Monday, September 4, 2023

ತಿಂಗಳನ ಮೇಲಿನ ವಿಕ್ರಮದ ಹಿಂದಿನ ವಿರಾಟ ಶಕ್ತಿ

ತಿಂಗಳನ ಮೇಲಿನ ವಿಕ್ರಮದ ಹಿಂದಿನ ವಿರಾಟ ಶಕ್ತಿ


                                            ಲೇಖಕರು: ರಾಮಚಂದ್ರ ಭಟ್‌ ಬಿ. ಜಿ

ಇತ್ತೀಚೆಗಷ್ಟೇ ಚಂದ್ರಯಾನ-೩ರಲ್ಲಿ ಯಶಸ್ಸು ಕಂಡು ಚಂದ್ರನ ದಕ್ಷಿಣ ಧ್ರುವದ ಮೇಲೆ   ಹೆಜ್ಜೆಯೂರಿದ  ಪ್ರಥಮ ದೇಶ ಎಂಬ ಹೆಗ್ಗಳಿಕೆ ಕಾರಣವಾದ ದೇಶದ ಹೆಮ್ಮೆಯ ಇಸ್ರೋ ಸಂಸ್ಥೆಯ ಸ್ಥಾಪನೆಗೆ‌ ನಾಂದಿ ಹಾಡಿದ ವಿಕ್ರಮ್‌ ಸಾರಾಭಾಯ್‌ ಅವರ ಕೊಡುಗೆಯನ್ನು ಸ್ಮರಿಸುವ ಲೇಖನ

  ಅಂದು ಅಮೃತ ಮಹೋತ್ಸವದ ಅಮೃತ ಘಳಿಗೆ. ವಿಶ್ವದಾದ್ಯಂತ ಕುತೂಹಲ ಕ್ಷಣಕ್ಷಣಕ್ಕೂ ಏರುತ್ತಿತ್ತು. ಭರತ ಭೂಮಿಯಲ್ಲಂತೂ ಕೂತೂಹಲಕ್ಕಿಂತಲೂ ಭಯ, ಆತಂಕವೇ ಹೆಚ್ಚು. ಅದೆಷ್ಟು ಹೃದಯಗಳು ಹೋಮ, ಹವನ ಪ್ರಾರ್ಥನೆಗಳಲ್ಲಿ ತೊಡಗಿದ್ದರೋ? ಆತಂಕದ ನಡುವೆ ಕಣ್ಣುಗಳು ನೇರಪ್ರಸಾರದ ವಿವಿಧ ಸ್ಕ್ರೀನ್‌ಗಳಿಗಂಟಿದ್ದವು. ಪ್ರಾರ್ಥನೆ ಕೊನೆಗೂ ಫಲಿಸಿತು. ಸೋಮನಾಥರ ಕಂಚಿನ ಕಂಠ ಎಲ್ಲರನ್ನೂ ಸಂತೋಷ ಸಾಗರದಲ್ಲೇ ತೇಲಿಸಿಬಿಟ್ಟಿತು. ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಇಳಿಯುತ್ತಿದ್ದಂತೆ ಭಾರತ ಬಾಹ್ಯಾಕಾಶದಲ್ಲಿ ಹೊಸ ಇತಿಹಾಸವನ್ನು ಬರೆದಾಗಿತ್ತು. ದೂರದ ಆಫ್ರಿಕಾದಲ್ಲಿದ್ದರೂ ಪ್ರಧಾನಿಯವರ ಕಣ್ಣುಗಳು ಚಂದ್ರಯಾನ-೩ರ ಯಶಸ್ಸನ್ನು ಎದುರು ನೋಡುತ್ತಿತ್ತು.ಮೋದಿಯವರು ದೂರದ ಬ್ರಿಕ್ಸ್‌ ಸಮ್ಮೇಳನದ ನಡುವೆ ಬಿಡುವು ಮಾಡಿ ನಮ್ಮ ಹೆಮ್ಮೆಯ ಇಸ್ರೋಗೆ ವಿಜಯದ ನಗೆಯೊಂದಿಗೆ ಧನ್ಯವಾದ ಅರ್ಪಿಸಿದರು.

                        

ಕನಸು ಕಾಣಲೂ ಸಾಧ್ಯವಿಲ್ಲದ ಆ ದಿನಗಳಂದು ಇಂತಹ ಸಾಧನೆಯ ಕಸುವು ಮನದಲ್ಲಿ ತುಂಬಿಕೊಂಡು ಹೊಸ ಸಾಧನೆಗೆ ಸಾಧನೆಗೆ ಶ್ರೀಕಾರವಿಟ್ಟ ಆ ದ್ರಷ್ಟಾರರನ್ನು ನಾವು ಮರೆಯಲಾದೀತೆ ? ಚಿನ್ನದ ಚಮಚವನ್ನು ಬಾಯಿಯಲ್ಲಿಟ್ಟುಕೊಂಡೇ ಹುಟ್ಟಿದ ಇವರು ಮನಸ್ಸು ಮಾಡಿದರೆ ಚಿನ್ನದರಮನೆಯಲ್ಲೇ ವಿಲಾಸೀ ಜೀವನವನ್ನು ಕಳೆಯಬಹುದಾಗಿತ್ತು. ಮನೆಗೆ ಬರುತ್ತಿದ್ದ ಕೇಂದ್ರ ಸರ್ಕಾರದ ಮಂತ್ರಿಗಳು, ರಾಷ್ಟ್ರೀಯ ನಾಯಕರೊಂದಿಗಿನ ಕೌಟುಂಬಿಕ ಸ್ನೇಹವನ್ನು ಬಳಸಿ ರಾಜಕೀಯ ಕ್ಷೇತ್ರದಲ್ಲಿ ತ್ರಿವಿಕ್ರಮನಾಗಿ ಬೆಳೆಯಬಹುದಿತ್ತು. ಆದರೆ ಆತ ಇದಕ್ಕೆ ಮನಸ್ಸು ಮಾಡದೇ ವಿಜ್ಞಾನ ಕ್ಷೇತ್ರವನ್ನು ಆರಿಸಿಕೊಂಡು ʼಭಾರತೀಯ ಬಾಹ್ಯಾಕಾಶ ವಿಜ್ಞಾನದ ಪಿತಾಮಹʼ ಎನಿಸಿಕೊಂಡದ್ದು ನಮ್ಮ ದೇಶದ ಅದೃಷ್ಟವೇ ಸರಿ. ಬಹುಷಃ ಈಗ ನಿಮಗೆ ನಾನ್ಯಾರ ಕಥೆ ಹೇಳ ಹೊರಟಿದ್ದೇನೆಂಬುದರ ಸುಳಿವು ಸಿಕ್ಕಿರಬೇಕು. ಇಸ್ರೋದ ಮಹತ್ಸಾಧನೆಯ ಹಿಂದಿನ ಸಂಸ್ಥಾಪಕ ಶಕ್ತಿ ಎನಿಸಿದ ವಿಕ್ರಮ್ ಸಾರಾಭಾಯಿಯವರು ಅಂಬಾಲಾಲ್ ಸಾರಾಭಾಯಿ ಮತ್ತು ಸರಳಾದೇವಿ ದಂಪತಿಗಳ ಪುತ್ರರಾಗಿ 12 ಆಗಸ್ಟ್ 1919 ರಂದು ಅಹಮದಾಬಾದ್ನಲ್ಲಿ ಜನಿಸಿದರು. ಚಿಕ್ಕಂದಿನಿಂದಲೇ ಬುದ್ಧಿವಂತನಾಗಿದ್ದ ಬಾಲಕ ಸಾಹಸಪ್ರಿಯ ಕೂಡಾ. ಇವರ ಮನೆಗೆ ಬರುತ್ತಿದ್ದ ಮೋತಿಲಾಲ್ ನೆಹರು, ಜವಾಹರಲಾಲ್ ನೆಹರು, ಸಿ.ವಿ.ರಾಮನ್ ಮುಂತಾದ ಮಹನೀಯರುಗಳ ವ್ಯಕ್ತಿತ್ವ ಈ ಧೀಮಂತ ಬಾಲಕನ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಮುಂಬಯಿ ಮತ್ತು ಕೇಂಬ್ರಿಜ್‍ಗಳಲ್ಲಿ ಶಿಕ್ಷಣ ಪಡೆದ ಅವರು, 1947ರಲ್ಲಿ ಕಾಸ್ಮಿಕ್‌ ಕಿರಣಗಳ ಮೇಲೆ ನಡೆಸಿದ ಸಂಶೋಧನೆಗೆ ಕೇಂಬ್ರಿಜ್ ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿ ನೀಡಿತು. ಸರ್‌ ಸಿ.ವಿ ರಾಮನ್‌ ಅವರ ಪ್ರಭಾವದಿಂದ ತಾಯ್ನಾಡಿಗೆ ಹಿಂದಿರುಗಿದರು. ಸಿ.ವಿ. ರಾಮನ್‌ ಅವರು ಸಾರಾಭಾಯಿ, ಹೋಮಿ ಭಾಭಾ ರಂಥ ಅನೇಕ ಯುವ ಪ್ರತಿಭೆಗಳು ಭಾರತಕ್ಕೆ ಹಿಂದಿರುಗುವಂತೆ ಮಾಡಿದ್ದರು. ಇದು ರಾಮನ್ನರ ಸಂಶೋಧನೆಯಷ್ಟೇ ಭಾರತದ ವಿಜ್ಞಾನ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯೂ ಹೌದು. 

ಮುಂದೆ ಸಾರಾಭಾಯ್ ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಸಿ. ವಿ. ರಾಮನ್ರವರ  ಮಾರ್ಗದರ್ಶನದಲ್ಲಿ ಕಾಸ್ಮಿಕ್‌‌ ಕಿರಣ, ಭೂಕಾಂತತ್ವ, ಅಂತರಗ್ರಹ, ವ್ಯೋಮ ವಿಜ್ಞಾನ, ಸೂರ್ಯ-ಭೂಮಿಗಳ ಸಂಬಂಧ ಮುಂತಾದವುಗಳ ಕುರಿತು ಸಂಶೋಧನೆ ಮಾಡಿದರು.

             

    ಕಾಸ್ಮಿಕ್‌ ಕಿರಣಗಳ ತೀಕ್ಷ್ಣತೆ ದಿನಕ್ಕೆರಡು ಬಾರಿ ಬದಲಾಗುವುದನ್ನು ಕಂಡುಹಿಡಿದರು. ಸಂಶೋಧನೆ ಬಾಹ್ಯಾಕಾಶ ಸಂಶೋಧನೆಗಳಿಗೆ ಸಹಾಯಕವಾಯಿತು. ಪರಮಾಣುವಿನಲ್ಲಿ ಪ್ರೋಟಾನ್‌, ಇಲೆಕ್ಟ್ರಾನ್‌ ನ್ಯೂಟ್ರಾನ್‌ಗಳಲ್ಲದೆ ಪಾಸಿಟ್ರಾನ್‌ಗಳು, ಇಲೆಕ್ಟ್ರಾನ್‌ ಆನಯಾನ್‌ಗಳು, ಬೇರೆ ರೀತಿಯ ಬೇರೆ ರಾಶಿಯ ಮೆಸಾನ್‌ ಕಣಗಳೂ ಇರುತ್ತವೆ. ಇವು ಕೂಡ ಕಾಸ್ಮಿಕ್‌ ಕಿರಣಗಳಿಂದ ಉತ್ಪತ್ತಿಯಾಗುತ್ತವೆ ಹಾಗೂ ಇವು ನಮ್ಮ ದೇಹವನ್ನು ನಿಮಿಷಕ್ಕೆ 60 ಕಣಗಳಂತೆ ಹಾದು ಹೋಗುತ್ತವೆ ಎಂಬುದನ್ನು ತಮ್ಮ ಸಂಶೋಧನೆಯಲ್ಲಿ ಕಂಡುಕೊಂಡರು. ಅಯಾನುಗೋಳ ಮತ್ತು ಕಾಂತಗೋಳದಲ್ಲಿ ಆಗುವ ಬದಲಾವಣೆಗಳನ್ನು ಅಧ್ಯಯನ ಮಾಡಿದರು.

ಅಹಮದಾಬಾದಿನ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿಯಲ್ಲಿ ಪ್ರಾಧ್ಯಾಪಕರಾಗಿ ವೃತ್ತಿಜೀವನವನ್ನು ಆರಂಭಿಸಿದ ಸಾರಾಭಾಯ್ 1965ರಲ್ಲಿ ಅದರ ನಿರ್ದೇಶಕರೂ ಆದರು. ವಿದ್ಯಾರ್ಥಿಗಳ ಪ್ರಾಧ್ಯಾಪಕರಾಗಿದ್ದ ಸಂದರ್ಭವೊಂದು ನಮ್ಮೆಲ್ಲರಿಗೂ ಅನುಕರಣೀಯ. ಎಷ್ಟೋ ಸಂದರ್ಭಗಳಲ್ಲಿ ನಾವು ಪ್ರಾಯೋಗಿಕ ಉಪಕರಣಗಳು ಹಾಳಾಗುತ್ತವೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಅವುಗಳನ್ನು ಮುಟ್ಟಲೂ ಬಿಡುವುದಿಲ್ಲ.  ಒಂದು ದಿನ ಸಂಶೋಧನಾ ವಿದ್ಯಾರ್ಥಿಯೊಬ್ಬ ಪ್ರಯೋಗಾಲಯದ ಅಮೂಲ್ಯ ಉಪಕರಣವೊಂದನ್ನು ಆಕಸ್ಮಿಕವಾಗಿ ಒಡೆದು ಹಾಕಿದ. ಪ್ರೊಫೆಸರ್ ಏನನ್ನುತ್ತಾರೆ ಎನ್ನುವ ಭಯದಿಂದ‌ ಆತ ನಡುಗುತ್ತಿದ್ದ. ಪ್ರಯೋಗಾಲಯಕ್ಕೆ ಬಂದ ಪ್ರೊಫೆಸರ್‌ ಸಾರಾಭಾಯಿಯವರು ಈ ವಿದ್ಯಾರ್ಥಿಯ ಮುಖವನ್ನು ನೋಡಿ ಏನೋ ಸಮಸ್ಯೆಯಾಗಿದೆ ಎಂದು ಹತ್ತಿರ ಬಂದರು.  ವಿಷಯವನ್ನು ತಿಳಿದುಕೊಂಡ ಅವರು  ಆತನ ಬೆನ್ನು ತಟ್ಟಿ  ಇವೆಲ್ಲವೂ ಸಂಶೋಧನೆಯಲ್ಲಿ ಸಹಜ.  ಈ ಉಪಕರಣ ಒಡೆದು ಹೋದರೆ ಏನು? ಮತ್ತೊಂದನ್ನು ತರಿಸಿಕೊಂಡರಾಯಿತು ನೀನು ಸಂಶೋಧನೆಯನ್ನು ಮುಂದುವರೆಸು ಎಂದು ಹೇಳಿ ಧೈರ್ಯ ತುಂಬಿ ಆತನ ಮನೋಸ್ಥೈರ್ಯವನ್ನು ಹೆಚ್ಚಿಸಿದರು. ಇಂತಹ ಘಟನೆಗಳೆಷ್ಟೋ?

ಸಾರಾಭಾಯಿಯವರದ್ದು ಚುರುಕು ಹಾಗೂ ದೂರದರ್ಶಿತ್ವದ ವ್ಯಕ್ತಿತ್ವ. ಅವರು ಅತ್ಯುತ್ತಮ ಮಾನವ ಸಂಪನ್ಮೂಲ ನಿರ್ವಾಹಕರಾಗಿದ್ದರು. ನಮ್ಮ ಹೆಮ್ಮೆಯ ಕನ್ನಡಿಗ ವಿಜ್ಞಾನಿ ಸಿ. ಆರ್.‌ ಸತ್ಯ ಅವರಿಂದಲೇ ಸಾರಾಭಾಯಿಯವರ ಬಗ್ಗೆ ಘಟನೆಯೊಂದನ್ನು ನಾನು ತಿಳಿದುಕೊಂಡೆ. 1968ರಲ್ಲಿ ಸಿ.ಆರ್‌.ಸತ್ಯರವರು ತುಂಬಾದ ಇಸ್ರೋ ಪ್ರಯೋಗಾಲಯದಲ್ಲಿ ಕಲಾಮ್‌ ಅವರ ಸೂಚನೆಯಂತೆ ವೈಜ್ಞಾನಿಕ ಉಪಕರಣವೊಂದನ್ನು ವಿನ್ಯಾಸ ಮಾಡುತ್ತಿದ್ದರು. ಕಲಾಮ್‌ ಅವರಿಂದ ಈ ಮಾಹಿತಿ ಪಡೆದುಕೊಂಡ ಸಾರಾಭಾಯಿಯವರು ಕಲಾಮರೊಂದಿಗೆ ಅದನ್ನು ವೀಕ್ಷಿಸಲು ಬಂದರು. ಸತ್ಯ ಅವರ ವಿನ್ಯಾಸ ಇನ್ನೂ ಪೂರ್ಣಗೊಂಡಿರಲಿಲ್ಲ. ಆದರೆ, ಅದರ ವಿನ್ಯಾಸವನ್ನು ಮೆಚ್ಚಿಕೊಂಡ ಸಾರಾಭಾಯಿ ಸತ್ಯರವರ ಕಾರ್ಯನಿಷ್ಠೆಯನ್ನು ಮೆಚ್ಚಿ, ಅವರ ಆಸಕ್ತಿಯನ್ನು ಗಮನಿಸಿ ಉನ್ನತ ಅಧ್ಯಯನಕ್ಕೆ ಅವರನ್ನು ಯುರೋಪ್‌ ಹಾಗೂ ಅಮೇರಿಕಾಗಳಿಗೆ ಕಳುಹಿಸಿ ಕೊಡುವಂತೆ ಕಲಾಮರಿಗೆ ತಿಳಿಸಿದರು. ಹಾಗೆಯೇ ಸತ್ಯರವರತ್ತ ತಿರುಗಿ, “ಸತ್ಯ,  ಫೆಬ್ರವರಿ ೨ ರಂದು ಪ್ರಧಾನಿ ಇಂದಿರಾ ಗಾಂಧಿಯವರು ತುಂಬಾಗೆ ಬರುತ್ತಾ ಇದ್ದಾರೆ. ಅಷ್ಟರೊಳಗೆ ನೀನಿದನ್ನು ಪೂರ್ಣಗೊಳಿಸು. ಅವರಿಂದಲೇ ಉದ್ಘಾಟನೆ ಮಾಡಿಸೋಣ“ ಎಂದು ಹೇಳಿ ಪ್ರೋತ್ಸಾಹಿಸಿದರು. ಅಷ್ಟೇ ಅಲ್ಲ, ಅದೇ ರೀತಿ ಇಂದಿರಾ ಗಾಂಧಿಯವರಿಂದಲೇ ಉದ್ಘಾಟನೆ ಮಾಡಿಸಿ ಸಂತೋಷಪಟ್ಟರು. ಇದು ಅವರು ಕಿರಿಯರನ್ನು ಪ್ರೋತ್ಸಾಹಿಸುವ ಪರಿ.

ಆಗರ್ಭ ಶ್ರೀಮಂತರು, ಅನೇಕ ಉದ್ಯಮ ಸಂಸ್ಥೆಗಳನ್ನು ಸ್ಥಾಪಿಸಿ ಅತ್ಯಂತ ಯಶಸ್ವಿ ಉದ್ಯಮಿಯೂ ಆಗಿದ್ದ ಸಾರಾಬಾಯಿಯವರದ್ದು ಅತ್ಯಂತ ಸರಳ ವ್ಯಕ್ತಿತ್ವ.  ಜುಬ್ಬಾ -ಪೈಜಾಮ ಚಪ್ಪಲಿಗಳನ್ನು ಧರಿಸಿಕೊಂಡೇ ಓಡಾಡುತ್ತಿದ್ದರು. ಒಮ್ಮೆ ಅವರು ಬೆಳಗಿನ ಜಾವ ತುಂಬಾದ ಗೆಸ್ಟ್ ಹೌಸಿನಿಂದ ನಡೆಯುತ್ತಾ ರಾಕೆಟ್ ಉಡಾವಣೆ ಮಾಡುವ ಸಂಕಿರಣದತ್ತ ಬಂದರು.  ಆಗ ತಾನೇ ಕೆಲಸಕ್ಕೆ ಸೇರಿದ್ದ ಸೆಕ್ಯೂರಿಟಿ ಆಳು ಕೃಷ್ಣ ನಾಯರ್ಗೆ ಇವರ ಪರಿಚಯವಿರಲಿಲ್ಲ. ಅವನು ಇವರನ್ನು ತಡೆದು ನಿಲ್ಲಿಸಿ,“ಇದು ನಿಷೇಧಿತ ಸ್ಥಳ. ನಿಮ್ಮ ಬಳಿ ಪಾಸ್ ಇದೆಯೇ?” ಎಂದು ಕೇಳಿದ. ಆಗ ಸಾರಾಭಾಯಿಯವರು ನಮ್ರತೆಯಿಂದಲೇ ನನ್ನ ಬಳಿ ಅದೇನು ಇಲ್ಲ ಎನ್ನುತ್ತಾ ಹಿಂದಿರುಗಿದರು !. ಸ್ವಲ್ಪ ಸಮಯದ ನಂತರ ಅವರು ಅಲ್ಲಿಯ ನಿರ್ದೇಶಕರೊಂದಿಗೆ ಮತ್ತು ಕೆಲವು ಹಿರಿಯ ಅಧಿಕಾರಿಗಳೊಂದಿಗೆ ಕಾರಿನಲ್ಲಿ ಬಂದಿಳಿದಾಗ ಕೃಷ್ಣನಾಯರ್‌ಗೆ ತಾನು ಯಾರನ್ನು ತಡೆದು ನಿಲ್ಲಿಸಿದ್ದೆ ಎಂದು ತಿಳಿಯಿತು. ತನ್ನ ತಪ್ಪು ಅರಿವಾಗಿ ಗಡಗಡ ನಡುಗಲಾರಂಭಿಸಿದ.  ಅವರಕಾಲಿಗೆ ದೀರ್ಘ ದಂಡ ನಮಸ್ಕಾರ ಮಾಡಿ ಕ್ಷಮೆ ಕೇಳಿದ. ಆಗ ನಗುತ್ತಲೇ ಸಾರಾಭಾಯಿವರು ನೀನು ನಿನ್ನ ಡ್ಯೂಟಿ ಮಾಡಿದೆ ಅಷ್ಟೇ. ನಿನ್ನದೇನೂ ತಪ್ಪಿಲ್ಲ“ ಎಂದು ಆತನನ್ನು ಸಮಾಧಾನಪಡಿಸಿದರು. ಎಂಥಾ ನಿಷ್ಕಲ್ಮಶ ವ್ಯಕ್ತಿತ್ವ!!! ಇದಕ್ಕೇ ಅಲ್ಲವೇ ತುಂಬಿದ ಕೊಡ ತುಳುಕುವುದಿಲ್ಲ ಎನ್ನುವುದು?

ಕೊಡೈಕೆನಾಲ್, ತಿರುವನಂತಪುರ ಮತ್ತು ಗುಲ್ಮಾರ್ಗ್‍ಗಳಲ್ಲಿ ಸಂಶೋಧನಾ ಸಂಸ್ಥೆಗಳನ್ನು ಸ್ಥಾಪನೆ ಮಾಡಿದ ಸಾರಾಭಾಯ್‌ ಅವರು.ಅಹಮದಾಬಾದಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್, ವಸ್ತ್ರೋದ್ಯಮ ಸಂಶೋಧನಾ ಸಂಸ್ಥೆ, ನೆಹರೂ ಫೌಂಡೇಶನ್ ಮತ್ತು ಕಮ್ಯೂನಿಟಿ ಸೈನ್ಸ್ ಸೆಂಟರ್‌ಗ್ರೂಪ್ ಫಾರ್ ಇಂಪ್ರೂವ್‌ಮೆಂಟ್ ಆಫ್ ಸೈನ್ಸ್ ಎಜುಕೇಷನ್ ಮೊದಲಾದ ಹಲವು ಸಂಸ್ಥೆಗಳ ಸ್ಥಾಪನೆಗೆ ಕಾರಣರಾದರು.

ಎಲ್ಲದಕ್ಕಿಂತಲೂ ಹೆಚ್ಚಾಗಿ ಸಾರಾಭಾಯಿಯವರನ್ನು ನಾವು ನೆನೆಯಬೇಕಾದದ್ದು ಅವರ ವೈಮಾಂತರಿಕ್ಷ ಸಂಶೋಧನೆಗಳಿಗೆ ಬೆನ್ನೆಲುಬಾದ ಇಸ್ರೋ ಸಂಸ್ಥೆಯ ಸ್ಥಾಪನೆಗಾಗಿ. ನೆಹರೂರವರ ಮನ ಒಲಿಸಿದ ಸಾರಾಭಾಯಿಯವರ ಸತತ ಪರಿಶ್ರಮ ಮತ್ತು ದೂರದರ್ಶಿತ್ವದ ಫಲವಾಗಿ 1962 ರಲ್ಲಿ ಭಾರತ ಸರ್ಕಾರ ಬಾಹ್ಯಾಕಾಶ ಸಂಶೋಧನಾ ರಾಷ್ಟ್ರೀಯ ಸಮಿತಿಯನ್ನು (INCOSPAR: The Indian National Committee for Space Research ), ಸ್ಥಾಪಿಸಿತು.ಅದಕ್ಕೆ ಡಾ ವಿಕ್ರಮ್ ಸಾರಾಭಾಯ್ಅವರೇ ಮೊದಲ ಅಧ್ಯಕ್ಷರಾದರು. 1969 ರಲ್ಲಿ ಅದು ಇಸ್ರೋ(Indian Space Research organization- ISRO) ಆಗಿ ಪರಿವರ್ತನೆಗೊಂಡು ಬೆಳೆಯಿತು. ಇಸ್ರೋದ ಪ್ರಧಾನ ಕೇಂದ್ರಕ್ಕಾಗಿ ಭಾರತದಾದ್ಯಂತ ಓಡಾಡಿ ಕೊನೆಗೆ ತುಂಬಾ ಪ್ರದೇಶವನ್ನು ಆಯ್ಕೆ ಮಾಡಿದ್ದರು. ಈ ಆಯ್ಕೆಯ ಹಿಂದೆ ಭೌಗೋಳಿಕ, ಹವಾಮಾನ ಮೊದಲಾದ ವೈಜ್ಞಾನಿಕ ವಿಚಾರಗಳಿದ್ದವು. ಅಲ್ಲಿಂದೀಚೆಗೆ, ಇಸ್ರೋ ಅನೇಕ ಮೈಲುಗಲ್ಲುಗಳನ್ನು ಸ್ಥಾಪಿಸುತ್ತಲೇ ಬಂದಿದೆ. ೧೯೭೫ ರಲ್ಲಿ ಮೊದಲ ಭಾರತೀಯ ಉಪಗ್ರಹ ಆರ್ಯಭಟ ಕಕ್ಷೆಗೆ ಸೇರಿದಂದಿನಿಂದ ಚಂದ್ರಯಾನ್-‌೩ ಚಂದ್ರನ ಮೇಲ್ಮೈ ಮೇಲೆ ಇಳಿಯುವವರೆಗೂ ಅನೇಕ ಸಾಧನೆಗಳಿಗೆ ಕಾರಣವಾಗಿದೆ.





ಭಾರತದ ಅಣುಶಕ್ತಿ ಕಾರ್ಯಕ್ರಮದ ಪಿತಾಮಹ ಎನಿಸಿದ ಹೋಮಿ ಜಹಂಗೀರ್ ಭಾಭಾ 1966 ರ ಜನವರಿ೨೪ರಂದು ದುರಾದೃಷ್ಟವಶಾತ್‌ ದುರಂತ ಅಂತ್ಯಕಂಡರು. ಸ್ನೇಹಿತ ಜಹಾಂಗೀರ್‌ ಭಾಭಾರವರ ನಿಧನಾ ನಂತರ ವಿಕ್ರಮ್‍ರವರು ಭಾರತದ ಪರಮಾಣು ಶಕ್ತಿ ಮಂಡಲಿಯ ಅಧ್ಯಕ್ಷರಾದರು. ಅಧ್ಯಕ್ಷರಾದ ನಂತರ ಯುರೇನಿಯಮ್ ಅದುರಿನ ಅನ್ವೇಷಣೆಗೆ ಆದ್ಯತೆ ನೀಡಿದರು. ಕಲ್ಪಾಕಮ್‍ನ ಫಾಸ್ಟ್ ಬ್ರೀಡರ್ ರಿಯಾಕ್ಟರ್ ನಿರ್ಮಾಣದ ವೇಗವರ್ಧನೆ ಮತ್ತು ಭಾರತೀಯ ಸಂಪನ್ಮೂಲಗಳಿಂದಲೇ ಕೊಲ್ಕತಾದ ಸೈಕ್ಲೊಟ್ರಾನ್ ಸ್ಥಾಪನೆಗೆ ಚಾಲನೆ ನೀಡಿದರು. ಭಾರತದ ಎಲೆಕ್ಟ್ರಾನಿಕ್ ಆಯೋಗದ ಹಾಗೂ ಸಂಯುಕ್ತ ರಾಷ್ಟ್ರ ಸಂಸ್ಥೆ ಸಂಘಟಿತ ಬಾಹ್ಯವ್ಯೋಮದ ಶಾಂತಿಯುತ ಉಪಯೋಗಗ ಅಧಿವೇಶನದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದರು.

 

ದುರಂತ ಅಂತ್ಯ :

ವಿಜ್ಞಾನಿಗಳದ್ದೂ ದೇಶ ಕಾಯುವ ಸೈನಿಕನ ಬದುಕೇ!!!.  ಅದೆಷ್ಟೋ ವಿಜ್ಞಾನಿಗಳು ತಮ್ಮ ಬದುಕನ್ನೇ ದೇಶಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಹಲವು ಬಗೆಯ ವಿದ್ರೋಹ, ಷಡ್ಯಂತ್ರಗಳಿಗೆ ಬಲಿಯಾಗಿದ್ದಾರೆ. ಜಹಾಂಗೀರ್‌ ಭಾಭಾರಂತಹವರು ದುರಂತ ಅಂತ್ಯಕ್ಕೆ ಒಳಗಾಗಿದ್ದಾರೆ.ನಂಬಿ ನಾರಾಯಣನ್‌ರಂಥವರನ್ನು ಯಾರದ್ದೋ ರಾಜಕೀಯಕ್ಕೆ ಬಲಿಪಶು ಮಾಡಲಾಗಿದೆ. ಸಾರಾಭಾಯ್‌ ಅವರೂ ಇಂತಹದ್ದೇ ಅನುಮಾನಾಸ್ಪದ ಅಂತ್ಯ ಕಂಡಿರುವುದಾಗಿ ಕೆಲವರು ನಂಬುತ್ತಾರೆ.ಸಾಮಾನ್ಯವಾಗಿ ಪ್ರತಿ ದಿನ 16-18ಗಂಟೆಗಳ ಕಾಲ ದುಡಿಯುತ್ತಿದ್ದ ವಿಕ್ರಮ್ ಸಾರಾಭಾಯಿಯವರು ಕಾರ್ಯನಿಮಿತ್ತ ತುಂಬಾ ರಾಕೆಟ್ ಉಡಾವಣಾ ಕೇಂದ್ರಕ್ಕೆ ತೆರಳಿದ ಸಂದರ್ಭದಲ್ಲಿ ಹೋಟೆಲ್‌ ಒಂದರಲ್ಲಿ ಉಳಿದುಕೊಂಡಿದ್ದರು. ಯಾವುದೇ ಆರೋಗ್ಯ ಸಮಸ್ಯೆಗಳೂ ಇಲ್ಲದಿದ್ದ ಸಾರಾಭಾಯಿಯವರು 1971 ಡಿಸೆಂಬರ್ 30ರಂದುರಾತ್ರಿ ನಿದ್ರಿಸುತ್ತಿದ್ದಾಗ ಹೃದಯಾಘಾತದಿಂದ ನಿಧನರಾದರು  ಎನ್ನುವ ಸುದ್ದಿ ದೇಶದ ಮೇಲೆ ಬರಸಿಡಿಲಿನಂತೆ ಎರಗಿತು. ಎಂದು ಹೇಳಲಾದರೂ ಅನೇಕರು ಈ ಕುರಿತು ಸಂದೇಹ ವ್ಯಕ್ತಪಡಿಸುತ್ತಾರೆ.ಅವರ ಮರಣಾ ನಂತರ ತುಂಬಾದಲ್ಲಿರುವ ಇಸ್ರೋ ಕೇಂದ್ರಕ್ಕೆ ವಿಕ್ರಮ್ ಸಾರಾಭಾಯಿ ವ್ಯೋಮಕೇಂದ್ರ ಎಂಬ ಹೆಸರಿಟ್ಟು ಈ ದೇಶಪ್ರೇಮಿ ಭಾರತೀಯ ವಿಜ್ಞಾನಿಗೆ ರಾಷ್ಟ್ರ ಕೃತಜ್ಞತೆಯನ್ನು ಸಲ್ಲಿಸಿದೆ. ಆಗಸ್ಟ್‌ ೨೩ರಂದು ತಿಂಗಳನ ಅಂಗಳದಲ್ಲಿಳಿದ ಲ್ಯಾಂಡರ್‌ಗೂ ವಿಕ್ರಮ್ ಲ್ಯಾಂಡರ್‌ ಎಂಬ ಹೆಸರಿಟ್ಟು ಮಹಾನ್‌ ವಿಜ್ಞಾನಿ, ದಕ್ಷ ಆಡಳಿತಗಾರ, ಸಮರ್ಥ ಉದ್ಯಮಿ ಎನಿಸಿದ ವಿಕ್ರಮ ಸಾರಾಭಾಯಿಯವರಿಗೆ ಗೌರವ ಸಲ್ಲಿಸಲಾಗಿದೆ. ಇಂತಹ ಸಾಧಕನಿಗೆ ೧೯೬೨-ಭಾರತ ಸರ್ಕಾರದ ಭಾಟ್ನಾಗರ್ ಸ್ಮಾರಕ ಪಾರಿತೋಷಕ, ೧೯೬೬-ಪದ್ಮಭೂಷಣ ಹಾಗೂ ೧೯೭೨-(ಮರಣೋತ್ತರ)ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಇಂತಹ ವ್ಯಕ್ತಿಗಳು ತಾವು ಉರಿದು ಸಮಾಜಕ್ಕೆ ಬೆಳಕನ್ನು ನೀಡುವ ಸೊಡರುಗಳಾಗಿದ್ದಾರೆ. ಇಂತಹ ಸ್ಫೂರ್ತಿಯ ಬೆಳಕಿನ ಕಿಡಿಯಿಂದ ನಮ್ಮಲ್ಲೂ ಅದೇ ಬಗೆಯ ರನ್ನದ ಕಿಡಿ ಹಚ್ಚಿಕೊಂಡು ಭವ್ಯಭಾರತದ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸುವುದೇ ಅವರಿಗೆ ನಾವು ನೀಡಬಲ್ಲ ಗೌರವವಾದೀತು.  

        ಇನ್ನಷ್ಟು ಮಾಹಿತಿಗಾಗಿ https://starsunfolded.com/vikram-sarabhai/

No comments:

Post a Comment