Sunday, December 4, 2022

ಅಲಾಸ್ಕಾದಿಂದ ಟಾಸ್ಮೇನಿಯಕ್ಕೆ!!!

ಅಲಾಸ್ಕಾದಿಂದ ಟಾಸ್ಮೇನಿಯಕ್ಕೆ!!! 

  ಲೇಖಕರು : ಬಿ.ಜಿ.ರಾಮಚಂದ್ರ ಭಟ್

 



ಅದು ಅಕ್ಟೋಬರ್‌ ತಿಂಗಳ 24 ತಾರೀಖು. ಜಗತ್ತಿನಾದ್ಯಂತ ಪಕ್ಷಿಪ್ರೇಮಿಗಳಲ್ಲಿ ಮಹಾ ಸಂಚಲನ. ಹುಚ್ಚೇ ಹಿಡಿಯಿತೇನೋ ಎನ್ನುವಷ್ಟು ಉನ್ಮಾದ!!! ಅಸಾಧ್ಯವಾದದ್ದೊಂದು ಅಂದು ಘಟಿಸಿಯೇ ಬಿಟ್ಟಿತ್ತು. ನೀರೀಕ್ಷೆ ಹುಸಿಯಾಗಲಿಲ್ಲ. ಕೊರೆವ ಚಳಿಯಲ್ಲೂ ಮೈಯಲ್ಲಿ ಬಿಸಿರಕ್ತ ಸಂಚಾರವಾದ ಭಾವ . ವಿಶ್ವದಾಖಲೆಯೊಂದಕ್ಕೆ ಸಾಕ್ಷಿಯಾದ ಕ್ಷಣ!!!. 5 ತಿಂಗಳ ಪಕ್ಷಿಯೊಂದು ಎಲ್ಲೂ ನಿಲ್ಲದೆ, ಅರೆ ಕ್ಷಣವೂ ವಿರಮಿಸದೇ, ತಾಸೊಂದಕ್ಕೆ ಸುಮಾರು 51 km ಗೂ ಹೆಚ್ಚಿನ ವೇಗದೊಂದಿಗೆ 11 ದಿನಗಳ ಸುದೀರ್ಘ ಪ್ರಯಾಣದಲ್ಲಿ 13,560km ಕ್ರಮಿಸಿ ವಿಶ್ವದಾಖಲೆ ನಿರ್ಮಿಸಿತ್ತು!!!.
 
ದಾಖಲೆ ಸೃಜಿಸಿದ ಗಾಡ್‌ವಿಟ್‌ನ ಈ ಪ್ರಯಾಣವನ್ನು ಮ್ಯಾಕ್ಸ್ ಪ್ಲ್ಯಾಂಕ್ ಇನ್‌ಸ್ಟಿಟ್ಯೂಟ್, ನ್ಯೂಜಿಲೆಂಡ್‌ನ ಮ್ಯಾಸ್ಸೆ ವಿಶ್ವವಿದ್ಯಾಲಯ, ಚೀನಾದ ಫುಡಾನ್ ವಿಶ್ವವಿದ್ಯಾಲಯ ಮತ್ತು ಗ್ಲೋಬಲ್ ಫ್ಲೈವೇ ನೆಟ್‌ವರ್ಕ್ ಸಂಸ್ಥೆಗಳನ್ನು ಒಳಗೊಂಡ ಟ್ರ್ಯಾಕಿಂಗ್ ಅಧ್ಯಯನ ತಂಡಗಳು ದಾಖಲಿಸಿವೆ. ಗಾಡ್ವಿಟ್‌ನ ಈ ಮಹಾಯಾನದ ಸಂಭ್ರಮವನ್ನು ಜಗತ್ತಿನಾದ್ಯಂತ ಪಕ್ಷಿಪ್ರೇಮಿಗಳು ಆಚರಿಸಿದರು; ನ್ಯೂಜಿಲೆಂಡ್‌ನ ಪುಕೊರೊಕೊರೊ ಮಿರಾಂಡಾ ಶೋರ್‌ಬರ್ಡ್ ಕೇಂದ್ರವು "ದೀರ್ಘ-ಪ್ರಯಾಣದ ಚಾಂಪಿಯನ್" ಸಾಧನೆಯ ನೆನಪನ್ನು ವಿಶಿಷ್ಟವಾಗಿ ಆಚರಿಸುವ ಯೋಜನೆಯೊಂದಕ್ಕೆ ಚಾಲನೆ ನೀಡಿದೆ.

ಅಯ್ಯೋ ಇದು ಅಲಾಸ್ಕಾದ ಮೂಳೆ ಕೊರೆವ ಮಹಾ ಚಳಿ!!! ಈ ಚಳಿ ಸಹಿಸಲಾರೆ ಎನ್ನುತ್ತಿದೆಯೇ ಈ ಸಾಹಸಿಯ ಮನಸ್ಸು? ನನ್ನ ರೆಕ್ಕೆಗಳು ಸಾವಿರಾರು ಮೈಲಿ ಹಾರುವಷ್ಟು ಬಲಿಷ್ಟವೇ? ಹಾರಿ ಸಾಮರ್ಥ್ಯ ಪರೀಕ್ಷಿಸಲೇ? ಎಂಬೆಲ್ಲಾ ಆಲೋಚನೆಗಳು ತೀರಾ ಎಳೆಯ - ಸುಮಾರು 5 ತಿಂಗಳ ವಯಸ್ಸಿನ B 6 ಎಂದು ಗುರುತಿಸಲಾಗುವ ಪುಟ್ಟ ಹಕ್ಕಿಗೆ ಬಂದಿರಬಹುದು!!.


ಅಲಾಸ್ಕಾದಲ್ಲಿ ಟ್ಯಾಗ್ ಮಾಡಲಾದ ಈ ಗೆರೆ ಬಾಲದ ಗಾಡ್ವಿಟ್ ಹಕ್ಕಿ ( ಲಿಮೋಸಾ ಲ್ಯಾಪ್ಪೋನಿಕಾ), ತನ್ನ ಮಹಾಯಾನಕ್ಕೆ ಆಹಾರ ಶಕ್ತಿಯನ್ನು ಸಂಗ್ರಹಿಸಿ ಸಿದ್ಧಗೊಳ್ಳಲಾರಂಭಿಸಿತು. ಮ್ಯಾಕ್ಸ್ ಪ್ಲ್ಯಾಂಕ್ ಇನ್‌ಸ್ಟಿಟ್ಯೂಟ್ ಫಾರ್ ಆರ್ನಿಥಾಲಜಿಯ ಪಕ್ಷಿ ಟ್ರ್ಯಾಕಿಂಗ್ ಯೋಜನೆಯ ಮಾಹಿತಿಯ ಪ್ರಕಾರ, ಅಕ್ಟೋಬರ್ 13 ರಂದು ಅಲಾಸ್ಕಾದ ಯುಕಾನ್ ಕುಸ್ಕೋಕ್ವಿಮ್ ಡೆಲ್ಟಾದ (Yukon Kuskokwim Delta) ವಿಸ್ತಾರವಾದ ಜೌಗು ಪ್ರದೇಶದಿಂದ ಹಕ್ಕಿ ತನ್ನ ಮಹಾಯಾನವನ್ನು ಪ್ರಾರಂಭಿಸಿತು. ಬಹುಶಃ ಕವಿಋಷಿ ಹೇಳಿದಂತೆ ನಿಸರ್ಗ ದೇವತೆ ತನ್ನ ಸೃಷಿಯ ಹೊಸ ಸಾಧ್ಯತೆಯೊಂದಕ್ಕೆ ರುಜು ಮಾಡಿರಬೇಕು!! ನಂತರ ಅದು ನೈರುತ್ಯಕ್ಕೆ ಅಲ್ಯೂಷಿಯನ್ ದ್ವೀಪಗಳಿಗೆ (Aleutian Islands), ಹವಾಯಿಯ ಪಶ್ಚಿಮಕ್ಕೆ ಪೆಸಿಫಿಕ್ ಮಹಾಸಾಗರದ ಮೇಲಿನಿಂದ ನ್ಯೂ ಕ್ಯಾಲೆಡೋನಿಯಾಕ್ಕೆ ಟ್ಯಾಸ್ಮನ್ ಸಮುದ್ರದ ಮೇಲಿಂದ ತನ್ನ ವಿಶ್ವದಾಖಲೆಯ ಮಹಾಯಾನವನ್ನು ಮುಂದುವರೆಸಿತು.

ಡಾ. ವೊಹ್ಲರ್ ರವರು ಹೇಳಿದಂತೆ ಗಾಡ್‌ವಿಟ್‌ಗಳು ಸಾಮಾನ್ಯವಾಗಿ ನ್ಯೂಜಿಲೆಂಡ್‌ನತ್ತ ಪ್ರಯಾಣಿಸುತ್ತವೆ. ಆದರೆ ಪಕ್ಷಿಯು ದಾರಿಯಲ್ಲಿ 90 ಡಿಗ್ರಿ ತಿರುಗಿ ಪೂರ್ವ ಟ್ಯಾಸ್ಮೆನಿಯಾದ ಅನ್ಸನ್ಸ್ ಕೊಲ್ಲಿಯ (Ansons Bay) ಸುಂದರ ತೀರದಲ್ಲಿ ಇಳಿಯಿತು. ಈ "90ಡಿಗ್ರಿ ತಿರುವು" ತನ್ನ ಪ್ರಬೇಧದ "ಹಾರಾಟದ ಸಾಮರ್ಥ್ಯ ಎಷ್ಟಿದೆ ಎನ್ನುವುದನ್ನು" ಜಗತ್ತಿಗೆ ತಿಳಿಸುವ ಪ್ರಯತ್ನದಂತಿತ್ತು. ಈ ಭಗೀರಥ ಪ್ರಯತ್ನದಲ್ಲಿ ಈಶಾನ್ಯ ಟ್ಯಾಸ್ಮೆನಿಯಾದ ಕೊಲ್ಲಿಯನ್ನು ಮುಟ್ಟುವ ಮೊದಲು ಕನಿಷ್ಠ 13,560km (8,435 ಮೈಲುಗಳು) ಕ್ರಮಿಸಿ ವಿಶ್ವದಾಖಲೆ ನಿರ್ಮಿಸಿತು.

ವಿಜ್ಞಾನಿಗಳು ಪಕ್ಷಿಯನ್ನು ಅದರ ಬೆನ್ನಿನ ಕೆಳಭಾಗಕ್ಕೆ ಜೋಡಿಸಲಾದ ಅತ್ಯಾಧುನಿಕ 5G ಉಪಗ್ರಹ ಟ್ಯಾಗ್ ಬಳಸಿ ಟ್ರ್ಯಾಕ್ ಮಾಡುತ್ತಾರೆ. ಗಾಡ್ವಿಟ್‌ ಹವಾಯಿಯ ಪಶ್ಚಿಮಕ್ಕೆ, ತೆರೆದ ಸಾಗರದ ಮೇಲೆ ಮುಂದುವರೆದು ಅಕ್ಟೋಬರ್ 19 ರಂದು ಪೆಸಿಫಿಕ್ ದ್ವೀಪ ರಾಷ್ಟ್ರವಾದ ಕಿರಿಬಾಟಿಯ ಮೇಲೆ ಹಾರಿ ಕೊನೆಗೆ ಅಕ್ಟೋಬರ್ 24ರಂದು ಟಾಸ್ಮೇನಿಯ ತಲುಪಿತು. ಉಪಗ್ರಹ ದತ್ತಾಂಶವು ಈ ವಲಸೆ ಹಕ್ಕಿ ಟ್ಯಾಸ್ಮೆನಿಯಾವನ್ನು ತಲುಪಲು 11 ದಿನಗಳು ಮತ್ತು ಒಂದು ಗಂಟೆ ತೆಗೆದುಕೊಂಡಿರುವುದಾಗಿ ದಾಖಲಿಸಿದೆ. ಅದೆಂತಹ ಅಸಾಧಾರಣ ಬಂಢ ಸಾಹಸ ಈ ಪುಟ್ಟ ಹಕ್ಕಿಯದ್ದು? ಅಲಾಸ್ಕಾದಿಂದ ಟಾಸ್ಮೇನಿಯಕ್ಕೆ ಕಡಿಮೆ ದೂರವೇ? ಆಹಾರವಿಲ್ಲದೆ ದಣಿವರಿಯದ ಮಹಾವಲಸೆ ಹಾರಾಟವನ್ನು ಊಹಿಸಲೂ ಸಾಧ್ಯವಿಲ್ಲ. ತನ್ನ ಸುಧೀರ್ಘ ಪ್ರಯಾಣದ ಸಮಯದಲ್ಲಿ ಆಹಾರ, ನಿದ್ದೆ ಅಥವಾ ದಣಿವಾರಿಸಲೂ ಎಲ್ಲೂ ನಿಲ್ಲಲಿಲ್ಲ ಎನ್ನುವುದೇ ಅಚ್ಚರಿ. ಅದೆಲ್ಲಿ ಶಕ್ತಿ ಅಡಗಿತ್ತೋ? ಈ ಪಕ್ಷಿಯ ಅದ್ಭುತ ಸಾಮರ್ಥ್ಯದ ಮುಂದೆ ನಾವೆಷ್ಟು ಅಲ್ಪರು ಎನ್ನುವುದನ್ನು ಸೂಚಿಸುತ್ತದೆ.

"ವಯಸ್ಕ ಪಕ್ಷಿಗಳು ನಿಯಮಿತವಾಗಿ ಈ ಬಗೆಯ ಹಾರಾಟಗಳನ್ನು ಮಾಡುತ್ತವೆ ಎನ್ನುವುದು ನಮಗೆ ತಿಳಿದಿದೆ, ಆದರೆ ಈ ಎಳೆಯ ಗೆರೆ ಬಾಲದ ಗಾಡ್‌ವಿಟ್ ಹಕ್ಕಿಯ ಅಲಾಸ್ಕಾ ಪಯಣವನ್ನು ಈ ಹಿಂದೆಂದೂ ಪತ್ತೆಹಚ್ಚಲಾಗಿಲ್ಲ" ಎಂದು ಈ ವರ್ಷದ ಆರಂಭದಲ್ಲಿ ಪಕ್ಷಿಯನ್ನು ಮೊದಲು ಟ್ಯಾಗ್ ಮಾಡಿದ ಸ್ವತಂತ್ರ ಸಂಶೋಧಕರಾದ ಜೆಸ್ಸಿ ಕಾಂಕ್ಲಿನ್ ನ್ಯೂಸ್‌ವೀಕ್‌ನೊಂದಿಗೆ ಮಾತನಾಡುತ್ತಾ ತಮ್ಮ ಅನುಭವವನ್ನು ಹಂಚಿಕೊಂಡರು.

ಗೆರೆಬಾಲದ ಗಾಡ್‌ವಿಟ್‌ಗಳು ಒಂದೇ ಸಂಗಾತಿಯೊಂದಿಗೆ ಜೀವನವನ್ನು ಕಳೆಯುತ್ತವೆ. ಸಾಮಾನ್ಯವಾಗಿ ಹೆಣ್ಣು ಗಾತ್ರದಲ್ಲಿ ಗಂಡಿಗಿಂತ ದೊಡ್ಡದಾಗಿರುತ್ತದೆ. ಹೆಸರೇ ಹೇಳುವಂತೆ ಬಿಳಿ ಬಾಲವು ಕಂದು ಕಪ್ಪು ಗೆರೆಗಳಿಂದ ಕೂಡಿರುತ್ತದೆ. ಗಂಡಿನ ಮೈಬಣ್ಣ ಸಾಮಾನ್ಯವಾಗಿ ಹೆಣ್ಣಿಗಿಂತ ಗಾಢವಾಗಿರುತ್ತದೆ. ಪ್ರೌಢಹಕ್ಕಿಯಲ್ಲಿ ಬಿಚ್ಚಿದ ರೆಕ್ಕೆ ಸುಮಾರು ಎಂಭತ್ತು ಸೆ.ಮೀ ಇದ್ದರೆ, ಕಾಲುಗಳು ಬೂದು ಅಥವಾ ನೀಲಿಬಣ್ಣದ್ದಾಗಿರಬಹುದು. ಸುಮಾರು 230 - 450 g ತೂಕದ ಪಕ್ಷಿ ಹಾರಾಟದ ನಂತರ ಅರ್ಧದಷ್ಟು ತೂಕ ಕಳೆದುಕೊಳ್ಳುತ್ತದೆ. ತೂಕ ಹೆಚ್ಚಿರುವವರಿಗೆ ಇದು ಸ್ಫೂರ್ತಿ ನೀಡೀತು!!!.

ಅಡ್ಡಗೆರೆ ಬಾಲದ ಗಾಡ್ವಿಟ್ ಆಸ್ಟ್ರೇಲಿಯಾದಲ್ಲಿ ಸಂತಾನೋತ್ಪತ್ತಿ ಮಾಡದ ವಲಸೆಗಾರ. ಪ್ರತಿ ವರ್ಷ ಸ್ಕ್ಯಾಂಡಿನೇವಿಯಾ, ಉತ್ತರ ಏಷ್ಯಾ ಮತ್ತು ಅಲಾಸ್ಕಾದಲ್ಲಿ ಸಂತಾನೋತ್ಪತ್ತಿ ನಡೆಸುತ್ತವೆ. ಬಾರ್-ಟೈಲ್ಡ್ ಗಾಡ್‌ವಿಟ್‌ಗಳು ನದೀಮುಖದ ಮಣ್ಣಿನ ಚಪ್ಪಟೆಗಳು, ಕಡಲತೀರಗಳು ಮತ್ತು ಮ್ಯಾಂಗ್ರೋವ್‌ಗಳಲ್ಲಿ ವಾಸಿಸುತ್ತವೆ. ಆಸ್ಟ್ರೇಲಿಯಾದ ಸುತ್ತಮುತ್ತಲಿನ ಕರಾವಳಿ ಪ್ರದೇಶಗಳಲ್ಲಿ ಅವು ಸಾಮಾನ್ಯವಾಗಿವೆ. ಅವು ಗುಂಪುಗುಂಪಾಗಿ ವಾಸಿಸುವ ಸಾಮಾಜಿಕ ಪಕ್ಷಿಗಳು ಮತ್ತು ದೊಡ್ಡ ಹಿಂಡುಗಳಲ್ಲಿ ಮತ್ತು ಇತರ ವೇಡರ್‌ಗಳ ಜೊತೆ ಹೆಚ್ಚಾಗಿ ಕಂಡುಬರುತ್ತವೆ.


ಹಸಿರು ಹೊದ್ದ, ಹಾವಸೆಯಿಂದ ಅಥವಾ ಇತರೆ ಸಸ್ಯಗಳಿಂದ ಕೂಡಿದ ಹೆಚ್ಚು ಆಳವಿರದ ಗುಳಿಯಂತಹ ಗೂಡುಕಟ್ಟುತ್ತವೆ. ಮೇ - ಜೂನ್ ತಿಂಗಳು ಇವುಗಳ ಪ್ರಣಯ ಕಲಾ ಪ್ರದರ್ಶನದ ಕಾಲ. ಗಂಡುಹಕ್ಕಿ ಗೂಡಿನ ಬಳಿ ವೃತ್ತಾಕಾರವಾಗಿ ಚಲಿಸುತ್ತಾ ಜೋರಾಗಿ ಕೂಗುತ್ತಾ ಹೆಣ್ಣಿಗೆ ಪ್ರೀತಿಯ ಕರೆ ನೀಡುತ್ತದೆ. ಗಂಡಿನ ಪ್ರಣಯ ಚೇಷ್ಟೆಗಳಿಗೊಲಿದ ಹೆಣ್ಣು ಇದರ ಫಲವಾಗಿ 2 ರಿಂದ 4 ಮೊಟ್ಟೆಗಳನ್ನು ಇಡುತ್ತದೆ. ಅವು ಸುಮಾರು 20-22 ದಿನಗಳವರೆಗೆ ಕಾವುಕೊಡುತ್ತವೆ. ಎರಡೂ ಹಕ್ಕಿಗಳು ಮೊಟ್ಟೆಗಳ ಕಾವು ಮತ್ತು ಮರಿಗಳ ಆರೈಕೆಯನ್ನು ಹಂಚಿಕೊಳ್ಳುತ್ತವೆ. ಎಂತಹ ಪ್ರೀತಿ ಅವುಗಳದು!!! ತೆರೆದ ಕಂಗಳೊಂದಿಗೆ ಮೊಟ್ಟೆಯೊಡೆದು ಹೊರ ಬಂದ ಮರಿಗಳು ಬದುಕಿನ ಹೋರಾಟಕ್ಕೆ ಸನ್ನದ್ದಾಗಿರುತ್ತವೆ. ಆಗತಾನೇ ಹೊರಬಂದ ಮರಿಗಳು ಆಹಾರದ ಹುಡುಕಾಟಕ್ಕೆ ಹತ್ತಿರದ ಜವುಗು ಪ್ರದೇಶಗಳೆಡೆಗೆ ಸಾಗಲು ತನ್ನ ಅಪ್ಪ ಅಮ್ಮಂದಿರನ್ನು ಹಿಂಬಾಲಿಸ ಬಲ್ಲವು!!!. ಎಳೆಯ ಮರಿಗಳು ಕೇವಲ 1 ತಿಂಗಳೊಳಗೆ ಪೂರ್ಣ ಸ್ವಾವಲಂಬಿಗಳಾಗುತ್ತವೆ. 2 ವರ್ಷದೊಳಗೆ ಲೈಂಗಿಕ ಪರಿಪಕ್ವತೆಯನ್ನು ತಲುಪುತ್ತವೆ.


ಮೃದ್ವಂಗಿಗಳು, ಹುಳುಗಳು ಮತ್ತು ಜಲವಾಸಿ ಕೀಟಗಳು ಗೆರೆಬಾಲದ ಗಾಡ್ವಿಟ್ ಗಳ ಆಹಾರ. ಪಕ್ಷಿಗಳು ಆಳವಿಲ್ಲದ ಅಥವಾ ತೆರೆದ ಮಣ್ಣಿನಲ್ಲಿ ಓಡಾಡುತ್ತವೆ ಮತ್ತು ಆಹಾರವನ್ನು ಹುಡುಕಲು ತಮ್ಮ ಉದ್ದನೆಯ ಕೊಕ್ಕುಗಳನ್ನು ಬಳಸುತ್ತವೆ. ಆಹಾರಕ್ಕಾಗಿ ವಲಸೆ ಹೋಗುವ ಈ ಪಕ್ಷಿಗಳ ತಂಡದಲ್ಲಿ ಸಂತಾನಾಭಿವೃದ್ಧಿ ಮಾಡದ ವಲಸಿಗ ಮತ್ತು ವರ್ಷಪೂರ್ತಿ ಉಳಿಯುವ ಎಳೆಯ ಪಕ್ಷಿಗಳಿರುತ್ತವೆ.


ವರ್ಗೀಕರಣ : Bar-tailed Godwit Limosa lapponica Scolopacidae
ಸಾಮ್ರಾಜ್ಯ : ಪ್ರಾಣಿ
ವಂಶ : ಕಾರ್ಡೇಟಾ
ವರ್ಗ : ಏವ್ಸ್‌ 
ಗಣ : ಕ್ಯಾರಾಡ್ರಿಫಾರ್ಮ್ಸ್
ಕುಟುಂಬ : ಸ್ಕೋಲೋಪಾಸಿಡೆ
ಜಾತಿ : ಲಿಮೋಸಾ
ಪ್ರಬೇಧ : ಲ್ಯಾಪ್ಪೋನಿಕಾ

ಗಾಡವಿಟ್‌ ಹಕ್ಕಿಯ ಈ ಸಾಹಸ ಗಾಥೆ ಎಂತಹವರಲ್ಲೂ ಅಚ್ಚರಿ ತಾರದಿರದು. ಸ್ಫೂರ್ತಿ ತುಂಬದಿರದು. ಜಗತ್ತನ್ನೇ ತನ್ನೆಡೆಗೆ ಸೆಳೆದ ಪುಟ್ಟ ಹಕ್ಕಿ ತೂಕದಲ್ಲಿ ಯಕಶ್ಚಿತ್‌ ಎನಿಸುವ ಅರ್ಧ ಕೆ.ಜಿಯಷ್ಷೂ ತೂಕವಿಲ್ಲದ ಮಹಾಸಾಹಸಿ. ಇದನ್ನು ಜಗತ್ತಿನ ಸ್ಫೂರ್ತಿಯ ಚಿಲುಮೆ ಎನ್ನದಿರಲಾದೀತೇ? ಸಾಧನೆಯ ಹಸಿವನ್ನು ಜಗಕ್ಕೆ ತುಂಬಿದ ಈ ಹಕ್ಕಿ ಆಧುನಿಕ ಜಗತ್ತಿಗೆ ಹೊಸ ಸಾಧ್ಯತೆಗಳ ಭಂಡಾರವನ್ನೇ ತೆರೆದಿದೆ.

ಇನ್ನಷ್ಟು ಮಾಹಿತಿಗಾಗಿ :

https://www.youtube.com/watch?v=uY8M2aNFVtk


https://animalia.bio/bar-tailed-godwit

https://www.bto.org/develop-your-skills/bird-identification/videos/identifying-black-tailed-and-bar-tailed-godwit

26 comments:

  1. ಪುಟ್ಟ ಹಕ್ಕಿಯ ದಿಟ್ಟತನ ಅಬ್ಬಾ ಬೆರಗು! ವಿವರವಾದ ಸುಂದರ ಚಿತ್ರಗಳ ಸಹಿತವಾದ ಲೇಖನಕ್ಕೆ ಧನ್ಯವಾದಗಳು ಸರ್.

    ReplyDelete
  2. I respect ur presentation and truly the article is informative sir

    ReplyDelete
  3. ಗಾಡವಿಟ್ ಪಕ್ಷಿಯ ವಲಸೆ ನಿಮ್ಮ ಲೇಖನದಲ್ಲಿ ಸಮಗ್ರವಾಗಿ ಮತ್ತು ಅದ್ಭುತವಾಗಿ ಮೂಡಿಬಂದಿದೆ. ಅಭಿನಂದನೆಗಳು ಸರ್.

    ReplyDelete
  4. ಅದ್ಬುತ ಬರೆವಣಿಗೆ ಸರ್....

    ReplyDelete
  5. ತುಂಬಾ ಚೆನ್ನಾಗಿದೆ ಸರ್

    ReplyDelete
  6. Super sir.... ನಿಮ್ಮ ಬರವಣಿಗೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಪ್ರವಾಸ ಲೇಖನದಂತಿದೆ.

    ReplyDelete
  7. Presentation and information about a small bird with super will power and untiring spirit to reach the Goal is very inspiring sir.Thank u for nice article sir 🙏

    ReplyDelete
  8. ಈ ಪುಟ್ಟ ಪಕ್ಷಿಯ ವಲಸೆಯ ಸಾಹಸಗಾಥೆ ಅದ್ಭುತ. ಸಾಹಸ ಪ್ರಿಯರಿಗೆ ಸದಾ ಮಾದರಿ.ಸುಂದರ ಹಾಗೂ ವಿವರವಾದ ಮಾಹಿತಿ ಮತ್ತು ನಿರೂಪಣೆಗೆ ಧನ್ಯವಾದಗಳು ಸರ್.

    ReplyDelete
  9. ಹಕ್ಕಿಗಳ ವಲಸೆ ಸಾಮರ್ಥ್ಯ ಅದ್ಭುತವಾದದ್ದು. ಎಂಬುದು ತಿಳಿದಿತ್ತು, ಆದರೆ ಅದು ಈ ರೀತಿ ಒಂದು ಪುಟ್ಟ ಹಕ್ಕಿ ಹಾರುತ್ತದೆ ಎಂದು ತಿಳಿದಿರಲಿಲ್ಲ. ಅಂತೆಯೇ ಹಕ್ಕಿಗಳ ವಲಸೆಯನ್ನು ಶಾಂತಿ ಧೂತರ ವಿಶ್ವ ಪರ್ಯಟನೆ ಎನ್ನಬಹುದು. ಅದ್ಭುತ ಮಾಹಿತಿಯನ್ನು ಹೊಂದಿರುವ ಲೇಖನ ಸರ್.
    ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು.

    ReplyDelete
  10. ಗಾಡ್ವಿಟ್ನೊಂದಿಗೆ ನಾವೂ ಪಯಣಿಸಿದಂತಿದೆ ಲೇಖನ.. ಅದ್ಭುತ ಮಾಹಿತಿ ಸರ್..

    ReplyDelete