Thursday, August 4, 2022

ಒಗಟುಗಳು : ಆಗಸ್ಟ್ 2022

ಒಗಟುಗಳು : ಆಗಸ್ಟ್ 2022


ಆಹಾರದ ಪೋಷಕಾಂಶ/ಘಟಕ ಸಂಬಂಧಿತ ವಿಜ್ಞಾನದ ಒಗಟುಗಳು


ನಾನೊಂದು  A ಜೀವಸತ್ವದ ಆಗರ

ನನ್ನಿಂದಾಗುವ ಖಾದ್ಯ ತರ ತರ

ನಾ ಹೀರುವೆ ನೀರು

ನಾನೊಂದು ಬೇರು

ಹಾಗಾದರೆ ನಾನ್ಯಾರು?


ಚಿನ್ನದ ಚೆಂಡು ನನ್ನುದರ

ನಾನು ಪ್ರೋಟೀನ್‌ ಆಕರ

ದೇಹ ನಿರ್ಮಾಣಕಾರಕ ನಾನು

ನಾನ್ಯಾರೆಂದು ಹೇಳು ನೀನು?


ನಾನೊಂದು ಜೀವಸತ್ವದ ಘಟಕ

ರೋಗ ನಿರೋಧಕ ಶಕ್ತಿ ನೀಡುವ ರಕ್ಷಕ

ಹುಳಿ ಹಣ್ಣುಗಳ ಸತ್ವ ನಾನು

ನಾನ್ಯಾರೆಂದು ಹೇಳು ನೀನು?


ನಾ ಸಿಗುವೆ ಸೂರ್ಯರಶ್ಮಿಯಿಂದ

ನಾನೆಂದರೆ ಮೂಳೆ ಹಲ್ಲುಗಳಿಗೆ ಆನಂದ

ಕೊಬ್ಬಿನಲ್ಲಿ ಕರಗುವೆ ನಾನು

ನಾನ್ಯಾರೆಂದು ಹೇಳು ನೀನು


ನಾನೊಂದು ಖನಿಜ

ಹಾಲು, ಹಾಲಿನ ಉತ್ಪನ್ನದಲ್ಲಿರುವುದು ನಿಜ

ಮೂಳೆ ಹಲ್ಲಿಗೂ ಅತ್ಯಗತ್ಯ

ನಾನಿರಬೇಕು ಆಹಾರದಲ್ಲಿ ನಿತ್ಯ

ನಾನ್ಯಾರು ?


ಜೀವಕೋಶಗಳ ರಿಪೇರಿ

ನಿಮ್ಮ ಬೆಳವಣಿಗೆಗೆ ಸಹಕಾರಿ

ಮೀನು, ಮಾಂಸ, ಮೊಟ್ಟೆಯಲ್ಲಿನ ಸಂಗ್ರಾಹಕ

ಕಾಳುಗಳಲ್ಲೂ ಅಧಿಕ

ನನ್ನಿಂದ ದೇಹ ಸಮತೂಕ

ನಾನ್ಯಾರು?


ಎಣ್ಣೆ, ಬೆಣ್ಣೆ , ತುಪ್ಪದಲ್ಲಿರುವ ನಾನು

ಕಾರ್ಬೋಹೈಡ್ರೇಟ್‌ ಗಿಂತ ಅಧಿಕ ಶಕ್ತಿ ನೀಡಬಲ್ಲೆ

ಮಿತಿಯಲ್ಲಿದ್ದರೆ ಆರೋಗ್ಯ

ಅತಿಯಾದರೆ ಅನಾರೋಗ್ಯ

ನಾನ್ಯಾರು?


ನಾನೊಂದು ಸೋಡಿಯಂ ಖನಿಜದ ಆಕರ

ನೀರಲ್ಲಿ ಕರಗಬಲ್ಲೆ

ಊಟದಲ್ಲಿ ಹೆಚ್ಚಾದರೂ ರುಚಿಯಿಲ್ಲ

ಕಡಿಮೆಯಾದರೂ ರುಚಿಯಿಲ್ಲ

ನಾನ್ಯಾರು ?


ಮಾನವನ ದೇಹದಲ್ಲಿ  60% ನಾನಿರುವೆ

ಹಣ್ಣು ಹಂಪಲಗಳಲ್ಲೂ ನಾನಿರುವೆ

ಜೀರ್ಣಕ್ರಿಯೆಗೆ ಸಹಾಯಕ ನಾನು

ನಾನಿಲ್ಲದೆ ಬದುಕಲಾರೆ ನೀನು

ನಾನ್ಯಾರೆಂದು ಹೇಳು ನೀನು? 


ಹಣ್ಣು ತರಕಾರಿ ಸೊಪ್ಪಿನಲ್ಲಿ ಸಮೃದ್ಧವಾಗಿರುವೆ

ನೀರನು ಹೀರಿ ತ್ಯಾಜ್ಯ ವಿಸರ್ಜನೆಗೆ ಸಹಕರಿಸುವೆ

ಹಾನಿಕಾರಕ ಬ್ಯಾಕ್ಟೀರಿಯಾ ಅಳಿಸಿ

ಉಪಯುಕ್ತ ಬ್ಯಾಕ್ಟೀರಿಯಾ ಹೆಚ್ಚಿಸುವೆ

ಕರುಳಿನ ಕಾಯಿಲೆ ಓಡಿಸುವೆ

ನಾನ್ಯಾರು?




ರಚನೆ; ಶ್ರೀಮತಿ ನಾಗವೇಣಿ.ಬಿ

ಸಹಶಿಕ್ಷಕಿ, CBZ

KPS ಬಸವನಗುಡಿ. ಬೆಂಗಳೂರು ದ.ವ-1






ಜುಲೈ ತಿಂಗಳ  ಒಗಟುಗಳ ಉತ್ತರಗಳು 


೧. ನಾನೊಂದು ಜೀವ ಕೋಶ

 ಆದರೆ ನನ್ನೊಳಿಲ್ಲ ನ್ಯೂಕ್ಲಿಯಸ್ 

ನನಗೂ ಕಬ್ಬಿಣದ ಮೇಲೆ ವ್ಯಾಮೋಹ 

ನನ್ನೊಳಿಲ್ಲ ಶಕ್ತಿ ಉತ್ಪಾದನಾ ಕೇಂದ್ರ 

ಆಕ್ಸಿಜನ್ ಹೊತ್ತೊಯ್ಯುವೆ  ನಾ 

 ಆದರೆ ನಾ ಅದನು ಬಳಸಲಾರೆ 

 ನನ್ನ ಸುಳಿವು ಸಿಕ್ಕಿತೆ ?


ಉ : ಕೆಂಪು ರಕ್ತಕಣ

೨.  ನನ್ನಲೂ ಏಳು ಬಣ್ಣಗಳಿವೆ ಆದರೆ ನಾನು ಕಾಮನಬಿಲ್ಲಲ್ಲ

 ಕಾಮನಬಿಲ್ಲಿನ ಏಳು ಬಣ್ಣಗಳು ವಿರುದ್ಧ ಜೋಡಣೆಯಲ್ಲಿವೆ 

ವಸ್ತುಗಳ ವಿಶಿಷ್ಟ ಗುಣ ಸ್ವಭಾವವನ್ನು ತಿಳಿಸಬಲ್ಲೆ 

ಅವುಗಳ ಪ್ರಬಲ  ದುರ್ಬಲತೆಯ ಹೋಲಿಸಿ ತಿಳಿಸಿ ಹೇಳಬಲ್ಲೆ 

14ರೊಳಗಿನ ಅಂಕಿಗಳಲೆ ನನ್ನ ಆಟ 

ಆಮ್ಲ ಪ್ರತ್ಯಾಮ್ಲಗಳ ನಡುವೆ ನೀರಿರಲು

 ಗುರುತಿಸಿ ಹೇಳಬಲ್ಲಿರೇ ನೀವು? 


ಉ : pH ಸ್ಕೇಲ್‌ 

 ೩. ಇವು ಬೇರುಗಳೇ ಆದರೂ ಭೂಮಿಯ ಒಳಹೋಗಲಾರವು 

ಧನ ಪ್ರಕಾಶಾನುವರ್ತನೆ ತೋರುವವು 

ಆದರೆ ಕಾಂಡಗಳಲ್ಲದ ಕಾಂಡ್ಲಗಳಿವು!

 ಅಳಿವೆಯಲಿ ಅಳಿಯದಂತೆ ಉಸಿರೆಳೆಯಲು ಇವುಗಳಿರಬೇಕು!!

ಸುಳಿವ ಬಿಡಿಸಿದರೆ ಸಿಕ್ಕೀತು ನಿಸರ್ಗದೊಡಲ ಈ ರಹಸ್ಯ 

ಉ : ಉಸಿರಾಡುವ ಬೇರುಗಳು (pneumatophores roots)



4 comments: