Wednesday, October 4, 2023

ಸುಣ್ಣದ ಸಂಭ್ರಮ

                    ಸುಣ್ಣದ ಸಂಭ್ರಮ  

 
    ಲೇಖಕರು : ರಮೇಶ ವಿ. ಬಳ್ಳಾ ಅಧ್ಯಾಪಕರು                      

ಬಾಲಕಿಯರ ಸರ್ಕಾರಿ ಪೂ ಕಾಲೇಜು                       

                              ಗುಳೇದಗುಡ್ಡ ಜಿ: ಬಾಗಲಕೋಟ                                           

ಬಹು ಹಿಂದಿನಿಂದಲೂ  ಮನೆಯ ಗೋಡೆಗಳಿಗೆ ಅಂದವನ್ನು ನೀಡುವುದರ ಜೊತೆಗೆ ರಕ್ಷಣೆಯನ್ನೂ ನೀಡುತ್ತಾ ಬಂದಿರುವ ಸುಣ್ಣದ ಉತ್ಪಾದನೆ ಹಾಗೂ ಉಪಯುಕ್ತತೆ ಬಗ್ಗೆ ಬೆಳಕು ಚೆಲ್ಲುವ ಲೇಖನ

ಹಬ್ಬ ಹರಿದಿನ, ಹುಣ್ಣಿಮೆ ಅಮವಾಸ್ಯೆ, ಜಾತ್ರೆ ಉತ್ಸವಗಳು ಬಂದವೆAದರೆ ಬಹುತೇಕ ಮನೆಗಳು ವಿಶೇಷವಾಗಿ ಶೃಂಗಾರಗೊಳ್ಳುತ್ತವೆ. ನಮ್ಮ ಮನೆ-ಮನಗಳು ಅಂದು ಸ್ವಚ್ಛಂದವಾಗಿ ಕಂಗೊಳಿಸುತ್ತವೆ. ಈ ಶೃಂಗಾರದ ವಸ್ತುಗಳಾಗಿ ತಳಿರು ತೋರಣ, ಹೂ ಹಣ್ಣು, ಪೂಜಾ ಸಾಮಗ್ರಿ ಒಂದೆಡೆಯಾದರೆ, ಮನೆಯ ಅಂದ ಹೆಚ್ಚಿಸುವ ವಿವಿಧ ಬಣ್ಣಗಳು ಗೋಡೆಗಳ ಅಲಂಕಾರ ಹೆಚ್ಚಿಸುತ್ತವೆ. ರಂಗುರAಗಿನ ಬಣ್ಣಗಳು ಒಂದು ದೀರ್ಘಕಾಲೀನ ಲೇಪನವಾಗಿ ರಂಗು ನೀಡಿದರೆ, ನಮ್ಮ ಹಳ್ಳಿಗಾಡಿನ ಮನೆಗಳ ಅಂದ ಹೆಚ್ಚಿಸುವ ‘ಸುಣ್ಣ’ ಶುಭ್ರ ಬಿಳಿ ವಾತಾವರಣ ನಿರ್ಮಿಸಿ ಮನೆಯ ಸೊಬಗಿಗೆ ಕಾರಣವಾಗುತ್ತದೆ. ಈ ಸುಣ್ಣ ಬಹು ಪುರಾತನ ಕಾಲದಿಂದಲೂ ನಮ್ಮ ಮನೆಯ ಅಂದ ಹೆಚ್ಚಿಸುತ್ತಾ ಬಂದಿದೆ.. ಅಷ್ಟೇ ಅಲ್ಲ ಬಹುಪಯೋಗಿ ವಸ್ತುವಾಗಿ ಬಳಕೆಯಾಗುತ್ತಾ ಬಂದಿದೆ. ಈ ಸುಣ್ಣದ ಸುತ್ತ ಏನೇನಿದೆ ಎಂದು ನೋಡೋಣ.

ಸುಣ್ಣದ ಕಲ್ಲು ಪುರಾತನ ಪ್ರಸಿದ್ಧವಾದದ್ದು. ‘ಬತು’ ಗುಹೆಗಳ ಬಗ್ಗೆ ಕೇಳಿದ್ದೇವೆ. ಮಲೇಷಿಯಾದ ಕೌಲಾಲಾಂಪುರದ ಉತ್ತರಕ್ಕೆ ಸುಮಾರು ೧೩ ಕಿಮೀ ದೂರದಲ್ಲಿರುವ ಈ ಗುಹೆಗಳು ಸಂಪೂರ್ಣ ಸುಣ್ಣದ ಕಲ್ಲುಗಳಲ್ಲಿ ಪ್ರಾಕೃತಿಕವಾಗಿ ರೂಪುಗೊಂಡಿವೆ. ಸುಮಾರು ೧೫೦ ಮೀಟರ್ ಎತ್ತರವಿರುವ ಈ ಸುಣ್ಣದ ಕಲ್ಲು ಬೆಟ್ಟಗಳು ಚಾರಣಿಗರನ್ನು ಕೈಬೀಸಿ ಕರೆಯುತ್ತವೆ. ಅಲ್ಲಿ ಧಾರ್ಮಿಕ ದೇವಾಲಯಗಳು ನಿರ್ಮಾಣವಾಗಿ ಪ್ರಕೃತಿ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.

ನಾವು ನೋಡುವ ಬಿಳಿಸುಣ್ಣ, ಸುಣ್ಣದ ಕಲ್ಲಿನ ಒಂದು ಉತ್ಪನ್ನ. ಕಾರ್ಬೋನೇಟುಗಳು ಭೂಗರ್ಭದಲ್ಲಿ ಹುದುಗಿದ ಕಾರ್ಬನ್‌ನ ಸಂಗ್ರಹಗಾರಗಳಲ್ಲಿ ಭದ್ರವಾಗಿವೆ. ಸುಣ್ಣ ಬಂಡೆಗಳಲ್ಲಿ ಕಂಡುಬರುವ ಸಾಮಾನ್ಯ ಲವಣಯುಕ್ತ ಪದಾರ್ಥ. ಇವುಗಳು ಕಲ್ಲಿನ ಬಂಡೆಗಳಲ್ಲಿ ಹೇಗೆ ಬಂದವು ಎಂಬುದು ಅಷ್ಟೇ ಕುತೂಹಲದ ಆಂಶ. ಸಮುದ್ರದ ಆಳದಲ್ಲಿರುವ ಜೀವಿಗಳ ಚಿಪ್ಪುಗಳು, ಮುತ್ತುಗಳು, ಸಸ್ಯ ಪ್ಲವಕಗಳು, ಕಲ್ಲಿದ್ದಲು ಪದಾರ್ಥ. ಇತರ ಲವಣಗಳು ದೀರ್ಘಕಾಲ ಸಂಗ್ರಹಗೊಳ್ಳುವ ಪರಿಣಾಮ ಕಾಲಾನಂತರದಲ್ಲಿ ಜಲಜಶಿಲೆಗಳು ರೂಪುಗೊಳ್ಳುತ್ತವೆ. ಹಾಗೆಯೇ ಅವುಗಳ ಮೂಲಕ ಇಂತಹ ಕಾರ್ಬೋನೇಟುಗಳು ಪ್ರಕೃತಿಯ ಮಡಿಲಿಗೆ ಬರುತವೆ. ಬಾಹ್ಯ ಪ್ರಕ್ರಿಯೆಗಳ ಕಾರಣದಿಂದ ರಾಸಾಯನಿಕ ಬದಲಾವಣೆಗಳನ್ನು ಹೊಂದುವ ಮೂಲಕ ವಿವಿಧ ಉತ್ಪನ್ನಗಳ ರೂಪದಲ್ಲಿ ನಮಗೆ ದೊರೆಯುತ್ತವೆ.

ಸುಣ್ಣದ ಕಲ್ಲು (CaCO3) : ರಾಸಾಯನಿಕವಾಗಿ ವಿಶ್ಲೇಷಿಸುವುದಾದರೆ ಕ್ಯಾಲ್ಸಿಯಂ ಕಾರ್ಬೋನೇಟು ಅಧಿಕ ಪ್ರಮಾಣದಲ್ಲಿರುವ ಜಲಜಶಿಲೆಯೇ ಸುಣ್ಣದಕಲ್ಲು. ಈ ಸುಣ್ಣದಕಲ್ಲು (ಕ್ಯಾಲ್ಸಿಯಂ ಕಾರ್ಬೋನೇಟ್) ಮೂರು ಮುಖ್ಯ ಘಟಕಗಳಾದ ಇಂಗಾಲ, ಆಮ್ಲಜನಕ ಮತ್ತು ಕ್ಯಾಲ್ಸಿಯಂ ಒಳಗೊಂಡಿದೆ. ಕ್ಯಾಲ್ಸಿಯಂ ಕಾರ್ಬೋನೇಟನ್ನು ಕ್ಯಾಲ್ಸೆöÊಟ್, ಅರಗೊನೈಟ್ ಮತ್ತು ಡೊಲೊಮೈಟ್‌ಗಳಾಗಿ ವರ್ಗೀಕರಿಸಲಾಗುತ್ತದೆ. ನಮ್ಮ ಹಳ್ಳಿಗಳಲ್ಲಿ ಇಂದಿಗೂ ಸಮೀಪದ ಗುಡ್ಡ, ಹಳ್ಳಗಳ ಕಲ್ಲು ದಿಮ್ಮಿಗಳಲ್ಲಿ ಸುಣ್ಣಗಾರರು ಕಲ್ಲು ತಂದು ಕುಟ್ಟಿ ಸಣ್ಣ ಹರಳಿನ ರೂಪಕ್ಕೆ ತಂದು ಭಟ್ಟಿಗೆ ಹಾಕುವುದನ್ನು ಕಾಣುತ್ತೇವೆ.

ಸುಟ್ಟ ಸುಣ್ಣ (CaO) : ಈ ಸುಣ್ಣದ ಕಲ್ಲು ಅಂದರೆ ಕ್ಯಾಲ್ಸಿಯಂ ಕಾರ್ಬೋನೇಟ (CaCO3)ನ್ನು ಉಚ್ಛ ಉಷ್ಣತೆಯಲ್ಲಿ ಕಾಯಿಸಿದಾಗ ಕ್ಯಾಲ್ಸಿಯಂ ಆಕ್ಸೆöÊಡ್ ಮತ್ತು ಕಾರ್ಬನ್ ಡೈಆಕ್ಸೆöÊಡ್ ಆಗಿ ವಿಭಜನೆಗೊಳ್ಳುತ್ತದೆ. ಈ ರಾಸಾಯನಿಕ ಕ್ರಿಯೆಯ ಸಮೀಕರಣ ಹೀಗಿದೆ.

CaCO3   ------ಉಷ್ಣ----à  CaO + CO2

ಸುಣ್ಣದಕಲ್ಲು                   ಸುಟ್ಟ ಸುಣ್ಣ

ಈ ಕ್ರಿಯೆಯಲ್ಲಿನ ಉತ್ಪನ್ನವಾದ ಕ್ಯಾಲ್ಸಿಯಂ ಆಕ್ಸೆöÊಡ್ ಬೇರೆ ಏನೂ ಅಲ್ಲ, ನಾವು ಸುಣ್ಣಗಾರರ ಸುಣ್ಣದ ಭಟ್ಟಿ(ಗೂಡು)ಗಳಿಂದ ತರುವ ಸುಟ್ಟ ಸುಣ್ಣವಾಗಿದೆ.


ಅರಳಿದ ಸುಣ್ಣ (Ca(OH)2) : ಹಬ್ಬ ಹರಿದಿನಗಳಲ್ಲಿ ಮನೆ ಸಾರಿಸಲು ತರುವ ಈ ಸುಟ್ಟ ಸುಣ್ಣವನ್ನು ನೀರಿಗೆ ಹಾಕಿ ಪೇಸ್ಟ್ ಮಾಡಿ, ಅಳ್ಳಗೆ ಕಲಿಸಿ, ಮನೆಯ ಗೋಡೆಗಳಿಗೆ ಬಳಿಯುವುದನ್ನು ನೋಡಿದ್ದೇವೆ. ಈ ಸುಟ್ಟ ಸುಣ್ಣವನ್ನು ನೀರಿಗೆ ಹಾಕಿದಾಗಿನ ರಾಸಾಯನಿಕ ಕ್ರಿಯೆಯ ಸಮೀಕರಣವನ್ನು ನೋಡೋಣ.

 CaO   +   H2O   ---------------à  Ca(OH)  ಉಷ್ಣ

ಸುಟ್ಟಸುಣ್ಣ                        ಅರಳಿದ ಸುಣ್ಣ

 

ಕ್ಯಾಲ್ಸಿಯಂ ಆಕ್ಸೆöÊಡ್ ನೀರಿನೊಂದಿಗೆ ವೇಗವಾಗಿ ವರ್ತಿಸಿ ಅರಳಿದ ಸುಣ್ಣವನ್ನು ಕೊಡುತ್ತದೆ. ಜೊತೆಗೆ ಅಧಿಕ ಪ್ರಮಾಣದ ಉಷ್ಣವನ್ನು ಬಿಡುಗಡೆ ಮಾಡುತ್ತದೆ. 


ಹೀಗಿರುವ ಸುಣ್ಣದ ವಿಭಿನ್ನ ರೂಪಗಳು ನಮ್ಮ ಬದುಕಿನುದ್ದಕ್ಕೂ ಬಂದು ಹೋಗುತ್ತವೆ. ಅವುಗಳಿಲ್ಲದ ನಮ್ಮ ಜೀವನ ಅಂದಗೊಳ್ಳುವುದಿಲ್ಲ. ಸುಣ್ಣದ ಬಹುಪಯೋಗವನ್ನು ನಾವು ಅರ್ಥ ಮಾಡಿಕೊಳ್ಳುವುದಾದರೆ ಇದು

    ಅನಾದಿ ಕಾಲದಿಂದಲೂ ವಿಳ್ಯೆದೆಲೆಯ ಜೊತೆ ಬೆರೆಕೆ ಮಾಡಿ ತಿನ್ನಲು ಬಳಸಲಾಗುತ್ತಿದೆ.

    ಗೋಡೆಯ ಅಂದ ಹೆಚ್ಚಿಸಿ ಶೃಂಗಾರ ಮಾಡಲು ಬೇಕೇ ಬೇಕು.

    ಕಟ್ಟಡ ನಿರ್ಮಾಣದಲ್ಲಿ ಗಾರೆ ತಯಾರಿಸಲು ಬಳಸಲಾಗುತ್ತದೆ.

    ಲೋಹೋದ್ಯಮದಲ್ಲಿ ಪ್ಲಕ್ಸ್ ಆಗಿ ಬಳಕೆಗೆ ಅವಶ್ಯವಾಗಿದೆ.

    ತೆರೆದ ಕುಲುಮೆಗಳ ಒಳಗೋಡೆಗಳಿಗೆ ಬಳಿದು ತಾಪ ನಿರೋಧಕವಾಗಿಸಲು ಅವಶ್ಯ.

    ಕೃಷಿಯಲ್ಲಿ ಮಣ್ಣಿನ ಆಮ್ಲೀಯತೆ ಶಮನಕ್ಕೆ ಇದು ಅವಶ್ಯ.

    ಜಲ ಶುದ್ಧೀಕರಣದಲ್ಲಿ ಇದರ ಉಪಯೋಗವಿದೆ.

    ಗಾಜು, ಕಾಗದ ತಯಾರಿಕೆಯಲ್ಲಿ ಕಚ್ಚಾ ಪದಾರ್ಥವಾಗಿ ಬಳಕೆಯಾಗುತ್ತದೆ.

    ಸಕ್ಕರೆ, ಬೆಲ್ಲ ಸಂಸ್ಕರಣೆಯಲ್ಲಿ ಉಪಯೋಗಿಸಲಾಗುತ್ತದೆ.

    ಬಳಪ, ಚಾಕ್ ತಯಾರಿಕೆಯಂತಹ ಗುಡಿಕೈಗಾರಿಕೆಗಳಲ್ಲಿ ಇದು ನೆರವಾಗುತ್ತದೆ.

 

ಹೀಗೆ ಅನೇಕ ರೀತಿಯ ಉಪಯುಕ್ತತೆಯನ್ನು ಹೊಂದಿರುವ ಸುಣ್ಣ,ನಮ್ಮಿಂದ ಮರೆಯಾಗುತ್ತಿದೆ ಏನೋ ಎಂಬ ಭಾವನೆ ಇತ್ತೀತ್ತಲಾಗಿ ಕಾಡುತ್ತಿದೆ. ಏಕೆಂದರೆ, ಸುಣ್ಣ ಬಳಸುವವರ ಸಂಖ್ಯೆ ಕಡಿಮೆಯಾಗಿದೆ. ಆಧುನಿಕತೆಯ ಭರಾಟೆಯಲ್ಲಿ ನಗರೀಕರಣದ ಪ್ರಭಾವದಿಂದ ಹಳ್ಳಿಗಳು ಸಹ ಇಂದು ವೈವಿಧ್ಯಮಯ ಸಿಂಥಟಿಕ್ ಬಣ್ಣಗಳ ಮೋಹಕ್ಕೊಳಗಾಗಿವೆ. ಇಂದು ಮಾರುಕಟ್ಟೆಗಳಲ್ಲಿ ಲಭ್ಯವಾಗುವ ಅದೆಷ್ಟೊ ಬಣ್ಣಗಳು, ಡಿಸ್ಟಂಪರ್, ತೈಲಬಣ್ಣಗಳು ಜನರನ್ನು ಆಕರ್ಷಿಸಿವೆ. ಈ ಸುಣ್ಣದ ಮುಂದೆ ಅವು ಸರಿಸಾಟಿಯಾಗಲಾರವು ನಿಜ, ಆದರೆ ನಯ ನಾಜೂಕತೆ, ಹೊಳಪು ಇತ್ಯಾದಿ ಕಾರಣಕ್ಕಾಗಿ ಬಣ್ಣಗಳು ಮೇಲುಗೈ ಸಾಧಿಸಿವೆ. ಹಾಗಾಗಿ, ಸುಣ್ಣದ ಭಟ್ಟಿಗಳು ಕಾಣೆಯಾಗಿ ಸುಣ್ಣಗಾರರ ಗೂಡುಗಳು ಇಲ್ಲವಾಗುತ್ತಿವೆ. ಸುಣ್ಣದ ಸುತ್ತ ಇಷ್ಟೆಲ್ಲಾ ಕಥೆ ಇದ್ದರೂ ಸುಮ್ಮನೆ ಕೇಳುವಂತಾಗಿದೆ. ಆದರೆ, ವಾಸ್ತವ ಸತ್ಯ ಏನೆಂದರೆ ಸುಣ್ಣಕ್ಕೆ ಸುಣ್ಣವೇ ಸಾಟಿ. ಈಗಿನ ಈ ಸಿಂಥಟಿಕ್ ಬಣ್ಣಗಳ ರಾಸಾಯನಿಕ ಅಂಶಗಳು ಗಂಭೀರವಾದವುಗಳಲ್ಲದಿದ್ದರೂ ಕೊಂಚ ಮಟ್ಟಿಗೆ ಮಾನವನ ಹಾಗೂ ಜೀವಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ನೈಸರ್ಗಿಕ ಸುಣ್ಣದ ಬಿಳಿ, ಸುಭ್ರತೆಯನ್ನು ಸಂಭ್ರಮಿಸುವುದೇ ಒಂದು ಆನಂದ.

No comments:

Post a Comment