Tuesday, June 4, 2024

ಸಸ್ಯಗಳಲ್ಲಿನ ಸಂವಹನ- ಕೋಶ ಸಂಕೇತದ ಸಂಕೀರ್ಣ ಜಾಲ.

ಸಸ್ಯಗಳಲ್ಲಿನ ಸಂವಹನ- ಕೋಶ ಸಂಕೇತದ ಸಂಕೀರ್ಣ ಜಾಲ.

   ಲೇಖಕರು :                       

 ಬಿ ಎನ್ ರೂಪ,   ಸಹ  ಶಿಕ್ಷಕರು,

ಕೆಪಿಎಸ್ ಜೀವನ್ ಭೀಮ ನಗರ ,

 ಬೆಂಗಳೂರು ದಕ್ಷಿಣ ವಲಯ -4.     


ಹಸಿರು ಸಸ್ಯಗಳು ಈ ಭೂಮಿಯ ರಕ್ಷಕ,

ಸಕಲ ಜೀವರಾಶಿಯ ಜೀವದಾನಿಯ ಪ್ರವರ್ತಕ,

ಈ ಭೂಮಿಯಾಧಾರಕ ,

ಹಸಿರು ಸಸ್ಯಗಳು ಸಕಲ ಜೀವರಾಶಿಗಳಲ್ಲಿ ಉನ್ನತ.

ಹಸಿರು ಸಸ್ಯಗಳು ಈ ಪದವು ಎಷ್ಟು ರೋಮಾಂಚನವನ್ನು ಉಂಟುಮಾಡುತ್ತದೆ ಅಲ್ಲವೇ ? ಹಸಿರೇ ಉಸಿರು ಎಂಬ ಹೇಳಿಕೆ ಎಷ್ಟು ಸತ್ಯ ಅಲ್ಲವೇ , ಈ ಪ್ರಕೃತಿಯ ಮಾತೆಯ ಸೃಷ್ಟಿಗಳಲ್ಲಿ ಅದ್ಭುತ ಸೃಷ್ಟಿಯೇ ಹಸಿರು ಸಸ್ಯಗಳು . ಸಕಲ ಜೀವರಾಶಿಗಳಿಗೂ ಜೀವದಾನ ಮಾಡುವ ವೈಶಿಷ್ಟ ಗುಂಪಿನಲ್ಲಿ ನಿಲ್ಲುವ ಜೀವಿಗಳಿವು.

ಭೂಮಂಡಲದ ಜೀವ ವಿಕಾಸದ ಹಾದಿಯನ್ನು ತುಲನಾತ್ಮಕ ಅಧ್ಯಯನ ಮಾಡಿದಾಗ ಸಹಸ್ರಾರು ಜೀವಿಗಳು ಆಳಿ  ಅಳಿದು ಹೋದದ್ದು ಈಗ ಇತಿಹಾಸ. ಈ ಸೃಷ್ಟಿಯ ಸೊಬಗೇ ನಮ್ಮ ಹಸಿರು ಸಂಕಲನ. ಅನಾದಿಕಾಲದಿಂದಲೂ ಜೀವಿಗಳಲ್ಲೂ ಹಲವಾರು ವಿಧದ ಸಂವಹನ ನಡೆಸಿವೆ. ಇವುಗಳು ಸಂಕೇತದ ಮೂಲಕ , ವಿಭಿನ್ನ ಶಬ್ದೋತ್ಪತ್ತಿಯಿಂದ , ಅಂಗೀಕ ಚಲನೆಯಿಂದ , ಪರಿಸರದ ಘಟಕಗಳ ಮೂಲಕ ಇತ್ಯಾದಿಗಳ ಮೂಲಕ ಸಂವಹನ ನಡೆಸಿವೆ . ಜೀವಿಗಳು ಎಷ್ಟು ವೈವಿದ್ಯವೋ ಅವುಗಳ ನಡೆಸುವ ಸಂವಹನ ಪ್ರಕ್ರಿಯೆಯು ಅಷ್ಟೇ  ವೈವಿಧ್ಯ.

 ಜೀವಿ ಪ್ರಪಂಚದಲ್ಲಿ ಇಷ್ಟೊಂದು ವಿಕಸಿತಗೊಂಡಿರುವ, ಇಷ್ಟೊಂದು ವಿಭಿನ್ನವಾಗಿರುವ, ವೈವಿಧ್ಯಪೂರ್ಣತೆಯನ್ನು ಪ್ರದರ್ಶಿಸುವ ಸಂವಹನವನ್ನು ನಾವು ನೋಡಿದ್ದೇವೆ. ಸಸ್ಯಗಳು ಚಲನಶೀಲವಲ್ಲ. ಇವುಗಳಲ್ಲಿ ಸಂವಹನ ಹೇಗೆ ಎಂಬ ಪ್ರಶ್ನೆ ಉದ್ಭವ ವಾಗುವುದು ಸಹಜ.

ವಿಕಾಸಗೊಂಡ ಉನ್ನತ ಸಸ್ಯಗಳಲ್ಲಿ ವ್ಯವಸ್ಥಿತವಾಗಿ ರೂಪುಗೊಂಡಿರುವ ಜಲವಾಹಕ ಹಾಗೂ ಆಹಾರವಾಹಕ ಅಂಗಾಂಶಗಳ ಮೂಲಕ ನೀರು ಲವಣ ಹಾಗೂ ಆಹಾರದ ಸಾಗಾಣಿಕೆ ಕ್ರಮಬದ್ಧವಾಗಿ ಜರುಗುವುದು ನಮಗೆ ತಿಳಿದಿದೆ. 

 ರಾಸಾಯನಿಕ ಸಂದೇಶವಾಹಕರಾಗಿ ಸಸ್ಯ ಹಾರ್ಮೋನುಗಳ ಪಾತ್ರ :-

ಹಾರ್ಮೋನುಗಳು ಸಸ್ಯದ ಒಂದು ಭಾಗದಲ್ಲಿ ಸಂಶ್ಲೇಷಿಸಲ್ಪಟ್ಟ ಸಣ್ಣ ಅಣುಗಳಾಗಿವೆ ಮತ್ತು ನಿರ್ದಿಷ್ಟ ಪ್ರತಿಕ್ರಿಯೆಗಳನ್ನು ಹೊರಹೊಮ್ಮಿಸಲು ಗುರಿ ಕೋಶಗಳಿಗೆ ಸಾಗಿಸುತ್ತವೆ. ಆಕ್ಸಿನ್, ಸೈಟೋಕೈನಿನ್, ಜಿಬ್ಬರಲಿನ್  ಅಬ್ಸಿಸಿಕ್ ಆಮ್ಲ ಮತ್ತು ಎಥಿಲೀನ್‌ನಂತಹ ಐದು ಪ್ರಮುಖ ವರ್ಗದ ಹಾರ್ಮೋನುಗಳು ಸಸ್ಯ ಸಂವಹನಗಳಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ.

ಉನ್ನತ ಸಸ್ಯಗಳಲ್ಲಿ ವ್ಯವಸ್ಥಿತವಾಗಿ ಹಾಗೂ ನಿರ್ದಿಷ್ಟವಾಗಿ ಕೆಲವು ಸಸ್ಯ ಹಾರ್ಮೋನ್ ಗಳ ಸ್ರವಿಕೆಯಿಂದ ನೀರು, ಸೂರ್ಯನ ಬೆಳಕಿನಡೆ, ಸ್ಪರ್ಶ ,ರಾಸಾಯನಿಕ ವಸ್ತು ,ಗುರುತ್ವಾಕರ್ಷಣೆಯ  ಬಲದೆಡೆ ಅನುಕ್ರಮವಾಗಿ ಜಲಾನುವರ್ತನೆ, ದ್ಯುತಿ  ಅನುವರ್ತನೆ, ಸ್ಪರ್ಶನೂ ವರ್ತನೆ , ರಾಸಾಯನಿಕ ಅನುವರ್ತನೆ ,ಗುರುತ್ವಾನು ವರ್ತನೆ ಕ್ರಮವಾಗಿ ಸಸ್ಯಗಳಲ್ಲಿ ನಡೆಯುತ್ತಿರುವುದು ನಮಗೆ ತಿಳಿದಿದೆ. 

ಬೆಳಕು, ಗುರುತ್ವದಂತಹ ಪರಿಸರದ ಪ್ರಚೋದಕಗಳು ಸಸ್ಯದ ಭಾಗಗಳು ಬೆಳೆಯುವ ದಿಕ್ಕನ್ನು ಬದಲಿಸುತ್ತವೆ ನಿರ್ದೇಶಾತ್ಮಕ ಅಥವಾ ಅನುವರ್ತನಾ ಚಲನೆಗಳು ಪ್ರಚೋದನೆಯ ಕಡೆಗೆ ಅಥವಾ ಅದರಿಂದ ದೂರವಿರಬಹುದು.

ಗ್ರಾಹಕ ಮಧ್ಯಸ್ಥಿಕೆಯ  ಸಂಕೇತ :

ಸಸ್ಯಗಳಲ್ಲಿ ಸಂವಹನ ಸಂಕೇತವು ಗ್ರಾಹಕ ಪ್ರೋಟೀನ್ ಗಳ ಮೇಲೆ ಆಧಾರಿತವಾಗಿದೆ. ಈ ಪ್ರೋಟೀನ್ ಗಳು ಬಾಹ್ಯ ಪ್ರಚೋದನೆಗಳನ್ನು ಗುರುತಿಸಿ ಅರ್ಥೈಸಿಕೊಂಡು ಕೋಶೀಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತವೆ. ಇದಕ್ಕೆ ಒಂದು ಉದಾಹರಣೆ ಎಂದರೆ  ಗ್ರಾಹಕ ಪ್ರೋಟೀನ್ ಗಳು ಬೆಳಕಿನ ವಿವಿಧ ಆವೃತ್ತಿಯನ್ನು ಗುರುತಿಸಿ ಸಸ್ಯಗಳಲ್ಲಿ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ. ಇದು  ದ್ಯುತಿ ಅನುವರ್ತನೆಯನ್ನು ಒಳಗೊಂಡಿದೆ .

ಸಸ್ಯಗಳಲ್ಲಿ  ಅಧ್ಯಯನ ಮಾಡಲಾದ ಗ್ರಾಹಕವು ರಿಸೆಪ್ಟರ್ ಕೈನೇಸ್ ಕುಟುಂಬಕ್ಕೆ ಸೇರಿದೆ, ಈ ಪ್ರೋಟೀನು ಜೀವಕೋಶದ ಪೊರೆಯನ್ನು ವ್ಯಾಪಿಸುತ್ತದೆ ಮತ್ತು ಒಂದು ತುದಿ ಜೀವಕೋಶದ ಹೊರಗೆ ಮತ್ತು ಇನ್ನೊಂದು ಒಳಗೆ ಚಾಚಿಕೊಂಡಿರುತ್ತದೆ. ಇದು ಪ್ರೋಟೀನ್ ಫಾಸ್ಫೊರಿಲೇಷನ್ ಮತ್ತು ಡಿಫಾಸ್ಫೊರಿಲೇಶನ್‌ನಂತಹ ಆಣ್ವಿಕ ಘಟನೆಗಳನ್ನು ನಿರ್ವಹಿಸುತ್ತದೆ.

ದ್ವಿತೀಯ ಸಂದೇಶವಾಹಕರು ಮತ್ತು  ಸಂಕೇತ ವರ್ಧನೆ :-

 ದ್ವಿತೀಯ ಸಂದೇಶವಾಹಕರು  ಕೋಶ  ಸಂಕೇತಗಳಲ್ಲಿ ಗ್ರಾಹಕಗಳಿಂದ ಸಂಕೇತಗಳನ್ನು  ಪ್ರಸಾರ ಮಾಡುವ ಮತ್ತು ವರ್ಧಿಸುವ ಮೂಲಕ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. 

ಇವುಗಳಲ್ಲಿ ಪ್ರಮುಖವಾದದ್ದು ಕ್ಯಾಲ್ಸಿಯಂ ಅಯಾನುಗಳು . ಇವು ಪತ್ರ ರಂಧ್ರದ ತೆರೆಯುವಿಕೆ ಹಾಗೂ ಮುಚ್ಚುವಿಕೆ,  ಪರಾಗ ನಳಿಕೆಯ  ಬೆಳವಣಿಗೆ ಮತ್ತು ರೋಗಕಾರಕಗಳನ್ನು ನಿಯಂತ್ರಿಸುವ ವಿವಿಧ ಸಂಕೇತ ಮಾರ್ಗಗಳಲ್ಲಿ  ಕಂಡುಬರುತ್ತವೆ.   ಸಂಕೇತ ಸ್ವೀಕರಿಸಿದಾಗ ಕ್ಯಾಲ್ಸಿಯಂ ಚಾನಲ್‌ಗಳು ತೆರೆದುಕೊಳ್ಳುತ್ತವೆ ಮತ್ತು ಕ್ಯಾಲ್ಸಿಯಂ ಅಯಾನುಗಳು ಜೀವಕೋಶದೊಳಗೆ ಕೆಲವು ನಿಶ್ಚಿತ ಕಾರ್ಯಗಳನ್ನು  ಉಂಟುಮಾಡುತ್ತವೆ.

 ಸಂಕೇತ  ಟ್ರಾನ್ಸ್ಡಕ್ಷನ್ ಮಾರ್ಗಗಳು :-

 ಇವು - ಪ್ರೋಟೀನ್, ನ್ಯೂಕ್ಲಿಯಿಕ್ ಆಮ್ಲಗಳು ಮತ್ತು ದ್ವಿತೀಯ ಸಂದೇಶವಾಹಕಗಳ ನಡುವಿನ ಪರಸ್ಪರ ಪ್ರತಿವರ್ತನೆಯ  ಅತ್ಯಂತ ಸಂಕೀರ್ಣ ಜಾಲಗಳಾಗಿವೆ. ಈ ಮಾರ್ಗವು ಸಂಕೇತಗಳನ್ನು ಗ್ರಾಹಕ ಕೋಶಗಳಿಂದ ಕಾರ್ಯನಿರ್ವಾಹಕಗಳಿಗೆ ರವಾನಿಸುತ್ತದೆ. ಇದರಿಂದಾಗಿ ನಿರ್ದಿಷ್ಟ ಕೋಶೀಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ.

ಒಟ್ಟಾರೆಯಾಗಿ ಸಸ್ಯಗಳಲ್ಲಿ ಕೋಶೀಯ ಸಂವಹನ ಅಥವಾ ಸಂಕೇತಗಳು ಒಂದು ಸಂಕೀರ್ಣ ಮತ್ತು ಹೆಚ್ಚು ನಿಯಂತ್ರಿತ ಪ್ರಕ್ರಿಯೆಯಾಗಿದ್ದು . ಸಸ್ಯಗಳ ಉಳಿವು ಮತ್ತು ಪರಿಸರದಲ್ಲಿನ ಬದಲಾವಣೆಗಳಿಗೆ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಖಚಿತಪಡಿಸುತ್ತದೆ.

ಹಾರ್ಮೋನುಗಳು, ಗ್ರಾಹಕಗಳು, ದ್ವಿತೀಯ ಸಂದೇಶವಾಹಕಗಳು ಮತ್ತು ಸಂಕೇತ  ಟ್ರಾನ್ಸ್‌ಡಕ್ಷನ್ ಮಾರ್ಗಗಳನ್ನು ಒಳಗೊಂಡಿರುವ ಸಂವಹನದ ಸಂಕೀರ್ಣ ಜಾಲವು ಸಸ್ಯಗಳು ವೈವಿಧ್ಯಮಯ ಪರಿಸ್ಥಿತಿಗಳಲ್ಲಿ ಹೊಂದಿಕೊಳ್ಳಲು ಮತ್ತು ಅಭಿವೃದ್ಧಿ ಹೊಂದಲು ಅನುವು ಮಾಡಿಕೊಡುತ್ತದೆ. ಒಟ್ಟಾರೆಯಾಗಿ ಸಸ್ಯಗಳಲ್ಲಿ ನಡೆಯುವಂತಹ ಸಂವಹನ ಹಾಗೂ  ಕೋಶಿಯ ಸಂಕೇತಗಳು   ಅತ್ಯಂತ ಸಂಕೀರ್ಣ ಹಾಗೂ ನಮ್ಮ ಊಹೆಗೂ ನಿಲುಕಲಾದದ್ದು ಎಂದು ಹೇಳಬಹುದು.


                                                               




     

1 comment:

  1. ಉತ್ತಮ ಮಾಹಿತಿ. ಲೇಖನಕ್ಕೆ ಧನ್ಯವಾದಗಳು ಮೇಡಂ. ಒಂದಷ್ಟು ತಾಜಾ ಉದಾಹರಣೆಗಳೊಂದಿಗೆ ಸಾಮಾನ್ಯ ಓದುಗರಿಗೂ ಅರ್ಥವಾಗುವಂತೆ ಸರಳವಾಗಿದ್ದರೆ ಲೇಖನ ಇನ್ನೂ ಹೆಚ್ಚು ಉಪಯುಕ್ತ

    ReplyDelete