Sunday, December 4, 2022

ಅಸಾಧಾರಣ ಪ್ರತಿಭೆಯುಳ್ಳ ವಿಶೇಷವಾದ ಮೀನು - ಆರ್ಚರ್ ಮೀನು

ಅಸಾಧಾರಣ ಪ್ರತಿಭೆಯುಳ್ಳ ವಿಶೇಷವಾದ ಮೀನು - ಆರ್ಚರ್ ಮೀನು

ಲೇಖಕರು:   ಅನಿಲ್ ಕುಮಾರ್ ಸಿ.ಎನ್.  
ಸರ್ಕಾರಿ ಪ್ರೌಢಶಾಲೆ
ರಾಮನಗರ ತಾ
ರಾಮನಗರ ಜಿಲ್ಲೆ


ಡಾ|| ರಾಜ್‍ಕುಮಾರ್ ಅಭಿನಯದ ಬಬ್ರುವಾಹನ ಚಲನಚಿತ್ರದಲ್ಲಿ, ಬಬ್ರುವಾಹನನು ನೀರಿನಲ್ಲಿ ಕಂಬದ ಮೇಲೆ ತಿರುಗುತ್ತಿರುವ ಮೀನಿನ ಬಿಂಬವನ್ನು ನೋಡಿ, ಮೀನಿನ ಕಣ್ಣಿಗೆ ಗುರಿ ಇಟ್ಟು ಬಾಣ ಹೊಡೆಯುತ್ತಾನೆ. ಚಲನಚಿತ್ರ ನೋಡಿದ ಯಾರಿಗೆ ತಾನೇ ದೃಶ್ಯವನ್ನು ಮರೆಯಲು ಸಾಧ್ಯ ಹೇಳಿ.  ಬಬ್ರುವಾಹನನು ತಂದೆ ಅರ್ಜುನನಂತೆ  ಅಪ್ರತಿಮ ಬಿಲ್ವಿದ್ಯೆ ನಿಪುಣನೆಂದು ಸಾರಿ ಹೇಳುತ್ತದೆ. ಇದೇ ರೀತಿ ನಾನು ನಿಮಗೆ ಪರಿಚಯಿಸಲು ಇಚ್ಛಿಸುವ ವಿಶೇಷವಾದ ಜೀವಿಗೂ ಅಂತಹುದೇ ಕಲೆ ಇದೆ ಎಂದರೆ ತಪ್ಪಾಗಲಾರದು.                

ಆಸ್ಟ್ರೇಲಿಯಾ, ಪಾಲಿನೇಷ್ಯಾ, ಮ್ಯಾನ್ಮಾರ್, ಆಗ್ನೇಯ ಚೀನಾ, ಥೈಲ್ಯಾಂಡ್, ಫಿಲಿಪೈನ್ಸ್ ಮತ್ತು ಭಾರತದಂತಹ ದೇಶಗಳಲ್ಲಿನ ಶಾಂತ ನೀರಿನಲ್ಲಿ, ಆರ್ಚರ್ ಮೀನು ಎಂದು ಕರೆಯಲ್ಪಡುವ ಅಸಾಮಾನ್ಯ ಮೀನು ಇದೆ. ಆರ್ಚರ್ ಮೀನು ಇತರ ಮೀನುಗಳಿಗಿಂತ ಭಿನ್ನ ಏಕೆಂದರೆ, ಅದು ನೀರಿನ ಹೊರಗೆ ವಾಸಿಸುವ ಕೀಟ, ಚಿಟ್ಟೆ, ಜೇಡ ಅಥವಾ ಅಂತಹುದೇ ಜೀವಿಗಳನ್ನು ತನ್ನ ಬೇಟೆಯನ್ನಾಗಿಸಿಕೊಂಡಿದೆ. ಆರ್ಚರ್ ಮೀನು ಕೊಳದ ದಂಡೆಯ ಮೇಲಿರುವ ಕೊಂಬೆ ಅಥವಾ ರೆಂಬೆಯ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಕೀಟಗಳನ್ನು ತನ್ನ ಆಹಾರವಾಗಿ ಆರಿಸಿಕೊಳ್ಳುತ್ತದೆ. ಕೀಟಗಳು ಆರ್ಚರ್ ಮೀನಿನ ಶಕ್ತಿಯುತ ನೀರಿನ ಸ್ಪ್ರೇಗೆ ಗುರಿಯಾಗಿ ನೀರಿನ ಮೇಲ್ಮೈ ಮೇಲೆ ಬೀಳುತ್ತವೆ. ಹೀಗೆ ಕೆಳಕ್ಕುರುಳಿದ ಕೀಟವನ್ನು ತನ್ನ ಆಹಾರವಾಗಿಸಿಕೊಳ್ಳುತ್ತದೆ. ಇಲ್ಲಿ ಗಮನಾರ್ಹ ಸಂಗತಿ ಏನೆಂದರೆ, ಬೆಳಕು ವಿಭಿನ್ನ ಸಾಂದ್ರತೆಗಳುಳ್ಳ ಒಂದು ಮಾಧ್ಯಮದಿಂದ ಮತ್ತೊಂದು ಮಾಧ್ಯಮಕ್ಕೆ ಓರೆಯಾಗಿ ದಾಟುವಾಗ ತನ್ನ ಪ್ರಸರಣ ದಿಕ್ಕನ್ನು ಬದಲಾಯಿಸುತ್ತದೆ. ಅಂದರೆ ವಕ್ರೀಭವನ ಹೊಂದುತ್ತದೆ. ಇದರಿಂದ ಮರದ ಮೇಲಿನ ಕೀಟದ ಸ್ಥಾನವನ್ನು ನಿಖರವಾಗಿ ಗುರುತಿಸುವುದು ಕಷ್ಟಕರವಾಗಿರುತ್ತದೆ. ಹೀಗಿದ್ದಾಗ್ಯೂ ಆರ್ಚರ್ ಮೀನು ನೀರಿನಲ್ಲಿದ್ದು ಕೊಂಡು ತನ್ನ ಬೇಟೆಗೆ ನಿಖರವಾಗಿ, ಬಹಳ  ಪ್ರಬಲವಾದ ನೀರಿನ ಸ್ಪ್ರೇ ಮಾಡಿ ತನ್ನ ಬೇಟೆಯನ್ನು ಕೆಳಗುರುಳುವಂತೆ ಮಾಡುತ್ತದೆ ಮತ್ತು ಬಹಳ ವೇಗವಾಗಿ ಕೀಟ. ಬಿದ್ದ ಸ್ಥಳಕ್ಕೆ ತಕ್ಷಣ ತಲುಪಿ, ಬೇಟೆಯನ್ನು ತನ್ನದಾಗಿಸಿಕೊಳ್ಳುವಲ್ಲಿ ಸಫಲವಾಗುತ್ತದೆ. ವಿಶೇಷವಾದ ಲಕ್ಷಣ ಎಲ್ಲರನ್ನು ಬೆರಗುಗೊಳಿಸುತ್ತದೆ ಅಲ್ಲವೇ?


ಆರ್ಚರ್ ಮೀನಿಗೆ ಇದು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಮೂಡದೇ ಇರದು. ಬೆಳಕು ಒಂದು ಮಾಧ್ಯಮದಮೇಲ್ಮೈ ಗೆ  ಲಂಬವಾಗಿ ಹಾದು ಹೋದರೆ ವಕ್ರೀಭವನ ಹೊಂದುವುದಿಲ್ಲವೆಂದು ನಮಗೆಲ್ಲ ತಿಳಿದಿದೆ. ಅಂದರೆ ಮೀನು ಲಂಬದ ದಿಕ್ಕಿನಲ್ಲಿ ನೀರನ್ನು ಚಿಮ್ಮಿದ್ದೆ ಆದರೆ, ಅದು ವಕ್ರೀಭವನ ಹೊಂದದೆ ನೇರ ದಿಕ್ಕಿನಲ್ಲಿ ಚಲಿಸಿ ಬೇಟೆಯನ್ನು ಕೆಳಗೆ ಬೀಳಿಸಬಹುದು. ಆದರೆ ಮೀನು ಓರೆಯಾಗಿ ಅಂದರೆ ಪತನ ಕೋನ 40° ಯಷ್ಟು ಇದ್ದಾಗಲೂ ಸಹ ಯಾವುದೇ ತೊಂದರೆಯಿಲ್ಲದೇ ಅದರ ಬೇಟೆಗೆ ಗುರಿಯಿಟ್ಟು ನೀರನ್ನು ಚಿಮ್ಮತ್ತದೆ. ಆದರೆ ಇಂದಿಗೂ ಅರ್ಥವಾಗದೇ ಉಳಿದಿರುವ ಸಂಗತಿ ಎಂದರೆ ಮೀನು ನೀರಿನಲ್ಲಿದ್ದು ಕೊಂಡು ಬೆಳಕಿನ ವಕ್ರೀಭವನದಿಂದ ನಿಖರತೆಯಲ್ಲಿ ಸ್ವಲ್ಪವೂ ವ್ಯತ್ಯಾಸವಾಗದಂತೆ, ತನ್ನ ಬೇಟೆಯ ನಿಖರವಾದ ಸ್ಥಾನವನ್ನು ಗುರುತಿಸಿ, ದೂರವನ್ನು ಅಂದಾಜಿಸಿ, ನೀರಿನ ವೇಗವನ್ನು ಸರಿಹೊಂದಿಸಿ ಬೇಟೆಯ ಮೇಲೆ ನೀರಿನ ಪ್ರಹಾರ ಮಾಡುವುದು ಹೇಗೆ ಸಾಧ್ಯವಾಯಿತೆಂಬುದು.

 ಬದುಕಿನ ಹೋರಾಟದಲ್ಲಿ ಹೊಂದಾಣಿಕೆ ಅತ್ಯಂತ ಅವಶ್ಯಕ. ಡಾರ್ವಿನ್‌ ಹೇಳಿದಂತೆ ಯೋಗ್ಯ ಜೀವಿಯ ಉಳಿವು ಇಲ್ಲಿ ಕಾಣಸಿಗುತ್ತದೆ. ಕಾಲಾಂತರದಲ್ಲಿ ಮೀನು ಅದೆಷ್ಟು ಪ್ರಯತ್ನಗಳ ನಂತರ ಇವೆಲ್ಲ ಸವಾಲುಗಳನ್ನು ಬಹಳ ಸಲೀಸಾಗಿ ಎದುರಿಸಿ ತನ್ನ ಬೇಟೆಯನ್ನು ಪಡೆಯುವಲ್ಲಿ ಸಫಲವಾಗಿದೆಯೋ. ಆರ್ಚರ್ ಮೀನು ಬೇಟೆಯನ್ನು ಕೆಳಗುರುಳಿಸುವ ರೋಚಕ ವಿಡಿಯೋದ ಲಿಂಕ್ ಕೆಳಗಿದೆ. ನೋಡಿ ಆನಂದಿಸಿ.

https://youtu.be/f8oV4RBYR9U


8 comments:

  1. ಭೌತಶಾಸ್ತ್ರ ಮತ್ತು ಜೀವಶಾಸ್ತ್ರ ಸಮ್ಮಿಳಿತ ಲೇಖನ ಅಚ್ಚರಿಯೇ ಸರಿ. ಧನ್ಯವಾದಗಳು

    ReplyDelete
  2. ಪ್ರಕೃತಿ ಮಾತೆ ತನ್ನಲ್ಲಿ ಅಡಗಿಸಿಕೊಂಡ ವಿಸ್ಮಯಗಳು ಅದ್ಭುತ. ಲೇಖನ ತುಂಬಾ ಚೆನ್ನಾಗಿದೆ.Thanks for sharing sir

    ReplyDelete
  3. ಸವಿಜ್ಞಾನ ಎಂಬ ಶೀರ್ಷಿಕೆಗೆ ತಕ್ಕ ಲೇಖನ. ತುಂಬ ಖುಷಿಯಾಯಿತು ಸರ್. ಅಭಿನಂದನೆಗಳು ಸರ್

    ReplyDelete
  4. ಮತ್ಸ್ಯ ಲೋಕದ ಅಪರೂಪದ ಜೀವಿಯ ಆಹಾರ ಭೇಟೆಯ ವಿಧಾನದಲ್ಲಿ ಬೌತ ಶಾಸ್ತ್ರದ ನಿಯಮಗಳನ್ನು ಮೀರಿದ ವರ್ತನೆ ಅನೂಹ್ಯವಾಗಿದೆ. ಅಭಿನಂದನೆಗಳು ಸರ್.

    ReplyDelete
  5. Strange creatures in a wonderful world no words to express it's beauty ,thank u for sharing with us

    ReplyDelete
  6. ಈ ಮೀನಿನ ಪ್ರತಿಭೆ ನಿಜಕ್ಕೂ ಅಸಾಧಾರಣ.ಪ್ರಕ್ರತಿಯ ಅದ್ಭುತಗಳಲ್ಲಿ ಇದೂ ಒಂದು ಎನ್ನುವುದರಲ್ಲಿ ಸಂಶಯವಿಲ್ಲ. ಸುಂದರವಾದ ಲೇಖನಕ್ಕೆ ಧನ್ಯವಾದಗಳು.

    ReplyDelete