Sunday, June 4, 2023

ದೇಶದ ʼಹುಲಿ ಸಂರಕ್ಷಣೆ ಯೋಜನೆʼಗೆ ಸುವರ್ಣ ಸಂಭ್ರಮ

 ದೇಶದ ʼಹುಲಿ ಸಂರಕ್ಷಣೆ ಯೋಜನೆʼಗೆ ಸುವರ್ಣ ಸಂಭ್ರಮ

 ಲೇಖಕರು ರಮೇಶ್‌ ವಿ ಬಳ್ಳಾ

ವಿಶ್ವ ಸಂಸ್ಥೆಯ ಸಹಯೋಗದಲ್ಲಿ ೧೯೭೨ರಲ್ಲಿ ನಮ್ಮ ದೇಶ ಕೈಗೆತ್ತಿಕೊಂಡ ಹುಲಿ ಸಂರಕ್ಷಣೆ ಯೋಜನೆಗೆ ಐವತ್ತು ವರ್ಷ ತುಂಬಿದ ಸಂದರ್ಭದಲ್ಲಿ ನಾವೆಲ್ಲ ಸಂಭ್ರಮಿಸಬೇಕಾದ ಸುದ್ದಿ ಎಂದರೆ, ಇಡೀ ವಿಶ್ವದಲ್ಲಿ ಈ ಯೋಜನೆ ಅತಿ ಹೆಚ್ಚು ಯಶಸ್ಸು ಕಂಡದ್ದು ನಮ್ಮ ದೇಶದಲ್ಲಿ. ಈ ಯೋಜನೆಯ  ಬಗ್ಗೆ ಬೆಳಕು ಚೆಲ್ಲುವ ಈ ಲೇಖನ ಬರೆದವರು ಶಿಕ್ಷಕ ರಮೇಶ್‌ ವಿ ಬಳ್ಳಾ ಅವರು.

    ಅದು ಏಪ್ರಿಲ್ 9ನೇ ತಾರೀಖು, ದೇಶದ ಪ್ರಧಾನಿಯವರು ಬೆಳಿಗ್ಗೆ ಎದ್ದವರೇ ಬಂಡಿಪುರ ಕಾಡಿನತ್ತ ಹೆಜ್ಜೆ ಹಾಕಿದ್ದರು. ಸಾಕಷ್ಟು ಭದ್ರತೆಯ ನಡುವೆ ಆ ಕಾಡು ಕಣಿವೆಗಳತ್ತ ಕಣ್ಣು ಹಾಯಿಸುತ್ತಾ ವನ್ಯಪ್ರಾಣಿಗಳ ಮೇಲಿನ ತಮ್ಮ ಪ್ರೀತಿ, ಕಾಳಜಿಯನ್ನು ಸಾಕ್ಷೀಕರಿಸಿದ್ದರು. ಕಾಡಂಚಿನ ಜನಸಮುದಾಯಗಳ ಸಾಮೀಪ್ಯಕ್ಕೆ ಬಂದು ಕಾಡುಕಣಿವೆಯ ಬದುಕನ್ನು ಅರಿತುಕೊಂಡಿದ್ದರು. ಅದರೊಟ್ಟಿಗೆ ಸುತ್ತಲಿನ ಅಪಾರವಾದ ಹಸಿರು ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾ ಸಫಾರಿ ಹೊರಟು ಸವೆಸಿದ ಹಾದಿ ಲೆಕ್ಕ ಸಿಗದಷ್ಟು ಮುಂದೆ ಸಾಗಿದ್ದರು. ಅಂದಾಜು 20ಕ್ಕೂ ಹೆಚ್ಚು ಕಿ.ಮೀ.ಗಳವರೆಗೆ 2 ಗಂಟೆಗಳ ಕಾಲ ಸಫಾರಿ ಹೊರಟ ದೇಶದ ಪ್ರಧಾನಿಯವರ ಈ ಉದ್ದೇಶದ ಹಿನ್ನಲೆ ದಾಖಲಿಸಬಹುದಾದ ಪ್ರಮುಖ ಘಟನಾವಳಿಯಾಗಿತ್ತು. ಈ ಎಲ್ಲವನ್ನು ಮೆಲಕು ಹಾಕುತ್ತಾ ಸಂಭ್ರಮದ ಕ್ಷಣವಾಗಿ ಲಕ್ಷಾಂತರ ಜನ ಬೆರಗುಗಣ್ಣಿನಿಂದ ಟಿವಿಗಳಲ್ಲಿ ವೀಕ್ಷಿಸಿದರು. ಈ ಎಲ್ಲ ಸಡಗರಕ್ಕೂ ಕಾರಣವಾದ ಆ ದಿನದ ಮಹತ್ವ ಏನಿರಬಹುದು ಅಂತೀರಾ ? ಅದೇ ‘ಪ್ರಾಜೆಕ್ಟ್ ಟೈಗರ್ಗೆ ಸುವರ್ಣ ಸಂಭ್ರಮದ ಕ್ಷಣ.



ಏನಿದು ಪ್ರಾಜೆಕ್ಟ್ ಟೈಗರ್ ?

ಭಾರತವೆಂದರೆ ಅದು ಹಲವು ವಿಶಿಷ್ಟತೆಗಳ ತವರು. ಅದು ವಿವಿಧ ಆಯಾಮಗಳಲ್ಲಿ ಕೂಡ. ದೇಶದ ಜನಸಂಸ್ಕೃತಿ, ಆಚಾರ ವಿಚಾರ, ಭಾಷೆ, ವೇಷಭೂಷಣ, ಆಹಾರ ಪದ್ಧತಿ ಇವೆಲ್ಲವುಗಳ ಜೊತೆಗೆ, ಪಾರಿಸರಿಕ ವಿಶಿಷ್ಟ ಜೀವವೈವಿಧ್ಯವೂ ಒಂದಾಗಿದೆ. ಅಂತಹ ಜೀವವೈವಿಧ್ಯದ ಹೆಗ್ಗುರುತಾಗಿ ಮೆರೆಯುತ್ತಿದ್ದ ವನ್ಯಪ್ರಾಣಿ ಹುಲಿಗಳು ಸ್ವತಂತ್ರ ಪೂರ್ವದಲ್ಲಿ ಭಾರತದ ಕಾಡಿನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿದ್ದವು. ಅವುಗಳ ಸಂಖ್ಯೆ ಒಂದು ಅಂದಾಜಿನಂತೆ 75,000 ದಿಂದ 80,000 ದಷ್ಟಿತ್ತು. ಕ್ರಮೇಣ ಮಾನವನ ಹಲವಾರು ಚಟುವಟಿಕೆಗಳು ಹಾಗೂ ನಿರಂತರ ಹಸ್ತಕ್ಷೇಪ ಜೀವಿ ಪರಿಸರವ್ಯವಸ್ಥೆಯಲ್ಲಿ ಅವುಗಳ ಸಂತತಿ ತೀವ್ರವಾಗಿ ಕ್ಷೀಣಿಸಲು ಕಾರಣವಾಗಿ, ದೇಶದಲ್ಲಿ ಹುಲಿಗಳ ಸಂಖ್ಯೆ ಸುಮಾರು 1820ರ ಹತ್ತಿರಕ್ಕೆ ಬಂದು ನಿಂತಿತ್ತು !

ಭಾರತದ ರಾಷ್ಟ್ರೀಯ ಪ್ರಾಣಿಯಾಗಿದ್ದ, ‘ಬಿಗ್ ಕ್ಯಾಟ್ ಎಂತಲೇ ಗುರುತಿಸಲ್ಪಡುವ ಹುಲಿಗಳು ಅವಸಾನದಂಚಿಗೆ ಬಂದವು. ನಿರಂತರ ಬೇಟೆಯಾಡುವಿಕೆ, ಮನರಂಜನೆ, ಮೋಜು ಮಸ್ತಿ, ಕಾಡುಗಳ್ಳರ ಕೈಚಳಕ, ಹುಲಿ ಚರ್ಮದ ಮೇಲಿನ ವ್ಯಾಮೋಹ ಎಲ್ಲವೂ ಹುಲಿಗಳ ವಿನಾಶಕ್ಕೆ ಕಾರಣವಾದವು. ಹುಲಿ ಕಾರ್ಯಪಡೆಯ ಆತಂಕಕಾರಿ ವರದಿಯನ್ನು ಮನಗಂಡ ಅಂದಿನ ಕೇಂದ್ರ ಸರ್ಕಾರ ಈ ವನ್ಯಜೀವಿಗಳತ್ತ ಗಮನ ಹರಿಸಿತು. 1972ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿ ಮಾಡಿದ ಮೇಲೆ ಹುಲಿ ಸಂತತಿಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿತು. ವಿಶ್ವದ ಮಟ್ಟಿಗೆ ಭಾರತ ಹುಲಿಗಳ ಬಹುಮುಖ್ಯ ಆವಾಸತಾಣ. ಆದರೆ ಅದರ ಸಂಖ್ಯೆಯ ಇಳಿಕೆಯಿಂದ ಎಲ್ಲೋ ಒಂದು ಕಡೆ ಮುಜುಗರವೂ ಉಂಟಾಗಿ, ಪ್ರಾಣಿಪ್ರಿಯರ ಒತ್ತಾಸೆಯೂ ಆಗಿ ಜೀವವೈವಿಧ್ಯದ ಭಾಗವಾದ ಹುಲಿ ಸಂತತಿಯ ಮರುಭರ್ತಿಗಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಇಛ್ಛಾಸಕ್ತಿಯ ಕಾರಣದಿಂದ 1973 ಏಪ್ರಿಲ್ 1 ರಂದು ಉತ್ತರಾಖಾಂಡದ ಜಿಮ್ ಕಾರ್ಬೇಟ್ ರಾಷ್ಟ್ರೀಯ ಉದ್ಯಾನವನದಲ್ಲಿ ‘ಪ್ರಾಜೆಕ್ಟ್ ಟೈಗರ್ನ್ನು ವಿದ್ಯುಕ್ತವಾಗಿ ಜಾರಿ ಮಾಡಲಾಯಿತು.

ಈ ‘ಹುಲಿ ಯೋಜನೆಹುಲಿ ಸಂತತಿಯ ವೃದ್ಧಿಗೆ ಆದ್ಯತೆ ನೀಡಿ, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಗಣತಿ ಕಾರ್ಯ ಮಾಡಿ ಸಂಖ್ಯೆಯನ್ನು ದಾಖಲಿಸುವುದಾಗಿದೆ. ಅವುಗಳ ಸಂಖ್ಯೆಯ ಹೆಚ್ಚಳಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಹುಲಿ ಆವಾಸಗಳನ್ನು ಸಂರಕ್ಷಿತ ತಾಣಗಳಾಗಿ ಮಾರ್ಪಾಟು ಮಾಡಿ, ಮಾನವರ ಪ್ರವೇಶವನ್ನು ನಿರ್ಭಂದಿಸಿ ವಿಶೇಷ ಕಾರ್ಯಯೋಜನೆಗಳನ್ನು ರೂಪಿಸಿತು. ಪ್ರಾರಂಭಕ್ಕೆ ದೇಶದಲ್ಲಿ 9 ಹುಲಿ ಸಂರಕ್ಷಿತ ಪ್ರದೇಶಗಳನ್ನು ಗುರುತಿಸಿ ಘೋಷಣೆ ಮಾಡಲಾಯಿತು.

ಯೋಜನೆಯ ಸದ್ಯದ ಸ್ಥಿತಿಗತಿ

ಐವತ್ತು ವರ್ಷಗಳ ಸುವರ್ಣ ಸಂಭ್ರಮದಲ್ಲಿರುವ ಯೋಜನೆಯ ಸದ್ಯದ ಸ್ಥಿತಿಗತಿಯನ್ನು ಅವಲೋಕಿಸಿದಾಗ, ಅಭಿವೃದ್ಧಿಯ ಮೂಲಕ ಅದಕ್ಕೆ ಉತ್ತರ ಸಿಕ್ಕಿದೆ. ಕೇಂದ್ರ ಸರ್ಕಾರವು ಪ್ರತಿ ವರ್ಷ ಸಾಕಷ್ಟು ವಿಶೇಷ ಅನುದಾನವನ್ನು ನೀಡುತ್ತಾ ಹುಲಿ ಯೋಜನೆಗೆ ಬೆನ್ನೆಲುಬಾಗಿ ನಿಂತಿದೆ. ಜೊತೆಗೆ ಆಯಾ ರಾಜ್ಯ ಸರ್ಕಾರಗಳ ಸಹಕಾರ ಮತ್ತು ಸಹಭಾಗಿತ್ವದಲ್ಲಿ ಮುಂದಡಿ ಇಟ್ಟು ಸಂತತಿಯ ವೃದ್ಧಿ ಕ್ರಮಗಳನ್ನು ವ್ಯಾಪಕಗೊಳಿಸಿದೆ. ಹುಲಿ ಸಂರಕ್ಷಣೆಗಾಗಿ ಮೀಸಲು ಅರಣ್ಯಗಳ ಪ್ರಸ್ತುತ ಸಂಖ್ಯೆ 53 ಆಗಿದೆ. 18 ರಾಜ್ಯಗಳನ್ನು ಒಳಗೊಂಡು 75 ಸಾವಿರ ಚ.ಕಿ.ಮೀ ವ್ಯಾಪ್ತಿಯಲ್ಲಿ ಕಾರ್ಯ ನಡೆಯುತ್ತಿದೆ. 2022ರ ಮುಂಗಡಪತ್ರದಲ್ಲಿ ಯೋಜನೆಗೆ 300 ಕೋಟಿ ರೂಗಳನ್ನು ಸರ್ಕಾರ ಮೀಸಲಿರಿಸಿದೆ. ಪರಿಣಾಮ ಫಲ ನೀಡಿದೆ. ಅದರೊಟ್ಟಿಗೆ ಹುಲಿಗಳ ಸಂಖ್ಯೆ ಏರುಗತಿಯಲ್ಲಿ ಸಾಗಿ ಅಭಿವೃದ್ಧಿಯ ಮೂನ್ಸೂಚನೆ ನೀಡಿದೆ. ವಿಶೇಷವಾದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (National Tiger Conservation Authority) ವನ್ನು ಸ್ಥಾಪಿಸಿ ಹುಲಿ ಆವಾಸಗಳನ್ನು ನರ‍್ಭೀತಗೊಳಿಸಿ, ಮುಕ್ತ ಓಡಾಟಕ್ಕೆ ಶಕ್ತಗೊಳಿಸಲಾಗಿದೆ. ಸದ್ಯ ಇಂತಹ 35 ಪ್ರಾಧಿಕಾರಗಳು ಭಾರತದಾದ್ಯಂತ ಕೆಲಸ ಮಾಡುತ್ತಿವೆ.

ಹುಲಿ ಗಣತಿಯ ಅಂಕಿಸಂಖ್ಯೆ

2006 ರಿಂದ ಪ್ರಾರಂಭವಾದ ಹುಲಿಗಳ ವೈಜ್ಞಾನಿಕ ಗಣತಿ ಕಾರ್ಯವು ಅಚ್ಚರಿಯ ಸಂಗತಿಗಳನ್ನು ಬೆಳಕಿಗೆ ತಂದಿದೆ. ಸಾಕಷ್ಟು ಸವಾಲುಗಳ ನಡುವೆ ಕೈಗೊಂಡ ಸುಧಾರಣಾ ಕ್ರಮಗಳು ಯೋಜನೆಯನ್ನು ಫಲಪ್ರದಗೊಳಿಸುತ್ತಾ ಸಾಗಿದೆ. ಆರಂಭದಲ್ಲಿ 1200ರಷ್ಟಿದ್ದ ಹುಲಿಗಳ ಸಂಖ್ಯೆ ಕ್ರಮೇಣ ಏರುತ್ತಾ ಸಾಗಿ, 2022ರ ಗಣತಿ ಅಂಕಿಅಂಶದಂತೆ 3167 ಕ್ಕೆ ಬಂದು ತಲುಪಿದ್ದು ಸಂತಸದಾಯಕ ಸಂಗತಿಯಾಗಿದೆ. ವಾರ್ಷಿಕ ಶೇ.6 ರ ಏರುಗತಿಯಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳವಾಗಿ ಸಂಭ್ರಮವನ್ನು ಇಮ್ಮಡಿಸಿದೆ.

ವರ್ಷ

ಹುಲಿಗಳ ಸಂಖ್ಯೆ

2006

1411

2010

1706

2014

2226

2018

2967

2022

3167

 

ಹುಲಿ ಸಂರಕ್ಷಣಾ ಪ್ರದೇಶಗಳು

ಹುಲಿ ಯೋಜನೆ ಪ್ರಾರಂಭವಾದಾಗ ಕೇವಲ 9 ಸಂರಕ್ಷಿತ ಪ್ರದೇಶಗಳನ್ನು ಗುರುತಿಸಲಾಗಿತ್ತು. ಅವುಗಳೆಂದರೆ ನಮ್ಮ ಕರ್ನಾಟಕದ ಬಂಡಿಪುರ, ಕಾರ್ಬೆಟ್, ಅಮನ್‌ಗರ, ಕನ್ಹಾ, ಮಾನಸ, ಮೇಲ್ಘಾಟ್, ಪಲಮೌ, ರತ್ನಾಂಬೊರೆ, ಸಿಮ್ಲಿಪಾಲ್ ಮತ್ತು ಸುಂದರ್‌ಬನ್. ಇವುಗಳ ಹೊರತಾಗಿ, ಸದ್ಯ ಒಟ್ಟು 53 ಹುಲಿ ಸಂರಕ್ಷಿತ ಪ್ರದೇಶಗಳು ದೇಶದ ಭೌಗೋಳಿಕ ಪ್ರದೇಶದ ಶೇ. 2.4ರಷ್ಟು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಸಂರಕ್ಷಿತ ಪ್ರದೇಶಗಳು ಹುಲಿ ಸಂತತಿಯನ್ನು ಮಾತ್ರ ವೃದ್ಧಿಗೊಳಿಸದೇ ಇಡೀ ಒಂದು ಜೀವವೈವಿಧ್ಯವನ್ನು ಪೋಷಿಸುವ ನಿಟ್ಟಿನಲ್ಲಿ ಆಸರೆಯಾಗಿವೆ. ಅದಕ್ಕೆಂದೇ ಇದನ್ನು ಅಂಬ್ರೇಲಾ ಸ್ಪೀಸಿಸ್ (umbrella species) ಎನ್ನಲಾಗುತ್ತದೆ. ಈ ಯೋಜನೆಯಡಿಯಲ್ಲಿ ಆ ಪ್ರದೇಶದ ಹಸಿರು ಸಸ್ಯ ಸಮೃದ್ಧಿಗೊಳ್ಳುವುದಲ್ಲದೇ ಆ ಹುಲ್ಲುಗಾವಲಿನಿಂದ ಅನೇಕ ಪ್ರಾಣಿ ಪ್ರಭೇಧಗಳ ಉಳಿವು ಸಾಧ್ಯವಾಗಿದೆ. ಈ ಪ್ರದೇಶಗಳಲ್ಲಿನ ಘೇಂಡಾಮೃಘ, ಚಿರತೆ, ಆನೆಯಂತಹ ವನ್ಯ ಸಂಪತ್ತು ಸಹಾ ಸಂಖ್ಯೆಯಲ್ಲಿ ವೃದ್ಧಿ ಕಂಡಿದೆ.



ಕರ್ನಾಟಕ ಮತ್ತು ಹುಲಿ ಯೋಜನೆ

ಹುಲಿ ಯೋಜನೆ ಜಾರಿಯಾದಾಗ ನಮ್ಮ ಕರ್ನಾಟಕದ ಬಂಡೀಪುರ ಅಭಯಾರಣ್ಯವೂ ಹುಲಿ ಸಂರಕ್ಷಿತ ಪ್ರದೇಶವಾಗಿ ರೂಪುಗೊಂಡಿತು. ನಂತರದಲ್ಲಿ ದ್ರಾ, ಕಾಳಿ, ನಾಗರಹೊಳೆ, ಮತ್ತು ಬಿಳಿಗಿರಿ ರಂಗನಾಥ ಟೆಂಪಲ್ (BRT) ಗಳನ್ನು ಸಂರಕ್ಷಿತ ಪ್ರದೇಶಗಳಾಗಿ ಗುರುತಿಸಿ, ಹುಲಿ ಸಂರಕ್ಷಣಾ ಆವಾಸಗಳ ಪ್ರದೇಶಗಳನ್ನು ವಿಸ್ತರಿಸಲಾಯಿತು. ಭಾರತದಲ್ಲಿಯೇ ಇತರ ರಾಜ್ಯಗಳನ್ನು ಹೋಲಿಕೆ ಮಾಡಿ ಹುಲಿಗಳ ಸಂಖ್ಯೆಯನ್ನು ಗಮನಿಸಿದಾಗ ಕರ್ನಾಟಕ ಮೊದಲ ಸ್ಥಾನದಲ್ಲಿದೆ ! ಕರ್ನಾಟಕದ ಬಂಡಿಪುರ, ನಾಗರಹೊಳೆ ಸಂರಕ್ಷಿತ ಪ್ರದೇಶಗಳ ಹೊರತಾಗಿ ಪಶ್ಚಿಮ ಘಟ್ಟದ ಬಿಆರ್‌ಟಿ ಹಿಲ್ಸ್, ಮೂಕಾಂಬಿಕಾ, ಶರಾವತಿ, ಶಿರಸಿ ಭೂಪ್ರದೇಶ ಹಾಗೂ ಭದ್ರಾ ಆವಾಸಗಳಲ್ಲಿಯೂ ಹುಲಿಗಳ ಇರುವಿಕೆಯನ್ನು ಗುರುತಿಸಲಾಗಿದೆ. ಆದರೆ, ವರದಿಯಂತೆ ಈ ಪ್ರದೇಶದಲ್ಲಿ ಕಂಡುಬರುವ ಹುಲಿಗಳ ಸಂಖ್ಯೆ ಒಂದು ಸಮಯಕ್ಕೆ ಕಡಿಮೆ ಇತ್ತು. ಈ ಪ್ರದೇಶಗಳಲ್ಲಿನ ಮಾನವ ಚಟುವಟಿಕೆಗಳು ಹಾಗೂ ವiನುಷ್ಯ ಮತ್ತು ಕಾಡು ನಡುವಿನ ಬದುಕು ಎಲ್ಲೋ ಒಂದು ಕಡೆ ಅವುಗಳ ಅವನತಿ ಅಥವಾ ಸಂಖ್ಯೆ ಕ್ಷೀಣತೆಗೆ ಕಾರಣವಾಗಿರುವುದು ಗೊತ್ತಾಗುತ್ತದೆ. ಇತ್ತೀಚಿನ ಕೆಲ ಸುಧಾರಣಾ ಕ್ರಮಗಳಿಂದ ಸಂಖ್ಯೆ ಏರಿಕೆ ಆಗಿದೆ. ಡ್ರೋನ್ ಕ್ಯಾಮರಾಗಳ ಬಳಕೆ, ಕ್ಯಾಂಪ್‌ಗಳ ಆಯೋಜನೆ, ಅರಣ್ಯ ರಕ್ಷಕರಿಗೆ ಸೂಕ್ತ ತರಬೇತಿ ಇವೆಲ್ಲವುಗಳಿಂದ ಕರ್ನಾಟಕದಲ್ಲಿ ಹುಲಿ ಸಂತತಿ ವೃದ್ಧಿ ಕಂಡಿದೆ.

ಹುಲಿರಾಯ ನಮ್ಮ ಹೆಮ್ಮೆ

ಹುಲಿ ನಮ್ಮ ದೇಶದ ಹೆಮ್ಮೆ. ಪ್ಯಾಂಥೆರಾ ಟೈಗ್ರೀಸ್ (Panthera tigris) ಎಂಬ ವೈಜ್ಞಾನಿಕ ನಾಮಧೇಯ ಹೊಂದಿದ ದೊಡ್ಡ ಬೆಕ್ಕು ಪ್ರಭೇದ ಇದಾಗಿದೆ. ಅಲ್ಲದೇ, ನಮ್ಮ ಭಾರತ ಹುಲಿಗಳಿರುವ ವಿಶ್ವದ ಬಹುದೊಡ್ಡ ರಾಷ್ಟ್ರವಾಗಿದೆ. ವಿಶ್ವದ ಶೇ.75ರಷ್ಟು ಹುಲಿಗಳ ಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ಜೀವವೈವಿಧ್ಯದ ಉಳಿವಿಗೆ ಸಾಕಷ್ಟು ಕ್ರಮಗಳನ್ನು ಕೈಗೊಂಡು ವಿಶ್ವ ಮಟ್ಟದಲ್ಲಿ ಮನ್ನಣೆ ಗಳಿಸಿದೆ. ಸಾಂಪ್ರದಾಯಿಕ ಹುಲಿ ಪ್ರಭೇಧಗಳಲ್ಲಿ ಬೆಂಗಾಲ್ ಟೈಗರ್, ಅಮೂರ್ ಟೈಗರ್, ಸೌತ್ ಚೀನಾ ಟೈಗರ್, ಸುಮಾತ್ರನ್ ಟೈಗರ್, ಇಂಡೋ ಚೀನಿಸ್ ಟೈಗರ್, ಕ್ಯಾಸ್ಪಿಯನ್ ಟೈಗರ್, ಜವಾನ್ ಟೈಗರ್ ಮತ್ತು ಬಾಲಿ ಟೈಗರ್, ಪ್ರಮುಖವಾದರೂ ಕೊನೆಯ ಮೂರು ಪ್ರಭೇದಗಳು ಅಳಿದುಹೋಗಿವೆ.

ಭಾರತ ಹುಲಿ ಸಂತತಿಯ ಸಮೃದ್ಧ ತಾಣವೆಂಬುದು ಸದ್ಯ ಸಾಬೀತಾಗಿದೆ. ವಿಶ್ವದ ನಂ.1 ಪಟ್ಟ ಪಡೆದು ಹುಲಿ ಸಂರಕ್ಷಣೆಯಲ್ಲಿ ಹೆಗ್ಗಳಿಕೆಗೆ ಪಾತ್ರವಾದ ಭಾರತ, ಪರಿಸರ ವ್ಯವಸ್ಥೆಯನ್ನು ಸಮೃದ್ಧಗೊಳಿಸಿದರೆ ಮಾತ್ರ ಇತರ ಜೀವಿ ಸಮುದಾಯಗಳ ಉಳಿವು ಸಾಧ್ಯ ಎಂಬುದನ್ನು ವಿಶ್ವಕ್ಕೆ ಸಾರಿ ಹೇಳಿದೆ. ಮಾನವನ ಕಾರ್ಯಚಟುವಟಿಕೆಗಳು ಕಾಡಂಚಿಗೆ ಸೀಮಿತವಾಗಿ, ಸಂಘರ್ಷಮುಕ್ತವಾದಾಗ ಮಾತ್ರ ಜೀವಿವೈವಿಧ್ಯ ಸುಸ್ಥಿರವಾಗಿರುತ್ತದೆ. ಇನ್ನೊಂದು ಕಡೆ ಸಮುದಾಯಗಳು ಮತ್ತು ಕಾಡನ್ನು ಬೇರ್ಪಡಿಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯವೂ ಇದೆ. ಇದನ್ನರಿತು ಪರಿಸರವಾದಿಗಳ, ತಜ್ಞರ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ಹುಲಿ ಯೋಜನೆಯ ವ್ಯಾಪಕತೆಯನ್ನು ವಿಸ್ತರಿಸಿ ಇತರ ಜೀವಿಸಂಕುಲದ ರಕ್ಷಣೆಗೆ ಮುಂದಾಗಬೇಕಿದೆ. ಹುಲಿ ಯೋಜನೆ ಕೇವಲ ಸಂಖ್ಯೆ ವೃದ್ಧಿಗೆ ಮಾತ್ರ ಸೀಮಿತವಲ್ಲ. ಅಲ್ಲಿನ ಪರಿಸರ ಸೌಂದರ್ಯದ ವೃದ್ಧಿ ಹಾಗೂ ಪ್ರವಾಸೋದ್ಯಮವನ್ನು ಅದರ ಗುಣಮಟ್ಟವನ್ನು ಹೆಚ್ಚಿಸಿ ಒಟ್ಟಾರೆ ಜೀವವೈವಿಧ್ಯವನ್ನು ಪೋಷಿಸುವುದಾಗಿದೆ.

ಆಕರಗಳು :

National Tiger Conservation Authority ಜಾಲತಾಣ

ಭಾರತವೇ ರಾಜಾಹುಲಿ- ಲೇ : ಚಿದಾನಂದ ಪಡದಾಳೆ

ಸುದ್ಧಿ ಪತ್ರಿಕೆಗಳು

ಲೇಖಕರು : ರಮೇಶ, ವಿ. ಬಳ್ಳಾ

ಅಧ್ಯಾಪಕರು

ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು (ಪ್ರೌಢ) ಗುಳೇದಗುಡ್ಡ

ಜಿ: ಬಾಗಲಕೋಟ

ಮೊ: 9739022186

No comments:

Post a Comment