Tuesday, December 5, 2023

ಮಹಾ ಗುರು ಸರ್.ಜೆ.ಜೆ

                                                   

ಮಹಾ ಗುರು ಸರ್.ಜೆ.ಜೆ

ಲೇ :  ರಾಮಚಂದ್ರಭಟ್‌ ಬಿ.ಜಿ.

   

    ಅದೊಂದು ಹಳೆಯ ಪುಸ್ತಕದ ಅಂಗಡಿ. ಅದು ಕುಟುಂಬದ ಹಿರಿಯರಿಂದ ಬಳುವಳಿಯಾಗಿ ಬಂದಂತಹ ವಿಶಿಷ್ಟವಾದ ಅಪರೂಪದ ಹಳೆಯ ಮತ್ತು ಹೊಸ ಹೊತ್ತಿಗೆಗಳುಳ್ಳ ಅಪರೂಪದ ಪುಸ್ತಕದ ಅಂಗಡಿ. ಅದರ ಯಜಮಾನ ಅಂಗಡಿಗೆ ತನ್ನೊಂದಿಗೆ ತನ್ನ ಪುಟ್ಟ ಮಗನನ್ನು ಕರೆತರುತ್ತಿದ್ದ. ಈ ಪು‌ಟ್ಟ ಬಾಲಕನ ಓರಗೆಯ ಇತರ ಮಕ್ಕಳು ಆಟವಾಡುತ್ತಿದ್ದರೆ, ಈ ಬಾಲಕ ಪುಸ್ತಕಗಳ ಹುಚ್ಚು ಹಿಡಿಸಿಕೊಂಡಿದ್ದ. ಮೊದ ಮೊದಲು ಅಪರೂಪಕ್ಕೆ ಬರುತ್ತಿದ್ದ ಮಗ ಈಗ ನಿತ್ಯ ಗಿರಾಕಿ. ಅಲ್ಲಿದ್ದ ವಿವಿಧ ಪುಸ್ತಕಗಳನ್ನು ಓದುತ್ತಿದ್ದ. ಮುಂದೆ ಹೆಮ್ಮರವಾಗಿ ಬೆಳೆಯಲಿರುವ ಬೀಜದ ಸಿರಿ ಮೊಳಕೆಯಲ್ಲೇ ತನ್ನ ಸತ್ವವನ್ನು ಪ್ರದರ್ಶಿಸಲಾರಂಭಿಸಿತ್ತು. ಹುಡುಗನ ಜ್ಞಾನ ದಾಹವನ್ನು ಗಮನಿಸಿದ ಹಿರಿಯರು ಅವನನ್ನು ಒಬ್ಬ ಇಂಜಿನಿಯರ್ ಮಾಡಿಸಬೇಕೆಂಬ ಕನಸು ಕಂಡರು. ಕಲಿಕೆಯಲ್ಲಿ ಮುಂದಿದ್ದ ಹುಡುಗನ್ನು ಮ್ಯಾಂಚೆಸ್ಟರಿನ ವಿಕ್ಟೋರಿಯಾ ವಿಶ್ವವಿದ್ಯಾಲಯಕ್ಕೆ ಓದಲು ಕಳುಹಿಸಿದರು. ಮುಂದಿನದ್ದೆಲ್ಲ ಇತಿಹಾಸ. ಪುಸ್ತಕದ ಅಂಗಡಿಯ ಈ ಬಾಲಕ ಮುಂದೆ ಮಹಾ ಜ್ಞಾನವೃಕ್ಷವಾಗಿ ಬೆಳೆದು ತನ್ನ ನೆರಳಲ್ಲಿ ಅದೆಷ್ಟೋ ಅದ್ಭುತ ಪ್ರತಿಭೆಗಳನ್ನು ಬೆಳೆಸಿ ವಿಜ್ಞಾನ‌ ಕ್ಷೇತ್ರದ ಧ್ರುವ ನಕ್ಷತ್ರವಾಗಿ ಅಮರನಾದ.

ಅರ್ನೆಸ್ಟ್ ರುದರ್‌ಫೋರ್ಡ್, ನೀಲ್ಸ್‌ ಬೋರ್‌ , ಚಾರ್ಲ್ಸ್ ಗ್ಲೋವರ್ ಬಾರ್ಕ್ಲಾ, ಮ್ಯಾಕ್ಸ್ ಬಾರ್ನ್, ವಿಲಿಯಂ ಹೆನ್ರಿ ಬ್ರಾಗ್, ಓವನ್ ವಿಲನ್ಸ್ ರಿಚರ್ಡ್ಸನ್, ಚಾರ್ಲ್ಸ್ ಥಾಮ್ಸನ್ ರೀಸ್ ವಿಲ್ಸನ್, ಫ್ರಾನ್ಸಿಸ್ ವಿಲಿಯಂ ಆಸ್ಟನ್, ಜಾರ್ಜ್‌ ಪೇಗೆಟ್ ಥಾಮ್ಸನ್-‌ ಇವರ ಹೆಸರು ಕೇಳದ ವಿಜ್ಞಾನಾಸಕ್ತರಿದ್ದಾರೆಯೇ? ಇವರೆಲ್ಲ ವಿಜ್ಞಾನ ರಂಗದ ಸಾಟಿ ಇಲ್ಲದ ಅಸಾಮಾನ್ಯ ಮಹಾಮೇರು ಪ್ರತಿಭೆಗಳು. ಪ್ರತಿಯೊಬ್ಬರೂ ಸರ್ವೋನ್ನತ ನೋಬಲ್‌ ಪ್ರಶಸ್ತಿಗೇ ಹೊಸರಂಗು ತಂದವರು. ಈ ಎಲ್ಲರೂ ಒಂದೇ ಗುರುವಿನ ಗರಡಿಯಲ್ಲಿ ಪಳಗಿದವರು. ಇಂತಹವರನ್ನು ಸಾಣೆ ಹಿಡಿದ ಆ ಮಹಾಮಹಿಮನ ಪ್ರತಿಭೆ ಯಾವ ಮಟ್ಟದ್ದೋ? ಆತ ಯಾರಿರಬಹುದು? ಈ ಮಹಾಗುರು ಸ್ವತಃ ಅದೆಂತಹ ದೈತ್ಯ ಪ್ರತಿಭೆಯೋ? ಅವರ್ಯಾರು ಎಂಬ ಕುತೂಹಲವೇ? ಅವರೇ ವಿಜ್ಞಾನಿಗಳ ವಲಯದಲ್ಲಿ ಜೆ.ಜೆ ಎಂದೇ ಚಿರಪರಿಚಿತರಾದ, ಇಲೆಕ್ಟ್ರಾನ್‌ಗಳನ್ನು ಕಂಡುಹಿಡಿದ ಅನನ್ಯ ಅನರ್ಘ್ಯ ರತ್ನ ಜೆ.ಜೆ.ಥಾಮ್ಸನ್‌.


ಇಂತಹ ಜೋಸೆಫ್ ಜಾನ್ ಥಾಮ್ಸನ್ ಡಿಸೆಂಬರ್ 18, 1856 ರಂದು ಮ್ಯಾಂಚೆಸ್ಟರ್‌ನ ಉಪನಗರವಾದ ಚೀತಮ್ ಹಿಲ್‌ನಲ್ಲಿ ಜನಿಸಿದರು. ಜೆಜೆಯ ಬಾಲ್ಯ ಹೂವಿನ ಹಾಸಿಗೆಯಾಗಿರಲಿಲ್ಲ. ಮ್ಯಾಂಚೆಸ್ಟರ್‌ಗೆ ಓದಲು ಹೋದ ಬಾಲಕ ಜೆಜೆ ದುರದೃಷ್ಟವಶಾತ್ ತನ್ನ ತಂದೆಯನ್ನು ಕಳೆದುಕೊಂಡ. ಮಗನ ಕುರಿತು ಹತ್ತು ಹಲವು ಕನಸುಗಳನ್ನು ಕಟ್ಟಿಕೊಂಡಿದ್ದ ಜೋಸೆಫ್‌ ಜೇಮ್ಸ್ ಥಾಮ್ಸನ್‌ (Joseph James Thomson), ಮಗನ ಉತ್ಕರ್ಷವನ್ನು ಕಾಣುವ ಮೊದಲೇ ಗತಿಸಿ ಹೋದರು. ಜೆಜೆಗೆ ಆಗಿನ್ನೂ ಕೇವಲ 16ರ ಹರೆಯ. ತಂದೆಯ ಗೆಳೆಯರು ಮತ್ತು ಚಿಕ್ಕಪ್ಪ, ಹುಡುಗನ ವಿದ್ಯಾಭ್ಯಾಸಕ್ಕೆ ಸಹಾಯ ಹಸ್ತ ಚಾಚಿದರು. ಅದೇ ವರ್ಷ ಡಾಲ್ಟನ್ ಶಿಷ್ಯ ವೇತನ ದೊರಕಿದುದು ಜೆಜೆ ಥಾಮ್ಸನ್‌ಗೆ ಇನ್ನಷ್ಟು ಅನುಕೂಲತೆಯನ್ನು ಒದಗಿಸಿತು. ಅಚ್ಚರಿ ಎಂದರೆ, ಶತಮಾನದಿಂದ ಒಪ್ಪಿಕೊಂಡು ಬಂದ ‘ಡಾಲ್ಟನ್ಪರಮಾಣು ಸಿ‌ದ್ಧಾಂತವನ್ನು, ಡಾಲ್ಟನ್ ಶಿಷ್ಯ ವೇತನ ಪಡೆದುಕೊಂಡ, ಜೆಜೆ ತನ್ನ ಸಂಶೋಧನೆ ಮೂಲಕ ಅಲ್ಲಗಳೆದು ಪರಮಾಣುವಿನ ರಚನೆಗೆ ಹೊಸ ಭಾಷ್ಯವನ್ನು ಬರೆದರು.

ತನ್ನ 19ರ ಹರೆಯದಲ್ಲಿ ಇಂಜಿನಿಯರ್ ಪದವೀರರಾದ ಥಾಮ್ಸನ್, ಗಣಿತದಲ್ಲಿ ಹೆಚ್ಚಿನ ವ್ಯಾಸಂಗಕ್ಕಾಗಿ, ಕೇಂಬ್ರಿಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿನ ಪ್ರತಿಷ್ಠಿತ ಗಣಿತದ ಟ್ರೈಪೊಸ್ (Tripos) ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ಆಯ್ಕೆಯಾದರು. 1881 ರಲ್ಲಿ, ಅವರು ದ್ರವ್ಯರಾಶಿ ಮತ್ತು ಶಕ್ತಿಯ (Mass and Energy) ಸಂಬಂಧದ ಕುರಿತು ಬರೆದ ಒಂದು ವೈಜ್ಞಾನಿಕ ಪ್ರಬಂಧ  ಮುಂದೆ ಬರಲಿದ್ದ, ‘ಆಲ್ಬರ್ಟ್ ಐನ್ ಸ್ಟೈನ್ ರಾಶಿ-ಶಕ್ತಿ ಸಿದ್ಧಾಂತ’ಕ್ಕೆ ಪೂರ್ವಸಿದ್ಧತೆಯೇನೋ ಎಂಬಂತಿತ್ತು. ಟ್ರಿನಿಟಿ ಕಾಲೇಜಿನಲ್ಲಿ ವಿದ್ಯಾಭ್ಯಾಸದ ಅನಂತರ ಥಾಮ್ಸನ್, ಕ್ಯಾವೆಂಡಿಶ್ ಪ್ರಯೋಗಾಲಯದಲ್ಲಿ ಸಂಶೋಧಕರಾಗಿ ಸೇರಿಕೊಂಡರು. ವಿಜ್ಞಾನಿಯಾಗಿದ್ದ ಹೆನ್ರಿ ಕ್ಯಾವೆಂಡಿಶ್ (1731 1810) ತನ್ನ ಹೆಸರಿನಲ್ಲಿ ಸ್ಥಾಪಿಸಿದ್ದ ಸಂಶೋಧನಾ ಸಂಸ್ಥೆಯಲ್ಲಿ ಲಾರ್ಡ್ ರೇಲೆಯವರು ಮುಖ್ಯಸ್ಥರಾಗಿದ್ದರು. ಅವರಿಗೆ ಜೆಜೆಯ ಸಾಮರ್ಥ್ಯದಲ್ಲಿ ಅದೇನೋ ನಂಬಿಕೆ. 1884 ರಲ್ಲಿ ತನ್ನ ಉತ್ತರಾಧಿಕಾರಿಯಾಗಿ 28 ಹರೆಯದ ಅವಿವಾಹಿತ ಯುವ ಗಣಿತಜ್ಞ ಜೆಜೆಯವರನ್ನು ನೇಮಕ ಮಾಡಿ, ರೆಲೆಯವರು ರಾಜಿನಾಮೆ ಕೊಟ್ಟರು!.  ತಮ್ಮಿಂದ ಎಷ್ಟೋ ವರ್ಷ ಚಿಕ್ಕವನಾದ ಜೆ ಜೆ ಥಾಮ್ಸನ್ ಈ ಹುದ್ದೆಗೇರಿದ್ದನ್ನು ಅನೇಕ ಹಿರಿಯರು ಹೇಗೆ ತಾನೇ ಸುಮ್ಮನಿದ್ದಾರು? ವೃತ್ತಿ ಮತ್ಸರ ಸಹಜವೇ ತಾನೇ? ಇದು ಉಳಿದ ವಿಜ್ಞಾನಿಗಳಲ್ಲಿ ಅಸಹನೆ, ಗೊಂದಲ, ಗಲಾಟೆ ಹಾಗೂ ವಿರೋಧಗಳಿಗೆ ಕಾರಣವಾಯಿತು. ಆದರೇನು? ರೇಲಿಯವರ ಆಯ್ಕೆ ಒಳ್ಳೆಯ ವಿವೇಚನೆಯದ್ದೇ ಆಗಿತ್ತು ಎನ್ನುವುದನ್ನು ಜೆಜೆ ಸಾಬೀತುಪಡಿಸಿದರು. ಮುಂದೆ 34 ವರ್ಷಗಳ ಸುಧೀರ್ಘಕಾಲ ಥಾಮ್ಸನ್ ಸಂಸ್ಥೆಯನ್ನು ಜಗತ್ತಿನ ಅತಿ ಉತ್ಕೃಷ್ಟ ಸಂಶೋಧನಾಲಯವನ್ನಾಗಿ ಬೆಳೆಸಿದರು.

ಥಾಮ್ಸನ್ ಹೊಸದಾಗಿ ವಿಜ್ಞಾನ ಪ್ರಪಂಚಕ್ಕೆ ಕಾಲಿಡುತ್ತಿದ್ದ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ಆಗಾಗ ವೈಜ್ಞಾನಿಕ ಉಪನ್ಯಾಸಗಳನ್ನು ನಡೆಸುತ್ತಿದ್ದರು. ಅವರ ಉಪನ್ಯಾಸಗಳಿಗಾಗಿ ಅನೇಕರು ಕಾತುರತೆಯಿಂದ ಕಾಯುತ್ತಿದ್ದರು. ಈ ಉಪನ್ಯಾಸಗಳಿಗೆ ಚಾಚೂ ತಪ್ಪದೆ ಬರುತ್ತಿದ್ದ ಅನೇಕ ವಿದ್ಯಾರ್ಥಿಗಳಲ್ಲಿ, ಸರ್ ಜೋರ್ಜ್ ಎಡ್ವರ್ಡ್ ಪೇಗೆಟ್ ಅವರ ಮಗಳು ರೋಸ್ ಪೇಗೆಟ್ ಕೂಡಾ ಒಬ್ಬರು!!. ಜೋರ್ಜ್ ಪೇಗೆಟ್ ಕೇಂಬ್ರಿಜ್ ನಲ್ಲಿ ಪ್ರತಿಷ್ಟಿತ ಪ್ರೊಫೆಸರ್ ಹಾಗೂ ಫಿಸಿಶಿಯನ್. ಈ ವೈದ್ಯರ ಪುತ್ರಿಯ ಮನಗೆದ್ದಿದ್ದರು ಜೆಜೆ. ಆ ಹುಡುಗಿ ಪಾಠಕ್ಕಿಂತ ಜೆಜೆಯನ್ನು ನೋಡಲು ಬರುತ್ತಿದ್ದಳೇನೋ. ಹೀಗೆ ಬಂದ ಆಕೆ ಜೆಜೆಯ ಮನದನ್ನೆಯಾಗಿ ಕೊನೆಗೂ ಜೆಜೆಯವರನ್ನು 1890 ರಲ್ಲಿ ಮದುವೆಯಾದಳು. 1892 ರಲ್ಲಿ ಜನಿಸಿದ ಮಗ, ಜಿ.ಪಿ. ಥಾಮ್ಸನ್, ತನ್ನ ತಂದೆಯ ಹಾದಿಯಲ್ಲೇ ಸಾಗಿ ತಂದೆಯ ಸಂಶೋಧನೆಯನ್ನೇ‌ ಮುಂದುವರೆಸಿ ತಂದೆಯಂತೆ ನೋಬಲ್‌ ಪ್ರಶಸ್ತಿಗೂ ಭಾಜನರಾದರು.

ಅಪ್ಪ ಜೆ.ಜೆ.ಥಾಮ್ಸನ್ ಇಲೆಕ್ಟ್ರಾನುಗಳು ಕಣಗಳು ಅಲೆಯಲ್ಲ ಎಂದರೆ ಮಗ ನಾಲ್ಕು ದಶಕಗಳ ಅನಂತರ (1937), ಪ್ರತಿಯೊಂದು ಇಲೆಕ್ಟ್ರಾನ್ ಕೂಡಾ, ಕಣವಾದರೂ, ಒಂದು ಶುದ್ಧ ಅಲೆಯಂತೆ ವರ್ತಿಸುತ್ತದೆ ಮತ್ತು ಅಲೆಗಳಿಗೆ ಅನ್ವಯಿಸುವ ಎಲ್ಲ ಸೂತ್ರಗಳು, ಗುಣವಿಶೇಷಗಳು, ಇಲೆಕ್ಟ್ರಾನಿಗೂ ಅನ್ವವಾಗುತ್ತದೆ ಎಂದು ಕಂಡು ಹಿಡಿಯುತ್ತಾರೆ. ‘ಇಲೆಕ್ಟ್ರಾನ್ ಗಳ ವಿವರ್ತನೆ (Diffraction)’ ಎಂಬ ಸಿದ್ಧಾಂತಕ್ಕಾಗಿ ನೊಬೆಲ್ ಪಾರಿತೋಷಕಕ್ಕೆ ಭಾಜನರಾಗುತ್ತಾರೆ.

ಜಿ.ಪಿ. ಥಾಮ್ಸನ್

ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ಬ್ರಿಟನ್ನಿನ ವಿಲಿಯಂ ಕ್ರೂಕ್ಸ್ ಸಂಶೋಧಿಸಿದ ‘ಕ್ಯಾಥೋಡ್ ಕಿರಣ’ಗಳ ಸ್ವಭಾವದ ಬಗ್ಗೆ ವಿಜ್ಞಾನಿಗಳು ಅಧ್ಯಯನ ಮಾಡುತ್ತಿದ್ದರು. ಕ್ರೂಕ್ಸ್ ಅವರು ಕ್ಯಾಥೋಡ್ ಕಿರಣಗಳನ್ನು ನಿರ್ವಾತ ಗಾಜಿನ ನಳಿಕೆಗಳ ಒಳಗೆ ಉತ್ಪಾದಿಸಿದ್ದರು. ರೊಂಟೆಜನ್ ಕಂಡು ಹಿಡಿದ X-ಕಿರಣಗಳು ಇಂತಹ ನಳಿಕೆಯೊಳಗೇ ಹುಟ್ಟಿದ್ದವು. ಥಾಮ್ಸನ್ ಮತ್ತವರ ಶಿಷ್ಯರ ಪ್ರಕಾರ ಕ್ಯಾಥೋಡ್ ಕಿರಣಗಳು ಅಲೆಗಳೇ ಅಲ್ಲ. ಬದಲಾಗಿ, ಬರಿಗಣ್ಣಿಗೆ ಕಾಣದ, ಫೋಟೋಗ್ರಫಿ ಪೇಪರ್ ಗಳಲ್ಲಿ ಹಿಡಿಯಲಾಗದ ಅತಿ ಸೂಕ್ಷ್ಮ ಕಣಗಳ ಸಮೂಹ ಪ್ರವಾಹ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಆಗ ವಾದ-ಪ್ರತಿವಾದಗಳು ರಂಭವಾದವು. ಜೆ.ಜೆ.ಥಾಮ್ಸನ್ ಅವರು ಈ ಕಿರಣಗಳ ಮೇಲೆ ಇನ್ನಷ್ಟು ಪ್ರಯೋಗಗಳನ್ನು ಮಾಡಿದರು. ಕ್ಯಾಥೋಡ್ ಕಿರಣಗಳು ಕಾಂಕ್ಷೇತ್ರ ಮತ್ತು ವಿದ್ಯುತ್ ಕ್ಷೇತ್ರಗಳ ಪ್ರಭಾವಕ್ಕೆ ಒಳಗಾಗುತ್ತವೆ. ಅವು ನೇರ ಪಥದಲ್ಲಿ ಸಾಗುತ್ತವೆ. ಅವುಗಳ ಹಾದಿಯಲ್ಲಿ ಒಂದು ಪುಟ್ಟ ಗಿರಿಗಿಟ್ಲೆಯನ್ನಿಟ್ಟರೆ,  ಅದು ತಿರುಗಲಾರಂಭಿಸುತ್ತದೆ. ಪ್ರಯೋಗಗಳಿಂದ ಈ ಕಿರಣಗಳು ಕಣಗಳ ಪ್ರವಾಹ, ಬೆಳಕಿನಂತೆ ವಿದ್ಯುತ್ಕಾಂತೀಯ ಅಲೆಗಳಲ್ಲ ಎಂಬುದನ್ನು ಸಾಬೀತು ಮಾಡಿದರು. ಕಣಗಳು ಧನ ಫಲಕದತ್ತ ಬಾಗುವುದರಿಂದ ಇವು ಋಣ ವಿದ್ಯುದಾವೇಶವುಳ್ಳ ಕಣಗಳೆಂದು ಕಂಡುಕೊಂಡರು. ಇವುಗಳಿಗೆ ಅವರು ಕಾರ್ಪಸೆಲ್‌ಗಳೆಂದು ಕರೆದರು. ನಂತರ ಇಲೆಕ್ಟ್ರಾನ್‌ಗಳೆಂದು ಹೆಸರು ಪಡೆದರು. 
ಇವುಗಳ ತೂಕ ಅತ್ಯಂತ ಹಗುರವಾದ ಪರಮಾಣು ಹೈಡ್ರೋಜನ್‌ ಪರಮಾಣುವಿನ ತೂಕದ ಸುಮಾರು ೧/೧೮೪೦ ರಷ್ಟಿದೆ ಎಂದು ಕಂಡುಕೊಂಡರು.  ಅವುಗಳು ಹೆಚ್ಚು ಕಡಿಮೆ ಬೆಳಕಿನ ವೇಗದಲ್ಲೇ ಚಲಿಸುತ್ತವೆ ಎಂದು ಕಂಡುಕೊಳ್ಳಲಾಯಿತು. ಹೀಗೆ ಮೊತ್ತಮೊದಲ ಬಾರಿಗೆ ಒಂದು ಉಪಪರಮಾಣೀಯ (Subatomic) ಕಣದ ಆವಿಷ್ಕಾರವಾಯಿತು. ಇದರೊಂದಿಗೆ ‘ವಿಜ್ಞಾನ ಕ್ಷೇತ್ರದಲ್ಲಿ ಹೊಸ ಯುಗ’ವೊಂದು ಆರಂಭಗೊಂಡಿತು. ಈ ಸಂಶೋಧನೆಗಾಗಿ ಅವರಿಗೆ 1906 ರಲ್ಲಿ ಥಾಮ್ಸನ್ ನೊಬೆಲ್ ಪ್ರಶಸ್ತಿ ದೊರೆಯಿತು.


A beam of cathode rays in a vacuum tube is bent into a circle by a magnetic field generated by a Helmholtz coil. Cathode rays are normally invisible; in this Teltron tube demonstration, enough gas has been left in the tube for the gas atoms to luminesce when struck by the fast-moving electrons.

By Sfu - File:Cyclotron_motion_wider_view.jpg, CC BY-SA 3.0, https://commons.wikimedia.org/w/index.php?curid=20697866
    ಮೊದಲ ಜಾಗತಿಕ ಯುದ್ಧದ ಕಾರ್ಮೋಡ ಜಗತ್ತನ್ನು ಆವರಿಸಿತ್ತು . ಮಹಾಯುದ್ಧದ ನಂತರ, 1919ರಲ್ಲಿ ತಮ್ಮ ಸುಧೀರ್ಘ ಸೇವೆಯ ನಂತರ ಕ್ಯಾವೆಂಡಿಶ್ ಸಂಶೋಧನಾಲಯದ ಮುಖ್ಯಸ್ಥ ಹುದ್ದೆಯನ್ನು ತನ್ನ ನಲ್ಮೆಯ ಅತಿ ಸಮರ್ಥ ಶಿಷ್ಯ, ನೊಬೆಲ್ ಪ್ರಶಸ್ತಿ ವಿಜೇತ, ಲಾರ್ಡ್ ಅರ್ನೆಸ್ಟ್ ರುದರ್ಫೋರ್ಡ್ ಅವರಿಗೆ ಹಸ್ತಾಂತರಿಸಿ ಜೆಜೆ ನಿವೃತ್ತರಾದರು.

ಜೆಜೆ ಥಾಮ್ಸನ್‌ರ ಸಂಶೋಧನೆ ಆಧುನಿಕ ವಿಜ್ಞಾನದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಉಂಟು ಮಾಡಿತು. ಇಲೆಕ್ಟ್ರಾನಿಕ್ಸ್‌ ಸಾಧನಗಳ ಹಿಂದೆ ಇವೇ ಇಲೆಕ್ಟ್ರಾನ್‌ಗಳ ಪವಾಡವಿದೆ. ಇಲೆಕ್ಟ್ರಾನ್ ಆವಿಷ್ಕಾರದಿಂದ ವಿಜ್ಞಾನದ ಅನೇಕ ಹೊಸ ವಿಭಾಗಗಳಿಗೆ ರಹದಾರಿಯಾಯಿತು. ವಿಫುಲ ಸಂಶೋಧನಾ ಕ್ಷೇತ್ರಗಳು ಸೃಷ್ಟಿಯಾದವು.  ಐಸೊಟೋಪ್ ಗಳು (ಒಂದೇ ರಾಸಾಯನಿಕ ಗುಣವಿದ್ದು ತೂಕದಲ್ಲಿ ವಿಭಿನ್ನವಾಗಿರುವ ಪರಮಾಣುಗಳು) ಮತ್ತು ಮಾಸ್ ಸ್ಪೆಕ್ಟ್ರೋಮೀಟ್ರಿ ಕ್ಷೇತ್ರದಲ್ಲಿ ಅವರ ಸಂಶೋಧನಾ ಕೊಡುಗೆ ಅಪಾರ. ಕ್ಯಾಥೋಡ್ ಕಿರಣದ ನಳಿಕೆಗಳು, X-ಕಿರಣದ ನಳಿಕೆಗಳು, ಇಲೆಕ್ಟ್ರಾನ್-ಸೂಕ್ಷ್ಮ ದರ್ಶಕಗಳು, ಲೇಸರುಗಳು, TV ನಳಿಕೆಗಳು ಅಲ್ಲದೆ, ಅನೇಕ ಸಾಧನಗಳ ಹಿಂದೆ ಇಲೆಕ್ಟ್ರಾನ್ ಆವಿಷ್ಕಾರದ ಕೊಡುಗೆ ಇದೆ.

ಜೆ.ಜೆ. ಥಾಮ್ಸನ್ ಕೇವಲ ಅದ್ಭುತ ವಿಜ್ಞಾನಿಯಷ್ಟೇ ಆಗಿರಲಿಲ್ಲ. ಅವರು ಸದಾ ಎಲ್ಲರನ್ನೂ ಆಹ್ಲಾದಕರ ವಾತಾವರಣದಲ್ಲಿರುವಂತೆ ನೋಡಿಕೊಳ್ಳುತ್ತಿದ್ದರು. ಜೊತೆಗೆ ನಾಯಕನಿಗೆ ಇರಲೇಬೇಕಾದ ಉತ್ತಮ ಹಾಸ್ಯಪ್ರಜ್ಞೆಯನ್ನೂ ಹೊಂದಿದ್ದರು. ಅಷ್ಟೇ ತರ್ಲೆ ಗುಣವನ್ನೂ ಹೊಂದಿದ್ದರು!!.

  ಒಮ್ಮೆ ಜೆಜೆ ಥಾಮ್ಸನ್ ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿದ್ದಾಗ, ತಮಾಷೆಗೆಂದು ತಮ್ಮ ಸಹೋದ್ಯೋಗಿಯ ಮೇಜಿನ ಡ್ರಾಯರ್‌ನಲ್ಲಿ ಸಣ್ಣ, ದುರ್ನಾತ ಬೀರುವ ಸ್ಫೋಟಕವನ್ನು ಇರಿಸಿದರು. ಅದರ ಸ್ಫೋಟದಿಂದ ಪ್ರಯೋಗಾಲಯದ ತುಂಬಾ ದೀರ್ಘಕಾಲದವರೆಗೂ ದುರ್ವಾಸನೆ ತುಂಬಿತ್ತಂತೆ.

ಆಗ ಜೆಜೆ ಥಾಮ್ಸನ್ ಕ್ಯಾಥೋಡ್ ಕಿರಣಗಳ ಕುರಿತ ಪ್ರಯೋಗ ಮಾಡುತ್ತಿದ್ದರು. ತನ್ನ ಲ್ಯಾಬ್ ಕೋಟ್ಪಾಕೆಟ್‌ನಲ್ಲಿ ಕ್ಯಾಥೋಡ್‌ ರೇ ಟ್ಯೂಬನ್ನು ಇಟ್ಟು ಮರೆತು ಬಿಟ್ಟಿದ್ದರು. ಆಕಸ್ಮಿಕವಾಗಿ ಈ ಕ್ಯಾಥೋಡ್ ರೇ ಟ್ಯೂಬ್ ಕೋಟಿನ ಜೇಬಿನಿಂದ ಹೊರಬಿತ್ತು. ಎಲ್ಲರೂ ಗಾಬರಿಯಾದರೆ ಜೆಜೆಗೆ ಕೇಕೆ ಹಾಕಿ ಕುಣಿಯುವಷ್ಟು ಖುಷಿ!!!  ಟ್ಯೂಬಿನಿಂದ ವಿಚಿತ್ರವಾದ ಹಸಿರು ಬೆಳಕು ಹೊಮ್ಮುತ್ತಿರುವುದನ್ನು‌ ಎಲ್ಲರೂ ಗಮನಿಸಿದರು. ಈ ಆಕಸ್ಮಿಕ ಘಟನೆ ಮಾಸ್‌ ಸ್ಪೆಕ್ಟ್ರೋಮೆಟ್ರಿ ತಂತ್ರದಿಂದ ನಿಯಾನ್ ಧಾತುವಿನ ಐಸೋಟೋಪ್‌ಗಳ ಆವಿಷ್ಕಾರಕ್ಕೆ ಕಾರಣವಾಯಿತು. ಹೀಗೆ ಇಂತಹ ಅನೇಕ ಸರೆಂಡಿಪಿಟಿಯ ಘಟನೆಗಳನ್ನು ನಾವು ಇತಿಹಾಸದಲ್ಲಿ ನೋಡಬಹುದು. ಲ್ಯಾಬ್‌ ಕೋಟಿನಲ್ಲಿ ಅಡಗಿದ್ದ ಕ್ಯಾಥೋಡ್ ರೇ ಟ್ಯೂಬ್ ಹೊಸ ಸಾಧ್ಯತೆಯನ್ನು ತೋರಿಸಿಕೊಟ್ಟಿತು. ಪ್ರಯೋಗಾಲಯದಲ್ಲಿದ್ದ ಎಲ್ಲರಿಗೂ ಒಮ್ಮೆ ಗಾಬರಿ ಉಂಟುಮಾಡಿದ ಈ ಘಟನೆ ಸಂತಸದ ಹೊನಲನ್ನೇ ಹರಿಸಿತ್ತು.

 ಥಾಮ್ಸನ್ರ ಸಾಧನೆಯನ್ನು ಅನೇಕ ದೇಶಗಳು ಗುರುತಿಸಿ ಗೌರವಿಸಿವೆ. 1908 ರಲ್ಲಿ ನೈಟ್ ಪದವಿ ಪಡೆದರು. 1884 ರಲ್ಲಿ ರಾಯಲ್ ಸೊಸೈಟಿಯ ಫೆಲೋ ಆಗಿ ಆಯ್ಕೆಯಾದರು ಮತ್ತು 1916-1920 ರ ಅವಧಿಯಲ್ಲಿ ಅದರ ಅಧ್ಯಕ್ಷರಾಗಿದ್ದರು; ಅವರು 1894 ಮತ್ತು 1902 ರಲ್ಲಿ ರಾಯಲ್ ಮತ್ತು ಹ್ಯೂಸ್ ಪದಕ ಮತ್ತು 1914 ರಲ್ಲಿ ಕಾಪ್ಲೆ ಪದಕವನ್ನು ಪಡೆದರು.  1902 ರಲ್ಲಿ ಹಾಡ್ಗ್ಕಿನ್ಸ್ ಪದಕ, ಫ್ರಾಂಕ್ಲಿನ್ ಪದಕ ಮತ್ತು ಸ್ಕಾಟ್ ಪದಕ (ಫಿಲಡೆಲ್ಫಿಯಾ)- 1923; ಮಸ್ಕಾರ್ಟ್ ಪದಕ (ಪ್ಯಾರಿಸ್)- 1927; ಡಾಲ್ಟನ್ ಪದಕ (ಮ್ಯಾಂಚೆಸ್ಟರ್)- 1931; ಮತ್ತು 1938 ರಲ್ಲಿ ಫ್ಯಾರಡೆ ಪದಕ (ಇನ್‌ಸ್ಟಿಟ್ಯೂಟ್ ಆಫ್ ಸಿವಿಲ್ ಇಂಜಿನಿಯರ್ಸ್)ಗಳನ್ನು ಪಡೆದರು.  

ಅತ್ಯುತ್ತಮ ಬರಹಗಾರರಾಗಿದ್ದ ಜೆಜೆ ಅನೇಕ ವೈಜ್ಞಾನಿಕ ಕೃತಿಗಳನ್ನೂ ರಚಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ- ದಿ ಸ್ಟ್ರಕ್ಚರ್ ಆಫ್ ಲೈಟ್ (1907), ದಿ ಕಾರ್ಪಸ್ಕುಲರ್ ಥಿಯರಿ ಆಫ್ ಮ್ಯಾಟರ್ (1907), ರೇಸ್ ಆಫ್ ಪಾಸಿಟಿವ್ ಇಲೆಕ್ಟ್ರಿಸಿಟಿ (1913), ದಿ ಎಲೆಕ್ಟ್ರಾನ್ ಇನ್ ಕೆಮಿಸ್ಟ್ರಿ (1923) ಮತ್ತು ಅವರ ಆತ್ಮಚರಿತ್ರೆ, ರಿಕಲೆಕ್ಷನ್ಸ್ ಅಂಡ್ ರಿಫ್ಲೆಕ್ಷನ್ಸ್ (1936).

ಮ್ಮ 84 ರ(1940) ಹರೆಯದವರೆಗೂ ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸುತ್ತಾ ಯುವ ಪೀಳಿಗೆಗೆ ಮಾರ್ಗದರ್ಶನ ನೀಡುತ್ತಾ ಬಾರದ ಲೋಕಕ್ಕೆ ತೆರಳಿದ  ಸರ್ ಜೆ.ಜೆ.ಯವರು ಈ ಜಗತ್ತಿಗೆ ಬಿಟ್ಟು ಹೋದ ಅಮೂಲ್ಯ ಭಂಢಾರವೆಂದರೆ  ವಿಜ್ಞಾನದ ಅಮೂಲ್ಯ ಗ್ರಂಥಗಳು ಮತ್ತು ಜಗತ್ತಿನ ಅತ್ಯುತ್ತಮ ಸಾಧಕ ಶಿಷ್ಯವೃಂದ! 

1 comment: