Monday, October 7, 2024

ಮಡಿಕೆಗಳು ಮತ್ತು ರಂಧ್ರಗಳು

 ಮಡಿಕೆಗಳು ಮತ್ತು ರಂಧ್ರಗಳು

                 ಲೇಖಕರು : ರಮೇಶ, ವಿ, ಬಳ್ಳಾ

      ಅಧ್ಯಾಪಕರು, ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು         (ಪ್ರೌಢ) ಗುಳೇದಗುಡ್ಡ      ಜಿ: ಬಾಗಲಕೋಟ 

          ಬಿರು ಬಿಸಿಲ ಕಾಲದಲ್ಲಿ ತಂಪಾದ ನೀರು ಸಿಕ್ಕರೆ ಸಾಕು, ಬಾಯಾರಿಕೆ ನೀಗಿ ತುಸು ನೆಮ್ಮದಿ ಸಿಗುತ್ತದೆ. ಈ ತಂಪು ನೀರು ಬೇಕೆಂದರೆ ಮನೆಯಲ್ಲಿ ಪ್ರಿಡ್ಜ್ ಇರಲೇಬೇಕು. ಆದರೆ ಅದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರಲಿಕ್ಕಿಲ್ಲ. ಮತ್ತೆ ಪ್ರಿಡ್ಜ್ ಇಲ್ಲದ ಈ ಹಿಂದಿನ ಕಾಲದಲ್ಲಿ ಜನ ಹೇಗೆ ತಂಪು ನೀರು ಕುಡಿಯುತ್ತಿದ್ದರು ಎಂದು  ಒಮ್ಮೆ ಯೋಚಿಸಿ. ಕುಂಬಾರರು ತಯಾರಿಸುತ್ತಿದ್ದ ಮಣ್ಣಿನ ಮಡಿಕೆ-ಕುಡಿಕೆಗಳೇ ತಂಪು ನೀರು ನೀಡುವ ಪಾತ್ರೆಗಳಾಗಿದ್ದವು. ಆದಕ್ಕೆ ಇಂದು ಮಣ್ಣಿನ ಪಾತ್ರೆ-ಪಗಡೆಗಳು ಮಾಯವಾಗಿವೆ. ಎಲ್ಲೆಡೆ ಸ್ಟೀಲ್ ಪಾತ್ರೆಗಳು ದಾಂಗುಡಿ ಇಟ್ಟಿವೆ. ಅದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ಸಂಗ್ರಾಹಕಗಳ ಅಬ್ಬರವೂ ಜೋರಾಗಿದೆ. ಈ ಮಧ್ಯೆ ಮಣ್ಣಿನ ಪಾತ್ರೆಗಳ ಚರ್ಚೆ ಯಾಕೆ ಅಂತೀರಾ ? ಮೊನ್ನೆ ನಮ್ಮ ಮನೆಯಲ್ಲಿ ಮಗನ ಕೈಗೆ ಬಹಳ ದಿನಗಳ ಹಿಂದಿನ ಒಂದು ಮಡಿಕೆ ಸಿಕ್ತು. ಅದನ್ನು ನೋಡಿದ ಆತ ಕೇಳಿದ ಪ್ರಶ್ನೆಗಳು ಹೀಗಿದ್ದವು. ಯಾಕಪ್ಪಾ, ಈ ಮಡಿಕೆ ಮೇಲ್ಮೈ ಮೇಲೆಲ್ಲಾ ಸಣ್ಣ ಸಣ್ಣ ತೂತಾಗಿವೆ ? ನೀರು ಸೋರುತ್ತಾ ಮತ್ತೇ? ಮೇಲಿಂದ ಕೈ ಬಿಟ್ಟರೆ ಯಾಕೆ ಇದು ಒಡೆದು ಹೋಗುತ್ತೆ ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿ ತಡಕಾಡಿದಾಗ ಹೊಳೆದದ್ದೆ, ಕುಂಬಕಗಳೆಂಬ ಚುಂಬಕ ಶಕ್ತಿಯ ಈ ಮಡಿಕೆಗಳು.

ಹಳ್ಳಿಗಾಡಿನ ಬದುಕಿನ ನಾನಾ ವೃತ್ತಿಗಳತ್ತ ಒಮ್ಮೆ ಕಣ್ಣು ಹಾಯಿಸಿದಾಗ ಬಡಿಗತನ, ನೇಕಾರಿಕೆ, ಬುಟ್ಟಿ ಹೆಣೆಯುವಿಕೆ, ಚಮ್ಮಾರಿಕೆ ಹೀಗೆ ಅನೇಕ ಹೊಟ್ಟೆಪಾಡಿನ ಉದ್ಯೋಗಗಳಂತೆ ವಿಶಿಷ್ಟ ಕಲೆಯಾಗಿ ಗುರುತಿಸಲ್ಪಟ್ಟ ಕುಂಬಾರಿಕೆಯೂ ಗಮನ ಸೆಳೆಯುತ್ತದೆ. ಕುಂಬಾರರ ಗೂಡುವೊಂದಕ್ಕೆ ನೀವು ಭೇಟಿ ನೀಡಿದ್ದಾದರೆ ಖಂಡಿತಾ ನಿಮಗೆ ಅಲ್ಲಿ ತಯಾರಾಗುವ ಮಣ್ಣಿನ ಮಡಿಕೆಗಳ ಬಗ್ಗೆ ಮಾಹಿತಿ ಸಿಗುತ್ತದೆ. ಈ ಕುಂಬಾರರು ತಯಾರಿಸುವ ಮಡಿಕೆಗಳ ಹಿಂದೆ ಒಂದು ನಿರ್ದಿಷ್ಟ ಪ್ರಕ್ರಿಯೆ ಇದೆ. ಸಾವಿರಾರು ವರ್ಷಗಳ ಇತಿಹಾಸವುಳ್ಳ ಈ ಮಡಿಕೆ ತಯಾರಿಕೆಗೆ ಜೇಡಿಯಂತ ಮಣ್ಣಿನ ಅವಶ್ಯಕತೆ ಇದೆ. ಮಣ್ಣು ಹೊತ್ತು ತಂದು ನೀರಿನಲ್ಲಿ ಕಲಸಿ, ತುಳಿದು ಹದಗೊಳಿಸಿ, ಚಕ್ರಕ್ಕೆ ಹಾಕಿ ತಿರುಗಿಸಿ ಮಡಿಕೆ ಮೇಲೆಳುವಂತೆ ಮಾಡುತ್ತಾರೆ. ನಂತರ ಆ ಹಸಿ ಮಡಿಕೆಗಳನ್ನು ಗೂಡಿಗೆ ಹಾಕಿ ನಿರ್ದಿಷ್ಟ ತಾಪದಲ್ಲಿ ಸುಟ್ಟು ತಯಾರಿಸಿದಾಗ ಮಡಿಕೆಗಳು ಸಿದ್ಧಗೊಳ್ಳುತ್ತವೆ. 

ಒಂದು ನಿರ್ದಿಷ್ಟ ಮಣ್ಣನ್ನು ಕಚ್ಚಾವಸ್ತುವಾಗಿ ಬಳಸಿ ತಯಾರಿಸಲಾಗುವ ಮಡಿಕೆಗಳನ್ನು ಕುಂಬಕಗಳು ಎಂದು ಕರೆಯಲಾಗುತ್ತದೆ. ಇದನ್ನು ಇಂಗ್ಲೀಷ್‍ನಲ್ಲಿ ಸಿರಾಮಿಕ್ಸ್ ಎನ್ನುವರು. ಈ ಸಿರಾಮಿಕ್ಸ್ ಎಂದರೆ ಬೇರೇನೂ ಅಲ್ಲ, ಅದು ನಮ್ಮ ಕುಂಬಾರರು ತಯಾರಿಸಿದ ಮಣ್ಣಿನ ಮಡಿಕೆಗಳೇ ಆಗಿವೆ. ಸಿರಾಮಿಕ್ಸ್ ಎಂಬ ಪದವನ್ನು ಗ್ರೀಕ್ ಭಾಷೆಯ ಸಿರಿಮೋಸ್ ಎಂಬ ಪದದಿಂದ ಪಡೆಯಲಾಗಿದೆ. ಇದರರ್ಥ ಮಣ್ಣಿನ ಮಡಿಕೆ ಎಂದಾಗಿದೆ. ಆದg,É ಕೆಲವರು ಸಿರಾಮಿಕ್ಸ್ ಎಂದೊಡನೆ ಇತ್ತೀಚಿಗೆ ಹೆಚ್ಚಿನ ಪ್ರಮಾಣದಲ್ಲ್ಲಿ ಬಳಕೆಯಾಗುತ್ತಿರುವ ಟೀ ಕಪ್‍ಗಳು, ಟೈಲ್‍ಗಳು, ಉಪ್ಪಿನಕಾಯಿ ಭರಣಿ ಇತ್ಯಾದಿ ಮಾತ್ರ ಎಂದು ತಿಳಿದಿದ್ದಾರೆ. ಹಾಗೇನಿಲ್ಲ ಇವೆಲ್ಲವೂ ಕೂಡ ಒಂದೆ ರೀತಿಯ ಪ್ರಕ್ರಿಯೆಯಿಂದ ಆದಂತವುಗಳೇ ಆಗಿವೆ. ಆದರೆ ಬಳಸಲ್ಪಡುವ ಕಚ್ಚಾವಸುಗಳು ಮಾತ್ರ ಬೇರೆ ಬೇರೆಯಾಗಿರುತ್ತವೆ.

ಮಣ್ಣಿನ ಮಡಿಕೆಗಳೇಕೆ ರಂಧ್ರಮಯ ? 

ಸಾಮಾನ್ಯವಾಗಿ ನಮ್ಮ ಹಿಂದಿನವರು ಹಾಗೂ ಈಗಿನ ಕೆಲವರು ಬಳಸುವ ಮಣ್ಣಿನ ಮಡಿಕೆಗಳು ಅಷ್ಟೇನೂ ಆಕರ್ಷಣೀಯವಾಗಿರುವುದಿಲ್ಲ. ಕಾರಣ ಅವು ಕುಂಬಾರರ ಗೂಡಿನಲ್ಲಿ ಸುಟ್ಟುಕೊಂಡು ಮೇಲೆದ್ದ ಜೇಡಿಮಣ್ಣಿನಿಂದ ತಯಾರಾದ ಗಡಿಗೆಗಳು. ತೀರಾ ಕಳಾಹೀನವಾದಂತೆ ಕಾಣುವ ಹಾಗೂ ಯಾವುದೇ ಬಣ್ಣಗಳ ವೈಭವವಿಲ್ಲದ ಈ ಪಾತ್ರೆಗಳು ಹಳ್ಳಗಾಡಿನ ಬದುಕಿನಲ್ಲಿ ಸಂಗ್ರಾಹಕ ಪಾತ್ರೆಗಳಾಗಿ ಬಳಕೆಯಾಗುತ್ತವೆ ಅಷ್ಟೇ. ಇದರ ಹೊರತಾಗಿ ಯುಗಾದಿಯ ಬೇವು ತಯಾರಿಸಲು ಹಾಗೂ ದೀಪಾವಳಿಯಲ್ಲಿ ಮನೆ ಮುಂದೆ ದೀಪ ಬೆಳಗಿಸಲು ಹಣತೆಯಾಗಿ, ಮಳೆ ನೀರು ಪೊನ್ನಳಗೆಯಾಗಿ, ಮೇಲ್ಛಾವಣಿ ಹೆಂಚಾಗಿ ಇತರ ಕೆಲ ಸಂದರ್ಭಗಳಲ್ಲಿ ಮಣ್ಣಿನ ಈ ಕುಂಬಕಗಳು ಬಳಕೆಗೆ ಬರುತ್ತವೆ. ಈ ನಯವಲ್ಲದ ಮಣ್ಣಿನ ಗಡಿಗೆಗಳ ಮೇಲ್ಮೈ ಮೇಲೆ ಅಗೋಚರವಾದ ಸೂಕ್ಷ್ಮ ರಂಧ್ರಗಳಿರುವುದು ಸಾಮಾನ್ಯ. ಈ ರಂಧ್ರಗಳುಂಟಾಗಲು ಕಾರಣ ಜೇಡಿಮಣ್ಣನ್ನು ನೀರಿನೊಂದಿಗೆ ಸೂಕ್ತ ಪ್ರಮಾಣದಲ್ಲಿ ಬೆರೆಸಿ, ಹದಗೊಳಿಸಿ ಸುಡುವಾಗ ಅದರಲ್ಲಿನ ನೀರಿನ ಪ್ರಮಾಣ ಕ್ರಮೇಣ ಆವಿಯಾಗುವ ಮೂಲಕ ಮಡಿಕೆಯನ್ನು ರಂಧ್ರಯುಕ್ತಗೊಳಿಸುತ್ತದೆ. ದೋಸೆಯಲ್ಲಿನ ತೂತುಗಳ ಹಾಗೇ ಇದು ಕೂಡ. ಈ ಅಗೋಚರ ರಂಧ್ರಗಳಿರುವುದರಿಂದ ಮಡಿಕೆಗಳು ನೋಡಲು ಅಷ್ಟಾಗಿ ಆಕರ್ಷಣೀಯವಾಗಿರುವುದಿಲ್ಲ ಹಾಗೂ ಹೊಳಪು ಕೂಡ ಇರುವುದಿಲ್ಲ. ಈ ಮಡಿಕೆ ತಯಾರಿಕೆಯಲ್ಲಿ ಮಣ್ಣಿನೊಂದಿಗೆ ನೀರು ಬೆರೆಸುವುದರಿಂದ ಹದಗೊಳಿಸಿ ಮಿಶ್ರಣವಾಗಿಸುವುದರಿಂದ ಬೇಕಾದ ಆಕಾರ ನೀಡಬಹುದು. ಸುಟ್ಟಾಗ ನೀರನ್ನು ಕಳೆದುಕೊಂಡು ಅಂತಹ ಪಾತ್ರೆಗಳು ಬಿಧುರತ್ವ ಪಡೆದುಕೊಳ್ಳುತ್ತವೆ. ನೈಸರ್ಗಿಕವಾದ ಈ ಜೇಡಿ ಮಣ್ಣು ಸಿಲೀಕೇಟುಗಳ ಸಂಕೀರ್ಣ ಮಿಶ್ರಣ. ಸುಟ್ಟ ನಂತರ ಗಟ್ಟಿಯಾಗಿ ಸಂಗ್ರಾಹಕ ಪಾತ್ರೆಗಳ ರೂಪದಲ್ಲಿ ಉಳಿಯುತ್ತವೆ.

ರಂಧ್ರರಹಿತ ಆಕರ್ಷಣೆ

ನೀವು ಚೀನಾ ಮಣ್ಣಿನ ಹೆಸರು ಕೇಳಿರಬಹುದು ಹಾಗೂ ಆ ಮಣ್ಣಿಂದ ತಯಾರಿಸಿದ ತಟ್ಟೆಗಳು ನಮ್ಮ ಇಂದಿನ ಜೀವನದ ಭಾಗವಾಗಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಲ್ಲಿರುವುದನ್ನು ಕಂಡಿರಬಹುದು. ಚಹಾ ಕಪ್ ಬಸಿ (saucer), ಭರಣಿಗಳು, ಕೈತೊಳೆಯುವ ನಲ್ಲಿ ತಟ್ಟೆ (Hand wash), ಅದೇ ರೀತಿ ನಮ್ಮ ಶಾಲಾ ಕಾಲೇಜುಗಳ ಪ್ರಯೋಗಶಾಲೆಯಲ್ಲಿ ಉಪಯೋಗಿಸಲ್ಪಡುವ ಕೆಲ ಸಾಧನಗಳಾದ ಆವೀಕರಣ ತಟ್ಟೆ (Evaporating dish), ಕ್ರೂಸಿಬಲ್ ಸಾಧನ ಹಾಗೇ ಕೆಲ ಮೂರ್ತಿ ಕಲಾಕೃತಿಗಳು ಮುಂತಾದವು ಬಲು ಆಕರ್ಷಕವಾದ ವೈವಿಧ್ಯಮಯವಾದ ಬಣ್ಣಗಳಲ್ಲಿ ನಮ್ಮ ನಿಮ್ಮ ಮನೆಯ ಕಿಚನ್ ಹಾಗೂ ಶೋ ಕೇಸ್‍ಗಳಲ್ಲಿ ತುಂಬಿರುವುದು ಸಹಜ. ಮನೆಯ ನೆಲಹಾಸು ಟೈಲ್‍ಗಳಂತಹ ನಯನ ಮನೋಹರವಾದ ನಾಜೂಕಾದ ಕುಂಬಕಗಳೂ ಸಹ ಮಣ್ಣಿನಿಂದಲೇ ಆದಂತವುಗಳು ಎಂದರೆ ಆಶ್ಚರ್ಯವೆನಿಸುತ್ತದೆ. ಮಣ್ಣಿನಿಂದ ತಯಾರಾದ ಈ ಕುಂಬಕಗಳು ರಂಧ್ರರಹಿತವಾಗಿ ಹಾಗೂ ನಯವಾಗಿ ಹೊಳೆಯುವಂತೆ ಮಾಡುವ ಕ್ರಿಯೆಗೆ ಗ್ಲೇಜಿಂಗ್ (glazing ) ಎನ್ನುವರು. ಗ್ಲೇಜ್ ಮಾಡಿದ ಇಂತಹ ಸಾಮಗ್ರಿಗಳು ಆಕರ್ಷಕವಾಗಿರುತ್ತವೆ. ಆದರೆ ಇಲ್ಲಿ ಜೇಡಿಯೊಂದಿಗೆ ಬಳಕೆಯಾಗುವ ಕಚ್ಚಾ ಸಾಮಗ್ರಿಗಳು ಅವುಗಳ ಈ ವಿಶಿಷ್ಟ ಗುಣಕ್ಕೆ ಕಾರಣವಾಗಿವೆ ಎಂಬುದು ಅಷ್ಟೇ ಸತ್ಯ. ಕೆಯೊಲಿನೈಟ್ (Evaporating dish),  ಮತ್ತು ಬೆಂಟೊನೈಟ್ (bentonite)ನಂತಹ ವಿಶೇಷ ಮಣ್ಣಿನ ಬಳಕೆಯನ್ನು ಮಾಡಿ ತಯಾರಿಸಿದ ಈ ಮಡಿಕೆಗಳು ಸಂಪೂರ್ಣ ರಂಧ್ರರಹಿತವಾಗಿರುವುದಿಲ್ಲ. ಇದರ ನಿವಾರಣೆಗೆ ಸಿಲಿಕಾದ ಇತರ ರೂಪಗಳಾದ ಪ್ಲಿಂಟ್ ಮತ್ತು ಕ್ವಾಟ್ರ್ಸಗಳನ್ನು ಬಳಸಿ ತಯಾರಿಸಲಾಗುತ್ತದೆ. ಇವುಗಳಿಗೆ ನೀರು ಹೀರಿಕೊಳ್ಳುವ ಗುಣ ಇಲ್ಲದಿರುವುದರಿಂದ ಉಷ್ಣ ನೀಡಿದಾಗ ರೂಪಾಂತರಗೊಳ್ಳದೇ ರಂಧ್ರರಹಿತವಾಗಿ ಪಾತ್ರೆಗಳು ಆಕರ್ಷಕವಾಗುತ್ತವೆ. ಫೆಲ್ಡ್‍ಸ್ಪಾರ್ ಒಂದು ನೈಸರ್ಗಿಕವಾಗಿ ದೊರೆಯುವ ಅಲ್ಯೂಮಿಯಂ ಸಿಲಿಕೇಟ್ ಖನಿಜವಾಗಿದೆ. ಇದರ ಬಳಕೆಯಿಂದ ತಯಾರಾದಂತಹ ಕುಂಬಕಗಳು ನಯವಾಗಿ ಹಾಗೂ ಗಟ್ಟಿಯಾಗಿ ಬರುತ್ತವೆ. ಈ ರೀತಿಯ ಕುಂಬಕಗಳ ತಯಾರಿಕೆಯಲ್ಲಿ ಅಧಿಕ ತಾಪ ಅಂದರೆ ಸುಮಾರು 1073K ದಿಂದ 1273K ರವರೆಗೆ ಕಾಸಿದಾಗ ಕಚ್ಚಾ ಸಾಮಗ್ರಿಗಳು ಗಾಜಿನಂತ ದ್ರವವಾಗಿ ಮಣ್ಣಿನ ಸಂದುಗಳ ಮಧ್ಯೆ ಸೇರಿಕೊಂಡು ತೂತುಗಳನ್ನು ಮುಚ್ಚುತ್ತದೆ. ತಂಪುಗೊಳಿಸಿದಾಗ ಕುಂಬಕಗಳಿಗೆ ನಯವಾದ ಹೊಳಪು ಬರುತ್ತದೆ.

ಕುಂಬಕಗಳಿಗೆ ರಂಧ್ರ ಅವಶ್ಯವೇ ?

ಗ್ಲೇಜಿಂಗ್ ಮಾಡಿದ ಈ ಕುಂಬಕಗಳು ನಯವಾಗಿದ್ದರೂ ಅದರಲ್ಲಿ ಸಂಗ್ರಹಿಸಿದ ನೀರು ತಂಪಾಗಿರುವುದಿಲ್ಲ. ಅಂದರೆ ಪಿಂಗಾಣಿಯಲ್ಲಿಟ್ಟ ನೀರು ಮಡಿಕೆಯಲ್ಲಿನ ನೀರಿನಷ್ಟು ತಂಪಾಗಿರುವುದಿಲ್ಲ. ಇದಕ್ಕೆ ಕಾರಣ ಪಿಂಗಾಣಿ ರಂಧ್ರರಹಿತವಾಗಿರುವುದು. ಹಾಗಾದರೆ ನೀರು ತಂಪಾಗಲು ಈ ರಂಧ್ರಗಳು ಬೇಕು ಎಂತಾಯಿತಲ್ಲವೇ ? ಹೌದು ! ಖಂಡಿತ, ರಂಧ್ರಯುಕ್ತ ಮಡಿಕೆಗಳಲ್ಲಿ ಸಂಗ್ರಹಿಸಿದ ನೀರು ತಂಪಾಗಿರಲು ಕಾರಣ ಅಗೋಚರವಾದ ಈ ರಂಧ್ರಗಳ ಮೂಲಕ ನೀರು ನಿರಂತರವಾಗಿ ಆವಿಯಾಗುತ್ತ ನೀರನ್ನು ತಂಪಾಗಿಸುತ್ತದೆ. ಹಾಗಾಗಿ ಕುಂಬಕಗಳಿಗೆ ರಂಧ್ರಗಳು ಅವಶ್ಯವೋ ಇಲ್ಲವೋ ಆದರೆ ನಮಗೆ ಮಾತ್ರ ತಂಪಾದ ನೀರು ಬೇಕೆಂದರೆ ರಂಧ್ರಯುಕ್ತ ಮಡಿಕೆಗಳು ಬೇಕೆ ಬೇಕು.

 ಕುಂಬಕಗಳು ರಂಧ್ರವೋ ರಂಧ್ರರಹಿತವೋ ಇಂದಿನ ಬದಲಾದ ಪರಿಸ್ಥಿತಿಯಲ್ಲಿ ಬಹು ಉಪಯುಕ್ತ ಸಾಧನಗಳಾಗಿ ಮಾರ್ಪಾಟಾಗಿವೆ. ಇವುಗಳಲ್ಲಿನ ವಿದ್ಯುತ್ ಅವಾಹಕತೆ, ಉಷ್ಣಧಾರಕ ಶಕ್ತಿ, ನಶಿಸುವಿಕೆ ನಿರೋಧಕ ಗುಣ ಹಾಗೂ ರಾಸಾಯನಿಕವಾಗಿ ಜಡವಾಗಿರುವ ಸ್ವಭಾವಗಳು ಆಧುನಿಕ ತಂತ್ರಜ್ಞಾನದಲ್ಲಿ ಅದರ ಬಳಕೆಯನ್ನು ಇಮ್ಮಡಿಗೊಳಿಸಿವೆ. ಬಾಲ್ ಬೇರಿಂಗ್, ಟರ್ಬೈನ್ ಬಿಡಿಭಾಗಗಳು, ಪ್ರಬಲ ಆಮ್ಲಗಳ ಸಂಗ್ರಾಹಕಗಳು ಹಾಗೂ ಕೃತಕ ಹಲ್ಲು ಮತ್ತು ಮೂಳೆಗಳಂತ ಜೈವಿಕ ಕುಂಬಕಗಳಾಗಿ ನಮ್ಮ ಇಂದಿನ ಬಹುತೇಕ ಅವಶ್ಯಕತೆಗಳನ್ನು ಪೂರೈಸಿವೆ. 

                                         



No comments:

Post a Comment