Saturday, October 4, 2025

ಪಲ್ಸಾರ್‌ ಮತ್ತು ಜೋಸಲಿನ್‌ ಬೆಲ್‌ ಬರ್ನಾಲ್‌

 ಪಲ್ಸಾರ್‌ ಮತ್ತು ಜೋಸಲಿನ್‌ ಬೆಲ್‌ ಬರ್ನಾಲ್‌

    

 ಲೇಖಕರು 

 ಕೃಷ್ಣ ಸುರೇಶ


    



1967ರ ನವೆಂಬರ್ 28ರ ದಿನಸ್ಥಳಕೇಂಬ್ರಿಡ್ಜ್‌ ವಿಶ್ವವಿದ್ಯಾಲಯವು ಕ್ವಾಸಾರುಗಳ ಸಂಶೋಧನೆಗೆಂದು ಆರ್ಮ್ಯಾಗಿನಲ್ಲಿ ಸ್ಥಾಪಿಸಿದ್ದ ಇಂಟರ್‌  ಪ್ಲಾನಟರಿ ಸೈಂಟಿಲೇಷನ್ ಅರೆ‌ ಎಂಬ ರೇಡಿಯೋ  ದೂರದರ್ಶಕದ ಪ್ರಯೋಗಶಾಲೆ24ವರ್ಷ ವಯಸ್ಸಿನ ಸ್ನಾತಕೋತ್ತರ ಸಂಶೋಧನಾ ವಿದ್ಯಾರ್ಥಿನಿ ಜೋಸಲಿನ್‌ ಬೆಲ್‌ ಅಲ್ಲಿ ಕುಳಿತು ರೇಡಿಯೋ ಸಂಕೇತವೊಂದು ಮುದ್ರಿತವಾಗಿದ್ದ ಗ್ರಾಫ್‌ ಪೇಪರನ್ನು ಪರಿಶೀಲಿಸುತ್ತಿದ್ದರು.


 ಅದು ಅದೇ ವರ್ಷ ಆಗಸ್ಟ್‌ 6ರಂದು ಆ ರೇಡಿಯೋ ದೂರದರ್ಶಕವು ಗ್ರಹಿಸಿದ್ದ ರೇಡಿಯೋ ಸಂಕೇತವಾಗಿತ್ತು. ಹೀಗೆ ಪರಿಶೀಲನೆ ಮಾಡುತ್ತಿದ್ದ ಅವರಿಗೆ ಗ್ರಾಫ್‌ ಪೇಪರಿನ ಮೇಲೆ ನಿಯಮಿತ ಅವರ್ತಗಳಲ್ಲಿ ಅಸಾಮಾನ್ಯವೆನ್ನುವಂತೆ ಒಂದು ಕಲೆಯು ಸ್ಟ್ರೈಕಿನಂತೆ ಮುದ್ರಿತವಾಗಿರುವುದು ಕಂಡು ಬಂದು ಕುತೂಹಲವನ್ನು ಹೆಚ್ಚಿಸಿತು. ಆ ಕಲೆಯು ಬರಿಗಣ್ಣಿಗೆ ಅತಿ ಸೂಕ್ಷ್ಮವಾಗಿ ಕಾಣುತ್ತಿದ್ದದ್ದರಿಂದ ಅದರ ವಿವರಗಳು ಸ್ಪಷ್ಟವಾಗುತ್ತಿರಲಿಲ್ಲಆದ್ದರಿಂದ ಜೋಸಲಿನರು ಗ್ರಾಫ್‌ ಪ್ರಿಂಟರ್‌ ಮೇಲೆ ಅತಿ ವೇಗವಾಗಿ ಕಾಗದದ ರೀಲು ಚಲಿಸುವಂತೆ ಮಾಡಿ ಅದೇ ಗ್ರಾಫಿನ ಚಿತ್ರವನ್ನು ಪುನರ್‌ ಮುದ್ರಿಸಿದರು.

     ಈಗ ಆ ಕಲೆಯು ವಿಸ್ತಾರವಾಗಿ ಕಾಗದದ ಮೇಲೆ ನಿಯಮಿತ ಆವರ್ತಗಳಲ್ಲಿ ಸ್ಪಷ್ಟವಾಗಿ ಮುದ್ರಿತವಾಗಿತ್ತು. ಖಗೋಳದ ಒಂದು ನಿರ್ದಿಷ್ಟ ಬಿಂದುವಿನಿಂದ ಬರುತ್ತಿರುವ ರೇಡಿಯೋ ತರಂಗಗಳ ಸಂಕೇತದ ನಕ್ಷೆಯು ಅದಾಗಿದ್ದು ಅದರ ಲಕ್ಷಣಗಳು ಕ್ವಾಸಾರು ಅಥವಾ ಮತ್ತೆ ಯಾವುದೇ ಆಕಾಶಕಾಯದಲ್ಲ ಎಂದು ಅವರು ತೀರ್ಮಾನಕ್ಕೆ ಬಂದರು. ಹಾಗೆ ನೋಡಿದರೆ ಖಗೋಳಶಾಸ್ತ್ರದ ದಿಕ್ಕು- ದೆಸೆಯನ್ನು ಬದಲಾಯಿಸುವ ಒಂದು ಹೊಸ ಆವಿಷ್ಕಾರವಾದ ಪಲ್ಸಾರ್‌ ಎಂಬ ನ್ಯೂಟ್ರಾನ್‌ ನಕ್ಷತ್ರವೊಂದನ್ನು ಜೋಸಲಿನ್‌ ಪತ್ತೆ ಮಾಡಿದ್ದರು. ಈ ವಿಚಾರವನ್ನು ಅವರು ತಮ್ಮ ಗುರುಗಳೂ ಮತ್ತು ಸಂಶೋಧನೆಗೆ  ಮಾರ್ಗದರ್ಶಕರಾಗಿದ್ದ ಹೇವಿಷ್‌ ಅವರ ಗಮನಕ್ಕೆ ತಂದರು. ತಿಳಿದೋ ಅಥವಾ ತಿಳಿಯದೆಯೋ ಹೇವಿಷ್‌ ಈ ನಕ್ಷೆಯಲ್ಲಿನ ಸ್ಪೈಕ್‌ ಭೂಮಿಯ ಮೇಲಿನ ರೇಡಿಯೋ ಪ್ರಸಾರದಿಂದ ಆಗುತ್ತಿರುವ ಹಸ್ತಕ್ಷೇಪ ಎಂದರು. ನಂತರ ಅನ್ಯಗ್ರಹ ಜೀವಿಗಳು ಕಳುಹಿಸುತ್ತಿರುವ ರೇಡಿಯೋ ಸಂಕೇತಗಳೇನಾದರೂ ಆಗಿರಬೇಕು. ಇಲ್ಲವೇ ಜೋಸಲಿನ್‌ ಆಂಟೆನಾಗಳಿಗೆ ಜೋಡಿಸಿರುವ ಸಂಪರ್ಕಗಳ ದೋಷವಿರಬೇಕೆಂದು ವಿ‌ಶ್ಲೇಷಣೆ ಮಾಡಿ ಮಾತು ಮುಗಿಸಿ, ಈ ಸಂಶೋಧನೆಯನ್ನೇ ತಳ್ಳಿಹಾಕಿದರು. ಅದೇ ವರ್ಷ ಡಿಸೆಂಬರ್ 21ರಂದು ಜೋಸಲಿನರು ಮತ್ತೊಂದು ಅಂತಹದು ವಿದ್ಯಮಾನವನ್ನು ಪತ್ತೆ ಮಾಡಿ ಹೇವಿಷರ ಗಮನಕ್ಕೆ ತಂದರು. ಇದು ಅವರು ಗಂಭೀರವಾಗಿ ಆಲೋಚಿಸಲು ಪ್ರೇರೇಪಣೆ ಮಾಡಿ. ಈ ಸಂಶೋಧನೆಯು ಪಲ್ಸಾರ್‌ ಎಂಬ ಒಂದು ಹೊಸ ಬಗೆಯ ಆಕಾಶ ಕಾಯದ ಆವಿಷ್ಕಾರವಾಗಿ ಹೆಸರುವಾಸಿಯಾಗಿದ್ದಲ್ಲದೇ ನೋಬೆಲ್‌ ಬಹುಮಾನಕ್ಕೆ ಪಾತ್ರವಾಯಿತು. ಅದರೆ ಆ ನೋಬೆಲ್‌ ಬಹುಮಾನ ಜೋಸಲೀನಾರಿಗೆ ಮಾತ್ರ ದೊರೆಯಲಿಲ್ಲವೆಂಬುದು ವಿಷಾದದ ಸಂಗತಿ.


Science Photo Library

  ಡೇಮ್‌ ಸೂಸಾನ್‌ ಜೊಸಲಿನ್‌ ಬೆಲ್‌ ಬರ್ನಲ್‌ 1943 ರ ಜುಲೈ 15ರಂದು ಉತ್ತರ  ಐರ್ಲೆಂಡಿನಲ್ಲಿ ಎಂ ಅಲಿಸನ್‌ ಮತ್ತು ಜಿ. ಪಿಲಿಫ್‌ ದಂಪತಿಗಳ ಮಗಳಾಗಿ ಜನಿಸಿದರು. ಅವರ ತಂದೆಯು ಸಮೀಪದ ತಾರಾಲಯದ ವಾಸ್ತುಶಿಲ್ಪಿಯಾಗಿದ್ದರು. ಮನೆಯ ಕಪಾಟಿನಲ್ಲಿ ತಾರೆಗಳು ಮತ್ತು ಖಗೋಳಶಾಸ್ತ್ರದ ಗ್ರಂಥಗಳು ತುಂಬಿದ್ದು ಅವುಗಳನ್ನು ಓದುತ್ತಲೇ ಬೆಳೆದವರು ಜೋಸಲಿನ್.‌ ಪ್ರೌಢಶಾಲೆಯಲ್ಲಿರುವಾಗಲೇ ಅಂದಿನ ರೂಢಿಯಂತೆ ಗಂಡುಮಕ್ಕಳನ್ನು ವಿಜ್ಞಾನದ ಪ್ರಯೋಗಶಾಲೆಗೂ ಹೆಣ್ಣುಮಕ್ಕಳನ್ನು ಅಡುಗೆ ಕಲಿಸುವ ಪಾಕಶಾಲೆಗೂ ಬೇರ್ಪಡಿಸಿ ಕಳಿಸುವುದನ್ನು ಪ್ರತಿಭಟಿಸಿ ವಿಜ್ಞಾನ ಪ್ರಯೋಗಶಾಲೆಗೆ ತಾವು ಸ್ವತಃ ಪ್ರವೇಶ ಪಡೆದ ದಿಟ್ಟೆಯಾಗಿದ್ದರು. ತಮ್ಮ ಪ್ರೌಢಶಿಕ್ಷಣವನ್ನು ಮೌಂಟ್‌ ಶಾಲೆಯಲ್ಲಿ ಪೂರೈಸಿದರು. ನಂತರ ಗ್ಲಾಸಗೊ ವಿಶ್ವವಿದ್ಯಾಲಯದಿಂದ ವಿಜ್ಞಾನದಲ್ಲಿ ಆನರ್ಸ್ ಪದವಿಯನ್ನು ಗಳಿಸಿದರು. ತದನಂತರ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿದ ಅವರು ಆಂಟೋನಿ ಹೆವಿಷ್‌ ಮತ್ತಿತರರ ಮಾರ್ಗದರ್ಶನದಲ್ಲಿ ನಿರ್ಮಾಣಗೊಳ್ಳುತ್ತಿದ್ದ ಇಂಟರ್‌ ಪ್ಲಾನಟರಿ ಸೈಂಟಿಲೇಷನ್ ಅರೆ‌ ಎಂಬ ರೇಡಿಯೋ ದೂರದರ್ಶಕ ಯೋಜನೆಯಲ್ಲಿ ತೊಡಗಿಸಿಕೊಂಡರು. ಅದರ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ತೊಡಗಿದ ಏಕೈಕ ಮಹಿಳಾ ಸಂಶೋಧಕಿಯೂ ಸಹ ಅವರಾಗಿದ್ದರು. ಹೀಗೆ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗಲೇ ಅವರು ಆಕಾಶವನ್ನು ಕ್ರಮಾಗತವಾಗಿ ಶೋಧಿಸಿದ ರೇಡಿಯೋ ಟೆಲಿಸ್ಕೋಪಿನ ಮಾಹಿತಿಯ ಗ್ರಾಫನ್ನು ಪರಿಶೀಲಿಸುವಾಗ ಅಚಾನಕ್ಕಾಗಿ ವೀಕ್ಷಿಸಿದ ಪಲ್ಸಾರನ್ನು ಪತ್ತೆ ಮಾಡಿದ್ದು, ಒಂದರ ನಂತರ ಒಂದು ಎಂಬಂತೆ ಎರಡು ಪಲ್ಸಾರ ವಿದ್ಯಮಾನಗಳನ್ನು ಜೊಸಲಿನ್‌ ಕಂಡು ಹಿಡಿದರಾದರೂ ಅವರ ಮಾರ್ಗದರ್ಶಕರಾದ ಹೆವಿಷ್‌ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಸಂಪೂರ್ಣ ಸಂಶೋಧನೆ ತಮ್ಮದೆಂಬಂತೆ ಬಿಂಬಿಸಿಕೊಂಡು ಉಪನ್ಯಾಸಗಳನ್ನು ನೀಡತೊಡಗಿದರು. ಔಪಚಾರಿಕವಾಗಿ ಒಮ್ಮೊಮ್ಮೆ ಜೋಸಲಿನ ಹೆಸರನ್ನು ಪ್ರಸ್ತಾಪಿಸುವ ಕೆಲಸಮಾಡುತ್ತಿದ್ದರು. ಪಲ್ಸಾರಿನ ಸಂಶೋಧನೆಗೆ ಸಂಬಂಧಿಸಿದ ಪ್ರೇಕ್ಷಕರ ಬಹುತೇಕ ಪ್ರಶ್ನೆಗಳು ಹೆವಿಷ್‌ ರವರೆ ಮೇಲೆ ಬಿದ್ದು ಉತ್ತರಿಸುತ್ತಿದ್ದರು. ಹೀಗಾಗಿ ಸಂಶೋಧನೆಯ ವಿಚಾರವಾಗಿ ಜೋಸಲಿನರಿಗೆ ವಿವರಿಸುವ ಅವಕಾಶ ದೊರೆಯುತ್ತಿರಲಿಲ್ಲ. ಅವರನ್ನು ಕೇಳುತ್ತಿದ್ದ ಬಹುತೇಕರು ಜೋಸಲಿನರನ್ನು ಕೇಳುತ್ತಿದ್ದ ಪ್ರಶ್ನೆಗಳು ಲಿಂಗ ತಾರತಮ್ಯದಿಂದ ಕೂಡಿದ ಮುಜಗರಗೊಳಿಸುವ ವೈಯಕ್ತಿಕ ಪ್ರಶ್ನೆಗಳಾಗಿರುತ್ತಿದ್ದವು. ಇದರಿಂದ ಜೋಸಲಿನ್‌ ಬಹಳ ನೊಂದುಕೊಂಡರೂ ಅದನ್ನು ತೋರ್ಪಡಿಸುವಂತಿರಲಿಲ್ಲ.

 1969ರಲ್ಲಿ ಕೇಂಬ್ರಿಜ್‌ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪಡೆದ ನಂತರ ಅವರು ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇರಿದರು. ಈ ನಡುವೆ ಸರ್ಕಾರಿ ಅಧಿಕಾರಿಯೊಬ್ಬರೊಂದಿಗೆ ಜೋಸಲಿನರ ವಿವಾಹ ನಿಶ್ಚಯವಾಗುತ್ತದೆ. ಅವರ ಪತಿ ಬರ್ನಲ್ಲರಿಗೆ ನಿರಂತರವಾಗಿ ಒಂದು ಪ್ರದೇಶದಿಂದ ಮತ್ತೊಂದೆಡೆಗೆ ವರ್ಗಾವಣೆ ಆಗುತ್ತಲೆ ಇರುತ್ತದೆ. ವಿವಾಹದ ನಂತರ ಜೋಸಲಿನರು ಅವರ ಪತಿಯೊಂದಿಗೆ ಬ್ರಿಟನ್ನಿನ ವಿವಿಧ ಸ್ಥಳಗಳಲ್ಲಿ ನೆಲೆಸಬೇಕಾಗಿ ಬಂದಿದ್ದು ಅವರು ಒಂದೆಡೆ ಇದ್ದು ಖಭೌತ ವಿಜ್ಞಾನದಲ್ಲಿ ಅದರಲ್ಲೂ ಪಲ್ಸಾರಗಳ ಬಗ್ಗೆ ಸಂಶೋಧನೆ ನಡೆಸಲು ಅನುಕೂಲ ದೊರೆಯದೆಯೆ ಹೋಗುತ್ತದೆ. ಆದರೂ ವಿಶ್ವದ ಹಲವಾರು ವಿಶ್ವವಿದ್ಯಾಲಯಗಳ ಅಧ್ಯಾಪಕರಾಗಿ, ಸಂಘ ಸಂಸ್ಥೆಗಳ ಮುಖ್ಯಸ್ಥರಾಗಿ, ಸೇವೆ ಸಲ್ಲಿಸಿದ್ದಾರೆವಿಶ್ವದ ಅನೇಕ ಸಂಘ ಸಂಸ್ಥೆಗಳು ನೀಡುವ ಪದವಿ, ಬಹುಮಾನಗಳಿಗೆ ಪಾತ್ರರಾಗಿದ್ದಾರೆ. 1974ರಲ್ಲಿ ಭೌತಶಾಸ್ತ್ರಕ್ಕೆ ನೀಡುವ ನೊಬೆಲ್‌ ಬಹುಮಾನವನ್ನು ಪಲ್ಸಾರನ ಸಂಶೋಧನೆಗೆಂದು ಘೋಷಿಸಿದಾಗ ವಿಶ್ವದ ವಿಜ್ಞಾನ ಜಗತ್ತಿಗೆ ಆಶ್ಚರ್ಯದ ಜೊತೆಗೆ ಒಂದು ಆಘಾತ ಕಾದಿದ್ದಿತು. ಆಂಟೊನಿ ಹೆವಿಸ್‌ ಮತ್ತು ಸರ್‌ ಮಾರ್ಟಿನ ರೈಲೆ ಆ ವರ್ಷದ ನೊಬೆಲ್‌ ಬಹುಮಾನವನ್ನು ಹಂಚಿಕೊಂಡಿದ್ದರು. ಸರ್‌ ಮಾರ್ಟಿನ ರೈಲೆಗೆ ರೇಡಿಯೋ ಟೆಲಿಸ್ಕೋಪಿನ ವಿನ್ಯಾಸ ಮತ್ತು ಕಾರ್ಯನಿರ್ವಹಣೆಯನ್ನು ರೂಪಿಸಿದನ್ನು ಗಮನದಲ್ಲಿರಸಿಕೊಂಡು ಬಹುಮಾನ ಘೋಷಿಸಲಾಗಿತ್ತು. ಜೋಸಲಿನಾರ ಹೆಸರು ಅಪ್ಪಿತಪ್ಪಿಯೂ ಈ ಸಂಶೋಧನೆಯಲ್ಲಿ ಹೆಸರಿಸುವ ಗೋಜಿಗೆ ಹೋಗಿರಲಿಲ್ಲ. ಇದು ಒಂದು ವಿವಾದವನ್ನೇ ಸೃಷ್ಟಿಮಾಡಿತು. ಇದಕ್ಕೆ ಜೋಸಲಿನಾರು ನೀಡಿದ ಪ್ರಿತಿಕ್ರಿಯೆ ಕಣ್ಣು ತೆರೆಸುವಂತಿತ್ತು.” ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಸಂಶೋಧನಾ ವಿದ್ಯಾರ್ಥಿಗಳಿಗೆ ನೊಬೆಲ್‌ ಬಹುಮಾನ ಘೋಷಣೆ ಮಾಡುವುದು ಅದರ ಘನತೆಗೆ ಕಡಿಮೆ ಎನಿಸಿರಬೇಕು ಹಾಗಾಗಿ ನನ್ನನ್ನು ಹೆಸರನ್ನು ಕೈಬಿಟ್ಟಿರಬೇಕು” ಎಂದು ಅವರು ಹೇಳಿ ವಿವಾದಕ್ಕೆ ಅವರ ತೆರೆ ಎಳೆದಿದ್ದರು. 2019ರಲ್ಲಿ 30ಲಕ್ಷ ಡಾಲರುಗಳ ವಿಶೇಷ ಅನ್ವೇಷಣೆಗೆ ನೀಡುವ ಅಂತರರಾಷ್ಟ್ರೀಯ ಬಹುಮಾನವನ್ನು ಜೋಸಲಿನರಿಗೆ ನೀಡಿ ಗೌರವಿಸಲಾಯಿತು. ಇದರ ಸಂಪೂರ್ಣ ಮೊತ್ತವನ್ನು ಅವರು ಅಲ್ಪಸಂಖ್ಯಾತ ಮತ್ತು ನಿರಾಶ್ರಿತ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಬ್ರಿಟನ್ನಿನ ಭೌತ ಸಂಶೋಧನಾ ಸಂಸ್ಥೆಗೆ ದಾನವಾಗಿ ನೀಡಿದರು.

       ಪಲ್ಸಾರುಗಳು ತಮ್ಮಷ್ಟಕ್ಕೆ ತಾವು ಬುಗುರಿಯಂತೆ ಗಿರಕಿ ಹೊಡೆಯುತ್ತಿರುವ ಒಂದು ವಿಶೇಷ ಬಗೆಯ ನ್ಯೂಟ್ರಾನ್‌ ನಕ್ಷತ್ರಗಳು. ನಕ್ಷತ್ರ ಜೀವನದ ಕೊನೆಯ ಹಂತದಲ್ಲಿ ಅದರಲ್ಲಿನ ದ್ರವ್ಯವು ಅಪಾರವಾದ ಗುರುತ್ವದ ಕಾರಣದಿಂದ ಅನಂತ ಪ್ರಮಾಣದ ಒತ್ತಡಕ್ಕೆ ಒಳಗಾಗಿರುತ್ತದೆ. ಇಂತಹ ಸ್ಥಿತಿಯಲ್ಲಿ ಪರಮಾಣುವಿನಲ್ಲಿನ ಎಲೆಕ್ಟ್ರಾನುಗಳು ಪ್ರೋಟಾನುಗಳು ಪ್ರತ್ಯೇಕವಾಗಿರದೆ ಒಟ್ಟಿಗಿರುವಂತೆ ಒತ್ತಲ್ಪಟ್ಟು ನ್ಯೂಟ್ರಾನುಗಳಾಗಿ ಪರಿವರ್ತಿತವಾಗಿರುತ್ತವೆ. ನಮ್ಮ ಸೂರ್ಯನ ಗಾತ್ರದ ನಕ್ಷತ್ರವೇನಾದರೂ ನ್ಯೂಟ್ರಾನ್‌ ನಕ್ಷತ್ರವಾಯಿತು ಎಂದು ಕಲ್ಪಿಸಿಕೊಂಡರೆ ಅದರ ಗಾತ್ರ 10ರಿಂದ 20ಕಿಮೀ ತ್ರಿಜ್ಯವಿರುವ ಪುಟ್ಟ ಗೋಳವಾಗಿರುತ್ತದೆ! ಅದರೆ ಸೂರ್ಯನ ಗಾತ್ರದ ನಕ್ಷತ್ರಗಳು ನ್ಯೂಟ್ರಾನು ನಕ್ಷತ್ರಗಳಾಗಲು ಸಾಧ್ಯವಿಲ್ಲ. ಏಕೆಂದರೆ ಸೈದ್ಧಾಂತಿಕವಾಗಿ ಒಂದು ನಕ್ಷತ್ರ ತನ್ನ ಜೀವನ ಚಕ್ರದ ಅಂತ್ಯದಲ್ಲಿ ನ್ಯೂಟ್ರಾನ್‌ ನಕ್ಷತ್ರವಾಗಬೇಕಾದರೆ ಅದರ ಗಾತ್ರ ಕನಿಷ್ಟವೆಂದರೂ ಸೂರ್ಯನ ರಾಶಿಯ ೮ರಿಂದ ೧೦ ಪಟ್ಟು ಹೆಚ್ಚು ಇರಬೇಕಾಗುತ್ತದೆ. ನ್ಯೂಟ್ರಾನ್‌ ನಕ್ಷತ್ರಗಳೆಲ್ಲವೂ ಪಲ್ಸಾರುಗಳಾಗಿರಬೇಕಾಗಿಲ್ಲ. ಒಂದು ನಕ್ಷತ್ರ ನ್ಯೂಟ್ರಾನ್‌ ನಕ್ಷತ್ರವಾದ ಮೇಲೆಯೂ ಅದರ ಯಾವುದೋ ಒಂದು ಭಾಗದಲ್ಲಿ ಉಷ್ಣ ಬೈಜಿಕ ಕ್ರಿಯೆಗಳು ನಡೆಯುತ್ತಿದ್ದು ಆ ಭಾಗದಿಂದ ಮಾತ್ರ ವಿಕಿರಣಗಳು ಅಂತರಿಕ್ಷಕ್ಕೆ ಹೊರಸೂಸುಲ್ಪಡುತ್ತಿರುತ್ತವೆ. ಅಂತಹ ನ್ಯೂಟ್ರಾನ್‌ ನಕ್ಷತ್ರ ತನ್ನಷ್ಟಕ್ಕೆ ತಾನೆ ಬುಗುರಿಯ ತರಹ ಗಿರಕಿ ಹೊಡೆಯುತ್ತಿದ್ದರೆ ವಿಕಿರಣ ಹೊರಸೂಸುವ ನೋಟದ ನೇರದಲ್ಲಿರುವ ವೀಕ್ಷಕರಿಗೆ ಅದರಿಂದ ನಿಯಮಿತ ಅವಧಿಯಲ್ಲಿ ನಮ್ಮ ನಾಡಿ ಮಿಡಿತದಂತೆ ವಿಕಿರಣವು ಬಿಟ್ಟುಬಿಟ್ಟು ಹೊರಸೂಸುವಂತೆ ತೋರುತ್ತದೆ. ವಿಕಿರಣಗಳು ಹೊರಸೂಸುತ್ತಿರುವ ಭಾಗ ನಮ್ಮ ಕಡೆಗೆ ಬಂದಾಗ ನಕ್ಷತ್ರ ಸ್ವಿಚ್‌ ಆನ್‌ ಆದಂತೆಯೂ ಅದು ಹಿಂದಕ್ಕೆ ತಿರುಗಿದಾಗ ಸ್ವಿಚ್‌ ಆಫ್‌ ಆದಂತೆಯೂ ತೋರುತ್ತದೆ. ಉದಾಹರಣೆಗೆ ಜೋಸಲಿನರು ಕಂಡು ಹಿಡಿದ ಪಲ್ಸಾರ್ PSR B1919+21 ನಕ್ಷತ್ರವು ಸುಮಾರು ೧.೩೩೭೩ ಸೆಕೆಂಡಿಗೆ ಒಮ್ಮೆ ಮಿಡಿಯುವಂತೆ ರೇಡಿಯೋ ತರಂಗಗಳನ್ನು ನಮ್ಮೆಡೆಗೆ ಹೊರಸೂಸುತ್ತದೆ.

ರೇಡಿಯೋ ತರಂಗಗಳನ್ನಲ್ಲದೆ ಕ್ಷ-ಕಿರಣಗಳನ್ನು, ಗಾಮಾ ಮತ್ತು ಗೋಚರ ಬೆಳಕನ್ನು ಹೊರಸೂಸುವ ಪಲ್ಸಾರುಗಳನ್ನು ದೂರ ದರ್ಶಕಗಳನ್ನು ಬಳಸಿ ಪತ್ತೆ ಮಾಡಲಾಗಿದೆ. ಭಾರತದಲ್ಲಿ ರೇಡಿಯೋ ದೂರದರ್ಶಕವನ್ನು ಪುಣೆ, ಕೊಡೈಕೆನಾಲ್‌ಗಳಲ್ಲದೆ, ಕರ್ನಾಟಕದ ಗೌರಿಬಿದನೂರಿನ ಕೋಟಾಲ ದಿನ್ನೆಯಲ್ಲಿ ಸ್ಥಾಪಿಸಲಾಗಿದೆ. ಈ ಕೇಂದ್ರವನ್ನು ಪಲ್ಸಾರುಗಳು ಮತ್ತು ಸೌರ ಚಟುವಟಿಕೆಗಳನ್ನು ವೀಕ್ಷಿಸಲು 1976ರಲ್ಲಿ ಆರಂಭಿಸಲಾಯಿತು. ಪಲ್ಸಾರುಗಳಿಗೆ ಸಂಬಂಧಿಸಿದಂತೆ ಹೊಸ ಹೊಸ ಸಂಶೋಧನೆಗಳು ಹೊಸ ಆವಿಷ್ಕಾರಗಳು ನಡೆಯುತ್ತಲೆ ಇವೆ. ಈವರೆಗೆ ವಿಶ್ವದಾದ್ಯಂತ ಅಸಂಖ್ಯಾತ ಬರಹಗಳು, ಸಂಶೋಧನಾ ಪ್ರಬಂಧಗಳು ಪಲ್ಸಾರಗಳನ್ನು ಕುರಿತು ಪ್ರಕಟವಾಗಿವೆ. ಖಭೌತ ವಿಜ್ಞಾನದ ಅತಿ ಬೃಹತ್‌ ವಿಭಾಗವಾಗಿ ಪಲ್ಸಾರುಗಳ ಅಧ್ಯಯನವು ಬೆಳೆದು ನಿಂತಿದೆ. ಎಂಭತ್ತೆರಡು ವಸಂತಗಳನ್ನು ಪೂರೈಸಿರುವ ಜೋಸಲಿನ್‌ ಬೆಲ್‌ ಬರ್ನಾಲ್‌ ರವರು ಇಂಗ್ಲೆಂಡಿನ ಬ್ರುನೆಲ್‌ ವಿಶ್ವವಿದ್ಯಾಲಯದ ರೆಕ್ಟರ್‌ ಆಗಿ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದುಕೊಂಡು ವೈಜ್ಞಾನಿಕ ಸಂಶೋಧನೆಯಲ್ಲಿ ಸಕ್ರಿಯವಾಗಿ ತೊಡಗಲು ಮಹಿಳೆಯರನ್ನು ಪ್ರೋತ್ಸಾಹಿಸುತ್ತಾ, ಚಟುವಟಿಕೆಯ ಜೀವನ ನಡೆಸುತ್ತ ಮುಂದುವರೆಯುತ್ತಿದ್ದಾರೆ.

No comments:

Post a Comment