Thursday, May 4, 2023

ಮೇ ೨೦೨೩ ತಿಂಗಳ ಒಗಟುಗಳು

೨೦೨೩ ಮೇ ತಿಂಗಳ ಒಗಟುಗಳು 

                               ರಚನೆ : ಶ್ರೀ ರಾಮಚಂದ್ರ ಭಟ್‌ ಬಿ.ಜಿ.

                                         ವಿಜ್ಞಾನ‌ ಶಿಕ್ಷಕರು

1. ಯಾವುದೀ ಜೀವಿ ?

ಡಿಸ್ಟಿಲರಿಗಳ ಜೀವ ನಾ 

ಸಕ್ಕರೆಯ ದ್ರಾವಣವ ಹುದುಗಿಸಬಲ್ಲೆ,

ಬೇಕರಿ ತಿನಿಸುಗಳಿಗೆ ರುಚಿ ನೀಡಬಲ್ಲೆ

ಮೊಗ್ಗುವಿಕೆಯಿಂದಲೇ ಸಂತಾನ ವೃದ್ಧಿ,

ಇಡ್ಲಿ, ದೋಸೆ ಹಿಟ್ಟು ಸಮೃದ್ಧಿ

ಸುಳಿವರಿತು ಹೆಸರಿಸಿ ಯಾವುದೀ ಜೀವಿ?

 

2. ಯಾವುದೀ ಮೂಲಿಕೆ?

ನೆಲದ ಮೇಲಿನ ಹಸಿರ ಹಂದರ

 ಹಸಿರೆಲೆಗಳ ಹಿಂದೆ ಅಡಗಿದ ಬೀಜಗಳು

 ಹೆಸರಲ್ಲಿ ನೆಲ್ಲಿ ಅಡಗಿದ್ದರೂ ನೆಲ್ಲಿಯಲ್ಲ

 ಬಾಯಲ್ಲಿ ನೀರೂರಿಸದ ಫಿಲಾಂಥಸ್ ನೀರೂರಿ 

 ಸುಳಿವರಿತು ಈ ಮೂಲಿಕೆಯ ಹೆಸರ ಹೇಳಿ.


3. ಈ ಕೋಶವಿಭಜನೆಯ ಹೆಸರೇನು?

ಕೋಶವೊಂದು ನಾಲ್ಕು ಹೋಳಾಗುವುದು

 ಪ್ರತಿ ಹೋಳಲೂ ಅರ್ಧ ಸಂಖ್ಯೆಯ ವರ್ಣತಂತುಗಳು

ಆನುವಂಶಿಯ ಗುಣಗಳ ಪುನರ್ ಹಂಚಿಕೆಗೆಂದೇ ಅಡ್ಡಹಾಯುವಿಕೆ 

 ಲಿಂಗಾಣುಗಳಾಗುವ, ಜೀವೋತ್ಪತ್ತಿಗೆ ಕಾರಣವಾದ ಈ ವಿಭಜನೆ ಯಾವುದು?


4. ಯಾವುದೀ ಮಾಯಾ ಸಂಖ್ಯೆ ?

ಎರಡಂಕಿಗಳ ಅತಿ ಚಿಕ್ಕ ಸಂಖ್ಯೆ ಇದು

 ಅಂಕಿಗಳ ತಿರುಗು ಮುರುಗಾಗಿಸಿ

 ಮತ್ತೆ ಈಗ ತಲೆಕೆಳಗು ಮಾಡಿ

 ಈ ಸಂಖ್ಯೆಗಳ ನಡುವಣ ವ್ಯತ್ಯಾಸ 12 !!

 ಮನೋ ಮಂಥನ ಮಾಡಿ ಹೇಳುವಿರಾ ಸಂಖ್ಯೆ ಯಾವುದೆಂದು?

 

5. ಯಾವುದೀ ತರಂಗ?

ವಿಲಿಯಂ ಹರ್ಷಲನ ಶೋಧವೀ ಅಲೆ

ಕೆಂಪಿಗಿಂತ ನಿಶ್ಯಕ್ತವಾದರೂ ಅವಗಣಿಸದಿರಿ

ತಿರೆಗೆ ರವಿಶಾಖ ತರುವ ತರಂಗವಿದು. 

ಕಾರಿರುಳಲೂ ವಸ್ತುಗಳ ಛಾಯಾಗ್ರಹಣ ಮಾಡಬಹುದು

ರಕ್ತದ ಏರೊತ್ತಡ, ಮೂಳೆ ಸಮಸ್ಯೆಗಳ ಚಿಕಿತ್ಸೆಗೂ ಬಳಕೆ

ಯಾವುದೀ ವಿದ್ಯುತ್ಕಾಂತೀಯ ತರಂಗ?


.



No comments:

Post a Comment