Sunday, February 4, 2024

ಕುತೂಹಲದ ‘ಕ್ವಾಂಟಮ್ ಡಾಟ್ಸ್’

 ಕುತೂಹಲದ ‘ಕ್ವಾಂಟಮ್ ಡಾಟ್ಸ್’                       

ಲೇಖಕರು : ರಮೇಶ, ವಿ, ಬಳ್ಳಾ  . ಅಧ್ಯಾಪಕರು

  ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು (ಪ್ರೌಢ) ಗುಳೇದಗುಡ್ಡ  ಜಿ: ಬಾಗಲಕೋಟ

ರಸಾಯನ ವಿಜ್ಞಾನ ಕ್ಷೇತ್ರದಲ್ಲಿ ೨೦೨೩ರ ನೊಬೆಲ್‌ ಪ್ರಶಸ್ತಿ ದೊರೆತದ್ದು ಕ್ವಾಂಟಮ್‌ ಡಾಟ್ಸ್‌ ಗೆ ಸಂಬಂಧಿಸಿದ ಸಂಶೋಧನೆಗೆ. ಕ್ವಾಂಟಮ್‌ ಡಾಟ್ಸ್‌ ಎಂದರೇನು, ಅವುಗಳ ಅನ್ವಯವೇನು ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರವನ್ನು ನೀಡುವ ಪ್ರಯತ್ನವೇ ಶಿಕ್ಷಕ ರಮೇಶ್‌ ವಿ ಬಳ್ಳಾ ಅವರ ಈ ಲೇಖನ.

ಪರಮಾಣು ಎಂಬ ಪದ ಧಾತುವಿನ ಅತ್ಯಂತ ಚಿಕ್ಕದಾದ ಕಣವನ್ನು ಸೂಚಿಸುತ್ತದೆ ಎಂಬುದನ್ನು ನಾವು ನೀವೆಲ್ಲಾ ವಿದ್ಯಾರ್ಥಿಗಳಿಗೆ ತಿಳಿಸಿರುತ್ತೇವೆ. ಅದರೊಟ್ಟಿಗೆ  ಆ ಪರಿಕಲ್ಪನೆಯ ಇನ್ನು ಹಲವು ಉಪಪರಮಾಣೀಯ ಕಣಗಳು, ಅವುಗಳ ಇರುವಿಕೆಯ ಬಗ್ಗೆ ಹಲವು ಆಯಾಮಗಳನ್ನು ಒಳಗೊಂಡು ವಿಸ್ತೃತವಾದ ವಿವರ ನೀಡಿರುತ್ತೇವೆ. ಕಣಗಳು ಹೆಚ್ಚೆಚ್ಚು ನ್ಯಾನೊ ಮಟ್ಟಕ್ಕೆ ಬಂದಂತೆ ಅವುಗಳ ಸ್ವರೂಪ ಬದಲಾಗಿ ಕ್ವಾಂಟಮ್ ವಿದ್ಯಮಾನಗಳು ಸಂಭವಿಸುತ್ತವೆ. ಕ್ವಾಂಟಮ್ ಸಿದ್ಧಾಂತ ವಿವರಿಸುವಂತೆ ಭೌತ ಅಧ್ಯಯನದಲ್ಲಿ ವಸ್ತುವಿನ ಮೂಲಭೂತ ಮಟ್ಟದಲ್ಲಿ ಶಕ್ತಿ ಹಾಗೂ ವಸ್ತುವಿನ ಗುಣ ಸ್ವಭಾವದ ಬಗ್ಗೆ ಅರಿವು ಹೊಂದುವುದಾಗಿದೆ. ಇದು ಉಪಪರಮಾಣು ಕಣಗಳ ಹೆಚ್ಚಿನ ತಿಳುವಳಿಕೆಯ ಅಡಿಪಾಯದ ಮೂಲ ಸಿದ್ದಾಂತವಾಗಿ ಪರಿಚಿತವಾಗುತ್ತದೆ. ಇದು ಸುತ್ತಲಿನ ಜಗತ್ತನ್ನು ನೋಡುವ ವಿಶಿಷ್ಟ ಹಾಗೂ ವಿಶಾಲ ವ್ಯಾಪ್ತಿಯ ಭೌತಶಾಸ್ತ್ರ ಕ್ಷೇತ್ರವಾಗಿ   ಎಂದಿಗಿಂತಲೂ ಇಂದು ಹೆಚ್ಚು ಮುನ್ನಲೆಗೆ ಬಂದು ನಮ್ಮನ್ನೆಲ್ಲ ಕುತೂಹಲದ ಘಟ್ಟಕ್ಕೆ ತಂದು ನಿಲ್ಲಿಸಿದೆ. ಕಾರಣ ಇಷ್ಟೇ, ಇತ್ತೀಚಿನ ೨೦೨೩ರ ರಸಾಯನ ಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಭಾಜನರಾದ ವಿಜ್ಞಾನಿಗಳ ‘ಕ್ವಾಂಟಮ್ ಡಾಟ್’ಎಂಬ ಅನ್ವೇಷಣೆ.

ಕ್ವಾಂಟಮ್ ನ ಸುತ್ತ

ಮ್ಯಾಕ್ಸ್ ಪ್ಲಾಂಕ್ ಎಂಬ ಜರ್ಮನ್ ದೇಶದ ವಿಜ್ಞಾನಿ ಭೌತಶಾಸ್ತçದಲ್ಲಿ ಚಿರಪರಿಚಿತರು. ಇವರು ೧೯೦೦ರ ಆರಂಭದ ಹೊತ್ತಿಗೆ ಕ್ವಾಂಟಮ್ ಎಂಬ ಪ್ರಾಥಮಿಕ ಊಹೆಯನ್ನು ಪ್ರಸ್ತುತ ಪಡಿಸಿದರು. ಯಾವಾಗ ಹೊಳೆಯುವ ವಿಕಿರಣಗಳು ಹೆಚ್ಚಿನ ತಾಪಮಾನಕ್ಕೆ ಒಳಪಡುತ್ತವೆಯೋ ಆಗ ಅವು ತಮ್ಮ ದೇಹ ಛಾಯೆಯನ್ನು ಕೆಂಪು ಬಣ್ಣದಿಂದ ಕಿತ್ತಳೆಗೆ, ಕಿತ್ತಳೆಯಿಂದ ನೀಲಿಗ ಬದಲಾಯಿಸುತ್ತವೆ ಎಂದು ತಿಳಿಸಿಕೊಟ್ಟರು. ಈ ವಿದ್ಯಮಾನವನ್ನು ಅವರು ಕಪ್ಪು ದೇಹದ ವಿಕಿರಣ ಎಂತಲೇ ಕರೆದರು. ಪ್ಲಾಂಕ್‌ರವರು ಈ ರೀತಿಯ ಶಕ್ತಿಯ ವಿವಿಧ ಪ್ರತ್ಯೇಕ ಘಟಕಗಳನ್ನು ಸಾಬೀತುಪಡಿಸಲು ಸಂಖ್ಯಾತ್ಮಕವಾದ ವಿವರಗಳನ್ನು ಸೃಜಿಸಿದರು. ಅವುಗಳನ್ನು ಕ್ವಾಂಟಾ ಎಂದು ಕರೆಯಲಾಗುತ್ತದೆ.  ಈ ಊಹಾತ್ಮಕವಾದ ವಿವರಗಳನ್ನು ಗಟ್ಟಿಗೊಳಿಸಲು ಅವರ ಸಂಶೋಧನೆಗಳು ನಿರಂತರವಾಗಿ ಸಾಗಿದವು. ಕೊನೆಗೆ, ಇವು 1918 ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಗಿಟ್ಟಿಸಿದವು.

ಖ್ಯಾತ ಭೌತವಿಜ್ಞಾನಿ ಅಲ್ಬರ್ಟ ಐನ್‌ಸ್ಟಿನ್ ೧೯೦೫ರಲ್ಲಿ ಕ್ವಾಂಟಮ್ ತತ್ವವನ್ನು ದ್ಯುತಿವಿದ್ಯುತ್ಪರಿಣಾಮದ ವಿವರಣೆಗೆ ಬಳಕೆ ಮಾಡಿದರು. ಅವರ ಪ್ರಕಾರ ಈ ದ್ಯುತಿವಿದ್ಯುತ್ ಪರಿಣಾಮ ಒಂದು ವಿದ್ಯಮಾನವಾಗಿದೆ. ಯಾವಾಗ ಬೆಳಕು ಲೋಹದ ಮೇಲೆ ಬೀಳುತ್ತದೆಯೋ ಆವಾಗ ಆ ಮೇಲ್ಮೈಯಿಂದ  ಎಲೆಕ್ಟ್ರಾನುಗಳು  ಹೊರಸೂಸಲ್ಪಡುತ್ತವೆ. ಈ ಎಲೆಕ್ಟ್ರಾನ್ ಗಳೇ  ಫೋಟೋಎಲೆಕ್ಟ್ರಾನ್ಗಳು. ಹೀಗೆ ಹೊರಹಾಕಲ್ಪಟ್ಟ ಫೋಟೋ ಎಲೆಕ್ಟ್ರಾನ್ಗಳ  ಚಲನಶಕ್ತಿಯು ಲೋಹದ ಮೇಲ್ಮೈ ಮೇಲೆ  ಬಿದ್ದ ಬೆಳಕಿನ ಆವೃತ್ತಿಯನ್ನು ಅವಲಂಬಿಸಿರುತ್ತದೆ ಎಂಬುದನ್ನು ತಿಳಿಸಿದರು. ಈ ಮೂಲಕ ಸಿದ್ಧಾಂತ ಮತ್ತಷ್ಟು ಬೆಳಕಿಗೆ ಬಂದಿತು.

ಉಪಪರಮಾಣು ಮಟ್ಟದಲ್ಲಿ ಶಕ್ತಿಯ ನಡವಳಿಕೆಯು ದ್ವಂದ್ವದಿಂದ ಕೂಡಿದ್ದು, ಅದು ಅಲೆ ಅಥವಾ ಕಣಗಳ ರೂಪದಲ್ಲಿರಬಹುದೆಂದು ೧೯೨೪ರಲ್ಲಿ ಪ್ರೆಂಚ್ ವಿಜ್ಞಾನಿ ಲೂಯಿಸ್ ಡಿ ಬ್ರೋಗ್ಲಿ ತರಂಗ-ಕಣ  ದ್ವಂದ್ವ  ಸಿದ್ಧಾಂತದ ತತ್ವವನ್ನು ರೂಪಿಸಿ ವಸ್ತು ಶಕ್ತಿಯ ನಡವಳಿಕೆಯ ಮತ್ತೊಂದು ಆಯಾಮವನ್ನು ಪರಿಚಯಿಸಿದರು. ೧೯೨೬ರಲ್ಲಿ ಎರ್ವಿನ್ ಶ್ರೋಡಿಂಗರ್ ಅವರ ಕಣಗಳ ತರಂಗ ಕಾರ್ಯಗಳ ಭೇದಾತ್ಮಕ ಸಮೀಕರಣ  ಹಾಗೂ ೧೯೨೭ರಲ್ಲಿನ ವರ್ನರ್ ಹೈಜನ್ ಬರ್ಗರ ಅನಿಶ್ಚಿತತೆಯ ತತ್ವದವರೆಗೂ ಮುಂದುವರೆದು ಕ್ವಾಂಟಮ್ ಸಿದ್ಧಾಂತ ತನ್ನ ಪ್ರಭಾವವನ್ನು ವಿಸ್ತರಿಸಿ ಪ್ರಸ್ತುತ ಕ್ವಾಂಟಮ್ ಡಾಟ್‌ಗಳವರೆಗೆ ತಂದು ನಿಲ್ಲಿಸಿದೆ.

ಏನಿದು ಕ್ವಾಂಟಮ್ ಡಾಟ್ಸ್?

ವಸ್ತುವಿನ ಕಣಗಳನ್ನು ಅತ್ಯಂತ ಚಿಕ್ಕದಾಗಿ ತಯಾರಿಸಬಹುದು. ಅರೆವಾಹಕ ವಸ್ತುಗಳಿಂದ ತಯಾರಿಸಿದ ಸಣ್ಣ ಸಣ್ಣ ಬಿಂದು ಗಾತ್ರದ ಕ್ವಾಂಟಮ್ ಚುಕ್ಕೆಗಳೇ ಕ್ವಾಂಟಮ್ ಡಾಟ್ಸ್. ಅದು ಸಾಧ್ಯವಾಗುವುದು ಅವುಗಳ ವಸ್ತು ಸ್ವಭಾವದ ಗುಣಲಕ್ಷಣಗಳಿಂದ. ಇದು ಕ್ವಾಂಟಮ್ ವಿದ್ಯಮಾನಗಳಿಂದ ನಿರ್ಧರಿಸಲ್ಪಡುತ್ತದೆ. ಈ ಬಿಂದುಗಳು ಎಷ್ಟು ಚಿಕ್ಕವೆಂದರೆ ಮನುಷ್ಯನ ಕೂದಲಿನ ೧/೧೦,೦೦೦ ಗಾತ್ರದಷ್ಟಿವೆ. ಇವು ಚುಕ್ಕೆಯೊಳಗಿನ ಚುಕ್ಕೆಗಳು ಎನ್ನಬಹುದು. ಇದು ನ್ಯಾನೊಸ್ಕೇಲ್ ರಚನೆಯಾಗಿದ್ದು, ಎರಡು ಅಥವಾ ಹೆಚ್ಚು ಚುಕ್ಕೆಗಳನ್ನು ಜೋಡಿಸುವ ಮೂಲಕ ಕೃತಕ ಅಣು ಸೃಷ್ಟಿಸಬಹುದು. ಈ ಅತ್ಯಂತ ಚಿಕ್ಕದಾದ ಕ್ವಾಂಟಮ್ ನಿರ್ಧಾರಿತ ನ್ಯಾನೋ ಕಣಗಳೇ ಕ್ವಾಂಟಮ್ ಡಾಟ್ಸ್ ಗಳು. ಪರಮಾಣುವಿನ ಸ್ಪೆಕ್ಟಾç ಪೆಟ್ಟಿಗೆಯನ್ನು ಹೋಲುವ ಈ ಡಾಟ್‌ಗಳ ಹೀರಿಕೊಳ್ಳುವಿಕೆ ಹಾಗೂ ಹೊರಸೂಸುವಿಕೆಯ ವೈಶಿಷ್ಟ್ಯಗಳು ಶಕ್ತಿ ಮಟ್ಟಗಳಲ್ಲಿನ ಪರಿವರ್ತನೆಗಳಿಗನುಗುಣವಾಗಿ ಯಾಂತ್ರಿಕ ಲಕ್ಷಣ ತೋರುವ ಕಾರಣ ಇವನ್ನು ಕೃತಕ ಪರಮಾಣುಗಳು ಎಂತಲೂ ಕರೆಯಲಾಗುತ್ತದೆ. ಇವುಗಳು ಅಸಾಮಾನ್ಯವಾದ ಗುಣಲಕ್ಷಣ ಹೊಂದಿದ್ದು, ಗಾತ್ರ ಆಧಾರಿತ ಅನೇಕ ಆಕರ್ಷಕ ಸ್ವಭಾವದ ವಿಭಿನ್ನ ಬಣ್ಣಗಳನ್ನು ಹೊಂದಿವೆ. ಗಾತ್ರ ಆಧರಿತ ಕ್ವಾಂಟಮ್ ಪರಿಣಾಮಗಳು ನ್ಯಾನೋ ಕಣಗಳಲ್ಲಿ ಸಾಧಿಸುತ್ತವೆ. ಆದರೆ ನ್ಯಾನೊ ಆಯಾಮಗಳನ್ನು ಸೃಷ್ಠಿಸುವದು ಒಂದು ಕಾಲದಲ್ಲಿ ಅಸಾಧ್ಯವಾಗಿತ್ತು. ಈಗ ಈ ವಿಚಾರ ಮೊಳಕೆಯೊಡೆದಿದ್ದು ಗಾಜು ತಯಾರಿಕೆಯ ಸಂದರ್ಭದಲ್ಲಿ ಎನ್ನಬಹುದು. ದೃಕ್ ವಿಜ್ಞಾನದಲ್ಲಿ ಗುಣಲಕ್ಷಣಗಳ ಬದಲಾವಣೆಗೆ ಗಾಜಿನ ತಯಾರಕರು ಚಿನ್ನ, ಕ್ಯಾಡ್ಮಿಯಮ್, ಸೆಲೆನಿಯಮ್, ಗಂಧಕದಂತಹ ಡೊಪೆಂಟ್‌ಗಳನ್ನು ಬಳಸುವ ಬಗ್ಗೆ ಅರಿತಿದ್ದರು. ೧೯೭೯ರಲ್ಲಿ ಎಕಿಮೊವ್‌ರವರು ಡೊಪ್ ಅಧ್ಯಯನದ ಮೂಲಕ ಬಣ್ಣದ ಕನ್ನಡಕಗಳ ಕೊಲಾಯ್ಡ್ ಕಣಗಳ ಗುಣಲಕ್ಷಣಗಳ ರಾಸಾಯಮನಿಕ ಸಂಯೋಜನೆ, ಕಾರ್ಯವಿಧಾನ ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದರು. ನಂತರ ಗಾಜಿನ ಮಾತೃಕೆಯಲ್ಲಿ ಸ್ಪಟಿಕೀಯ ಹಂತದ ರಚನೆಯ ಶೋಧನೆಗೆ ಕಾರಣರಾದರು.

 ೧೯೮೦ರ ದಶಕದಲ್ಲಿ ಗಾಜಿನಲ್ಲಿ ಗಾತ್ರ ಆಧಾರಿತ ಕ್ವಾಂಟಮ್ ಪರಿಣಾಮಗಳನ್ನು ರಚಿಸುವಲ್ಲಿ  ಯಶಸ್ವಿಯಾದವರು ಅಲೆಕ್ಸಿ ಎಕಿಮೊವ್‌ರವರು. ಕ್ವಾಂಟಮ್ ಪರಿಣಾಮಗಳ ಮೂಲಕ ಕಣದ ಗಾತ್ರವು ಗಾಜಿನ ಬಣ್ಣವನ್ನು ಪ್ರಭಾವಿಸುತ್ತದೆ ಎಂಬುದನ್ನು ಅವರು ಮನಗಂಡರು. ಇದಾದ ನಂತರ, ಲೂಯಿಸ್ ಬ್ರೂಸ್‌ರವರು ದ್ರವದಲ್ಲಿ ಸ್ವತಂತ್ರವಾಗಿ ತೇಲುತ್ತಿರುವ ಕಣಗಳಲ್ಲಿ ಗಾತ್ರ ಅವಲಂಬಿತ ಕ್ವಾಂಟಮ್ ಪರಿಣಾಮಗಳನ್ನು  ಸಾಬೀತುಪಡಿಸಿದ ವಿಶ್ವದ ಮೊದಲಿಗರಾದರು. ಮೌಂಗಿ ಬಾವೆಂಡಿ ೧೯೯೩ರಲ್ಲಿ ಕ್ವಾಂಟಮ್ ಡಾಟ್‌ಗಳ ರಾಸಾಯನಿಕ ಉತ್ಪಾದನೆಯಲ್ಲಿ ಕ್ರಾಂತಿಯನ್ನೇ ಮಾಡಿದರು.

ಕ್ವಾಂಟಮ್ ಡಾಟ್ಸ್ ಮತ್ತು ನ್ಯಾನೋ ತಂತ್ರಜ್ಞಾನ

 ಈ ಕ್ವಾಂಟಮ್ ಚುಕ್ಕೆಗಳು ನ್ಯಾನೋ ತಂತ್ರಜ್ಞಾನದ ಒಂದು ಬಹುಮುಖ್ಯ ಹಾಗೂ ಆಸಕ್ತಿದಾಯಕ ವಿಷಯ ವಸ್ತುವಾಗಿ ಬಿಂಬಿತವಾಗುತ್ತಿದೆ. ಕಾರಣ, ಇವುಗಳ ವಿಶಿಷ್ಟ ಆಯಾಮ ರಚನೆ ಎನ್ನಬಹುದು. ಸಾಮಾನ್ಯವಾಗಿ ಈ ಪಿರಿಮಿಡ್ ಆಕಾರದ ಚುಕ್ಕೆಗಳು ೫-೨೦pm ಕ್ರಮದಲ್ಲಿದ್ದು ಅವುಗಳ ಮೇಲ್ಮೈ ಸಾಂದ್ರತೆ ಪ್ರತಿ ಚದರ ಸೆಂ.ಮೀಟರ್‌ಗೆ ೧೦೯  ಚುಕ್ಕೆಗಳ ಕ್ರಮದಲ್ಲಿ ಇರಬಹುದು ಎನ್ನಲಾಗುತ್ತದೆ. ಇಂತಹ ಡಾಟ್ಸ್ಗಳು ನ್ಯಾನೋ ಟೆಕ್ನಾಲಾಜಿಯ ಒಂದು ಭಾಗವಾಗಿ ಅಭಿವೃದ್ಧಿಯ ಮುನ್ನುಡಿಗೆ ಕಾರಣವಾಗಿವೆ.

ನ್ಯಾನೊ ವಿಜ್ಞಾನ ಹಾಗೂ ನ್ಯಾನೊ ತಂತ್ರಜ್ಞಾನದಲ್ಲಿ ಕ್ವಾಂಟಮ್ ಡಾಟ್ಸ್ಗಳನ್ನು ಗಾತ್ರದಿಂದ ಹೊಂದಿಸಬಹುದಾದ ವಸ್ತುಗಳ ಗುಣಲಕ್ಷಣಗಳನ್ನು ಕಂಡುಕೊಳ್ಳಬಹುದು. ಮುಖ್ಯವಾಗಿ ಆಕ್ಸಿಡೀಕರಣ ಅಥವಾ ಅಪಕರ್ಷಣ ವಿಭವಶಕ್ತಿ, ಕರಗುವ ತಾಪಮಾನ ಅಲ್ಲದೇ ಘನ-ಘನ ಅಂತರ ಪರಿವರ್ತನೆ ಮುಂತಾದವುಗಳು. ನಿಖರ ಹಾಗೂ ತೌಲನಿಕ ರಾಸಾಯನಿಕ ಕ್ರಮಗಳಿಂದ ವಸ್ತುಗಳ ಸಂಶ್ಲೇಷಣೆಯ ಸಾಮರ್ಥ್ಯ ಇಲ್ಲಿ ಎದ್ದು ಕಾಣುತ್ತದೆ.

ಕ್ವಾಂಟಮ್ ಡಾಟ್ಸ್ ಅನ್ವಯಗಳು

ಬಹು ಪ್ರಾಚೀನವಾದ ಅನ್ವಯ ಬಣ್ಣ ಬಣ್ಣದ ಕನ್ನಡಕಗಳ ತಯಾರಿಕೆಯಲ್ಲಿ ಕಾಣಸಿಗುತ್ತದೆ. ಅಂದದ ಬಣ್ಣದ ರಚನಾ ವಿನ್ಯಾಸಗಳು ಕಿಟಕಿ, ಬಾಗಿಲು ಗಾಜುಗಳನ್ನು ಸುಂದರವಾಗಿಸಿವೆ. ಬಿಳಿ ಬೆಳಕು ಹೊರಸೂಸುವ ಎಲ್‌ಇಡಿ ಡಯೊಡ್‌ಗಳಲ್ಲಿ ಅಷ್ಟೇ ಅಲ್ಲದೇ ಬಣ್ಣ ಬಣ್ಣದ ಬೆಳಕು ಚೆಲ್ಲುವ ಎಲ್‌ಇಡಿಗಳಲ್ಲಿ ಇದರ ಅನ್ವಯ ಕಾಣಬಹುದು. ಕ್ವಾಂಟಮ್ ಕ್ರಿಸ್ಟೊಗ್ರಫಿಯಲ್ಲಿ ಏಕ ಫೊಟಾನ್ ಹೊರಸೂಸುವಿಕೆಗಾಗಿ ಬಳಸಲಾಗುತ್ತದೆ. ಮತ್ತೊಂದು ಕಡೆ ಇವನ್ನು ಸೌರಕೋಶದ ಸುಧಾರಣೆಗಾಗಿ ಭವಿಷ್ಯದ ಸಮರ್ಥ ದ್ಯುತಿವಿದ್ಯುಜ್ಜನಕ ಕೋಶಗಳಲ್ಲಿ ಕಾರ್ಯನಿರ್ವಹಣೆಗೆ ಬಳಸುವವರಿದ್ದೇವೆ. ಕಡಿಮೆ ಉಷ್ಣ/ತಾಪ ಸಂವೇದನೆಯ ಲೇಸರ್ ತಂತ್ರಜ್ಞಾನದ ಡಯೊಡ್‌ಗಳ ತಯಾರಿಕೆ ಇದರಿಂದ ಸಾಧ್ಯವಾಗಿರುವುದು ನ್ಯಾನೊ ತಂತ್ರಜ್ಞಾನವನ್ನ ಅಭಿವೃದ್ಧಿಯತ್ತ ಕೊಂಡೊಯ್ದಿದೆ. ಕ್ವಾಂಟಮ್ ಕಂಪ್ಯೂಟರ್ , ಜೈವಿಕ ವೈದ್ಯಕೀಯ ಚಿತ್ರಣ, ಕ್ವಾಂಟಮ್ ಡಿಸ್ಪ್ಲೆ ಪ್ರದರ್ಶನಗಳಲ್ಲಿ ಇವುಗಳ ಅನ್ವಯವಿದೆ.

ಕ್ವಾಂಟಮ್ ಡಾಟ್ಸ್ ಹಾಗೂ ನೊಬೆಲ್ 

೨೦೨೩ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಕೊಲಾಯ್ಡಲ್ ನ್ಯಾನೊ ಸ್ಪಟಿಕಗಳಲ್ಲಿನ ಕ್ವಾಂಟಮ್ ಗಾತ್ರದ  ಪರಿಣಾಮಗಳ ಆವಿಸ್ಕಾರಕ್ಕೆ ಸಂದಿರುವುದು ಸರ್ವವಿಧಿತ. ಬೆಳಕಿನ ಮತ್ತು ದ್ಯುತಿರಾಸಾಯನಿಕ ಲಕ್ಷಣಗಳನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲು ಹಾಗೂ ಗಾತ್ರ ಸಂಬಂಧಿತ ಕ್ವಾಂಟಮ್ ಡಾಟ್‌ಗಳ ವಿಶ್ಲೇಷಣೆಗಳಿಗೆ ಮನ್ನಣೆ ನೀಡಿ ಮೂವರು ವಿಜ್ಞಾನಿಗಳಿಗೆ ಈ ಪ್ರಶಸ್ತಿ ಹಂಚಿಕೆಯಾಗಿದೆ. ಪ್ರಸ್ತುತ ಮ್ಯಾಸಚ್ಯೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರೊಫೆಸರ್ ಆಗಿರುವ ಮೌಂಗಿ ಜಿ. ಬಾವೆಂಡಿ(ಮಾರ್ಚ್ ೧೫. ೧೯೬೧) ಅವರಿಗೆ ಮತ್ತು ಕೊಲಂಬಿಯಾ ವಿಶ್ವ ವಿದ್ಯಾಲಯದಲ್ಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿರುವ ಲೂಯಿ ಬ್ರೂಸ್ (ಆಗಷ್ಟ್ ೧೦. ೧೯೪೩) ಅಲ್ಲದೇ ನ್ಯೂಯಾರ್ಕನ ಕಂಪನಿಯೊಂದರಲ್ಲಿ ನ್ಯಾನೊ ಕ್ರಿಸ್ಟಾಲಜಿಯಲ್ಲಿ ವಿಜ್ಞಾನಿಯಾಗಿರುವ ಅಲೆಕ್ಸಿ ಐ. ಎಕಿಮೊವ್ (ಫೆಬ್ರುವರಿ ೨೮. ೧೯೪೫) ರವರಿಗೆ ಈ ಬಾರಿಯ ರಸಾಯನ ಶಾಸ್ತ್ರದ ನೊಬೆಲ್ ಮುಡಿಗೇರಿರುವುದು ಸಂತಸದ ಸಂಗತಿ.

ಒಟ್ಟಾರೆ ಕ್ವಾಂಟಮ್ ಡಾಟ್ಸ್ ವಿಚಾರಗಳು ಹಾಗೂ ಪ್ರಸ್ತುತ ಸಂಶೋಧನಾ ವಲಯಕ್ಕೆ ದೊರೆತ ನೊಬೆಲ್ ಪ್ರಶಸ್ತಿ ಈ ವಿಜ್ಞಾನಿಗಳನ್ನು ಸ್ಮರಣೀಯವಾಗಿಸಿದೆ.


ಆಕರಗಳು :

·       ಕ್ವಾಂಟಮ್ ಡಾಟ್ಸ್ – ತಪಸ್ ಚಕ್ರವರ್ತಿ

·       ಜಾಲತಾಣ

·       ಸುದ್ದಿ ಪತ್ರಿಕೆಗಳು

        


 

No comments:

Post a Comment