ಯಾರು ಕ್ರೂರಿ? ಹುಲಿಗಳೋ? ಮಾನವರೋ?
ಡಿ. ಕೃಷ್ಣಚೈತನ್ಯ ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.ಕೊಡಗು ಜಿಲ್ಲೆ.
ಈ ಹಿಂದಿನ ಸಂಚಿಕೆಗಳಲ್ಲಿ ಪಕ್ಷಿ ವೀಕ್ಷಣೆಯ ಬಗ್ಗೆ ಹಾಗೂ ಕೆಲವು ವಿಶಿಷ್ಟ ಹಕ್ಕಿಗಳ ಬಗ್ಗೆ ಮಾಹಿತಿ ನೀಡುವ ಲೇಖನಗಳನ್ನು ಬರೆದಿದ್ದ, ವಿಜ್ಞಾನ ಶಿಕ್ಷಕ ಡಿ.ಕೃಷ್ಣ ಚೈತನ್ಯ ಅವರು ಈ ಬಾರಿ ನಮ್ಮ ರಾಷ್ಟಿçÃಯ ಪ್ರಾಣಿಯಾದ ಹುಲಿಗಳ ಜೀವನ ಕ್ರಮದ ಬಗ್ಗೆ ಬೆಳಕು ಚೆಲ್ಲುವ ಲೇಖನ ಬರೆದಿದ್ದಾರೆ. ಈ ಲೇಖನ ಓದಿದ ಮೇಲೆ ಬಹುಷ: ನಾವೆಲ್ಲರೂ ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬೇಕಿದೆ-ಯಾರು ಕ್ರೂರಿ, ಹುಲಿಗಳೋ, ಮಾನವರೋ? ಎಂದು !ಹುಲಿ
ಹುಲಿ ಎಂಥ ಪ್ರಾಣಿ ಎಂದು ಯಾರಿಗಾದರೂ
ಕೇಳಿದರೆ ದೊಡ್ಡವರಾದಿಯಾಗಿ ಮಕ್ಕಳೆಲ್ಲರೂ ಅದೊಂದು ಭಯಂಕರ ಪ್ರಾಣಿ ಎಂದೋ, ಕ್ರೂರ ಪ್ರಾಣಿ ಎಂದೋ ಅಥವಾ ದುಷ್ಟ ಪ್ರಾಣಿ ಎಂದು ಉತ್ತರಿಸುವುದರಲ್ಲಿ
ಅನುಮಾನವೇ ಇಲ್ಲ. ನಾನೂ ಸಹ ಹಲವಾರು ಮಕ್ಕಳಲ್ಲಿ ಈ ಪ್ರಶ್ನೆಯನ್ನು ಮುಂದಿಟ್ಟಿದ್ದೇನೆ. ಎಲ್ಲಾ
ಸಂದರ್ಭದಲ್ಲಿಯೂ ಮೇಲಿನ ಉತ್ತರವೇ ಸಿಕ್ಕಿದೆ. ಅವರು ಹೇಳುವುದರಲ್ಲಿ ತಪ್ಪೇನಿಲ್ಲ ಬಿಡಿ.
ಏಕೆಂದರೆ ನಾವು ಅದರ ವಿಷಯವನ್ನು ಓದಿರುವ, ಕಲಿತಿರುವ, ಪುಸ್ತಕಗಳಲ್ಲಿ ಅಷ್ಟೇ ಏಕೆ, ಕೇಳಿರುವ ಕತೆಗಳಲ್ಲಿ ಅದನ್ನು ಮೇಲಿನಂತೆಯೇ ವೈಭವೀಕರಿಸಿದ್ದಾರೆ!
ಅಲ್ಲವೇ?
ಗೋವಿನ ಹಾಡಿನಲ್ಲಿಯೂ ಕೊನೆಯ ಚರಣಗಳಲ್ಲಿ ‘ದುಷ್ಟ ವ್ಯಾಘ್ರ ನೆ ನೀನಿದೆಲ್ಲವ ಉಂಡು ಸಂತಸದಿಂದಿರು’ ಎಂದೇ ವರ್ಣಿಸಿದ್ದಾರೆ.
ನಿಜವಾಗಿಯೂ ಹುಲಿ ದುಷ್ಟ, ಕ್ರೂರಅಥವಾ ಭಯಂಕರ
ಪ್ರಾಣಿಯೇ?
ಅದಕ್ಕಿಂತಲೂ ದುಷ್ಟ, ಕ್ರೂರ ಪ್ರಾಣಿ ಈ ಭೂಮಿಯ ಮೇಲೆ ಇದೆಯೆ? ಹುಲಿ ಏಕೆ ಬೇಟೆಯಾಡುತ್ತದೆ? ಎನ್ನವ ಪ್ರಶ್ನೆಗಳು
ನಮ್ಮ ಮನಸ್ಸಿನಲ್ಲಿ ಕಾಡಬಹುದು ಅಲ್ಲವೇ? ಇವೆಲ್ಲದಕ್ಕೂ ಉತ್ತರ
ಅದರ ಜೀವನಕ್ರಮವನ್ನು ಅಧ್ಯಯನ ಮಾಡಿದಾಗ ಮಾತ್ರ ನಮಗೆ ತಿಳಿಯುತ್ತದೆ
ಹುಲಿಗಳ ಬಾಲ್ಯ
ಪ್ರೌಢಾವಸ್ಥೆ
ಎರಡು ವರ್ಷಗಳಲ್ಲಿ ಮರಿಹುಲಿಗಳು ಬೆಳೆದು
ಪ್ರೌಢಾವಸ್ಥೆ ತಲುಪುತ್ತವೆ. ಆಗ ತಾಯಿ ಹುಲಿ ತನ್ನ ಮರಿಗಳನ್ನು ಜಗಳವಾಡಿ ಬೆರೆಡೆಗೆ
ಓಡಿಸುತ್ತದೆ. ಆ ಹುಲಿಗಳಿಗೆ ನಿಜವಾದ ಸವಾಲುಗಳು ಎದುರಾಗುವುದು ಇಲ್ಲಿಂದಲೇ. ಮೊದಲನೆಯ
ಸವಾಲೆಂದರೆ, ತಾಯಿ ಇಲ್ಲದೆ ಜೀವನ ನಡೆಸುವುದು.
ಇಲ್ಲಿಯವರೆಗೂ ತಾಯಿ ಬೇಟೆಯಾಡಿದ ಬಲಿ ತಿನ್ನುತ್ತಿದ್ದ ಹುಲಿಗಳಿಗೆ ಈಗ ಸ್ವತಂತ್ರವಾಗಿ
ಬೇಟೆಯಾಡಬೇಕಾದ ಸಂದರ್ಭ ಒದಗಿ ಬರುತ್ತದೆ. ಬೇಟೆಯಾಡುವಾಗ ಎಷ್ಟೋ ಬಾರಿ ಮುಗ್ಗರಿಸುತ್ತವೆ.
ಮನುಷ್ಯರಿಗೆ ಅವರ ತಂದೆ, ತಾಯಿಯರು ಕಲಿಸಿದರೆ, ಹುಲಿಗಳು ಕಾಡಿನಲ್ಲಿ ತಮ್ಮ ಅನುಭವಗಳಿಂದಲೇ ಎಲ್ಲವನ್ನು
ಕಲಿಯಬೇಕಾಗುತ್ತದೆ.
ಆವಾಸ
ಮನುಷ್ಯನಿಗೆ ವಾಸಿಸಲು 30x40 ಅಥವಾ 60x40 ಅಡಿ ಜಾಗ ಸಾಕಾದರೆ, ಹುಲಿಗಳಿಗೆ ವಾಸಿಸಲು ಸುಮಾರು 15-20 ಚದರ ಕಿ.ಮೀ. ಗಳಷ್ಟು ಅರಣ್ಯ ಪ್ರದೇಶ ಬೇಕಾಗುತ್ತದೆ. ತನ್ನ ನೆಲೆಯ ವ್ಯಾಪ್ತಿಯಲ್ಲಿ ಬಲಿ ಪ್ರಾಣಿಗಳ ಲಭ್ಯತೆಯನ್ನು ಇದು ಅವಲಂಬಿಸಿರುತ್ತದೆ. ಬಲಿ ಪ್ರಾಣಿಗಳ ಲಭ್ಯತೆ ವಿರಳವಾದರೆ, ಹುಲಿಯ ಆವಾಸ ಹಿರಿದಾಗುತ್ತದೆ. ಅದೇ ಬಲಿ ಪ್ರಾಣಿಗಳು ಹೆಚ್ಚಿದ್ದರೆ, ಆವಾಸದ ವ್ಯಾಪ್ತಿ ಕಿರಿದಾಗುತ್ತದೆ. ನಾಗರಹೊಳೆಯಲ್ಲಿ ಪ್ರಸ್ತುತ 5 ರಿಂದ 6 ಕಿ.ಮೀ. ಇದೆ ಎಂಬ ವಿಷಯ ಅಲ್ಲಿ ಬಲಿ ಪ್ರಾಣಿಗಳ ಸಂಖ್ಯೆ ಹೆಚ್ಚಿದೆ ಎಂಬುದನ್ನು ಮತ್ತು ಸಂರಕ್ಷಣಾ ಕ್ರಮಗಳು ಉತ್ತಮವಾಗಿವೆ ಎಂಬುದನ್ನು ಸೂಚಿಸುತ್ತದೆ.ಹುಲಿಗಳು ತಮ್ಮ ಆವಾಸದ ಸುತ್ತ ಒಂದು ನೈಸರ್ಗಿಕ ಬೇಲಿಯನ್ನು ನಿರ್ಮಿಸಿಕೊಳ್ಳುತ್ತವೆ. ಮಲವಿಸರ್ಜನೆ, ಮೂತ್ರವಿಸರ್ಜನೆ ಮತ್ತು ಮರಗಳ ಕಾಂಡದ ಮೇಲೆ ತನ್ನ ಪಂಜ(ಉಗುರು)ದಿಂದ ತಮಗೆ ಎಟುಕುವಷ್ಟು ಎತ್ತರಕ್ಕೆ ಗೀರುಗಳನ್ನು ಮಾಡಿ ತಮ್ಮ ಮನೆಯ ಸುತ್ತಲೂ ಗುರುತು ಮಾಡಿಕೊಳ್ಳುತ್ತವೆ. ಈ ಬೇಲಿಯನ್ನು ಬೇರೆ ಯಾವುದಾದರೂ ಹುಲಿ ಅತಿಕ್ರಮಿಸಿ ಒಳಬಂದರೆ ಅವೆರಡರ ನಡುವೆ ಸಂಘರ್ಷ ಪ್ರಾರಂಭವಾಗುತ್ತದೆ. ಒಳಬರುವ ಹುಲಿ ಮೊದಲು ಆ ಬೇಲಿಯನ್ನು ಪರೀಕ್ಷಿಸಲು ಮರೆಯುವುದೇ ಇಲ್ಲ. ಆವಾಸದಲ್ಲಿರುವ ಹುಲಿ ವಾಹನಗಳ ಚಕ್ರದ ಜಾಡಿನ ಮಧ್ಯದಲ್ಲಿ ಅಥವಾ ಆ ಕಡೆ, ಈಕಡೆ ಮಲವಿಸರ್ಜನೆ ಮಾಡುತ್ತದೆ. ಇದನ್ನು ಸ್ಕ್ಯಾಟ್ ಎನ್ನಲಾಗುತ್ತದೆ. ಅದು ದೀರ್ಘಕಾಲ ಹಾಗೆಯೇ ಉಳಿದು ಒಳ ಬರುವ ಇತರ ಹುಲಿಗಳಿಗೆ ತನ್ನ ಇರವನ್ನು ಸೂಚಿಸಲಿಕ್ಕೆ ನೆರವಾಗುತ್ತದೆ. ಆ ಪ್ರದೇಶಕ್ಕೆ ಬರುವ ಇತರ ಹುಲಿಗಳು ಈ ಮಲವಿಸರ್ಜನೆಯನ್ನು ಪರೀಕ್ಷಿಸಿ, ಇದು ಹಳೆಯದೋ ಅಥವಾ ಹೊಸತೋ ಎಂದು, ಮೂತ್ರ ವಿಸರ್ಜನೆಯಲ್ಲಿರುವ ಘಾಟು ಕಡಿಮೆ ಇದೆಯೋ ಅಥವಾ ಇತ್ತೀಚಿನದೋ ಎಂದು ತಿಳಿದುಕೊಳ್ಳುತ್ತವೆ. ಜೊತೆಗೆ, ಮರಗಳ ಕಾಂಡಗಳ ಮೇಲಿರುವ ಗೀರುಗಳನ್ನು ಪರೀಕ್ಷಿಸಿ ತಾನೂ ಸಹ ಗೆರೆಗಳ ಪಕ್ಕದಲ್ಲಿ ಅಥವಾ ಅವುಗಳ ಮೇಲೆಯೇ ಗೀರು ಮೂಡಿಸುತ್ತವೆ. ತಾನು ಗೀಚಿದ ಗೆರೆ ಮೊದಲಿನ ಗೆರೆಗಿಂತ ಉನ್ನತವಾಗಿದ್ದರೆ ತಾನೇ ಬಲಿಷ್ಟನೆಂದು ನಿರ್ಧರಿಸಿ, ಆ ಪ್ರದೇಶದೊಳಕ್ಕೆ ಪ್ರವೇಶಿಸುತ್ತದೆ. ಮೊದಲಿನ ಗೆರೆಗಳಿಗಿಂತ ಕೆಳಮಟ್ಟದಲ್ಲಿದ್ದರೆ ತಾನೇ ದುರ್ಬಲನೆಂದು ತಿಳಿದು ಜಾಗ ಖಾಲಿ ಮಾಡುತ್ತದೆ !
ಆಹಾರ ಕ್ರಮ
ಹುಲಿ ಮುಖ್ಯವಾಗಿ ಮಾಂಸಾಹಾರಿ ಪ್ರಾಣಿ.
ತನ್ನ ಆಹಾರವನ್ನು ಸಂಪಾದಿಸಿಕೊಳ್ಳಬೇಕಾದರೆ ಅದು ಬೇಟೆ ಆಡಲೇಬೇಕು. ಹಾಗಾಗಿ, ಅದು ತನ್ನ ಆಹಾರದ(ಬಲಿ) ಪ್ರಾಣಿಗಾಗಿ ಹೊಂಚುಹಾಕಿ ಬೇಟೆ
ಸಂಪಾದಿಸಬೇಕು. ನಾವು ನೋಡುವ ಡಿಸ್ಕವರಿ ಅಥವಾ ಅನಿಮಲ್ ಪ್ಲಾನೆಟ್ ಅಥವಾ ನ್ಯಾಷನಲ್ ಜಿಯಾಗ್ರಫಿಕ್
ವಾಹಿನಿಗಳಲ್ಲಿ ಕೆಲವೊಮ್ಮೆ ಒಂದೇ ಬಾರಿಗೆ ಹುಲಿ ಬೇಟೆಯಾಡುವುದನ್ನು ನೋಡಿ ಅದೆಂಥ ಕ್ರೂರಿ
ಎನಿಸಿರಬಹುದು. ಅದನ್ನು ಕ್ರೂರಿ ಎನ್ನುವುದರಲ್ಲಿ ಅರ್ಥವಿಲ್ಲ. ಅದರ ಆಹಾರ ಕ್ರಮವೇ ಹಾಗಿರುವಾಗ.
ಆದರೆ,
ವಾಸ್ತವಾಂಶದಲ್ಲಿ ಹುಲಿ ಬೇಟೆಯಾಡುವುದು ಅಷ್ಟು ಸುಲಭವಲ್ಲ. ಒಂದು
ಬಲಿಪ್ರಾಣಿಯನ್ನು ಬೇಟೆಯಾಡಲು ಅದು ಸುಮಾರು 15-20 ಬಾರಿ ಪ್ರಯತ್ನಿಸಬೇಕು ಎಂದರೆ ನಿಮಗೆ
ಆಶ್ಚರ್ಯವಾಗಬಹುದು. ಆದರೆ, ಅದು ನಿಜ.
ಕಾಡಿನಲ್ಲಿ ಅದಕ್ಕೆ ಶತ್ರುಗಳು ಇಲ್ಲವೆಂದೇನಿಲ್ಲ. ನಾಗರಹೊಳೆ, ಬಂಡೀಪುರದಂಥ ಕಾಡುಗಳಲ್ಲಿ
ವಾಸಿಸುವ ಮುಸುವ ಮರಗಳ ಮೇಲಿನಿಂದ ದೂರದಲ್ಲಿ ಬರುವ ಹುಲಿಯನ್ನು ಗುರುತಿಸಿ ಸಂಜ್ಞೆ ಕೊಟ್ಟು
ಜಿಂಕೆಗಳನ್ನು ಎಚ್ಚರಿಸುವ ಪ್ರಾಣಿ. ಈ ವಿಚಾರದಲ್ಲಿ ಕೆಲವು ಪಕ್ಷಿಗಳು ಏನೂ ಕಡಿಮೆ ಇಲ್ಲ. ಕೆಲವು
ವೇಳೆ ದೂರದಿಂದಲೇ ಗಮನಿಸಿಬಿಡುವ ಜಿಂಕೆಗಳು ಭಯದ ಕರೆಕೊಟ್ಟು ಅರ್ಧ ಕಿಲೋಮೀಟರ್
ವ್ಯಾಪ್ತಿಯಲ್ಲಿರುವ ಎಲ್ಲಾ ಪ್ರಾಣಿಗಳಿಗೂ ಎಚ್ಚರಿಕೆ ಕೊಟ್ಟುಬಿಡುತ್ತವೆ. ಇಷ್ಟೆಲ್ಲವನ್ನೂ ದಾಟಿ
ಬಲಿಪ್ರಾಣಿಯನ್ನು ಸಮೀಪಿಸುವ ಹುಲಿಗಳಿಗೆ ತುಂಬಾ ಏಕಾಗ್ರತೆ, ಎಚ್ಚರಿಕೆ ಅತ್ಯವಶ್ಯ.
ಸಸ್ಯಹಾರಿ ಪ್ರಾಣಿಗಳಿಗೆ ಕಣ್ಣುಗಳು
ತಲೆಬುರುಡೆಯ ಎರಡು ಬದಿಯಲ್ಲಿದ್ದರೆ ಮಾಂಸಾಹಾರಿ ಪ್ರಾಣಿಗಳಿಗೆ ಕಣ್ಣುಗಳು ತಲೆಬುರುಡೆಯ
ಮುಂಭಾಗಕ್ಕಿರುತ್ತವೆ. ಸಸ್ಯಹಾರಿಗೆ
ಶತ್ರುಗಳಿರುವುದರಿಂದ ಯಾವ ದಿಕ್ಕಿನಿಂದ ಅಪಾಯ ಬಂದೆರಗುತ್ತದೋ ಅದನ್ನು ತಿಳಿಯಲು, ನಾಲ್ಕೂ ದಿಕ್ಕುಗಳನ್ನು ನೋಡಲು ಅನುಕೂಲವಾಗುವಂತೆ ಈ ವ್ಯವಸ್ಥೆ
ಸಹಾಯಕವಾಗಿವೆ. ಮಾಂಸಹಾರಿಗೆ ತನ್ನ ಮುಂದಿರುವ ಬಲಿಪ್ರಾಣಿಯ ಚಲನ-ವಲನಗಳನ್ನು ಗಮನಿಸಿ ಅದು
ತಪ್ಪಿಸಿಕೊಂಡು ಹೋಗದಂತೆ ಅದನ್ನು ಅಟ್ಟಿಸಿಕೊಂಡು ಹೋಗಿ ಹಿಡಿಯಲು ಮುಂಭಾಗಕ್ಕಿರುವ ಕಣ್ಣುಗಳು
ಸಹಾಯಕವಾಗಿವೆ. ಸಾಮಾನ್ಯವಾಗಿ ದೊಡ್ಡ ಪ್ರಾಣಿಗಳು ಬಲಿ ಪ್ರಾಣಿಯ ಕುತ್ತಿಗೆಯನ್ನು ಹಿಡಿದು ಸಾಯಿಸುತ್ತವೆ.
ಇಲ್ಲೊಂದು ಮೂಢನಂಬಿಕೆಯಿದೆ. ಹುಲಿ, ಚಿರತೆ ಮತ್ತು
ಸಿಂಹಗಳು ಕುತ್ತಿಗೆಯನ್ನು ಕಚ್ಚಿ ಹಿಡಿದು ರಕ್ತ ಹೀರುತ್ತವೆ ಎಂದು. ಆದರೆ ಅವು ಯಾವುವೂ ರಕ್ತ
ಹೀರುವುದೇ ಇಲ್ಲ. ಉಸಿರುಕೊಳವೆಯನ್ನು ಒಡೆದು, ಉಸಿರಾಡದಂತೆ ಮಾಡಿ ಬಲಿಪ್ರಾಣಿಯನ್ನು ಸಾಯಿಸುವುದಷ್ಟೇ. ನಂತರವಷ್ಟೇ ಅವು ಮಾಂಸವನ್ನು
ಭಕ್ಷಿಸುತ್ತವೆ. ಭಕ್ಷಿಸುವ ಸಂದರ್ಭದಲ್ಲಿ ಒಸರುವ ರಕ್ತವನ್ನು ನೆಕ್ಕುತ್ತವೆ. ಅವು ನೀರನ್ನು
ಕುಡಿಯುವುದು ಸಹಃ ನೆಕ್ಕುವುದರಿಂದಲೇ.
ಬೇಟೆಯಾಡುವ ಬಗೆ
ಹುಲಿ ತುಂಬಾ ನಾಚಿಕೆ ಸ್ವಭಾವದ ಪ್ರಾಣಿ. ಮನುಷ್ಯನನ್ನೇನಾದರೂ ನೋಡಿತೋ, ಈ ಪ್ರಾಣಿಯ ಸಹವಾಸ ನನಗೇಕೆ ಎಂದು ತನ್ನಷ್ಟಕ್ಕೆ ತಾನೇ ಮರೆಯಾಗಿಬಿಡುತ್ತದೆ. ಹುಲಿ ಹಸಿವಾದಾಗ ಮಾತ್ರ ಬೇಟೆಯಾಡುತ್ತದೆ. ಬಲಿ ಪ್ರಾಣಿಯನ್ನು ಬೇಟೆಯಾಡಿದ ನಂತರ, ಒಂದೆರಡು ದಿನ ಅದನ್ನು ಉಂಡು, ಉಳಿದದ್ದನ್ನು ಹಾಗೆಯೇ ಬಿಟ್ಟು ಬಿಡುತ್ತದೆ. ಕೇವಲ ಪದೇ, ಪದೇ ನೀರು ಕುಡಿದು ತಿಂದ ಆಹಾರವನ್ನು ಜೀರ್ಣೀಸಿಕೊಳ್ಳುತ್ತದೆ. ಸಾಮಾನ್ಯವಾಗಿ ಜಿಂಕೆಯಂಥ ಪ್ರಾಣಿಯನ್ನು ಬೇಟೆಯಾಡಿದರೆ, ಅಪರೂಪಕ್ಕೊಮ್ಮೆ ತನ್ನ ಜೊತೆಗಿರುವ ಬೆಳೆದ ಮರಿಗಳಿಗೆ ಆಹಾರ ಒದಗಿಸಲಿಕ್ಕಾಗಿ ಕಾಟಿಯಂಥ ದೊಡ್ಡ ಬಲಿ ಪ್ರಾಣಿಯನ್ನು ಬೇಟೆಯಾಡುತ್ತದೆ. ತಿಂದು ಉಳಿದದ್ದು ಮಿಕ್ಕ ಪ್ರಾಣಿಗಳ ಪಾಲು. ಅಂದರೆ, ಇದನ್ನೇ ನಂಬಿಕೊಂಡಿರುವ ನರಿ, ಹಂದಿ, ಕರಡಿ ಮತ್ತು ಕೊನೆಗೆ ರಣಹದ್ದುಗಳ ಪಾಲು. ಹೊಟ್ಟೆ ತುಂಬಿರುವಾಗ ತನ್ನ ಮುಂದೆ ಎಂಥ ಬಲಿ ಪ್ರಾಣಿ ಬಂದರೂ ಬೇಟೆಯಾಡುವುದಿಲ್ಲ. ಅವು, ಹುಲಿ ಹಿಂದಿರುಗುವುದನ್ನೇ ಕಾದಿದ್ದು ಆ ಕಳೇಬರಕ್ಕೆ ದಾಂಗುಡಿ ಇಡುತ್ತವೆ. ನರಿ, ಹಂದಿ, ಕರಡಿಗಳು ಉಳಿದಿರುವ ಮಾಂಸ ತಿಂದರೆ, ಕಾಗೆ ಮತ್ತು ರಣಹದ್ದುಗಳು ಮೂಳೆ ಸಂದುಗಳಲ್ಲಿರುವ ಮಾಂಸದ ತುಣುಕುಗಳನ್ನೆಲ್ಲಾ ತಿಂದು ಸ್ವಚ್ಛಗೊಳಿಸಿಬಿಡುತ್ತವೆ. ಮನುಷ್ಯ ಅಂಥ ಪ್ರಾಣಿಗಳಿಂದ ಸ್ವಚ್ಛತೆಯ ಪಾಠ ಹೇಳಿಸಿಕೊಳ್ಳಬೇಕಿದೆ! ಕಾಡಿನಲ್ಲಿ ವಿವಿಧ ಪ್ರಾಣಿಗಳ ನಡುವೆ ನಾವು ನೋಡುವ ಪರಸ್ಪರ ಸಂಬಂಧ ಆಥವಾ ಅವಲಂಬನೆಯನ್ನು ನಗರ ಮತ್ತು ಊರುಗಳಲ್ಲಿ ಮನುಷ್ಯರ ನಡುವೆ ನೋಡಲು ಸಾದ್ಯವೇ?ಅರಣ್ಯದಲ್ಲಿ ಯಾವ ಪದಾರ್ಥವೂ ವ್ಯರ್ಥವಲ್ಲ ಎಂಬುದಕ್ಕೆ ಒಂದು ನಿದರ್ಶನವನ್ನು ಇಲ್ಲಿ ನೀಡಬಹುದು. ಅದು ಹುಲಿ ವಿಸರ್ಜಿಸುವ ಮಲ. ಹುಲಿಯು ಆಹಾರ ಸೇವಿಸಿದಾಗ, ಬಲಿ ಪ್ರಾಣಿಯ ಮೂಳೆ ಮತ್ತು ಮಾಂಸವನ್ನು ರೋಮದ ಸಹಿತ ತಿಂದು ಬಿಡುತ್ತದೆ. ಮಾಂಸದ ಬಹು ಪಾಲು ಜೀರ್ಣವಾದರೆ, ಮೂಳೆ ಮತ್ತು ರೋಮ ಜೀರ್ಣವಾಗದೆ, ಮಲದ ಜೊತೆ ವಿಸರ್ಜನೆಯಾಗುತ್ತದೆ. ಜೀರ್ಣವಾಗದೆ ಉಳಿದ ಮಾಂಸದ ತ್ಯಾಜ್ಯ ಸಗಣಿ ಹುಳುಗಳಿಗೆ ಆಹಾರವಾದರೆ, ತಿಂಗಳ ನಂತರ ರೋಮಗಳು ಪಕ್ಷಿಗಳ ಗೂಡುಗಳಿಗೆ ಮೆತ್ತೆಯಾಗಿ ಒದಗುತ್ತವೆ. ಹುಲಿಯ ಮತ್ತು ಇತರ ಮಾಂಸಾಹಾರಿಗಳ ಮಲಕ್ಕೆ ಸ್ಕ್ಯಾಟ್ ಎಂದು ಕರೆಯಲಾಗುತ್ತದೆ.
ಮುಪ್ಪು
ಹುಲಿಗಳ ಆಯಸ್ಸು ಕಾಡಿನಲ್ಲಿ ಸುಮಾರು 10ರಿಂದ 12 ವರ್ಷಗಳಾದರೆ, ಪ್ರಾಣಿ
ಸಂಗ್ರಹಾಲಯಗಳಂಥ ಸಂರಕ್ಷಣಾ ಕೇಂದ್ರಗಳಲ್ಲಿ 18 ರಿಂದ 20 ವರ್ಷಗಳು. ಮಹಾರಾಷ್ಟ್ರದ ಪ್ರಾಣಿ ಸಂಗ್ರಹಾಲಯವೊಂದರಲ್ಲಿ ಹುಲಿಯೊಂದು 22 ವರ್ಷ ಬದುಕಿದ್ದು ನಮ್ಮ ದೇಶದ ಒಂದು ದಾಖಲೆಯಾಗಿ ಉಳಿದಿದೆ.
ವಾಸನೆಲೆಗಾಗಿ ಮತ್ತು ಸಂಗಾತಿಗಾಗಿ ನಡೆಯುವ ಹೋರಾಟದಲ್ಲಿ ಸಣ್ಣ, ಪುಟ್ಟ ಗಾಯಗಳಾದರೆ, ಆ ಗಾಯಗಳನ್ನು ಹುಲಿಗಳು ಪದೇ, ಪದೇ ನೆಕ್ಕಿ ವಾಸಿ ಮಾಡಿ ಕೊಳ್ಳುತ್ತವೆ. ಆದರೆ, ತೀವ್ರ ಸ್ವರೂಪದ
ಗಾಯಗಳಾದರೆ, ಬೇಟೆಯ ಸಾಮರ್ಥ್ಯ ಕಳೆದುಕೊಂಡು ಕಾಡಿನ
ಅಂಚಿಗೆ ಸರಿಯುತ್ತವೆ. ಇಲ್ಲಿ ಸುಲಭವಾಗಿ ಸಿಗುವ ಸಾಕು ಪ್ರಾಣಿಗಳನ್ನು ಬೇಟೆಯಾಡುತ್ತವೆ. ದನ, ಎಮ್ಮೆ, ಆಡು, ಕುರಿಗಳನ್ನು ಕಾಡಿನಲ್ಲಿ ಮೇಯಿಸಲು ಬರುವ ಮನುಷ್ಯ, ಅವುಗಳನ್ನು ಮೇಯಿಸಲು ಬಿಟ್ಟು ಮರದ ಕೆಳಗೆ ವಿಶ್ರಾಂತಿ
ಪಡೆಯುತ್ತಿರುವಾಗಲೋ, ಇಲ್ಲವೆ ಬಯಲು
ವಿಸರ್ಜನೆಗೆ ಹೋದಾಗಲೋ ಅವನ ಮೇಲೆ ದಾಳಿ ಮಾಡಿ, ‘ನರಭಕ್ಷಕ’ ಎಂಬ ಹಣೆ ಪಟ್ಟಿ ಪಡೆದುಕೊಂಡು ಬಿಡುತ್ತವೆ, ವಿಪರ್ಯಾಸವೆಂದರೆ, ಕಾಡಿಗೆ ಜಾನುವಾರುಗಳನ್ನು
ಬಿಡುವುದು,
ಕಾಡಿನ ಅತಿಕ್ರಮಣ ಮಾಡುವುದು, ಕಾಡು ಹಂದಿ, ಕಡವೆ ಮುಂತಾದ ಪ್ರಾಣಿಗಳನ್ನು ಬೇಟೆಯಾಡಿ, ಹುಲಿಯ ಆಹಾರವನ್ನು ಕಸಿಯುವುದು ಅಪರಾಧವಲ್ಲ, ಅದೇ ಹುಲಿ ಜಾನುವಾರುಗಳನ್ನು ಬೇಟೆಯಾಡುವುದು ತಪ್ಪಾಗುತ್ತದೆ !
Useful sir
ReplyDeleteಲೇಖನ ಸರಾಗವಾಗಿ ಓದಿಸಿಕೊಂಡು ಹೋಗುತ್ತೆ ತುಂಬಾ ಚೆನ್ನಾಗಿ ಬರಿದಿದ್ದೀಯ ಅಭಿನಂದನೆಗಳು ನಿನಗೆ 💐💐
ReplyDeleteGood information sir tq 👍
ReplyDeleteIt is nice article,it has gave good information. thank you SIR
ReplyDelete