Wednesday, May 4, 2022

ಆದ್ವಿತೀಯ ಸಾಧನೆಗಳ ಸರದಾರ – ‘ಮೆಟೀರಿಯಲ್ ಮುನಿರಾಜು’

ಆದ್ವಿತೀಯ ಸಾಧನೆಗಳ ಸರದಾರ – ‘ಮೆಟೀರಿಯಲ್ ಮುನಿರಾಜು’

ಶಿಕ್ಷಕನೊಬ್ಬ ಮನಸ್ಸು ಮಾಡಿದರೆ ವಿದ್ಯಾರ್ಥಿಗಳಲ್ಲಿ ಮತ್ತು ಶಾಲೆಯ ವಾತಾವರಣದಲ್ಲಿ ಗಮನಾರ್ಹ ಬದಲಾವಣೆ ತರಬಹುದು ಎಂಬುದಕ್ಕೆ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ. ಈ ಬಾರಿಯ ನಮ್ಮ ಸಾಧಕ ಶಿಕ್ಷಕರಾಗಿ ನಾವು ಪರಿಚಯಿಸುತ್ತಿರುವುದು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ.ಮುನಿರಾಜು ಅವರನ್ನು.

ಶಿಕ್ಷಕ ಸಮಾಜ ಪರಿವರ್ತನೆಯ ಹರಿಕಾರ. ಸಮಾಜ ಬದಲಾಗ ಬೇಕಾದರೆ, ಶಿಕ್ಷಕರ ಮನೋಧೋರಣೆ ಬದಲಾಗಬೇಕು. ಪ್ರತಿಯೊಬ್ಬ ಶಿಕ್ಷಕನ ಪ್ರವೃತ್ತಿ, ನಡೆ, ನುಡಿ ಸಮಾಜದ ಮೇಲೆ ನೇರ ಪರಿಣಾಮ ಬೀರುತ್ತದೆ. ಅದೆಷ್ಟೋ ಮಂದಿ ತಮ್ಮ ಶಿಕ್ಷಕರಲ್ಲೊಬ್ಬರನ್ನು ತಮ್ಮ ರೋಲ್ ಮಾಡೆಲ್ ಆಗಿ ಪರಿಗಣಿಸಿರುತ್ತಾರೆ. ಪ್ರಾಥಮಿಕ, ಪ್ರೌಢ ಅಥವಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಕನೇ ನಿಜವಾದ ಹೀರೋ. ಶಿಕ್ಷಕ ವೃತ್ತಿಯೇ ಅಂಥದ್ದು.  ಒಬ್ಬ ಶಿಕ್ಷಕ ತನ್ನ ಕಾಯಕದಲ್ಲಿ ಕಾಯಾ, ವಾಚಾ, ಮನಸಾ ತೊಡಗಿಸಿಕೊಂಡಾಗ, ಆತ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಹಲವು ಉದಾಹರಣೆಗಳು ನಮಗೆ ಕಾಣ ಸಿಗುತ್ತದೆ. ಅಂಥ ಶಿಕ್ಷಕರಲ್ಲಿ ಒಬ್ಬರು, ಕೋಲಾರ ಜಿಲ್ಲೆಯ ಐತರಸನಹಳ್ಳಿಯ ವಿಜ್ಞಾನ ಶಿಕ್ಷಕ, ಸಿ. ಮುನಿರಾಜು.

ಬಾಲ್ಯದಲ್ಲಿ ಇಂಜಿನೀಯರ್ ಆಗುವ ಕನಸು ಕಂಡಿದ್ದ ಮುನಿರಾಜು ಕಂಪ್ಯೂಟರ್ ಇಂಜಿನೀರಿಂಗ್ ಪದವಿ ಪಡೆದರಾದರೂ, ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ಡಿ.ಎಡ್ ಮುಗಿಸಿ ಖಾಸಗಿ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿ ಪ್ರಾರಂಭಿಸಿದರು. ಸರ್ಕಾರಿ ಕೆಲಸದ ಅವಶ್ಯಕತೆಯನ್ನು ಮನಗಂಡು ಪೋಲೀಸ್ ಇಲಾಖೆ ಸೇರಿದರು. ಆದರೆ, ಶಿಕ್ಷಕನಾಗಬೇಕು ಎಂಬ ಬಲವಾದ ತುಡಿತದಿಂದಾಗಿ, ಪೋಲೀಸ್ ಇಲಾಖೆಯ ಕೆಲಸ ತೊರೆದು ೨೦೦೭ರಲ್ಲಿ ವಿಜ್ಞಾನ ಶಿಕ್ಷಕರಾಗಿ ಸರ್ಕಾರಿ ಪ್ರಾಥಮಿಕ ಶಾಲೆಗೆ ನೇಮಕವಾದರು. ಅಂದಿನಿA, ಅಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ.

ಮಕ್ಕಳಿಗೆೆ ಪ್ರಾಯೋಗಿಕವಾಗಿ ವಿಜ್ಞಾನದ ಅನುಭವವನ್ನು ನೀಡುವುದರ ಮೂಲಕ ಅವರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ, ಭವಿಷ್ಯದಲ್ಲಿ ದೇಶಕ್ಕೆ ಬೇಕಾಗುವ ವಿಜ್ಞಾನಿಗಳನ್ನು ರೂಪಿಸಬೇಕು ಎಂಬ ಏಕ ಮಾತ್ರ ಹಂಬಲದಿಂದ ಅವರು ಶಾಲೆಯಲ್ಲಿ ರೂಪಿಸಿರುವ ಕಲಿಕಾ ಅನುಭವಗಳು  ಅನುಕರಣೀಯ.

ನೇಮಕಗೊಂಡಾಗ ಇವರು ಆಯ್ಕೆ ಮಾಡಿಕೊಂಡಿದ್ದು, ಪಟ್ಟಣ ಪ್ರದೇಶದಿಂದ ದೂರ ಇರುವ, ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದ ಶಾಲೆ. ಏನಾದರೂ ಬದಲಾವಣೆ ತರಬೇಕಾದರೆ, ಇಂಥ ಶಾಲೆಯೇ ಸೂಕ್ತ ಎಂಬಕಾರಣಕ್ಕಾಗಿ. ಒಬ್ಬ ಕ್ರಿಯಾಶೀಲ ಶಿಕ್ಷಕನಾಗಿ ಏನೆಲ್ಲ ಮಾಡಬಹುದು ಎಂಬುದನ್ನು ತೋರಿಸುವುದು ಅವರ ಉದ್ದೇಶವಾಗಿತ್ತು. ಶಾಲೆಯ ಭೌತಿಕ ಅಂದ ಚಂದವನ್ನು ಬದಲಾಯಿಸಿ, ಶಾಲೆಯನ್ನು ಒಂದು ಸುಂದರ ಕಲಿಕೆಯ ತಾಣವಾಗಿಸಬೇಕು ಎಂಬ ಕನಸಿನಿಂದ, ಮುನಿರಾಜು ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ಮರುಭೂಮಿಯಂತಿದ್ದ ಶಾಲೆಯ ಆವರಣದಲ್ಲಿ ಇತರ ಶಿಕ್ಷಕರ ಸಹಾಯ ಪಡೆದು ಗಿಡ, ಮರಗಳನ್ನು ನೆಟ್ಟು, ಪೋಷಿಸಿ, ಬೆಳೆಸಿದರು. ಕೆಲವೇ ತಿಂಗಳುಗಳಲ್ಲಿ ಶಾಲೆಯು ಹಸಿರುಮಯವಾಗಿ ಕಂಗೊಳಿಸತೊಡಗಿತು. ಅವರ ಈ ಶ್ರಮದಿಂದಾಗಿ, ಶಾಲೆಯು ಸತತ ಮೂರು ಬಾರಿ ‘ಪರಿಸರ ಮಿತ್ರ ಶಾಲೆ’ ಎಂಬ ಪ್ರಶಸ್ತಿಗೆ ಪಾತ್ರವಾಯಿತು.

ಆನಂತರ ಮುನಿರಾಜು ಅವರು ಗಮನ ಹರಿಸಿದ್ದು ವಿಜ್ಞಾನ ಕಲಿಕೆಯನ್ನು ಸುಧಾರಿಸುವತ್ತ. ಇಂಜಿನೀರಿಂಗ್ ವಿದ್ಯಾರ್ಥಿಯಾಗಿದ್ದಾಗ ದೊರೆತ ಪ್ರೇರಣೆಯನ್ನು ಬಳಸಿಕೊಂಡು, ಸರಳ ಪ್ರಯೋಗಗಳ ಮೂಲಕ ವಿಜ್ಞಾನ ಕಲಿಕೆಯನ್ನು ಸುಗಮಗೊಳಿಸಲು ನಿರ್ಧರಿಸಿದರು. ಇದಕ್ಕಾಗಿ, ಸ್ಥಳೀಯವಾಗಿ ಲಭ್ಯವಿದ್ದ ಕಚ್ಛಾವಸ್ತುಗಳನ್ನು ಬಳಸಿ, ಎಲ್ಲ ತರಗತಿಗಳ ವಿಜ್ಞಾನ ಬೋಧನೆಗೆ ಪೂರಕವಾದ ‘ಲೋ ಕಾಸ್ಟ್, ನೋ ಕಾಸ್ಟ್’ ಕಲಿಕೋಪಕರಣಗಳ ಭಂಡಾರವನ್ನೇ ರೂಪಿಸಿದರು.  ಇದು ವಿಜ್ಞಾನ ಕಲಿಕೆಯಲ್ಲಿ ಹೊಸ ಆಯಾಮವನ್ನೇ ನಿರ್ಮಿಸಿತು. ವಿಜ್ಞಾನದ ಎಲ್ಲ ಪಾಠಗಳನ್ನು ಮಕ್ಕಳೇ ಪ್ರಾಯೋಗಿಕವಾಗಿ ಕಲಿಯುವಂತಾಯಿತು. ಇದರಿಂದ ಪ್ರೇರಣೆಗೊಂಡ ಅವರ ಅನೇಕ ವಿದ್ಯಾರ್ಥಿಗಳು ಹತ್ತನೇ ತರಗತಿಯ ನಂತರ ವಿಜ್ಞಾನ ಸಂಯೋಜನೆಗಳನ್ನು ಆಯ್ಕೆ ಮಾಡಿಕೊಂಡು, ಇಂಜಿನೀರಿಂಗ್ ಮತ್ತು ಮೆಡಿಕಲ್ ಕೋರ್ಸ್ ಮಾಡಲು ಮುಂದಾಗಿರುವುದು, ವಿದ್ಯಾರ್ಥಿಗಳ ಮೇಲೆ ಮುನಿರಾಜು ಅವರ ಪ್ರಭಾವಕ್ಕೆ ಸಾಕ್ಷಿ.

 ಪ್ರಾರಂಭದಲ್ಲಿ ಅವರು ತಯಾರಿಸಿದ ಕಲಿಕೋಪಕರಣಗಳನ್ನು ಬಳಸಿ, ಕ್ಲಸ್ಟರ್ ಹಂತದ ಸಮಾಲೋಚನಾ ಶಿಬಿರಗಳಲ್ಲಿ ವಿಷಯ ಮಂಡನೆಗಳನ್ನು ಮಾಡಿ, ಭಾಗವಹಿಸಿದ್ದ ಎಲ್ಲ ಶಿಕ್ಷಕರ ಪ್ರಶಂಶೆಗೆ ಪಾತ್ರರಾದರು. ಮುಂದೆ, ತಾಲ್ಲೂಕಿನ ಪ್ರತಿ ಕ್ಲಸ್ಟರ್ ಸಮಾಲೋಚನ ಶಿಬಿರಗಳಲ್ಲಿ ಭಾಗವಹಿಸಿ ಅತ್ತುತ್ತಮ ವಿಜ್ಞಾನ ಸಂಪನ್ಮೂಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸರಳವಾಗಿ ವಿಜ್ಞಾನದ ಪರಿಕಲ್ಪನೆಗಳನ್ನು ಪ್ರಾಯೋಗಿಕವಾಗಿ

ವಿವರಿಸುವ ಮೂಲಕ, ಇದೀಗ ತಾಲ್ಲೂಕು, ಜಿಲ್ಲೆ, ಮತ್ತು ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ವಿಜ್ಞಾನ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡು, ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಸುಮಾರು ಸಾವಿರಕ್ಕೂ ಹೆಚ್ಚು ತರಬೇತಿ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುವ ಹೆಗ್ಗಳಿಕೆ ಮುನಿರಾಜು ಅವರದ್ದು. ರಾಜ್ಯದ ವಿಜ್ಞಾನ ಶಿಕ್ಷಕರಲ್ಲಿ ‘ಮೆಟೀರಿಯಲ್ ಮುನಿರಾಜು’ ಎಂದೇ ಇವರು ಖ್ಯಾತರು!

ಪ್ರಸ್ತುತ ಶಿಕ್ಷಣ ಇಲಾಖೆಯ ಅತ್ಯಂತ ಮಹತ್ವಪೂರ್ಣ ತರಬೇತಿ ಕಾರ್ಯಕ್ರಮವಾದ ‘ಗುರುಚೇತನ’ ದಲ್ಲಿ ವಿಜ್ಞಾನ ಸಂಪನ್ಮೂಲ ವ್ಯಕ್ತಿಯಾಗಿ ‘ಸಂಚಲನ’, ‘ಸಮ್ಮಿಲನ’, ವಿದ್ಯುಚ್ಛಕ್ತಿ ಮತ್ತು ‘ಗಾಳಿ-ಒಂದು ಸಮನ್ವಯ ವಿಧಾನ’ ಎಮಬ ಮಾಡ್ಯೂಲ್‌ಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದೇ ರೀತಿ, ‘ನಿಷ್ಟಾ’ ಕಾರ್ಯಕ್ರಮದಲ್ಲಿಯೂ ವಿಜ್ಞಾನದ ಮಾಡ್ಯೂಲ್‌ಗಳ ಮೂಲಕ ರಾಜ್ಯಾದ್ಯಂತ ಶಿಕ್ಷಕರಿಗೆ ‘ಆನ್‌ಲೈನ್’ ತರಬೇತಿಯನ್ನು ನೀಡಿದ್ದಾರೆ.

ಕೋವಿಡ್-೧೯ರ ಸಂದರ್ಭದಲ್ಲಿಯೂ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ತಡೆಯಲು ಇಲಾಖೆ ಪ್ರಾರಂಬಿಸಿದ ‘ಸಂವೇದ’ ಕಾರ್ಯಕ್ರಮದಲ್ಲಿ ೬ನೇ ಮತ್ತು ೭ನೇ ತರಗತಿಯ ವಿಜ್ಞಾನ ಪಠ್ಯಕ್ಕೆ ಸಂಬಂಧಿಸಿದಂತೆ ೨೫ ವಿಡಿಯೋ ಪಾಠಗಳನ್ನು ಮಾಡಿದ್ದಾರೆ. ಈ ಪಾಠಗಳಲ್ಲಿ ಅವರು ಪ್ರದರ್ಶಿಸಿದ ಸರಳ ಪ್ರಯೋಗಗಳು ರಾಜ್ಯದ ಎಲ್ಲೆಡೆ ಮಕ್ಕಳ ಪ್ರಶಂಸೆಗೆ ಪಾತ್ರವಾಗಿವೆ.

ಮುನಿರಾಜು ಅವರಿಂದ ತರಬೇತಿ ಪಡೆದ ಅವರ ವಿದ್ಯಾರ್ಥಿಗಳೂ ಅಷ್ಟೇ ಪ್ರತಿಭಾವಂತರು ಎಂಬುದಕ್ಕೆ ವಿಜ್ಞಾನ ವಸ್ತು ಪ್ರದರ್ಶನಗಳಲ್ಲಿ ಮಕ್ಕಳು ಪಡೆದಿರುವ ಬಹುಮಾನಗಳೇ ಸಾಕ್ಷಿ. ಕೇಂದ್ರ ಸರ್ಕಾರ ನಡೆಸುವ ‘ಇನ್‌ಸ್ಪೈರ್’ ವಸ್ತು ಪ್ರದರ್ಶನದಲ್ಲಿ ಅªರ ಶಾಲೆಯ ಮಕ್ಕಳು ತಯಾರಿಸಿದ ವಿಜ್ಞಾನದ ಮಾದರಿಗಳು ಸತತವಾಗಿ ಆರು ಬಾರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಬಹುಮಾನ ಪಡೆದಿರುವುದು ಶ್ಲಾಘನೀಯ. ಅದೇ ರೀತಿ, ಅಗಸ್ತ್ಯ ಫೌಂಡೇಷನ್ ನಡೆಸುವ ‘ಜಿಜ್ಞಾಸ’ ವಸ್ತುಪ್ರದರ್ಶನದಲ್ಲಿ ಅವರ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಅನೇಕ ಬಹುಮಾನಗಳನ್ನು ಹಾಗೂ ೨೦೨೧-೨೨ರಲ್ಲಿ ರಾಷ್ಟç ಮಟ್ಟದಲ್ಲಿ ದ್ವಿತೀಯ ಬಹುಮಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಇದು ಮುನಿರಾಜು ಅವರ ಕಾರ್ಯಕ್ಷಮತೆಗೆ ಇನ್ನೊಂದು ಸಾಕ್ಷಿ.

ಮುನಿರಾಜು ಅವರ ಜ್ಞಾನದ ಬಳಕೆ ಹಾಗೂ ಶೈಕ್ಷಣಿಕ ಸೇವೆ ಇಲ್ಲಿಗೇ ಸೀಮಿತವಾಗಿಲ್ಲ. ‘ಅಕ್ಷರ ಫೌಂಡೇಷನ್’ ಸಹಯೋಗದೊಂದಿಗೆ ಸಮಗ್ರ ಶಿಕ್ಷಣ-ಕರ್ನಾಟಕ ಜಾರಿಗೆ ತರುತ್ತಿರುವ ಗಣಿತ ಕಲಿಕಾ ಆಂದೋಲನದಲ್ಲಿ ೬ರಿಂದ ೮ನೇ ತರಗತಿಗಳಿಗೆ ಕಲಿಕೋಪಕರಣಗಳ ಕಿಟ್ ತಯಾರಿಕೆಗಾಗಿ ೨೧ದಿನಗಳ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಗಣಿತದ ಈ ಕಿಟ್ ಶಾಲೆಗಳನ್ನು ತಲುಪಲಿದ್ದು, ಗಣಿತ ಕಲಿಕೆಯಲ್ಲಿ ಒಂದು ಹೊಸ ಆಯಾಮವನ್ನು ಸೃಷ್ಟಿಸಲಿದೆ.

ಒಬ್ಬ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ತನ್ನ ಶಾಲಾ ಮಕ್ಕಳ ಕಲಿಕೆಗೆ ಯಾವುದೇ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸುತ್ತಾ ಇಷ್ಟೆಲ್ಲಾ ಸಾಧನೆ ಮಾಡಿರುವ ಮುನಿರಾಜು ಅವರ ಬಗ್ಗೆ ಹಲವು ಶಿಕ್ಷಣ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗಿವೆ.  ಅನೇಕ ಸಂಘ ಸಂಸ್ಥೆಗಳ ಜೊತೆಗೆ, ಇಲಾಖೆಯೂ ಇವರ ಶೈಕ್ಷಣಿಕ ಸೇವೆಯನ್ನು ಮುಕ್ತ ಕಂಠದಿಂದ ಪ್ರಶಂಶಿಸಿ, ಸತ್ಕರಿಸಿವೆ.

 ಮನಸ್ಸಿದ್ದರೆ ಮಾರ್ಗ’ ಎಂಬ ನಾಣ್ಣುಡಿಯಂತೆ ಒಬ್ಬ ಪ್ರಾಥಮಿಕ ಶಾಲಾ ಶಿಕ್ಷಕ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಮುನಿರಾಜು ಜ್ವಲಂತ ಮಾದರಿ. ಅವರ ಮುಂದಿನ ವೃತ್ತಿ ಜೀವನದಲ್ಲಿ ಇನ್ನಷ್ಟು ಸಾಧಿಸುವಂತಾಗಲಿ ಎಂದು ‘ಸವಿಜ್ಞಾನ’ ತಂಡ ಹಾರೈಸುತ್ತದೆ.

5 comments:

  1. ಸಕಾಲಿಕವಾದ, ಪ್ರೇರಣದಾಯಕ ಲೇಖನ. ಶಿಕ್ಷಕ ಮನಸ್ಸುಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಶ್ರೀಯುತರು ಪ್ರತ್ಯಕ್ಷ ಸಾಕ್ಷಿ, ಶಿಕ್ಷಕ ಸಮುದಾಯಕ್ಕೇ ಇವರು ಸದಾ ಪ್ರೇರಣೆ, ಮಾದರಿ.ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬುದನ್ನು ಸ್ವತಃ ಮಾದರಿಯಾಗಿ ತೋರಿಸಿಕೊಟ್ಟಿದ್ದಾರೆ. ಅವರನ್ನು ಗುರುಚೇತನ ಕಾರ್ಯ ಕ್ರಮದಲ್ಲಿ ಅತ್ಯಂತ ಹತ್ತಿತದಿಂದ ನೋಡಿದ್ದೇನೆ. ಕಂಡಿತ ಇವರು ಸಾಧಕರು. ಉತ್ತಮ ಲೇಖನ. ಬರೆದವರಿಗೂ, ಪ್ರಕಟಿಸಿದವರಿಗೂ ಹೃದಯಪೂರ್ವಕ ಧನ್ಯವಾದಗಳು

    ReplyDelete
  2. ಮುನಿರಾಜ ಸರ್ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಿ ಎಲ್ಲಾ ಶಿಕ್ಷಕರನ್ನು ಪ್ರೇರೇಪಿಸಿದ ಕ್ಕಾಗಿ ಗುರುದತ್ ಸರ್ ತಮಗೂ ಹಾಗೂ ಮುನಿರಾಜು ಅವರಿಗೆ ಅನಂತಾನಂತ ಧನ್ಯವಾದಗಳು

    ReplyDelete
  3. ಆತ್ಮೀಯ ಸ್ನೇಹಿತರಾದ ಮುನಿರಾಜುರವರ ಪರಿಚಯ ಲೇಖನ ಉತ್ತಮವಾಗಿ ಮೂಡಿಬಂದಿದೆ. ಆದರೂ ಲೇಖನಕ್ಕಿಂತ ಮಿಗಿಲಾಗಿ ಅವರ ವಿದ್ಯಾರ್ಥಿಗಳಿಗೆ ಪ್ರೇರಣೆಯನ್ನು ನೀಡಿ ಪ್ರೋತ್ಸಾಹಿಸುವುದನ್ನು ಯಾವ ಲೇಖನವು ವರ್ಣಿಸಲಾಗದು. ಅವರ ಕಲಿಯುವಿಕೆ ಹಾಗೂ ಅದನ್ನು ಇತರರೊಂದಿಗೆ ಹಂಚಿಕೊಳ್ಳುವ ಮನೋಭಾವ ದಲ್ಲಿ ಅವರಿಗೆ ಾವರೇ ಸಾಟಿ.

    ReplyDelete
  4. ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅವರ ಮಾತುಗಳನ್ನು ಕೇಳಿದ್ದೇನೆ ಇನ್ನೂ ಕೇಳುತ್ತಾ ಇರಬೇಕು ಅನಿಸುತ್ತದೆ ಅವರ ಪರಿಚಯ ಇಷ್ಟಕ್ಕೆ ಸಾಕಾಗುವುದಿಲ್ಲ. ಇತರರೊಂದಿಗೆ ಬೆರೆಯುವ,ವಿಷಯವನ್ನು ಹಂಚಿಕೊಳ್ಳುವ ಮನೋಭಾವ, ಸರಳ ಸಜ್ಜಿನಿಕೆಯ ವ್ಯಕ್ತಿತ್ವ ಇತರರಿಗೆ ದಾರಿ ದೀಪ
    ಧನ್ಯವಾದಗಳು ಸರ್

    ReplyDelete
  5. ಸ್ಫೂರ್ತಿಯ ಚಿಲುಮೆ... ಮಾದರಿ ಶಿಕ್ಷಕ... ನಿಮ್ಮ ಜೊತೆ 21 ದಿನ ಕಳೆಯುವ(ಕಲಿಯುವ )ಅವಕಾಶ ಸಿಕ್ಕಿದ್ದು ನನ್ನ ಭಾಗ್ಯವೇ ಸರಿ... ಇನ್ನೂ ನಿಮ್ಮಿಂದ ಹೆಚ್ಚಿನದನ್ನು ಬಯಸುವ.. ನಿಮ್ಮ N K Niranjan

    ReplyDelete