Sunday, December 4, 2022

ವಿಜ್ಞಾನ ಒಗಟುಗಳು : ಡಿಸೆಂಬರ್ 2022

 ಇವರು ಯಾರು ಬಲ್ಲಿರೇನು?

ಹಸಿರ ಹೊನ್ನಾಗಿಸಿ ಸಾಕ್ಷಾತ್ಕಾರದ ಹಾದಿಯಲ್ಲಿ ಮುನ್ನಡೆದು

ವಿಜ್ಞಾನ, ಸಾಹಿತ್ಯಗಳಿಗಾಗಿ ಜೀವತೇಯ್ದು ಶ್ರೀಮಂತ ಗೊಳಿಸಿದ

ಪಂಚ ಕಲಶ ಗೋಪುರಕೇರಿದ ಪ್ರಾಧ್ಯಾಪಕ ವಿಜ್ಞಾನಿ

ಸುಳಿವ ಹಿಡಿದು ಗುರುತಿಸ ಬಲ್ಲಿರೆ ಈ ಮಹಾಮಹಿಮನ ?

 

ನಕ್ಷತ್ರದ ಆಕಾರದಲ್ಲಿರುವೆ ಬಾನ ತಾರೆಯಲ್ಲ

ನೀರೊಳಗಿದ್ದರೂ ನಾ ಮೀನಲ್ಲ

ಮೈಮೇಲೆ ಮುಳ್ಳುಗಳಿದ್ದರೂ ಗಿಡಗಂಟಿಯಲ್ಲ

ಪಂಚ ಭುಜಗಳಿದ್ದರೂ ಕೊಳವೆ ಕಾಲ್ಗಳೇ ಆಸರೆ

ಕೈ ಕತ್ತರಿಸಿ ಬಿಸುಟರು ನಿಶ್ಚಿಂತೆ

ಸುಳಿವಿನ್ನೂ ಸಾಲದೆ?

ಓ ಜಾಣ ಜಾಣಿಯರೇ 

ಹೇಳಿಬಿಡಿ ನನ್ನ ಗುರುತು ವಂಶದ ಪರಿಚಯ

 

ದೇವನ ಅದ್ಭುತ ಚಾತುರ್ಯದ ಸೃಷ್ಟಿಯೆಂಬ ಹೆಸರಿಟ್ಟರು ನನಗೆ

ವಿಜ್ಞಾನಿಗಳ ಪಾಲಿಗೆ B6 ನಾನು

ದಿನಗಟ್ಟಲೆ ನಿದ್ರಾಹಾರ ವಿರಾಮಗಳ ಗೊಡವೆ  ಇಲ್ಲದೆ

ಸಹಸ್ರ ಯೋಜನ ಹಾರಬಲ್ಲೆ!!!

ಈ ಹಾರುವಾಟದಲ್ಲಿ ನನ್ನದೇ ವಿಶ್ವದಾಖಲೆ!!!

ತಣ್ಣಗಿನ ಅಲಾಸ್ಕಾ ನನ್ನ ಮೆಚ್ಚಿನ ತಾಣ

ಗುರುತು ಹಿಡಿದಲ್ಲಿ ನಿಮ್ಮ ಸಾಧನೆಗೆ ಸ್ಫೂರ್ತಿ ಸಿಕ್ಕೀತು!!!


ನಾನು ಬ್ಯಾಕ್ಟೀರಿಯಾವಲ್ಲ ವೈರಸ್ಸೂ ಅಲ್ಲ ಆದರೆ

ನಿಮ್ಮ ಪ್ಲೀಹ ಯಕೃತ್ ಗಳಿಗೆ  ಸೋಂಕು ತಗಲಿಸಿ ನಾಶಪಡಿಸಬಲ್ಲೆ.

ದ್ವಿವಿದಳನಕ್ಕೆ ಒಳಪಡಬಲ್ಲೆ ಆದರೆ ಅಮೀಬವಲ್ಲ

ನೀಳ ಅಕ್ಷದಿ ದ್ವಿವಿಭಜನೆಯಿಂದ, ಸಂತಾನ ವೃದ್ಧಿಗೊಳಿಸುವೆ ನಾ

ತಿಳಿದವರು ಹೇಳಬಲ್ಲಿರೇ ನಾನ್ಯಾರು ಎಂದು


ಸಮಸ್ತ ಜೀವಿಗಳಿಗೂ ನಾನು ಬೇಕು

ನಾನಿಲ್ಲದೇ ನೀವಿರಲಾರಿರಿ. 

ನಿಮ್ಮ ಧನ ಕನಕಗಳಿಗೆ ನಾನೇ ಆಗರ 

ಜೀವಿ-ನಿರ್ಜೀವಿಗಳು ಸೇರಿವೆ ನನ್ನಲಿ

ನಾನಿಲ್ಲದೇ ನೀವೇನನ್ನೂ ಬೆಳೆಯಲಾರಿರಿ

ಆದರೂ ಮಾನವನಿಗೆ ನನ್ನ ಮೇಲೇಕೋ ಅವಕೃಪೆ

ಡಿಸೆಂಬರ್‌ ೫ ರಂದು ಜನಜಾಗೃತಿ ಮಾಡುವರು

ಸುಳಿವ ಹಿಡಿದು ಹೇಳಿರಿ ನನ್ನ ಗುರುತ  


 


No comments:

Post a Comment