Sunday, August 4, 2024

ಟ್ವಿಂಕಲ್.. ಟ್ವಿಂಕಲ್... ಲೀಥಿಯಂ ಸ್ಟಾರ್ !

ಟ್ವಿಂಕಲ್.. ಟ್ವಿಂಕಲ್...ಲೀಥಿಯಂ ಸ್ಟಾರ್ !

 ಲೇಖಕರು : ರಮೇಶ, ವಿ,ಬಳ್ಳಾ

ಅಧ್ಯಾಪಕರು, ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು

(ಪ್ರೌಢ) ಗುಳೇದಗುಡ್ಡ ಜಿ: ಬಾಗಲಕೋಟ

ಮೊ: ೯೭೩೯೦೨೨೧೮೬

ಬೆಳಿಗ್ಗೆ ಪತ್ರಿಕೆಗಳನ್ನು ಓದುತ್ತಿದ್ದೆ. ಮಗ ಓಡಿ ಬಂದು ಪತ್ರಿಕೆ ಮೇಲೆ ಎಳೆದ. ಒಂದು ಪುಟದ ಅಂಚು ಸ್ವಲ್ಪ ಹರಿದು ಹೋಯಿತು. ತಕ್ಷಣ ಸಿಟ್ಟು ಮಾಡಿ ಗದರಿಸಿದೆ. ಮಗ ತಕ್ಷಣ ಏನು ತಿಳಿಯಿತೋ ಏನೊ ಓಡಿ ಹೋಗಿ ಪಕ್ಕದ ಮನೆಯಲ್ಲಿನ ಮತ್ತೆರಡು ಪತ್ರಿಕೆಗಳನ್ನು ಹಿಡಿದು ತಂದು ‘ತಗೋ ಪಪ್ಪಾ ! ಓದು’ ಎಂದು ಕೋಪದಿಂದಲೇ ಕೊಟ್ಟ. ಅಯ್ಯೋ ಇದೇನು ಕಥೆ ಎಂದು ಸುಮ್ಮನೆ ಓದಿದೆ. ಆದರೆ ಆ ದಿನದ ಅಷ್ಟೂ ಪತ್ರಿಕೆಗಳಲ್ಲಿ ಒಂದು ವಿಷಯ ಮಾತ್ರ ತುಂಬಾ ರಾರಾಜಿಸುತ್ತಿದ್ದದ್ದು ಕಣ್ಣಿಗೆ ಎದ್ದು ಕಂಡಿತು. ಹೌದು ! ಅದು ‘ಲೀಥಿಯಂ’ ಕುರಿತಾದದ್ದು. ಇತ್ತೀಚೆಗೆ ಈ ಲೀಥಿಯಂನ ನಿಕ್ಷೇಪಗಳು ಭಾರತದಲ್ಲಿ ಪತ್ತೆಯಾಗಿ ಸುದ್ಧಿ ಮಾಡಿವೆ. ಆ ಸುದ್ಧಿಯ ಗುಂಗಿನಲ್ಲಿರುವಾಗಲೇ ಮಗ ಟ್ವಿಂಕಲ್ ಟ್ವಿಂಕಲ್ ಅಂತಾ. . . ಹಾಡುತ್ತಾ ಮತ್ತೇ ಓಡೋಡಿ ಬಂದ. ಆಗ ನನ್ನ ಪತ್ರಿಕೆ ಓದಿನ ಮುಖ್ಯ ವಿಷಯ ‘ಲೀಥಿಯಂ’ ಸ್ಟಾರ್ ಆಗಿ ಹೊಳೆಯುತ್ತಿದ್ದದ್ದನ್ನು ನೋಡಿ ‘ಟ್ವಿಂಕಲ್.. ಟ್ವಿಂಕಲ್... ಲಿಥೀಯಂ ಸ್ಟಾರ್ ! ಎಂದು ಹೇಳಬೇಕೆನಿಸಿತು. ನಿಜ! ಅಷ್ಟರ ಮಟ್ಟಿಗೆ ಲೀಥಿಯಂ ಚರ್ಚೆಯಾಗುತ್ತಿದೆ.

ಲೀಥಿಯಂಗೆ ಯಾಕೆ ಇಷ್ಟು ಮಹತ್ವ ?

ಲೀಥಿಯಂ ಒಂದು ಸೀಮಿತ ಲಭ್ಯತೆ ಹೊಂದಿದ ಅತ್ಯಂತ ಉಪಯುಕ್ತ ಧಾತು. ನಮ್ಮ ಮುಂದುವರೆದ ಜ್ಞಾನ ಕ್ಷೀಪ್ರತೆಯಲ್ಲಿ ಆಧುನಿಕವಾಗಿ ಬಹಳಷ್ಟು ಆವಿಷ್ಕಾರಗಳು ಬೆಳಕಿಗೆ ಬಂದಿವೆ. ಇಂದಿನ ನಮ್ಮ ಬದಲಾದ ಜೀವನಶೈಲಿ, ತ್ವರಿತ ಕಾರ್ಯಾಚರಣೆ, ಹೆಚ್ಚಿದ ಅವಶ್ಯಕತೆಗಳು ಹೊಸ ಹೊಸದನ್ನು ಹುಡುಕುವಂತೆ ಮಾಡುತ್ತಿವೆ. ಹಾಗಾಗಿ ನಾವಿಂದು ಬಳಸುವಂತಹ ಬಹುತೇಕ ತಾಂತ್ರಿಕತೆಯ ಅದರಲ್ಲೂ ಇಲೆಕ್ಟ್ರಿಕಲ್ ಹಾಗೂ ಇಲೆಕ್ಟ್ರಾನಿಕ್ ಉಪಕರಣಗಳು, ಬ್ಯಾಟರಿಗಳು, ಸೋಲಾರ್ ಸಾಮಗ್ರಿಗಳು, ಸಿರಾಮಿಕ್, ಗಾಜು, ಪಾಲಿಮರ್ ಮುಂತಾದವುಗಳ ತಯಾರಿಕೆಯಲ್ಲಿ ಲೀಥಿಯಂನ ಪಾತ್ರ ಬಹು ದೊಡ್ಡದಿದೆ. ಹಾಗಾಗಿ ಲೀಥಿಯಂ ಮುನ್ನಲೆಗೆ ಬಂದಿದೆ. ಆದರೆ ಅಷ್ಟೂ ಉತ್ಪಾದನೆಯ ಮೂಲ ಬೇರು ಆದ ಈ ಧಾತುವಿಗಾಗಿ ನಾವು ಇಂದು ಬೇರೆ ದೇಶಗಳನ್ನು ಆಶ್ರಯಿಸಬೇಕಾಗಿದೆ. ನಮ್ಮ ಅವಶ್ಯಕತೆಯ ೧೦೦% ರಷ್ಟು ಲೀಥಿಯಂ ವಿದೇಶಗಳಿಂದಲೇ ಆಮದಾಗುತ್ತಿರುವುದು ವಾಸ್ತವ ಸಂಗತಿ.

ಇಂತಹ ಸಂದರ್ಭದಲ್ಲಿ ಮರುಭೂಮಿಯಲ್ಲಿ ಸಿಗುವ ಚಿಕ್ಕ ಚಿಕ್ಕ ನೀರಿನ ಆಸರೆ ಓಯಸಿಸ್ ಹಾಗೇ ನಮ್ಮ ದೇಶದಲ್ಲೂ ಲೀಥಿಯಂ ದೊರೆತರೆ ಅದಕ್ಕಿಂತ ಭಾಗ್ಯ ಇನ್ನೊಂದಿರಲಿಕ್ಕಿಲ್ಲ. ಇತ್ತೀಚಿನ ಸುದ್ಧಿಯಂತೆ ಆ ಭಾಗ್ಯದ ಬಾಗಿಲು ತೆರೆದಿರುವ ಸುಳಿವು ಸಿಕ್ಕಿದೆ. ವಿಜ್ಞಾನಿಗಳಲ್ಲಿ ಕುತೂಹಲ ಹೆಚ್ಚಿಸಿ ದೇಶವನ್ನು ಸ್ವಾವಲಂಬನೆಯತ್ತ ಕೊಂಡೊಯ್ಯುವ ಕನಸು ಚಿಗುರಿಸಿದೆ.

ಲೀಥಿಯಂ ನಿಕ್ಷೇಪಗಳು ಎಲ್ಲಿ ?

ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಜಮ್ಮು ಕಾಶ್ಮೀರ ಪ್ರಾಂತ ಭಾಗದಲ್ಲಿ ಲೀಥಿಯಂ ನಿಕ್ಷೇಪಗಳು ಪತ್ತೆಯಾಗಿರುವುದನ್ನು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷನಾಲಯದ(Geological Survey of India) ಉನ್ನತ ಅಧ್ಯಯನ ತಂಡ ಪತ್ತೆ ಮಾಡಿದೆ. ಅತ್ಯಮೂಲ್ಯ ಖನಿಜ ಸಂಪತ್ತಾದ ಲೀಥಿಯಂ ಅಪರೂಪವೆಂಬಂತೆ ಪ್ರಸಿದ್ಧ ವೈಷ್ಣೋದೇವಿ ಪರ್ವತಗಳ ಸಾಲಿನಲ್ಲಿ ಬೆಳಕಿಗೆ ಬಂದಿದ್ದು ಜಗತ್ತಿನ ಕಣ್ಣು ಭಾರತದತ್ತ ಹೊರಳುವಂತೆ ಮಾಡಿದೆ. ಈ ನಿಕ್ಷೇಪ ಸುಮಾರು ೫೯ ಲಕ್ಷ ಟನ್‌ದಷ್ಟಿದ್ದು ಚೀನಾವನ್ನೇ ಹಿಂದಿಕ್ಕುವ ಮುನ್ಸೂಚನೆ ನೀಡಿದೆ. ಅಂತೆಯೇ ಭಾರತ ಲೀಥಿಯಂ ನಿಕ್ಷೇಪ ಹೊಂದಿರುವ ವಿಶ್ವದ ೩ನೇ ದೊಡ್ಡ ರಾಷ್ಟ್ರವಾಗಿ ಕಂಗೊಳಿಸಲಿದೆ. ಅಂದರೆ ೯೩ ಲಕ್ಷ ಟನ್ ನಿಕ್ಷೇಪ ಹೊಂದಿರುವ ಚಿಲಿ ದೇಶ ಹಾಗೂ ೬೩ ಲಕ್ಷ ಟನ್ ಹೊಂದಿರುವ ಆಸ್ಟ್ರೇಲಿಯಾ ಮೊದಲೆರಡು ಸ್ಥಾನದಲ್ಲಿವೆ. ನಂತರದಲ್ಲಿ ಭಾರತ ಗುರುತಿಸಿಕೊಳ್ಳಲಿದೆ.

ನಮ್ಮ ಇಂದಿನ ಬಹಳಷ್ಟು ಇಲೆಕ್ಟ್ರಾನಿಕ್ ಉಪಕರಣಗಳಿಗೆ ಬ್ಯಾಟರಿಯ ಅವಶ್ಯಕತೆ ಇದೆ. ಆ ಬ್ಯಾಟರಿಗಳ ಮೂಲ ಈ ಲೀಥಿಯಂ ಎಂಬ ಬಿಳಿ ಬಂಗಾರ. ನಾವಿಂದು ಬಳಸುವ ಮೊಬೈಲ್ ಫೋನ್‌ಗಳು, ಸೋಲಾರ್ ಫಲಕಗಳು, ಇಲೆಕ್ಟ್ರಿಕ್ ಕಾರುಗಳು, ಲ್ಯಾಪ್‌ಟಾಪ್‌ಗಳು ಮುಂತಾದವು ಕಾರ್ಯ ನಿರ್ವಹಿಸುವಲ್ಲಿ ಇದರ ಪಾತ್ರ ಹೆಚ್ಚಿದೆ.

ಲೀಥಿಯಂ ನಿಜವಾಗಿಯೂ ಏನು ?

ನಮ್ಮ ಆವರ್ತಕ ಕೋಷ್ಠಕದ ಪ್ರಕಾರ S ಬ್ಲಾಕ್‌ಗೆ ಸೇರಿದ ಲೀಥಿಯಂ ಮೊದಲ ಕಂಬ (group) ಸಾಲಿನ ಎರಡನೆಯ ಹಾಗೂ ಎರಡನೇ ಅಡ್ಡಸಾಲಿ (period)ನಲ್ಲಿನ ಮೊದಲ ಸದಸ್ಯ ಧಾತು. Li ಸಂಕೇತ ಹೊಂದಿರುವ ಇದರ ಪರಮಾಣು ಸಂಖ್ಯೆ (Z) ೩ ಆಗಿದ್ದು, ರಾಶಿ ಸಂಖ್ಯೆಯು (A) ೬.೯೪೧ ಆಗಿದೆ. ಲೀಥಿಯಂನಲ್ಲಿರುವ ಲಿಥೋಸ್ ಪದ ಹೇಳುವಂತೆ ಇದು ಸ್ಟೋನ್ ಎಂಬ ಅರ್ಥ ಕೊಡುತ್ತದೆ. ಇದು ಒಂದು ಬಿಳಿ ಬೆಳ್ಳಿ ಬಣ್ಣದ ಕ್ಷಾರ ಘನ ಲೋಹವಾದರೂ ಮೃದುವಾಗಿದೆ. ಎಷ್ಟು ಮೃದು ಎಂದರೆ ಚಾಕುವಿನಿಂದ ಸುಲಭವಾಗಿ ಕತ್ತರಿಸಿ ಬಿಡಬಹುದು. ಹೆಚ್ಚು ಕ್ರಿಯಾಪಟುವಾಗಿದ್ದು, ಹೊತ್ತಿಕೊಳ್ಳುವ (flammable) ಗುಣ ಹೊಂದಿರುವ ಕಾರಣ ನಿರ್ವಾತ ಪ್ರದೇಶ, ಜಡ ವಾತಾವರಣ (inert atmosphere) ಅಥವಾ ಜಡದ್ರವ (inert liquid) ಗಳಾದ ಶುದ್ಧೀಕರಿಸಿದ ಸೀಮೆಎಣ್ಣೆ (kerosene) ಯಲ್ಲಿ ಹಾಗೂ ಖನಿಜ ಎಣ್ಣೆ (mieral oil) ಯಲ್ಲಿ ಇದನ್ನು ಸಂಗ್ರಹಿಸಲಾಗುತ್ತದೆ. ಇದು ಬಹುತೇಕ ಲೋಹಗಳಂತೆ ಹೊಳೆಯುವ(lustre) ಲಕ್ಷಣವಿದ್ದರೂ, ಗಾಳಿಯೊಂದಿಗೆ ಬಹುಬೇಗ ವರ್ತಿಸಿ ಕಪ್ಪು ಬಣ್ಣಕ್ಕೆ ತಿರುಗಿ ಬದಲಾಗುತ್ತದೆ. ಬಹುತೇಕ ಕಬ್ಬಿಣದಂತೆ ತುಕ್ಕು ಹಿಡಿಯುವ ಗುಣವೂ ಇದಕ್ಕಿದೆ. ೧೮೧೭ರಲ್ಲಿ ಜೋಹಾನ್ ಅಗಷ್ಟ್ ರ‍್ಫವೆಸನ್ ಈ ಧಾತುವನ್ನು ಕಂಡುಹಿಡಿದ.

ಬ್ರಹ್ಮಾಂಡ ರೂಪುಗೊಂಡ ಪರಿಕಲ್ಪನೆಯ ಹಿಂದಿನ ಸತ್ಯ ಬಿಗ್ ಬ್ಯಾಂಗ್ ಸಿದ್ಧಾಂತ. ಆ ಸಂದರ್ಭದಲ್ಲಿ ಘಟಿಸಿದ ಘಟನಾವಳಿಗಳು ಹಲವು ಹೊಸತುಗಳಿಗೆ ನಾಂದಿ ಆದವು. ಹಾಗೇ ರೂಪುಗೊಂಡ ಹಲವು ಧಾತುಗಳಲ್ಲಿ ಲೀಥಿಯಂ ಕೂಡ ಒಂದು. ಇದು ಭೂ ಮೇಲ್ಮೆ ಮೇಲೆ ಮಾತ್ರವಲ್ಲದೇ ಮಂಗಳ ಗ್ರಹ, ಭೂಮಿಯ ಉಪಗ್ರಹವಾದ ಚಂದ್ರನಲ್ಲೂ, ಅಷ್ಟೇ ಏಕೆ ಕ್ಷುದ್ರ ಗ್ರಹಗಳ ವ್ಯಾಪ್ತಿಯಲ್ಲಿಯೂ ಆವರಿಸಿಕೊಂಡಿರುವುದು ಗೊತ್ತಾಗಿದೆ.

ಇದು ಉತ್ತಮ ಉಷ್ಣ ಹಾಗೂ ವಿದ್ಯುತ್ ವಾಹಕತೆ ಹೊಂದಿದೆ. ಇದರ ಕರಗುವ ಬಿಂದು ೧೮೦.೫೦ ಡಿಗ್ರಿ ಸೆಲ್ಸಿಯಸ್ ಮತ್ತು ಕುದಿಬಿಂದು ೧,೩೪೨ ಡಿಗ್ರಿ ಸೆಲ್ಸಿಯಸ್ ಆಗಿದೆ. ಇದೊಂದು ಅತ್ಯಂತ ಕಡಿಮೆ ಸಾಂಧ್ರತೆ (೦.೫೩೪ಗ್ರಾಂ / ಸೆಂ.ಮೀ3) ಯುಳ್ಳ ಧಾತುವಾಗಿದ್ದು ಹೋಲಿಕೆಯಲ್ಲಿ ಫೈನ್ ಮರದ ಸಾಂಧ್ರತೆಗಿಂತಲೂ ಕಡಿಮೆಯಾಗಿದೆ. ಅಷ್ಟೇ ಅಲ್ಲದೆ ಕೊಠಡಿ ಉಷ್ಣತೆಯಲ್ಲಿ ಕಡಿಮೆ ಸಾಂಧ್ರತೆ ಹೊಂದಿದ ಘನ ಧಾತುಗಳಲ್ಲಿ ಇದು ಕೊನೆಯದ್ದು. ಇದು ಹಗುರ ಹೈಡ್ರೋಕಾರ್ಬನ್ ತೈಲಗಳ ಮೇಲೆ ಸುಲಭವಾಗಿ ತೇಲುತ್ತದೆ. ಹಾಗೇ ನೀರಿನ ಮೇಲೆ ತೇಲುವ ಮೂರು ಲೋಹಗಳಲ್ಲಿ ಇದು ಕೂಡ ಒಂದು. ಉಳಿದಂತೆ ಆ ಇನ್ನೇರಡು ಲೋಹಗಳೆಂದರೆ ಸೋಡಿಯಂ ಮತ್ತು ಪೋಟ್ಯಾಸಿಯಂ. ಈ ಲೀಥಿಯಂ 6Li ಮತ್ತು 7Li ಎಂಬ ಸಮಾಂಗಿ (isomers) ಗಳನ್ನು ಹೊಂದಿದೆ.

ನಿಸರ್ಗದಲ್ಲಿ ಮುಕ್ತ ರೂಪದಲ್ಲಿ ದೊರೆಯದ ಲೀಥಿಯಂ ಹಲವು ಹರಳುಗಳ ದೊಡ್ಡದಾದ ಸಂಕೀರ್ಣ ಅಂತರಬಂಧದ ರಚನೆಯುಳ್ಳ ಅಗ್ನಿಶಿಲೆಯಾಗಿದೆ. ಈ ಪೆಗಮ್ಯಾಟೆಟಿಕ್ ಖನಿಜದಲ್ಲಿ ಅಡಗಿದ ಲೀಥಿಯಂ ಅದಿರು ನಾವಿಂದು ಬಳಸುವ ಲೀಥಿಯಂನ ಮುಖ್ಯ ಮೂಲವಾಗಿದೆ. ಅಲ್ಲದೇ ಸಮುದ್ರ ನೀರಿನಲ್ಲಿ ಸಾಂಧ್ರಗೊಂಡ ಲವಣಗಳಲ್ಲಿಯೂ ಇದರ ಆಯಾನಿಕ್ ಗುಣದಿಂದ ಲಭ್ಯವಾಗುತ್ತದೆ. ಆದರೆ ಸೀಮಿತ ಲಭ್ಯತೆ ಹೊಂದಿದ ಧಾತು ಇದಾಗಿದ್ದು ಭವಿಷ್ಯದಲ್ಲಿ ಇದರ ಕೊರತೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಸದ್ಯದ ಮಟ್ಟಿಗೆ ನಿಕ್ಷೇಪ ದೊರೆತ ಖುಷಿಯಲ್ಲಿದ್ದು ಉದ್ಯೋಗವಕಾಶ ಹಾಗೂ ಸ್ವಾವಲಂಬನೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಬ್ಯಾಟರಿ ಆಧಾರಿತ ಉತ್ಪನ್ನಗಳ ಉತ್ಪಾದನೆಯಿಂದ ಮಾರುಕಟ್ಟೆ ವ್ಯವಸ್ಥೆ ಸುಧಾರಿಸಿ ಪ್ರಗತಿಗೆ ನಾಂದಿ ಹಾಡಬಹುದು ಎಂಬುದು ಒಂದು ಕಡೆಯಾದರೆ ಆದರ ಹಿಂದೆ ಸವಾಲುಗಳು ಬಹಳಷ್ಟಿವೆ. ನಿಕ್ಷೇಪಗಳಲ್ಲಿನ ಆ ಕಲ್ಲು ಬಂಡೆಗಳನ್ನು ಪುಡಿ ಮಾಡಿ ಅದಿರು ತೆಗೆಯುವುದು ಅಷ್ಟು ಸುಲಭದ ಕೆಲಸವಲ್ಲ. ಅದಕ್ಕೆ ಸಾಕಷ್ಟು ನೈಪುಣ್ಯತೆ, ಆರ್ಥಿಕ ಬೆಂಬಲ, ತಾಂತ್ರಿಕತೆಯ ಅವಶ್ಯಕತೆ ಇದೆ. ವೈಜ್ಞಾನಿಕವಾಗಿ ಆ ನಿಕ್ಷೇಪಗಳಿಂದ ಲೀಥಿಯಂ ತೆಗೆಯುವ ತಾಂತ್ರಿಕತೆ, ವಿಧಾನಗಳು, ದೊಡ್ಡ ದೊಡ್ಡ ಯಾಂತ್ರಿಕ ಸಲಕರಣೆಗಳು, ತಜ್ಞತೆ ಅಷ್ಟು ನಮ್ಮಲ್ಲಿಲ್ಲ ಎಂಬುದು ವಿಜ್ಞಾನಿಗಳ ಅಭಿಪ್ರಾಯ. ಅದೇನೆ ಇರಲಿ ಕುತೂಹಲ ಹುಟ್ಟು ಹಾಕಿರುವ ಲೀಥಿಯಂ ಸದ್ಯಕ್ಕಂತೂ ಸ್ಟಾರ್ ಆಗಿ ಸುದ್ಧಿಯಾಗಿದೆ.

 

********

ಆಕರಗಳು :

ಆವರ್ತಕ ಕೋಷ್ಟಕ

ರಸಾಯನಶಾಸ್ತ್ರದ ಅರಿವು- ಸಿ. ಎನ್. ಆರ್. ರಾವ್

ಜಾಲತಾಣ

ಸುದ್ದಿ ಪತ್ರಿಕೆಗಳು


No comments:

Post a Comment