Monday, November 4, 2024

ಕೀಟಗಳು ಮತ್ತು ಪರಿಸರ

                                         ಕೀಟಗಳು ಮತ್ತು ಪರಿಸರ

 


    ಲೇಖಕರು  ತಾಂಡವಮೂರ್ತಿ ಎ ಎನ್‌

  ಸಹ ಶಿಕ್ಷಕರು

 ಸರ್ಕಾರಿ ಪದವಿಪೂರ್ವಕಾಲೇಜು.

ನೆಲಮಂಗಲ




ಪ್ರಾಣಿ ಪ್ರಪಂಚದಲ್ಲೇ ಅತಿ ದೊಡ್ಡ ವರ್ಗವಾದ ಕೀಟಗಳು ಪರಿಸರದಲ್ಲಿ ವಹಿಸುವ ಪಾತ್ರ ಹಾಗೂ ಅವುಗಳ ಅವನತಿಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಈ ಲೇಖನದಲ್ಲಿ ಬೆಳಕು ಚೆಲ್ಲಿದ್ದಾರೆ, ಶಿಕ್ಷಕ ತಾಂಡವಮೂರ್ತಿ ಅವರು

 

ಕೀಟಗಳು ಷಟ್ಪಾದಿಗಳಾಗಿದ್ದು. ಸಂಧಿಪದಿಗಳ ವಂಶದಲ್ಲಿ ಅತ್ಯಂತ ದೊಡ್ಡ ವರ್ಗವಾಗಿವೆ. 2022 ರ ಅಂಕಿಅಂಶದಂತೆ ಸುಮಾರು 2.16 ಮಿಲಿಯನ್‌ ಪ್ರಾಣಿ ಪ್ರಭೇದಗಳಲ್ಲಿ ಕೀಟಗಳ ಪ್ರಭೇದಗಳೇ ಸುಮಾರು 1.05 ಮಿಲಿಯನ್‌ ಗಳಷ್ಟಿದೆ.ಸರಿ  ಸುಮಾರು ಇಡೀ ಪ್ರಾಣಿಸಾಮ್ರಾಜ್ಯದಲ್ಲಿ ಅರ್ಧದಷ್ಟು ಪ್ರಭೇದಗಳನ್ನು ಹೊಂದಿರುವ ಕೀಟಗಳು ಪರಿಸರವ್ಯವಸ್ಥೆಯಲ್ಲಿ ಆಹಾರಜಾಲವನ್ನು ಪೋಷಿಸಲು, ಪರಾಗಸ್ಪರ್ಶ ನಿರ್ವಹಿಸಲು, ಜೀವವೈವಿಧ್ಯವನ್ನು ಕಾಪಾಡಲು, ಮಣ್ಣಿನ ರಚನೆ ಮತ್ತು ಫಲವತ್ತತೆಯನ್ನು ನಿರ್ವಸಿಸಲು ಹಾಗು ಎಲ್ಲಕ್ಕಿಂತ ಮಿಗಿಲಾಗಿ ಪರಿಸರದ ಸುಸ್ಥಿರತೆಯನ್ನು ಕಾಪಾಡುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ. ಕೀಟಗಳು ತೆವಳಲಿ, ಹಾರಲಿ ಅಥವ ಸರಸರನೆ ನಡೆಯಲಿ, ಅವು ತಮ್ಮ ಪಾತ್ರವನ್ನು ಪರಿಸರದಲ್ಲಿ ಯಶಸ್ವಿಯಾಗಿ ನಿರ್ವಹಿಸುತ್ತವೆ. ಆದರೆ ಆವಾಸಸ್ಥಾನದ ನಷ್ಟದಿಂದಾಗಿ ಶತಮಾನದ ಅಂತ್ಯದ ವೇಳೆಗೆ, ಪ್ರಪಂಚದ 40% ರಷ್ಟು ಕೀಟ ಪ್ರಭೇದಗಳು ನಾಶವಾಗಬಹುದು ಎಂಬುದು ಅತ್ಯಂತ ಕಳವಳಕಾರಿ ವಿಷಯ.

ನೈಸರ್ಗಿಕ ಜಲಶೋಧಕಗಳು

ಕ್ಯಾಡಿಸ್‌ಫ್ಲೈನಂತಹ ಕೀಟಗಳು ಜೌಗು ಪ್ರದೇಶಗಳು, ಕೊಳಗಳು ಮತ್ತು ತೊರೆಗಳಂತಹ ಜಲ ಪರಿಸರವ್ಯವಸ್ಥೆಗಳಲ್ಲಿನ ಸಾವಯವ ತ್ಯಾಜ್ಯಗಳನ್ನು ವಿಘಟಿಸಿ, ನೀರನ್ನು ಸ್ವಚ್ಛಗೊಳಿಸಿ, ವನ್ಯಜೀವಿಗಳು ಮತ್ತು ಸಸ್ಯಗಳಿಗೆ ಶುದ್ಧವಾದ ನೀರನ್ನು ಒದಗಿಸುತ್ತವೆ.ಪರಿಸರವ್ಯವಸ್ಥೆಯಲ್ಲಿ ಕ್ಯಾಡಿಸ್ಫ್ಲೈಗಳು ನೀರಿನ ಗುಣಮಟ್ಟದ ಸೂಚಕಗಳಾಗಿದ್ದು, ಅವುಗಳ ಅವನತಿಯು ಜಲಮಾಲಿನ್ಯಕ್ಕೆ ಕಾರಣವಾಗುತ್ತಿದೆ.

ಪರಾಗಸ್ಪರ್ಶ ಮತ್ತು ಕೀಟಗಳು.

ಪ್ರಪಂಚದಾದ್ಯಂತ ಶೇ85ರಷ್ಟು ಹೂಬಿಡುವ ಸಸ್ಯಗಳಲ್ಲಿ ಪರಾಗಸ್ಪರ್ಶ ಕ್ರಿಯೆಯು ಜೇನುನೊಣ, ದುಂಬಿ, ಪತಂಗಗಳಂತಹ ಕೀಟಗಳಿಂದ ನಡೆಯುತ್ತದೆ. ಆವಾಸನಾಶ ಮತ್ತು ಕೃಷಿ ಚಟುವಟಿಕೆಗಳಲ್ಲಿ ಕೀಟನಾಶಕ ಮತ್ತು ರಾಸಾಯನಿಕ ಗೊಬ್ಬರಗಳ ವ್ಯಾಪಕ ಬಳಕೆ ಕೀಟಗಳ ಅವನತಿಗೆ ಪ್ರಮುಖ ಕಾರಣವಾಗುತ್ತಿದೆ. ಹೂ ಬಿಡುವ ಸಸ್ಯಗಳು ಮತ್ತು ಪರಾಗಸ್ಪರ್ಶ ನಿರ್ವಹಿಸುವ ಕೀಟ ಪ್ರಭೇದಗಳ ನಡುವಿನ ಪರಸ್ಪರ ಅವಲಂಬನೆ ಮತ್ತು ಸಹಭಾಗಿತ್ವ ಆಹಾರಜಾಲವನ್ನು ನಿಯಂತ್ರಿಸುವ ಸಂಕೀರ್ಣ ಪರಿಸರಸೂಕ್ಷ್ಮ ಪ್ರಕ್ರಿಯೆಯಾಗಿದ್ದು, ಕೀಟಗಳ ಅವನತಿ ಪರೋಕ್ಷವಾಗಿ ಅಮೂಲ್ಯ ಸಸ್ಯಪ್ರಭೇದಗಳ ನಾಶಕ್ಕೂ ಕಾರಣವಾಗುತ್ತದೆ. 

ಪಕ್ಷಿಗಳ ಪೋಷಣೆ

ವಿಶ್ವಾದ್ಯಂತ, ಪಕ್ಷಿಗಳು ಪ್ರತಿ ವರ್ಷ 500 ಟನ್‌ಗಳಷ್ಟು ಕೀಟಗಳನ್ನು ಆಹಾರವಾಗಿ ಸೇವಿಸುತ್ತವೆ ಎಂದು ಒಂದು ಅಧ್ಯಯನವು ಅಂದಾಜಿಸಿದೆ. ಪಕ್ಷಿಗಳಲ್ಲದೆ ಉಭಯವಾಸಿಗಳು, ಸರಿಸೃಪಗಳು ಮಾನವನೂ ಒಳಗೊಂಡಂತೆ ಸ್ತನಿಗಳಿಗೂ ಕೀಟಗಳು ಪೋಷಣೆಯನ್ನು ಒದಗಿಸುತ್ತವೆ.

ರೈತರ ಮಿತ್ರರು

1 ಮಿಲಿಯನ್ ಪ್ರಭೇದಗಳಲ್ಲಿ, ಕೇವಲ 0.5% ಷ್ಟು ಕೀಟಗಳು ಮಾತ್ರ ಬೆಳೆ ಹಾನಿಗೆ ಕಾರಣವಾಗುತ್ತವೆ. ವಾಸ್ತವವಾಗಿ, ನೆಲದ ಜೀರುಂಡೆಗಳಂತಹ ಪರಭಕ್ಷಕ ಕೀಟಗಳು ಕಳೆಗಳು ಮತ್ತು ಇತರ ಕೀಟಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಮೂಲಕ ಬೆಳೆ ಇಳುವರಿಯನ್ನು ಹೆಚ್ಚಿಸುತ್ತವೆ .ಆದರೆ, ಭೆಳೆಹಾನಿಗೆ ಕಾರಣವಾಗುವ ಕೀಟಗಳನ್ನು ನಿಯಂತ್ರಿಸುವ ಉಮೇದಿನಲ್ಲಿ ನಾವು ಎಗ್ಗಿಲ್ಲದೇ ಬಳಸುವ ಕೀಟನಾಶಕಗಳು ಉಪಯುಕ್ತ ಕೀಟಗಳನ್ನೂ ನಾಶಮಾಡುತ್ತಿರುವುದು ಮಾನವನ ಸ್ವಯಂಕೃತ ಅಪರಾಧವೆಂದೇ ಪರಿಗಣಿಸಬೇಕಾಗಿದೆ.

 ಶುಚಿಕಾರಕಗಳು 

ಪ್ರಾಣಿಗಳ ತ್ಯಾಜ್ಯವನ್ನು ವಿಘಟಿಸುವ ಮತ್ತು ಹೂಳುವ ಮೂಲಕ, ಸಗಣಿ ಜೀರುಂಡೆಗಳು ಡೈರಿ ಮತ್ತು ಪಶು ಸಾಕಣೆ ಕೇಂದ್ರಗಳಲ್ಲಿ ಒಟ್ಟಾರೆ ಮೀಥೇನ್ ಹೊರ ಸೂಸುವಿಕೆಯನ್ನು ಕಡಿಮೆ ಮಾಡುತ್ತವೆ. ಇದರ ಜೊತೆಗೆ, ಈ ಆರು ಕಾಲಿನ "ಕಸ ಸಂಗ್ರಹಕಾರರು" ರೋಗವನ್ನು ಕಡಿಮೆ ಮಾಡುತ್ತವೆ, ಣ್ಣಿಗೆ ವಾಯುಪೂರಣ ಮಾಡುತ್ತವೆ, ಬೀಜಗಳನ್ನು ಚದುರಿಸುತ್ತವೆ ಮತ್ತು ಸಸ್ಯದ ಬೆಳವಣಿಗೆಯನ್ನು ಉತ್ತೇಜಿಸುತ್ತವೆ.

ಮಣ್ಣಿನ ರಚನೆ ಮತ್ತು ವಾಯುಪೂರಣ ನಿರ್ವಹಣೆ

ಇರುವೆ ಮತ್ತು ಗೆದ್ದಲಿನಂತಹ ಕೀಟಗಳು ಮಣ್ಣನ್ನು ಕೊರೆಯುವ ಮೂಲಕ ಮಣ್ಣಿನ ರಚನೆಯನ್ನು ಮೃದುಗೊಳಸುವುದಲ್ಲದೆ, ಮಣ್ಣಿಗೆ ಮತ್ತು ಸಸ್ಯಗಳ ಬೇರಿಗೆ ವಾಯುಪೂರಣ ಮಾಡುತ್ತವೆ. ಇದರಿಂದ, ಸಸ್ಯಗಳ ಬೇರು ಮಣ್ಣಿನಾಳಕ್ಕೆ ಇಳಿಯಲು ಮತ್ತು ಮಣ್ಣಿನಲ್ಲಿರುವ ವಾಯುವಿಕ ಸೂಕ್ಷಜೀವಿಗಳ ಬೆಳವಣಿಗೆಗೆ ಸಹಾಯವಾಗುತ್ತದೆ.

ಭವಿಷ್ಯದ ಪ್ರೋಟೀನ್‌  ಆಕರಗಳಾಗಿ ಕೀಟಗಳು

ಕೀಟಗಳು ಪ್ರೋಟೀನ್‌ಗಳ ಪ್ರಮುಖ ಆಕರವಾಗಿದ್ದು, ಅವುಗಳ ಶುಷ್ಕ ತೂಕದಲ್ಲಿ ಶೇ 35 ರಿಂದ 60 ರಷ್ಟು ಪ್ರೋಟೀನ್‌ ಸಮೃದ್ಧವಾಗಿದೆ. ಪ್ರಪಂಚದಾದ್ಯಂತ ಸುಮಾರು 2 ಬಿಲಿಯನ್‌ ಜನರು ಪ್ರತಿದಿನ ತಮ್ಮ ಆಹಾರದಲ್ಲಿ ಕೀಟಗಳನ್ನು ಬಳಸುತ್ತಾರೆ.ಪ್ರಪಂಚದಾದ್ಯಂತ ಸುಮಾರು ಎರಡು ಸಾವಿರ ಕೀಟಪ್ರಭೇದಗಳು ಆಹಾರವಾಗಿ ಬಳಸಲು ಯೋಗ್ಯವಾಗಿವೆ.ಯುರೋಪ್‌, ಅಮೇರಿಕಾ, ಆಸ್ಟ್ರೇಲಿಯಾ ಮತ್ತು ಪೂರ್ವಏಷ್ಯಾದ ದೇಶಗಳಲ್ಲಿ ಪಶುಸಂಗೋಪನೆಯಂತೆ ಆಹಾರಯೋಗ್ಯ ಕೀಟಗಳ ಕೃಷಿಗೆ ಉತ್ತೇಜನ ನೀಡಲಾಗುತ್ತಿದ್ದು, ಈ ಸಂಬಂಧ ಪ್ರತಿವರ್ಷ ಅಕ್ಟೋಬರ್‌ 23 ರಂದು ವಿಶ್ವ ಆಹಾರಯೋಗ್ಯ ಕೀಟಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.

ಸಮಗ್ರವಾಗಿ ವಿಶ್ಲೇಷಿಸುವುದಾದರೆ, ಕೀಟಗಳು ಜೀವಜಾಲದ ಅತ್ಯಂತ ಸಂಕೀರ್ಣವಾದ ಮತ್ತು ಮಹತ್ತರವಾದ ಕೊಂಡಿಗಳಾಗಿವೆ. ಪರಿಸರ ಸುಸ್ಥಿರತೆಯಲ್ಲಿ ಕೀಟಗಳ ಮಹತ್ವದ ಬಗ್ಗೆ ಸಾಮಾನ್ಯ ಜನರಿಗೆ ಅರಿವು ಮೂಡಿಸುವುದು ಒಟ್ಟಾರೆ ಜಾಗತಿಕ ಪರಿಸರ ಸುಸ್ಥಿರತೆಗೆ ಅನಿವಾರ್ಯವಾಗಿದೆ.” ಕೀಟಗಳ ಅವನತಿ ಆಹಾರಜಾಲದ ಅವನತಿ” ಅಲ್ಲವೇ?

No comments:

Post a Comment