Saturday, December 4, 2021

ಸಂಪಾದಕರ ಡೈರಿಯಿಂದ

ಸಂಪಾದಕರ ಡೈರಿಯಿಂದ  

ಇದು ‘ಸವಿಜ್ಞಾನ’ ಇ-ಪತ್ರಿಕೆಯ ಹನ್ನೆರಡನೆಯ ಸಂಚಿಕೆ. ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ನಮ್ಮನ್ನು ಹೃತ್ಪೂರ್ವಕವಾಗಿ ಪ್ರೋತ್ಸಾಹಿಸುತ್ತಿರುವ ನಮ್ಮ ಎಲ್ಲ ಓದುಗ ವಿಜ್ಞಾನ ಶಿಕ್ಷಕರಿಗೆ ಮತ್ತು ವಿಜ್ಞಾನಾಸಕ್ತರಿಗೆ ಹಾಗೂ ಲೇಖಕ ಬಂಧುಗಳಿಗೆ ನನ್ನ ಅನಂತ ವಂದನೆಗಳು.

ಈ ಬಾರಿಯ ಡಿಸೆಂಬರ್ ತಿಂಗಳ ಸಂಚಿಕೆಯೂ ಹಲವು ಉಪಯುಕ್ತ ಹಾಗೂ ಮಾಹಿತಿಪೂರ್ಣ ಲೇಖನಗಳನ್ನು ನಿಮಗಾಗಿ ಹೊತ್ತು ತಂದಿದೆ.  ವಿಜ್ಞಾನಿಗಳು ನಡೆಸುವ ಸಂಶೋಧನೆಯ ಹಾದಿಯಲ್ಲಿ ಕೆಲವೊಮ್ಮೆ ನಿರೀಕ್ಷೆಗೆ ಮೀರಿ ಸಿಕ್ಕ ಆಕಸ್ಮಿಕ ಫಲಿತಾಂಶಗಳು  ಹೇಗೆ  ಹೊಸ ಅವಿಷ್ಕಾರಗಳಿಗೆ ಕಾರಣವಾದುವು ಎಂಬುದನ್ನು ತಿಳಿಸುವ ಡಾ. ಎಂ.ಜೆ ಸುಂದರರಾಂ ಅವರ ಕುತೂಹಲಕರ ಲೇಖನದ ಮೊದಲ ಭಾಗ ಈ ಸಂಚಿಕೆಯಲ್ಲಿದೆ.  ಜಲವಾಸಿ ಹಕ್ಕಿಗಳ ಬಗ್ಗೆ ಮಾಹಿತಿ ನೀಡುವ ಕೃಷ್ಣ ಚೈತನ್ಯ ಅವರ ಲೇಖನವಿದೆ. ಗಣಿತ ಮಾಂತ್ರಿಕ ರಾಮಾನುಜಮ್ ಅವರ ಜನ್ಮ ದಿನದ ಸಂದರ್ಭದಲ್ಲಿ ಅನಿಲ್ ಕುಮಾರ್ ಬರೆದ ಲೇಖವಿದೆ. ಗೊಂಬೆಗಳ ಮೂಲಕ ವಿಜ್ಞಾನ ಕಲಿಸುವ ಶಿಕ್ಷಕ ಬಿರಾದಾರ್ ಅವರು ಈ ಬಾರಿ ಬೆರಳಿನ ಗೊಂಬೆಗಳನ್ನು ನಿಮಗೆ ಪರಿಚಯಿಸಿದ್ದಾರೆ. ವಿಶ್ವ ಮಣ್ಣು ದಿನಕ್ಕೆ ಸಂಬಂಧಿಸಿದಂತೆ ತಾಂಡವಮೂರ್ತಿ ಬರೆದ ಸಾಂದರ್ಭಿಕ ಲೇಖನವಿದೆ. ನಿಮ್ಮಲ್ಲಿ ಬಹು ಮಂದಿ ಬಯಸಿದಂತೆ ವಿಜ್ಞಾನ ನಾಟಕವೊಂದನ್ನು ನಿಮಗಾಗಿ ಬರೆದಿದ್ದಾರೆ, ವಿಜಯಕುಮಾರ್ ಅವರು. ಇವೆಲ್ಲದರ ಜೊತೆಗೆ, ಎಂದಿನಂತೆ ನಿಮ್ಮ ಮೆಚ್ಚುಗೆಗೆ ಪಾತ್ರವಾಗಿರುವ ವಿಜ್ಞಾನದ ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳೂ ಇವೆ.

ಬರುವ ಜನವರಿ 2022ರ ಸಂಚಿಕೆ ನಮ್ಮ ಮೊದಲ ವಾರ್ಷಿಕ ಸಂಚಿಕೆಯಾಗಿ ಪ್ರಕಟವಾಗಲಿದೆ. ನಿಮ್ಮ ಕುತೂಹಲ ತಣಿಸುವ ಹಲವು ಲೇಖನಗಳೊಂದಿಗೆ ಈ ಸಂಚಿಕೆ ಹೊರಬರಲಿದೆ. ಅದಕ್ಕೆ ಸಂಬಂಧಿಸಿದಂತೆ ನಿಮ್ಮ ಸಲಹೆಗಳಿಗೆ ಮುಕ್ತ ಸ್ವಾಗತವಿದೆ. ಮಿಂಚಂಚೆಯ ಮೂಲಕ ತಿಳಿಸಿ. 

ಡಾ. ಟಿ. ಎ. ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು

No comments:

Post a Comment