Tuesday, July 4, 2023

ನೈಟ್‍ಜಾರ್: ಏನಿದು ನಿಂದು ಕಾರ್‌ ಬಾರ್ ?

 ನೈಟ್‍ಜಾರ್: ಏನಿದು ನಿಂದು ಕಾರ್‌ ಬಾರ್ ?

                                                     ಲೇಖಕರು : ಶ್ರೀ ಕೃಷ್ಣ ಚೈತನ್ಯ

                                                                                 

ಹಲವು ಬಾರಿ ತಮ್ಮ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಂಡ ಹಕ್ಕಿಯೊಂದನ್ನು ಕೊನೆಗೂ ಪತ್ತೆ ಮಾಡಿ ಅದರ ಫೋಟೋ ಕ್ಲಿಕ್ಕಿಸಿದಾಗ ಉಂಟಾದ ಸಂತಸವನ್ನು ಆ ಹಕ್ಕಿಯ ಬಗ್ಗೆ ವಿವರಗಳ ಜೊತೆಗೆ ಈ ಲೇಖನದಲ್ಲಿ ಹಂಚಿಕೊಂಡಿದ್ದಾರೆ, ವನ್ಯಜೀವಿ ತಜ್ಞ ಹಾಗೂ ಶಿಕ್ಷಕ, ಕೃಷ್ಣ ಚೈತನ್ಯ ಅವರು.

 

ಒಮ್ಮೆ ನಾಗಮಂಗಲದಲ್ಲಿ ಪಕ್ಷಿಗಳ ಫೋಟೊಗ್ರಫಿಗೆಂದು ಸೂಳೆಕೆರೆಯ ಬಳಿ ಅಡ್ಡಾಡುತ್ತಿದ್ದೆ. ಅದು ದೊಡ್ಡಕೆರೆ. ಕೆರೆಯ ಏರಿಯೇ ಸುಮಾರು ಒಂದು-ಒಂದುವರೆ ಕಿಲೋಮೀಟರ್ ಉದ್ದವಿದೆ. ನಾನು ಕುಣಿಗಲ್ ಕೆರೆ ನೋಡಿಲ್ಲದಿದ್ದರೂ, ಅದರ ಕುರಿತು ಇರು ಜನಪದ ಹಾಡು “ಮೂಡಲ್ ಕುಣಿಗಲ್ ಕೆರೆ ನೋಡರ‍್ಗ್ ಒಂದು ಐಭೋಗ” ನೆನಪಾಗದೇ ಇರದು. ಅದರ ಕೆಳಬದಿಯಲ್ಲಿ ಹಳ್ಳ, ತೋಟ ಮತ್ತು ಕೃಷಿಗೆ ಯೋಗ್ಯವಲ್ಲದ ಕಲ್ಲುಭೂಮಿ ಇದೆ. ಅಲ್ಲಿ ಒಂದು ಬಗೆಯ ಹುಲ್ಲು ಮಳೆಗಾಲದಲ್ಲಿ ಎದೆಯ ಮಟ್ಟಕ್ಕೆ ಬೆಳೆದು ಬೇಸಿಗೆಯಲ್ಲಿ ಒಣಗುತ್ತದೆ. ಅದರ ಗರಿಗಳು ಒರಟಾಗಿರುವುದರಿಂದಲೂ, ದಂಟು ದಪ್ಪವಾಗಿರುವುದರಿಂದಲೂ ಅದನ್ನು ದನಗಳೂ ತಿನ್ನುವುದಿಲ್ಲ.

ಆಕ್ಟೋಬರ್ ತಿಂಗಳಾದ್ದರಿಂದ ಬಯಲು ಸೀಮೆಯಲ್ಲಿ ಬೆಳಗಿನ ಬಿಸಿಲಿನ ಪ್ರಖರತೆ ಜಾಸ್ತಿಯಾಗುತ್ತಿತ್ತು. ಬೆಳಿಗ್ಗೆ ೭ ಗಂಟೆಯಿಂದಲೂ ನಡೆದು ನಡೆದೂ ಫೋಟೊ ತೆಗೆಯುತ್ತಿದ್ದುದರಿಂದ 9.30ಕ್ಕೆಲ್ಲಾ ಹೊಟ್ಟೆ ಹಸಿದು ಸುಸ್ತಾಗುತ್ತಿತ್ತು. ಆಗಲೇ ಸೂರ್ಯನ ಕಾವು ಹೆಚ್ಚಿ, ಅದರ ಶಾಖಕ್ಕೆ ಮೈ ಬೆವರಲು ಪ್ರಾರಂಭಿಸಿತ್ತು. ಹೊಲಗಳನ್ನು ದಾಟಿ ಹಳ್ಳದಲ್ಲಿ ಸಿಕ್ಕ ಪಕ್ಷಿಗಳನ್ನು ನನ್ನಕ್ಯಾಮರದಲ್ಲಿ ಕ್ಲಿಕ್ಕಿಸಿದ ನಂತರ ಆ ವಿಶಾಲವಾದ ಕಲ್ಲುಭೂಮಿಯಲ್ಲಿ ಬೆಳೆದಿದ್ದ ಹುಲ್ಲಿನ ತೆಂಡೆಗಳ ನಡುವೆ ನಡೆದುಕೊಂಡು ಹೋಗುತ್ತಿದ್ದಾಗ ಯಾವುದೋ ಒಂದು ಪಕ್ಷಿ ಮೇಲೆ ಹಾರಿ, ಸ್ವಲ್ಪ ದೂರದಲ್ಲಿ ಹುಲ್ಲಗಳ ಮದ್ಯದಲ್ಲೇ ಕುಳಿತುಕೊಂಡಿತು. ನೆಲದ ಬಣ್ಣ ಮತ್ತು ಪಕ್ಷಿಯ ಬಣ್ಣ ಒಂದೇ ತೆರನಾಗಿದ್ದುದರಿಂದ ಗುರುತಿಸಲು ಕಷ್ಟವಾಗುತ್ತಿತ್ತು. ಹಾರಾಡುತ್ತಿದ್ದಾಗ ಅದರ ರೆಕ್ಕೆಯಲ್ಲಿ ಬಿಳಿ ಬಣ್ಣದ ದೊಡ್ಡ ಮಚ್ಚೆ ಕಾಣುತ್ತಿತ್ತು. ಇದ್ಯಾವ ಪಕ್ಷಿ ನೋಡೋಣ, ಎಂದು ಹಿಂಬಾಲಿಸಿ ಅದು ಕುಳಿತುಕೊಂಡ ಜಾಗವನ್ನು ಸಮೀಪಿಸಲು ಪ್ರಾರಂಭಿಸಿದೆ. ಅದು ಮತ್ತೆ, ಮತ್ತೆ ಹಾರಿ ಸ್ವಲ್ಪ ದೂರಕ್ಕೆ ಹೋಗಿ ಕುಳಿತುಕೊಂಡಿತು. ನಾನು ಹಿಂಬಾಲಿಸಿದಷ್ಟೂ, ಆ ಪಕ್ಷಿ ಹಾರುತ್ತಲೇ ಗಾಳಿಪಟ ಗೋತ ಹೊಡೆದಂತೆ ಒಂದೊಂದು ಕಡೆ ಕುಳಿತು ಬಿಡುತ್ತಿತ್ತು. ಕೊನೆಗೆ ಒಂದುಕಡೆ ಅದು ಕುಳಿತ ಜಾಗವನ್ನು ನೋಡಿ, ದೂರದಿಂದಲೇ ಕ್ಯಾಮೆರಾವನ್ನು ಜ಼ೂಮ್ ಮಾಡಿ ಫೋಟೊ ತೆಗೆದೆ. ಅಂತೂ ಕೊನೆಗೆ ಹಕ್ಕಿ ಸಿಕ್ಕಿತಲ್ಲಾ ಎಂದು ಸ್ಕ್ರೀನ್ ಪರಿಸೀಲಿಸಿದಾಗ ಬೆಸ್ತು ಬೀಳುವ ಸರದಿ ನನ್ನದಾಗಿತ್ತು. ಏಕೆಂದರೆ, ನಾನು ಹಕ್ಕಿ ಎಂದುಕೊಂಡು ಕ್ಲಿಕ್ಕಿಸಿದ್ದು ಅದೇ ಬಣ್ಣದ ಒಂದು ಕಲ್ಲಾಗಿತ್ತು.


ಛಲ ಬಿಡದ ತ್ರಿವಿಕ್ರಮನಂತೆ ಮತ್ತೊಮ್ಮೆ ಅಲ್ಲಿಗೆ ಹೋದಾಗ ಹುಡುಕಲು ಆರಂಭಿಸಿದೆ. ಇದರ ಹುಡುಕಾಟದಲ್ಲಿ ಹೊಟ್ಟೆ ಹಸಿಯುತ್ತಿದ್ದುದು ಮರೆತು ಹೋಗಿತ್ತು. ಹೆಜ್ಜೆ ಹೆಜ್ಜೆಯಷ್ಟು ದೂರಕ್ಕೆ ಇದ್ದ ಹುಲ್ಲಿನ ತೆಂಡೆಗಳು ಹುಡುಕಾಟವನ್ನು ಮತ್ತಷ್ಟು ಜಟಿಲಗೊಳಿಸಿತ್ತು. ಸ್ವಲ್ಪ ಹೊತ್ತು ಹುಡುಕಿದ ಮೇಲೆ ಮತ್ತೆ ಕಾಣಿಸಿದಾಗ, ಫೋಟೊ ತೆಗೆಯಲು ಅಣಿಯಾದೆ. ಕೊನೆಗೆ ಅದು ಕುಳಿತುಕೊಂಡ ಜಾಗಕ್ಕೆ, ನೆಲದ ಮೇಲೆ ಏನಿದೆ ಎಂದೂ ನೋಡದೆ, ಮೆಲ್ಲ ಮೆಲ್ಲನೆ ಹೆಜ್ಜೆ ಇಡುತ್ತಾ ಹೋದೆ. ಹಕ್ಕಿ ಕುಳಿತದ್ದು ಕಾಣಿಸಿ, ಹತ್ತು ಹದಿನೈದು ಫೋಟೊ ತೆಗೆದು ಮನೆಗೆ ವಾಪಾಸಾದೆ. ಸಲೀಂ ಅಲಿಯವರ ಪುಸ್ತಕವನ್ನ ಜಾಲಾಡಿಸಿದಾಗ ಸಿಕ್ಕ ಹಕ್ಕಿ ಕ್ವಿಲ್ ಆಗಿತ್ತು. ನಾನು ನೋಡಿದ ಹಕ್ಕಿ ಇದಲ್ಲವಲ್ಲ ಎಂದು ತರ್ಕಿಸುತ್ತಾ, ಆ ಹಕ್ಕಿ ಮತ್ತೆ ನನ್ನನ್ನು ಬೇಸ್ತು ಬೀಳಿಸಿತಲ್ಲಾ, ಎಂದು ಕುಳಿತೆ. ಆ ಪಕ್ಷಿಯೂ ನನಗೆ ಸಿಗದಿದ್ದುದರಿಂದ, ಮತ್ತೆ ಹೋದರಾಯಿತು ಎಂದು ಪತ್ನಿಯ ಮನೆಯಿಂದ ಹಿಂದಿರುಗಿದೆ.         

ಬೇಸಿಗೆ ರಜೆಗೆ ಮತ್ತೆ ಅದೇ ಜಾಗಕ್ಕೆ ಹೋಗಿ, ಆ ಪಕ್ಷಿಯ ಹುಡುಕಾಟದ ತವಕದಲ್ಲಿದ್ದೆ. ಎಂದಿನಂತೆ, ಅದೇ ಜಾಗಕ್ಕೆ ಹೋಗಿ ಹುಡುಕಲಾರಂಭಿಸಿದೆ. ಆ ಹಕ್ಕಿ ಸಿಕ್ಕಿತು! ಈ ಬಾರಿ ಅದರ ಫೋಟೊ ತೆಗೆಯಲೇಬೇಕೆಂಬ ಹಠದಿಂದ ಅದು ಕುಳಿತುಕೊಳ್ಳುತ್ತಿದ್ದ ಜಾಗವನ್ನು, ಅಲ್ಲಿಂದ ಅದು ಓಡಿ ಹೋಗಿ ಕುಳಿತುಕೊಳ್ಳುವ ದಾರಿಗಳನ್ನು ಪರಿಶೀಲಿಸಿ ಪತ್ತೆ ಹಚ್ಚಿದೆ. ಬೇಸಿಗೆಯಾದ್ದರಿಂದ ಹುಲ್ಲಿನ ತೆಂಡೆಗಳೆಲ್ಲ ಒಣಗಿದ್ದುದು ಆ ಪಕ್ಷಿಯನ್ನು ಪತ್ತೆ ಮಾಡಲು ಸುಲಭವಾಗಿತ್ತು. ಅಂತೂ ಸಾಕಷ್ಟು ಆಟ ಆಡಿಸಿ ಅದು ಕೊನೆಗೆ ಸಿಕ್ಕಿದಾಗ ಸಿಗುವ ಆನಂದ, ಓ ಎಂದುಕೊಂಡೆ. ಆ ಹಕ್ಕಿಯೇ ನತ್ತಿಂಗ ಅಂದರೆ ನೈಟ್‌ ಜಾರ್.‌ ಪಾರಿವಾಳದಷ್ಟು ಗಾತ್ರವಿದ್ದು, ಕಂದು, ಕಪ್ಪು ಮತ್ತು ಬಿಳಿಬಣ್ಣದ ಪುಕ್ಕಗಳನ್ನು ಹೊಂದಿರುವುದರಿಂದ ಕಂದುಬಣ್ನದ ಕಲ್ಲುಗಳೊಂದಿಗಿನ ಪರಿಸರಕ್ಕೆ ಚೆನ್ನಾಗಿ ಬೆರೆತು ಹೋಗುತ್ತದೆ. ಭಾರತದಲ್ಲಿ ಸುಮಾರು ಏಳು ಪ್ರಬೇಧಗಳು ಕಂಡುಬರುವ ಇವು ಹಗಲಿನ ವೇಳೆಯಲ್ಲಿ ಸುಮ್ಮನೆ ಕುಳಿತು ಬಿಡುವುದರಿಂದ ಇವುಗಳ ಇರುವಿಕೆಯನ್ನು ಪತ್ತೆ ಹಚ್ಚುವುದೇ ಕಷ್ಟದ ಕೆಲಸ.

ಹಗಲಿನ ವೇಳೆಯಲ್ಲಿ ಹಾರಾಡುವ ಕೀಟಗಳನ್ನು ಹಿಡಿಯಲು ಮೈನ, ಬುಲ್‌ ಬುಲ್‌, ನೊಣಹಿಡುಕಗಳು, ಇತ್ಯಾದಿಬೇಕಾದಷ್ಟು ಪಕ್ಷಿಗಳಿವೆ. ಆದರೆ, ರಾತ್ರಿ ವೇಳೆಯೂ ಪತಂಗಗಳು ಮತ್ತಿತರ ಕೀಟಗಳು ಹಾರಾಡುತ್ತವೆ ಅಲ್ಲವೆ? ರಾತ್ರಿಯ ವೇಳೆಯಲ್ಲಿ ತೆಂಗು, ಹೂವಿನ ಬೆಳೆ, ತರಕಾರಿ ಬೆಳೆ ಮತ್ತು ಹಣ್ಣಿನ ಬೆಳೆಗಳಿಗೆ ದಾಳಿಇಡುತ್ತವೆ, ಅಷ್ಟೇ ಅಲ್ಲ, ಆ ಗಿಡಗಳ ಎಲೆಗಳ ಕೆಳಗೆ ನೂರಾರು ಮೊಟ್ಟೆ ಇಟ್ಟು, ಅವುಗಳಿಂದ ಬರುವ ಮರಿಗಳು ಬೆಳೆಯನ್ನೇ ನುಣ್ಣಗೆ ತಿಂದುಬಿಡುತ್ತವೆ.. ಇವುಗಳನ್ನು ನಿಯಂತ್ರಿಸಲು ಯಾರಾದರೂ ಬೇಕಲ್ಲವೆ, ಅವೇ ಈ ನೈಟ್‍ಜಾರ್ ಹಕ್ಕಿಗಳು.

ಪಾರಿವಾಳಕ್ಕಿಂತ ಸ್ವಲ್ಪ ಸಣ್ಣಗಾತ್ರದಲ್ಲಿರುವ ಇವು ಹಗಲಿನ ವೇಳೆಯಲ್ಲಿ ತಟಸ್ಥವಾಗಿ ನೆಲದ ಮೇಲೆಯೋ, ಮರದ ಕೊಂಬೆ ಮೇಲೆಯೋ ಕುಳಿತುಕೊಂಡಿದ್ದು, ಸಂಜೆಯಾದಂತೆ ಕ್ರಿಯಾಶೀಲವಾಗುತ್ತವೆ. ಕಣ್ಣುಗಳನ್ನು ಅರೆ ಅಥವಾ ಪೂರ್ತಿ ಮುಚ್ಚಿಕೊಂಡಿದ್ದು ಬೆಳಗಿನಿಂದ ಸಂಜೆಯವರೆಗೆ ಕಾಯುತ್ತಾ ಸಂಜೆಯಾದಂತೆ ನಕ್ಷತ್ರ ಮತ್ತು ಚಂದ್ರನ ಬೆಳಕಿಗೆ, ಕೆಲವೊಮ್ಮೆ ವಾಹನಗಳ ಬೆಳಕಿಗೆ ಹಾರಿ ಬರುವ ಕೀಟಗಳನ್ನು ಹಿಡಿದು ತಿನ್ನುತ್ತವೆ. ರಾತ್ರಿಯ ವೇಳೆ ಹಾರಾಡುವಾಗ ಇವುಗಳ ಕಣ್ಣುಗಳು ಪ್ರಾಣಿಗಳ ಕಣ್ಣು ಹೊಳೆಯುವ ಹಾಗೆ ಹೊಳೆಯುತ್ತವೆ. ಅಂದರೆ, ಇವುಗಳಲ್ಲಿ ರಾಡ್(ಕಂಬಿ) ಎಂಬ ಗ್ರಾಹಕ ಕೋಶಗಳು ಹೆಚ್ಚಾಗಿದ್ದು ನಿಶಾಚರಿಗಳಾಗಿವೆ.

ಇಂಥ ಹಕ್ಕಿಗಳು ಇಲ್ಲದಿದ್ದಲ್ಲಿ ಇನ್ನೆಷ್ಟು ಕಂಬಳಿಹುಳು, ಕೀಟಗಳು ಮತ್ತು ದುಂಬಿಗಳು ಹೆಚ್ಚಾಗಿ, ಬೆಳೆ, ಸಸ್ಯಗಳಿಗೆ ಮತ್ತು ಆಹಾರ ಪದಾರ್ಥಗಳಿಗೆ ಕಂಟಕವಾಗುತ್ತಿದ್ದುದು ಸತ್ಯ ಅಲ್ಲವೇ?

No comments:

Post a Comment