Tuesday, February 4, 2025

ಕೃತಕ ಬುದ್ಧಿಮತ್ತೆಯ ಸಾಧಕ ಬಾಧಕಗಳು

 ಕೃತಕ ಬುದ್ಧಿಮತ್ತೆಯ ಸಾಧಕ ಬಾಧಕಗಳು

 ಶ್ರೀಧರ ಮಯ್ಯ   ಎಂ. ಎನ್. 

ವಿಜ್ಞಾನ ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ ಗುತ್ತೂರು

ಹರಿಹರ ತಾ. ದಾವಣಗೆರೆ ಜಿಲ್ಲೆ

               

                ಕೃತಕ ಬುದ್ಧಿಮತ್ತೆ ಅಂದರೆ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಇದು ಎಲ್ಲರಿಗೂ ತಿಳಿದ ವಿಷಯವೇ ಹೌದು. ಈ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಅಂದ್ರೆ ಏನು ? ನಮ್ಮ ಕೈಲಿ ಆಗದ್ದನ್ನು ಸಾಧನ ಅಥವಾ ಯಂತ್ರಗಳ ಮೂಲಕ ಮಾಡಿಸುವುದೇ ಈ ಕೃತಕ ಬುದ್ಧಿಮತ್ತೆ. ಇದು ತುಂಬಾ ಹಳೇದು ಆದರೆ ಈಗೀಗ ಹೆಚ್ಚು ಪ್ರಸಿದ್ಧಿಯಾಗುತ್ತಿದೆ ಅಷ್ಟೆ. ಸಿಂಪಲ್‌ ಒಂದು ಎಕ್ಸಾಂಪಲ್‌ ಹೇಳ್ತೀನಿ ಆಗ ನಿಮಗೇ ಅನ್ಸುತ್ತೆ ಓ ಇದೇನಾ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಅಂದ್ರೆ ಅಂತ. ಆದರೆ ಈಗ ಇದು ಎಲ್ಲಾ ಕ್ಷೇತ್ರಗಳಲ್ಲೂ ವ್ಯಾಪಿಸಿ ತನ್ನದೇ ಆದ ಛಾಪು ಮೂಡಿಸುತ್ತಿದೆ. ಎಷ್ಟರಮಟ್ಟಿಗೆ ಅಂದ್ರೆ ಇದು ಇಲ್ಲದೇ ಜೀವನವೇ ಇಲ್ಲ ಅಂತ. 455X350 ಎಷ್ಟು? ಸಡನ್‌ ಆಗಿ ಉತ್ತರ ಹೇಳಲು ಯಾರಿಗೂ ಸಾಧ್ಯವಿಲ್ಲ ಅಲ್ಲವೇ ಮತ್ತೆ ಹೇಂಗ್ ಸಾಧ್ಯ? ಎಸ್‌!!! ಕ್ಯಾಲ್ಕ್ಯುಲೇಟರ್‌ ಬಳಸಿ 1,59,250 ಪಟ್‌ ಅಂತ ಹೇಳಬಹುದು. ಈ ಕ್ಯಾಲ್ಕ್ಯುಲೇಟರ್‌, ರೋಬೋಟ್‌, ಕಂಪ್ಯೂಟರ್‌…. ಇವೆಲ್ಲವೂ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ನ ಕೊಡುಗೆಗಳೇ. ಇದರ ಕ್ಷೇತ್ರ ವ್ಯಾಪ್ತಿ, ಬಳಕೆ, ಅನುಕೂಲ, ಅನನುಕೂಲ ಎಲ್ಲರಿಗೂ ತಿಳಿಯಪಡಿಸುವುದೇ ಈ ಲೇಖನದ ಪ್ರಮುಖ ಉದ್ದೇಶ .



             1956 ರಲ್ಲಿ ಮೊದಲ ಬಾರಿಗೆ AI ಪದವನ್ನು ಬಳಸಿದ್ದು ಅಮೆರಿಕಾದ ಕಂಪ್ಯೂಟರ್‌ ವಿಜ್ಞಾನಿ ಜಾನ್‌ ಮೆಕಾರ್ತಿಯವರು. ನೀವು ಗಮನಿಸಿರಬಹುದು ನಾವು ಸೋಶಿಯಲ್‌ ಮೀಡಿಯಾದಲ್ಲಿ ಏನನ್ನಾದರೂ ಹುಡುಕಲು ಪ್ರಾರಂಭಿಸಿದರೆ ಈ ಹಿಂದೆ ಹುಡುಕಿದ ವಿಷಯಗಳ ಜಾಹೀರಾತುಗಳು ಬರುತ್ತದೆಯಲ್ಲವೇ ಅದೂ ಕೂಡ ಇದರ ಕೊಡುಗೆಯೇ!!! ಮೊದಲು ಈ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ನ ಸಂಭವನೀಯತೆಗಗಳು ಮತ್ತು  ಅನುಕೂಲಗಳನ್ನು ನೋಡಿಕೊಂಡು ಆಮೇಲೆ ಏಕೆ ಕಾಳಜಿ ವಹಿಸಬೇಕೆಂದರತ್ತ ಗಮನಹರಿಸೋಣ.

ಸಾಧ್ಯತೆಗಳು

1. ರೋಬೋಟಿಕ್‌ ಸರ್ಜರಿ ವ್ಯವಸ್ಥೆ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಸಾಧನೆಯಾಗಿ ಗುರುತಿಸಲ್ಪಟ್ಟಿದೆ. ಇದರಿಂದ ಮಾನವನದಿಂದ ಆಗಬಹುದಾದ ಅಜಾಗರೂಕತೆ ತಪ್ಪುವುದಲ್ಲದೆ ಹಲವಾರು ರೋಗಗಳಿಗೆ ನಿಮಿಷಾರ್ಧದಲ್ಲಿ ಚಿಕಿತ್ಸೆ ಸಾಧ್ಯವಾಗುತ್ತದೆ. ಇತ್ತೀಚಿನ ಬೆಳವಣಿಗೆಯಲ್ಲಿ ವೈದ್ಯರಿಗೆ ಮೊದಲ ಹಂತದಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ಅನ್ನು ಪತ್ತೆ ಹಚ್ಚಲು ಎಐ ನಿಂದ ಸಾಧ್ಯವಾಗಿದೆ.

2. ನಾವಾದರೆ ದಿನಕ್ಕೆ ಎಷ್ಟು ತಾಸು ಕೆಲಸ ಮಾಡಬಹುದು ಹೇಳಿ ಹೆಚ್ಚೆಂದರೆ 6-8 ತಾಸು . ಆದರೆ, ಎಐ  ನಿರಂತರವಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ.  ಇತ್ತೀಚೆಗೆ ಕೇರಳದಲ್ಲಿ ಎಐ ಆಧಾರಿತ ಶಿಕ್ಷಕಿಯ ಬಳಕೆಯ ವಿಚಾರ ನಿಮಗೆ ತಿಳಿದಿರಬಹುದು. 

3. ಸಾಗರಗಳ ಆಳವಾದ ಅಧ್ಯಯನ, ಬಾಂಬ್‌ ನಿಷ್ಕ್ರಿಯೆಗೊಳಿಸುವುದು, ಬಾಹ್ಯಾಕಾಶಕ್ಕೆ ಹೋಗುವುದು …..ಇಂತಹ ಕಾರ್ಯಗಳಲ್ಲಿ ರೋಬೋಟ್‌ ಬಳಸುವುದರಿಂದ ನಿಖರ ಮಾಹಿತಿ ಪಡೆಯಬಹುದಲ್ಲದೇ ಮುಂದೆ ಬರಬಹುದಾದ ಅಪಾಯಗಳನ್ನೂ ತಪ್ಪಿಸಲು ಸಾಧ್ಯವಿದೆ.

4.  ಸ್ವಯಂ ಚಾಲಿತ ಕಾರುಗಳ ಬಗ್ಗೆ ನಿಮಗೆ ಗೊತ್ತಿರಬಹುದು. ಡ್ರೈವರ್‌ನ ಅವಶ್ಯಕತೆ ಇಲ್ಲದೆಯೇ ಇದು ಕ್ಯಾಮರಾ ಹಾಗೂ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುವುದರಿಂದ ಅಪಘಾತ ಇಲ್ನೋಲ ಎನ್ನುವಷ್ಟು ಸುರಕ್ಷಿತ . ಅಷ್ಟೇ ಅಲ್ಲದೇ ಸರಿಯಾದ ವಿಳಾಸ ನೀಡಿದರೆ ಜಿಪಿಎಸ್‌ ಮೂಲಕ ಅಲ್ಲಗೇ ಕರೆದುಕೊಂಡು ಹೋಗುತ್ತದೆ. ಇದು ವಿಕಲಚೇತನರಿಗೂ ಬಹಳ ಅನುಕೂಲ.

5. ದೈನಂದಿನ ಚಟುವಟಿಕೆಗಳಿಗೂ ಇದು ಅತ್ಯುಪಯುಕ್ತವಾಗಿದೆ. ಅಂದರೆ ನಾವು ಸಂಚರಿಸುವ ಮಾರ್ಗ, ಇಂದಿನ ಹವಾಮಾನ ವೈಪರೀತ್ಯ ಎಲ್ಲದರಲ್ಲೂ ಎಐ ಬಳಕೆ ಮಾಡಲಾಗುತ್ತಿದೆ.

6. ಗಣಿಗಾರಿಕೆ ಮತ್ತು ವಿಕಿರಣ ಹೊರಸೂಸುವ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು ವಿಪರೀತ ಅಪಾಯಕ್ಕೆ ಒಳಗಾಗುತ್ತಾರೆ, ಜೊತೆಗೆ ಅನೇಕ ರೋಗಗಳಿಂದ ನರಳುತ್ತಾರೆ. ಇಂತಹ ಕಾರ್ಖಾನೆಗಳಲ್ಲಿ ಕೃತಕ ಬುದ್ದಿಮತ್ತೆ ಬಳಸುವುದರಿಂದ ಕೆಲಸವೂ ಹಗುರ ರೋಗವೂ ಇಲ್ಲ. ದೇಶದ ಭದ್ರತೆ ಮತ್ತು ಸೇನಾ ಕಾರ್ಯಾಚರಣೆಗಳಲ್ಲಿ ಇವುಗಳ ಬಳಕೆ ಬಹಳಷ್ಟು ಪರಿಣಾಮಕಾರಿಯಾಗಿದೆ.

7. ರೋಗದ ಪತ್ತೆ ಹಚ್ಚುವಿಕೆ, ಸೂಕ್ತ ಚಿಕಿತ್ಸೆ, ಪರಿಣಾಮಕಾರಿಯಾದ ಔಷಧಗಳ ಸಂಶೋಧನೆ, ಕ್ಲಿನಿಕಲ್‌ ಪ್ರಯೋಗದ ಜೊತೆಗೆ ರೋಗಿಯ ಡೇಟಾವನ್ನು ಅಭ್ಯಸಿಸಲು ಎಐ ಸಹಕಾರಿಯಾಗಿದೆ. ಅಲ್ಲದೇ ಸಂಭಾವ್ಯ ಆರೋಗ್ಯ ಅಪಾಯಗಳನ್ನು ಗುರುತಿಸಿ ಮುನ್ಸೂಚನೆ ನೀಡುವ ಸಾಧನವಾಗಿಯೂ ಬಳಕೆಯಾಗುತ್ತಿದೆ.

8. ಗ್ರಾಹಕರ ನಡವಳಿಕೆ, ಮಾರುಕಟ್ಟೆ ಪ್ರವೃತ್ತಿಗಳನ್ನು ವ್ಯಾಪಾರ ಸಂಬಂಧ ಸಂಸ್ಥೆಗಳಿಗೆ ಸಹಾಯ ಮಾಡುತ್ತಿದೆ. ಇವೆಲ್ಲದರ ಕಾರಣಗಳಿಂದ ಎಐ ನ ಜನಪ್ರಿಯತೆ ದಿನೇ ದಿನೇ  ಏರುತ್ತಿದೆ.

             ಎಐನ ಬಳಕೆಯಲ್ಲಿ ನಾವು ಕಾಳಜಿ ವ್ಯಕ್ತಪಡಿಸುವುದು ಅತಿ ಅವಶ್ಯಕ. ಅನುಕೂಲವೆಂದಾಕ್ಷಣ ಅಪಾಯವಿಲ್ಲವೆಂದಲ್ಲ. ಎಐ ಬಳಸಿ ಡೀಪ್‌ ಫೇಕ್‌ ಮಾಡಿ ದುರುಪಯೋಗ ಮಾಡುವವರೂ ಕಡಿಮೆ ಇಲ್ಲ.  ಇಂತಹ ಘಟನೆಗಳು ಮರುಕಳಿಸದಂತೆ ಕಾಳಜಿ ವ್ಯಕ್ತಪಡಿಸುವುದು ಅತಿ ಅವಶ್ಯ.

  

ಸಮಸ್ಯೆಗಳು 

1. ಇದು ಅತ್ಯಂತ ವೆಚ್ಚದಾಯಕ. ಮಾನವ ಬುದ್ಧಿಮತ್ತೆಯನ್ನು ಅನುಕರಿಸುವ ಯಂತ್ರ ಅಥವಾ ಸಾಧನಗಳ ತಯಾರಿಕೆ ಬಹಳ ವೆಚ್ಚದಾಯಕವಾದದ್ದು ಹಾಗೂ ಇದಕ್ಕೆ ಸಾಕಷ್ಟು ಸಮಯ, ಸಂಪನ್ಮೂಲಗಳ ಅವಶ್ಯಕತೆ ಇದೆ

2. ಎಐ ತನ್ನ ಸೀಮಿತ ಮಿತಿಯೊಳಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಅದರಾಚೆ ಎಂದೂ ಯೋಚಿಸುವುದಿಲ್ಲ. 

3. ನಿರುದ್ಯೋಗ ಸಮಸ್ಯೆ ಉಲ್ಬಣಗೊಳ್ಳಬಹುದು. ರೊಬೋಟ್‌ಗಳ ಬಳಕೆ ಹೆಚ್ಚು ಮಾಡುತ್ತಿರುವುದರಿಂದ ಈಗಾಗಲೇ ಜಪಾನ್‌ನಂತಹ ಮುಂದುವರಿದ ರಾಷ್ಟ್ರಗಳಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ.

4. ಇದರ ಬಳಕೆಯಿಂದ ಮಾನವನ ಮೆದುಳಿಗೆ  ಕೆಲಸ ಕಡಿಮೆಯಾಗುವುದರಿಂದ ಬೌದ್ಧಿಕ ಸಾಮರ್ಥ್ಯವೂ ಕುಂಠಿತಗೊಳ್ಳುತ್ತದೆ.

5. ಎಐನ ಅತಿಯಾದ ಬಳಕೆಯಿಂದ ಮಾನವೀಯತೆ ನಾಶವಾಗುವ ಆತಂಕವಿದೆ. ಅಷ್ಟೇ ಅಲ್ಲ ಇವು ಭಾವನೆಗಳನ್ನು, ನೈತಿಕತೆಯನ್ನು ಹೊಂದಿಲ್ಲವಾದ್ದರಿಂದ ಯುದ್ಧ ಹಾಗೂ ಸೇನೆಯ ಕಾರ್ಯಾಚರಣೆಗಳಲ್ಲಿ ಎಐನ ಬಳಕೆ ಮಹಾ ವಿನಾಶಕ್ಕೆ ಕಾರಣವಾಗಬಹುದು.

6. ಇನ್ನೊಂದು ಆತಂಕಕಾರಿ ವಿಷಯವೇನೆಂದರೆ ಇವು ಮಾನವನ ಸಂಗಾತಿಯ  ಸ್ಥಾನವನ್ನು ಆಕ್ರಮಿಸುವ ಮಟ್ಟಕ್ಕೆ ಇವು ಬೆಳೆದು ನಿಂತಿವೆ. ಹೀಗಾದರೆ ಪ್ರಪಂಚ ಅಲ್ಲೋಲ ಕಲ್ಲೋಲವಾಗುವುದರಲ್ಲಿ ಸಂಶಯವೇ ಇಲ್ಲ. ಆದ್ದರಿಂದ ಎಐನ ಬಳಕೆಯಲ್ಲಿ ಜಾಗ್ರತೆ ಅತಿ ಅವಶ್ಯಕವಾಗಿದೆ.

               ಒಟ್ಟಿನಲ್ಲಿ ಕೃತಕ ಬುದ್ಧಮತ್ತೆ ಎನ್ನುವುದು ಮಾನವನ ಬುದ್ಧಿವಂತಿಕೆಗೂ ಮೀರಿ ಬೆಳೆದ ಚಟುವಟಿಕೆ. ಇದನ್ನ ಅರ್ಥ ಮಾಡಿಕೊಂಡು ಜಾಣ್ಮೆಯಿಂದ ಬಳಸಿದರೆ ಯಶಸ್ಸು ಗಳಿಸಬಹುದು ಇಲ್ಲವೆಂದರೆ ಅಪಾಯ ಕಟ್ಟಿಟ್ಟ ಬುತ್ತಿ.

 


ಹುಟ್ಟಿ ಬಂದಿಹೆ ಏಕೆ, ಬರಿದೆ ಬಾಳುವೆ ಏಕೆ?

 ಸೂತ್ರವಿಲ್ಲದಾ ಪಟವು ತಿರುತಿರುಗಿದಂತೆ

 ಜೀವಜಂತುಗಳಂತೆ ಹೊಟ್ಟೆ ಹೊರೆದರೆ ಸಾಕೇ?

ಬಾಳಗುರಿಯನು ಅರಿಯೋ ಸಣ್ಣ ಬುದ್ಧಿ

ಎಂದು ಸುರೇಂದ್ರನಾಥ್‌ ಸರ್‌ ಹೇಳಿದಂತೆ ನಮ್ಮ ಗುರಿಯನ್ನು ಮುಟ್ಟಲು ಕೃತಕ ಬುದ್ಧಿಮತ್ತೆ ಯನ್ನು ಸದ್ಬಳಕೆ ಮಾಡಿಕೊಳ್ಳೋಣ ಎಂದು ಹೇಳುತ್ತಾ ಈ ಲೇಖನಕ್ಕೆ  ವಿರಾಮ ನೀಡುತ್ತಿದ್ದೇನೆ.



No comments:

Post a Comment