Friday, August 4, 2023

‘ವೈದ್ಯ ವಿಜ್ಞಾನಿಯ ಬಿಚ್ಚಿದ ಜೋಳಿಗೆ’

 ‘ವೈದ್ಯ ವಿಜ್ಞಾನಿಯ ಬಿಚ್ಚಿದ ಜೋಳಿಗೆ’        

ಲೇಖಕರು : ರಮೇಶ, ವಿ,ಬಳ್ಳಾ 
ಅಧ್ಯಾಪಕರು

ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು (ಪ್ರೌಢ)

ಗುಳೇದಗುಡ್ಡ  ಜಿ: ಬಾಗಲಕೋಟ


ಖ್ಯಾತ ಪೆಥಾಲಜಿ ವೈದ್ಯರಾಗಿ ಹೆಸರು ಗಳಿಸಿದ್ದ ಡಾ. ಸ.ಜ ನಾಗಲೋಟಿಮಠ ಅವರು ವೈದ್ಯ ವಿಜ್ಞಾನ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರವಲ್ಲ, ಕನ್ನಡ ಜನಪ್ರಿಯ ಸಾಹಿತ್ಯ ಕ್ಷೇತ್ರಕ್ಕೂ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಅವರ ಸ್ಮರಣೆಯಲ್ಲಿ ಒಂದು ಲೇಖನ, ಶಿಕ್ಷಕ ರಮೇಶ್‌ ಬಳ್ಳಾ ಅವರಿಂದ.

ಇತ್ತೀಚಿಗೆ ಬಾಗಲಕೋಟೆಯಲ್ಲಿ ಒಂದು ನಾಟಕ ಪ್ರದರ್ಶನವಾಯಿತು. ಬಹಳ ದಿನಗಳಿಂದ ನಾನು ನಾಟಕದ ಕಡೆ ಸುಳಿದಿರಲಿಲ್ಲ. ಅದೇನೋ ನಾಟಕದ ಟೈಟಲ್ ಕೇಳಿದಾಕ್ಷಣ ನೋಡಲೇಬೇಕೆನಿಸಿತು. ಅದು ಒಬ್ಬ ಅಪರೂಪದ ವೈದ್ಯವಿಜ್ಞಾನಿ, ಗ್ರೇಟ್ ಪೆಥಾಲಾಜಿಸ್ಟ್, ವೈಧ್ಯವಿಜ್ಞಾನದ ಲೇಖಕ ಡಾ. ಸ ಜ ನಾಗಲೋಟಿಮಠ ಅವರ ಜೀವನಾಧಾರಿತ ವಿಶಿಷ್ಟ ನಾಟಕವಾಗಿತ್ತು. ಕಲಬುರಗಿಯ ರಂಗಾಯಣದ ಕಲಾವಿದರು ಅದ್ಭುತವಾಗಿ ವೈದ್ಯರೊಬ್ಬರ ಬದುಕನ್ನು ರಂಗದ ಮೇಲೆ ಪರಿಚಯಿಸಿ ಸಾಧಕನ ಜೀವನದ ಕಷ್ಟ ಸುಖಗಳನ್ನ ನೆನಪಿಗೆ ತಂದರು. ನಾನೆಂದೂ ಅಷ್ಟೊಂದು ಆಸಕ್ತಿ, ಕುತೂಹಲದಿಂದ ನಾಟಕ ನೋಡಿರಲಿಲ್ಲ. ಅದು ಆ ಮಟ್ಟಿಗೆ ಅಪರೂಪದ ರಂಗಪ್ರಯೋಗ. ಗಣೇಶ ಅಮೀನಗಡ ರಚಿತ ಈ ನಾಟಕಕೃತಿ ಮೂಲತಃ ʼಸ ಜ ನಾʼ ಅವರ ಆತ್ಮಕಥೆಯೇ ಆಗಿದೆ. ಆದರೂ ಅದಕ್ಕೆ ಜೀವಕಳೆ ಕಟ್ಟಿಕೊಟ್ಟಿದ್ದು ರಂಗಪ್ರಯೋಗ. ಇದರಿಂದ ಈ ವೈದ್ಯನ ಬದುಕಿನ ಜೀವನದ ಯಶೋಗಾಥೆ ವಿಭಿನ್ನ ಆಯಾಮಗಳನ್ನು ಪಡೆದುಕೊಂಡು ಹೇಗೆ ಔನ್ನತ್ಯ ಪಡೆಯಿತೆಂಬುದನ್ನು ಅವರ ಆತ್ಮಕಥೆ ಓದದವರೂ ಸಹ ಸುಲಭವಾಗಿ ಅರಿಯಲಿ ಎಂಬ ಕೃತಿಕಾರನ ಆಶಯ ಅಂದಿನ ಪ್ರಯತ್ನದಲ್ಲಿ ಯಶಸ್ವಿಯಾಯಿತು.

ಡಾ. ಸ ಜ ನಾ ಒಬ್ಬ ಅಪರೂಪದ ಅಂತರಾಷ್ಟ್ರೀಯ ವೈದ್ಯವಿಜ್ಞಾನಿ. ರೋಗನಿದಾನಶಾಸ್ತ್ರದ ಮೇಧಾವಿ. ಅವರ ಪೂರ್ಣ ಹೆಸರು ಸದಾಶಿವಯ್ಯ ಜಂಬಯ್ಯ ನಾಗಲೋಟಿಮಠ. ಹುಟ್ಟಿದ್ದು 1940ರ ಜುಲೈ 20ರಂದು ಗದಗದ ಸಾಮಾನ್ಯ ಕುಟುಂಬದಲ್ಲಿ. ತಂದೆ ಜಂಬಯ್ಯ ತಾಯಿ ಹಂಪವ್ವ. ಕಡುಬಡತನದಲ್ಲೇ ಸಾಕಷ್ಟು ನೋವುಂಡು ಮೇಲೆದ್ದ ಸಾರ್ಥಕ ಬದುಕು ಇವರದು. ಕೆಲ ಅನಿವಾರ್ಯತೆಗಳು ಇವರ ಕುಟುಂಬವನ್ನು ಬಾಗಲಕೋಟೆಯ ಬನಹಟ್ಟಿಗೆ ಬರುವಂತೆ ಮಾಡಿದವು. ಅಲ್ಲೇ ಅವರ ಪ್ರಾಥಮಿಕ ಶಿಕ್ಷಣ. 1955ರಲ್ಲಿ ಮುಲ್ಕಿ ಪರೀಕ್ಷೆ ಪಾಸು ಮಾಡಿ, 1959ರಲ್ಲಿ ಮೆಟ್ರಿಕ್ ಕೂಡ ಮುಗಿಸುತ್ತಾರೆ. ಮುಂದಿನ ಕಾಲೇಜು ಶಿಕ್ಷಣಕ್ಕೆ ತೊಂದರೆಯಾಗಿ ಚಿಂತೆ ಮಾಡುತ್ತಿರುವಾಗ ಆಪ್ತರೊಬ್ಬರ ಸಹಾಯದಿಂದ ಹುಬ್ಬಳ್ಳಿಯ ಪಿಸಿeಬಿನ್ ಸೈನ್ಸ್ ಕಾಲೇಜಿಗೆ ಪ್ರವೇಶ ಪಡೆಯುತ್ತಾರೆ. ಅಲ್ಲೂ ಉತ್ತಮ ಓದಿನಿಂದ ಪ್ರತಿಭಾವಂತ ವಿದ್ಯಾರ್ಥಿಯಾಗಿ ಹೊರಹೊಮ್ಮುತ್ತಾರೆ. ಇಂಜಿನಿಯರಿಂಗ್ ಸೀಟು ಸಿಗುತ್ತದೆ. ಆದರೂ ತಂದೆಯವರಿಗೆ ಕ್ಷಯರೋಗವಿದ್ದ ಕಾರಣ ಅವರ ಆಸೆ ಮಗ ವೈದ್ಯನಾಗಬೇಕು ಎಂಬುದಾಗಿರುತ್ತದೆ. ಮುಂದೆ ಸಂದರ್ಶನ ಎದುರಿಸಿ ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಗಿಟ್ಟಿಸುತ್ತಾರೆ. ಈ ಮಧ್ಯೆ ತಂದೆಯ ವಿಪರೀತ ಸಿಗರೇಟ್ ಚಟ ಅವರ ರೋಗ ಉಲ್ಬಣಗೊಳ್ಳುವಂತೆ ಮಾಡುತ್ತದೆ, ವೈದ್ಯಕೀಯದ ಕಲಿಕೆ ಒಂದು ಹಂತದಲ್ಲಿರುವಾಗ ತಂದೆ 1961 ರಲ್ಲಿ ಮರಣಿಸುತ್ತಾರೆ. ಇದು ಸದಾಶಿವಯ್ಯರನ್ನು ಘಾಸಿಗೊಳಿಸುತ್ತದೆ. ಆದರೂ ಕಷ್ಟಪಟ್ಟು ಓದಿ 1965ರಲ್ಲಿ ಎಂಬಿಬಿಎಸ್ ತೆರ್ಗಡೆಯಾಗುತ್ತಾರೆ. ಅದೂ ಗೋಲ್ಡ್ ಮೆಡಲ್‍ನೊಂದಿಗೆ. ಹೀಗೆ ಮುಂದುವರೆದ ಶಿಕ್ಷಣ 1970ರಲ್ಲಿ ಎಂಡಿ ಪದವಿವರೆಗೂ ಸಾಗಿ ಉನ್ನತ ಹುದ್ದೆವರೆಗೂ ವೃತ್ತಿಯಲ್ಲಿ ಅವರನ್ನು ಕೊಂಡೊಯ್ಯುತ್ತದೆ.

ಸಜನಾ ಒಬ್ಬ ಪೆಥಾಲಜಿ ವೈದ್ಯರಾಗಿದ್ದಲ್ಲದೇ ವೈದ್ಯವಿಜ್ಞಾನದ ಲೇಖಕರಾಗಿಯೂ ಹೆಚ್ಚು ಜನಪ್ರಿಯರಾದವರು. ಅದರೊಟ್ಟಿಗೆ ವೃತ್ತಿ ಬದುಕಿನಲ್ಲಿ ತುಂಬಾ ಚಾಕಚಕ್ಯತೆಯೊಂದಿಗೆ ರೋಗ ಪರೀಕ್ಷೆ, ನಿರ್ದಿಷ್ಟತೆ, ಕರಾರುವಕ್ಕಾದ ಪರಿಹಾರದ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡವರು. ಅವರು ಕೇವಲ ವೈದ್ಯರಾಗಿರದೇ, ಲೇಖಕರಾಗಿ ಮಾಡಿದ ಸಾಧನೆ ಅನುಪಮ. ವೈದ್ಯವಿದ್ಯಾರ್ಥಿಗಳು, ಓದುಗ ಜನಸಾಮಾನ್ಯರಿಗೆ ಆರೋಗ್ಯದ ಅರಿವನ್ನು ತಮ್ಮ ಜನಪ್ರಿಯ ವೈದ್ಯಕೀಯ ವಿಜ್ಞಾನದ ಲೇಖನಗಳ ಮೂಲಕ ತಲುಪಿಸಿದವರು. ವೈಜ್ಞಾನಿಕತೆ, ವೈಚಾರಿಕತೆಯನ್ನು ಒರೆಗೆ ಹಚ್ಚಿ ಜನಗಳ ಮನೋಭಾವಕ್ಕೆ ಹೊಸತನ್ನು ಹರುವಿದವರು. ಇಂತಹ ಸಾಧಕ ವೈದ್ಯ ವಿಜ್ಞಾನಿ ನಮ್ಮ ನಾಡಿನವರು ಎಂಬುದೇ ಹೆಮ್ಮೆ. ಅವರ ಬದುಕಿನ ಕೆಲ ವೈದ್ಯಕೀಯ ಸಾಧನೆಯ ವಿಚಾರಗಳನ್ನು ಮೆಲಕು ಹಾಕೋಣ.

ಕುಷ್ಠರೋಗ ಕುರಿತ ತಪ್ಪು ಕಲ್ಪನೆ : ಸಜನಾ ಅವರು ಕೆಎಂಸಿ ಹುಬ್ಬಳ್ಳಿಯಲ್ಲಿ ಎಂ ಡಿ ಕಲಿಯುವ ಸಮಯ. ಆಗ ಅವರು ತಮ್ಮ ಪ್ರಬಂಧಕ್ಕೆ ಆಯ್ಕೆ ಮಾಡಿಕೊಂಡದ್ದು ಕುಷ್ಠರೋಗದ ವಿಷಯ. ಆದರೆ ಆ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಇವರ ಅಧ್ಯಯನಕ್ಕೆ ಪೂರಕವಾಗಿ ಕುಷ್ಠರೋಗಿಗಳ ಲಭ್ಯತೆ ಇರಲಿಲ್ಲ. ತಮ್ಮ ಸ್ನೇಹಿತರಾದ ಡಾ. ಕಂಬಳ್ಯಾಳರ ಸಹಾಯದಿಂದ ರೋಣ ತಾಲೂಕಿನ ಗಜೇಂದ್ರಗಡದ ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ರೋಗಿಗಳಿದ್ದ ಪ್ರಯುಕ್ತ ಆ ಸ್ಥಳವನ್ನೇ ತಮ್ಮ ಅಧ್ಯಯನಕ್ಕೆ  ಬಳಸಿಕೊಂಡರು. ಆದರೆ ಆ ಆಸ್ಪತ್ರೆ ಅಷ್ಟೊಂದು ಹೇಳಿಕೊಳ್ಳುವಂತ ಮೂಲಭೂತ ಸೌಲಭ್ಯಗಳನ್ನು ಹೊಂದಿರಲಿಲ್ಲ. ಕಟ್ಟಡವೇ ಇರಲಿಲ್ಲ, ಆದರೂ ಅಲ್ಲೇ ಮರದ ಕೆಳಗೆ ಒಂದು ಕುರ್ಚಿ ಟೇಬಲ್ ಹಾಕಿಕೊಂಡೇ ಕುಷ್ಠರೋಗಿಗಳ ಉಪಚಾರ ಮುಂದುವರೆಸಿದರು. ಅವರ ರೋಗ ಲಕ್ಷಣಗಳನ್ನು, ರಕ್ತ, ಚರ್ಮ, ಯಕೃತ್, ನರನಾಡಿಗಳ ಅಧ್ಯಯನ ಮಾಡಿದರು. ಕುಷ್ಠರೋಗದ ಬಗ್ಗೆ ಅಮೂಲಾಗ್ರವಾಗಿ ಅಭ್ಯಸಿಸಿ ಕಂಡುಕೊಂಡ ನಿರ್ಣಯ ಖ್ಯಾತನಾಮ ವೈದ್ಯರಿಂದ ಪ್ರಶಂಸಿಸಲ್ಪಟ್ಟಿತು. ಹಾಗೇ ಇವರ ಸಂಶೋಧನೆಯನ್ನು ಮೆಚ್ಚಿ ಬೆನ್ನು ತಟ್ಟಿದವರಲ್ಲಿ ಆ ಕಾಲದ ನಮ್ಮ ದೇಶದ ಪ್ರಸಿದ್ಧ ಪೆಥಾಲಾಜಿಸ್ಟ್ ಡಾ. ಭೆಂಡೆ ಅವರೂ ಕೂಡ ಒಬ್ಬರು. ಇವರ ಸಂಶೋಧನೆಯ ಫಲವಾಗಿ ಕುಷ್ಠರೋಗವು ನರಗಳ ಮೂಲಕ ಹರಡುತ್ತದೆ ಎಂಬ ತಪ್ಪು ಕಲ್ಪನೆ ದೂರವಾಯಿತು. ಆ ಬಗ್ಗೆ ಅಧ್ಯಯನದಲ್ಲಿ ಗೊತ್ತಾದ ಸಂಗತಿಗಳನ್ನು ಎಲ್ಲರಿಗೂ ತಿಳಿಸಿದರು. ಈ ರೋಗ ದೇಹದ ಒಂದು ಭಾಗಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲಾ ಕಡೆಗಳಿಗೂ ಹರಡುವ ಇದು ದೇಹವನ್ನೇ ವ್ಯಾಪಿಸಿ ರೋಗಿಯನ್ನು ಹತಾಶಗೊಳಿಸುತ್ತದೆ. ಹಾಗೊಂದು ವೇಳೆ ನರಗಳ ಮೂಲದಿಂದ ಕುಷ್ಠ ಹರಡುವುದಾಗಿದ್ದರೆ ಗಂಟುಗಳು ಚರ್ಮದಿಂದ ಯಕೃತ್‍ಗೆ ತಲುಪಲು ಸಾಧ್ಯವೇ ಇಲ್ಲ ಅನ್ನುವುದು ಇವರ ವಾದವಾಗಿತ್ತು. ಅವರ ವಾದವನ್ನು ರೋಗಾಣುಗಳನ್ನು ಕುರಿತು ನಡೆಸಿದ ಸೂಕ್ಷ್ಮದರ್ಶಕದ ಪರಿಕ್ಷೆಗಳು ಸಾಬೀತು ಮಾಡಿದವು. ಅಧ್ಯಯನ ತೀವ್ರಗೊಳಿಸಿ ರೋಗಿಗಳನ್ನು ಪರೀಕ್ಷೆಗೊಳಪಡಿಸಿದಾಗ ಒಬ್ಬ ರೋಗಿಯ ರಕ್ತದೊಳಗೆ ಕುಷ್ಠರೋಗಾಣು ಪತ್ತೆಯಾಗಿ ಅವರ ವಾದವನ್ನು ಪುಷ್ಠೀಕರಿಸಿತು. ಹಾಗೆಯೇ, ಅವರು ಮಂಡಿಸಿದಂತೆ ಕುಷ್ಠವು ರಕ್ತದ ಅಂಗಾಂಶಗಳ ಮೂಲಕ ದೇಹದ ಎಲ್ಲಾ ಭಾಗಗಳಿಗೂ ವ್ಯಾಪಿಸುವುದೆಂಬುದನ್ನು ಎಲ್ಲರೂ ಅರಿಯುವಂತಾಯಿತು.

ಶವ ಪರೀಕ್ಷೆ : ಅಪಘಾತ, ಅಲ್ಲಿನ ರಕ್ತಸಿಕ್ತ ದೇಹಗಳನ್ನು ನೋಡಿದಾಕ್ಷಣ ಎಂತಹವರಿಗೂ ಭಯ, ಗಾಭರಿ ಒಟ್ಟಿಗೆ ಆಗುವುದು ಸಹಜ. ಆದರೆ ವೈದ್ಯರಾದವರಿಗೆ ಇದು ಅನಿವಾರ್ಯ. ಕೆಲ ಸಂದರ್ಭಗಳಲ್ಲಿ ಶವ ಪರೀಕ್ಷೆ ಮಾಡಬೇಕಾಗುತ್ತದೆ. ಇದು ನಿಜಕ್ಕೂ ಸವಾಲಿನ ಕೆಲಸವೆಂದು ಸಜನಾ ಯಾವಾಗಲೂ ಹೇಳುತ್ತಿದ್ದರು. ವೈದ್ಯರಾಗುವವರು ರಕ್ತ, ದೇಹದ ವಾಸನೆ, ಸೋರುವ ದೇಹಭಾಗಗಳನ್ನು ನೋಡಿ ಹೆದರಬಾರದು ಎಂದು ತಮ್ಮ ವಿದ್ಯಾರ್ಥಿಗಳಿಗೆ ಹೇಳಿ ಶವಚ್ಛೇದನಕ್ಕೆ ಹುರುದುಂಬಿಸುತ್ತಿದ್ದರು. ಒಬ್ಬ ಉತ್ತಮ ಪೆಥಾಲಾಜಿಸ್ಟ್ ಆಗಬೇಕಾದರೆ ಶವ ಪರೀಕ್ಷೆ ಕಾರ್ಯವನ್ನು ಅದು ಅವಲಂಬಿಸಿರುತ್ತದೆ. ಶವ ಪರೀಕ್ಷೆ ಮಾಡಿದ್ದಾದರೆ ಪುಸ್ತಕದ ಓದು ಅವಶ್ಯಕತೆಯೇ ಇಲ್ಲ ಎಂದು ಅವರು ಹೇಳುತ್ತಿದ್ದರು. ಶವ ಪರೀಕ್ಷೆಯಿಂದ ಕಲಿಯುವಂಥದ್ದು ಬಹಳಷ್ಟು ಇದೆ ಎಂದು ತಮ್ಮ ವಿದ್ಯಾರ್ಥಿಗಳಿಗೆ ತಿಳಿಸುತ್ತಿದ್ದರು. ಹೆಚ್ಚೆÉಚ್ಚು ಶವ ಪರೀಕ್ಷೆ ಮಾಡಿದಂತೆ ಜ್ಞಾನ ಹೆಚ್ಚುತ್ತದೆ. ಪೆಥಾಲಾಜಿ ವಿಷಯ ಓದಿದರೆ ಶೇ 20ರಷ್ಟು ಜ್ಞಾನ ಬರುತ್ತದೆ. ಅದೇ ಆಪರೇಷನ್ ಮಾಡಿ ಅಂಗಾಂಶ ಪರೀಕ್ಷೆ ಮಾಡಿದರೆ ಶೇ 30ರಷ್ಟು ಜ್ಞಾನ ವೃದ್ಧಿಯಾಗುತ್ತದೆ. ಇನ್ನು ಪೆಥಾಲಾಜಿ ಮ್ಯೂಜಿಯಂನಲ್ಲಿ ಅಧ್ಯಯನ ಮಾಡಿದ್ದಾದರೆ ಶೇ 60ರಷ್ಟು, ಒಂದು ವೇಳೆ ಶವ ಪರೀಕ್ಷೆ ಮಾಡಿ ಕಲಿತಿದ್ದಾದರೆ ಶೇ 90ರಷ್ಟು ಜ್ಞಾನ ಬರುತ್ತದೆ ಎಂದು ಆಗಾಗ ಹೇಳುತ್ತಿದ್ದರು. ಅಷ್ಟೇ ಅಲ್ಲದೆ ತಾವು ನೋಡಿದಂತೆ ಶವ ಪರೀಕ್ಷೆಯ ಭಾಗಗಳನ್ನು ಚಿತ್ರ ಬರೆದು ತಿಳಿಸುತ್ತಿದ್ದರು. ಶವದ ನೈಜ ಭಾಗಗಳನ್ನು ಇದ್ದಂತೆ ಹೇಳದೆ ತಾವು ಅರ್ಥೈಸಿಕೊಂಡಂತೆ ಚಿತ್ರಿಸುತ್ತಿದ್ದರು. ಅದು ಕಲಿಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುತ್ತಿತ್ತು. ‘ಚಿತ್ರ ನೋಡುವ ಕಾಲ ಹೋಯಿತು, ಏನಿದ್ದರೂ ಚಿತ್ರ ಓದೋ ಕಾಲ ಬಂದೈತಿ’ ಎಂದು ವಿದ್ಯಾರ್ಥಿಗಳಿಗೆ ಚಿತ್ರ ಓದುವ ಸೂಕ್ಷ್ಮತೆಯನ್ನು ಅದರ ಮಹತ್ವವನ್ನು ಒತ್ತಿ ಹೇಳುತ್ತಿದ್ದರು. ಅದಕ್ಕಾಗಿಯೇ ಅವರು ತಮ್ಮ ಬಳಿ ಯಾವಾಗಲೂ ಒಂದು ಮಸೂರವನ್ನು ಇಟ್ಟುಕೊಂಡಿರುತ್ತಿದ್ದರು.

ಶವವೆಂದರೆ ಮೂಗುಮುರಿಯುವರಿಗೆ, ಅದರ ವಾಸನೆ, ವಾಕರಿಕೆಗೆ ಹೆದರುವವರಿಗೆ ತಿಳಿ ಹೇಳುತ್ತಿದ್ದರು. ಶವ ಪರೀಕ್ಷೆ ಮಾಡುವುದರಿಂದ ರೋಗಿಗೆ ಏನಾಗಿತ್ತು ? ಯವ ಕಾರಣಕ್ಕೆ ಸತ್ತ ? ಡಾಕ್ಟರ್ ಏನು ಟ್ರೀಟ್‍ಮೆಂಟ್ ಮಾಡಿದ್ದರು, ಆದರೂ ಯಾಕೆ ಬದುಕಲಿಲ್ಲ ? ಡಾಕ್ಟರ್ ತಪ್ಪಿದ್ದೆಲ್ಲಿ ? ಎಂಬ ಖಚಿತವಾದ ಮಾಹಿತಿಗಳು ಲಭಿಸುತ್ತವೆ. ಡಾಕ್ಟರ್ ಮಾಡಿದ ತಪ್ಪುಗಳು ಮುಂದೆ ಸರಿಯಾದ ದಾರಿ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ವೈದ್ಯ ವಿಜ್ಞಾನ ಬೆಳೆಯುವ ವಿಧಾನವೇ ಹೀಗೆ ಎಂದು ಅವರು ಅರಿತಿದ್ದರು. ಶವ ಪರೀಕ್ಷೆ ಪೆಥಲಾಜಿ ವಿಭಾಗದಲ್ಲಿ ಒಂದು ಬಹುಮುಖ್ಯವಾದ ಕಾರ್ಯ ಎಂಬುದನ್ನ ತಮ್ಮ ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಸಿಪಿಸಿ (ಛಿಟiಟಿiಛಿಚಿಟ ಠಿಚಿಣhoಟogಥಿ ಛಿoಟಿಜಿeಡಿeಟಿಛಿe) ಎನ್ನುವ ಕಲಿಸುವ ವಿಧಾನವನ್ನು ವೈದ್ಯ ವಿದ್ಯಾರ್ಥಿಗಳಿಗೆ ಪರಿಚಯಿಸುವ ಮೂಲಕ ಸಿಪಿಸಿ ನಾಗಲೋಟಿಮಠ ಎಂತಲೇ ಹೆಸರಾದರು.

ಪೆಥಾಲಾಜಿ ಮ್ಯೂಜಿಯಂ : ಕರ್ನಾಟಕದ ಉತ್ತರ ಭಾಗದಲ್ಲಿ ಬೆಳಗಾವಿಯ ಕೆಎಲ್‍ಇ ವೈದ್ಯಕೀಯ ಸಂಸ್ಥೆ ಅತ್ಯಂತ ಪ್ರಸಿದ್ಧವಾದದ್ದು. ಅಂತಹ ವೈದ್ಯಕೀಯ ಸಂಸ್ಥೆಯ ಡೀನ್ ಆಗಿದ್ದ ಡಾ. ಜೀರಗೆಯವರ ಒತ್ತಾಸೆಯಂತೆ ಸಜನಾರನ್ನು ಸಂಸ್ಥೆಯ ಅಭಿವೃದ್ಧಿಗೊಸ್ಕರ ಕರೆತರಲಾಯಿತು. ಅವರ ಎಂಡಿ ಪದವಿ ಇನ್ನೂ ಪೂರ್ಣಗೊಂಡಿರದಿದ್ದರೂ ಸಹ ಅವರ ಕರ್ತೃತ್ವಶಕ್ತಿಯನ್ನ ಗಮನಿಸಿ ಸಂಸ್ಥೆಯ ಏಳಿಗೆಗೆ ಸಹಕರಿಸಲು ಕೋರಲಾಯಿತು. ಕಷ್ಟಪಟ್ಟು ಶ್ರಮವಹಿಸಿ ಸಂಸ್ಥೆಗೆ ದುಡಿಯುವ ಅವರನ್ನು ಅರಿತು ಪೆಥಲಾಜಿ ವಿಭಾಗದ ಅಸಿಸ್ಟಂಟ್ ಪ್ರೋಫೆಸರ್ ಆಗಿ ನೇಮಿಸಲಾಯಿತು. ಅಲ್ಲಿಂದ ಅವರು ಮಾಡಿದ ಕಾರ್ಯಗಳಲ್ಲಿ ಬಹುಮುಖ್ಯವಾದದ್ದು ಪೆಥಲಾಜಿ ಮ್ಯೂಜಿಯಂನ ಸ್ಥಾಪನೆ. 1979ರಲ್ಲಿ ರೂಪಿತವಾದ ಅದು ಅದ್ಭುತವಾದ ವಿನ್ಯಾಸ ಹಾಗೂ ಸಜನಾರ ದೂರದೃಷ್ಠಿಯ ಫಲವಾಗಿ ಬಹುಬೇಗನೆ ಜನಪ್ರಿಯತೆ ಗಳಿಸಿ ಎಲ್ಲರೂ ನಿಬ್ಬೆರಗಾಗಿ ನೋಡುವಂತೆ ಮಾಡಿತು. ವೈದ್ಯಕೀಯ ವಿಭಾಗದಲ್ಲೇ ಪೆಥಲಾಜಿ ಮ್ಯೂಜಿಯಂ ಕಣ್ಣಿಗೆ ಕಟ್ಟುವಂತೆ ಇತ್ತು. ಅಲ್ಲಿ 2330 ಉತ್ತಮವಾದ ಸ್ಪೆಸಿಮಿನ್‍ಗಳನ್ನು ಅರ್ಧವೃತ್ತಾಕಾರದಲ್ಲಿ ಅಳವಡಿಸಿ 12 ಕೊಠಡಿ(cubicles)ಗಳಲ್ಲಿ ಆ ಸ್ಪೆಸಿಮಿನ್‍ಗಳನ್ನು, ಚಾರ್ಟ್‍ಗಳನ್ನು  ತುಂಬಿಸಲಾಗಿತ್ತು. ಇದನ್ನು ಲಂಡನ್‍ನಲ್ಲಿನ ‘The Burrows Welcome Museum’ ನ ರೀತಿಯಲ್ಲಿ ವ್ಯವಸ್ಥೆಗೊಳಿಸಲಾಗಿತ್ತು. ಹಾಗಾಗಿ ಏಷ್ಯಾದ ಒಂದು ಉತ್ತಮ ಪೆಥಲಾಜಿ ಮ್ಯೂಜಿಯಂ ಎಂದು ಬಹುತೇಕರಿಂದ ಪ್ರಶಂಸಿಸಲ್ಪಟ್ಟಿತು. ನಾಡಿನ ಖ್ಯಾತನಾಮರಾದ ದೇಜಗೌ, ಸಿದ್ಧಯ್ಯ ಪುರಾಣಿಕ ಮುಂತಾದವರು ಬಂದು ನೋಡಿ ಮೆಚ್ಚುಗೆ ಸೂಚಿಸಿದ್ದರು.

ಕ್ಯಾಸನೂರು ಮಂಗನ ರೋಗ : ಅಲ್ಲಿವರೆಗೂ ಈ ರೋಗದ ಬಗ್ಗೆ ಹೆಸರು ಕೇಳಿದ್ದ ಕೆಲವರು ಅದರ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಲಿಲ್ಲ. ಯಾವಾಗ ಅದನ್ನ ಕುರಿತು ಪತ್ರಿಕೆಯೊಳಗೆ ಸುದ್ಧಿಯಾಯಿತೊ ಆವಾಗಲೇ ಕಾರ್ಯಪ್ರವೃತ್ತರಾದ ಸಜನಾ ಅವರು ತಮ್ಮ ವೈದ್ಯರ ಸಭೆ ಜರುಗಿಸುತ್ತಾರೆ. ಡಾ. ಬಿ ಎಮ್ ಹೇಮಶೆಟ್ಟರ ಹಾಗೂ ಡಾ. ಎಣ್ಮಿ ಅವರನ್ನು ಗದಗದ ಕ್ಯಾಸನೂರಿನ ಕಾಡಿಗೆ ಕಳುಹಿಸಿ ಅಧ್ಯಯನ ಮಾಡಲು ತಿಳಿಸುತ್ತಾರೆ. ಅವರು ಅಲ್ಲಿಂದ ಬರುವಾಗ ಸತ್ತ ಮಂಗವೊಂದನ್ನು ತಂದು ಪರೀಕ್ಷೆಗೆ ಒಳಪಡಿಸುತ್ತಾರೆ. ಮಂಗನ ದೇಹ ಕೋಯ್ದು ಪರೀಕ್ಷೆ ಮಾಡಿದಾಗ ಅಲ್ಲಲ್ಲಿ ರಕ್ತದ ಕಲೆಗಳು ಕಂಡವು. ದೇಹದ ಭಾಗಗಳಾದ ಜಠರ, ಕರುಳು, ಮೂತ್ರಪಿಂಡ, ಮೆದುಳು ಭಾಗಗಳು ರಕ್ತದ ಕಲೆಗಳಿಂದ ಕೂಡಿದ್ದು ಕಂಡುಬಂದಿತು. ಈ ಎಲ್ಲ ಆವಾಂತರಗಳಿಗೆ ಕಾರಣವಾದದ್ದು ಮಂಗಗಳ ಮೈಮೇಲಿನ ರಕ್ತ ಹೀರುವ ಉಣ್ಣೆಗಳು ಎಂಬುದು ತಿಳಿದು ಬಂತು.

ಆಹಾರದ ಅರಿವು : ನಮ್ಮ ದೇಹದ ಬಹುತೇಕ ಕಾಯಿಲೆಗಳಿಗೆ ನಾವು ತಿನ್ನುವ ಅತಿಯಾದ ಆಹಾರವೇ ಕಾರಣ ಎಂಬುದನ್ನು ಸದೋಹಾರಣೆಗಳ ಮೂಲಕ ಸಜನಾರವರು ತಿಳಿಹೇಳುತ್ತಿದ್ದರು. ದೇಹದ ಬೊಜ್ಜು, ಸಕ್ಕರೆ ಕಾಯಿಲೆ, ಬಿಪಿ ಒಂದಕ್ಕೊಂದು ತಳುಕು ಹಾಕಿಕೊಂಡು ರೋಗಗಳಿಂದ ದೇಹ ಬಾದಿಸುತ್ತವೆ. ಅದಕ್ಕಾಗಿ ಶರಣರ ವಚನದ ಮೂಲಕ ಆಹಾರ ಕಿರಿದಾಗಿಸಿಕೊಳ್ಳಿ ಎಂದು ಮನವರಿಕೆ ಮಾಡುತ್ತಿದ್ದರು. ಅತಿ ಆಹಾರದಿಂದ ನಿದ್ದೆ ಹೆಚ್ಚಾಗಿ, ತಾಮಸ ಗುಣ ಬೆಳೆಯುತ್ತದೆ, ಅದರಿಂದ ವಿಕಾರ ಹೆಚ್ಚಾಗಿ ಬೊಜ್ಜು ಅಧಿಕಗೊಂಡು ಸಂದಿವಾತ, ರಕ್ತದ ಒತ್ತಡ, ಹೃದಯದ ಸಮಸ್ಯೆ ಕಾಡುತ್ತವೆ. ಇವುಗಳಿಂದ ಮುಕ್ತಿ ಹೊಂದಿ ಆರೋಗ್ಯ ಜೀವನ ಸಾಗಿಸಲು ಆಹಾರದ ಅರಿವು ಅಗತ್ಯ ಎಂಬುದನ್ನು ಹಲವು ವಚನಗಳನ್ನು ವಿಶ್ಲೇóಷಿಸಿ ತಿಳಿಸುತ್ತಿದ್ದರು.

ವಚನ ವಿಜ್ಞಾನ : ಡಕ್ಕೆಯ ಬೊಮ್ಮಣ್ಣ, ಚೆನ್ನಬಸವಣ್ಣ, ಅಕ್ಕಮಹಾದೇವಿ ಮುಂತಾದ ಶರಣರ ವಚನಗಳಲ್ಲಿನ ಆರೋಗ್ಯ ವಿಜ್ಞಾನ ತತ್ವಸಾರವನ್ನು ಬಿಡಿಸಿ ಹೇಳುತ್ತಿದ್ದರು. ವಿದ್ಯಾರ್ಥಿಗಳಿಗೆ ಶರಣರ ವಚನಗಳಲ್ಲಿ ಹಾಸುಹೊಕ್ಕಾದ ವೈಚಾರಿಕ, ವೈಜ್ಞಾನಿಕ ಸಂಗತಿಗಳನ್ನು ತಿಳಿಸುತ್ತಾ ಪಾಶ್ಚಿಮಾತ್ಯ ವೈದ್ಯವಿಜ್ಞಾನ ಬೆಳೆಯುವುದಕ್ಕೂ ಮುಂಚೆಯೇ ಶರಣರ ನಾಡಿನಲ್ಲಿ, ಅವರು ಅಳವಡಿಸಿಕೊಂಡ ಬದುಕಿನಲ್ಲಿ ವಿಜ್ಞಾನ ಬೆಳೆದಿರುವುದನ್ನು, ಅವರು ಕಂಡುಕೊಂಡ ಸತ್ಯವನ್ನು ಮನವರಿಕೆ ಮಾಡಿಕೊಡುತ್ತಿದ್ದರು. ಅದಕ್ಕಾಗಿಯೇ ಅವರು ಅಖಿಲ ಕರ್ನಾಟಕ ವೈದ್ಯವಿಜ್ಞಾನ ಸಮ್ಮೇಳನ ಏರ್ಪಡಿಸಿ ಅದರಲ್ಲಿ ವಚನ ವಿಜ್ಞಾನಕ್ಕೆ ಪೂರಕವಾದ ವಿಚಾರಗೋಷ್ಠಿ, ಉಪನ್ಯಾಸಕ್ಕೆ ಆದ್ಯತೆ ನೀಡಿದರು. ಅಲ್ಲದೇ, ಶರಣರ ಬದುಕಿನ ನಡೆನುಡಿಗಳನ್ನು ವಿವರಿಸುತ್ತಾ ಅಂಗೈಯಲ್ಲಿ ಲಿಂಗ ಹಿಡಿಯುವುದರಿಂದ ಹಿಡಿದು, ಧೂಪ ಹಾಕುವುದರಲ್ಲಿ, ಗುಗ್ಗಳದಲ್ಲಿ, ಕರ್ಪೂರ ಹಚ್ಚುವುದರಲ್ಲಿ, ಬಿಲ್ಪತ್ರೆಯ ದಳಗಳಲ್ಲಿ, ಪ್ರತಿಯೊಂದರಲ್ಲಿಯೂ ವೈಜ್ಞಾನಿಕ ಅಂಶ ಇರುವುದನ್ನು ಎತ್ತಿ, ಒತ್ತಿ ಹೇಳುತ್ತಿದ್ದರು.

ಸೇವೆಗಳು : ಈ ಅಪರೂಪದ ವೈದ್ಯವಿಜ್ಞಾನಿಯ ಸಾಧನೆ ವರ್ಣನಾತೀತ. ಅವರು ಬದುಕಿನುದ್ದಕ್ಕೂ ಸಮಾಜ ಜನಸೇವೆಗಾಗಿಯೇ ಮುಡುಪಾಗಿದ್ದರು. ಅವರು ವೃತ್ತಿ ಬದುಕಿನಲ್ಲಿ ಸಲ್ಲಿಸಿದ ಸೇವೆ ಅನನ್ಯವಾದುದು. 1970ರಲ್ಲಿ ಹುಬ್ಬಳ್ಳಿಯನ್ನು ಬಿಟ್ಟು ಬೆಳಗಾವಿಯ ಜವಹರಲಾಲ್ ನೆಹರು ಮೆಡಿಕಲ್ ಕಾಲೇಜ್‍ಗೆ ಸೇರಿ 1974ರಲ್ಲಿ ಪೆಥಾಲಜಿ ಮುಖ್ಯಸ್ಥರಾಗುತ್ತಾರೆ. ಅಲ್ಲಿ ಅವರು ನಿರಂತರವಾಗಿ ತಮ್ಮನ್ನು ಅರ್ಪಿಸಿಕೊಂಡು ಸೇವೆಗೈದು 1979ರಲ್ಲಿ ಸ್ಥಾಪಿಸಿದ ಪೆಥಾಲಜಿ ಮ್ಯೂಜಿಯಂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತದೆ. 1980ರಲ್ಲಿ ಆಯೋಜಿಸಿದ ಪೆಥಾಲಜಿ ಸಮ್ಮೇಳನ ಎಲ್ಲರ ಗಮನ ಸೆಳೆಯುತ್ತದೆ. 1982ರಲ್ಲಿ ಇಂಡಿಯನ್ ಇನ್‍ಸ್ಟ್ಯೂಟ್ ಆಫ್ ಪೆಥಾಲಜಿಯ ಉಪಕೇಂದ್ರವನ್ನು ಬೆಳಗಾವಿಯಲ್ಲಿ ಸ್ಥಾಪಿಸಿ, 1985ರಲ್ಲಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರಾಗಿ ಕೆಲಸ ನಿರ್ವಹಿಸುತ್ತಾರೆ. ಮುಂದೆ 1990ರಲ್ಲಿ ರಾಷ್ಟ್ರೀಯ ಸೈಟಾಲಜಿ ಸಮ್ಮೇಳನ ಏರ್ಪಡಿಸುತ್ತಾರೆ. 1991ರಲ್ಲಿ ಬೆಳಗಾವಿಯಿಂದ ವಿಜಾಪೂರದ ಮೆಡಿಕಲ್ ಕಾಲೇಜ್‍ಗೆ ಪ್ರಿನ್ಸಿಪಾಲ್ ಆಗಿ ನೇಮಕಗೊಂಡು, 1992ರಲ್ಲಿ ಅವರು ದೇಹದ ಹರಳು ಮ್ಯೂಜಿಯಂ ಸ್ಥಾಪಿಸುತ್ತಾರೆ. 1994ರಲ್ಲಿ ಮೈಸೂರಿನ ಜೆ ಎಸ್ ಎಸ್ ಕಾಲೇಜ್‍ಗೂ ಸಹ ತಮ್ಮ ಸೇವೆ ಒದಗಿಸುತ್ತಾರೆ. ಹೀಗೆ ಸಾಗಿ 1999ರಲ್ಲಿ ಬಾಗಲಕೋಟೆ ಬವಿವಿ ಸಂಘದ ಮೆಡಿಕಲ್ ಕಾಲೇಜ್‍ಗೆ ನಿರ್ಧೇಶಕರಾಗಿ, 2002ರಲ್ಲಿ ಎಸ್ ನಿಜಲಿಂಗಪ್ಪ ಮೆಡಿಕಲ್ ಕಾಲೇಜು ಪ್ರಾರಂಭಿಸುತ್ತಾರೆ. ಅಷ್ಟೇ ಅಲ್ಲದೇ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‍ನ ಅಧ್ಯಕ್ಷರಾಗಿ ವಿಜ್ಞಾನ ಭವನ ಕಟ್ಟಡಕ್ಕೆ ಚಾಲನೆ ನೀಡುತ್ತಾರೆ. ವೈದ್ಯಕೀಯ ಸೇವೆಯ ಜೊತೆ ಜೊತೆಗೆ ಸಾಹಿತ್ಯಕವಾಗಿ ಓದುಗರನ್ನು ತಲುಪಲು 1982ರಲ್ಲಿ ಇಂಡಿಯನ್ ಜರ್ನಲ್ ಆಫ್ ಪೆಥಾಲಜಿ ಆಂಡ್ ಮೈಕ್ರೋ ಬಯಾಲಜಿ ಸಂಪಾದಕಾಗುತ್ತಾರೆ. 1997ರಲ್ಲಿ ‘ಜೀವನಾಡಿ’ಆರೋಗ್ಯ ಮಾಸಿಕ ಪತ್ರಿಕೆ ಪ್ರಾರಂಭಿಸಿ, ಹಲವಾರು ವೈಜ್ಞಾನಿಕ ಲೇಖನಗಳನ್ನು ಬರೆಯುತ್ತಾರೆ. ಅಲ್ಲದೇ ಶ್ರೀಸಾಮಾನ್ಯ ಮತ್ತು ವೈದ್ಯ, ಸತ್ತ ಮೇಲೆ ಸಮಾಜಸೇವೆ, ಸ್ವಾಸ್ಥ್ಯ ಸಂಗಾತಿ ಮುಂತಾದ ವೈದ್ಯಸಾಹಿತ್ಯದ 40ಕ್ಕೂ ಹೆಚ್ಚು ಕೃತಿಗಳ ಮೂಲಕ ಜನಪ್ರಿಯ ವೈದ್ಯಕೀಯ ಲೇಖಕರಾಗಿ ನಾಡಿನ ಮನೆ ಮಾತಾಗಿದ್ದಾರೆ. ಸ ಜ ನಾಗಲೋಟಿಮಠ ಜೀವನದುದ್ದಕ್ಕೂ ನಿರಂತರ ಓದು, ಅಧ್ಯಯನ, ವಿದೇಶ ಪ್ರವಾಸಗಳ ಮೂಲಕ ಜ್ಞಾನದ ಉತ್ತುಂಗಕ್ಕೇರಿ ಜನಸೇವೆಯ ಸಾರ್ಥಕ ಬದುಕನ್ನು ತಮ್ಮದಾಗಿಸಿಕೊಳ್ಳುತ್ತಾರೆ.

ಪ್ರಶಸ್ತಿಗಳು : ಸಜನಾರಿಗೆ ಸಂದ ಪ್ರಶಸ್ತಿಗಳು ಹಲವು. 1986ರಲ್ಲಿ ಮ್ಯೂಜಿಯಂ ಅಭಿವೃದ್ಧಿಗಾಗಿ ಪ್ರತಿಷ್ಠಿತ ಡಾ. ಬಿ ಸಿ ರಾಯ್ ಪ್ರಶಸ್ತಿ, ಬ್ರೂಸೆಲ್ಲಾ ಸಂಶೋಧನೆಗಾಗಿ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಶಸ್ತಿ, 1994ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಅವರ ಅನುಪಮ ಸೇವೆಗೆ ರಾಜ್ಯ ರಾಷ್ಟ್ರವಷ್ಟೇ ಅಲ್ಲದೇ ಅಂತರಾಷ್ಟ್ರೀಯ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ.

ಸಜನಾ ಅವರು ತಮ್ಮ ವೃತ್ತಿಜೀವನದ ಕೊನೆವರೆಗೂ ವೈದ್ಯಕೀಯ ಸೇವೆಯನ್ನು, ವೈದ್ಯವಿಜ್ಞಾನದ ಪ್ರಚಾರವನ್ನು ಒಟ್ಟೊಟ್ಟಿಗೆ ಮಾಡುತ್ತಾ ಜೀವನದ ಹಲವು ಸಂದರ್ಭಗಳಲ್ಲಿ ಅಡೆತಡೆಗಳನ್ನು, ನೋವುಗಳನ್ನು ಎದುರಿಸಿ, ಕೃತಿಕಾರರು ವರ್ಣಿಸಿದಂತೆ ‘ಎಲ್ಲಿಹುದು ನಾ ಸೇರುವ ಊರು / ಬಲ್ಲಿದರರಿಯದ ಯಾರು ಕಾಣದ/ ಎಲ್ಲಿಯೂ ಇರದೂರು/ ಎಲ್ಲಿಹುದು ನಾ ಸೇರುವ ಊರು/ ಎಂಬಂತೆ 2006 ಅಕ್ಟೋಬರ್ 24ರಂದು ನಮ್ಮನ್ನಗಲುತ್ತಾರೆ. ಸಜನಾ ಅಲ್ಲಿಗೆ ತಮ್ಮ ಜೀವನ ನಾಟಕ ಮುಗಿಸುತ್ತಾರೆ.

                               ************

ಆಕರಗಳು : ಬಿಚ್ಚಿದ ಜೋಳಿಗೆ ನಾಟಕ ಡಾ/ ಗಣೇಶ ಅಮೀನಗಡ

          ಜಾಲತಾಣ 






No comments:

Post a Comment