Thursday, November 4, 2021

ಪೋಷಕಾಂಶಗಳೇ ನಿಜವಾದ ಗೇಮ್‌ಚೆಂಜರ್

ಪೋಷಕಾಂಶಗಳೇ ನಿಜವಾದ ಗೇಮ್‌ಚೆಂಜರ್ /ಪೋಷಕಾಂಶಗಳಲ್ಲಿದೆ ಆರೋಗ್ಯದ ಗುಟ್ಟು 


ಲೇಖಕರು:

ವೆಂಕಿ ರಾಘವೇಂದ್ರ 

ಭಾರತಿ ಮಣೂರ್


ಪೋಷಕಾಂಶಗಳ ಮೂಲಕ ಆರೋಗ್ಯದ ಬಾಗಿಲನ್ನು ತೆರೆಯುವ ಪ್ರದೇಶಗಳಿಗಾಗಿ ಪ್ರಪಂಚದ ನಕ್ಷೆಯನ್ನು ಹುಡುಕಿದರೆ ಮೊದಲ ಸ್ಥಾನದಲ್ಲಿ ನಮಗೆ ಸಿಗುವುದು “ಇಕಿಗಾಯ್” ಜೀವನ ಶೈಲಿಯನ್ನು ಅನುಸರಿಸುವ ಒಕಿನಾವಾ ದ್ವೀಪ.  ಜಪಾನಿನ ನಡುಗಡ್ಡೆಯಲ್ಲಿ ವಾಸವಾಗಿರುವ ಜನ ಶತಾಯುಷಿಗಳಾಗಿ ವಿಶ್ವ ಗಿನ್ನಿಸ್ ದಾಖಲೆಯನ್ನು ಸೇರಿಕೊಂಡಿದ್ದಾರೆ.  ಇವರ ಆರೋಗ್ಯಕರ ಜೀವನ ಶೈಲಿಯಲ್ಲಿ ಪೋಷಕಾಂಶಗಳಿಂದ  ಕೂಡಿದ ಆಹಾರ ಮಹತ್ವದ ಪಾತ್ರ ವಹಿಸಿದೆ. ಹಾಗಾದರೆ ಈ ಜನ ಯಾವ ಅಹಾರವನ್ನು ಸೇವಿಸುತ್ತಾರೆ? ಎಷ್ಟು ಪ್ರಮಾಣದಲ್ಲಿ ಸೇವಿಸುತ್ತಾರೆ? ಯಾವಾಗ ಸೇವಿಸುತ್ತಾರೆ ? - ಎಂಬುದು ಪ್ರತಿಯೊಬ್ಬರ ಕುತೂಹಲದ ಪ್ರಶ್ನೆ.  ಒಕಿನಾವಾದ ಒಬ್ಬ ಶತಾಯುಷಿ ಹೇಳುವ ಪ್ರಕಾರ ವೈವಿದ್ಯಮಯ ಮತ್ತು ಸ್ವಾದಿಷ್ಟವಾದ ಆಹಾರ ಯಾವಾಗಲೂ ನನ್ನ ಆಯ್ಕೆ ಹಾಗೂ  ಆಹಾರದ ಅಯ್ಕೆಯಲ್ಲಿ ನಾನು ಯಾವಾಗಲೂ ನನ್ನ ಪೂರ್ವಜರ ದಾರಿಯನ್ನೇ ಅನುಸರಿಸುತ್ತೇನೆ ಎಂದು.  ಇಲ್ಲಿ ವೈವಿಧ್ಯಮಯ ಎಂಬುದು ತಯಾರಿಸಿದ ಆಹಾರವಾಗಿರದೇ ಪೋಷಕಾಂಶಗಳ ಸಂತೃಪ್ತತೆ ಎಂಬುದು  ಮುಖ್ಯವಾಗಿರುತ್ತದೆ.  ಶತಾಯುಷಿಗಳು ಮುಖ್ಯವಾಗಿ ಸ್ಥಳಿಯವಾಗಿ ಬೆಳೆಯುವ ಹಣ್ಣು ಮತ್ತು ತರಕಾರಿಗಳನ್ನು ಯಥೇಚ್ಛವಾಗಿ ಸೇವಿಸುತ್ತಾರೆ. ಅವರ ಊಟದ ತಟ್ಟೆಗಳಲ್ಲಿ ನಾರಿನಾಂಶಗಳಿಂದ ಕೂಡಿದ ಬೀನ್ಸಗಳಿಗೆ ವಿಶೇಷ ಸ್ಥಾನವಿದೆ.  ಸೋಯಾ ಬೀನ್ಗಳಿಂದ ತಯಾರಿಸಿದ ಹಾಲು ಮುಂತಾದವು ಪೋಷಕಾಂಶಗಳ ಖಜಾನೆ ಎಂದರೆ ತಪ್ಪಾಗಲಾರದು. ಕ್ಯಾಲ್ಸಿಯಂ, ನಾರಿನಾಂಶ, ಪ್ರೋಟೀನ್‌ಗಳಿಂದ ಸಮೃದ್ಧವಾದ ಎಳ್ಳು ಕಾಳುಗಳನ್ನು ದೀರ್ಘಾಯುಷ್ಯಕ್ಕಾಗಿ ಬಳಸುತ್ತಾರೆ.‌ ಅಣಬೆ, ಮೀನು, ಸಮುದ್ರಕಳೆ, ಮುಂತಾದವು ಜಪಾನಿನ ಆಹಾರ ತಟ್ಟೆಯ ಅಲಂಕಾರಗಳು.

ವಿಜ್ಞಾನಿಗಳ, ವೈದ್ಯರ,ಮತ್ತು ಜಿಬಿಡಿ(ಗ್ಲೋಬಲ್ಬರ್ಡನ್ಫ್ ಡಿಸಿಸ್) 2017 ಆಹಾರ ಸಹಯೋಗಿಗಳ ಒಟ್ಟು 130 ಜನರ ತಂಡ 1990 ರಿಂದ 2017 ರವರೆಗೆ ಸಾವಿಗೆ ಕಾರಣವಾಗುವ ಪ್ರಮುಖ ಅಂಶಗಳ ಅಧ್ಯಯನ ನಡೆಸಿ,‌ ಪ್ರತಿ ಐದು ಜನರಲ್ಲಿ ಒಬ್ಬರ ಮರಣಕ್ಕೆ ಅಪೌಷ್ಟಿಕತೆ ಕಾರಣ ಎಂಬ ಸತ್ಯವನ್ನು ತಿಳಿಸಿತಲ್ಲದೇ 2017 ರಲ್ಲಿ ಹನ್ನೊಂದು ಲಕ್ಷ ಸಾವುಗಳು ಇದೇ ಕಾರಣದಿಂದ ಸಂಭವಿಸಿರುವುದು ಎಂಬ ಆತಂಕಕಾರಿ ವಿಷಯವನ್ನು ಹೊರಹಾಕಿತು.  ಇಷ್ಟೊಂದು ಸಾವುಗಳಿಗೆ ಕಾರಣವಾಗಿರುವ ಈ ಅಪೌಷ್ಟಿಕತೆಯನ್ನು ನಿವಾರಿಸುವುದು ಯಾಕೆ ಸಾಧ್ಯವಾಗುತ್ತಿಲ್ಲ?.  ಇದು ಸಣ್ಣ ಮತ್ತು ಸರಳವಿಷಯವಲ್ಲವೇ?.  ಸೇವಿಸುವ ಆಹಾರದಲ್ಲಿ ಪೋಷಕಾಂಶಗಳನ್ನು ಸೇರಿಸಿಕೊಂಡರಾಯಿತು. ಅಷ್ಟೇ.  ಆದರೆ ಸರಳ ವಿಷಯಗಳೇ ಯಾವಾಗಲೂ ಸಂಕೀರ್ಣವಾಗಿರುತ್ತವೆ.  ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಹೊಂದಿರುವ ಆಹಾರ ಆರೋಗ್ಯಕರ ಜೀವನ ನಡೆಸಲು ಅತ್ಯವಶ್ಯಕ ಪೋಷಕಾಂಶಗಳನ್ನು ಯಥೇಚ್ಛವಾಗಿ ಹೊಂದಿರುವ ಆಹಾರದ ಸ್ವಾದವೂ ಅದ್ಭುತವೇ, ಪೋಷಕಾಂಶಗಳು ಬಡವ-ಬಲ್ಲಿದನೆಂಬ ತಾರತಮ್ಯವನ್ನು ಎಂದೂ ಮಾಡಿಲ್ಲ.  ಸಿರಿವಂತ, ಪರದೇಶದಿಂದ ತಂದು ತಿನ್ನುವ ಸೆಲೆರಿ ಸೊಪ್ಪಿಗಿಂತ ಹೆಚ್ಚಿನ ಪೋಷಕಾಂಶ ನಮ್ಮ ಹಿತ್ತಲದಲ್ಲಿ ಬೆಳೆಯುವ ನುಗ್ಗೆ ಸೊಪ್ಪು ಹೊಂದಿರುವುದೇ ಇದಕ್ಕೆ ಸಾಕ್ಷಿ. ಪೋಷಕಾಂಶಗಳನ್ನು ಆಸ್ಪತ್ರೆಯಲ್ಲಿ ಹುಡುಕುವ ಬದಲು ತಟ್ಟೆಯಲ್ಲಿ ಹುಡುಕುವುದು ಆರೋಗ್ಯಕ್ಕೆ ಇರುವ ರಾಜವೀಥಿ.


ಒಂದೇ ನಾಣ್ಯದ ಎರಡು ಮುಖಗಳಾಗಿದ್ದರೂ ಸ್ಥೂಲತೆಯು, ಬಡಕಲು ಶರೀರಗಳಷ್ಟು ವಿಶ್ವದ ಗಮನ ಸೆಳೆದಿಲ್ಲ. ಆಹಾರದಲ್ಲಿರುವ ಪೋಷಕಾಂಶಗಳ ಅಸಮತೋಲನವೂ ಸ್ಥೂಲತೆಗೆ ಕಾರಣ ಎಂದು ಅರಿಯದೇ ಕೇವಲ ಜೀವನ ಶೈಲಿ  ಮತ್ತು ಶ್ರೀಮಂತ ಆಹಾರ ಪದ್ದತಿ ಕಾರಣ ಎಂದು ಎಲ್ಲರೂ ಭಾವಿಸುತ್ತಾರೆ.  ಆದರೆ ಪ್ರಪಂಚದಲ್ಲಿ ಜನರ ಹದಗೆಡುತ್ತಿರುವ ಆರೋಗ್ಯ ಮತ್ತು ಅಕಾಲಿಕ ಸಾವುಗಳ ಕಾರಣವನ್ನು ಹುಡುಕುತ್ತಾ ಹೋದಾಗ ಅಚ್ಚರಿಯ ಫಲಿತಾಂಶಗಳು ಬೆಳಕಿಗೆ ಬಂದವು. ಅಮೇರಿಕಾದ ಮೆಸಾಚುಸೆಟ್ಸನ ಹೆಲ್ತ್ ಇಫೆಕ್ಟ್ನ್ಸ್ಟೀಟ್ಯೂಟ್ ಲಾಭರಹಿತ ನಿಗಮದ ಪ್ರಕಾರ ಮೊದಲನೇ ಸ್ಥಾನದಲ್ಲಿ ನಮಗೆ ಕಾಣುವುದು ಅಪೌಷ್ಟಿಕ ಆಹಾರ.  ಕರೋನಾ ಎಂಬ ಮಹಾಮಾರಿಯಿಂದ ಉಂಟಾಗುತ್ತಿರುವ ಜೀವಹಾನಿಗಿಂತ ಹಲವು ಪಟ್ಟು ಹೆಚ್ಚು ಭಯಂಕರವಾಗಿರುವ ಈ ಪೌಷ್ಟಿಕತೆಯ ಸಮಸ್ಯೆ ವರ್ಷಕ್ಕೊಂದು ಬಾರಿಯಾದರೂ ನಮ್ಮ ಗಮನ ಸೆಳೆಯುತ್ತದಯೇ?.

ಬ್ರೀಟಿಷ್ ನೌಕಾವೈದ್ಯ ಡಾ. ಜೇಮ್ಸ ಲಂಡ್ 1747 ರಲ್ಲಿ ಸಮುದ್ರಯಾನದಲ್ಲಿ ತಮ್ಮ ನಾವಿಕರ ಒಸಡುಗಳ ಭಯಾನಕ ರಕ್ತಸ್ರಾವ ಮತ್ತು ಅಸ್ವಸ್ಥತೆಯನ್ನು ಗಮನಿಸುತ್ತಾರೆ.  ಇದಕ್ಕೆ ಕಾರಣ ಅವರು ಸೇವಿಸುವ ಬ್ರೇಡ್ ಮತ್ತು ಮಾಂಸ ಎಂದು ಭಾವಿಸುತ್ತಾರೆ.  ತಮ್ಮ ನಾವಿಕರನ್ನು ಮೂರು ಗುಂಪುಗಳಾಗಿ ವಿಭಾಗಿಸಿ, ಒಂದನೇ ಗುಂಪಿಗೆ ಉಪ್ಪು ನೀರು, ಎರಡನೇ ಗುಂಪಿಗೆ ವಿನೇಗರ್ ಮತ್ತು ಮೂರನೇ ಗುಂಪಿಗೆ ಲಿಂಬೆಯನ್ನು ಬಳಸಲು ಕೊಡುತ್ತಾರೆ.  ಲಿಂಬೆಹಣ್ಣನ್ನು ಬಳಸಿದ ನಾವಿಕರ ಆರೂಗ್ಯ ಮರುಕಳಿಸುವುದರೊಂದಿಗೆ ವಿಟ್ಯಾಮಿನ್ ಸಿ ಯ ಅವಿಷ್ಕಾರವಾಗುತ್ತದೆ.  ಬ್ರಿಟಿಷ್ ಸರ್ಕಾರ ನೌಕಾಯಾನದಲ್ಲಿ ತನ್ನ ಎಲ್ಲಾ ನಾವಿಕರು  ಕಡ್ಡಾಯವಾಗಿ ತಮ್ಮೊಂದಿಗೆ ಸಿಟ್ರಸ್‌ ಅನ್ನು ತೆಗೆದುಕೊಂಡು ಹೋಗಬೇಕೆಂದು ಫರ್ಮಾನ್ ಹೊರಡಿಸಲು 264 ವರ್ಷಗಳೇ ಬೇಕಾಯಿತು!!.‌ ಇದರಿಂದ ನಾವು ಪೋಷಕಾಂಶಗಳಿಗೆ ಪ್ರಾಮುಖ್ಯತೆ ನೀಡಿ ಪರಿಗಣಿಸಿದ ಗತಿಯನ್ನು ಹಿಸಬಹುದಲ್ಲವೇ?. 

ನಮ್ಮಶರೀರಕ್ಕೆ ಒಟ್ಟು 150 ಪೋಷಕಾಂಶಗಳು ಬೇಕು.  ಇದರಲ್ಲಿ ಕಾರ್ಬೋಹೈಡ್ರೇಟ್ ,ಪ್ರೋಟಿನ್, ಮತ್ತು ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿ ಬೇಕಾದರೆ ವಿಟಮಿನ್,ಮತ್ತು ಖನಿಜಾಂಶಗಳು ಸಣ್ಣ ಪ್ರಮಾಣದಲ್ಲಿ ಬೇಕಾಗುತ್ತವೆ.  ವಿಟಮಿನ್ ಎಸಿಡಿಕೆಗಳ ಜೊತೆಗೆ ವಿಟಮಿನ್  ಬಿ1, ಬಿ2, ಬಿ3 ಮುಂತಾದವುಗಳ ಅವಶ್ಯಕತೆ ನಮ್ಮ ದೇಹಕ್ಕಿದೆ.  ಅಷ್ಟೇ ಅಲ್ಲದೇ ಕ್ಯಾಲ್ಸಿಯಂ, ಪೋಟ್ಯಾಷಿಯಂ, ಸೋಡಿಯಂನಂತಹ ಖನಿಜಾಂಶಗಳು ನಮ್ಮ ದೇಹಕ್ಕೆ ಬೇಕೇ ಬೇಕು.  ನಮ್ಮ ಶರೀರದ ಚಯಾಪಚಯ ಕ್ರಿಯೆಯಲ್ಲಿ ವ್ಯತ್ಯಾಸವಾದಾಗ, ಸೀಮಿತ ಅಂಶದ ನಿಯಮದ ಪ್ರಕಾರ ನಮ್ಮ ಶರೀರಕ್ಕೆ ಪೋಷಕಾಂಶಗಳು ಯಥೇಚ್ಛವಾಗಿ ದೊರೆತರೂ, ಕಡಿಮೆ ಪ್ರಮಾಣದಲ್ಲಿ ದೊರೆಯುವ ಒಂದು ಸಣ್ಣ ಪ್ರಮಾಣದ ಪೋಷಕಾಂಶವೂ ನಮ್ಮ ಆರೋಗ್ಯ ಸ್ಥಿತಿಯನ್ನು ನಿರ್ಧರಿಸುತ್ತದೆ.  ಆದ್ದರಿಂದ, ನಿರ್ಧಿಷ್ಟ ಪ್ರಮಾಣದಲ್ಲಿ ಪ್ರತಿಯೊಂದು ಪೋಷಕಾಂಶವು ನಮ್ಮ ಶರೀರದ ಸದೃಢತೆಯನ್ನು ಬಲಗೊಳಿಸುತ್ತದೆ. 

ರೋಮ್ ಆಧಾರಿತ ಅಂತರಾಷ್ಟ್ರೀಯ ಜೀವವೈವಿಧ್ಯತೆಯ ಪ್ರಕಾರ ಪ್ರಪಂಚದಲ್ಲಿ ಯೋಗ್ಯವಾಗಿರುವ ಆಹಾರಧಾನ್ಯಗಳ ಪೈಕಿ ಕೇವಲ 200 ಜಾತಿಯ ಆಹಾರ ಪದಾರ್ಥಗಳನ್ನು ಬೆಳೆಯಲಾಗುತ್ತದೆ.  ವಿಪರ್ಯಾಸವೆಂದರೆ ನಮ್ಮ ಆಹಾರದ ಪ್ರತಿಶತ 60 ಭಾಗವನ್ನು ಕೇವಲ ಅಕ್ಕಿ, ಜೋಳ, ಗೋಧಿ, ರಾಗಿ ಮತ್ತು ಮುಸುಕಿನ ಜೋಳಗಳಂತಹ ಕೇವಲ 5 ಧಾನ್ಯಗಳು ಆಕ್ರಮಿಸುತ್ತವೆ. 

ಜನಾಂಗದಿಂದ ಜನಾಂಗಕ್ಕೆ ಆಹಾರದ ಆಯ್ಕೆಯ ದಾರಿಯನ್ನು ನಾವು ಕಿರಿದಾಗಿಸುತ್ತಾ ದೀರ್ಘಕಾಲದ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ.  ಹಾಗಾದರೆ ಈ ಪೋಷಕಾಂಶಗಳನ್ನು ಅನಾಯಾಸವಾಗಿ ದೇಹಕ್ಕೆ ಸೇರಿಸುವ ಪರಿ ಯಾವುದು?. ನಮ್ಮ ಪೂರ್ವಜರು ಪ್ರಿತಿಯಿಂದ ಬೆಳೆಸಿ ಬಳಸಿದ ಸಿರಿಧಾನ್ಯಗಳು ಇದಕ್ಕೆ ಉತ್ತರವಾಗಬಹುದು. ಗೋಧಿಯಂತಹ ಆಹಾರ ಪದಾರ್ಥಗಳ ಗ್ಲುಟೆನಿನ್‌ನಿಂದ ಅಲರ್ಜಿ ಇರುವವರಿಗೆ ಈ ಸಿರಿಧಾನ್ಯಗಳು ವರದಾನವಾಗಿವೆ. ‘ಪವಾಡ ಧಾನ್ಯಗಳು’ ಅಥವಾ ‘ಭವಿಷ್ಯದ ಬೆಳೆಗಳು’ ಎಂದು ಕರೆಯಲಾಗುವ ಈ ಧಾನ್ಯಗಳು ತೇವಾಂಶ ಕಡಿಮೆ ಇರುವ ಬರಡು ಭೂಮಿಯಲ್ಲಿ ಅನಾಯಾಸವಾಗಿ ಬೆಳೆದು ದೇಶದ ಆರ್ಥಿಕತೆಯನ್ನು ಬೆಂಬಲಿಸುತ್ತವೆ.  ಅರ್ಕ, ಉದುಲು, ನೆವಣಿ, ಸಾಮೆ, ಕೊರ್ಲೆ ಮುಂತಾದವು ಜನಪ್ರಿಯ ಸಿರಿಧಾನ್ಯಗಳು. ಗ್ರಾನೊವಾ ನಾಚುರಲ್ಸ್ ಇಂಡಿಯಾ ಪ್ರೈವೇಟ್‌ಲಿಮಿಟೆಡ್‌ನ ಸಂಸ್ಥಾಪಕ ಹಾಗೂ ಸಂಶೋಧನೆ ಮತ್ತು ಅಭಿವೃದ್ದಿ ವಿಭಾಗದ ವಿಜ್ಞಾನಿ ಮತ್ತು ಶಿಕ್ಷಕರಾಗಿರುವ  ಶ್ರೀನಿವಾಸ ಕೆ. ರಾವ್ ರವರು ಭಾರತದಲ್ಲಿ ಅಮೇರಿಕಾ ಮೂಲದ ಕಿನೋವಾ ಎಂಬ ಸಿರಿದಾನ್ಯ ಬೆಳೆಯಲು ತಂತ್ರವನ್ನು ರೂಪಿಸಿವಲ್ಲಿ ಮುಖ್ಯ ಪಾತ್ರವಹಿಸಿದರಲ್ಲದೇ, ಹಿಮಾಲಯದಲ್ಲಿ ಕಿನೋವಾ ಬೆಳೆಯುವ ಯೋಜನೆಗೆ ನಾಂದಿಹಾಡಿದರು. ಜಾಕ್‌ವೆದರ್‌ಫೊರ್ಡ್‌ರವರು ಹೇಳುವ ಹಾಗೆ ಈ ಉನ್ನತ ತಂತ್ರಜ್ಞಾನದ ಯುಗದಲ್ಲಿಯೂ ಸಹ, ಕಡಿಮೆ ತಂತ್ರಜ್ಞಾನದ ಸಸ್ಯಗಳು ಪೋಷಣೆ ಮತ್ತು ಆರೋಗ್ಯದ ಕೀಲಿಕೈಯಾಗಿ ಮುಂದುವರೆದಿವೆ.

ಇತ್ತಿಚಿಗೆ ಮಾರುಕಟ್ಟೆಗಳಲ್ಲಿ, ”ಸೂಪರ್ ಫುಡ್” ಎಂದು ಬಳಕೆಯಲ್ಲಿರುವ ಬೆರ್ರಿ, ಸೋಯಾ, ಸಾಲ್ಮನ್ ಮೀನು, ಬೆಣ್ಣೆಹಣ್ಣು, ಮುಂತಾದ  ಆಹಾರ ಪದಾರ್ಥಗಳು ಕೊಳ್ಳುವವರ ಗಮನ ಸೆಳೆದಿವೆ.  ಸೂಪರ್ ಫುಡ್ ಎಂಬ ಪದ ಅತ್ಯಧಿಕ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಮತ್ತು ಕಡಿಮೆ ಕ್ಯಾಲರಿ ಹೊಂದಿರುವ ಆಹಾರ ಎಂಬ ಅರ್ಥವನ್ನು ಕೊಟ್ಟರೂ ಕೂಡಾ ವಿಕಿಪಿಡಿಯಾ ಮಾಹಿತಿ ಪ್ರಕಾರ,  ಸೂಪರ್ ಫುಡ್ ಇದು 1949ರಲ್ಲಿ ಕೆನಡಾದ ಒಂದು ಪತ್ರಿಕೆ ಬಳಸಿರುವ ಪದ  ಮಾತ್ರವೇ. ಯೂನೈಟೆಡ್ ಕಿಂಗ್ಡಮ್ ನ ಕ್ಯಾನ್ಸರ್ ರಿಸರ್ಚ್ ಸಂಸ್ಥೆಯ ಪ್ರಕಾರ ಸೂಪರ್ ಫುಡ್ ಎಂಬುದು ಯಾವುದೇ ವೈಜ್ಞಾನಿಕ ಹಿನ್ನೆಲೆ ಇಲ್ಲದ, ಕೇವಲ ಸರಕಿನ ಬಿಕರಿಗಾಗಿ ಕಂಪನಿಗಳು ಬಳಸಿರುವ ಒಂದು ಸಾಧನ ಅಷ್ಟೆ.  ನಾವು ವಾಸಿಸುವ ವಾತಾವರಣದಲ್ಲಿ ತಕ್ಷಣ ಉಪಯೋಗಕ್ಕೆ ಸಿಗುವ ಎಲ್ಲಾ ಹಣ್ಣು, ತರಕಾರಿ, ಆಹಾರ ಧಾನ್ಯಗಳೇ ಶ್ರೇಷ್ಟ ಆಹಾರಗಳು.  ಹೊರದೇಶದ ಹಣ್ಣು ತರಕಾರಿಗಳು ಕೇವಲ ಸಾಂಸ್ಕ್ರತಿಕ ರಾಯಭಾರಿಗಳಾಗಬೇಕು ಅಷ್ಟೆ.

ಆಹಾರ ಪದಾರ್ಥಗಳ ಆಯ್ಕೆಯನ್ನು ಶ್ರೇಷ್ಠ ಮತ್ತು ಕನಿಷ್ಠ ಎಂಬ ಅಳತೆ ಪಟ್ಟಿಯಲ್ಲಿ ಮೂಲಕ ಮಾಡದೇ ಕೇವಲ ಅವುಗಳ ರಾಸಾಯನಿಕ ಸಂಯೋಜನೆಯನ್ನು (ಮೈಕ್ರೋ ಮತ್ತು ಮ್ಯಾಕ್ರೋ ಪೋಷಕಾಂಶಗಳು) ಅರಿತು ಆಯ್ಕೆ ಮಾಡಲು ನಮಗೆ ಸಹಾಯ ಮಾಡುವುದು ಫುಡ್-ಬಿ.  ಫುಡ್-ಬಿ ಆಹಾರ ಪದಾರ್ಥಗಳ ರುಚಿ, ಬಣ್ಣ, ಮತ್ತು  ಸುವಾಸನೆಯಂತಹ ಘಟಕಗಳ ಸಮಗ್ರ ಮಾಹಿತಿ ನೀಡುವ ವಿಶ್ವದ ಅತ್ಯಂತ ದೊಡ್ಡ ಮತ್ತು ವ್ಯಾಪಕ ಡೆಟಾಬೆಸ್‌ ಸಂಪನ್ಮೂಲವಾಗಿದೆ. ಇದರಲ್ಲಿ ಸಾವಿರಕ್ಕೂ ಹೆಚ್ಚು, ಕಚ್ಚಾ ಅಥವಾ ಸಂಸ್ಕರಿಸಿದ ಆಹಾರ ಸಾಮಗ್ರಿಗಳಲ್ಲಿ ಕಂಡುಬರುವ 28 ಸಾವಿರಕ್ಕೂ ಹೆಚ್ಚು ರಾಸಾಯನಿಕಗಳ ಮಾಹಿತಿ ಇದೆ. 

ಈ ಮಾಹಿತಿಯನ್ನು ಸಾರ್ವಜನಿಕ ಆರೋಗ್ಯ ನೀತಿಗಳನ್ನು ರೂಪಿಸಲು, ಆಹಾರ ಕಂಪನಿಗಳು ಆಹಾರ ಘಟಕಗಳ ಲೇಬಲಿಂಗ್‌ ಮಾಡಲು, ನ್ಯೂಟ್ರಾಸ್ಯೂಟಿಕಲ್ ಕಂಪನಿಗಳು ಆರೋಗ್ಯ ಹಕ್ಕುಗಳಿಗಾಗಿ ಮತ್ತು ಗ್ರಾಹಕರಿಗೆ ಖರೀದಿಯಲ್ಲಿ ಸಹಾಯ ಮಾಡಲು ಬಳಸಲಾಗುತ್ತದೆ. ಪೋಶಕಾಂಶಗಳು ಮಣ್ಣಿನಿಂದ,ಮನುಷ್ಯನ ಶರೀರ ಸೇರುವ ವರೆಗೆ ಆರೋಗ್ಯ, ಶಿಕ್ಷಣ ಮುಂತಾದ ಇಲಾಖೆಗಳ ಜಂಟಿ ಪ್ರಯತ್ನವೂ ಕೂಡಾ ಅವಶ್ಯವಾಗಿದೆ, ಜೊತೆಗೆ ಎಲ್ಲ ಅಭಿವೃದ್ಧಿ ಕಾರ್ಯಗಳಲ್ಲಿ ಸರ್ಕಾರದೊಂದಿಗೆ ಕೈಜೊಡಿಸುವ ನಮ್ಮ ಸೆಲೆಬ್ರೆಟಿಗಳು ಪೋಷಕಾಂಶಗಳ ಜ್ಞಾನ ಪಸರಿಸುವಿಕೆಯಲ್ಲೂ ಭಾಗವಹಿಸಿದರೆ ಅದರ ಮಹತ್ವ ಇನ್ನೂ ಹೆಚ್ಚಾಗಬಹುದು.

ಒಟ್ಟಿನಲ್ಲಿ ಇವತ್ತು ನಾವು ಆಹಾರವನ್ನು ಔಷಧಿಯ ಹಾಗೇ ಸೇವಿಸಿದರೆ ಮುಂದೊಂದು ದಿನ ಔಷಧವನ್ನು ಆಹಾರದ ಹಾಗೇ ಸೇವಿಸುವುದನ್ನು ತಪ್ಪಿಸಬಹುದು. ನಿಯಮಿತ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಹೊಂದಿರುವ ಆಹಾರ ಔಷಧಿಯೊಂದಿಗೆ ಅಮೃತವೂ ಹೌದು ಎನ್ನುವುದರಲ್ಲಿ ಎರಡು ಮಾತಿಲ್ಲ.

Foodb link ಗಾಗಿ ಈ ಕೊಂಡಿಯನ್ನು ಬಳಸಿ https://foodb.ca/


1 comment:

  1. ಉತ್ತಮ ಮತ್ತು ಅಗತ್ಯ ಲೇಖನ ಮೇಡಂ. ಪ್ರಜಾವಾಣಿಯಲ್ಲಿ ಓದಿದ್ದೆ. ಈಗ ಬ್ಲಾಗ್‌ ಮೂಲಕ ಪ್ರಕಟವಾಗಿದ್ದು ಖುಷಿಯಾಯ್ತು.

    ReplyDelete