Sunday, August 4, 2024

ಭಾಗ -2 ಭಾರತದ ಮುಟ್ಟಿನ ಗಂಡು ಅರುಣಾಚಲಂ

 ಭಾಗ -೨ 
ಭಾರತದ ಮುಟ್ಟಿನ ಗಂಡು ಅರುಣಾಚಲಂ

ಡಾ. ಎಂ.ಜೆ. ಸುಂದರ ರಾಮ್ 
 
ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು
  
ಹಾಗೂ ವಿಜ್ಞಾನ ಸಂವಹನಕಾರರು


    ಹಿಂದಿನ ಲೇಖನದಲ್ಲಿ ಅರುಣಾಚಲಂನ ಹುಚ್ಚಾಟಗಳ ಬಗ್ಗೆ, ಅದರಿಂದ ಆದ ಅನಾಹುತಗಳ ಬಗ್ಗೆ ತಿಳಿದುಕೊಂಡಿರಿ. ಆತನ ಹುಚ್ಚಾಟಗಳು ಇಷ್ಟೇ ಅಲ್ಲ, ಮುಂದೆ ಓದುತ್ತಾ ಹೋದಂತೆ ಯಾರಿಗಾದರೂ ಇವನೇನು ಹುಚ್ಚನೇ? ಎಂದೆನ್ನಿಸದಿರದು!!. 
    ಪತ್ನಿ ತನ್ನನ್ನು ತೊರೆದು ಹೋದರೂ ವಿಚ್ಛೇದನ ನೀಡಿದರೂ ಅರುಣಾಚಲಂ ಎದೆಗುಂದಲಿಲ್ಲ. ತನ್ನ ಪ್ರಯೋಗವನ್ನು  ಮುಂದುವರೆಸಿದ!!!. ತನ್ನ ಪ್ಯಾಡ್‌ಗಳು ಸಮರ್ಪಕವಾಗಿ ಕೆಲಸ ಮಾಡದಿರಲು ಕಾರಣ ಅರಸಲು ಅವನಿಗೆ ಹೊಸ ಉಪಾಯ ಹೊಳೆಯಿತು. ಕಂಪೆನಿ ಪ್ಯಾಡ್‌ಗಳ ರಚನೆಯನ್ನು ಅಧ್ಯಯನ ಮಾಡಿದರೆ ತನ್ನ ಸಮಸ್ಯೆಗೆ ಪರಿಹಾರ ಸಿಗಬಹುದೆನಿಸಿತು. ಆದರೆ ಅವನ್ನು ಹೇಗೆ ಪಡೆಯುವುದು? ಹೆಂಗಸರು ಬಳಸಿ ಎಸೆದಿದ್ದ ಹಳೆಯ ಪ್ಯಾಡ್‌ಗಳನ್ನು ತಂದು, ಅವುಗಳ ರಚನೆಯನ್ನು ಸೂಕ್ಷ್ಮವಾಗಿ ಪರೀಕ್ಷಿಸಲು ತೀರ್ಮಾನಿಸಿದ! ರಕ್ತಸಿಕ್ತವಾದ ಅನೇಕ ಹಳೆಯ ಪ್ಯಾಡ್‌ಗಳನ್ನು ಪ್ರತಿದಿನವೂ ಹುಡುಕಿ ತಂದು, ಯಾರಿಗೂ ಗೊತ್ತಿಲ್ಲದಂತೆ ಅವನ್ನು ಮನೆಯ ಹಿತ್ತಲಲ್ಲಿ ಗೋಣಿಚೀಲದಲ್ಲಿ ತುಂಬಿ ಗುಪ್ತವಾಗಿ ಒಂದೆಡೆ ಅವಿತಿಟ್ಟ. ಆದರೆ ಈಗಲೂ ಅವನ ಗ್ರಹಚಾರ ಸರಿಯಿರಲಿಲ್ಲ. ಒಮ್ಮೆ ಅವನ ತಾಯಿ ಸೀರೆ ಒಣಗಿಸಲು ಹಿತ್ತಲಿಗೆ ಬಂದಾಗ ಅರುಣಾಚಲಂ ಶೇಖರಿಸಿದ್ದ ಹಳೆಯ ಪ್ಯಾಡ್‌ಗಳ ಚೀಲದ ರಾಶಿ ಆಕಸ್ಮಿಕವಾಗಿ ಕಣ್ಣಿಗೆ ಬಿತ್ತು. ಅದನ್ನು ನೋಡಿ ಮಗನ ಹೀನ ಕೃತ್ಯವನ್ನು ನೆನೆದು ಬೆಚ್ಚಿ ಬಿದ್ದಳು. ಅವನು ಇಷ್ಟು ಕೀಳು ಮಟ್ಟಕ್ಕಿಳಿಯಬಹುದೆಂದು ಅವಳು ಅಂದುಕೊಂಡಿರಲಿಲ್ಲ. ಅತೀವ ದುಃಖದಿಂದ ಕೆಂಡಾಮಂಡಲವಾಗಿ ಅವನನ್ನು ಬಾಯಿಗೆ ಬಂದಂತೆ ಜರೆದು, ಬಿಕ್ಕಿ ಬಿಕ್ಕಿ ಅಳತೊಡಗಿದಳು. ಇವನೊಂದಿಗಿದ್ದರೆ ಇನ್ನೇನಾದೀತೋ ಎಂಬ ಭಯ ಕಾಡಿತು. ತಕ್ಷಣವೇ ತಾನು ಒಣಹಾಕಲು ತಂದಿದ್ದ ಒದ್ದೆ ಸೀರೆಯನ್ನು ನೆಲಕ್ಕೆ ಹರಡಿ, ತನ್ನೆಲ್ಲ ವಸ್ತುಗಳನ್ನು ಅದರಲ್ಲಿಟ್ಟು ಗಂಟು ಮೂಟೆ ಕಟ್ಟಿಕೊಂಡು ಮಗನನ್ನು ಬಿಟ್ಟು ಹೊರಟೇಬಿಟ್ಟಳು! ಎಷ್ಟೇ ಸಂತೈಸಿದರೂ ಅರುಣಾಚಲಂಗೆ ಅವಳನ್ನು ತಡೆಯಲು ಸಾಧ್ಯವಾಗಲಿಲ್ಲ. ತಾಯಿಗೇ ಮಗ ಅರ್ಥವಾಗದಿದ್ದ ಮೇಲೆ ಯಾರಾದರೂ ಇನ್ನೇನು ತಾನೇ ಹೇಳಿಯಾರು?   
ಅರುಣಾಚಲಂನ ಪೈಶಾಚಿಕ ನಡವಳಿಕೆಯಿಂದ ದೋಸಿಹೋಗಿದ್ದ ಊರ ಜನ, ಅವನಿಗೆ ದೆವ್ವ ಹಿಡಿದಿರಬೇಕೆಂದುಕೊಂಡರು. ಸರಪಾಳಿಯಿಂದ ಅವನ ಕೈಕಾಲು ಕಟ್ಟಿ, ಮರಕ್ಕೆ ತಲೆಕೆಳಕಾಗಿ ನೇತು ಹಾಕಿ, ಮಾಂತ್ರಿಕನನ್ನು ಕರೆಸಿ ದೆವ್ವ ಬಿಡಿಸಲು ಸಜ್ಜಾದರು. ಇದನ್ನರಿತ ಅರುಣಾಚಲಂ ಊರನ್ನೇ ತೊರೆದು ಪರಾರಿಯಾದ! 
ಇಷ್ಟೆಲ್ಲ ಆಘಾತಗಳಾದರೂ ಅರುಣಾಚಲಂ ಮಾತ್ರ ತನ್ನ ಹುಚ್ಚುಸಾಹಸವನ್ನು ಬಿಡಲಿಲ್ಲ. ತನ್ನ ಪ್ಯಾಡ್‌ಗಳು ಕಂಪೆನಿ ಪ್ಯಾಡ್‌ಗಳ ಗುಣಮಟ್ಟಕ್ಕೆ ಸಾಟಿಯಾಗದ್ದಕ್ಕೆ ಕಾರಣವನ್ನು ಹೇಗಾದರೂ ಪತ್ತೆಹಚ್ಚಲೇ ಬೇಕೆಂದು ನಿಶ್ಚಯಿಸಿದ. ಸುಮಾರು ಎರಡು ವರ್ಷಗಳು ಕಳೆದವು. ತಾನೊಬ್ಬ ಬಟ್ಟೆ ಗಿರಣಿ ಮಾಲೀಕನೆಂದೂ, ತನಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ತಯಾರಿಸುವ ವಿಶೇಷ ಆಸಕ್ತಿಯಿದ್ದು, ತನಗೆ ಸ್ಯಾನಿಟರಿ ಪ್ಯಾಡ್‌ಗಳ ಕೆಲವು ಸ್ಯಾಂಪಲ್‌ಗಳನ್ನು ಕಳಿಸಿಕೊಡಬೇಕೆಂದೂ ಅಮೆರಿಕದ ಸ್ಯಾನಿಟರಿ ಪ್ಯಾಡ್ ಕಂಪೆನಿಗೆ ಕಾಲೇಜು ಪ್ರೊಫೆಸರ್ ಮೂಲಕ ಅರುಣಾಚಲಂ ಆಂಗ್ಲದಲ್ಲಿ ಪತ್ರ ಬರೆಸಿದನು. ಕೆಲವು ದಿನಗಳಲ್ಲಿ ಅವನಿಗೆ ಅಮೆರಿಕ ಕಂಪೆನಿಯಿಂದ ಸ್ಯಾನಿಟರಿ ಪ್ಯಾಡ್‌ಗಳ ಪಾರ್ಸಲ್ ಬಂದಿತು. ಅದನ್ನು ಬಿಚ್ಚಿ ಅದರಲ್ಲಿದ್ದ ಪ್ಯಾಡ್‌ಗಳನ್ನು ಮನೆಯಲ್ಲೊಂದೆಡೆ ಜೋಪಾನವಾಗಿ ತೆಗೆದಿಟ್ಟನು. ಒಮ್ಮೆ ಅವನು ಮನೆಯಲಿಲ್ಲದಾಗ ಅವನ ನಾಯಿ ಆ ಪ್ಯಾಡ್‌ಗಳನ್ನು ಕೆದಕಿ, ಉಗುರಿನಿಂದ ಪರಚಿ, ಅವನ್ನು ಹರಿದುಬಿಟ್ಟಿತು. ಅರುಣಾಚಲಂ ನಾಯಿಯ ಮೇಲೆ ಕೆಂಡಾಮಂಡಲವಾ. ಆದರೆ ಆ ಹರಿದಿದ್ದ ಪ್ಯಾಡ್‌ಗಳಲ್ಲಿ ಸೆಲ್ಯುಲೋಸ್ ಎಳೆಗಳು ನೇತಾಡುತ್ತಿರುವ ಅಪೂರ್ವ ದೃಶ್ಯ ಅವನ ಕಣ್ಣು ಕುಕ್ಕಿತು! ನಾಯಿಯೇ ಆತನ ಸಹಾಯಕ್ಕೆ ಬಂದಂತಾಯಿತು. ಆವರೆಗೆ ಪ್ಯಾಡ್‌ಗಳ ತಯಾರಿಕೆಯಲ್ಲಿ ಸೆಲ್ಯುಲೋಸ್‌ನ ಬಳಕೆಯ ಸುಳಿವಿರಲಿಲ್ಲ. ಸ್ಯಾನಿಟರಿ ಪ್ಯಾಡ್ ರಚನೆಯ ಗುಟ್ಟು ಈಗ ನಾಯಿಯಿಂದ  ಬಹಿರಂಗವಾಯಿತು! ಸೆಲ್ಯುಲೋಸ್ ಎಳೆಗಳನ್ನು ಒತ್ತಿದರೆ ಅವು ಸ್ಪಂಜಿನಂತೆ ಮೃದುವಾಗಿ ಉಬ್ಬಿ, ಹೇರಳವಾಗಿ ದ್ರವವನ್ನು ಹೀರಿಕೊಂಡರೂ ತೇವವಿಲ್ಲದೆ ಶುಷ್ಕವಾಗಿಯೇ ಕಂಡವು!
ಅರುಣಾಚಲಂನ ಪತ್ತೆದಾರಿಕೆಯಲ್ಲಿ ಕೊನೆಗೂ ಕಳ್ಳ ಸಿಕ್ಕಿಬಿದ್ದ! ಪೀತದಾರು ವೃಕ್ಷದ ತಿರುಳಲ್ಲಿರುವ ಸೆಲ್ಯುಲೋಸ್ ನಾರುಗಳನ್ನು ಸ್ಯಾನಿಟರಿ ಪ್ಯಾಡ್ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಈ ನಾರುಗಳು ರಕ್ತವನ್ನು ಹೀರಿ, ಸೋರಿಕೆಯಾಗದಂತೆ ತಮ್ಮಲ್ಲೇ ಉಳಿಸಿಕೊಳ್ಳುತ್ತವೆ. ಜೊತೆಗೆ ಪ್ಯಾಡ್‌ಗಳ ಆಕಾರ ಸ್ವಲ್ಪವೂ ಕೆಡುವುದಿಲ್ಲ. ಪೀತದಾರು ವೃಕ್ಷದ ಸೆಲ್ಯುಲೋಸ್ ತಿರುಳನ್ನು ಪುಡಿಮಾಡಿ, ಗಟ್ಟಿಯಾಗಿ ಒತ್ತಿ ನೀಲಾತೀತ ಕಿರಣಗಳಿಂದ ನಿಷ್ಕ್ರಮೀಕರಣಗೊಳಿಸಿ ಪ್ಯಾಡ್‌ಗಳಾಗಿ ಪೊಟ್ಟಣ ಕಟ್ಟಿ ಸಿದ್ಧ ಪಡಿಸುವ ಯಂತ್ರವನ್ನು ಅರುಣಾಚಲಂ ತಯಾರಿಸಿದ. ಈಗ ಹೆಸರಾಂತ ಕಂಪನಿಗಳ ಗುಣಮಟ್ಟಕ್ಕೆ ಸರಿಸಾಟಿಯಾದ ಪ್ಯಾಡ್‌ಗಳು ತಯಾರಾದವು! 
    ಸೆಲ್ಯುಲೋಸನ್ನು ಮರದ ತೊಗಟೆಯಿಂದ ಬೇರ್ಪಡಿಸಿ, ಹದಮಾಡಿ, ಪರಿವರ್ತಿಸಿ, ಪ್ಯಾಡ್ ತಯಾರಿಸಿದಾಗ ಅವು ಅಮೆರಿಕ ಕಂಪೆನಿಯ ಪ್ಯಾಡ್‌ಗಳಷ್ಟೇ ಸಮರ್ಪಕವಾಗಿ ಕೆಲಸ ಮಾಡಿದವು. ಯಂತ್ರದ ಬೆಲೆ ೩೫೦,೦೦೦ರಿಂದ ೫೦೦,೦೦೦ ಡಾಲರ್! ಇದರ ಬೆಲೆ ಇಳಿಸಲು ಅರುಣಾಚಲಂ ನಾಲ್ಕೂವರೆ ವರ್ಷ ಸತತವಾಗಿ ದುಡಿದ. ತನ್ನ ಪ್ರಯತ್ನದಿಂದ ಯಂತ್ರವನ್ನು ತಯಾರಿಸಿ, ಅದರ ಬೆಲೆಯನ್ನು ಕೇವಲ ೬೫,೦೦೦ ರೂಪಾಯಿಗಳಿಗೆ ಇಳಿಸಿದನು! ಇದರಿಂದ ಶಾಲೆಗಳು, ಸ್ತ್ರೀ ಸ್ವಸಹಾಯ ಸಂಘಗಳು ಈ ಯಂತ್ರದ ಸಹಾಯದಿಂದ ಅಗ್ಗದ ಪ್ಯಾಡ್‌ಗಳನ್ನು ತಯಾರಿಸಲಾರಂಭಿಸಿದವು. ಒಬ್ಬ ಮಹಿಳೆಯು ಸುಮಾರು ೩ ಗಂಟೆಗಳಲ್ಲಿ ಪ್ಯಾಡ್ ತಯಾರಿಸುವ ತಾಂತ್ರಿಕತೆಯನ್ನು ಕಲಿಯುವುದರ ಜೊತೆಗೆ ತನ್ನೊಡನೆ ಇನ್ನೂ ಮೂವರಿಗೆ ಉದ್ಯೋಗ ನೀಡಬಹುದಾಗಿತ್ತು. ಅರುಣಾಚಲಂ ಪ್ರತಿ ಯಂತ್ರ ೩೦೦೦ ಹೆಣಮಕ್ಕಳು ಪ್ಯಾಡ್‌ಗಳನ್ನು ಉಪಯೋಗಿಸುವಂತೆ ಮಾಡಿ, ೧೦ ಮಹಿಳೆಯರಿಗೆ ನೌಕರಿ ಒದಗಿಸುತ್ತಿತ್ತು. ಒಂದು ಯಂತ್ರ ಒಂದು ದಿನಕ್ಕೆ ೨೦೦-೨೫೦ ಪ್ಯಾಡ್‌ಗಳನ್ನು ತಯಾರಿಸಬಲ್ಲದು. ಹೀಗೆ ತಯಾರಿಸಿದ ಪ್ರತಿ ಪ್ಯಾಡಿನ ಬೆಲೆ ಕೇವಲ ೨.೫೦ ಅಥವಾ ೩ ರೂಪಾಯಿಗಳಷ್ಟೆ! ಇದರಿಂದ ಮಹಿಳೆಯರ ಸಬಲೀಕರಣವಾಗಿ, ಅನೇಕ ಗ್ರಾಮಾಂತರ ಮಹಿಳೆಯರಿಗೆ ಉದ್ಯೋಗಾವಕಾಶ ಸಿಕ್ಕಿತು. ಇದರಿಂದ ಅವರಲ್ಲಿ ಶುಚಿತ್ವದ ಅರಿವು ಮೂಡಿ, ಆರೋಗ್ಯಕರ ಪ್ಯಾಡ್‌ಗಳನ್ನು ಬಳಸತೊಡಗಿದರು. ಗ್ರಾಮಾಂತರ ಹೆಣ್ಣು ಮಕ್ಕಳ ಆರೋಗ್ಯ ಸುಧಾರಿಸಿ, ಅವರ ಲೈಂಗಿಕ ಸಂಬಂಧಿತ ಕಾಯಿಲೆಗಳು ಮತ್ತು ಸಾವುಗಳ ಪ್ರಮಾಣ ಗಣನೀಯವಾಗಿ ಇಳಿಯಿತು!!.
    ಅರುಣಾಚಲಂನ ಯಶೋಗಾಥೆ ಅನೇಕ ಯುವಕ ಯುವತಿಯರಿಗೆ ಸ್ಫೂರ್ತಿಯಾಗಿದೆ. ಇವನ ಸಾಧನೆಯ ರೋಚಕ ಹಾದಿಯು ಒಬ್ಬ ಶ್ರೇಷ್ಟ ವಿಜ್ಞಾನಿಯ ಸಾಧನೆಗೆ ಯಾವುದೇ ರೀತಿಯಲ್ಲೂ ಕಡಿಮೆಯಲ್ಲ. ಸರಿ ಸಾಟಿಯಾಗಿದೆ. ತನಗಾಗಿ ಏನನ್ನೂ ಬಯಸದೆ, ಮೂಢನಂಬಿಕೆಯಲ್ಲಿ ಮುಳುಗಿದ್ದ ಗ್ರಾಮಾಂತರ ಮಹಿಳೆಯರನ್ನು ಮೇಲೆತ್ತಿ, ಅಗ್ಗದ ಪ್ಯಾಡ್ ತಯಾರಿಸುವ ಯಂತ್ರವನ್ನು ಜೋಡಿಸಿ, ಅದರಿಂದ ಎಲ್ಲರ ಕೈಗೆ ತಲುಪುವ ಸ್ಯಾನಿಟರಿ ಪ್ಯಾಡ್‌ಗಳನ್ನು ತಂದು ಸಾವಿರಾರು ಗ್ರಾಮಾಂತರ ಹೆಣ್ಣುಮಕ್ಕಳಿಗೆ ಉದ್ಯೋಗಾವಕಾಶ ಕಲ್ಪಿಸಿ ಕೊಟ್ಟದ್ದು ಯಾವುದೇ ಬಾಲಿವುಡ್‌ ಸಿನಿಮಾದ ಯಶೋಗಾಥೆಗೂ ಕಡಿಮೆ ಇಲ್ಲ.
ಹೆಂಡತಿ, ತಾಯಿಯಿಂದ ಶಾಪಗ್ರಸ್ತನಾಗಿ, ಛೀಮಾರಿ ಹಾಕಿಸಿಕೊಂಡ. ಊರ ಜನರು ಇವನನ್ನು ಹೀನಾಯವಾಗಿ ಜರೆದರು. ತನ್ನ ಸರ್ವಸ್ವವನ್ನೂ ಕಳೆದುಕೊಂಡು ಅವಮಾನಿತನಾಗಿ ಹುಚ್ಚನಂತೆ ಬೀದಿಗಳಲ್ಲಿ ಅಲೆದು, ತಾನೇ ಬಲಿಪಶುವಾಗಿ, ಎಲ್ಲರಿಂದಲೂ ಪೆಟ್ಟು ತಿಂದನು. ಅವನ ಸಂಶೋಧನೆಯಲ್ಲಿ ಆಡಂಬರ, ಅಹಂಕಾರದ ಹೇಳಿಕೆಗಳಾಗಲಿ, ಘೋಷಣೆಗಳಾಗಲಿ, ಪ್ರಚಾರದ ಅಬ್ಬರವಾಗಲಿ ಇರಲಿಲ್ಲ. ತನ್ನ ಪತ್ನಿಯ ಆರೋಗ್ಯ ಮತ್ತು ಶುಚಿತ್ವಕ್ಕಾಗಿ ಪ್ಯಾಡ್‌ಗಳನ್ನು ತಯಾರಿಸಿ, ಅವಳನ್ನು ಖುಷಿಪಡಿಸಬೇಕೆಂಬ ಉದ್ದೇಶದಿಂದ ಪ್ರಾರಂಭಿಸಿದ ಪ್ಯಾಡ್ ತಯಾರಿಕೆ ಅವನನ್ನು ಒಂಟಿಯಾಗಿಸಿತು. ಆದರೂ ಛಲದಂಕಮಲ್ಲನಂತೆ ಹೋರಾಡಿ, ಕೊನೆಗೆ ತನ್ನ ಗುರಿಯನ್ನು ಸಾಧಿಸಿದ ಅರುಣಾಚಲಂ ಒಬ್ಬ ಅತಿಶ್ರೇಷ್ಠ ಸಂಶೋಧಕನ ಲಕ್ಷಣಗಳು, ತಾಳ್ಮೆ, ನಾಯಕತ್ವದ ಗುಣಗಳನ್ನು ಪ್ರದರ್ಶಿಸಿ ಆದರ್ಶಪ್ರಾಯನಾಗಿದ್ದಾನೆ.    
ಅರುಣಾಚಲಂ ಸುಮಾರು ೧೫೦೦ ಯಂತ್ರಗಳನ್ನು ನಮ್ಮ ದೇಶದಲ್ಲಿ ಮಾರಿದುದಲ್ಲದೆ ಅಭಿವೃದ್ಧಿ ಹೊಂದುತ್ತಿರುವ ಹಲವು ದೇಶಗಳಿಗೂ ರಫ್ತುಮಾಡಿ ಮೌನ ಕ್ರಾಂತಿಯ ಮೂಲಕ ಉದ್ಯಮಶೀಲತೆಗೆ ನೂತನ ಭಾಷ್ಯವನ್ನು ಬರೆದಿದ್ದಾನೆ. ಅವರ ಸಾಧನೆ ಒಂದು ಸವಾಲಾಗಿ ಪ್ರಾರಂಭವಾಗಿ, ಮುಜುಗರದಲ್ಲಿ ಮುಳುಗಿಸಿ, ಮಾನವೀಯ ಗುಣಗಳೊಂದಿಗೆ ಕೊನೆಗೊಂಡಿತು! ಸುಮಾರು ಹತ್ತು ಲಕ್ಷ ಸ್ತ್ರೀಯರ ಜೀವನೋಪಾಯಕ್ಕೆ ಕಾರಣವಾಗಿ, ಸ್ಯಾನಿಟರಿ ಪ್ಯಾಡ್‌ಗಳ ಬಳಕೆಯನ್ನು ಜನಪ್ರಿಯಗೊಳಿಸಿತು. ಪ್ಯಾಡ್ ಬಳಸುವ ಹೆಣ್ಣುಮಕ್ಕಳ ಸಂಖ್ಯೆಯನ್ನು ೨ರಿಂದ ೧೦೦%ಗೆ ಏರಿಸಲು ನಾನು ಮಾಡಿದ ಪ್ರಯತ್ನ ಸಫಲವಾಗಿದೆ. ಅಜ್ಞಾನಿ ಮತ್ತು ಬಡ ಹೆಣ್ಣುಮಕ್ಕಳ ಬಗ್ಗೆ ಯಾರೂ ಚಿಂತಿಸುವುದಿಲ್ಲ. ನನ್ನ ಯಂತ್ರದಿಂದ ಅವರು ಗೌರವದಿಂದ ಬಾಳುವಂತಾಗಿದೆನ್ನುತ್ತಾನೆ ಅರುಣಾಚಲಂ. ಅಂಡಿಗಳಲ್ಲಿ ಸಾಮಾನ್ಯವಾಗಿ ಪುರುಷರೇ ವ್ಯಾಪಾರ ವಹಿವಾಟನ್ನು ನಡೆಸುವುದರಿಂದ ಸ್ಯಾನಿಟರಿ ಪ್ಯಾಡ್ ಕೊಳ್ಳಲು ಹೆಣ್ಣುಮಕ್ಕಳು ಹಿಂದೇಟು ಹಾಕುತ್ತಿದ್ದರು. ಆದರೆ ಈಗ ಸ್ತ್ರೀಯರೇ ಪ್ಯಾಡ್ ತಯಾರಿಸಿ ಮಾರುವುದರಿಂದ ಹೆಣ್ಣುಮಕ್ಕಳು ಅವರೊಂದಿಗೆ ಮುಕ್ತವಾಗಿ ಮಾತನಾಡಿ ತಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳುತ್ತಿದ್ದಾರೆ.
    ೨೦೧೪ರಲ್ಲಿ ಟೈಮ್ಸ್ ಮ್ಯಾಗಜಿನ್‌ನ ವಿಶ್ವದ ೧೦೦ ಅತಿ ಪ್ರಭಾವೀ ವ್ಯಕ್ತಿಗಳ ಪಟ್ಟಿಯಲ್ಲಿ ಅರುಣಾಚಲಂ ಹೆಸರು ಸೇರಿದೆ. ಇವನ ಸಂಶೋಧನೆಯನ್ನು ಮೆಚ್ಚಿ ಕೇಂದ್ರ ಸರ್ಕಾರವು ೨೦೧೬ರಲ್ಲಿ ಇವನಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿತು. ಕೊಯಮುತ್ತೂರಿನ ರೋಟರಿ ಸಂಸ್ಥೆ ಕೊಯಮುತ್ತೂರಿನ ಆಭರಣವೆಂಬ ಬಿರುದನ್ನು ನೀಡಿ ಗೌರವಿಸಿದೆ. ಇವ ಸಾಧನೆಯನ್ನು ಅಧಿಕೃತವಾಗಿ ದಾಖಲಿಸಲು, ಜನರನ್ನು ಉತ್ತೇಜಿಸಲು ‘ಭಾರತದ ಮುಟ್ಟಿನ ಗಂಡು’ ಎಂಬ ೬೩ ನಿಮಿಷಗಳ ಕಿರುಚಿತ್ರವನ್ನು ತಯಾರಿಸಿದ್ದಾರೆ.

   ನನ್ನ ಪತಿಯು ಟಿವಿಯಲ್ಲಿ ಮಾತನಾಡುವುದನ್ನು ನೋಡಿದೆ. ಪತ್ರಿಕೆಗಳಲ್ಲಿ ಅವರ ಸಮಾಜಸೇವೆಯನ್ನು ಹೊಗಳಿ ಬರೆದಿರುವ ಲೇಖನಗಳನ್ನು ಓದಿದೆ. ಅವರ ನಿಸ್ವಾರ್ಥ ಸೇವೆಯನ್ನು ನಾನು ತಪ್ಪಾಗಿ ಗ್ರಹಿಸಿ, ಬಲು ದೊಡ್ಡ ತಪ್ಪು ಮಾಡಿಬಿಟ್ಟೆ. ನನಗೆ ಈಗ ನನ್ನ ತಪ್ಪಿನ ಅರಿವಾಗಿದೆ. ೫ ವರ್ಷಗಳ ಬಳಿಕ ಅವರೊಡನೆ ದೂರವಾಣಿಯ ಮೂಲಕ ಮಾತನಾಡುವ ಧೈರ್ಯ ಮಾಡಿದೆ. ಅಳುಕುತ್ತಲೇ ಅವರನ್ನು ಮಾತನಾಡಿಸಿದೆ. ಅವರು ಯಾವ ಕೋಪ, ಬೇಸರವಿಲ್ಲದೆ ನನ್ನೊಡನೆ ಸಹಜವಾಗಿ, ಆತ್ಮೀಯವಾಗಿ ಮಾತನಾಡಿದರು. ನನಗೆ ತುಂಬಾ ಖುಷಿಯಾಯಿತು. ನಮ್ಮಿಬ್ಬರಲ್ಲಿದ್ದ ಮನಸ್ತಾಪ, ಅಪನಂಬಿಕೆ ಮಂಜಿನಂತೆ ಕರಗಿ, ನಾವು ಮತ್ತೆ ಒಂದಾದೆವು ಎಂದು ಹೇಳುತ್ತಾಳೆ ಶಾಂತಿ. ತನ್ನ ಗ್ರಾಮದ ಯಾವುದಾದರೂ ಹೆಣ್ಣುಮಗು ಮೈನೆರೆದರೆ ಶಾಂತಿ ಅವರ ಮನೆಗೆ ಹೋಗಿ ಅರುಣಾಚಲಂ ತಯಾರಿಸಿದ ಹೊಸ ಸ್ಯಾನಿಟರಿ ಪ್ಯಾಡನ್ನು ಅವಳಿಗೆ ಬಳುವಳಿಯಾಗಿ ಕೊಟ್ಟು, ಅದನ್ನು ಬಳಸುವ ರೀತಿಯನ್ನು ವಿವರಿಸಿ ಬರುತ್ತಾಳೆ!. ಅರುಣಾಚಲಂನ ಪ್ಯಾಡ್ ತಯಾರಿಕೆ ಯಂತ್ರದ ಹಕ್ಕುಗಳನ್ನು ಪಡೆಯಲು ಅನೇಕ ಉದ್ಯಮಿಗಳು ಮುಂದಾದರು. ಆದರೆ ಅರುಣಾಚಲಂ ಇದಕ್ಕೆ ಒಪ್ಪಲಿಲ್ಲ. ‘ನಾನು ಹಣಗಳಿಸುವ ಆಸೆಯಿದ್ದರೆ ನಾನು ಯಾವತ್ತೋ ಅತಿದೊಡ್ಡ ಶ್ರೀಮಂತನಾಗಿರುತ್ತಿದ್ದೆ. ಆದರೆ ನನ್ನ ಗ್ರಾಮ ಹೆಣ್ಣುಮಕ್ಕಳ ಮೂಢನಂಬಿಕೆ ಮತ್ತು ಅಜ್ಞಾನವನ್ನು ಹೋಗಲಾಡಿಸುದೇ ನನ್ನ ಸಂಕಲ್ಪ. ಅದಕ್ಕಾಗಿಯೇ ನಾನು ಇಷ್ಟು ದಿನವೂ ದುಡಿದೆ. ನನ್ನ ಸಾಧನೆಯನ್ನು ಮಾರಿಕೊಂಡು ನನ್ನ ಮನೋ ನೆಮ್ಮದಿಯನ್ನು ಕಳೆದುಕೊಳ್ಳಲಾರೆ’ ಎಂದಿದ್ದಾನೆ ಅರುಣಾಚಲಂ. ಎಂತಹ ಉದಾತ್ತ ನಿರ್ಧಾರ!

No comments:

Post a Comment