಡೆದು, 30 ನಿಮಿಷಗಳವರೆಗೆ ಗಾಳಿಗೆ ತೆರೆದಿಟ್ಟು, ಬಳಿಕ ಅವನ್ನು ಮತ್ತೆ ಮೊಹರು ಮಾಡಿತಂದರು.

ಸುಮಾರು ಹತ್ತು ದಿನಗಳ ಬಳಿಕ, ಪರ್ವತದ ಮೇಲೆ ತೆರೆದಿದ್ದ ಕುಪ್ಪಿಗಳಲ್ಲಿದ್ದ ಕಲಕಗಳನ್ನು ಸೂಕ್ಷ್ಮದರ್ಶಕದಲ್ಲಿ ವೀಕ್ಷಿಸಿದಾಗ ಕೇವಲ ಒಂದು ಕುಪ್ಪಿಯಲ್ಲಿ(5%)ಜೀವಂತ ಸೂಕ್ಷ್ಮಜೀವಿಗಳು ಗೋಚರಿಸಿದವು. ಪುರಭವನದಲ್ಲಿ ತೆರೆದಿದ್ದ ಕುಪ್ಪಿಗಳ ಪೈಕಿ 7ರಲ್ಲಿ(35%) ಜೀವಂತ ಸೂಕ್ಷ್ಮಜೀವಿಗಳು ಕಂಡು ಬಂದವು. ಪೇಟೆ ಚೌಕದಲ್ಲಿ  ತೆರೆದಿಟ್ಟ ಕುಪ್ಪಿಗಳ ಪೈಕಿ 19ರಲ್ಲಿ (95%)ಜೀವಂತ ಸೂಕ್ಷ್ಮಜೀವಿಗಳು ಗೋಚರಿಸಿದವು. ಪಾಶ್ಚರ್ ತಮ್ಮ ಹೇಳಿಕೆಯನ್ನು ಪ್ರಯೋಗಗಳ ಮೂಲಕ ಸಮರ್ಥಿಸಿಕೊಂಡಿದ್ದರು.

ಪೌಷೆ ಕೂಡ ಹೆಚ್ಚು ಕಡಿಮೆ ಇದೇ ರೀತಿಯ ಪ್ರಯೋಗಗಳನ್ನು ನಡೆಸಿದರು. ಆದರೆ, ಅವರಿಗೆ ದೊರೆತ ಫಲಿತಾಂಶಗಳು ವಿರುದ್ಧವಾಗಿದ್ದವು. ಪ್ರಯೋಗಗಳನ್ನು ಯೋಜಿಸಿ ನಡೆಸುವುದರಲ್ಲಿ ಇಬ್ಬರೂ ಪರಿಣತರಾಗಿದ್ದರು. ಯಾರನ್ನು ನಂಬುವುದು, ಯಾರನ್ನು ಬಿಡುವುದು? ಫ್ರೆಂಚ್ ಅಕ್ಯಾಡೆಮಿ ಆಫ್ ಸೈನ್ಸಸ್ ಈ ಸಮಸ್ಯೆಯನ್ನು ನಿರ್ವಿವಾದವಾಗಿ ಕೊನೆಗಾಣಿಸಲು ನಿಶ್ಚಯಿಸಿತು. ಆಯೋಗವು ಈ ಕೆಳಗಿನ ಹೇಳಿಕೆಯನ್ನು ಕೊಟ್ಟಿತು:

ರಾಸಾಯನಿಕ ಅಥವ ಭೌತಿಕ ಬದಲಾವಣೆಗಳಿಗೊಳಗಾಗದ ಗಾಳಿಗೆ, ಕಲಕದಲ್ಲಿ ಜೀವವನ್ನು ಸೃಷ್ಟಿಸುವ ಚೈತನ್ಯವಿರುವುದಿಲ್ಲ.

ಪಾಶ್ಚರ್ ಮತ್ತು ಪೌಷೆ ಇಬ್ಬರಿಗೂ ಈ ಹೇಳಿಕೆಯನ್ನು ಪ್ರಯೋಗಗಳ ಮೂಲಕ ಒಂದೋ ಸಮರ್ಥಿಸಬೇಕಿತ್ತು ಅಥವಾ ತಿರಸ್ಕರಿಸಬೇಕಾಗಿತ್ತು.

ಪಾಶ್ಚರ್ 60 ಕುಪ್ಪಿಗಳನ್ನು ತಂದು ಪ್ರತಿಯೊಂದರಲ್ಲೂ ಒಣಹುಲ್ಲಿನ ತುಂಡುಗಳನ್ನು ಹಾಕಿ, ನೀರು ಬೆರೆಸಿದರು. ಕುಪ್ಪಿಗಳ ಕತ್ತನ್ನು ಬೆಂಕಿಯಲ್ಲಿ ಕಾಯಿಸಿ, ಅವುಗಳನ್ನು ಹಂಸದ ಕತ್ತಿನ ಆಕಾರದಲ್ಲಿ ಬಗ್ಗಿಸಿದರು. ಕುಪ್ಪಿಗಳನ್ನು ಕುದಿಸಿ, ಒಣಹುಲ್ಲಿನ ಕಲಕವನ್ನು ತಯಾರಿಸಿದರು. ಕುಪ್ಪಿಗಳನ್ನು ಮೊಹರು ಮಾಡದೆ ಹಾಗೇ ಬಿಟ್ಟರು. ಹಂಸಕತ್ತಿನ ಮೂಲಕ ಗಾಳಿ ಕುಪ್ಪಿಯಲ್ಲಿ ಸಂಚರಿಸಲು ಸಾಧ್ಯವಾಯಿತು.

ಈ ರೀತಿಯ ಹಂಸಕತ್ತಿನ ಕುಪ್ಪಿಗಳಲ್ಲಿ ಕಲಕವನ್ನು ತುಂಬಿ ಅವನ್ನು ಕುದಿಸಿದಾಗ ಒಳಗಿಂದ ಕಲಕದ    ನೀರು ಹಬೆಯಾಗಿ  ಹಂಸಕತ್ತಿನ ಮೂಲಕ  ಹೊರಹೊಮ್ಮಲಾರಂಭಿಸಿತು.  ಹಬೆಯ ಬಿಸಿಯು ಹಂಸ ಕತ್ತಿನಲ್ಲಿರುವ ಸೂಕ್ಷ್ಮಜೀವಿಗಳನ್ನು ಕೊಂದುಬಿಟ್ಟಿತು. ಸುಲಭವಾಗಿ ಒಳಹೋಗುವ ಗಾಳಿಯೊಡನೆ ಕೆಲವು ಸೂಕ್ಷ್ಮಜೀವಿಗಳೂ ಕುಪ್ಪಿಯೊಳಗೆ ಹೋಗುತ್ತಿದ್ದವು. ಆದರೆ, ಅವು ಡೊಂಕಾದ ಹಂಸಕತ್ತಿನ ನಳಿಕೆಯ ಗೋಡೆಗಳಲ್ಲಿದ್ದ ತೇವಕ್ಕೆ ಅಂಟಿಕೊಂಡು, ಒಳಗಿರುವ ಕಲಕವನ್ನು ಸೇರಲಾಗಲಿಲ್ಲ. ಆದ್ದರಿಂದ ಕಲಕವೂ ನಿಷ್ಕ್ರಿಮಿಯಾಗಿಯೇ ಉಳಿಯಿತು!

ಕೆಲವು ದಿನಗಳ ಬಳಿಕ ಪಾಶ್ಚರ್ ಒಂದು ಕುಪ್ಪಿಯ ಕತ್ತನ್ನು ಒಡೆದು ಕಲಕವನ್ನು ಸ್ವಲ್ಪ ಸಮಯ ಗಾಳಿಗೆ ತೆರೆದಿಟ್ಟರು. ಸುಮಾರು 4-5 ದಿನಗಳಲ್ಲಿ ಆ ಕಲಕದಲ್ಲಿ ಸೂಕ್ಷ್ಮಜೀವಿಗಳು ಪ್ರತ್ಯಕ್ಷವಾದವು!

ಪಾಶ್ಚರ್ 1864ರಲ್ಲಿ ವಿಜ್ಞಾನಿಗಳ ಹಾಗೂ ನಾಗರೀಕರ ಸಭೆ ಸೇರಿಸಿದರು. ಸಭೆಯಲ್ಲಿ ನೂರಾರು ಜನ ಜಮಾಯಿಸಿದ್ದರು. ಅವರನ್ನುದ್ದೇಶಿಸಿ ಪಾಶ್ಚರ್ ತಮ್ಮ ಪ್ರಶ್ನೆಯನ್ನು ಮುಂದಿಟ್ಟರು: ಹೊಸ ಜೀವಿಗಳು ತಮ್ಮನ್ನು ಹೋಲುವ ಜೀವಿಗಳಿಂದಲ್ಲದೆ ಇತರ ಯಾವುದಾದರೂ ರೀತಿಯಲ್ಲಿ ಹುಟ್ಟಿಬರಲು ಸಾಧ್ಯವೇ?

ದಿಢೀರನೆ ಕೊಠಡಿಯ ದೀಪಗಳೆಲ್ಲವೂ ಆರಿಹೋಗಿ ಕತ್ತಲಾವರಿಸಿತು. ಸಭಿಕರೆಲ್ಲ ಹಾಹಾಕಾರ ಮಾಡಲಾರಂಭಿಸಿದರು. ಆಗ ಕತ್ತಲನ್ನು ಬೇಧಿಸಿಕೊಂಡು ಬೆಳಕಿನ ಕಿರಣವೊಂದು ಹಾದು ಬಂದಿತು! ಆ ಬೆಳಕಿನ ಕಿರಣದಲ್ಲಿ ಮಿಂಚುತ್ತಿದ್ದ ಸಾವಿರಾರು ಧೂಳಿನ ಕಣಗಳನ್ನು ಪಾಶ್ಚರ್ ಸಭಿಕರಿಗೆ ತೋರಿದರು. ಬೆಳಕಿನ ಕಿರಣವಿಲ್ಲದಿದ್ದರೆ ಧೂಳನ್ನು ನಾವು ನೋಡಲಾರೆವು. ಕುಪ್ಪಿಯ ಕಲಕದಲ್ಲಿ ಧೂಳು ಪ್ರವೇಶಿಸದಿದ್ದರ ಸೂಕ್ಷ್ಮ  ಜೀವಿಗಳೂ ಬರಲು ಸಾಧ್ಯವಿಲ್ಲ. ಸೂಕ್ಷ್ಮಜೀವಿಗಳಿಲ್ಲದ ಕುಪ್ಪಿಗಳಲ್ಲಿ ಸ್ವಯಂಜನನದಿಂದ ಹೊಸ ಜೀವಿಗಳು ಸೃಷ್ಠಿಯಾಗುವುದಿಲ್ಲ ಎಂದು ಪಾಶ್ಚರ್ ವಾದಿಸಿದರು. ಇದರಿಂದ ಪ್ರಭಾವಿತರಾದ ಜನಸ್ತೋಮ ಪ್ರಚಂಡ ಕರತಾಡನದಿಂದ ಪಾಶ್ಚರ್‍ಗೆ ಮೆಚ್ಚುಗೆ ವ್ಯಕ್ತಪಡಿಸಿತು.

ಪಾಶ್ಚರ್‍ರ ವಿವರಣೆಯನ್ನು ಒಪ್ಪಿದ ಫ್ರೆಂಚ್ ಅಕ್ಯಾಡೆಮಿ ಪಾಶ್ಚರ್‍ಗೆ ಪ್ರಶಸ್ತಿ ಘೋಷಿಸಿತು. ನಿರ್ಜೀವ ಜನನ ವಾದ ಮತ್ತು ಜೈವಿಕ ಜನನವಾದ ನಡುವಿನ ವಿವಾದವನ್ನು ಪರಿಹರಿಸಲು ಅನೇಕ ದೇಶಗಳ ವಿಜ್ಞಾನಿಗಳು ಸಕ್ರಿಯವಾಗಿ ಭಾಗವಹಿಸಿದರು.  ವೇದಾಂತಿಗಳಿಂದ ಹಿಡಿದು ಜೀವಶಾಸ್ತ್ರಜ್ಞರು, ವೈದ್ಯರು, ರಸಾಯನಶಾಸ್ತ್ರಜ್ಞರು, ಭೌತವಿಜ್ಞಾನಿಗಳು, ಜೀವರಸಾಯನಶಾಸ್ತ್ರಜ್ಞರು, ವೈಜ್ಞಾನಿಕ ಸಂಸ್ಥೆಗಳ ಮುಖ್ಯಸ್ಥರು, ವಿವಿಧ ಮಠಾಧಿಪತಿಗಳು, ಧರ್ಮಗುರುಗಳು, ರಾಜ ಮಹಾರಾಜರುಗಳು. ಜನಸಾಮಾನ್ಯರೆಲ್ಲ ಸಕ್ರಿಯವಾಗಿ ಶ್ರಮಿಸಿದರು. ಸುಮಾರು ಮೂರು ಶತಮಾನಗಳ ಕಾಲ ವಿಜ್ಞಾನ ಪ್ರಪಂಚವನ್ನು ಅಲ್ಲೋಲ ಕಲ್ಲೋಲ ಮಾಡಿದ ಈ ಸುಂಟರಗಾಳಿಯನ್ನು ಪರಿಹರಿಸಲು ವಿಜ್ಞಾನಿಗಳು ತಮ್ಮ ಅತ್ಯಮೂಲ್ಯವಾದ ಸಮಯವನ್ನು ವ್ಯಯ ಮಾಡಬೇಕಾಯಿತು. ಈ ಸಮಸ್ಯೆಯನ್ನು ಬಗೆಹರಿಸಲು ಅನೇಕ ಸಲಕರಣೆಗಳನ್ನು ದುಬಾರಿ ಹಣಕೊಟ್ಟು ಕೊಂಡುಕೊಳ್ಳಬೇಕಾಯಿತು. ಅನೇಕ ರಾತ್ರಿಗಳನ್ನು ಪ್ರಯೋಗಾಲಯಗಳಲ್ಲಿ ಕಳೆದ ಕಾರಣ, ಮನೆಯವರ ಆಕ್ರೋಶಕ್ಕೆ ಒಳಗಾಗಬೇಕಾಯಿತು. ಹಣವನ್ನು ನೀರಿನಂತೆ ಖರ್ಚು ಮಾಡಬೇಕಾಯಿತು. ಊರಿಂದೂರಿಗೆ, ಬೆಟ್ಟ, ಪರ್ವತಗಳನ್ನೇರುವ ಕಷ್ಟ ಪಡಬೇಕಾಯಿತು. ಸಮಯಕ್ಕೆ ಸರಿಯಾಗಿ ಊಟ, ತಿಂಡಿಗಳಿಲ್ಲದೆ ಕೆಲವರ ಆರೋಗ್ಯ ಕೆಟ್ಟಿತು.

ಈ ಸಮಸ್ಯೆಗೆ ಉತ್ತ್ತರ ಅತಿ ದುಬಾರಿಯಾಯಿತಲ್ಲ? ಇಷ್ಟೆಲ್ಲ ಕಷ್ಟ ಪಡಬೇಕಾಗಿತ್ತಾ? ಜೀವವು ನಿರ್ಜೀವ ವಸ್ತುಗಳಿಂದ ಹುಟ್ಟಿದರೇನು, ತಮ್ಮನ್ನೇ ಹೋಲುವ ಪ್ರೌಢ ಜೀವಿಗಳಿಂದ ಹುಟ್ಟಿದರೇನು, ಜನಸಾಮಾನ್ಯನಿಗಂತೂ ಎರಡೂ ಒಂದೇ. ಇದಕ್ಕಾಗಿ ಎಷ್ಟೊಂದು ಪ್ರಯೋಗಗಳು, ವಾದ ವಿವಾದಗಳು, ಆರ್ಭಟಗಳು, ಮನಸ್ತಾಪಗಳು, ಒತ್ತಡಗಳು? ಎಷ್ಟೊಂದು ಕಾಲವ್ಯಯ, ಹಣವ್ಯಯ? ಇದಕ್ಕಿಂತಲೂ ಇನ್ನೂ ತುರ್ತು ಸಮಸ್ಯೆಗಳಿರಲಿಲ್ಲವೆ? ಸ್ವಲ್ಪ ಅತಿಯಾಯಿತೇನೊ ಎಂದೆಲ್ಲ ಜನಸಾಮಾನ್ಯನಿಗೆ ಅನಿಸುವುದು ಸಹಜ. ಸ್ವಲ್ಪ ಗಂಭೀರವಾಗಿ ಚಿಂತಿಸಿದಾಗ ಈ ಸಮಸ್ಯೆಯನ್ನು ಅಷ್ಟು ಸುಲಭವಾಗಿ ಪರಿಗಣಿಸಲಾಗದು.

ರೋಗಾಣುಗಳು ಸ್ವಯಂಜನನವಾಗಿ ಹುಟ್ಟುವುದಾದರೆ, ಅವು ನಮ್ಮ ದೇಹದ ಯಾವ ಅಂಗದಲ್ಲಾದರೂ, ಯಾವ ಸಮಯದಲ್ಲಾದರೂ ಹುಟ್ಟಬಹುದು. ಎಷ್ಟು ಸಲ ಅವನ್ನು ನಾಶ ಮಾಡಿದರೂ ಅವು ಮತ್ತೆ, ಮತ್ತೆ ಹುಟ್ಟಿಬರಬಹುದು. ಏಕೆಂದರೆ, ಅವುಗಳಿಗೆ ಅಪ್ಪನೂ ಇಲ್ಲ, ಅಮ್ಮನೂ ಇಲ್ಲ. ಕಸದಿಂದ ಅಥೌಆ ದೇಹದಲ್ಲಿ ಉತ್ಪತ್ತಿಯಾಗುವ ಕೊಳಕು ವಸ್ತುಗಳಿಂದ ಅವು ಹುಟ್ಟಿಬರಬಹುದು. ಈ ಸ್ಥಿತಿಯಲ್ಲಿ ಅವು ಹರಡುವ ರೋಗಗಳನ್ನು ಹೇಗೆ ತಾನೇ ನಿಯಂತ್ರಿಸಬಹುದು? ಅವನ್ನು ನಿರ್ಮೂಲ ಮಾಡಿದಷ್ಟೂ ಅವು ಮತ್ತೆ ಹುಟ್ಟಿ ರೋಗಗಳನ್ನು ಹರಡಬಲ್ಲವು. ಯಾವ ವೈದ್ಯನೂ ಈ ರೋಗಗಳನ್ನು ಶಾಶ್ವತವಾಗಿ ಗುಣಪಡಿಸಲಾರ. ಒಂದು ಜೀವ ತನ್ನನ್ನೇ ಹೋಲುವ ಇನ್ನೊಂದು ಜೀವದಿಂದ ಮಾತ್ರ ಹುಟ್ಟಬಲ್ಲದು ಎಂಬ ಜೀವಜನನ ವಾದವನ್ನು ನಂಬಿದಾಗಲೇ, ನಮಗೆ ರೋಗಗಳಿಂದ ಮುಕ್ತಿ ಸಾಧ್ಯ. ಸೂಕ್ಷ್ಮಜೀವಿ ರೋಗಾಣುಗಳು ಹೊರಗಿನಿಂದ ಆಕಸ್ಮಿಕವಾಗಿ ನಮ್ಮ ದೇಹವನ್ನು ಆಹಾರದ ಮೂಲಕವೋ, ನೀರಿನ ಮೂಲಕವೋ, ಗಾಳಿಯ ಮೂಲಕವೋ ಸೇರಿ, ಅಲ್ಲಿ ವೃದ್ಧಿಯಾಗಿ ರೋಗವನ್ನು ಉಂಟುಮಾಡುತ್ತವೆ ಎಂಬುದನ್ನು ನಂಬಿದಾಗ ಮಾತ್ರ, ರೋಗಗಳ ನಿಯಂತ್ರಣ ಸಾಧ್ಯ. ಅವು ನಮ್ಮ ದೇಹವನ್ನು ಸೇರದಂತೆ ಜಾಗರೂಕತೆ ಮಾಡಿದಾಗ ಅಥವಾ ಒಳಹೊಕ್ಕ ರೋಗಾಣುಗಳನ್ನು ಸೂಕ್ತ ಔಷದಗಳ ಮೂಲಕ ನಾಶಮಾಡಿದಾಗ ಮಾತ್ರ, ನಾವು ರೋಗಮುಕ್ತರಾಗುತ್ತೇವೆ ಎಂಬುದನ್ನು ದೃಢವಾಗಿ ನಂಬಬೇಕು. ಹೀಗಾಗಿ, ಆಧುನಿಕ ವೈದ್ಯಶಾಸ್ತ್ರವು ಜೀವಜನನವಾದದ ಭದ್ರ ಬುನಾದಿಯ ಮೇಲೆ ಸ್ಥಿರವಾಗಿ ನೆಲೆಯೂರಿ ನಿಂತಿದೆ.

8 comments:

  1. ಸರ್ವೆಟಿಸ್ ನ ದುರಂತ, ಗೆಲಿಲಿಯೋನ ಸಂಕಷ್ಟ, ಹಾಕ್ ನ ಸೂಕ್ಷದರ್ಶಕ, ಪಾಶ್ಚರ್ ಆಲ್ಪ್ಸ್ ಪರ್ವತ ಪ್ರಯೋಗ- ಸುಂದರವಾಗಿ ಮೂಡಿಬಂದಿದೆ. ಮುಂದಿನಭಾಗಕ್ಕಾಗಿ ಕಾತುರದಿಂದ ಇದ್ದೇನೆ...ಮಾದಿಹಳ್ಳಿ ಕೋದಂಡರಾಮ.

    ReplyDelete
  2. Excellent. Very interesting and informative. Well presented.

    ReplyDelete
  3. ಯತಾಸ್ಥಿತಿವಾದಕ್ಕೆ ಮುಖಾಮುಖಿಯಾಗಿ ವಿಜ್ಞಾನ ವಿಕಾಸವಾಗುತ್ತಾ ಬಂದಿದೆ.ಜನಸಾಮಾನ್ಯರಿಗೆ ಅಷ್ಟೆಲ್ಲಾ ಖರ್ಚುಮಾಡಿ Biogenesis ವಾದವನ್ನು ಲೂಯಿ ಪಾಶ್ಚರ್ ಸಾಬೀತು ಪಡಿಸಬೇಕಾಗಿತ್ತೆ ಎನಿಸಬಹುದು,ಆದರೆ ಅವನ ಸಂಶೋಧನೆಯ ಚಾರಿತ್ರಿಕ ಮಹತ್ವವನ್ನು ಕಾಲಾಂತರದಲ್ಲಿ ವೈಜ್ಞಾನಿಕ ಜಗತ್ತು ಮನಗಂಡಿದೆ.ವಾಸ್ತವವಾದಕ್ಕೆ ಮುಖಾಮುಖಿಯಾಗಿ ಸವಾಲುಗಳನ್ನು ದಿಟ್ಟವಾಗಿ ಎದುರಿಸಬಲ್ಲವ ಮಾತ್ರ ಶ್ರೇಷ್ಟ ವಿಜ್ಞಾನಿಯಾಗಬಲ್ಲ ಎಂಬುದಕ್ಕೆ ಲೂಯಿ ಪಾಶ್ಚರ್ ಸಾಕ್ಷಿ.ಜೀವವಿಕಾಸದ ರೋಚಕ ಇತಿಹಾಸವನ್ನು ನಮಗೆ ಸರಳ-ಸುಂದರವಾಗಿ ನಿರೂಪಿಸುತ್ತಿರುವ ಪೂಜ್ಯರಾದ ಸುಂದರ್ ರಾಮ್ ಸರ್ ನಿಮಗೆ ಧನ್ಯವಾದಗಳು.
    -ತಾಂಡವಮೂರ್ತಿ.ಎ.ಎನ್

    ReplyDelete
  4. ಅತ್ಯುತ್ತಮ ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ

    ReplyDelete