Thursday, July 4, 2024

ಮಂಡೂಕಗಳ ಮಹಾಮೇಳ

                  ಮಂಡೂಕಗಳ ಮಹಾಮೇಳ 

ಲೇಖಕರು : ಕೃಷ್ಣ ಚೈತನ್ಯ , 

ವನ್ಯಜೀವಿತಜ್ಞರು

     


    ಮಳೆಗಾಲದಲ್ಲಿ ಮಲೆನಾಡಿನಲ್ಲಿ ಮಂಡೂಕಗಳ ಕರ್ರ್… ಕರ್ರ್.., ಕೊಟ್ರ ಕೊಟ್ರ.. ಕಿಟ್..‌ ಕಿಟ್ ಕೂಗು ಪ್ರಾಣಿ ಅಪ್ರಿಯರಿಗೆ ಮಂಡೆ ಬಿಸಿಯಾಗುವಂತೆ, ಚಿಟ್‌ ಹಿಡಿಯುವಂತೆ ಮಾಡುತ್ತವೆ. ಇವು ಶೀತರಕ್ತದ ಉಭಯವಾಸಿ ಪ್ರಾಣಿಗಳು ಜಗತ್ತಿನಲ್ಲಿ ಸುಮಾರು 8400 ಪ್ರಬೇಧಗಳಿದ್ದರೆ ಭಾರತದಲ್ಲಿ 412 ಪ್ರಬೇಧಗಳು ಕಂಡುಬರುತ್ತವೆ. ಕರ್ನಾಟಕದಲ್ಲಿ ನಿಖರವಾಗಿ ಕಪ್ಪೆಗಳ ಪ್ರಬೇಧಗಳ ಸಂಖ್ಯೆಯನ್ನು ಪತ್ತೆಹಚ್ಚಲಾಗಿಲ್ಲ. ಏಕೆಂದರೆ ಜೀವವೈವಿದ್ಯದ ತವರಾಗಿರುವ ಘಟ್ಟದ ಕಾಡು, ತೊರೆ, ಜೌಗು ಮತ್ತು ನದಿಗಳಲ್ಲಿರುವ ಗಮ್ಯ ಸ್ಥಳಗಳಿಗೆ ನಾವು ತಲುಪಲಾಗಿಲ್ಲ.

  ಮಳೆಯ ಮಹಿಮೆಯೇ ಹಾಗೆ! ಎಲ್ಲೆಲ್ಲೂ ಜೀವೋತ್ಸಾಹದ ನವೋಲ್ಲಾಸ. ನೆಲದಲ್ಲಿ ಬಿದ್ದಿರುವ ಬೀಜಗಳಿಗೆ ಮೊಳೆಯುವಾಸೆ, ಒಣಗಿ ನಿಂತ ಗಿಡಗಳ ಬೇರಿಗೆ ಕೊನರುವಾಸೆ, ಎಲೆ ಉದುರಿಸಿ ನಿಂತ ಮರಗಳಿಗೆ ಚಿಗುರುವಾಸೆ. ಮೊದಲ ಜೋರು ಮಳೆ ಬಂದರೆ ಭೂಮಿಗೆ ಜೀವ ಬಂದಂತೆ ಬರಡಾಗಿದ್ದ ಭೂಮಿ ಹಸಿರ ಹೊದಿಕೆಯ ರಗ್ಗನ್ನು ಹೊದ್ದುಕೊಳ್ಳಲು ಆರಂಭಿಸುತ್ತದೆ. ಗುಂಡಿಗಳಲ್ಲಿ ನಿಂತ ನೀರು, ಮಣ್ಣು, ಕಲ್ಲಿನ ಅಡಿಯಲ್ಲಿ, ಸಂದು, ಮರದ ಪೊಟರೆ, ಒಣಗಿದ ಎಲೆಗಳ ಅಡಿಯಲ್ಲಿ ಮಲಗಿದ್ದ ಮಂಡೂಕಗಳನ್ನು ಕಾಂತದ ಸೂಜಿಯಂತೆ ಆಕರ್ಷಿಸುತ್ತದೆ. ಮಳೆ ಬೀಳುವಾಗಲೆ ಸಿಗುವ ಮಣ್ಣಿನ ವಾಸನೆಯರಿತ ಕಪ್ಪೆಗಳು, ಅದ್ಯಾವಾಗಲೋ ಬಂದು ಮೊಟ್ಟೆ ಇಟ್ಟು ಬೆಳಗಿನ ವೇಳೆಗೆ ಕಣ್ಮರೆಯಾಗಿ ಬಿಡುತ್ತಿದ್ದವು. 

  ಸಾಮಾನ್ಯವಾಗಿ ಮೊದಲ ಮಳೆಗಳು ರಾತ್ರಿಯ ವೇಳೆ ಬೀಳುವುದರಿಂದ ಕುಪ್ಪಳಿಸಿ ಬರುವ ಕಪ್ಪೆಗಳನ್ನು ನೋಡಲು ಸಿಗುವುದೇ ಕಷ್ಟ. ಸಣ್ಣವರಿದ್ದಾಗ ಬೀಳುತ್ತಿದ್ದ ರಭಸದ ಮಳೆ, ಜೊತೆಗೆ ಮಿಂಚು ಮತ್ತು ಆರ್ಭಟಿಸುತ್ತಿದ್ದ ಗುಡುಗು-ಸಿಡಿಲಿಗೆ ನಾವೆಲ್ಲ ಹೆಂಚಿನ ಮನೆಯ ಯಾವುದಾದರೊಂದು ಮೂಲೆಗೆ ಸೇರಿಬಿಡುತ್ತಿದ್ದೆವು. ಹಿರಿಯರು, ಲೇ ಮಗಾ, ಯಾವುದಾದರು ಕಬ್ಣನ ಆಚೆಗೆ ಬಿಸಾಕು, ಏನಾದ್ರು ಸಿಡ್ಲು ಮನೆಗೆ ಬಡ್ದದು ಎಂದು ಹೇಳಿ ಹೊರಗಡೆಗೆ ಕುಡುಗೋಲನ್ನೊ, ಮಚ್ಚನ್ನೊ ಹೊರಕ್ಕೆ ಎಸೆಯಿಸುತ್ತಿದ್ದರು. ಮಳೆ ನಿಂತ ತಕ್ಷಣ ರಾತ್ರಿಯೆಲ್ಲಾ ಕಪ್ಪೆಗಳ ಕರ-ಕರ, ಗೊಟ್ರು-ಗೊಟ್ರು ಶಬ್ದ. ನಮಗೋ ಬೆಳಿಗ್ಗೆ ಎದ್ದು ಗುಂಡಿಯಲ್ಲಿ ನಿಂತಿರುವ ನೀರನ್ನು ನೋಡವ ತವಕ.

  ನಿಂತ ಕೆಸರಿನ ನೀರಿನಲ್ಲಿ ಮಚ್ಚೆಯಾಕಾರದ ಲೋಳೆ, ಅದರೊಳಗೆ ಸಾಸಿವೆ ಕಾಳಿನಂತಹ ಮೊಟ್ಟೆಗಳು. ಐದಾರು ದಿನಗಳಲ್ಲಿ ಗುಂಡಿಯಲ್ಲಿನ ನೀರು ಕಡಿಮೆಯಾಗಿ ಒಣಗುವಷ್ಟರಲ್ಲಿಯೋ ಅಥವಾ ಮತ್ತೆ ಮಳೆಬಂದು ಅದರಲ್ಲಿ ಬೆಳೆಯುವ ಸೊಳ್ಳೆ ಮರಿಗಳನ್ನು ಭಕ್ಷಿಸಿ ಗೊದಮೊಟ್ಟೆಗಳು ಬೆಳೆದು ದೊಡ್ಡದಾಗಿ ಬಿಡುತ್ತಿದ್ದವು ಅನ್ನಿಸುತ್ತೆ. ಇವೆಲ್ಲವನ್ನು ಗಮನಿಸದ ನಾವು ಘಟ್ಟದಲ್ಲಿ ವೃತ್ತಿಗೆ ಬಂದಾಗ ಕಾಣಸಿಗುತ್ತಿದ್ದ ವೈವಿಧ್ಯಮಯವಾದ ಕಪ್ಪೆಗಳನ್ನು ಗಮನಿಸುವ ಕುತೂಹಲವನ್ನು ತಡೆಯಲಾಗಲೆ ಇಲ್ಲ. ಮಲೆನಾಡಿನಲ್ಲಿ ಮುಂದಿನ ಬಾಗಿಲುಗಳು ಸಾಮಾನ್ಯವಾಗಿ ಎರಡು ಭಾಗಗಳಾಗಿರುತ್ತವೆ. ಮೇಲಿನರ್ಧ ತೆರೆದು, ಕೆಳಗಿನರ್ಧ ಬಾಗಿಲನ್ನು ಮುಚ್ಚಿ ಹೊರಗಡೆ ಬೀಳುತ್ತಿದ್ದ ಮಳೆಯನ್ನು ಆಸ್ವಾದಿಸುವುದೇ ಒಂದು ಚಂದ. ಆರಂಭದ ದಿನಗಳು ಮಳೆಗಾಲವಾಗಿದ್ದುದರಿಂದ ಮನೆಯಿಂದ ಹೊರಗಡೆ ಹೋಗುವಾಗಲೋ ಅಥವಾ ಒಳಗಡೆ ಬರುವಾಗಲೋ ಸಣ್ಣ ಸಣ್ಣ ಕಪ್ಪೆಗಳು ನೆಗೆದು ಮನೆಯೊಳಗೆ ಪ್ರವೇಶಿಸಿ ಬಿಡುತ್ತಿದ್ದವು. ಅವುಗಳನ್ನು ಕಪ್ಪೆ ಮರಿಗಳು ಎಂದು ಬಾವಿಸಿದ್ದ ನನಗೆ ತದನಂತರ ತಿಳಿಯಿತು. ಅವುಗಳೂ ಸಹ ಬೆಳೆದ ಕಪ್ಪೆಗಳೆ ಎಂದು. ಅವುಗಳೇ ಆರ್ನಮೆಂಟೆಡ್ ಪಿಗ್ಮಿ ಫ್ರಾಗ್. ಗೆಳೆಯರ ಜೊತೆ ಬಾಡಿಗೆ ಮನೆಯಲ್ಲಿ ಇದ್ದುದರಿಂದ ಮನೆಯಲ್ಲಿ ಮಲಗಲು ಮಂಚ ಮಾತ್ರ ಇದ್ದವೆ ಹೊರತು ಅಡುಗೆ ಶಾಸ್ತ್ರ ನೆಲದ ಮೇಲೆ ಸಾಗುತ್ತಿತ್ತು.  ಒಮ್ಮೆ ಊಟ ಮಾಡಲು ಅನ್ನ ಮತ್ತು ಸಾರು ಹಾಕಿ ಅರ್ಧ ಊಟ ಮಾಡಿದ್ದೆ. ಉಳಿದ ಅನ್ನವನ್ನು ಊಟಮಾಡಲು ಕಲಸುವಾಗಲೆ ಸಿಕ್ಕಿದ್ದು ಅಂತಹ ಸಣ್ಣಕಪ್ಪೆಯ ಮೃತದೇಹ. ಇದ್ಯಾವಾಗ ನೆಗೆದು ಸಾರಿಗೆ ಬಿತ್ತಪ್ಪ ಎಂದು ಊಟ ಬಿಸಾಡಿ ಕೆಲಸಕ್ಕೆ ಯೋಚಿಸುತ್ತಾ ಹೊರಟೆ. ಆದರೆ ಇದನ್ನು ಗೆಳೆಯರಿಗೆ ಮಾತ್ರ ಹೇಳಲಿಲ್ಲ. ಉತ್ತರವೂ ಸಿಗಲಿಲ್ಲ!

  ನಾನು ಇರುವ ಸ್ಥಳದಲ್ಲಿ ಒಮ್ಮೆ ಡಾ. ಬಿಷನ್‌ ಅವರು, ಕಪ್ಪೆ ಹೊಡೆಯಲು ಬರುತ್ತೀರಾ ಸರ್?‌ ಎಂದರು. ವನ್ಯಜೀವಿಗಳ ಛಾಯಾಚಿತ್ರಗಳನ್ನು ತೆಗೆಯುತ್ತಿದ್ದುದರಿಂದ ಕೂಡಲೆ ಒಪ್ಪಿದೆ. ರಾತ್ರಿ ೯ ಗಂಟೆಗೆ ರೆಡಿ ಇರಿ ಸರ್‌ ಎಂದು ಹೇಳಿ ಹೋದರು. ರಾತ್ರಿ ಗೋಣಿಕೊಪ್ಪಲಿನ ಸಮೀಪದ ಒಂದು ಪಾಳು ತೋಪಿನಂತಿದ್ದ ಜಾಗದ ಬಳಿ ವಾಹನ ನಿಲ್ಲಿಸಿ, ಕ್ಯಾಮೆರಾ, ಟಾರ್ಚ್‌ ಹಿಡಿದುಕೊಂಡು ಅದರೊಳಗಿದ್ದ ಕೊಳದ ಒಳಗಡೆ ಮತ್ತೊಬ್ಬ ಗೆಳೆಯರ ಸಹಾಯದಿಂದ ಇಳಿದರು. ನನ್ನನ್ನು ಕೈ ಹಿಡಿದು ಇಳಿಸಿಕೊಂಡರು. ಮಳೆ ಬಿದ್ದಿದುದರಿಂದ ಮಣ್ಣು ಸ್ಕೇಟಿಂಗ್‌ ಆಡುವಂತೆ ಜಾರುತ್ತಿತ್ತು. ನಾನೋ ಇಳಿಜಾರಿನಲ್ಲಿ ಜಾರಿ ಜಾರಿ ಅದೇಗೋ ಸಂಬಾಳಿಸಿಕೊಂಡು ನಿಲ್ಲುತ್ತಿದ್ದೆ. ಆಗ ಟಾರ್ಚ್‌ ಬೆಳಕಿನಲ್ಲಿ ಕಂಡದ್ದು ಮಾತ್ರ ಬೆರಗು ಮೂಡಿಸಿತು. ರಾಕೊಫೋರಸ್‌ ಲ್ಯಾಟರಲಿಸ್ ಎಂಬ ವೈಜ್ಞಾನಿಕ ಹೆಸರನ್ನು ಹೊಂದಿರುವ ಸಣ್ಣ ಮರಗಪ್ಪೆ ಮೊಟ್ಟೆಗಳನ್ನು ಉರುಚಲು ಶುರುಮಾಡಿತು. ಸುಮಾರು ಒಂದೂವರೆ-ಎರಡು ಗಂಟೆಯವರೆಗೆ ಈ ಕ್ರಿಯೆ ನಡೆಯಿತು. ಅವುಗಳ ಚಲನವಲಗಳ ಛಾಯಾಚಿತ್ರಗಳನ್ನು ತೆಗೆದು ಬಂದಾಗ ಮಧ್ಯರಾತ್ರಿ ಕಳೆದಿತ್ತು.

  ಅದೇ ಸಂದರ್ಭದಲ್ಲಿ ಮಲೆನಾಡಿನ ತೇಲುವ ಕಪ್ಪೆ(ಮಲಬಾರ್‌ ಗ್ಲೈಡಿಂಗ್‌ ಫ್ರಾಗ್‌) ಎನ್ನುವ ಮರಗಪ್ಪೆಯೂ ಗಂಡು ಕಪ್ಪೆಯನ್ನು ಬೆನ್ನಿನ ಮೇಲೆ ಸವಾರಿ ಹೊತ್ತು ಮರವನ್ನೇರಲು ಹೊರಟಿತ್ತು. ಇವು ರೆಂಬೆಯಿಂದ ರೆಂಬೆಗೆ ಐದಾರು ಅಡಿಯಷ್ಟು ದೂರಕ್ಕೆ ನೆಗೆಯುವುದರಿಂದ ಹಾರಿದಂತೆ ಕಾಣುತ್ತವೆ. ಇವು ಸಹ ಕೊಳದ ಮೇಲಿನ ಸೂಕ್ತ ಜಾಗದಲ್ಲಿ, ಮರದ ರೆಂಬೆ, ಅಷ್ಟೆ ಏಕೆ, ಮನೆಯ ಕಾಂಪೌಂಡ್ ನ ಬದಿಯಲ್ಲಿಯೂ ಮೊಟ್ಟೆ ಇಟ್ಟುಬಿಡುತ್ತವೆ. ನಿಶೇಚನ ನಡೆದು ಮರಿಗಳು ಕೆಳಗಿರುವ ನೀರಿಗೆ ಬಿದ್ದರೆ ಬದುಕುತ್ತವೆ. ಕೆಲವು ವೇಳೆ ಅಂದಾಜು ತಪ್ಪಿ ಇಡುವ ಮೊಟ್ಟೆಗಳಿಂದ ಬೀಳುವ ಮರಿಗಳಿಗೆ ಸಾವೆ ಗತಿ. ಒಮ್ಮೆ ಕಾಂಪೌಡ್‌ನ ಬದಿಯಲ್ಲಿಟ್ಟ ಮೊಟ್ಟೆಗಳು ಒಡೆದು ಸಾಕಷ್ಟು ಮಳೆ ಬೀಳದೆ ನಾಶವಾದವು. ಮತ್ತೊಮ್ಮೆ ಮರದಿಂದ ಹುಲ್ಲಿನ ಮೇಲೆ ಬೀಳುತ್ತಿದ್ದ ಮರಿಗಳನ್ನ ಗಮನಿಸಿ ಕಾಲು ಬಕೆಟ್‌ ಅಷ್ಟು ನೀರು ತುಂಬಿಸಿ ಕೆಳಗಿಟ್ಟು ಮರಿಗಳನ್ನು ಸಂಗ್ರಹಿಸಿ ಎರಡು ದಿನಗಳ ನಂತರ ಲೆಕ್ಕ ಹಾಕಿದರೆ ಸಿಕ್ಕಿದ್ದು ೨೦೮ ಮರಿಗಳು. ಅಷ್ಟರಲ್ಲಾಗಲೆ ಎಷ್ಟು ಮರಿಗಳು ಹುಲ್ಲಿನೊಳಕ್ಕೆ ಬಿದ್ದು ಇರುವೆಗಳ ಪಾಲಾದವೊ ತಿಳಿಯದು.

  ಮನೆಯ ಬಳಿ ಇಟ್ಟಿರುವ ನೈದಿಲೆಯ ತೊಟ್ಟಿಯಲ್ಲಿ ಪ್ರತೀ ವರ್ಷವು ಏನಾದರೊಂದು ಅದ್ಭುತ ಕಾಣ ಸಿಗುತ್ತಿರುತ್ತದೆ. ಸೊಳ್ಳೆಗಳನ್ನು ನಿಯಂತ್ರಿಸಲೆಂದು ಈ ತೊಟ್ಟಿಯಲ್ಲಿ ಗಪ್ಪಿ, ಗಂಬೂಸಿಯ ಮೀನುಗಳನ್ನು ಸಾಕಿದ್ದೇನೆ. ಬೇಸಿಗೆಯ ಸಮಯದ ಒಂದು ಬೆಳಿಗ್ಗೆ ತೊಟ್ಟಿಯನ್ನು ಇಣುಕಿದಾಗ ಮಣಿಸರದಂತಹ ಸಾಲು, ನನ್ನನ್ನು ಇನ್ನಷ್ಟು ಇಣುಕಿ ನೋಡುವಂತೆ ಮಾಡಿತು. ಹಾಗೆಯೇ ಬಾಗಿ ನೋಡುತ್ತಿದ್ದವನು ಕುಳಿತು ಗಮನಿಸಿದಾಗ ತೊಟ್ಟಿಯ ತುಂಬೆಲ್ಲಾ  ಇಂತಹ ಸರಮಾಲೆಗಳೆ! ಓ, ಇಷ್ಟೆಲ್ಲಾ ಮೊಟ್ಟೆಗಳು ಮರಿಗಳಾದರೆ ನಾನು ಸಾಕಿರುವ ಗಪ್ಪಿ ಮೀನುಗಳು ಇವುಗಳಿಗೆ ಸಾಲದು ಎಂದು ಯೋಚಿಸಿದೆ. ಯಾವ ಕಪ್ಪೆಗಳು ಇಷ್ಟು ಮೊಟ್ಟೆ ಇಟ್ಟಿವೆ ಎಂದು ಹುಡುಕಾಡಿದೆ. ಊಹೂಂ. ಅವು ಎಲ್ಲಿ ಅವಿತು ಕುಳಿತಿದ್ದವೋ ಕಾಣಸಿಗಲಿಲ್ಲ. ಮತ್ತೇನು ಮಾಡುವುದು? ಡಾರ್ವಿನ್‌ನ ಸಿದ್ದಾಂತ “ಎಲ್ಲಾ ಜೀವಿಗಳು ಮಿತಿಮೀರಿ ಸಂತಾನ ಉತ್ಪತ್ತಿ ಮಾಡುತ್ತವೆ” ನೆನಪಾಯಿತು. ಎಷ್ಟು ಮೊಟ್ಟೆ ಇಟ್ಟಿರಬಹುದು ಎಂಬ ಕುತೂಹಲ ಬಂತು. 

  ನೋಡೋಣ, ಎಷ್ಟು ಮೊಟ್ಟೆ ಇಟ್ಟಿವೆ ಎಣಿಸಿಬಿಡೋಣವೇ? ಅವುಗಳನ್ನು ಹೊರತೆಗೆದರೆ ಅವು ನಾಶವಾಗುವುದಿಲ್ಲವೇ? ನನ್ನ ಸಂರಕ್ಷಣಾ ಕಾರ್ಯದ ಮೆದುಳು ಎಚ್ಚರಿಸಿತು. ಹೇಗೂ ಎಲ್ಲವೂ ಉಳಿಯುವುದಿಲ್ಲ ಎಂದು ಡಾರ್ವಿನ್ನನ ಎರಡನೇ ಅಂಶ “ಮಿತಿಮೀರಿದ ಸಂತಾನದಲ್ಲಿ ಆವಾಸ. ಆಹಾರ ಮತ್ತು ಸಂಗಾತಿಗಾಗಿ ಹೋರಾಟ ನಡೆದು ಸಮರ್ಥವಾದವು ಮಾತ್ರ ಉಳಿಯುತ್ತವೆ” ಎಂಬ ಅಂಶ ಹೇಳುವುದನ್ನ ನೆನೆದು ಸರವನ್ನು ಎಳೆದು ನೋಡಿದೆ. ಅದು ಎಲ್ಲಾ ನೈದಿಲೆಯ ಎಲೆಗಳನ್ನು ಎಳೆದುಕೊಂಡು ಬರುತ್ತಿತ್ತು. ಈ ಸರದ ಲೋಳೆ ಇಷ್ಟು ಗಟ್ಟಿ ಇದೆಯಾ ಎಂದು ಆಶ್ಚರ್ಯವಾಯಿತು. ಏಕೆಂದರೆ ಆ ಸರ ಪ್ರಾರಂಭದಿಂದ ಅಂತ್ಯದವರೆಗೂ ಕೂಡಿಕೊಂಡಿತ್ತು. ಸರಿ ಎಚ್ಚರಿಕೆಯಿಂದ ಸಂಗ್ರಹಿಸಿ, ಎಣಿಸಲು ಪ್ರಾರಂಭಿಸಿದೆ. ಬರೋಬ್ಬರಿ ಎರಡೂವರೆ ಗಂಟೆ! ನೂರು, ಇನ್ನೂರು, ಸಾವಿರ ಹುಹೂಂ ಸರಿಯಾಗಿ ಆರು ಸಾವಿರದ ಇನ್ನೂರ ಹತ್ತು ಮೊಟ್ಟೆಗಳು!‌

  ಶ್ರೀಲಂಕ ಮತ್ತು ಭಾರತದಲ್ಲಿ ಮಾತ್ರ ಕಂಡುಬರುವ ಬಣ್ಣದ ಕಪ್ಪೆ ಎಂದು ಸಾಮಾನ್ಯವಾಗಿ ಕರೆಯುವ ಅಪರಾಡನ್ ಟ್ಯಾಪ್ರೊಬ್ಯಾನಿಕಸ್, ಗಾತ್ರದಲ್ಲಿ ಗೋಲಿಗಿಂತ ತುಸು ದೊಡ್ಡದಿರುತ್ತದೆ. ಇದು ಜೋರು ಮಳೆಗಾಲವಿದ್ದಾಗ ಕೊಳಗಳಲ್ಲಿ ಗಂಡುಕಪ್ಪೆ ಮಿಲನದ ಕರೆಕೊಡುತ್ತದೆ. ಹೆಣ್ಣುಕಪ್ಪೆ ಕರೆಯ ಶಬ್ದಕ್ಕೆ ಬಂದು ನೀರಿನಲ್ಲಿ ಮೊಟ್ಟೆ ಇಡುತ್ತದೆ. ಅದೇ ಸಮಯದಲ್ಲಿ ಗಂಡು ಸಹ ವಿರ್ಯಾಣುಗಳನ್ನು ಸ್ಖಲಿಸಿ ಹೋಗುತ್ತದೆ. ಬಾಹ್ಯನಿಶೇಚನ ನಡೆದು ಹೊರಬರುವ ಗೊದಮೊಟ್ಟೆಗಳು ಕಪ್ಪುಬಣ್ಣದಲ್ಲಿರುತ್ತವೆ. ಅವುಗಳಲ್ಲಿ ಬಹಳಷ್ಟು ಮರಿಗಳು ಇತರ ಪ್ರಾಣಿಗಳಿಗೆ ಬಲಿಯಾಗಿ ಉಳಿಯುವುದು ಕೆಲವೇ ಮಾತ್ರ. ನಮ್ಮ ದೇಶದಲ್ಲಿ ಕಾಣಸಿಗುವ ಅತ್ಯಂತ ದೊಡ್ಡ ಕಪ್ಪೆ ಎಂದರೆ ಅದು ಗೂಳಿಕಪ್ಪೆ ಅಥವಾ ಬುಲ್‌ ಫ್ರಾಗ್.‌ ಅತ್ಯಂತ ಸಣ್ಣಕಪ್ಪೆ ಎಂದರೆ ಮೈಕ್ರೊಹೈಲ ಆರ್ನೆಟ ಎಂಬ ವೈಜ್ಞಾನಿಕ ಹೆಸರನ್ನು ಹೊಂದಿರುವ ಆರ್ನಮೆಂಟೆಡ್ ಪಿಗ್ಮಿ ಫ್ರಾಗ್. ಪಶ್ಚಿಮ ಘಟ್ಟದಲ್ಲಿ ಕಾಣಸಿಗುವ ಉಭಯವಾಸಿಗಳ ವೈವಿಧ್ಯತೆ ತುಂಬಾ ಅನನ್ಯವಾದುದು.

  ಮತ್ತೊಂದು ಬಗೆಯ ಕಪ್ಪೆಯ ಪ್ರಸಂಗ ಒಮ್ಮೆ ಕಾಣಲು ಸಿಕ್ಕಿತು. ತೊರೆಯ ಮ‌ಧ್ಯದಲ್ಲಿ ಕೆಲವು ಬಂಡೆಗಳಿದ್ದವು. ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿದ್ದ ಬಂಡೆಯ ಮೇಲೆ ಎರಡು ಗಂಡು ಕಪ್ಪೆಗಳ ನಡುವೆ ಬಾಕ್ಸಿಂಗ್‌ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಬಾಕ್ಸಿಂಗ್‌ ಆಗುತ್ತಿದ್ದದ್ದು ಮಾತ್ರ ಕೈಗಳಿಂದಲ್ಲ, ಬದಲಾಗಿ ಕಾಲುಗಳಿಂದ. ಆಗ ನನ್ನ ಬಳಿ ಕ್ಯಾಮರ ಆಗಲಿ, ಮೊಬೈಲ್‌ ಆಗಲಿ ಇರದಿದ್ದರಿಂದ ಅದು ಯಾವುದು ಎಂದು ಪತ್ತೆ ಹಚ್ಚಲಾಗಲಿಲ್ಲ.

  ಆದರೆ ಇಂತಹ ಪ್ರಾಣಿಗಳ ಸಂತಾನಕ್ಕೂ ಮಾನವನಿಂದ ದುರ್ಗತಿ ಬಂದಿರುವುದು ಮಾತ್ರ ಆಕಸ್ಮಿಕವಲ್ಲ! ಏಕೆಂದರೆ ದೇಶದ ಎಲ್ಲಾ ವನ್ಯಜೀವಿಗಳಿಗೂ ಇದೇ ಗತಿ ತಾನೆ ಬಂದಿರುವುದು.ಪಶ್ಚಿಮ ಘಟ್ಟ ಅಥವಾ ಸಹ್ಯಾದ್ರಿ ಶ್ರೇಣಿ ಮಾನವನ ಭೂಮಿಯ ಆಸೆಗೆ ಕೊಡಲಿ, ಯಾಂತ್ರಿಕ ಗರಗಸ, ಮತ್ತು ಬೆಂಕಿಗೆ ತನ್ನ ಮೈಯೊಡ್ಡುತ್ತಿದೆ. ಆದುದರಿಂದ ಇವುಗಳಿಗೆ ನೈಸರ್ಗಿಕ ವಾಸನೆಲೆ ಇಲ್ಲದಂತಾಗಿ ಝರಿ, ತೊರೆ ನದಿಗಳಲ್ಲೂ ನೀರಿನ ಬರದಿಂದ ನಶಿಸಿಹೋಗುತ್ತಿರುವುದು ಇವುಗಳ ಸಂತಾನಾಭಿವೃದ್ಧಿಗೆ ತೀವ್ರ ಪೆಟ್ಟುಕೊಡುತ್ತಿದೆ. ಅರ್ಥೈಸಿಕೊಂಡು ಉಳಿಸಬೇಕಾದವರು ಕಣ್ಣು, ಕಿವಿ ಮತ್ತು ಬಾಯಿ ಮುಚ್ಚಿ ಕುಳಿತಿದ್ದಾರೆ. 


No comments:

Post a Comment