Wednesday, October 4, 2023

ನಿಫಾ ವೈರಾಣು – ಭಯ ಬೇಡ, ಎಚ್ಚರವಿರಲಿ !

ನಿಫಾ ವೈರಾಣು – ಭಯ ಬೇಡ, ಎಚ್ಚರವಿರಲಿ !

ಲೇಖನ:

ಬಸವರಾಜ ಎಮ್ ಯರಗುಪ್ಪಿ  ಬಿ ಆರ್ ಪಿ ಶಿರಹಟ್ಟಿ 

ಸಾ.ಪೊ ರಾಮಗೇರಿ ತಾಲ್ಲೂಕು ಲಕ್ಷ್ಮೇಶ್ವರ, 

ಜಿಲ್ಲಾ ಗದಗ, ದೂರವಾಣಿ 9742193758 

ಮಿಂಚಂಚೆ : basu.ygp@gmail.com


      ನೆರೆಯ ಕೇರಳ ರಾಜ್ಯದಲ್ಲಿ ಅತಂಕ ಮೂಡಿಸಿರುವ ನಿಫಾ ವೈರಾಣುವಿನ ಸೋಂಕಿನ ಬಗ್ಗೆ ನಮ್ಮ ರಾಜ್ಯದಲ್ಲಿಯೂ ಎಚ್ಚರಿಕೆಯ ಘಂಟೆ ಬಾರಿಸಲಾಗಿದೆ. ಇದರ ಬಗ್ಗೆ ಉಪಯುಕ್ತ ಮಾಹಿತಿ ನೀಡುವ ಹಾಗೂ ಮುಂಜಾಗ್ರತಾ ಕ್ರಮಗಳನ್ನು ತಿಳಿಸುವ ಈ ಲೇಖನವನ್ನು ಬಸವರಾಜ ಎಮ್ ಯರಗುಪ್ಪಿ ಬರೆದಿದ್ದಾರೆ.

 ಪಾರ್ಡಿಸ್ ಸಬೆಟಿ ಎಂಬ  ವಿಜ್ಞಾನಿ ಹೇಳಿರುವಂತೆ “ಒಂದು ವೈರಸ್‌ನಿಂದ ಉಂಟಾಗುವ ವಿನಾಶದಿಂದ ಜಗತ್ತನ್ನು ವ್ಯಾಖ್ಯಾನಿಸಲು ಬಿಡಬೇಡಿ, ಏಕತೆಯಿಂದ ಕೆಲಸ ಮಾಡುವ ಶತಕೋಟಿ ಹೃದಯಗಳು ಮತ್ತು ಮನಸ್ಸುಗಳಿಂದ ಪ್ರಕಾಶಿಸಲ್ಪಟ್ಟಿದೆ”  ವೈರಸ್‌ ದಾಳಿ ನಮ್ಮನ್ನು ವಿನಾಶದ ಕಡೆಗೆ ನೂಕಿ, ಮನುಷ್ಯರ ಜೀವನವನ್ನು ಹಾಳುಮಾಡುವ ಮೂಲಕ ನೆಮ್ಮದಿ ಕೆಡಿಸಿದೆ. ಹೀಗಾಗಿ. ನಾವು ಪ್ರಜ್ಞಾವಂತಿಕೆಯಿಂದ ವೈರಸ್‌ ವಿರುದ್ಧ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂಬ ಅವರ ಮಾತು ಇಂದಿನ ದಿನಗಳಲ್ಲಿ ನಮಗೆ ಹತ್ತಿರವೆನಿಸಿದೆ.
    ಈಗ ಎಲ್ಲಿ ನೋಡಿದ್ರೂ ನಿಫಾ ವೈರಸ್‍ನದ್ದೇ ಭಯ. ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ಕೇಸ್‍ಗಳು ಹೆಚ್ಚಾಗುತ್ತಿವೆ. ಹಾಗಾಗಿ ಅದಕ್ಕೆ ಚಾಮರಾಜನಗರ ಜಿಲ್ಲೆಯ ಗಡಿ ಭಾಗದಲ್ಲಿ ಹೈ ಅಲರ್ಟ್ ಇದೆ.ಎಂದು ವಿವಿಧ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಕೇಳುತ್ತೇವೆ ಮತ್ತು ನೋಡುತ್ತೇವೆ.ಹೌದು ಓದುಗರೆ ನಾನು ಈಗ ಹೇಳಲು ಹೊರಟಿರುವುದು ನಿಫಾ ವೈರಸ್ (Nipah virus)ಬಗ್ಗೆ. 

ಕರ್ನಾಟಕದ ನೆರೆ ರಾಜ್ಯದಲ್ಲೇ ಮಹಾಮಾರಿ ತನ್ನ ಆರ್ಭಟ ಮೆರೆಯುತ್ತಿದೆ. ಬಾವಲಿಗಳ ಮೂಲಕ ಹರಡುವ ನಿಫಾ ವೈರಸ್‌, ದೇವರ ನಾಡು ಕೇರಳ ರಾಜ್ಯವನ್ನು ಹಲವು ಬಾರಿ ಕಾಡಿದೆ. ಇದೀಗ ಮತ್ತೆ ಕೇರಳದ ಕೆಲವು ಪ್ರದೇಶಗಳಲ್ಲಿ ನಿಫಾ ಮಾರಿ ಕಾಡುತ್ತಿದೆ.ಈಗಾಗಲೇ ಹಲವು ಶಾಲೆಗಳನ್ನು ಬಂದ್ ಮಾಡಲಾಗಿದೆ. ಗಡಿ ಭಾಗದಲ್ಲಿ ಹಲವೆಡೆ ಪ್ರವೇಶ ನಿಷೇಧ ಮಾಡಲಾಗಿದೆ. 2018ರ ಬಳಿಕ ಮತ್ತೆ ತಲೆ ಎತ್ತಿರುವ ನಿಫಾ ಮಾರಿ ಈಗಾಗಲೇ ಇಬ್ಬರನ್ನು ಬಲಿ ಪಡೆದಿದೆ. ಇವರೆಗೆ ಐದು ಪ್ರಕರಣಗಳು ಪತ್ತೆಯಾಗಿವೆ. ಈ ಹಿಂದೆ ಜಾಗತಿಕವಾಗಿ ಹಲವು ರಾಷ್ಟ್ರಗಳಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಗೆ ಕಾರಣವಾಗಿದ್ದ ನಿಫಾ ವೈರಸ್‌ ಎಲ್ಲಿ ಕಾಣಿಸಿತು? ಹೇಗೆ ಹರಡುತ್ತದೆ? ರೋಗ ಲಕ್ಷಣಗಳೇನು? ಎಷ್ಟರ ಮಟ್ಟಿಗೆ ಮಾರಣಾಂತಿಕ? ಇದಕ್ಕೆ ಚಿಕಿತ್ಸೆ ಏನು? ಈ ಕುರಿತ ಸಮಗ್ರ ಮಾಹಿತಿ ಇಲ್ಲಿದೆ. 

#ನಿಫಾ ವೈರಸ್ ಎಂದರೇನು?

ನಿಪಾ ವೈರಸ್ (ಎನ್ ಐವಿ) ಎಂಬುದು ಝೂನೋಟಿಕ್ ವೈರಸ್ ಆಗಿದ್ದು, ಇದು ಆರಂಭದಲ್ಲಿ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಇದು ಪ್ಯಾರಾಮಿಕ್ಸೊವಿರಿಡೆ ಕುಟುಂಬ ಮತ್ತು ಹೆನಿಪವೈರಸ್ ಕುಲದ ಸದಸ್ಯ. ಎನ್ ಐವಿಗಾಗಿ ಪ್ರಕೃತಿಯಲ್ಲಿರುವ ಪ್ರಾಣಿಗಳ ಜಲಾಶಯವು ಹಣ್ಣಿನ ಬಾವಲಿಗಳು (ಪ್ಟೆರೋಪಸ್ ಕುಲ), ಇವುಗಳನ್ನು ಹಾರುವ ನರಿಗಳು ಎಂದೂ ಕರೆಯುತ್ತಾರೆ. 

#ನಿಫಾ ವೈರಸ್ ಹೆಸರಿನ ಹಿನ್ನಲೆ:

ನಿಫಾ ಜ್ವರವು ಮೆದುಳು ಮತ್ತು ಹೃದಯವನ್ನು ಘಾಸಿಗೊಳಿಸಿ ಜೀವಕ್ಕೆ ಕುತ್ತು ತರುವ ಆಪಾಯಕಾರಿ ವೈರಸ್ ಸೋಂಕು. ಮಲೇಷ್ಯಾದ ನಿಫಾ ಎಂಬಲ್ಲಿ 1998 ರಲ್ಲಿ ಮೊದಲ ಬಾರಿಗೆ ಈ ವೈರಸ್ ಕಾಣಿಸಿಕೊಂಡಿದ್ದರಿಂದ ಅದಕ್ಕೆ ನಿಫಾ ಎಂಬ ಹೆಸರು ಬಂದಿದೆ.

#ಯಾವಾಗ ಎಲ್ಲಿ ಕಾಣಿಸಿತು..?

1999 ರಲ್ಲಿ ಮಲೇಷ್ಯಾದಲ್ಲಿ ಹಂದಿ ಸಾಕಣೆದಾರರಲ್ಲಿ ಏಕಾಏಕಿ ಕಾಣಿಸಿಕೊಂಡಾಗ ನಿಪಾ ವೈರಸ್ ಅನ್ನು ಮೊದಲು ಗುರುತಿಸಲಾಯಿತು. 1999 ರಿಂದ ಮಲೇಷ್ಯಾದಲ್ಲಿ ಯಾವುದೇ ಹೊಸ ಏಕಾಏಕಿ ವರದಿಯಾಗಿಲ್ಲ. ಇದನ್ನು 2001 ರಲ್ಲಿ ಬಾಂಗ್ಲಾದೇಶದಲ್ಲಿ ಗುರುತಿಸಲಾಯಿತು ಮತ್ತು ಅಂದಿನಿಂದ ಆ ದೇಶದಲ್ಲಿ ಸುಮಾರು ವಾರ್ಷಿಕ ಏಕಾಏಕಿ ಸಂಭವಿಸಿದೆ. ಈ ರೋಗವನ್ನು ಪೂರ್ವ ಭಾರತದಲ್ಲಿ ನಿಯತಕಾಲಿಕವಾಗಿ ಗುರುತಿಸಲಾಗಿದೆ. ಮತ್ತೊಮ್ಮೆ 2011ರಲ್ಲಿ ಬಾಂಗ್ಲಾದೇಶದಲ್ಲೂ ಈ ಸೋಂಕು ಹರಡಿತ್ತು. ಪ್ರಸ್ತುತ ಈ ವೈರಸ್ ಸೋಂಕು ಮಲೇಷ್ಯಾ, ಸಿಂಗಾಪುರ, ಭಾರತ ಮತ್ತು ಬಾಂಗ್ಲಾದೇಶಗಳಲ್ಲಿ ಹರಡಿದೆ.

ಈಗ ನೆರೆಯ ರಾಜ್ಯ ಕೇರಳದಲ್ಲಿ ಈ ಸೋಂಕು ಹರಡಿದ್ದು, ರಾಜ್ಯದಲ್ಲಿ ರೋಗಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

#ಹರಡುವುದು ಹೇಗೆ..?

ಬಾವಲಿಗಳಲ್ಲಿ ಪ್ಟೆರೋಪಸ್‌ ಎಂಬ ಜಾತಿಯ ಬಾವಲಿಗಳು ಇರುತ್ತವೆ, ಇವು ಹೆಚ್ಚಾಗಿ ಹಣ್ಣುಗಳನ್ನು ತಿನ್ನುತ್ತವೆ.ಅವು ನಿಫಾ ಹರಡುವಿಕೆಗೆ ನೈಸರ್ಗಿಕ ಆತಿಥೇಯಗಳಾಗಿವೆ. ಅವುಗಳ ಮಲ ಹಾಗೂ ಲಾಲಾರಸದಲ್ಲಿ ವೈರಸ್‌ ಕಂಡುಬರುತ್ತದೆ. ಇವು ಕೊಳೆತ ಹಣ್ಣುಗಳನ್ನು ಸೇವಿಸುವ ಮೂಲಕ ವೈರಸ್‌ ಹರಡುವಿಕೆಗೆ ಕಾರಣವಾಗುತ್ತವೆ.

ಮಧ್ಯಂತರ ಅತಿಥೇಯಗಳು: ಬಾವಲಿಗಳು ಸೇವಿಸಿದ ಕೊಳೆತ ಹಣ್ಣುಗಳನ್ನು ಸೇವಿಸುವ ಹಂದಿಗಳಿಂದ ಈ ವೈರಸ್‌ ಮಾನವರಿಗೂ ಹರಡಬಹುದು. ಸೋಂಕಿತ ಹಂದಿಗಳೊಂದಿಗಿನ ನಿಕಟ ಸಂಪರ್ಕವು ಈ ವೈರಸ್‌ ಹರಡಲು ಪ್ರಮುಖ ಕಾರಣಗಳಲ್ಲಿ ಒಂದಾಗುತ್ತದೆ.

ಮಾನವನಿಂದ ಮಾನವನಿಗೆ ಹರಡುವಿಕೆ: ಕೆಲವೊಮ್ಮೆ ನಿಫಾ ವೈರಸ್‌ ಸೋಂಕಿತ ವ್ಯಕ್ತಿಗಳೊಂದಿಗಿನ ನಿಕಟ ಸಂಪರ್ಕದಿಂದಲೂ ಹರಡಬಹುದು.

#ರೋಗದ ಚಿಹ್ನೆಗಳು/ಲಕ್ಷಣಗಳು:

ನಿಫಾ ವೈರಸ್‌ ಸೋಂಕಿತರಲ್ಲಿ ಆರಂಭದಲ್ಲಿ ಸೌಮ್ಯತರವಾದ ರೋಗಲಕ್ಷಣಗಳು ಕಾಣಿಸಬಹುದು.

*ತಲೆನೋವು/ತಲೆತಿರುಗುವಿಕೆ 

*ವಾಯ

*ಜ್ವರ,ಕೆಮ್ಮು,

* ಸರಕ

*ನಿದ್ರಾಸ್ಥಿತಿ 

*ತೊದಲುವಿಕೆ

*ಪ್ರಜ್ಞಾಹೀನತೆ ಇನ್ನೂ ಮುಂತಾದ ಲಕ್ಷಣಗಳು ಗೋಚರಿಸುತ್ತವೆ. ಹಾಗೆಯೇ ಈ ಸಮಸ್ಯೆ ತೀವ್ರವಾದರೆ ಎನ್ಸೆಫಾಲಿಟಿಸ್‌ (ಮೆದುಳಿನ ಉರಿಯೂತ), ಪ್ರಜ್ಞೆ ತಪ್ಪುವುದು, ತೀವ್ರ ಅನಾರೋಗ್ಯ, ಕೋಮಾದಂತಹ ಪರಿಸ್ಥಿತಿಯೂ ಎದುರಾಗಬಹುದು. 

#ನಿಫಾ ವೈರಸ್‌ಗೆ ಚಿಕಿತ್ಸೆ:

ನಿಫಾ ವೈರಸ್‌ ಸೋಂಕಿಗೆ ಯಾವುದೇ ನಿರ್ದಿಷ್ಟ ಆಂಟಿವೈರಲ್‌ ಚಿಕಿತ್ಸೆ ಇಲ್ಲ. ಉಸಿರಾಟದ ಕಾರ್ಯವನ್ನು ನಿರ್ವಹಿಸುವುದು, ಜ್ವರ ಹಾಗೂ ದೇಹದ ನೋವನ್ನು ನಿಯಂತ್ರಿಸುವುದು ಮತ್ತು ಇಂಟ್ರಾವೆನಸ್‌ ದ್ರವಗಳನ್ನು ದೇಹಕ್ಕೆ ನೀಡುವುದು, ಈ ರೀತಿಯ ಆರೈಕೆಗಳು ಅವಶ್ಯವಾಗುತ್ತವೆ. ಕೆಲವು ಪ್ರಕರಣಗಳಲ್ಲಿ ಪ್ರಾಯೋಗಿಕ ಚಿಕಿತ್ಸೆಗಳು ಮತ್ತು ಆಂಟಿವೈರಲ್‌ ಔಷಧಿಗಳನ್ನು ಪರಿಶೋಧಿಸಲಾಯಿತು. ಆದರೆ ಅವುಗಳ ಪರಿಣಾಮ ಈಗಲೂ ಅನಿಶ್ಚಿತವಾಗಿಯೇ ಉಳಿಸಿದೆ. ಕಾರಣ ಸೋಂಕಿಗೆ ಯಾವುದೇ ನಿರ್ದಿಷ್ಟವಾದ ಚಿಕಿತ್ಸೆ ಲಭ್ಯವಿಲ್ಲ.ಆದರೆ ರೋಗ ಲಕ್ಷಣಗಳಿಗೆ ಅನುಗುಣವಾದ ಚಿಕಿತ್ಸೆ ಹಾಗು ಸೂಕ್ತ ನಿರ್ವಹಣೆಯಿಂದ ಸೋಂಕನ್ನು ಗುಣಪಡಿಸಬಹುದು.

ನಿಪಾ ವೈರಸ್‌ನ ಗಂಭೀರ ಸ್ವರೂಪ ಮತ್ತು ಏಕಾಏಕಿ ಸಂಭವಿಸುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಂದ ಮಾರ್ಗಸೂಚಿಗಳು ಮತ್ತು ಶಿಫಾರಸುಗಳನ್ನು ಅನುಸರಿಸುವುದು ಮತ್ತು ಶಂಕಿತ ಪ್ರಕರಣಗಳು ಉದ್ಭವಿಸಿದರೆ ತಕ್ಷಣದ ವೈದ್ಯಕೀಯ ಆರೈಕೆಯನ್ನು ಪಡೆಯುವುದು ಬಹಳ ಮುಖ್ಯವಾಗಿದೆ.

ನಿಫಾದಿಂದ ದೂರವಿರಲು ಹೀಗೆ ಮಾಡಿ:

1) ಹಂದಿ, ಕುದುರೆ, ನಾಯಿ ಮತ್ತು ಬೆಕ್ಕುಗಳಂತಹ ಸೋಂಕಿತ ಜಾನುವಾರುಗಳು ಮಧ್ಯಂತರ ಅತಿಥೇಯಗಳಾಗಿರುವುದರಿಂದ ಇವುಗಳನ್ನು ಪ್ರತ್ಯೇಕವಾಗಿಡಬೇಕು.

2) ಶಂಕಿತ ವ್ಯಕ್ತಿಗಳನ್ನು ಪ್ರತ್ಯೇಕವಾಗಿಡಕ್ಕದ್ದು. ರೋಗಿಗಳು ಬಳಸುವ ವಸ್ತುಗಳನ್ನು ಪ್ರತ್ಯೇಕವಾಗಿ ಸಾಬೂನು ನೀರು ಬಳಸಿ ಶುಚಿಗೊಳಿಸಬೆಕು.

3) ಸೋಂಕಿತರಿಗೆ  ಹಸ್ತಲಾಘನ ಕೊಡುವುದನ್ನು ತಪ್ಪಿಸಬೇಕು ಹಾಗೂ ಸೋಂಕಿತ ಜನರ ಸಂಪರ್ಕಕ್ಕೆ ಬಂದ ನಂತರ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳಬೇಕು.

4) ಈ ರೋಗಿಗಳನ್ನು ಉಪಚರಿಸುವಾಗ ಮಾಸ್ಕ್ ಮತ್ತು ಗ್ಲೌಸ್ ತಪ್ಪದೇ ಬಳಸಬೇಕು.

5) ಎಲ್ಲ ರೀತಿಯ ಹಣ್ಣುಗಳನ್ನು ಚೆನ್ನಾಗಿ ತೊಳೆದು, ಸಿಪ್ಪೆ ಸುಲಿದು ಅಥವಾ ಬೇಯಿಸಿ ತಿನ್ನಬೇಕು.

6) ಫ್ಲೂ  ರೀತಿಯ ಲಕ್ಷಣಗಳು ಕಂಡುಬಂದರೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು.

 ವುಗಳನ್ನು ಮಾಡಬಾರದು

1)ಪ್ರಾಣಿಗಳು ಮತ್ತು ಪಕ್ಷಿಗಳು ಕಚ್ಚಿ ಬಿಟ್ಟಿರುವ ಹಣ್ಣುಗಳನ್ನು ತಿನ್ನಬಾರದು.

2)ಈ ಬಾವಲಿಗಳು ಅತಿ ಹೆಚ್ಚಾಗಿ ಕಂಡು ಬರುವ ಪ್ರದೇಶಗಳಿಂದ ಸಂಗ್ರಹಿಸಿದ ನೀರನ್ನು ಕುಡಿಯಬಾರದು.

3)ಸೋಂಕಿತ ಪ್ರದೇಶಗಳಿಗೆ ಭೇಟಿ ನೀಡುವಾಗ ಪ್ರತಿಬಂಧಕ ಉಪಾಯಗಳನ್ನು ಕೈಗೊಳ್ಳಬೇಕು.

4)ರೋಗಿಯ ಶರೀರ ಸಾರದೊಂದಿಗೆ (ಜೊಲ್ಲು, ಬೆವರು, ಮೂತ್ರ ಇತ್ಯಾದಿ) ಸಂಪರ್ಕ ತಪ್ಪಿಸಬೇಕು.

 ಒಟ್ಟಾರೆಯಾಗಿ ಕೋವಿಡ್‌ ವೈರಸ್‌ ನ ಛಾಯೆ ಮಾಯವಾಯ್ತು ಅನ್ನೋ ಹೊತ್ತಲ್ಲೇ ನಿಫಾ ವೈರಸ್​ ದೇಶದಲ್ಲಿ ಭೀತಿ ಹುಟ್ಟಿಸಿದೆ.. ಜನರು ವೈರಸ್​ ಬಗ್ಗೆ ಆಲಸ್ಯ ತೋರದೇ ಮುಂಜಾಗ್ರತಾ ಕ್ರಮಗಳನ್ನ ಅನುಸರಿಸಿ ಮಾರಕ ವೈರಸ್​ಗೆ ಬೇಲಿ ಹಾಕಬೇಕಿದೆ.  ಯಾವದೇ ಭಯ ಪಡುವ ಅಗತ್ಯವಿಲ್ಲ. ಮನೆ ಬಳಿ ಬಾವಲಿಗಳು ಇದ್ದರೆ ಎಚ್ಚರಿಕೆ ವಹಿಸುವುದು, ನಿಫಾ ವೈರಸ್ ರೋಗ ಲಕ್ಷಣಗಳನ್ನು ಕುರಿತು ಜನರಿಗೆ ಅರಿವು ಮೂಡಿಸಬೇಕು. .ನಿಫಾ ಸೋಂಕಿತರು ಬದುಕುವ ಸಾಧ್ಯತೆ ತುಂಬಾ ಕಡಿಮೆ. ಹೀಗಾಗಿ, ಈ ವೈರಸ್ ಸೋಂಕದಂತೆ ಎಚ್ಚರಿಕೆ ವಹಿಸುವುದೇ ಸದ್ಯ ಕೈಗೊಳ್ಳಬಹುದಾದ ಅತ್ಯುತ್ತಮ ಮಾರ್ಗವಾಗಿದೆ.

 

No comments:

Post a Comment