Thursday, July 4, 2024

ನೀಲ’ ವರ್ಣದ ರುಚಿಕರ ‘ನೇರಳೆ

  ‘ನೀಲ’ ವರ್ಣದ ರುಚಿಕರ ‘ನೇರಳೆ’ 

ಲೇಖಕರು : ರಮೇಶ ವಿ. ಬಳ್ಳಾ

 ಅಧ್ಯಾಪಕರು

 ಬಾಲಕಿಯರ ಸರ್ಕಾರಿ ಪ. ಪೂ. ಕಾಲೇಜು 

 (ಪ್ರೌಢ) ಗುಳೇದಗುಡ್ಡ ಜಿ: ಬಾಗಲಕೋಟ 


    ಬಿಸಿಲ ಬೇಗೆಗೆ ಬಸವಳಿದ ಜನ ಆಕಾಶದತ್ತ ಮುಖ ಮಾಡುವ ಸಮಯ. ಜೂನ್ ತಿಂಗಳ ಹೊತ್ತು ಬಂತೆಂದರೆ ನಿಧಾನವಾಗಿ ಮಳೆಯ ಆಗಮನದ ಮೂನ್ಸೂಚನೆ ಸಿಗುತ್ತದೆ. ಬಾಯಾರಿ ಬೆಂಡಾದ ಜನರ ತನುಮನಕ್ಕೆ ತಂಪು ತಣಿಸುವ ಸುಳಿಗಾಳಿ ಬೀಸತೊಡಗುತ್ತದೆ. ಒಂದೆರಡು ಹನಿಯೊಡೆದು ಕಾದು ಕೆಂಡವಾದ ಭುವಿಯ ಕಿಚ್ಚಿಗೆ ಹಸಿ ಹಚ್ಚಿ ಮಡಿಯಾಗುವ ಕಾಲದಂತೆ ತೋರುತ್ತದೆ. ಇಂತಹ ಸಮಯಕ್ಕೆ ಸರಿಯಾಗಿ ಪ್ರಕೃತಿಯ ಮೈಬಣ್ಣ ಬದಲಾಗುತ್ತಾ ಹಸಿರು ಹೊದ್ದುಕೊಳ್ಳುತ್ತದೆ. ಋತುಮಾನಕ್ಕನುಗುಣವಾದ ಹಣ್ಣುಗಳ ಸುಗ್ಗಿ ಲಗ್ಗೆ ಇಡುತ್ತದೆ. ಬೇಸಿಗೆಯಲ್ಲಿ ಮಾವು ತಿಂದು ಬಾಯಿ ಚಪ್ಪರಿಸದವರಿಗೆ ಮತ್ತೊಂದು ಹಣ್ಣಿನಾಗಮನವಾಗುತ್ತದೆ. ಈ ಹೊತ್ತಿಗೆ ವಿಶೇಷವಾಗಿ ಎಲ್ಲರ ಗಮನ ಸೆಳೆಯುವ ವಿಶಿಷ್ಟ ಹಣ್ಣು ಎಂದರೆ ಅದು ‘ನೇರಳೆ’ ಹಣ್ಣು. 

ಕಾಡುಕಣಿವೆಯ ಒಡಲಿನಲ್ಲಿ ಅದೇಷ್ಟೋ ಹಣ್ಣುಗಳ ಸಂತಾನವಿದೆ. ನಿಸರ್ಗದ ವೈಶಿಷ್ಟ್ಯವೆಂಬಂತೆ ಒಂದಾದ ನಂತರ ಮತ್ತೊಂದು ಎಂಬಂತೆ ಹಣ್ಣುಗಳು ಸಾಲು ಸಾಲಾಗಿ ಜನರ ಬಾಯಿಗೆ ಆಹಾರವಾಗುತ್ತವೆ. ಅವುಗಳಲ್ಲಿ ಅಪ್ಪಟ ಕಾಡು ಕುಟುಂಬದ ನೇರಳೆ ಹಣ್ಣು ವಿಶಿಷ್ಟವಾದದ್ದು ಹಾಗೂ ಸವಿಯಲು ರುಚಿಯಾದದ್ದು ಆಗಿದೆ. ಇಂತಹ ನೇರಳೆ ಹಣ್ಣು ಇಂದು ಎಲ್ಲೆಂದರಲ್ಲಿ ಕಾಣಸಿಗುತ್ತಿದೆ. ಸಂತೆ, ದೇವಸ್ಥಾನ, ಉದ್ಯಾನ, ಆಸ್ಪತ್ರೆ ಅಷ್ಟೇ ಏಕೆ ಬಂಡಿಗಾಡಿಗಳ ಮೇಲೆ, ಜೊತೆಗೆ ತಲೆ ಮೇಲೆ ಬುಟ್ಟಿಯಲ್ಲಿ ಹೊತ್ತು ಮಾರುವವರೂ ಇದ್ದಾರೆ. ಈ ಹಣ್ಣು ಸವಿಯದೇ ಬೇಸಿಗೆ ಮುಗಿಯಲಾರದು ಎನ್ನುವಷ್ಟರ ಮಟ್ಟಿಗೆ ಬಿಸಿಲು-ಮಳೆಯ ನಡುವಿನ ಕಾಲಕ್ಕೆ ಹಣ್ಣು ರುಚಿ ತೋರಿಸುತ್ತದೆ.

ಅಚ್ಚ ನೀಲ ವರ್ಣದ ಈ ಸುಂದರ ಹಣ್ಣು ಹಳ್ಳಿಗಾಡಿನ ಜನರಿಗೆ ‘ನೇರಲ ಹಣ್ಣು’ ಎಂತಲೇ ಚಿರಪರಿಚಿತ. ಈ ಹಣ್ಣಿನ ವೈಜ್ಞಾನಿಕ ನಾಮಧೇಯ ಸೈಝಿಜಿಯಮ್ ಕ್ಯುಮಿನಿ(Syzygium cumini) ಮಿರ್ಟೇಸಿ ಕುಟುಂಬದ ಈ ಹಣ್ಣಿಗೆ ಜಾಂಬುಫಲ ಎಂತಲೂ ಹೆಸರಿದೆ. ಇಂಗ್ಲೀಷ್‌ನಲ್ಲಿ ಇದಕ್ಕೆ ಬ್ಲಾಕ್ ಪ್ಲಮ್ ಹಾಗೂ ಇಂಡಿಯನ್ ಬ್ಲಾಕ್‌ಬೆರಿ ಎಂದು ಸಹ ಕರೆಯುತ್ತಾರೆ. ಇದು ನಮ್ಮ ಭಾರತ ಮೂಲದ ಒಂದು ವಿಶಿಷ್ಟ ಕಾಡು ಹಣ್ಣು ಆಗಿದೆ. ಏಷ್ಯಾದ ಆಗ್ನೇಯ ಭಾಗದಲ್ಲೂ ಇದರ ಹೇರಳತೆ ಕಾಣಬಹುದು. ಮೊದ ಮೊದಲು ನಾವು ನೀವೆಲ್ಲಾ ಶಾಲೆಗೆ ಹೋಗುವಾಗ ಕೆರೆಕಟ್ಟೆ, ದೇವಸ್ಥಾನ, ಊರ ಹೊರಗಿನ ಬೀಳುಜಾಗಗಳಲ್ಲಿ ಅಡ್ಡಾಡಿ ಮರ ಹುಡುಕಿ ಇವುಗಳನ್ನು ಜೇಬು ತುಂಬಿಸಿಕೊಂಡು ಬರುತ್ತಿದ್ವು. ಹಾಗೇ ಈ ಮರಗಳು ಎಲ್ಲೆಂದರಲ್ಲಿ ಹುಲುಸಾಗಿ ಬೆಳೆಯುತ್ತಿದ್ದವು ಕೂಡ. ಮರಗಳ ಅಡಿಯಲ್ಲಿ ನಿಂತರೆ ಸಾಕು ಉದುರಿದ ಹಣ್ಣುಗಳು ಹತ್ತಾರು ಹುಡುಗರ ಬೊಗಸೆ ತುಂಬುತ್ತಿದ್ದವು. ಇಂತಹ ಹಣ್ಣುಗಳನ್ನು ಬುಟ್ಟಿ ತುಂಬಿ ಮಾರುವ ಮಹಿಳೆಯರು ಕೂಡ ಅಂದು ಶಾಲೆಗಳ ಮುಂದೆ ಕಾಣುತ್ತಿದ್ದರು. ಈಗಲೂ ಇದಕ್ಕೆ ಬೇಡಿಕೆ ಕಡಿಮೆಯಾಗಿಲ್ಲ. ತಿನ್ನುವವರ ಸಂಖ್ಯೆ ಹೆಚ್ಚಿದೆ. ಕಾರಣ ಬೇರೆ ಬೇರೆಯಾಗಿರಬಹುದು. ಅಷ್ಟರ ಮಟ್ಟಿಗೆ ಈ ಹಣ್ಣು ಎಲ್ಲ ಕಾಲಕ್ಕೂ ಚಿರಪರಿಚಿತ ಎನ್ನವಂತಾಗಿದೆ.

ನೇರಳೆ ಮರ ಒಂದು ಸಾಮಾನ್ಯವಾದ ಬೂದು ತೊಗಟೆಯುಳ್ಳ ಮರ. ಮಧ್ಯಮ ಗಾತ್ರದ ಈ ನಿತ್ಯ ಹರಿದ್ವರ್ಣದ ಮರ ಸುಮಾರು 35-40 ಅಡಿ ಎತ್ತರಕ್ಕೆ ಬೆಳೆಯುತ್ತದೆ. ಉದ್ದನೆಯ ಚೂಪು ತುದಿಯ ಅಭಿಮುಖ ಪತ್ರ ರಚನೆಯ ವಿನ್ಯಾಸದ ಎಲೆಗಳು ನೀಳವಾಗಿರುತ್ತವೆ. ಇದು ಮಾರ್ಚ್-ಎಪ್ರೀಲ್‌ನಲ್ಲಿ ಬಿಳಿ ಬಣ್ಣದ ಸಣ್ಣ ಸಣ್ಣ ಹೂ ಬಿಟ್ಟು ಜೂನ್ ಅಷ್ಟೊತ್ತಿಗೆ ಹಣ್ಣು ಸುರಿಸಲು ಪ್ರಾರಂಭಿಸುತ್ತದೆ. ರಸ್ತೆಯ ಅಕ್ಕಪಕ್ಕ, ಉದ್ಯಾನ, ಊರ ಬೀಳುಜಾಗಗಳಲ್ಲಿ, ಹೊಲದ ಬದುಗಳಲ್ಲಿ ಸಮೃದ್ಧವಾಗಿ ಬೆಳೆಯುವ ಮರವಾಗಿದೆ. ಇದು ಯಾವ ಮಣ್ಣಿನಲ್ಲಾದರೂ ಸರಿ ಹುಲುಸಾಗಿ ಬೆಳೆಯುತ್ತದೆ. ಇದರ ಒಂದು ವೈಶಿಷ್ಟ್ಯ ಹಾಗೂ ಅನುಕೂಲಕರವಾದ ಸಂಗತಿಯೆಂದರೆ ಇದರ ಬೇರುಗಳಿಗಿರುವ ಸಾಮರ್ಥ್ಯ. ಈ ಮರದ ಬೇರುಗಳು ಮಣ್ಣಿನ ಆಂತರಿಕ ಸಂರಚನೆಯಲ್ಲಿ ಬಹು ಮುಖ್ಯ ಪಾತ್ರವಹಿಸುತ್ತವೆ. ಮರದ ಸುತ್ತಲಿನ ಮಣ್ಣಿನ ಕಣಗಳನ್ನು ಬಿಗಿದಿಹಿಡಿದು ಮಣ್ಣು ಸವಕಲಾ( erosion)ಗದಂತೆ ಸಂರಕ್ಷಿಸುತ್ತವೆ. ಹಾಗೇ ಹೆಚ್ಚಿನ ನೀರಿನಾಸರೆಯಿಲ್ಲದೇ ಬೆಳೆಯುವ ಇದು ಜೀವವೈವಿಧ್ಯವನ್ನು ಪೋಷಿಸುವ ವಿಶಿಷ್ಟ ಮರವಾಗಿ ಹೆಗ್ಗರುತು ಉಳಿಸಿದೆ. ಇದರ ಹಣ್ಣು-ಬೀಜ ಹುಡುಕಿ ಬರುವ ಹತ್ತಾರು ಪ್ರಬೇಧದ ಪಕ್ಷಿಗಳ, ಕೀಟಗಳ ಜೀವನಾಧಾರವಾಗಿದೆ. ಆ ಮೂಲಕ ಆ ಜೀವಿಗಳ ಪೋಷಣೆ, ಆಶ್ರಯ, ಸಂತಾನದ ವಿಚಾರಗಳಿಗೆ ಆದ್ಯತೆಯ ಮರವಾಗಿ ಗುರುತಿಸಲ್ಪಟ್ಟಿದೆ. ಪಕ್ಷಿ, ಕೀಟಗಳಿಂದ ಸುಲಭವಾಗಿ ಬೀಜ ಪ್ರಸಾರ ಕಾರ್ಯ ಜರುಗುವುದಲ್ಲದೇ ನೈಸರ್ಗಿಕ ಹಸಿರೀಕರಣಕ್ಕೆ ಇಂಬು ನೀಡುತ್ತದೆ. ವಿಶಾಲ ಹಸಿರು ನೀಳ ಎಲೆಗಳ ರಚನೆ ಚಾಮರದಂತೆ ಜೀವಿಗಳ ಸುರಕ್ಷಿತ ಆಶ್ರಯಕ್ಕೆ ಹೇಳಿ ಮಾಡಿಸಿದಂತಿವೆ. ಬೂದು ಬಣ್ಣದ ಗಟ್ಟಿಯಾದ ಕಾಂಡ ಭಾಗ ಬಹುಉಪಯೋಗಿಯಾಗಿದೆ. ಗೃಹೋಪಯೋಗಿ ಸಾಮಗ್ರಿಗಳು ಹಾಗೂ ಬೋಟ್‌ನ ಭಾಗಗಳ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ಹೆಚ್ಚಾಗಿ ಛತ್ರ ಚಾಮರದಂತೆ ಕಂಗೊಳಿಸುವ ಈ ಮರ ದಣಿದ ಮನಸ್ಸಿಗೆ ನೆರಳು ನೀಡಿ ತಂಪೆರೆಯುತ್ತದೆ.

ನೇರಳೆ ಹಣ್ಣು ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಮಂಗ ಮತ್ತು ಮೊಸಳೆಯ ಪಂಚತಂತ್ರದ ಕಥೆ. ಈ ಕಥೆ ಕುರಿತು ಹೇಳುವುದೇನಿಲ್ಲ. ಆದರೆ ಸ್ವಾದಿಷ್ಟವಾದ, ರುಚಿಭರಿತ, ನೀಲ ವರ್ಣದ, ದುಂಡಾದ ಹಣ್ಣುಗಳನ್ನು ಗುಡ್ಡೆ ಹಾಕಿದ ಬುಟ್ಟಿಯಲ್ಲಿ ನೋಡುವುದೇ ಒಂದು ಆಕರ್ಷಣೆ. ಅಷ್ಟೇ ಅಲ್ಲ ಇಂತಹ ಹಣ್ಣುಗಳ ಹಿಂದೆ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕವಾದ ಉಪಯುಕ್ತತೆಯ ಹೆಗ್ಗಳಿಕೆ ಇದೆ. ಅಯೋಧ್ಯೆ ಶ್ರೀರಾಮನ ಮೈಬಣ್ಣ, ಆಕಾಶದಲ್ಲಿ ತೇಲುವ ಮೋಡಗಳ ಕಡು ನೀಲಿ ಬಣ್ಣ, ಜಂಬುಕೇಶ್ವರದ ಶಿವನ ದೇವಸ್ಥಾನದ ಹಿನ್ನಲೆ ಈ ಎಲ್ಲವನ್ನು ಗಮನಿಸಿದಾಗ ನೇರಳೆಯೊಂದಿಗೆ ಪಾರಂಪರಿಕ, ಕಲಾತ್ಮಕ ಹಾಗೂ ಭಾವನಾತ್ಮಕ ಸಂಬಂಧದ ನಂಟಿರುವುದು ಗೊತ್ತಾಗುತ್ತದೆ. ಆಯುರ್ವೇದದ ಪ್ರಕಾರ ಬಹು ಅಮೂಲ್ಯವಾದ ಔಷಧೀಯ ಗುಣಗಳಿಂದ ಈ ಹಣ್ಣು ಸಮೃದ್ಧವಾಗಿದೆ. ಜನ ಈ ಹಣ್ಣನ್ನು ಬಾಯಿ ಚಪ್ಪರಿಸಿ ತಿನ್ನಲು ಹೇಗೆ ಮುಗಿಬೀಳುವರೋ ಹಾಗೆ ಹಣ್ಣಿನೊಳಗಿನ ಒಗರು ರುಚಿಯ ಬೀಜವೂ ಆರೋಗ್ಯದ ದೃಷ್ಠಿಯಿಂದ ಮಹತ್ವದ್ದಾಗಿದೆ. 

ನೇರಳೆ ಹಣ್ಣು ಬೀಜಗಳು ಸಕ್ಕರೆ ಕಾಯಿಲೆ ಇರುವವರಿಗೆ ರಾಮಬಾಣದಂತೆ ಕಾರ್ಯ ಮಾಡುತ್ತವೆ. ಒಗರಾದ ಬೀಜಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅಲ್ಲದೇ ಜೀರ್ಣಕ್ರಿಯೆ ಯನ್ನು ಉತ್ತೇಜಿಸಿ ಹಸಿವು ಸುಲಭವಾಗಿಸುತ್ತವೆ. ಈ ಹಣ್ಣಿನ ಶರಬತ್ತು ಮಾಡಿ ಕುಡಿಯುವುದೂ ಇದೆ. ಇದರ ಪ್ರತಿ ಉತ್ಕರ್ಷಕ ಗುಣಗಳಿಂದಾಗಿ ವೈದ್ಯಕೀಯವಾಗಿ ಬಹು ಮನ್ನಣೆಗೆ ಒಳಗಾಗಿದೆ. ಚರ್ಮದ ಆರೈಕೆ, ಸುರಕ್ಷತೆ ಹಾಗೂ ಚಿಕಿತ್ಸೆಗೆ ಇದು ಪರಿಣಾಮಕಾರಿಯಾಗಿದೆ. ವೈದ್ಯರ ಸಲಹೆ ಮಾರ್ಗದರ್ಶನದಲ್ಲಿ ಮನೆ ಮದ್ದಾಗಿ ನೇರಳೆ ಬಳಸಿದಲ್ಲಿ ಸಾಕಷ್ಟು ಅನುಕೂಲ ಪಡೆಯಬಹುದು.

ಇಷ್ಟೆಲ್ಲದರ ನಡುವೆ ಸರ್ವ ಸಮೃದ್ಧ ಹಾಗೂ ಪಾರಿಸರಿಕ ಮಹತ್ವದ ನೇರಳೆ ಮರ ಪರಿಸರದ ಸಮತೋಲನ ಕಾಯುವಲ್ಲಿ, ಜೀವವೈವಿಧ್ಯವನ್ನು ಉಳಿಸುವಲ್ಲಿ, ಮಾನವ ಆರೋಗ್ಯದ ಹಿತದೃಷ್ಠಿಯಲ್ಲಿ ಅತ್ಯಂತ ಬೆಲೆ ಬಾಳುವಂತಿದೆ. ಇಂತಹ ಮರವನ್ನು ಹಣ್ಣುಗಾಗಿ ಮಾತ್ರವಲ್ಲದೇ ಸರ್ವರ ಹಿತಕ್ಕಾಗಿ ನಮ್ಮ ನಿಮ್ಮ ಮನೆಯ ಸುತ್ತ, ಹಿತ್ತಲು, ಹೊಲಗದ್ದೆಗಳಲ್ಲಿ ಬೆಳೆಸಬಹುದಲ್ಲವೇ ?

 ಆಕರಗಳು ;

1 ಜಾಮೂನ್- ಆನಂದವನ ಫೌಂಡೇಷನ್ 

2 ಕಲರವ ಬ್ಲಾಗ್ 

3 ಜಾಲತಾಣ 

 

No comments:

Post a Comment