Thursday, August 4, 2022

ರಣಹದ್ದು : ಕಾಣದಾಗುತ್ತಿದೆ, ಸದ್ದು!

ರಣಹದ್ದು : ಕಾಣದಾಗುತ್ತಿದೆ, ಸದ್ದು!

ಲೇಖಕರು : ಶ್ರೀ ಕೃಷ್ಣ ಚೈತನ್ಯ

ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.

ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.

ಕೊಡಗು ಜಿಲ್ಲೆ.

ಇತ್ತೀಚಿನ ವರ್ಷಗಳಲ್ಲಿ ರಣಹದ್ದುಗಳು ನೋಡಲು ಸಿಗುವುದು ಬಹು ಅಪರೂಪವಾಗಿದೆ. ಇದರ ಹಿನ್ನೆಲೆಯನ್ನು ವಿಶ್ಲೇಷಿಸುವುದರ  ಜೊತೆಗೆ, ರಣಹದ್ದುಗಳ ಜೀವನ ಶೈಲಿಯ ಮೇಲೆ ಬೆಳಕು ಚೆಲ್ಲುವ ಈ ಲೇಖನ ಬರೆದವರು, ವನ್ಯಜೀವಿ ತಜ್ಞ ಹಾಗೂ ಶಿಕ್ಷಕ ಶ್ರೀ ಕೃಷ್ಣ ಚೈತನ್ಯ ಅವರು.

ರಾಮಾಯಣದ ಕಥೆಯಲ್ಲಿ ಬರುವ ಜಟಾಯು ಯಾರಿಗೆ ತಿಳಿದಿಲ್ಲ, ಹೆೇಳಿ? ರಾವಣ  ಸೀತೆಯನ್ನು ತನ್ನ  ಪುಷ್ಪಕ ವಿಮಾನದಲ್ಲಿ ಅಪಹರಿಸಕೊಂಡು ಹೋಗುವಾಗ ಸೀತೆಯ  ರಕ್ಷಣೆಗೆ ಬಂದ ಹಕ್ಕಿ  ಜಟಾಯು. ರಾವಣನ ಮೇಲೆ ಅದು ದಾಳಿ ಮಾಡಿದಾಗ ರಾವಣ ತನ್ನ ಹರಿತವಾದ ಕತ್ತಿಯಿಂದ  ಅದರ ರೆಕ್ಕೆಯನ್ನು  ಕತ್ತರಿಸಿ, ಸೀತೆಯನ್ನು ಅಪಹರಿಸಿಕೊಂಡು ಹೋದ ಎಂಬ ಕಥೆಯನ್ನು ನಾವೆಲ್ಲಾ ಓದಿದ್ದೇವೆ.  ಆ ಜಟಾಯುವೇ ನಮ್ಮ ಈ ಲೇಖನದ ಮುಖ್ಯ ವಸ್ತುವಾದ ರಣಹದ್ದು ! ರಣಹದ್ದುಗಳ ಜೀವನ ಶೈಲಿಯ ಬಗ್ಗೆ ಒಂದಷ್ಟು ಮಾಹಿತಿ ತಿಳಿದುಕೊಳ್ಳೋಣವೇ?

ನಿಮ್ಮ ಸುತ್ತ ಮುತ್ತ ಇರುವ ಮಕ್ಕಳನ್ನು ಕೇಳಿ ನೋಡಿ, ʼರಣಹದ್ದು ನೋಡಿದ್ದೀಯಾ?ʼ ಎಂದು. ನಿಮಗೆ ಬರುವ ಉತ್ತರ ʼಇಲ್ಲಾ ನೋಡಿಲ್ಲಾʼ ಎಂದೇ ! ಇದಕ್ಕೆ, ಅವು ತೀರಾ ವಿರಳವಾಗಿರುವುದೇ ಕಾರಣ. ರಣ ಹದ್ದುಗಳ ಸಂಖ್ಯೆ ಇಂದು ಕಡಿಮೆಯಾಗಿರುವುದಕ್ಕೆ ಪ್ರಮುಖ ಕಾರಣ ಅವುಗಳ ಬದುಕಿಗೆ ನಾವು ತಂದಿರುವ ಸಂಚಕಾರ ! ಭಾರತದಲ್ಲಿ ರಣ ಹದ್ದುಗಳ ಸುಮಾರು ಒಂಭತ್ತು ಪ್ರಭೇದಗಳು ಕಂಡು ಬಂದರೂ, ಅವುಗಳಲ್ಲಿ ಎರಡು ಪ್ರಭೇದಗಳು ಮಾತ್ರ ಚಳಿಗಾಲದಲ್ಲಿ ವಲಸೆ ಬರುತ್ತವೆ. ಆಕ್ಸಿಪಿಟ್ರಿಫಾರ್ಮಿಸ್(Accipiriformes)‌ ಗಣದ ಆಕ್ಸಿಪಿಟ್ರಿಡೆ(Accipitridae) ಕುಟುಂಬಕ್ಕೆ ಸೇರುವ ಇವುಗಳಲ್ಲಿ, ಈ ಕೆಳಗಿನ ನಾಲ್ಕು ಬಗೆಯವು ಸಾಮಾನ್ಯವಾಗಿ ಕಂಡು ಬರುತ್ತವೆ.



ಕೆಂಪು ತಲೆಯ ರಣಹದ್ದು(Gyps bengaensis)

 



ಭಾರತೀಯ ರಣಹದ್ದು(Gyps indicus),


 
ಈಜಿಪ್ಟಿನ ರಣಹದ್ದು(Neophron percnopterus),

 




ಹಿಮಾಲಯದ ರಣಹದ್ದು(Gyps himalayensis)



ತೆಳು ಕೊಕ್ಕಿನ ರಣಹದ್ದು(Gyps tenuirostris), ಗ್ರಿಫನ್‌ ರಣಹದ್ದು(Gyps fulvus) ಮತ್ತು ಸಿನೇರಿಯಸ್‌ ರಣಹದ್ದು (Aegypus monacus), ಇವೆರಡು ವಲಸೆ ಬರುವ  ರಣಹದ್ದುಗಳಾಗಿವೆ

ರಣಹದ್ದುಗಳು ಮಾಂಸಾಹಾರಿಯಾಗಿದ್ದರೂ, ಅವು ಬೇಟೆಯಾಡುವುದಿಲ್ಲ. ಇವು ಹೆಚ್ಚಾಗಿ ಅವಲಂಬಿಸಿರುವುದೇ ಸತ್ತ ಪ್ರಾಣಿಗಳ ಕಳೇಬರವನ್ನು. ಹಿಂದಿನ ಕಾಲದಲ್ಲಿ, ಮನೆಗಳಲ್ಲಿ ಸಾಕುತ್ತಿದ್ದ ದನ, ಎಮ್ಮೆ ಮುಂತಾದ ಪ್ರಾಣಿಗಳು ಸತ್ತಾಗ, ಅವುಗಳನ್ನು ಹೂಳುವ ಬದಲು, ಹೊತ್ತುಕೊಂಡು ಹೋಗಿ  ದೂರದ ಗುಡ್ಡ, ಕಾಡು, ಬಯಲು ಅಥವಾ ಹಳ್ಳಗಳಲ್ಲಿ ಬಿಸಾಡಿ ಬರುತ್ತಿದ್ದರು.ಒಂದೆರಡು ದಿನದಲ್ಲಿ ಆ ಪ್ರಾಣಿಗಳ ಹೆಣಗಳ ಕೊಳೆತ ವಾಸನೆ ಹರಡುತ್ತಿದ್ದಂತೆ, ರಣಹದ್ದುಗಳ ಹಿಂಡು ದೂರದ ಎಲ್ಲಿಂದಲೋ ಹಾರಿ ಲಲಬರುತ್ತಿದ್ದವು. ಅಷ್ಟರಲ್ಲಿ, ಸುತ್ತ ಮುತ್ತಲಿನ ನಾಯಿ, ನರಿಗಳು ಬಹುಪಾಲು ದೇಹವನ್ನು ತಿಂದು ಮುಗಿಸಿರುತ್ತಿದ್ದವು, ಉಳಿದ ಪಾಲು ರಣಹದ್ದುಗಳಿಗೆ ಮೀಸಲು. ಇತ್ತೀಚಿನವರೆಗೂ ರಣಹದ್ದುಗಳ ಜೀವನ ಕ್ರಮ ಹೀಗೇ ಸಾಗುತ್ತಿತ್ತು.

ಇಂದು,ಜನ  ಸಾಕು ಪ್ರಾಣಿಗಳನ್ನು ಅವುಗಳಿಗೆ ವಯಸ್ಸಾಗುತ್ತಿದ್ದಂತೆ, ಸಿಕ್ಕಷ್ಟು ಹಣಕ್ಕೆ ಕಸಾಯಿಖಾನೆಗೆ ಮಾರಿಬಿಡುತ್ತಾರೆ. ಮಾಂಸ ಪಡೆದುಕೊಂಡ ನಂತರ, ಉಳಿದ ಚರ್ಮ ವಾದ್ಯ, ನಡುಪಟ್ಟಿ, ಪಾದರಕ್ಷೆ, ಜಂಬದ (ವ್ಯಾನಿಟಿ) ಚೀಲ, ಜರ್ಕಿನ್‌ಗಳ ತಯಾರಿಕೆಗೆ ಬಳಕೆಯಾಗುತ್ತಿತ್ತು. ಇಂದು ಹೇಳಿ ಕೇಳಿ ಗೋಹತ್ಯೆಯ ಹೆಸರಿನಲ್ಲಿ ವಯಸ್ಸಾದ ಗಂಡು ಕರುಗಳನ್ನು ಮಾರಲಾಗದೆ, ಬೀದಿಯಲ್ಲಿ ಅನಾಥವಾಗಿ ಬಿಡಲಾಗುತ್ತಿದೆ. ಇನ್ನು, ವಾದ್ಯಗಳಲ್ಲಿ  ಒಡೆದುಹೋಗುವ ಚರ್ಮದ ಬದಲಿಗೆ, ಪಾಲಿಮರ್‌ ಶೀಟ್‌ ಗಳು ಬಂದು ಕುಳಿತಿವೆ. ಈ ಎಲ್ಲ ಪರಿಸ್ಥಿತಿಗಳಿಂದಾಗಿ, ರಣಹದ್ದುಗಳಿಗೆ ಆಹಾರ ಸರಿಯಾಗಿ ಒದಗುತ್ತಿಲ್ಲ. ಅವುಗಳ ಸಂಖ್ಯೆ ಕ್ಷೀಣಿಸುತ್ತಿರುವುದಕ್ಕೆ ಇದೇ ಪ್ರಮುಖ ಕಾರಣ.

ಇಂದು ರಣಹದ್ದುಗಳು ಉಳಿದಿರುವುದೇ ಬೆಂಗಳೂರಿನ ಸಮೀಪದ ರಾಮನಗರದ ಬೆಟ್ಟಗಳಲ್ಲಿ ಮತ್ತು ಕೆಲವು ಕಾಡುಗಳಲ್ಲಿ. ರಾಜ್ಯ ಅರಣ್ಯ ಇಲಾಖೆ ರಾಮನಗರದ ಈ ಬೆಟ್ಟಗಳನ್ನು ರಣಹದ್ದುಗಳ ಸಂರಕ್ಷಣಾ ಕೇಂದ್ರಗಳೆಂದು ಘೋಷಿಸಿದೆ.  ಕಾಡಿನಲ್ಲಿ ಹುಲಿಗಳು ಬೇಟೆಯಾಡಿ, ತಮ್ಮ ಪಾಲನ್ನು ಪಡೆದ ನಂತರ, ಉಳಿದ ಭಾಗ ನರಿ ಮತ್ತು ರಣಹದ್ದುಗಳಿಗೆ ಎಡೆ ಇದ್ದಂತೆ. ಅಂದರೆ, ಅಲ್ಲಿಯೂ ಮೀಸಲು. ಹುಲಿ ತನ್ನ ಪಾಲನ್ನು ತಿಂದು ಮುಗಿಸಿ ಬೆನ್ನು ಹಾಕಿದ ನಂತರ, ಕಾದುಕೋಂಡಿರುವ ನರಿ, ರಣಹದ್ದುಗಳು ದಾಂಗುಡಿ ಇಡುತ್ತವೆ. ನರಿ ತನ್ನ ಪಾಲನ್ನು ತಿನ್ನುತ್ತಿರುವಾಗಲೇ, ರಣಹದ್ದುಗಳು ಮೂಳೆಗಳ ಸಂಧಿ ಇರುವ ಚೂರು ಪಾರು ಮಾಂಸಗಳನ್ನು ಬಿಡಿಸಿ ತಿನ್ನಲು ಪ್ರಾರಂಭಿಸಿರುತ್ತವೆ. ರಣಹದ್ದುಗಳ ಕೊಕ್ಕು ಮತ್ತು ಕತ್ತು ವಿಶೇಷವಾಗಿ ರೂಪುಗೊಂಡಿದ್ದು, ಈ ರೀತಿ ಮಾಂಸವನ್ನು ಹೆಕ್ಕಿ ತಿನ್ನಲು ಪೂರಕವಾಗಿ ಕತ್ತನ್ನು ಹೊರಳಿಸಲು ನೆರವಾಗುತ್ತವೆ. ಒಂದು ಪ್ರಾಣಿ ಸತ್ತ ಮೇಲೆ ಅದನ್ನು ಆಹಾರವಾಗಿ ಸೇವಿಸಿ, ಅಲ್ಲಿ ಪೂರ್ತಿ ಸ್ವಚ್ಛತೆ ಕಾಪಾಡಿಕೊಳ್ಳುವುದರಲ್ಲಿ ರಣಹದ್ದುಗಳು ಹೆಸರುವಾಸಿ. ಹೇಳಿಕೊಟ್ಟರೂ ಸ್ವಚ್ಛತೆಯ ಪಾಠ ಕಲಿಯದ ನಾವುಗಳೆಲ್ಲಿ ? ಈ ರಣಹದ್ದುಗಳೆಲ್ಲಿ ?

ಇಂಥ ಹಕ್ಕಿಗಳಿಗೆ ಇಂದು ಸಂಚಕಾರ ಬಂದಿರುವುದು ದುರ್ದೈವದ ಸಂಗತಿ. ಸತ್ತ ಪ್ರಾಣಿಗಳ ಅಲಭ್ಯತೆ, ಇಲ್ಲವೇ ವಿಷಪ್ರಾಶನದಿಂದ ಸತ್ತ ಪ್ರಾಣಿಗಳನ್ನು ತಿನ್ನುತ್ತಿರುವ ಕಾರಣದಿಂದಲೋ ಅಥವಾ ಅಹಾರ ಸರಪಳಿಗಳ ಮೂಲಕ ಸಾಗಿಬರುವ ಜೈವಿಕವರ್ಧಿತ (biomagnified) ವಿಷವನ್ನು ಉಣ್ಣುತ್ತಿರುವುದರಿಂದಲೋ ರಣಹದ್ದುಗಳ ಸಂಖ್ಯೆ ಬಹುವಾಗಿ ಕ್ಷೀಣಿಸುತ್ತಿದೆ. ಉಳುಮೆ ಮಾಡಲು ಯಂತ್ರಗಲ ಬಳಕೆ, ಹೆಚ್ಚಿನ ಹಾಲಿಗಾಗಿ ಹಲವು ಸೀಮೆ ಹಸುಗಳ ಬದಲಿಗೆ ಒಂದೆರಡು ಜರ್ಸಿ, ಹೋಲ್‌ಸ್ಟೀನ್ಗಳ ಬಳಕೆ ಆಗುತ್ತಿರುವುದರಿಂದ ಸಾಕು ಪ್ರಾಣಿಗಳ ಸಂಖ್ಯೆ ತೀವ್ರ ಕಡಿಮೆ ಆಗಿರುವುದು, ಮುಂತಾದ ಕಾರಣಗಳಿಂದಾಗಿ ರಣಹದ್ದುಗಳಿಗೆ ಆಹಾರವೇ ಇಲ್ಲದಂತಾಗಿದೆ

ರಣಹದ್ದುಗಳ ಸಂತಾನೋತ್ಪತ್ತಿ ವೇಗವೂ ಕಡಿಮೆಯಾಗಿರುವುದು ಇನ್ನಷ್ಟು ಕಳವಳಕಾರಿಯಾದ ಸಂಗತಿ. ಪ್ರತಿ ವರ್ಷ ಗೂಡು ಕಟ್ಟಿ ಮರಿ ಮಾಡುತ್ತಿದ್ದ ಒಂದು ಜೋಡಿ ರಣಹದ್ದುಗಳು, ಇತ್ತೀಚೆಗೆ, 6-7 ವರ್ಷಗಳಿಗೊಮ್ಮೆ ಕೇವಲ ಒಂದು ಮೊಟ್ಟೆಯನ್ನಿಟ್ಟು ಪೋಷಿಸುವ ಸ್ಥಿತಿ ತಲುಪಿವೆ ! ಪರಿಸ್ಥಿತಿ ಹೀಗೇ ಮುಂದುವರೆದರೆ, ಮುಂದೊಂದು ದಿನ ರಣಹದ್ದುಗಳನ್ನು ಕೇವಲ ಚಿತ್ರಪಟದಲ್ಲಿ ಮಾತ್ರ ತೋರಿಸಬೇಕಾಗಬಹುದು ! ಎಲ್ಲರೂ ಯೋಚಿಸಬೇಕಾದ ವಿಷಯ, ಅಲ್ಲವೇ?

 

4 comments:

  1. ಹದ್ದುಗಳ ಬಗ್ಗೆ ಸಾಕಷ್ಟು ವಿಮರ್ಶಾತ್ಮಕ, ವಿವರವಾದ ಮತ್ತು ಸುಂದರವಾದ ಲೇಖನ. ತಿಳಿಯದಿದ್ದ ಎಷ್ಟೋ ವಿಷಯಗಳನ್ನು ಅರಿತು ಕೊಂಡಂತಾಯಿತು. ಆದರೆ, ಇವುಗಳ ಸಂತತಿ ಅವನತಿಯ ಹಾದಿ ಹಿಡಿಯುತ್ತಿರುವುದು ತುಂಬಾ ಆಘಾತಕಾರಿ ಸಂಗತಿ.
    ತುಂಬಾ ಧನ್ಯವಾದಗಳು ಸರ್.

    ReplyDelete
  2. Human interference has always disturbed the natural balance and JUST THE NEXT LEVEL.
    Nice sir, time for self realization and exploration

    ReplyDelete