Sunday, June 5, 2022

ಸಂಪಾದಕರ ಡೈರಿಯಿಂದ . . . . . . . . .

 ಸಂಪಾದಕರ ಡೈರಿಯಿಂದ . . . . . . . . .

ಸವಿಜ್ಞಾನ’ ಇ-ಪತ್ರಿಕೆಯ ಎರಡನೆಯ ವರ್ಷದ ಆರನೆಯ ಸಂಚಿಕೆ ಜೂನ್ ತಿಂಗಳ 5ನೇ ತಾರೀಕಿನ, ‘ವಿಶ್ವ ಪರಿಸರ ದಿನ’ದಂದು ಪ್ರಕಟವಾಗುತ್ತಿದೆ. ಈ ಸಂಚಿಕೆಯಲ್ಲಿ ವನ್ಯಜೀವಿ ತಜ್ಞ ಹಾಗೂ ಶಿಕ್ಷಕ ಗೆದ್ದಲಿನ ಹುತ್ತಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸುವ ಪ್ರಯತ್ನವನ್ನು ತಮ್ಮ ಲೇಖನದಲ್ಲಿ ಮಾಡಿದ್ದಾರೆ, ಶಿಕ್ಷಕ ಸುರೇಶ್ ಸಂಕೃತಿ ಅವರು ಗೆಲಾಕ್ಸಿಗಳಿಗೆ ಸಂಬಂಧಿಸಿದ ಒಂದು ಸಂಭವನೀಯ ಘಟನೆಯ ಬಗ್ಗೆ ಬೆಳಕು ಚೆಲ್ಲಿದ್ದಾರೆ. ತಮ್ಮ ಬಣ್ಣ, ಬಣ್ಣಗಳ ಹೂಗಳಿಂದ ನಮ್ಮನ್ನು ಆಕರ್ಷಿಸುವ ಕಾಬಾಳೆ ಸಸ್ಯಗಳ ಬಗ್ಗೆ ಪರಿಚಯಾತ್ಮಕ ಲೇಖನವನ್ನು ಬರೆದಿರುವ ಶಿಕ್ಷಕ, ಸಂಗಮೇಶ ಬುರ್ಲಿ, ಈ ಮೂಲಕ ನಮ್ಮ ‘ಸವಿಜ್ಞಾನ’ ಬರಹಗಾರರ ಬಳಗವನ್ನು ಸೇರಿದ್ದಾರೆ. ಸುಂದರವಾದ ಲತಾಕುಂಜಗಳನ್ನು ನಿರ್ಮಿಸಿ,  ಪ್ರಣಯಾರಾಧನೆ ಮಾಡುವ ಬಾವರ್ ಹಕ್ಕಿಗಳ ಕೌಶಲ್ಯವನ್ನು ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ, ಡಾ. ಬಾಲಕೃಷ್ಣ ಅಡಿಗರು. ಪರಿಸರ ದಿನಾಚರಣೆ ಸಂದರ್ಭದಲ್ಲಿ, ಮಣ್ಣಿನ ಸಂರಕ್ಷಣೆಯ ಅವಶ್ಯಕತೆಯ ಬಗ್ಗೆ ಬರೆದಿದ್ದಾರೆ, ರಾಮಚಂದ್ರ ಭಟ್ಟರು. ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ, ವಿಜಯಕುಮಾರ್ ಬರೆದ ‘ಸರ್ವಾಂತರ್ಯಾಮಿ’ ನಾಟಕದ ಮೊದಲ ಭಾಗವೂ ಈ ಸಂಚಿಕೆಯಲ್ಲಿ ಪ್ರಕಟವಾಗಿದೆ.. ಜೊತೆಗೆ ಎಂದಿನಂತೆ ನಮ್ಮ ಸ್ಥಿರ ಶೀರ್ಷಿಕೆಗಳಾದ ವ್ಯಂಗ್ಯ ಚಿತ್ರಗಳು, ಒಗಟುಗಳು ಹಾಗೂ ಪದಬಂಧ, ಈ ಎಲ್ಲವನ್ನೂ ಸಂಚಿಕೆ ಒಳಗೊಂಡಿದೆ.

‘ಸವಿಜ್ಞಾನ’ದ ಮೂಲಕ ಇನ್ನಷ್ಟು ಹೊಸ ಬರಹಗಾರರನ್ನು ಪರಿಚಯಿಸುವ ಇಚ್ಛೆ ನಮಗಿದೆ. ನೀವೂ ಹಾಗೂ ನಿಮ್ಮ ವೃತ್ತಿಬಂಧುಗಳು ಸಹ ಲೇಖನಗಳನ್ನು, ಒಗಟುಗಳನ್ನು, ಪದಬಂಧಗಳನ್ನು ರಚಿಸಿ ಕಳುಹಿಸುವಿರಾದರೆ, ಅದಕ್ಕೆ ನಮ್ಮ ಸ್ವಾಗತವಿದೆ. ಈ ಸಂಚಿಕೆಯ ಬಗ್ಗೆ ನಿಮ್ಮ ವಿದ್ಯಾರ್ಥಿಗಳಿಗೂ, ಸಹೋದ್ಯೋಗಿಗಳಿಗೂ, ಬಂಧು-ಮಿತ್ರರಿಗೂ ತಿಳಿಸಿ. ಅವರೂ ಓದುವಂತೆ ಪ್ರೇರೇಪಿಸಿ.

                                                                ಪ್ರಧಾನ ಸಂಪಾದಕರು

No comments:

Post a Comment