Tuesday, January 4, 2022

ಗುರುತ್ವ ಬಲ ಇಲ್ಲದೆಡೆಯಲ್ಲಿಯೂ ಬಲೆ ಹೆಣೆಯಬಲ್ಲ ಜೇಡಗಳು

ಗುರುತ್ವ ಬಲ ಇಲ್ಲದೆಡೆಯಲ್ಲಿಯೂ ಬಲೆ ಹೆಣೆಯಬಲ್ಲ ಜೇಡಗಳು

ಹಾಲ್ದೊಡ್ಡೇರಿ ಸುಧೀಂದ್ರ

ವಿಜ್ಞಾನಿ ಹಾಗೂ ಕನ್ನಡ ವಿಜ್ಞಾನ ಬರಹಗಾರರು


೨೦೨೧ ರ ಜನವರಿ ೪ ರಂದು ‘ಸವಿಜ್ಞಾನ’ ಇ-ಪತ್ರಿಕೆಯ ಮೊದಲ ಸಂಚಿಕೆಯನ್ನು ಲೋಕಾರ್ಪಣೆ ಮಾಡಿದವರು ಖ್ಯಾತ ವಿಜ್ಞಾನಿ ಹಾಗು ಕನ್ನಡ ವಿಜ್ಞಾನ ಬರಹಗಾರ, ಸುಧೀಂದ್ರ ಹಾಲ್ದೊಡ್ಡೇರಿ. ಅಂದು ಪತ್ರಿಕೆಯ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ ಅವರು ತಾವೂ ಈ ಪತ್ರಿಕೆಗೆ ಲೇಖನಗಳನ್ನು ಬರೆಯುವುದಾಗಿ ಭರವಸೆ ನೀಡಿದ್ದರು. ದುರದೃಷ್ಟವಶಾತ್ ಅದನ್ನು ಈಡೇರಿಸುವ ಮುನ್ನವೇ ಅವರು ನಮ್ಮನ್ನಗಲಿದರು.  ಜೇಡಗಳ ಸಾಮರ್ಥ್ಯದ ಬಗ್ಗೆ ‘ನಾಸಾ’ ದಲ್ಲಿ ನಡೆದ ಪ್ರಯೋಗಗಳ ಬಗ್ಗೆ ಸುಧೀಂದ್ರ ಅವರು ಬರೆದ ಈ ಲೇಖನ ಈ ವಾರ್ಷಿಕ ಸಂಚಿಕೆಯಲ್ಲಿ ಅವರ ನೆನಪಿನಲ್ಲಿ ಪ್ರಕಟವಾಗಿದೆ. ಅವರ ಮರಣಾನಂತರ ಕಳೆದ ೨೦೨೧ರ ನವೆಂಬರ್‌ನಲ್ಲಿ ಪ್ರಕಟವಾದ ‘ನೆಟ್ ನೋಟ’ ಪುಸ್ತಕದಿಂದ ಈ ಲೇಖನವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅನುಮತಿ ನೀಡಿದ ಸುಧೀಂದ್ರ ಅವರ ಮಗಳು, ಜಯನಗರದ ಹುಡುಗಿ, ಮೇಘನಾ ಅವರಿಗೂ ಪ್ರಕಾಶಕರಾದ ಸಾವಣ್ಣ ಎಂಟರ್‌ ಪ್ರೈಸಸ್‌ ನ ಜಮೀಲ್ ಅವರಿಗೂ ‘ಸವಿಜ್ಞಾನ’ದ ಸಂಪಾದಕ ಮಂಡಳಿ ಆಭಾರಿಯಾಗಿದೆ. 

ಬಾಹ್ಯಾಕಾಶವೆಂಬ ಬೆರಗಿನಂಗಳದಲ್ಲಿ ನಿತ್ಯವೂ ಒಂದಲ್ಲಾ ಒಂದು ಹೊಸ ಪ್ರಯೋಗವು ನಡೆಯುತ್ತಿರುತ್ತದೆ. ಈ ಬಾಹ್ಯಾಕಾಶ ಪ್ರಯೋಗವೆಂದರೆ ಅನಿಶ್ಚಯತೆ ಹಾಗೂ ಸಂಭವನೀಯತೆಯ ನಡುವಿನ ಒಂದು ಹಗ್ಗಜಗ್ಗಾಟ. ಜಗನ್ಮಾನ್ಯ ಹಾಗೂ ಪ್ರತಿಷ್ಟಿತ ಬಾಹ್ಯಾಕಾಶ ಸಂಸ್ಥೆಯಾದ ಅಮೆರಿಕದ ‘ನಾಸಾ’ ನಿಮಗೆ ಗೊತ್ತು. ಅದು ‘ಅಂತಾರಾಷ್ಟ್ರೀಯ ಅಂತರಿಕ್ಷ ನಿಲ್ದಾಣ’ದೊಳಗಿನ (ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್-ಐ.ಎಸ್.ಎಸ್) ಶೂನ್ಯ ಗುರುತ್ವ ಬಲ ಪ್ರದೇಶದಲ್ಲಿ ಹಲವಾರು ಪ್ರಯೋಗಗಳನ್ನು ಹಮ್ಮಿಕೊಂಡಿದೆ. ಭೂಮಿಯಿಂದ ೪೦೦ ಕಿಲೋಮೀಟರ್ ಎತ್ತರದಲ್ಲಿ ಪರಿಭ್ರಮಿಸುತ್ತಿರುವ ಈ ನಿಲ್ದಾಣದಲ್ಲಿ ಗುರುತ್ವ ಬಲವು ಸೊನ್ನೆಗೆ ತೀರಾ ಸಮೀಪವಾಗಿರುತ್ತದೆ. ನಮ್ಮ ಭೂಮಿಯ ಮೇಲೆ ಯಾವುದೇ ಸಾಮಗ್ರಿಯೊಂದು ಸೃಷ್ಟಿಯಾಗುತ್ತಿರುವ ಸಮಯದಲ್ಲಿ ಅಥವಾ ಜೀವಿಯೊಂದು ಚಟುವಟಿಕೆ ನಡೆಸುತ್ತಿರುವ ಸಂದರ್ಭದಲ್ಲಿ ಅವುಗಳ ಮೇಲೆ ಗುರುತ್ವ ಬಲವು ಸದಾ ಕಾಲ ತನ್ನ ಪ್ರಭಾವವನ್ನು ಬೀರುತ್ತಿರುತ್ತದೆ. ಅದರ ಆಧಾರದ ಮೇಲೆಯೇ ಅವುಗಳ ಕೆಲವೊಂದು ಗುಣಲಕ್ಷಣಗಳು ನಿರ್ಧಾರವಾಗುತ್ತವೆ. ಹಾಗಾದರೆ, ಗುರುತ್ವ ಬಲ ಇಲ್ಲದೆಡೆ ಸಾಮಗ್ರಿಯೊಂದನ್ನು ಸಂಸ್ಕರಿಸಿದರೆ ಅಥವಾ ಜೀವಿಯೊಂದು ತನ್ನ ಚಟುವಟಿಕೆ ನಡೆಸಲು ಬಿಟ್ಟರೆ, ವಿಶಿಷ್ಟವಾದ ಫಲಿತಾಂಶಗಳು ಸಿಗಬಹುದೆಂಬ ಆಶಯ ವಿಜ್ಞಾನಿಗಳದ್ದು. ಈ ಹಿನ್ನೆಲೆಯಲ್ಲಿ ಸೋಜಿಗದ ಅನೇಕ ಪ್ರಯೋಗಗಳು ಅಲ್ಲಿ ಜರುಗುತ್ತಿರುತ್ತವೆ.  ಇದೇ ‘ನೆಟ್ ನೋಟ’ ಅಂಕಣದಲ್ಲಿ ಈ ಕುರಿತಂತೆ ಕೆಲವು ಲೇಖನಗಳು ಹಿಂದೆ ಪ್ರಕಟವಾಗಿವೆ. ‘ನಾಸಾ’ ಇತ್ತೀಚೆಗೆ ಜೇಡಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ದು ನಡೆಸಿರುವ ಕುತೂಹಲಕರ ಪ್ರಯೋಗದ ಮಾಹಿತಿಗೆ ಮುಂದೆ ಓದಿ.

ಸಾಮಾನ್ಯವಾಗಿ ಜೇಡವೊಂದು ಕೋಣೆಯೊಳಗೆ ಬಲೆ ಕಟ್ಟಿದೆಯೆಂದರೆ ಅಲ್ಲಿ ಚಟುವಟಿಕೆಗಳು ಸ್ಥಗಿತವಾಗುತ್ತದೆಯೆಂಬುದರ ಚಿಹ್ನೆ ಎಂಬುದು ನಮ್ಮ ಸಾಮಾನ್ಯ ಭಾವನೆ. ಈ ನಂಬಿಕೆಗೆ ಅಪವಾದವೆಂಬಂತೆ ಐ.ಎಸ್.ಎಸ್. ನ ಪ್ರಯೋಗಾಲಯದಲ್ಲಿ ಜೇಡಗಳು ಬಲೆ ನೇಯುತ್ತಿವೆ. ಹನ್ನೆರಡು ವರ್ಷಗಳ ಹಿಂದೆ (೨೦೦೮ರಲ್ಲಿ) ಅಮೆರಿಕದ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳ ಕುತೂಹಲವನ್ನು ತನ್ನ ಪ್ರಯೋಗಗಳತ್ತ ಸೆಳೆಯಲು ‘ನಾಸಾ’ ಹಮ್ಮಿಕೊಂಡಿದ್ದ ಒಂದು ಯೋಜನೆ ಜೇಡಗಳು ಶೂನ್ಯ ಗುರುತ್ವ ಬಲದಲ್ಲಿ ಹೆಣೆಯುವ ಬಲೆಗಳು ಭೂಮಿಯದಕ್ಕಿಂತ ಭಿನ್ನವಾಗಿರುತ್ತವೆಯೇ ಎಂಬುದರ ಪರಿಶೀಲನೆ. ತೋರಿಕೆಗೆ ಸರಳವೆಂದು ತೋರಿದ್ದರೂ ಈ ಕುರಿತಂತೆ ‘ನಾಸಾ’ ಕಳೆದ ಹನ್ನೆರಡು ವರ್ಷಗಳಲ್ಲಿ ನಡೆಸಿದ ಪ್ರಯೋಗಗಳು ಅತ್ಯಂತ ಸವಾಲಿನದ್ದಾಗಿದ್ದವು. ಪ್ರಯೋಗಗಳನ್ನು ನಡೆಸುತ್ತಿದ್ದ ವಿಜ್ಞಾನಿಗಳಿಗೆ ಹತ್ತಾರು ಬಗೆಯ ವೈಫಲ್ಯಗಳು, ಅನಿರೀಕ್ಷಿತ ತೊಡಕುಗಳು ಹಾಗೂ ಅಚಾತುರ್ಯದ ಎಡವಟ್ಟುಗಳು ಎದುರಾಗಿದ್ದವು.

ಜೀವವಿಜ್ಞಾನದಲ್ಲಿ ನಿಮಗೆ ರೆಕ್ಕೆಯಿರದ ಕೆಲ ಅಷ್ಟಪದಿ ಸಂಧಿಪದಿಗಳ ಪರಿಚಯವಾಗಿರಬಹುದು. ‘ಅರಾಕ್ನಿಡ’ ಎಂಬ ಇಂಥ ಅಷ್ಟಪದಿಗಳ ವರ್ಗದಲ್ಲಿ ಜೇಡಗಳೂ ಸೇರಿದಂತೆ ಚೇಳು, ಉಣ್ಣೆಹುಳುಗಳೂ ಸೇರಿವೆ. ಭೂಮಿ ಲಂಘನ ಮಾಡಿ ವ್ಯೋಮ ತಲುಪಿದ ಕೆಲ ಜೇಡಗಳೂ ಇದೀಗ ‘ಅರಾಕ್ನಾಟ್’ ಎಂಬ ಬಿರುದನ್ನೂ ಪಡೆದಿವೆ-ಅಂತರಿಕ್ಷ ಪ್ರವಾಸಿ ಮಾನವರು ‘ಆಸ್ಟ್ರೋನಾಟ್’ ಎಂಬ ಬಿರುದು ಪಡೆದಂತೆ. ‘ಐ.ಎಸ್.ಎಸ್.’ಗೆ ಎರಡು ಜೇಡ ಪ್ರಭೇದಗಳನ್ನು ವಿಜ್ಞಾನಿಗಳು ಕೊಂಡೊಯ್ದಿದ್ದರು, ಒಂದು ಬದುಕಲಾಗದಿದ್ದರೆ ಮತ್ತೊಂದನ್ನು ಬಳಸಲು. ಇತ್ತ ವಿಜ್ಞಾನಿಗಳು ಒಂದು ಬಲೆ ಹೆಣೆದಿದ್ದರೆ, ಈ ಜೇಡಗಳು ಇನ್ನೊಂದು ಬಲೆ ಹೆಣೆದಿದ್ದುವು. ಜೇಡಗಳನ್ನು ಕೂಡಿ ಹಾಕಿದ್ದ ಸಂಗ್ರಹಾಲಯದಿಂ, ಮೀಸಲಿಗಿಟ್ಟಿದ್ದ ಜೇಡಗಳು ತಪ್ಪಿಸಿಕೊಂಡು ಮುಖ್ಯಾಲಯಕ್ಕೆ ಬಂದು ಬಿಟ್ಟಿದ್ದುವು. ಇದರ ಬಾಗಿಲನ್ನು ತೆರೆದು ಸಂಗ್ರಹಾಲಯದತ್ತ ದೂಡುವುದು ಸುರಕ್ಷಾ ದೃಷ್ಟಿಯಿಂದ ಸರಿಯಲ್ಲವೆಂದು ವಿಜ್ಞಾನಿಗಳು ಮೊದಲ ಪ್ರಭೇದದ ಜೇಡಗಳತ್ತಲೇ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ಇಲ್ಲಿದ್ದ ಎರಡು ಜೇಡಗಳು ಒಂದರ ಬಲೆಗೆ ಅಡ್ಡವಾಗಿ ಮತ್ತೊಂದರಂತೆ ಗೌಜಿ ಬಲೆ ಹೆಣೆಯತೊಡಗಿದವು. ವಿಜ್ಞಾನಿಗಳ ಸಂಕಷ್ಟ ಇಷ್ಟಕ್ಕೇ ನಿಲ್ಲಲಿಲ್ಲ. ಅವುಗಳ ಆಹಾರಕ್ಕೆಂದು ತಂದಿದ್ದ ಹುಳುಗಳು ನಿರೀಕ್ಷೆಗೂ ಮೀರಿ ಸಂತಾನೋತ್ಪತ್ತಿ ಮಾಡಲಾರಂಭಿಸಿದ್ದವು. ಸಮಯ ಉರುಳಿದಂತೆ, ಮರಿಗಳು ತಾವಿದ್ದ ಕರಂಡಕವನ್ನು ತುಂಬಿ ತುಳುಕಿ ಹೊರಬೀಳಲಾರಂಭಿಸಿದವು. ಗಾಜಿನ ಕಿಟಕಿಗಳಿದ್ದ ಜೇಡನ ಗೂಡಿನ ತುಂಬೆಲ್ಲಾ ಹರಡಿ, ಎರಡು ವಾರಗಳಲ್ಲಿ ಕಿಟಕಿಗಳ ತೆರೆಯನ್ನು ಸಂಪೂರ್ಣವಾಗಿ ಆವರಿಸಿಕೊಂಡುಬಿಟ್ಟವು. ಜೇಡನ ಚಟುವಟಿಕೆಗಳು ವಿಜ್ಞಾನಿಗಳಿಗೆ ಕಾಣಿಸದಾಯಿತು. ಜೇಡರ ಬಲೆಯ ಹೆಣಿಗೆಯನ್ನು ಸೆರೆ ಹಿಡಿಯಲಾಗದ ಕಾರಣ ಪ್ರಯೋಗ ವಿಫಲವಾಯಿತು.ಇಡೀ ಪ್ರಯೋಗದ ರೂಪುರೇಷೆಯನ್ನು ಹೆಣೆದಿದ್ದ ಅಮೆರಿಕದ ‘ಡೆನ್ವರ್ ಮ್ಯೂಸಿಯಂ ಆಫ್ ನೇಚರ್ ಅಂಡ್ ಸೈನ್ಸ್’ ನ ವಿಜ್ಞಾನಿ ಪೌಲಾ ಕುಶಿಂಗ್ ಅವರು ಮುಂದಿನ ಹೆಜ್ಜೆಗಳತ್ತ ತಮ್ಮ ಗಮನ ಹರಿಸತೊಡಗಿದರು.

ಮೂರು ವರ್ಷ ಕಳೆದ ನಂತರ,  ೨೦೧೧ರಲ್ಲಿ ಸ್ವಿಝರ್ಲೆಂಡಿನ ‘ಯೂನಿವರ್ಸಿಟಿ ಆಫ್ ಬಾಸಲ್’ ನ ವಿಜ್ಞಾನಿ ಡಾ ಸಾಮ್ಯುಯಲ್ ಝ್ಸಾಕ್ಕ ಅವರ ಸಹಯೋಗದೊಂದಿಗೆ ಪ್ರಯೋಗ ಕ್ರಮವನ್ನು ನಿರ್ಧರಿಸಲಾಯಿತು. ಈ ಬಾರಿ ಒಂದೇ ಪ್ರಭೇದದ ನಾಲ್ಕು ಜೇಡಗಳನ್ನು ಆಯ್ದುಕೊಂಡು ಎರಡನ್ನು ‘ಐ.ಎಸ.ಎಸ್.’ ಗೆ ಕಳಿಸುವುದು, ಎರಡನ್ನು ಭೂಮಿಯಲ್ಲಿಯೇ ಉಳಿಸಿಕೊಳ್ಳುವುದೆಂದು ಆಲೋಚಿಸಲಾಯಿತು. ಭೂಮಿಯಲ್ಲಿನ ಪ್ರಯೋಗಾಲಯದಲ್ಲಿಯೂ ಐ.ಎಸ.ಎಸ್.ನ ವಾತಾವರಣವನ್ನೇ ಸೃಜಿಸಿ, ಎರಡೂ ಕಡೆಗಳಲ್ಲಿನ ಬೆಳವಣಿಗೆಗಳನ್ನು ತುಲನಾತ್ಮಕವಾಗಿ ಪರಿಶೀಲಿಸುವ ಯೋಜನೆ ಇದಾಗಿತ್ತು. ಗುರುತ್ವ ಬಲದ ವ್ಯತ್ಯಯಗಳ ಹೊರತಾಗಿ, ಎರಡೂ ಕಡೆಯ ಜೇಡಗಳು ಒಂದೇ ಬಗೆಯ ಪಾಲನೆ, ಪೋಷಣೆ ಪಡೆದಿದ್ದವು.

ಎಲ್ಲವೂ ಸರಿಯಾಗಿದೆ ಎಂದೆಣಿಸುವಷ್ಟರಲ್ಲಿ ಮತ್ತೊಂದು ಆಘಾತ ವಿಜ್ಞಾನಿಗಳಿಗೆ ಎದುರಾಯಿತು. ಪ್ರಯೋಗಗಳು ಹೆವ್ವಿನ ಸಮಯ ಹಿಡಿಯಬಹುದೆಂಬ ನಿರೀಕ್ಷೆಯಲ್ಲಿ ಜೇಡಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಅತಿ ಎಳೆ ವಯಸ್ಸಿನವುಗಳನ್ನೇ ಪರಿಗಣಿಸಲಾಗಿತ್ತು. ಆದರೆ ಇಂಥ ಎಳೆ ವಯಸ್ಸಿನ ಜೇಡಗಳ ಲಿಂಗವನ್ನು ಪತ್ತೆ ಮಾಡುವುದು ತೀರಾ ಕಷ್ಟಕರವಾಗಿತ್ತು. ತಲಾ ನಾಲ್ಕು ಹೆಣ್ಣು ಜೇಡಗಳನ್ನು ಐ.ಎಸ್.ಎಸ್. ಹಾಗೂ ಭೂ ಪ್ರಯೋಗಾಲಯದಲ್ಲಿ ಇರಿಸುವುದೆಂದೂ, ಇವುಗಳ ಜೊತೆ ಕನಿಷ್ಟ ಒಂದು ಗಂಡು ಜೇಡವನ್ನು ಎರಡೂ ಕಡೆ ಇರಬೇಕೆಂದು ವಿಜ್ಞಾನಿಗಳ ಎಣಿಕೆ ಆಗಿತ್ತು. ಆದರೆ, ಲಿಂಗ ಪತ್ತೆ ಅಸಾಧ್ಯವಾದ ಕಾರಣ, ಯಾವುದಾದರೂ ಒಂದು ಕಡೆ, ಅದೂ ಐ.ಎಸ.ಎಸ. ನಲ್ಲಿ ಐದು ಹೆಣ್ಣು ಜೇಡಗಳು ಉಳಿದುಕೊಂಡರೆ ಏನು ಮಾಡುವುದೆಂಬ ಚಿಂತೆ ಅವರದಾಗಿತ್ತು. ಕೊನೆಗೂ ಅದೃಷ್ಟ ವಿಜ್ಞಾನಿಗಳ ಕಡೆಗೇ ಒಲಿಯಿತು. ಎರಡೂ ಪ್ರಯೋಈಗಾಲಯಗಳಲ್ಲಿ ತಲಾ ಒಂದೊಂದು ಗಂಡು ಜೇಡಗಳಿದ್ದುವು.

ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ವಿಜ್ಞಾನಿಗಳು ಜೇಡಗಳ ಕಾರ್ಯಾಚರಣೆಯನ್ನು ವೀಕ್ಷಿಸತೊಡಗಿದರು. ಜೇಡಗಳು ಬಲೆಯನ್ನು ಹೆಣೆಯತೊಡಗಿದವು. ಅವುಗಳನ್ನು ಕಿತ್ತು ಹಾಕಿ ಹೊಸ ಬಲೆಗಳನ್ನು ಹೆಣೆಯತೊಡಗಿದವು. ಪ್ರತಿ ಐದು ನಿಮಿಷಗಳಿಗೊಮ್ಮೆ, ಇರಿಸಲಾಗಿದ್ದ ಮೂರು ಕ್ಯಾಮರಾಗಳು ಚಿತ್ರಗಳನ್ನು ತೆಗೆಯತೊಡಗಿದವು. ಜೇಡಗಳ ಪ್ರತಿ ಚಟುವಟಿಕೆಯನ್ನು ದಾಖಲಿಸುವುದರ ಜೊತೆಗೆ ಅವುಗಳು ಕಬಳಿಸಲೆಂದು ಕೊಂಡೊಯ್ದಿದ್ದ ಹಣ್ಣು ಮುತ್ತುವ ನೊಣಗಳ ಬೆಳವಣಿಗೆಯನ್ನು ವಿಜ್ಞಾನಿಗಳಾದ ಝ್ಸಾಕ್ಕ ಹಾಗೂ ಕುಶಿಂಗ್ ಅವರು ಚಿತ್ರಗಳ ಮೂಲಕ ವಿಶ್ಲೇಷಿಸತೊಡಗಿದರು. ಅವರೊಂದಿಗೆ ಅಮೆರಿಕದ ‘ಯೂನಿವರ್ಸಿಟಿ ಆಫ್ ಕೊಲರಾಡೋ’ ದ ವಿಜ್ಞಾನಿ ಸ್ಟೆಫ್ಯಾನಿ ಕಂಟ್ರಿಮನ್ ಕೂಡಾ ಕೈ ಜೋಡಿಸಿದರು. ಸುಮರು ೧೪,೫೦೦ ಚಿತ್ರಗಳ ಕೂಲಂಕಷ ವಿಶ್ಲೇಷಣೆಯಿಂದ ಸುಮಾರು ನೂರು ಬಲೆಗಳಲ್ಲಿ ಹೆಚ್ಚಿನ ಸಾಮ್ಯತೆ ಇರುವುದನ್ನು ಅವರು ಗುರುತಿಸಿದರು. ಜೊತೆಗೆ, ಆ ಬಲೆಯ ಯಾವ ದಿಕ್ಕಿಗೆ ಜೇಡಗಳು ಓರೆಯಾಗಿದ್ದುವೆಂಬುದನ್ನೂ ಅವರು ದಾಖಲಿಸಿದರು.

ಮತ್ತಷ್ಟು ಕುತೂಹಲದ ಕಂಗಳಿಂದ ಬಲೆಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿದಾಗ ವಿಜ್ಞಾನಿಗಳಿಗೆ ಕೆಲ ಹೊಸ ಹೊಳಹುಗಳು ಗೋಚರಿಸಿದವು. ಉದಾಹರಣೆಗೆ, ಶೂನ್ಯ ಗುರುತ್ವ ಬಲದಲ್ಲಿರುವಾಗ ಹೆಣೆದ ಜೇಡರ ಬಲೆಗಳು ಹೆಚ್ಚು ಸಮ್ಮಿತಿಯಾಗಿದ್ದುವು-ಅಂದರೆ ಒಂದು ಅರ್ಧ ಭಾಗವು ಮತ್ತೊಂದು ಅರ್ಧ ಭಾಗದ ಕನ್ನಡಿ ಬಿಂಬದಷ್ಟು ಸಾಮ್ಯತೆ ಹೊಂದಿದ್ದವು. ಜೇಡಗಳು ತಮ್ಮ ತಲೆಯನ್ನು ಸದಾ ಬಲೆಯ ಮಧ್ಯ ಭಾಗದತ್ತಲೇ ಕೇಂದ್ರೀಕರಿಸುತ್ತಿದ್ದವೇ ಹೊರತು, ಸಾಮಾನ್ಯವಾಗಿ ಮಾಡುವಂತೆ ಕೆಳಗಿನ ದಿಕ್ಕಿನತ್ತಲೇ ನೋಡುತ್ತಿರಲಿಲ್ಲ. ಇತ್ತ, ಭೂ ಪ್ರಯೋಗಾಲಯದಲ್ಲಿ ಜೇಡಗಳು ಹೆಣೆದ ಬಲೆಗಳಲ್ಲಿ ಇಂಥ ಸಮ್ಮಿತಿ ಲಕ್ಷಣಗಳಿರಲಿಲ್ಲ. ಪ್ರಯೋಗಗಳ ಮುಂದುವರೆದ ಭಾಗದಲ್ಲಿ ಜೇಡಗಳ ಮೇಲೆ ಬೆಳಕನ್ನು ಚೆಲ್ಲುವ ವ್ಯವಸ್ಥೆಯನ್ನು ವಿಜ್ಞಾನಿಗಳು ಮಾಡಿದರು. ‘ಐ.ಎಸ್.ಎಸ್.’ನ ಜೇಡಗಳು ಬೆಳಕು ಬೀಳುತ್ತಿದ್ದೆಡೆ ಸಮ್ಮಿತಿಯಿಲ್ಲದ ಬಲೆಗಳನ್ನು ಹೆಣೆಯುತ್ತಿದ್ದರೆ, ಕತ್ತಲು ಬೀಳುತ್ತಿದ್ದೆಡೆ ಸಮ್ಮಿತಿಯ ಬಲೆಗಳನ್ನು ಹೆಣೆದಿದ್ದವು.

ಪ್ರಯೋಗ ಕೊಠಡಿಯ ಮಧ್ಯದಲ್ಲಿ ಮೇಲುಗಡೆ ದೀಪವಿರುವ ಸಂದರ್ಭದಲ್ಲಿ ‘ಐ.ಎಸ್.ಎಸ್.’ನಲ್ಲಿದ್ದ ಜೇಡಗಳು ಗುರುತ್ವ ಬಲದಲ್ಲಿರುವ ಭೂಮಿಯ ಜೇಡಗಳಂತೆಯೇ ಬಲೆ ಹೆಣೆಯುವ ಕೌತುಕದ ವಿಷಯ ಪತ್ತೆಯಾದಂತಾಯಿತು. ಪ್ರತಿಷ್ಟಿತ ವಿಜ್ಞಾನ ಪತ್ರಿಕೆ ‘ದಿ ಸೈನ್ಸ್ ಆಫ್ ನೇಚರ್’ನ ಇದೇ ಡಿಸೆಂಬರ್‌ನ ಸಂಚಿಕೆಗೆ ಝ್ಸಾಕ್ಸ್, ಕುಶಿಂಗ್ ಮತ್ತು ಕಂಟ್ರಿಮನ್ ಜೊತೆಗೂಡಿ ಬರೆದಿರುವ ಪ್ರಬಂಧದಲ್ಲಿ ಜೇಡಗಳ ಗುಣಲಕ್ಷಣಗಳ ಕುರಿತು ವಿಸ್ತೃತವಾಗಿ ಚರ್ಚಿಸಿದ್ದಾರೆ. ಯಾವುದು ಮೇಲೆ, ಯಾವುದು ಕೆಳಗೆ ಎಂದು ಗುರುತಿಸಲಾಗದ ಶೂನ್ಯ ಗುರುತ್ವ ಇರುವ ಪ್ರದೇಶಗಳಲ್ಲಿ ಜೇಡಗಳಿಗೆ ಮೇಲೆ ಉರಿಯುತ್ತಿದ್ದ ದೀಪವೇ ‘ಮೇಲೆ’, ಅದಿಲ್ಲದ ವಿರುದ್ಧ ಸ್ಥಳವೇ ‘ಕೆಳಗೆ’ ಎಂದು ಮನವರಿಕೆಯಾಗಿರಬಹುದು ಎಂಬ ಅಂದಾಜು ವಿಜ್ಞಾನಿಗಳದ್ದು.

ಈ ನಿರ್ಧಾರಕ್ಕೆ ಬರಲು ವಿಜ್ಞಾನಿಗಳು ಮತ್ತೊಂದು ಸರಣಿಯ ಪ್ರಯೋಗಗಳನ್ನೂ ನಡೆಸಿದ್ದರು. ದೀಪಗಳನ್ನು ಆರಿಸಿದಾಗ ಜೇಡಗಳು ಅನಿಯಮಿತ ದಿಕ್ಕಿನಲ್ಲಿ ತಮ್ಮ ಬಲೆಯನ್ನು ಹೆಣೆಯತೊಡಗಿದ್ದವು. ದೀಪ ಹೊತ್ತಿಸಿದ ಕೂಡಲೇ ಅವು ನೇರಾ ನೇರ ಮೇಲಿನಿಂದ ಕೆಳಗಡೆಗೆ ಬಲೆಯ ದಿಕ್ಕನ್ನು ತಿರುಗಿಸತೊಡಗಿದವು. ಜೇಡಗಳು ಭೂಮಿಯಲ್ಲಿರುವಾಗ ಹಗಲೂ-ರಾತ್ರಿ ಕೆಲಸ ಮಾಡವುದರ ಜೊತೆಗೆ, ಬಲೆಯ ಮೇಲಿಂದ ಸುಯ್ಯನೆ ಕೆಳಗಿಳಿದು ಸೆರೆಸಿಕ್ಕ ಕೀಟಗಳನ್ನು ಭಕ್ಷಿಸುವುದು ಅವುಗಳಿಗೆ ರೂಢಿಗತವಾಗಿರುತ್ತದೆ. ಆದ್ದರಿಂದ, ಬೆಳಕಿನ ಪ್ರಭಾವ ಅವುಗಳ ಮೇಲಇರುವುದೆಂಬ ನಂಬಿಕೆ ವಿಜ್ಞಾನಿಗಳದ್ದಾಗಿತ್ತು. ಇದೀಗ ಈ ಹೊಸ ಪ್ರಯೋಗಗಳು, ದೀಪವೂ ಜೇಡಗಳ ಬಲೆ ಹೆಣೆಯುವಿಕೆಯಲ್ಲಿ ಮಾರ್ಗದರ್ಶಿಯಾಗಬಲ್ಲುದೆಂಬುದನ್ನು ಸಾಬೀತು ಪಡಿಸಿವೆ.

1 comment: