Thursday, December 4, 2025

"ಮಣ್ಣು ಜೀವಸಂಕುಲದ ಹೊನ್ನು" ಇದು ಪ್ರತಿ ಜೀವಿಯ ಜೀವನಾಧಾರ.

"ಮಣ್ಣು ಜೀವಸಂಕುಲದ ಹೊನ್ನು" ಇದು ಪ್ರತಿ ಜೀವಿಯ

 ಜೀವನಾಧಾರ. 


ಲೇಖನ:

ಬಸವರಾಜ ಎಮ್ ಯರಗುಪ್ಪಿ 

ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು 

ಸಾ.ಪೊ ರಾಮಗೇರಿ. 

ತಾಲ್ಲೂಕು ಲಕ್ಷ್ಮೇಶ್ವರ ಜಿಲ್ಲಾ ಗದಗ. 


ಡಿಸೆಂಬರ್ 05 ವಿಶ್ವ ಮಣ್ಣಿನ ದಿನ ತನ್ನಿಮಿತ್ತ ಸಾಂದರ್ಭಿಕ ಲೇಖನ. 

"ತನ್ನ ಮಣ್ಣನ್ನು ನಾಶಪಡಿಸುವ ರಾಷ್ಟ್ರವು ತನ್ನನ್ನು ತಾನೇ ನಾಶಪಡಿಸಿಕೊಂಡಂತೆ"  ಎಂದು  ಫ್ರಾಂಕ್ಲಿನ್ ಡಿ ರೂಸ್ವೆಲ್ಟ್ ಹೇಳಿರುವ ಹಾಗೆ ಭೂಮಿಯ ಮೇಲೆ ಇರುವ ಪ್ರತಿ ಜೀವಿಯ ಜೀವನಾಧಾರ ಮಣ್ಣು.ಈ ಮಣ್ಣು ನಾಶವಾದರೆ ಭೂಮಿಯ ಮೇಲಿನ ಜೀವಿಗಳ ಜೀವನಾಧಾರವೇ ನಶ್ವರ, ಅಂದರೆ ಸರ್ವಸಾಶ. ಹೀಗಾಗಿ "ಭೂಮಿ, ಕೇವಲ ಮಣ್ಣು ಅಲ್ಲ;  ಇದು ಪರಿಸರದಲ್ಲಿನ ಸಸ್ಯಗಳು ಮತ್ತು ಪ್ರಾಣಿಗಳ ಪರಿಧಿ ಮೂಲಕ ಹರಿಯುವ ಶಕ್ತಿಯ ಕಾರಂಜಿಯಾಗಿದೆ. ಎಂದು  ಆಲ್ಡೊ ಲಿಯೋಪೋಲ್ಡ್ ಇನ್ನೊಂದು ಕಡೆ ಹೇಳುತ್ತಾರೆ.

ಎಲ್ಲಿ ಭರವಸೆಯ ಫಲವತ್ತಾದ ಮಣ್ಣು ಇರುತ್ತದೆ, ಅಲ್ಲಿ ಹೂವುಗಳು ಅರಳುತ್ತವೆ ಎನ್ನುವ ಹಿರಿಯರ ವಾಣಿಯಂತೆ ಮಣ್ಣು ಜೀವಸಂಕುಲದ ಹೊನ್ನು ಎಂದರೆ ತಪ್ಪಾಗಲಾರದು. ಮಣ್ಣಿಗೂ ಬದುಕಿಗೂ ಅವಿನಾಭಾವ ಸಂಬಂಧ ಇದೆ. ಬದುಕು ಹಸನಾಗಿರಬೇಕಾದರೆ ನಾವು ಬದುಕುವ ಪರಿಸರದಲ್ಲಿ ಫಲವತ್ತತೆಯಿಂದ ಕೂಡಿದ ಮಣ್ಣು ಕೂಡಾ ಮುಖ್ಯ.ಹೀಗಾಗಿ ಇದು ನಮ್ಮ ಮಣ್ಣು. ಇದು ತೈಲಕ್ಕಿಂತ ಹೆಚ್ಚು ಮೌಲ್ಯಯುತವಾಗಿದೆ..!

ಹೀಗಿರುವಾಗ ಆರೋಗ್ಯಕರ ಮಣ್ಣಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಣ್ಣಿನ ಸಂಪನ್ಮೂಲಗಳ ದೀರ್ಘಕಾಲ ನಿರ್ವಹಣೆ ಮಾಡುವುದರ ಬಗ್ಗೆ ತಿಳಿಸಲು  ವಿಶ್ವದಾದ್ಯಂತ ಪ್ರತಿ ವರ್ಷ ಡಿಸೆಂಬರ್ 05 ರಂದು "ವಿಶ್ವ ಮಣ್ಣಿನ" ದಿನವನ್ನಾಗಿ ಆಚರಿಸಲಾಗುತ್ತದೆ.ಈ ದಿನದಂದು ನಾವೆಲ್ಲರೂ ಮಣ್ಣನ್ನು ರಕ್ಷಿಸುವ ಪಣ ತೊಡಬೇಕು. ಜೊತೆಗೆ ಮಣ್ಣಿನ ಸವಕಳಿ, ರಾಸಾಯನಿಕಗಳ ಬಳಕೆ, ಲವಣಯುಕ್ತಗೊಳ್ಳುವುದು, ಮಣ್ಣಿಗೆ ಪ್ಲಾಸ್ಟಿಕ್ ಸೇರುವುದು ಸೇರಿದಂತೆ ಹಲವು ಸಮಸ್ಯೆಗಳತ್ತ ಎಲ್ಲರ ಗಮನ ಸೆಳೆಯುವ ಗುರಿಯನ್ನು ಈ ದಿನ ಹೊಂದಿದೆ.

#ಹಿನ್ನೆಲೆಯೇನು..?

 ವಿಶ್ವ ಮಣ್ಣಿನ ದಿನದ ಇತಿಹಾಸವನ್ನು ಒಮ್ಮೆ ಅವಲೋಕಿಸಿದಾಗ ಮಣ್ಣಿನ ವಿಜ್ಞಾನಗಳ ಅಂತರರಾಷ್ಟ್ರೀಯ ಒಕ್ಕೂಟ (ಐಯುಎಸ್ಎಸ್) 2002ರಲ್ಲಿ ವಿಶ್ವ ಮಣ್ಣಿನ ದಿನ ಆಚರಣೆಗೆ ಶಿಫಾರಸು ಮಾಡಿತ್ತು. ಥಾಯ್ಲೆಂಡ್ ನೇತೃತ್ವದಲ್ಲಿ ಎಫ್ಎಒ ಸಹಾಯದೊಂದಿಗೆ ವಿಶ್ವ ಮಣ್ಣಿನ ದಿನ ಆಚರಣೆ ಆರಂಭವಾಯಿತು. 2013 ಜೂನ್​​ನಲ್ಲಿ ಎಫ್ಎಒ ಒಕ್ಕೂಟವು ಈ ದಿನಾಚರಣೆಗೆ ಬೆಂಬಲ ಸೂಚಿಸಿದ್ದಲ್ಲದೆ ವಿಶ್ವಸಂಸ್ಥೆಯ 68ನೇ ಸಭೆಯಲ್ಲಿ ಇದನ್ನು ಅಧಿಕೃತವಾಗಿ ಅಂಗೀಕರಿಸುವಂತೆ ಮನವಿ ಮಾಡಿತು. ಇದರ ಪರಿಣಾಮ 2013 ಡಿಸೆಂಬರ್​ನಲ್ಲಿ ವಿಶ್ವಸಂಸ್ಥೆಯು ಡಿಸೆಂಬರ್ 05 ರಂದು ವಿಶ್ವ ಮಣ್ಣಿನ ದಿನಾಚರಣೆಗೆ ಸಮ್ಮತಿ ಸೂಚಿಸಿತು. 2014ರಲ್ಲಿ ಮೊದಲ ಬಾರಿಗೆ ಈ ದಿನಾಚರಣೆಯನ್ನು ಅಧಿಕೃತವಾಗಿ ಆಚರಿಸಲಾಯಿತು. 

ನಾವು ಸೇವಿಸುವ ಆಹಾರ, ತೊಡುವ ಬಟ್ಟೆ, ವಾಸಿಸುವ ಮನೆ ಎಲ್ಲದಕ್ಕೂ ಮಣ್ಣು ಆಧಾರ. ಇದೇ ಕಾರಣಕ್ಕೆ ನಮ್ಮ ಪೂರ್ವಜರು ಮಣ್ಣನ್ನು ಅತಿಶ್ರೇಷ್ಠ ಮತ್ತು ಪವಿತ್ರ ಎಂದು ಪರಿಗಣಿಸಿದ್ದಾರೆ.  ಮಣ್ಣಿನ ಗುಣಮಟ್ಟ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು.ನಮ್ಮ ಬದುಕಿನ ಎಲ್ಲ ಸ್ತರಗಳಲ್ಲೂ ಮಣ್ಣು ಬೇಕಿದ್ದು, ನಾನಾ ಮಾಲಿನ್ಯಕಾರಕಗಳಿಂದ ಇಂದು ಕಲುಷಿತಗೊಳಿಸುತ್ತಿದೆ. ಮಣ್ಣಿನ ಸವಕಳಿ ಹೆಚ್ಚುತ್ತಿದ್ದು ಪೋಷಕಾಂಶಗಳ ಪ್ರಮಾಣ ಕಡಿಮೆಯಾಗುತ್ತಿದೆ. ಮಣ್ಣಿನ ಗುಣಮಟ್ಟದಲ್ಲಿ ವ್ಯತ್ಯಯವಾದಲ್ಲಿ ಆಹಾರ, ನೀರು, ಗಾಳಿ ಸೇರಿದಂತೆ ಇಡೀ ಪರಿಸರದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಮನಗಾಣಬೇಕು. 

>>ಮಣ್ಣಿನ  ಸುರಕ್ಷತೆಗಾಗಿ ಕಾಳಜಿವಿರಲಿ:

ಮಾನವ ಮತ್ತು ಮಣ್ಣಿಗೆ ಬಿಡಲಾರದ ನಂಟು. ಇಡೀ ಜೀವಸಂಕುಲ ಆಧರಿಸಿದೆ. ಎಲ್ಲ ಜೀವರಾಶಿಗಳಿಗೂ ಮಣ್ಣು ಬೇಕಿದೆ. ನಮ್ಮ ಎಲ್ಲ ಅಗತ್ಯಗಳಿಗೆ ಮಣ್ಣು ಮೂಲ ಆಧಾರ'. ಹಾಗಾಗಿ ನಾವು ಮಣ್ಣಿನ ಕಾಳಜಿವಹಿಸಬೇಕು.

>>ನಾವು ಮಣ್ಣಿನ ಬಗ್ಗೆ ಯಾಕೆ ಕಾಳಜಿ ವಹಿಸಬೇಕು?

ಜೀವಂತಿಕೆಯ ಮೂಲವೇ ಮಣ್ಣು. ಭೂಮಿಯಲ್ಲಿರುವ ಶೇ.25ಕ್ಕಿಂತಲೂ ಹೆಚ್ಚು ಜೀವಜಾಲಗಳಿಗೆ ಮೂಲವೇ ಮಣ್ಣು. ಮಣ್ಣು ಶೇಕಡಾ 95ರಷ್ಟು ನಮ್ಮ ಆಹಾರದ ಮೂಲವಾಗಿದೆ.ಏಕೆಂದರೆ ಹಣ್ಣು,ತರಕಾರಿ ಮತ್ತು ಧವಸ ಧಾನ್ಯಗಳ ಗುಣಮಟ್ಟ, ಪ್ರಮಾಣ ಎಲ್ಲವೂ ಮಣ್ಣಿನ ಫಲವತ್ತತೆಯನ್ನು ಆಧರಿಸಿರುತ್ತದೆ. ಮಣ್ಣಿನ ಗುಣಮಟ್ಟವು ಹವಾಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನದ ವಿರುದ್ಧ ಹೋರಾಡಲು ಸಹಕಾರಿ. 

>>ಮಣ್ಣು ಜೀವಿಯ ಔಷಧಿಗಳ ಮೂಲ:

ಮಣ್ಣು ಜೀವಿಗಳ ಔಷಧಿಯ ಮೂಲವಾಗಿದೆ. ಮಾನವನ ಆರೋಗ್ಯವನ್ನು  ಬೆಂಬಲಿಸಿ ಸದೃಢ ಸಮಾಜ ನಿರ್ಮಾಣ ಸಾಧ್ಯ. ಮಣ್ಣು ವಿಶಾಲವಾದ ಮತ್ತು ನೈಸರ್ಗಿಕ ಔಷಧಾಲಯವಾಗಿದೆ.ಮಣ್ಣಿನಲ್ಲಿರುವ ಅಂಶಗಳಿಂದ ರೋಗಿಗಳ ಸೋಂಕಿನ ವಿರುದ್ಧ ಹೋರಾಡಲು ನಾವು ತೆಗೆದುಕೊಳ್ಳುವ ಪ್ರತಿಜೀವಕಗಳನ್ನು ಮಣ್ಣಿನ ಸೂಕ್ಷ್ಮಜೀವಿಗಳನ್ನು ಬಳಸಿ ತಯಾರಿಸಲಾಗುತ್ತದೆ.

>>ಮಣ್ಣಿನ ಜೀವಿಗಳ ಪ್ರಾಮುಖ್ಯತೆ:

ಮಣ್ಣು ನಮ್ಮ ಜೀವ, ಅದನ್ನು ಸಂರಕ್ಷಿಸಿ. ಮಣ್ಣು-ನೀವು ಯೋಚಿಸುವುದಕ್ಕಿಂತ ಇದು ಹೆಚ್ಚು  ಆಗಾದ ಶಕ್ತಿಯ ಸಂಪನ್ಮೂಲವಾಗಿದೆ.ಮಾಲಿನ್ಯಕಾರಕಗಳನ್ನು ಒಡೆಯುವ ಮೂಲಕ ಮಣ್ಣಿನ ಮಾಲಿನ್ಯದ ಪರಿಹಾರಕ್ಕೆ ಕೊಡುಗೆ ನೀಡುತ್ತವೆ.ಮಣ್ಣಿನಲ್ಲಿ ಇಂಗಾಲವನ್ನು ಸಂಗ್ರಹಿಸುವ ಮೂಲಕ ಹವಾಮಾನ ಬದಲಾವಣೆಯ ಹೊಂದಾಣಿಕೆ ಮತ್ತು ತಗ್ಗಿಸುವಿಕೆಯಲ್ಲಿ ಮಣ್ಣಿನ ಜೀವಿಗಳು ಪ್ರಮುಖ ಪಾತ್ರವಹಿಸುತ್ತವೆ.ಮಣ್ಣಿನ ಜೀವವೈವಿಧ್ಯವು ನಾವು ಪ್ರಸ್ತುತ ಎದುರಿಸುತ್ತಿರುವ ಅನೇಕ ಜಾಗತಿಕ ಸವಾಲುಗಳಿಗೆ ಪ್ರಕೃತಿ ಆಧಾರಿತ ಪರಿಹಾರವಾಗಿದೆ.

>>ಮಣ್ಣಿನ ಸವಕಳಿಯ ಕಾರಣಗಳು ಇವು:

*ವೇಗವಾಗಿ ಬೀಸುವ ಗಾಳಿ

*ರಭಸವಾಗಿ ಹರಿಯುವ ನೀರು

*ಅರಣ್ಯನಾಶ 

*ಮಿತಿವೀರಿದ ಮೇಯುವಿಕೆ ಮತ್ತು ಇತ್ಯಾದಿ 

>>ಮಣ್ಣಿನ ಸವಕಳಿಯನ್ನು ತಡೆಗಟ್ಟುವ ಕ್ರಮಗಳು:

ಮಣ್ಣಿನ ಸವಕಳಿಯನ್ನು ತಡೆಗಟ್ಟಲು ಅನುಸರಿಸಬಹುದಾದ ಕೆಲವು ಕ್ರಮಗಳು ಹೀಗಿವೆ-

*ಅರಣ್ಯೀಕರಣ: ಗಿಡಗಳನ್ನು ನೆಟ್ಟು ಬೆಳೆಸುವುದನ್ನು ಅರಣ್ಣೀಕರಣ ಎನ್ನುವರು. ಮಣ್ಣಿನ ಸವಕಳಿಯನ್ನು ತಪ್ಪಿಸಲು ಇದೊಂದು ಪರಿಣಾಮಕಾರಿಯಾದ ಕ್ರಮವಾಗಿದೆ. ಮರಗಳ ಬೇರುಗಳು ಮಣ್ಣಿನ ಕಣಗಳನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳುತ್ತವೆ. ಇದರಿಂದ ಗಾಳಿ ಮತ್ತು ಮಳೆಯಿಂದ ಮಣ್ಣಿನ ಸವಕಳಿಯಾಗುವುದು ತಪ್ಪುತ್ತದೆ.

*ಮರಗಳ ತಡೆಪಟ್ಟಿ: ಹೊಲಗಳ ದಂಡೆಗಳಲ್ಲಿ ಮರಗಳನ್ನು ಬೆಳೆಸಿದಾಗ, ಆ ಮರಗಳಿಂದ ಗಾಳಿಂದ ತಡೆಯಲ್ಪಟ್ಟು ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ.

*ತಡೆಒಡ್ಡುಗಳನ್ನು ನಿರ್ಮಿಸುವುದು. 

*ಸಮಪಾತಳಿ ಬೇಸಾಯ: ಬೆಟ್ಟಗುಡ್ಡಗಳ ಪ್ರದೇಶಗಳಲ್ಲಿ ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡಲಾಗುತ್ತದೆ. 

*ಯೋಜಿತ ಮೇಯಿಸುವಿಕೆ: ದನ-ಕರುಗಳು, ಕುರಿ-ಮೇಕೆಗಳಿಂದ ಮೇಯಿಸುವಿಕೆಯನ್ನು ಯೋಜಿತ ರೀತಿಯಲ್ಲಿ ಮಾಡುವುದರಿಂದ ಹುಲ್ಲಿನ ಆವರಣವನ್ನು ಯೋಜಿತ ರೀತಿಯಲ್ಲಿ ಮಾಡುವುದರಿಂದ ಹುಲ್ಲಿನ ಆವರಣವನ್ನು ಉಳಿಸಿ ಮಣ್ನುನ್ನು ಸಂರಕ್ಷಿಸಬಹುದು. 

*ಸರದಿ ಬೆಳೆ ಪದ್ಧತಿ ಅಳವಡಿಸಿಕೊಂಡು ಸಾಗುವಳಿ ಮಾಡುವುದು.

ಹೀಗೆ ಮಣ್ಣಿನ ಸವಕಳಿಯ ಎಲ್ಲಾ ಕಾರಣಗಳನ್ನು ನಿಯಂತ್ರಿಸಿದರೆ ಮಣ್ಣಿನ ಸವಕಳಿಯು ತಡೆಯಲ್ಪಟ್ಟು ಮಣ್ಣಿನ ಫಲವತ್ತತೆ ಉಳಿಯುತ್ತದೆ. ಮಣ್ಣಿನ ಫಲವತ್ತತೆ ಹಾಗೆಯೇ ಉಳಿಯುತ್ತದೆ. 

>>ಮಣ್ಣಿನ ಮಾಲಿನ್ಯ ತಡೆಯಲು ಏನು ಮಾಡಬೇಕು..?

*ಮೊದಲು ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು. 

*ಕಸವಿಲೇವಾರಿ ಸಂದರ್ಭದಲ್ಲಿ  ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಅವಕಾಶ ನೀಡಬೇಕು. ಇದರಲ್ಲಿ ಹಸಿ ತ್ಯಾಜ್ಯ, ಒಣ ತ್ಯಾಜ್ಯ ಇತರೆ ವಿಘಟನೀಯವಲ್ಲದ ವಸ್ತುಗಳನ್ನು ಬೇರ್ಪಡಿಸುವ ಕಾರ್ಯವಾಗಬೇಕು. 

*ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಲು ಪ್ರೋತ್ಸಾಹ ನೀಡಬೇಕು. 

*ಪರಿಸರಕ್ಕೆ ಹಾನಿಯುಂಟುಮಾಡುವ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು. 

*ಕೊಳೆಯುವ ಆಹಾರ ತ್ಯಾಜ್ಯಗಳನ್ನು ಗೊಬ್ಬರವನ್ನಾಗಿ ಮಾಡಬೇಕು. 

>>ವಿಶ್ವ ಮಣ್ಣಿನ ದಿನಕ್ಕಾಗಿ ನಾವು ಏನು ಮಾಡಬಹುದು..?

 ಮಣ್ಣಿನ ಆರೋಗ್ಯವನ್ನು ಸುಧಾರಿಸಲು ಸಮುದಾಯಗಳಲ್ಲಿನ ಜನರ ಕಾಳಜಿ ಉತ್ತೇಜಿಸುವುದು ಮತ್ತು ಆರೋಗ್ಯಕರ ಪರಿಸರ ವ್ಯವಸ್ಥೆಗಳ ಮೂಲಕ ಮಾನವ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಎಲ್ಲರಲ್ಲಿ ಮಣ್ಣಿನ ಅರಿವು ಮೂಡಿಸುವುದು. 

 ಜಾಗೃತಿ ಮೂಡಿಸಲು ನೀವು ಸಾಮಾಜಿಕ ಮಾಧ್ಯಮದ ಜಾಲತಾಣಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು  ಮಣ್ಣಿನ ರಕ್ಷಣಾ ಕಾರ್ಯಗಳಲ್ಲಿ ಭಾಗವಹಿಸುವುದು. 

ಅತಿಯಾದ ಕೀಟನಾಶಕ,ರಸಾಯನಿಕಗಳ ಬಳಕೆಯಿಂದ ದಿನದಿಂದ ದಿನಕ್ಕೆ ಮಣ್ಣು ಹಾಳಾಗುತ್ತಿದೆ. ಹೀಗಾಗಿ, ಜೀವ ಸಂಕುಲದ

ಉಳಿವಿಗೆ ಮಣ್ಣಿನ ಅಗತ್ಯತೆ ಕುರಿತು ದೇಶ- ವಿದೇಶಗಳಲ್ಲಿ ಜಾಗೃತಿ ಮೂಡಿಸುವ ಮಹತ್ವದ ಕಾರ್ಯವನ್ನು ಸದ್ಗುರು ಜಗ್ಗಿ ವಾಸುದೇವ್ ಅವರು ಈಶ ಫೌಂಡೇಶನ್ವತಿಯಿಂದ ವಿಶ್ವದ ಪ್ರಮುಖ ದೇಶಗಳಲ್ಲಿ ಬೈಕ್ ಸವಾರಿ ಮಾಡಿ 'ಮಣ್ಣು ಉಳಿಸಿ' ಕಾರ್ಯಕ್ರಮವನ್ನು  ಇಲ್ಲಿ ಸ್ಮರಿಸಬಹುದು. 

>>ವಿಶ್ವ ಮಣ್ಣಿನ ದಿನಕ್ಕಾಗಿ ವಿಶೇಷ ಸಂದೇಶಗಳು:

*ನೀವು ಭೂಮಿಯನ್ನು ಹಾಳುಮಾಡಿದರೆ, ಅಲ್ಲಿ ನೀವು ಯಾವ ಬೆಳೆ ಬೆಳೆಯಲು ಅಸಾಧ್ಯ. *ಫಲವತ್ತಾದ ಭೂಮಿ ಪ್ರಕೃತಿಯ ಸೌಂದರ್ಯಗಳಲ್ಲಿ ಒಂದಾಗಿದೆ, ಅದನ್ನು ಕಲುಷಿತಗೊಳಿಸಬೇಡಿ.

*ರೆಡಿಮೇಡ್ ರಸಗೊಬ್ಬರಗಳು ಮಣ್ಣಿಗೆ ಹಾಗೂ ಆರೋಗ್ಯಕ್ಕೆ ಹಾನಿಕರ.

*ತುಂಬಾ ಸ್ವಾರ್ಥಿಗಳಾಗಬೇಡಿ;  ಭೂಮಿಯನ್ನು ಉಳಿಸಲು ಯೋಚಿಸಿ.

*ಭೂಮಿಯನ್ನು ನಮ್ಮ ಸ್ವಂತ ಪ್ರಯೋಜನಗಳಿಗಾಗಿ ಪ್ರಕೃತಿಯು ನಮಗೆ ಉಡುಗೊರೆಯಾಗಿ  ನೀಡಿದೆ. ಅದನ್ನು ಅರ್ಥಮಾಡಿಕೊಂಡು ನೈಸರ್ಗಿಕವಾಗಿ ಬಳಸಿ. 

*ಮಣ್ಣಿಗೆ ನಿಷ್ಠರಾಗಿರಿ. 

*ಮಣ್ಣನ್ನು ಜೀವಂತವಾಗಿರಿಸಿ, ಜೀವವೈವಿಧ್ಯತೆಯನ್ನು ಕಾಪಾಡಿ. 

ಒಟ್ಟಾರೆಯಾಗಿ ಮಾನವ ಮತ್ತು ಮಣ್ಣಿಗೆ ಬಿಡಲಾರದ ನಂಟು.ಇಡೀ ಜೀವಸಂಕುಲ ಆಧರಿಸಿದೆ. ಎಲ್ಲ ಜೀವರಾಶಿಗಳಿಗೂ ಮಣ್ಣು ಬೇಕಿದೆ. ನಮ್ಮ ಎಲ್ಲ ಅಗತ್ಯಗಳಿಗೆ ಮಣ್ಣು ಮೂಲ ಆಧಾರ.ಆದ್ದರಿಂದ ಮಣ್ಣಿನ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಮಣ್ಣಿಲ್ಲದೇ ಬದುಕಿಲ್ಲ, ಭವಿಷ್ಯವೂ ಇಲ್ಲ. ಮಣ್ಣಿನ ಮೇಲೆ ಅವಲಂಬಿಸಿರುವವರ ಸಂಖ್ಯೆಯೇ ಹೆಚ್ಚು. ಹಾಗಾಗಿ ಮುಂದಿನ ಪೀಳಿಗೆಗೆ ಮಣ್ಣಿನ ಮಹತ್ವ ಮನಗಾಣಿಸಬೇಕು.ಭೂಮಿ ಮೇಲಿನ ಜೀವಸಂಕುಲದ ಉಳಿವಿಗೆ ಅತ್ಯಗತ್ಯವಾಗಿರುವ ಮಣ್ಣು ಹಾಗೂ ಮಣ್ಣಿನ ಸಂರಕ್ಷಣೆಯ ಮಹತ್ವದ ಕುರಿತು ಜಾಗೃತಿ ಮೂಡಿಸಬೇಕು. ಅಂದಾಗ ಮಾತ್ರ ಮಣ್ಣು ಜೀವಸಂಕುಲದ ಹೊನ್ನು ಎನ್ನಲಡ್ಡಿಯಿಲ್ಲ. 

#ಕೊನೆಯ ಮಾತು:

"ಭೂಮಿಯನ್ನು  ಅಗೆಯುವುದು ಹೇಗೆ? ಮತ್ತು ಮಣ್ಣನ್ನು ಹೇಗೆ ಬೆಳೆಸುವುದು ಎಂಬುದನ್ನು ಮರೆತುಬಿಟ್ಟರೆ; ನಮ್ಮನ್ನು ನಾವು ಮರೆತುಬಿಟ್ಟಂತೆ" ಎಂದು- ಮಹಾತ್ಮ ಗಾಂಧೀಜಿ ಹೇಳಿರುವ ನಾಣ್ಣುಡಿ ಅಕ್ಷರಶಃ ಸತ್ಯ ಹಾಗೂ ಇಂದಿಗೂ ಪ್ರಸ್ತುತವಾಗಿದೆ. 





No comments:

Post a Comment