▼

Sunday, October 4, 2026

ಪಾಪ!! ಗ್ರಹದ ಪಟ್ಟ ಕಳೆದುಕೊಂಡ ಪುಟ್ಟ ಪ್ಲೂಟೋ : ಭಾಗ 1

            ಪಾಪ!!  ಗ್ರಹದ ಪಟ್ಟ ಕಳೆದುಕೊಂಡ ಪುಟ್ಟ ಪ್ಲೂಟೋ

ಭಾಗ 1

       ಲೇಖಕರು :   ರಾಮಚಂದ್ರ ಭಟ್ ಬಿ.ಜಿ.






.
ಒಂದು ಕಾಲದಲ್ಲಿ ಸೌರವ್ಯೂಹದ ಒಂಬತ್ತನೆಯ ಗ್ರಹವಾಗಿದ್ದ ಪ್ಲೂಟೋ, ಇಂದು ಕುಬ್ಜ ಗ್ರಹ. ಹಾಗಾದರೆ ಅದರ ತಪ್ಪೇನು?  ಪ್ಲುಟೊದ ಕಕ್ಷೆಯನ್ನು ಇತರ ವಸ್ತುಗಳು ದಾಟುವ ಸಾಧ್ಯತೆಯಿದ್ದ ಕಾರಣ, 2006ರಲ್ಲಿ ಅಂತರರಾಷ್ಟ್ರೀಯ ಖಗೋಳ ಒಕ್ಕೂಟವು (IAU) ಅದನ್ನು 'ಕುಬ್ಜ ಗ್ರಹ' (dwarf planet) ಎಂದು ಮರು-ವರ್ಗೀಕರಿಸಿತು.

ಸೌರವ್ಯೂಹದ ಕುಟುಂಬದಲ್ಲಿ ಗ್ರಹಗಳೆಲ್ಲ ಒಂದೇ ರೀತಿಯವಲ್ಲ. ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್‌ಗಳಂಥ ದೈತ್ಯ ಗ್ರಹಗಳಿವೆ; ಭೂಮಿ, ಶುಕ್ರ, ಮಂಗಳ ಮತ್ತು ಬುಧದಂಥ ಶಿಲಾಮಯ ಗ್ರಹಗಳಿವೆ. ಆದರೆ ಇವುಗಳಿಗಿಂತ ಬಹಳ ದೂರದಲ್ಲಿ, ಸೂರ್ಯನ ಬೆಳಕು ಮಂದವಾಗಿ ತಲುಪುವ ಹಿಮಾವೃತ ಪ್ರದೇಶದಲ್ಲಿ, ಒಂದು ಪುಟ್ಟ ಲೋಕ ಸದ್ದಿಲ್ಲದೆ ಸುತ್ತುತ್ತಿದೆ. ಅದೇ ಪ್ಲೂಟೋ.


ಒಂದು ಕಾಲದಲ್ಲಿ ನಮ್ಮ ಪಠ್ಯಪುಸ್ತಕಗಳಲ್ಲಿ ಸೌರವ್ಯೂಹದ ಒಂಬತ್ತನೆಯ ಗ್ರಹವಾಗಿ ಸ್ಥಾನ ಪಡೆದಿದ್ದ ಪ್ಲೂಟೋ, 2006ರಲ್ಲಿ ಆ ಸ್ಥಾನವನ್ನು ಕಳೆದುಕೊಂಡಿತು. ಅಂದಿನಿಂದ ವಿಜ್ಞಾನಾಸಕ್ತರ ನಡುವೆ ಒಂದು ಪ್ರಶ್ನೆ ಆಗಾಗ ಕೇಳಿಬರುತ್ತದೆ: ಪ್ಲೂಟೋ ನಿಜವಾಗಿಯೂ ಗ್ರಹವಲ್ಲವೇ? ಅಥವಾ ವಿಜ್ಞಾನಿಗಳು ಅದರ ಮೇಲಿದ್ದ ಗ್ರಹದ ಪಟ್ಟವನ್ನಷ್ಟೇ ತೆಗೆದುಹಾಕಿದರೇ? ಪ್ಲೂಟೋ ತನ್ನ ಗ್ರಹ ಎಂಬ ಸ್ಥಾನಮಾನ ಕಳೆದುಕೊಂಡಾಗ ನಿಜಕ್ಕೂ ದುಃಖವಾಗಿತ್ತು. ಅದೆಂತ ಸಮಸ್ಯೆಯಪ್ಪಾ ಇದಕ್ಕೆ ? ಅದೆಷ್ಟೋ ವರ್ಷಗಳವರೆಗೆ ಅದು ಗ್ರಹವೇ ಎಂದು ಹೇಳುತ್ತಿದ್ದೆವು.  

ದೂರದ ಲೋಕದ ಹುಡುಕಾಟ

ನೆಪ್ಚೂನ್‌ನ ಕಕ್ಷೆಯ ಆಚೆ ಇನ್ನೊಂದು ಗ್ರಹವಿರಬಹುದೆಂಬ ಕಲ್ಪನೆ ಖಗೋಳ ವಿಜ್ಞಾನಿಗಳಲ್ಲಿ ಬಹಳ ಹಿಂದಿನಿಂದಲೂ ಇತ್ತು. ಯುರೇನಸ್ ಮತ್ತು ನೆಪ್ಚೂನ್‌ಗಳ ಚಲನೆಯಲ್ಲಿನ ವ್ಯತ್ಯಾಸಗಳನ್ನು ಅಧ್ಯಯನ ಮಾಡಿದ ವಿಜ್ಞಾನಿಗಳು, ಅವುಗಳ ಮೇಲೆ ಮತ್ತೊಂದು ಗ್ರಹದ ಗುರುತ್ವಾಕರ್ಷಣೆ ಪರಿಣಾಮ ಬೀರುತ್ತಿರಬಹುದೆಂದು ಊಹಿಸಿದ್ದರು. ಅಮೆರಿಕದ ಖಗೋಳ ವಿಜ್ಞಾನಿ ಪರ್ಸಿವಲ್ ಲೋವೆಲ್ ಈ ಹುಡುಕಾಟದಲ್ಲಿ ಆಸಕ್ತಿ ಹೊಂದಿದ್ದರು. ಅವರ ಮರಣದ ನಂತರ, ಲೋವೆಲ್ ವೀಕ್ಷಣಾಲಯದಲ್ಲಿ ಕ್ಲೈಡ್ ಟಾಂಬಾಗ್ ಎಂಬ ಯುವ ಖಗೋಳ ವಿಜ್ಞಾನಿ ಈ ಕೆಲಸವನ್ನು ಮುಂದುವರಿಸಿದರು. ಒಂದೇ ಆಕಾಶಭಾಗದ ಛಾಯಾಚಿತ್ರಗಳನ್ನು ಬೇರೆ ಬೇರೆ ದಿನಗಳಲ್ಲಿ ತೆಗೆದು, ಅವುಗಳಲ್ಲಿನ ನಕ್ಷತ್ರಗಳ ಸ್ಥಾನಗಳನ್ನು ಹೋಲಿಸುವ ವಿಧಾನವನ್ನು ಬಳಸಿದರು. 
                                                                                                Clyde Tombaugh, in Kansas

ನಕ್ಷತ್ರಗಳು ಬಹುತೇಕ ಒಂದೇ ಸ್ಥಾನದಲ್ಲಿರುವಂತೆ ಕಾಣಿಸಿದರೂ, ಸೌರವ್ಯೂಹದ ವಸ್ತುಗಳು ಹಿನ್ನೆಲೆ ನಕ್ಷತ್ರಗಳಿಗೆ ಹೋಲಿಸಿದರೆ ಸ್ಥಾನ ಬದಲಾಯಿಸುತ್ತವೆ. ಹೀಗೆ ಸಾವಿರಾರು ಚಿತ್ರಗಳನ್ನು ಪರಿಶೀಲಿಸಿದ ನಂತರ, 1930ರ ಫೆಬ್ರವರಿ 18ರಂದು ಟಾಂಬಾಗ್ ಹೊಸ ಆಕಾಶಕಾಯವೊಂದನ್ನು ಗುರುತಿಸಿದರು. ಅದರ ಆವಿಷ್ಕಾರವನ್ನು ಮಾರ್ಚ್ 13ರಂದು ಅಧಿಕೃತವಾಗಿ ಪ್ರಕಟಿಸಲಾಯಿತು. ಆದರೆ ಈ ಆವಿಷ್ಕಾರದಲ್ಲಿ ಒಂದು ಸಣ್ಣ ವ್ಯಂಗ್ಯವಿದೆ. ಲೋವೆಲ್ ಊಹಿಸಿದ್ದ ಗ್ರಹದ ಸ್ಥಾನವನ್ನು ಕಂಡುಹಿಡಿಯುವುದು ಒಂದು ಸಾಧನೆಯಾಗಿದ್ದರೂ, ನಂತರದ ಅಧ್ಯಯನಗಳು ಪ್ಲೂಟೋ ಅಷ್ಟು ದೊಡ್ಡದಾದ ವಸ್ತುವಲ್ಲ ಎಂಬುದನ್ನು ತೋರಿಸಿದವು. ನೆಪ್ಚೂನ್‌ನ ಚಲನೆಯಲ್ಲಿ ಕಂಡ ವ್ಯತ್ಯಾಸಗಳಿಗೆ ಪ್ಲೂಟೋ ಕಾರಣವೆಂಬ ಆರಂಭಿಕ ನಿರೀಕ್ಷೆಯೂ ಸರಿಯಾಗಿರಲಿಲ್ಲ.


ಪ್ಲೂಟೋ ಎಂಬ ಹೆಸರು ಬಂದದ್ದು ಹೇಗೆ?

ಹೊಸ ಗ್ರಹಕ್ಕೆ ಯಾವ ಹೆಸರು ಇಡಬೇಕು ಎಂಬ ಪ್ರಶ್ನೆ ಎದುರಾದಾಗ, ಪುರಾಣಗಳ ದೇವತೆಗಳ ಹೆಸರುಗಳನ್ನು ಪರಿಗಣಿಸಲಾಯಿತು. ಕೊನೆಗೆ Pluto ಎಂಬ ಹೆಸರು ಆಯ್ಕೆಯಾಯಿತು. ರೋಮನ್ ಪುರಾಣದಲ್ಲಿ ಪ್ಲೂಟೋ ಭೂಗತ ಲೋಕದ ದೇವತೆ. ಈ ಹೆಸರನ್ನು ಸೂಚಿಸಿದವರು ವೆನೆಷಿಯಾ ಬರ್ನಿ ಎಂಬ 11 ವರ್ಷದ ಬ್ರಿಟಿಷ್ ಬಾಲಕಿ! ತನ್ನ ತಾತನೊಂದಿಗೆ ಈ ಹೊಸ ಆಕಾಶಕಾಯದ ಬಗ್ಗೆ ಮಾತನಾಡುತ್ತಿದ್ದಾಗ ಅವಳು ಪ್ಲೂಟೋ ಎಂಬ ಹೆಸರನ್ನು ಸೂಚಿಸಿದಳು. ಅವಳ ತಾತ ಈ ಸಲಹೆಯನ್ನು ಖಗೋಳ ವಿಜ್ಞಾನಿಗಳಿಗೆ ತಲುಪಿಸಿದರು. ಹೆಸರು ವಿಜ್ಞಾನಿಗಳಿಗೆ ಇಷ್ಟವಾಯಿತು; ಪ್ಲೂಟೋ ಅಧಿಕೃತವಾಗಿ ಆ ಹೆಸರನ್ನು ಪಡೆದುಕೊಂಡಿತು. ಇದರಲ್ಲಿ ಮತ್ತೊಂದು ಕುತೂಹಲಕರ ವಿಚಾರವಿದೆ. Pluto ಎಂಬ ಹೆಸರಿನ ಮೊದಲ ಎರಡು ಅಕ್ಷರಗಳು, ಪರ್ಸಿವಲ್ ಲೋವೆಲ್ ಅವರ ಹೆಸರಿನ ಮೊದಲಕ್ಷರಗಳೂ ಆಗಿವೆ. ಹೀಗಾಗಿ ಆ ಹೆಸರಿನಲ್ಲಿ ಲೋವೆಲ್ ಅವರ ನೆನಪೂ ಉಳಿಯಿತು.

ಪುಟ್ಟ ಗ್ರಹವೇ, ಹಿಮದ ಲೋಕವೇ?

ಪ್ಲೂಟೋ ಸೂರ್ಯನಿಂದ ಸರಾಸರಿ ಸುಮಾರು 590 ಕೋಟಿ ಕಿಲೋಮೀಟರ್ ದೂರದಲ್ಲಿದೆ. ಸೂರ್ಯನ ಬೆಳಕು ಭೂಮಿಗೆ ತಲುಪಲು ಸುಮಾರು ಎಂಟು ನಿಮಿಷ ಬೇಕಾದರೆ, ಪ್ಲೂಟೋಗೆ ತಲುಪಲು ಐದು ಗಂಟೆಗಳಿಗಿಂತ ಹೆಚ್ಚು ಸಮಯ ಬೇಕಾಗುತ್ತದೆ.ಪ್ಲೂಟೋ ಸೂರ್ಯನನ್ನು ಒಂದು ಸುತ್ತು ಸುತ್ತಲು ಭೂಮಿಯ ಸುಮಾರು 248 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಅಂದರೆ, ಪ್ಲೂಟೋ ಪತ್ತೆಯಾದ 1930ರಿಂದ ಅದು ತನ್ನ ಕಕ್ಷೆಯಲ್ಲಿ ಸೂರ್ಯನನ್ನು ಒಂದು ಪೂರ್ಣ ಸುತ್ತು ಸುತ್ತುವುದನ್ನು 2178ರ ವೇಳೆಗೆ ಮಾತ್ರ ಪೂರ್ಣಗೊಳಿಸುತ್ತದೆ! ಭೂಗ್ರಹದ ಜೀವಿಯೊಂದು ಫೋಟೋದಲ್ಲಿ ಒಂದು ದಿನವನ್ನು ಕಳೆದರೆ ಸುಮಾರು 250 ವರ್ಷಗಳ ಆಯಸ್ಸನ್ನು ಕಳೆದಂತೆ!!! ಮನುಷ್ಯನೊಬ್ಬ ಅಲ್ಲಿಗೆ ಹೋಗಿ ಒಂದು ವರ್ಷ ಕಳೆದು ಭೂಮಿಗೆ ಬಂದರೆ ಇಲ್ಲಿ ಅದೆಷ್ಟು ತಲೆಮಾರು ಸಾಗಿರುತ್ತವೋ???!!!! ಅದರ  ಗಾತ್ರವೂ ನಿರೀಕ್ಷೆಗಿಂತ ಚಿಕ್ಕದು. ಪ್ಲೂಟೋನ ವ್ಯಾಸ ಸುಮಾರು 2,377 ಕಿಲೋಮೀಟರ್. ಇದು ಭೂಮಿಯ ಚಂದ್ರನಿಗಿಂತಲೂ ಚಿಕ್ಕದು. ಪ್ಲೂಟೋಗೆ ಚಾರನ್ ಸೇರಿದಂತೆ ಐದು ತಿಳಿದಿರುವ ನೈಸರ್ಗಿಕ ಉಪಗ್ರಹಗಳಿವೆ. ಅವುಗಳಲ್ಲಿ ಚಾರನ್ ದೊಡ್ಡದಾಗಿದ್ದು, ಪ್ಲೂಟೋಗೆ ಹೋಲಿಸಿದರೆ ಅದರ ಗಾತ್ರ ಗಮನಾರ್ಹವಾಗಿದೆ. ಇವೆರಡರ ನಡುವಿನ ಗುರುತ್ವಾಕರ್ಷಣೆಯ ಸಂಬಂಧವೂ ವಿಶೇಷವಾಗಿದೆ.

ಪ್ಲೂಟೋನ ಮೇಲ್ಮೈಯಲ್ಲಿ ನೈಟ್ರೋಜನ್, ಮೀಥೇನ್ ಮತ್ತು ಕಾರ್ಬನ್ ಮಾನಾಕ್ಸೈಡ್‌ನ ಮಂಜುಗಡ್ಡೆಗಳಿವೆ. ಅಲ್ಲಿ ತಾಪಮಾನ ಸಾಮಾನ್ಯವಾಗಿ ಮೈನಸ್ 220ರಿಂದ ಮೈನಸ್ 240 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಲ್ಲಿರುತ್ತದೆ. ಭೂಮಿಯ ಮೇಲೆ ನೀರು ಮಂಜುಗಡ್ಡೆಯಾಗುವ ತಾಪಮಾನಕ್ಕಿಂತಲೂ ಇದು ಬಹಳ ಕಡಿಮೆ.

ಹೃದಯದ ಆಕಾರದ ಹಿಮಪ್ರದೇಶ

2015ರಲ್ಲಿ ನಾಸಾದ New Horizons ಬಾಹ್ಯಾಕಾಶ ನೌಕೆ ಪ್ಲೂಟೋವನ್ನು ಸಮೀಪದಿಂದ ಹಾದುಹೋಯಿತು. ಅದಕ್ಕೂ ಮೊದಲು ಪ್ಲೂಟೋ ದೂರದರ್ಶಕಗಳಲ್ಲಿ ಅಸ್ಪಷ್ಟವಾದ ಚುಕ್ಕಿಯಂತೆ ಮಾತ್ರ ಕಾಣಿಸುತ್ತಿತ್ತು. ಆದರೆ ನ್ಯೂ ಹರೈಸನ್ಸ್ ಕಳುಹಿಸಿದ ಚಿತ್ರಗಳು ವಿಜ್ಞಾನಿಗಳನ್ನೂ ಸಾರ್ವಜನಿಕರನ್ನೂ ಬೆರಗುಗೊಳಿಸಿದವು.

ಪ್ಲೂಟೋನ ಮೇಲ್ಮೈಯಲ್ಲಿ ಹೃದಯದ ಆಕಾರದಂತೆ ಕಾಣುವ ವಿಶಾಲ ಪ್ರದೇಶವಿದೆ. ಇದನ್ನು Tombaugh Regio ಎಂದು ಕರೆಯಲಾಗುತ್ತದೆ. ಪ್ಲೂಟೋವನ್ನು ಕಂಡುಹಿಡಿದ ಕ್ಲೈಡ್ ಟಾಂಬಾಗ್ ಅವರ ಗೌರವಾರ್ಥ ಈ ಹೆಸರು ಇಡಲಾಗಿದೆ. ಈ ಪ್ರದೇಶದ ಒಂದು ಭಾಗವಾದ ಸ್ಪುಟ್ನಿಕ್ ಪ್ಲಾನಿಟಿಯಾ, ನೈಟ್ರೋಜನ್ ಮಂಜುಗಡ್ಡೆಯಿಂದ ಆವೃತವಾಗಿದೆ. ಇದನ್ನು ನೋಡಿದಾಗ ಪ್ಲೂಟೋ ತನ್ನ ಎದೆಯ ಮೇಲೆ ಹೃದಯದ ಗುರುತನ್ನು ಧರಿಸಿದ ಪುಟ್ಟ ಲೋಕದಂತೆ ಕಾಣುತ್ತದೆ. ಆದರೆ ಆ ಹೃದಯದ ಆಕಾರದ ಹಿಂದೆ ಹಿಮದ ಹರಿವು, ಮೇಲ್ಮೈಯ ಭೂವೈಜ್ಞಾನಿಕ ಚಟುವಟಿಕೆ ಮತ್ತು ವಾತಾವರಣದ ಬದಲಾವಣೆಗಳಂಥ ಸಂಕೀರ್ಣ ಪ್ರಕ್ರಿಯೆಗಳಿವೆ. 

Pluto’s northern Sputnik Planitia glacier (in the western or left side of Pluto’s brightheart) is shown here in a color mosaic made from NASA’s 
New Horizons imagery. The direction of north is shown on the image. The image is ~ 700 x 350 kilometers across. The red box has been 
added to show most of the region containing dark features attributed to the wetting of the glacier by liquid nitrogen sourced from a
 “basal melting” process beneath the glacier.  -   NASA/Johns Hopkins APL/SwRI

ಪ್ಲೂಟೋ ಸಂಪೂರ್ಣವಾಗಿ ಸತ್ತ, ಚಟುವಟಿಕೆಯಿಲ್ಲದ ಹಿಮದ ಉಂಡೆಯಲ್ಲ ಎಂಬುದಕ್ಕೂ ನ್ಯೂ ಹೊರೈಸನ್ಸ್‌ನ ವೀಕ್ಷಣೆಗಳು ಸಾಕ್ಷ್ಯ ನೀಡಿವೆ. ಅದರ ಮೇಲ್ಮೈಯಲ್ಲಿ ಪರ್ವತಗಳು, ಬಯಲು ಪ್ರದೇಶಗಳು ಮತ್ತು ವಿಭಿನ್ನ ಭೂವೈಜ್ಞಾನಿಕ ಲಕ್ಷಣಗಳು ಕಂಡುಬಂದಿವೆ. ಅದರ ಒಳಭಾಗದಲ್ಲಿ ದ್ರವ ನೀರಿನ ಸಾಗರವಿರಬಹುದೆಂಬ ಸಾಧ್ಯತೆಯನ್ನೂ ವಿಜ್ಞಾನಿಗಳು ಅಧ್ಯಯನ ಮಾಡುತ್ತಿದ್ದಾರೆ; ಆದರೆ ಅದನ್ನು ಇನ್ನೂ ನೇರವಾಗಿ ದೃಢಪಡಿಸಲಾಗಿಲ್ಲ.

ಹಾಗಾದರೆ ಪ್ಲೂಟೋ ಗ್ರಹವಲ್ಲವೇ?

2006ರಲ್ಲಿ ಅಂತರಾಷ್ಟ್ರೀಯ ಖಗೋಳ ಒಕ್ಕೂಟವು ಗ್ರಹಕ್ಕೆ ಮೂರು ಪ್ರಮುಖ ಮಾನದಂಡಗಳನ್ನು ನಿಗದಿಪಡಿಸಿತು. ಒಂದು ಆಕಾಶಕಾಯವು ಸೂರ್ಯನನ್ನು ಸುತ್ತಬೇಕು; ತನ್ನ ಗುರುತ್ವಾಕರ್ಷಣೆಯಿಂದ ಬಹುತೇಕ ಗೋಳಾಕಾರವನ್ನು ಪಡೆದಿರಬೇಕು; ಮತ್ತು ತನ್ನ ಕಕ್ಷೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಗುರುತ್ವಾಕರ್ಷಣೆಯ ದೃಷ್ಟಿಯಿಂದ ಪ್ರಾಬಲ್ಯ ಸಾಧಿಸಿರಬೇಕು.

ಪ್ಲೂಟೋ ಮೊದಲ ಎರಡು ಮಾನದಂಡಗಳನ್ನು ಪೂರೈಸುತ್ತದೆ. ಆದರೆ ತನ್ನ ಕಕ್ಷೆಯ ಸುತ್ತಮುತ್ತಲಿನ ಇತರ ವಸ್ತುಗಳನ್ನು ತೆರವುಗೊಳಿಸಿ ಪ್ರಾಬಲ್ಯ ಸಾಧಿಸಿಲ್ಲ. ಅದು ನೆಪ್ಚೂನ್ ಆಚೆಯ ಕೈಪರ್ ಪಟ್ಟಿಯಲ್ಲಿರುವ ಅನೇಕ ಹಿಮಾವೃತ ವಸ್ತುಗಳೊಂದಿಗೆ ತನ್ನ ಪ್ರದೇಶವನ್ನು ಹಂಚಿಕೊಂಡಿದೆ. ಹೀಗಾಗಿ ಅದನ್ನು ಕುಬ್ಜ ಗ್ರಹ ಎಂದು ವರ್ಗೀಕರಿಸಲಾಯಿತು.

ಪ್ಲೂಟೋನ ಗಾತ್ರ ಕಡಿಮೆಯಾಗಲಿಲ್ಲ; ಅದರ ಮೇಲ್ಮೈ ಬದಲಾಗಲಿಲ್ಲ; ಅದರ ಸೂರ್ಯನ ಸುತ್ತಲಿನ ಪ್ರಯಾಣವೂ ನಿಲ್ಲಲಿಲ್ಲ. ಬದಲಾದದ್ದು ನಮ್ಮ ವೈಜ್ಞಾನಿಕ ವರ್ಗೀಕರಣ ಮಾತ್ರ! ಹಾಗೆ ನೋಡಿದರೆ, ಪ್ಲೂಟೋಗೆ ಗ್ರಹದ ಪಟ್ಟ ಹೋದರೂ ಅದರ ವೈಜ್ಞಾನಿಕ ಮಹತ್ವ ಕಡಿಮೆಯಾಗಿಲ್ಲ. ಬದಲಾಗಿ, ಅದು ಸೌರವ್ಯೂಹದ ಹೊರವಲಯವನ್ನು ಅರ್ಥಮಾಡಿಕೊಳ್ಳಲು ನಮಗೆ ಹೊಸ ಕಿಟಕಿಯನ್ನು ತೆರೆದಿದೆ. ಹೀಗೆ ವೈಜ್ಞಾನಿಕ ಲೋಕದ ಅಧ್ಯಯನದ ಯಾತ್ರೆ ಮುಂದುವರಿಯುತ್ತಲೇ ಇದೆ. ಕಳೆದುಕೊಂಡಲ್ಲೇ ಹೊಸ ಬದುಕನ್ನು ಕಟ್ಟಿಕೊಳ್ಳುವುದು ಅಂದರೆ ಇದೆ ಅಲ್ಲವೇ?

 ನೆಪ್ಚೂನ್ ಆಚೆ ಪ್ಲೂಟೋನಂಥ ಇನ್ನೂ ಅನೇಕ ಆಕಾಶಕಾಯಗಳಿವೆ . ಅವುಗಳಲ್ಲಿ ಕೆಲವು ಬಹಳ ದೊಡ್ಡವು. ಅವುಗಳ ಚಲನೆಯಲ್ಲಿನ ಕೆಲವು ಕುತೂಹಲಕಾರಿ ಮಾದರಿಗಳು ವಿಜ್ಞಾನಿಗಳಲ್ಲಿ ಮತ್ತೊಂದಿಷ್ಟು  ಕುತೂಹಲಕರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಸೌರವ್ಯೂಹದ ಅಂಚಿನಲ್ಲಿ ನಮಗೆ ಇನ್ನೂ ಕಾಣದಿರುವ ಒಂದು ದೊಡ್ಡ ಗ್ರಹ ಅಡಗಿದೆಯೇ? 

 ಇದಕ್ಕೆ ಉತ್ತರ ಕಾಲ ಗರ್ಭದಲ್ಲಿ ಅಡಗಿದೆ. ಮಾನವನ ನಿರಂತರ ಕುತೂಹಲ ಪ್ರವೃತ್ತಿ ಮುಂದುವರಿದಂತೆ ಇನ್ನೊಂದಷ್ಟು ಸಂಶೋಧನಾ ಉಪಕರಣಗಳು ಆವಿಷ್ಕರಿಸುತ್ತಾ ಹೋದಂತೆ, ತಂತ್ರಜ್ಞಾನದ ಸಹಕಾರದೊಂದಿಗೆ  ಅಧ್ಯಯನಗಳು  ಖಂಡಿತಾ ಹೊಸದನ್ನು ತೋರಿಸಿಯೇ ತೋರಿಸಿಯಾವು.

ಮುಂದಿನ ಭಾಗದಲ್ಲಿ: ನೆಪ್ಚೂನ್ ಆಚೆಗಿನ ರಹಸ್ಯ — ಪ್ಲಾನೆಟ್ ನೈನ್‌ನ ಹುಡುಕಾಟ.

No comments:

Post a Comment