▼

Wednesday, November 4, 2026

ಇಲ್ಲಿ ಚಿನ್ನವೇ ಕಸವಂತೆ !!!

 ಇಲ್ಲಿ ಚಿನ್ನವೇ ಕಸವಂತೆ !!!

( ಪ್ರಾಚೀನ ರಸವಿದ್ಯೆಯ ಪರುಷಮಣಿಯಿಂದ ಆಧುನಿಕ ' ಮ್ಯಾರಥಾನ್ ಫ್ಯೂಷನ್' ವಿಸ್ಮಯದವರೆಗೆ)

ಲೇಖಕರು : ರಾಮಚಂದ್ರ ಭಟ್‌ ಬಿ.ಜಿ.

ಶೀರ್ಷಿಕೆ ನೋಡಿ ಅದೆಲ್ಲಿ ಚಿನ್ನ ಕಸವಾಗಿದೆ? ಇದೆಂತ ಸುದ್ದಿ? ಅಲ್ಲಿಗೆ ಹೋಗೋಣವೇ? ಎಂದೆಲ್ಲ ಆಲೋಚಿಸಬೇಡಿ. ಇತ್ತೀಚೆಗೆ ಬೆಳಿಗ್ಗೆ ಪತ್ರಿಕೆ ಓದುತ್ತಿದ್ದಾಗ ಒಂದು ಕುತೂಹಲಕರ ಸುದ್ದಿ ಕಣ್ಣಿಗೆ ಬಿತ್ತು. ಅಮೆರಿಕದ ಯಾವುದೋ ಲ್ಯಾಬ್‌ನಲ್ಲಿ ಪಾದರಸವನ್ನು ಬಳಸಿ ಅಪ್ಪಟ ಚಿನ್ನವನ್ನು ಸೃಷ್ಟಿಸಿದ್ದಾರಂತೆ! ಈ ಸುದ್ದಿ ಓದುತ್ತಿದ್ದ ಮರುಕ್ಷಣವೇ ಈ ಸುದ್ದಿ ನನಗೆ ಅಪಾಯಕಾರಿಯಾದೀತೇ ಎಂಬ ಯೋಚನಾ ತರಂಗಗಳು ಹೆದ್ದೆರೆಯಂತೆದ್ದವು !!! ಆಗಲೇ ಮನದನ್ನೆ ಕಾಫಿ ತಂದುಕೊಡುತ್ತಾ, "ಏನ್ರೀ, ಅಮೆರಿಕಾದಲ್ಲಿ ಲ್ಯಾಬ್‌ನಲ್ಲೇ ಚಿನ್ನ ಮಾಡಿದ್ದಾರಂತೆ ಅಲ್ವಾ? ಇನ್ನು ಮುಂದೆ ಚಿನ್ನದ ಬೆಲೆ ಇಳಿಯುತ್ತದಾ? ಹಳೇ ಒಡವೆ ಕೊಟ್ಟು ಹೊಸ ಡಿಸೈನ್ ಮಾಡಿಸೋದು ಸ್ವಲ್ಪ ದಿನ ಕಾಯ್ಲಾ?" ಎಂದು ಕೇಳಿದಳು. ಆಕೆಗೆ ಆ 'ಮ್ಯಾರಥಾನ್ ಫ್ಯೂಷನ್' ಸಂಸ್ಥೆಯ ಬೈಜಿಕ ಸಮ್ಮಿಲನದ ಬಗ್ಗೆಯಾಗಲೀ, ಅದರ ಹಿಂದಿರುವ ಕ್ವಾಂಟಮ್ ಕಸರತ್ತಿನ ಬಗ್ಗೆಯಾಗಲೀ ತಲೆಬಿಸಿಯಿಲ್ಲ; ಚಿನ್ನದ ರೇಟು ಕಮ್ಮಿ ಆದರೆ ಸಾಕು! ಇದು ಈಕೆಯ ಮಿದುಳನ್ನು ಅದು ಹೇಗೆ ಸೇರಿತೋ ಎಂಬ ಅಚ್ಚರಿ ನನ್ನದಾಯಿತು!!!

ಸಂಸಾರದ ಸಖೀಗೀತವು ಒಂದೆಡೆ ಇರಲಿ, ಮನುಷ್ಯನಿಗೆ ಈ ಹಳದಿ ಲೋಹದ ಮೇಲಿನ ವ್ಯಾಮೋಹ ಇವತ್ತು ನಿನ್ನೆಯದಲ್ಲ. ಅದೊಂದು ಅಧಿಕಾರ, ಸಂಪತ್ತು, ಮತ್ತು ಮೈತುಂಬಾ ಹಾಕಿಕೊಂಡು ಮೆರೆಯುವ ಪ್ರತಿಷ್ಠೆಯ ಸಂಕೇತ. ಈ ಹುಚ್ಚು ಎಷ್ಟಿತ್ತೆಂದರೆ, ಸಿಕ್ಕಸಿಕ್ಕ ಕಬ್ಬಿಣ, ತಾಮ್ರ, ಸೀಸ, ಪಾದರಸಗಳನ್ನೆಲ್ಲ ಮಣ್ಣಿನ ಮಡಕೆಯಲ್ಲಿ ಕುದಿಸಿ ಚಿನ್ನವನ್ನಾಗಿ ಮಾಡುವ 'ರಸವಿದ್ಯೆ' (Alchemy) ಎಂಬ ಗೀಳಿಗೆ ಸಾವಿರಾರು ವರ್ಷಗಳಿಂದ ನಮ್ಮ ಹಿರಿಯರು ಬಿದ್ದಿದ್ದರು. ಇದೇನೋ ಬರಿ ಕಟ್ಟುಕಥೆ, ಬೆಂಕಿ ಮುಂದೆ ಕೂತು ಮೈಬೆವರಿಳಿಸಿಕೊಂಡ ಹುಚ್ಚರ ಕತೆ ಎಂದು ನಾವು ಇಷ್ಟು ದಿನ ಅಂದುಕೊಂಡಿದ್ದೆವು. ಆದರೆ ವಿಜ್ಞಾನಕ್ಕೂ ಮ್ಯಾಜಿಕ್‌ಗೂ ಇರುವ ಅಂತರ ಕೇವಲ ಒಂದೇ ಒಂದು ಹೆಜ್ಜೆ ಅಷ್ಟೇ!!. ಇಪ್ಪತ್ತೊಂದನೇ ಶತಮಾನದ ಈ ಕಾಲದಲ್ಲಿ ಅಮೆರಿಕದ 'ಮ್ಯಾರಥಾನ್ ಫ್ಯೂಷನ್' (Marathon Fusion) ಎಂಬ ಕಂಪನಿಯೊಂದು ಪಾದರಸದಿಂದ ಅಪ್ಪಟ ಚಿನ್ನವನ್ನು ಸೃಷ್ಟಿಸಿದ್ದೇವೆ ಎಂದು ಡಂಗುರ ಸಾರಿದೆ. ಇದು ಅಲ್‌ಕೆಮಿಯಲ್ಲ, ಇದು ಅಪ್ಪಟ ನ್ಯೂಕ್ಲಿಯರ್ ಫಿಸಿಕ್ಸ್!


ಪರುಷಮಣಿಯ ಬೆನ್ನುಹತ್ತಿದ ಜಗತ್ತು ಮತ್ತು ನಮ್ಮ ನ್ಯೂಟನ್ ಮಹಾಶಯ !! 
ಈ ಪರುಷಮಣಿಯ (Philosopher's stone) ಹುಡುಕಾಟದ ಇತಿಹಾಸ ಬಲು ಸ್ವಾರಸ್ಯಕರ. ಮೊಗೆ ಮೊಗೆದಷ್ಟು  ಸಿಗುವ ರೋಚಕ ಕಥೆಗಳು ಇತಿಹಾಸದಲ್ಲಿ ದಾಖಲಾಗಿವೆ. ಸಾಮಾನ್ಯ ಲೋಹವನ್ನು ಮುಟ್ಟಿದ ತಕ್ಷಣ ಚಿನ್ನವಾಗಿಸುವ ಆ ದಿವ್ಯ ಕಲ್ಲಿಗಾಗಿ ಯುರೋಪಿನಾದ್ಯಂತ ಅದೆಷ್ಟು ಜನ ತಮ್ಮ ಜೀವ ಸವೆಸಿದರೋ ಲೆಕ್ಕವಿಲ್ಲ. ಮುಟ್ಟಿದ್ದೆಲ್ಲವೂ ಚಿನ್ನವಾಗಿಸ ಹೊರಟ ಮೈದಾಸನ ಕಥೆ ಗೊತ್ತಲ್ಲ? 14ನೇ ಶತಮಾನದ ಫ್ರೆಂಚ್ ಬರಹಗಾರ ನಿಕೋಲಸ್ ಫ್ಲಾಮೆಲ್ ಎಂಬಾತ ಈ ಪರುಷಮಣಿಯನ್ನು ಕಂಡುಹಿಡಿದು ಅಪಾರ ಸಂಪತ್ತು ಗಳಿಸಿದ ಎಂಬ ದಂತಕಥೆಯಂತೂ ಹಾಲಿವುಡ್ ಸಿನಿಮಾಗಳಿಗೂ ಸ್ಫೂರ್ತಿಯಾಗಿದೆ. ಇನ್ನು ನಮ್ಮ ಭಾರತದ ಕಡೆ ಬಂದರೆ, ಎಂಟನೇ ಶತಮಾನದ ಆಯುರ್ವೇದ ಪಂಡಿತ ಹಾಗೂ ಪ್ರಕಾಂಡ ರಸಾಯನಶಾಸ್ತ್ರಜ್ಞ ನಾಗಾರ್ಜುನ ತನ್ನ 'ರಸರತ್ನಾಕರ' ಎಂಬ ಗ್ರಂಥದಲ್ಲಿ ಪಾದರಸವನ್ನು ಬಳಸಿ ಚಿನ್ನ ಮಾಡುವ ಕುರಿತು ಸುದೀರ್ಘವಾಗಿ ಬರೆದಿದ್ದಾನೆ. ಅಂದಿನ ನಮ್ಮ ರಸವಿಜ್ಞಾನಿಗಳು ಪಾದರಸವನ್ನು ಗಂಧಕದ ಜೊತೆ ಕಾಸಿ ಚಿನ್ನ ಮಾಡಲು ಹೊರಟಿದ್ದರು. ಹೀಗೆ ಸಹಜ ಕುತೂಹಲ ಮನುಷ್ಯನಲ್ಲಿ ಹೊಸದರ ಹುಡುಕಾಟ ಸಂಶೋಧನೆಗಳಿಗೆ ಕಾರಣವಾಗಿದೆ.

ಎಲ್ಲಕ್ಕಿಂತ ಮಜವಾದ ಸಂಗತಿಯೆಂದರೆ ಸರ್ ಐಸಾಕ್ ನ್ಯೂಟನ್‌ನ ಕಥೆ! ತಲೆಯ ಮೇಲೆ ಸೇಬು ಹಣ್ಣು ಬಿದ್ದಾಗ ಗುರುತ್ವಾಕರ್ಷಣೆ ಕಂಡುಹಿಡಿದು ಭೌತಶಾಸ್ತ್ರದ ಪಿತಾಮಹನಾದ ಈ ಮಹಾಶಯ, ತನ್ನ ಆಯುಷ್ಯದ ಬಹುಪಾಲು ಕಳೆದದ್ದು ಎಲ್ಲಿ ಗೊತ್ತೇ? ತನ್ನ ಕತ್ತಲೆ ಕೋಣೆಯಲ್ಲಿ, ಒಲೆಯ ಮುಂದೆ ಕುಳಿತು ಸೀಸವನ್ನು ಕುದಿಸುತ್ತಾ! ಹೌದು, ನ್ಯೂಟನ್ ಯಾರಿಗೂ ಗೊತ್ತಾಗದಂತೆ ತನ್ನ ರಹಸ್ಯ ಲ್ಯಾಬ್‌ನಲ್ಲಿ ಪಾದರಸ ಮತ್ತು ಸೀಸವನ್ನು ಚಿನ್ನವನ್ನಾಗಿ ಮಾಡಲು ವಿಪರೀತ ಶ್ರಮಪಟ್ಟಿದ್ದನಂತೆ!!!. ಆತನ ರಹಸ್ಯ ಟಿಪ್ಪಣಿಗಳನ್ನು ನೋಡಿದರೆ, ಆತ ಭೌತಶಾಸ್ತ್ರಜ್ಞನಿಗಿಂತ ದೊಡ್ಡ ರಸವಾದಿಯಾಗಿದ್ದ, ಕುತೂಹಲಿಯಾಗಿದ್ದ ಎಂಬುದು ಅರ್ಥವಾಗುತ್ತದೆ. ನ್ಯೂಟನ್‌ಗೆ ರಸವಿದ್ಯೆಯು ಕೇವಲ ಸಂಪತ್ತನ್ನು ಗಳಿಸುವ ಸಾಧನವಾಗಿರದೆ, ಇಡೀ ಭೌತಿಕ ಪ್ರಪಂಚದ ಅಣುಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ತಿಳಿಯುವ ವೈಜ್ಞಾನಿಕ ಅನ್ವೇಷಣೆಯಾಗಿತ್ತು. Isaac Newton and the transmutation of alchemy : an alternate view of the scientific revolution by Fanning, Philip Ashley, 1935  ಇದರಿಂದ ಆಸಕ್ತರು ಹೆಚ್ಚಿನ ಮಾಹಿತಿ ರಸವಿದ್ಯೆ ಕೇವಲ  ಮೂಢನಂಬಿಕೆಯಾಗಿರಲಿಲ್ಲ. ಅದು ಇಂದಿನ ಆಧುನಿಕ ರಸಾಯನಶಾಸ್ತ್ರದ ಮುತ್ತಜ್ಜನಂತಿತ್ತು.

ಪರಮಾಣುವಿನ ಗರ್ಭಗುಡಿ ಮತ್ತು ಬೈಜಿಕ ರೂಪಾಂತರ

ನಮ್ಮ ರಾಸಾಯನಿಕ ಪ್ರಯೋಗಗಳು ಎಷ್ಟೇ ಸೂಕ್ಷ್ಮವಾಗಿರಲಿ, ಅಲ್ಲಿ ಕೇವಲ ಪರಮಾಣುಗಳ ಜೋಡಣೆ ಬದಲಾಗುತ್ತದೆಯೇ ಹೊರತು, ಅವುಗಳ ಮೂಲ ಸ್ವರೂಪವಲ್ಲ. ಹೈಡ್ರೋಜನ್ ಮತ್ತು ಆಕ್ಸಿಜನ್ ಸೇರಿ ನೀರಾಗಬಹುದೇ ಹೊರತು, ಆಕ್ಸಿಜನ್ ಇದ್ದಕ್ಕಿದ್ದಂತೆ ಬೇರೊಂದು ಮೂಲವಸ್ತುವಾಗುವುದಿಲ್ಲ. ಆದರೆ ಈ 'ಬೈಜಿಕ ರೂಪಾಂತರ' (Nuclear Transmutation) ಇದೆಯಲ್ಲ, ಇದು ಸಾಕ್ಷಾತ್ ಸೃಷ್ಟಿಕರ್ತನ ಕೆಲಸಕ್ಕೆ ಕೈಹಾಕಿದಂತೆ!

ಒಂದು ಮೂಲವಸ್ತುವನ್ನು ನಿರ್ಧರಿಸುವುದು ಅದರ ಪರಮಾಣುವಿನ ಗರ್ಭದಲ್ಲಿರುವ (ನ್ಯೂಕ್ಲಿಯಸ್) ಪ್ರೋಟಾನ್‌ಗಳ ಸಂಖ್ಯೆ. ಪಾದರಸದ ಪರಮಾಣುವಿನ ನ್ಯೂಕ್ಲಿಯಸ್‌ನಲ್ಲಿ 80 ಪ್ರೋಟಾನ್‌ಗಳಿದ್ದರೆ, ಚಿನ್ನದ ನ್ಯೂಕ್ಲಿಯಸ್‌ನಲ್ಲಿ 79 ಪ್ರೋಟಾನ್‌ಗಳಿವೆ. ಲೆಕ್ಕಾಚಾರ ಬಹಳ ಸರಳ ಕಣ್ರೀ! ಪಾದರಸದ ನ್ಯೂಕ್ಲಿಯಸ್‌ನಿಂದ ಒಂದೇ ಒಂದು ಪ್ರೋಟಾನನ್ನು ಕಿತ್ತು ಬಿಸಾಕಿದರೆ, ಅದು ಚಿನ್ನ! ಆದರೆ ಆ ಒಂದು ಪ್ರೋಟಾನ್ ಕೀಳಲು ಸಾಮಾನ್ಯ ಶಕ್ತಿ ಸಾಲದು. ಪರಮಾಣುವಿನ ಗರ್ಭಗುಡಿಯಲ್ಲಿರುವ ಪ್ರೋಟಾನ್‌ಗಳು ಊರಿನ ಹುಂಬ ಪಟೇಲರಿದ್ದಂತೆ. ಯಾರೋ ಬಂದು ಎಬ್ಬಿಸಿದರೆ ಏಳುವವರಲ್ಲ. ಅವರನ್ನು ಜಾಗ ಖಾಲಿ ಮಾಡಿಸಬೇಕಾದರೆ, ಭಾರಿ ಶಕ್ತಿಯ ಬ್ರಹ್ಮಾಸ್ತ್ರವೇ ಬೇಕು.

ಮ್ಯಾರಥಾನ್ ಫ್ಯೂಷನ್ ಮಾಡಿದ ಮ್ಯಾಜಿಕ್!

2026ರ ಅಕ್ಟೋಬರ್‌ನಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಮೂಲದ 'ಮ್ಯಾರಥಾನ್ ಫ್ಯೂಷನ್' ಕಂಪನಿ ಮಾಡಿದ್ದೇ ಈ ಬ್ರಹ್ಮಾಸ್ತ್ರದ ಪ್ರಯೋಗ. ಇವರೇನು ಚಿನ್ನ ಮಾಡಲೆಂದೇ ಹುಟ್ಟುಹಾಕಿದ ಕಂಪನಿಯಲ್ಲ, ಇವರ ಮೂಲ ಉದ್ದೇಶ ಬೈಜಿಕ ಸಮ್ಮಿಲನದಿಂದ (Nuclear Fusion) ಸ್ವಚ್ಛ ವಿದ್ಯುತ್ ಉತ್ಪಾದಿಸುವುದು. ಸೂರ್ಯನ ಒಳಗೆ ನಡೆಯುವ ಅದೇ ಪ್ರಕ್ರಿಯೆಯನ್ನು ಲ್ಯಾಬ್‌ನಲ್ಲಿ ಮಾಡುವುದು ಇವರ ಕೆಲಸ. ಇವರು ಡ್ಯೂಟೀರಿಯಮ್ ಮತ್ತು ಟ್ರಿಟಿಯಮ್ ಎಂಬ ಹೈಡ್ರೋಜನ್‌ನ ಅವಳಿ-ಜವಳಿ (ಐಸೋಟೋಪ್‌)ಗಳನ್ನು ವಿಪರೀತ ಬಿಸಿಮಾಡಿ ಸಮ್ಮಿಲನ ಮಾಡಿದರು. ಹೈಡ್ರೋಜನ್‌ನ ಐಸೋಟೋಪ್‌ಗಳಾದ ಡ್ಯೂಟೀರಿಯಮ್ (D) ಮತ್ತು ಟ್ರಿಟಿಯಮ್ (T) ವಿಪರೀತ ತಾಪಮಾನದಲ್ಲಿ (ಪ್ಲಾಸ್ಮಾ ಸ್ಥಿತಿ) ಸಮ್ಮಿಲನಗೊಂಡಾಗ ಒಟ್ಟು 17.6 MeV ಶಕ್ತಿ ಬಿಡುಗಡೆಯಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಒಂದು ಹೀಲಿಯಂ ನ್ಯೂಕ್ಲಿಯಸ್ (ಆಲ್ಫಾ ಕಣ) ರೂಪುಗೊಂಡು 3.5 MeV ಶಕ್ತಿಯನ್ನು ತೆಗೆದುಕೊಳ್ಳುತ್ತದೆ. ಬಿಡುಗಡೆಯಾಗುವ ಉಳಿದ 14.1 MeV ಚಲನಶಕ್ತಿಯು ಸಂಪೂರ್ಣವಾಗಿ ನ್ಯೂಟ್ರಾನ್‌ಗೆ ವರ್ಗಾವಣೆಯಾಗುತ್ತದೆ. ಇದೇ ಕಾರಣಕ್ಕೆ ಇವುಗಳನ್ನು 'ಅತಿ-ವೇಗದ ನ್ಯೂಟ್ರಾನ್‌ಗಳು' (Fast neutrons) ಎಂದು ಕರೆಯುತ್ತಾರೆ. ಭೂಮಿಯ ಮೇಲೆ ಭವಿಷ್ಯದ ವಿದ್ಯುತ್ ಉತ್ಪಾದನೆಗಾಗಿ ನಡೆಯುತ್ತಿರುವ ಬಹುತೇಕ ಟೋಕಾಮ್ಯಾಕ್ (Tokamak) ರಿಯಾಕ್ಟರ್ ಪ್ರಯೋಗಗಳಿಗೆ ಇದೇ D-T ಸಮ್ಮಿಲನ ಮೂಲಾಧಾರವಾಗಿದೆ. ಮ್ಯಾರಥಾನ್ ಫ್ಯೂಷನ್‌ನ ವಿಜ್ಞಾನಿಗಳು ಈ ವೇಗದ ನ್ಯೂಟ್ರಾನ್‌ಗಳನ್ನು ತೆಗೆದುಕೊಂಡು ನೇರವಾಗಿ 'ಸ್ಥಿರ ಪಾದರಸ-198' ಐಸೋಟೋಪ್‌ಗಳ ಮೇಲೆ 'ಢಿಶುಂ' ಎಂದು ಗುಂಡು ಹಾರಿಸಿದಂತೆ ಹೊಡೆದರು. ಆ ಅಗಾಧ ಶಕ್ತಿಯ ನ್ಯೂಟ್ರಾನ್ ಅಪ್ಪಳಿಸಿದ ರಭಸಕ್ಕೆ, ಪಾದರಸದ ನ್ಯೂಕ್ಲಿಯಸ್ ಅದ್ಭುತವಾದ ಪ್ರತಿಕ್ರಿಯೆ ನೀಡಿತು. ಅದು ತನ್ನಲ್ಲಿದ್ದ ಎರಡು ನ್ಯೂಟ್ರಾನ್‌ಗಳನ್ನು ಉಗಿದು, ವಿಕಿರಣಶೀಲ 'ಅಸ್ಥಿರ ಪಾದರಸ-197' ಆಯಿತು. ಸುಮಾರು 64 ಗಂಟೆಗಳ ಕಾಲ ಒದ್ದಾಡಿದ ಈ ಅಸ್ಥಿರ ಪಾದರಸ, ಅಂತಿಮವಾಗಿ 'ಎಲೆಕ್ಟ್ರಾನ್ ಕ್ಯಾಪ್ಚರ್' ಎಂಬ ಭೌತಶಾಸ್ತ್ರದ ಪ್ರಕ್ರಿಯೆಯ ಮೂಲಕ ತನ್ನದೇ ಕಕ್ಷೆಯಲ್ಲಿ ಸುತ್ತುತ್ತಿದ್ದ ಒಂದು ಎಲೆಕ್ಟ್ರಾನ್ ಅನ್ನು ಒಳಗೆಳೆದುಕೊಂಡಿತು. ಆ ಎಲೆಕ್ಟ್ರಾನ್ ಒಳಗಿದ್ದ ಪ್ರೋಟಾನ್ ಜೊತೆ ಸೇರಿ ನ್ಯೂಟ್ರಾನ್ ಆಗಿ ಬದಲಾಯಿತು. ಗಮನಿಸಿ, ಪ್ರೋಟಾನ್‌ಗಳ ಸಂಖ್ಯೆ 80 ರಿಂದ 79 ಕ್ಕೆ ಇಳಿಯಿತು! ಇದರ ಪರಿಣಾಮ ಅದ್ಭುತ. ಆ ಮರುಕ್ಷಣವೇ ಆ ಅಸ್ಥಿರ ಪಾದರಸ, ಅಪ್ಪಟ, ಅಚ್ಚಹಳದಿಯ ಸ್ಥಿರ ಚಿನ್ನ-197 (Gold-197) ಆಗಿ ಮೈಕೊಡವಿ ನಿಂತಿತು!. ಈ ಹಿಂದೆ 2025ರಲ್ಲಿ ಜಿನೀವಾದ CERN ನಲ್ಲೂ ಇಂಥದ್ದೇ ಪ್ರಯೋಗವಾಗಿತ್ತು. ಆದರೆ ಮ್ಯಾರಥಾನ್ ಫ್ಯೂಷನ್ ಅದಕ್ಕಿಂತ ಹತ್ತು ಪಟ್ಟು ಹೆಚ್ಚಿನ ವೇಗದಲ್ಲಿ ಚಿನ್ನವನ್ನು ಸೃಷ್ಟಿಸಿ ದಾಖಲೆ ಬರೆದಿದೆ.

ಲ್ಯಾಬ್‌ನಲ್ಲಿ ನಡೆದ ಭೌತಶಾಸ್ತ್ರದ ಅಸಲಿ ಲೆಕ್ಕಾಚಾರ (Technical Breakdown)

ಮ್ಯಾರಥಾನ್ ಫ್ಯೂಷನ್ ಸಂಸ್ಥೆಯ ಈ ಪ್ರಕ್ರಿಯೆಯನ್ನು ಭೌತಶಾಸ್ತ್ರದ ಭಾಷೆಯಲ್ಲಿ (n, 2n) ರಿಯಾಕ್ಷನ್ ಮತ್ತು ಎಲೆಕ್ಟ್ರಾನ್ ಕ್ಯಾಪ್ಚರ್ ಎಂದು ಕರೆಯುತ್ತಾರೆ. ಇದು ಮೂರು ಹಂತಗಳಲ್ಲಿ ನಡೆಯುವ ಚಮತ್ಕಾರವಾಗಿದೆ.

ಹಂತ 1: ಸಿಡಿಗುಂಡಿನ ತಯಾರಿಕೆ (ನ್ಯೂಟ್ರಾನ್ ಉತ್ಪಾದನೆ)

ಮೊದಲಿಗೆ, ಬೈಜಿಕ ಸಮ್ಮಿಲನ ಪ್ರಕ್ರಿಯೆಯ ಮೂಲಕ ನ್ಯೂಟ್ರಾನ್ ಎಂಬ ಸಿಡಿಗುಂಡನ್ನು ತಯಾರಿಸಿಕೊಳ್ಳುತ್ತಾರೆ. ಇಲ್ಲಿ ಹೈಡ್ರೋಜನ್‌ನ ಐಸೋಟೋಪ್‌ಗಳಾದ ಡ್ಯೂಟೀರಿಯಮ್ (2H) ಮತ್ತು ಟ್ರಿಟಿಯಮ್ (3H) ಡಿಕ್ಕಿ ಹೊಡೆಯುತ್ತವೆ.

2H + 3H → 4He + 1n (14.1 MeV)

ಇಲ್ಲಿ ಬಿಡುಗಡೆಯಾಗುವ ನ್ಯೂಟ್ರಾನ್ (1n) 14.1 ಮೆಗಾ ಎಲೆಕ್ಟ್ರಾನ್ ವೋಲ್ಟ್ (MeV) ನಷ್ಟು ಭಾರಿ ಶಕ್ತಿ ಹೊಂದಿರುತ್ತದೆ.

ಹಂತ 2: ಪಾದರಸದ ನ್ಯೂಕ್ಲಿಯಸ್ ಮೇಲೆ ದಾಳಿ (The (n, 2n) Reaction)

ಈಗ ಈ ಹೈ-ಸ್ಪೀಡ್ ನ್ಯೂಟ್ರಾನ್ ಅನ್ನು ಗುರಿಯಿಟ್ಟು 'ಸ್ಥಿರ ಪಾದರಸ-198'ರತ್ತ ಹರಿಸಲಾಗುತ್ತದೆ. ಈ ವೇಗದ ನ್ಯೂಟ್ರಾನ್ ಹೋಗಿ ಪಾದರಸದ ನ್ಯೂಕ್ಲಿಯಸ್‌ಗೆ ಅಪ್ಪಳಿಸಿದ ತಕ್ಷಣ, ತನ್ನ ಅಗಾಧ ಶಕ್ತಿಯಿಂದ ನ್ಯೂಕ್ಲಿಯಸ್‌ನೊಳಗಿದ್ದ ಇನ್ನೆರಡು ನ್ಯೂಟ್ರಾನ್‌ಗಳನ್ನು ಒದ್ದು ಹೊರಹಾಕುತ್ತದೆ. ಒಳಬಂದದ್ದು ಒಂದು ನ್ಯೂಟ್ರಾನ್, ಹೊರಹೋದದ್ದು ಎರಡು!

198Hg + 1n → 197Hg + 2 (1n)

ಗಮನಿಸಿ: ಇಲ್ಲಿ ಪ್ರೋಟಾನ್‌ಗಳ ಸಂಖ್ಯೆ 80 ಹಾಗೆಯೇ ಉಳಿದಿದೆ. ಆದರೆ ಒಟ್ಟು ದ್ರವ್ಯರಾಶಿ 198 ರಿಂದ 197 ಕ್ಕೆ ಇಳಿದಿದೆ. ಇದು ಈಗ 'ಅಸ್ಥಿರ ಪಾದರಸ-197'. ಇದೊಂದು ವಿಕಿರಣಶೀಲ ಐಸೋಟೋಪ್.

ಹಂತ 3: ಎಲೆಕ್ಟ್ರಾನ್ ಕ್ಯಾಪ್ಚರ್ ಮತ್ತು ಚಿನ್ನದ ಜನನ!!!

ಯಾವುದೇ ವಿಕಿರಣಶೀಲ ವಸ್ತುವು ಅಸ್ಥಿರವಾಗಿರಲು ಇಷ್ಟಪಡುವುದಿಲ್ಲ. ಈ ಅಸ್ಥಿರ ಪಾದರಸ-197 ರ ಅರ್ಧಾಯುಷ್ಯ ಕೇವಲ 64.1 ಗಂಟೆಗಳು. ಆ ಸಮಯದಲ್ಲಿ ಅದು ಎಲೆಕ್ಟ್ರಾನ್ ಕ್ಯಾಪ್ಚರ್ ಪ್ರಕ್ರಿಯೆಗೆ ಒಳಗಾಗುತ್ತದೆ. ನ್ಯೂಕ್ಲಿಯಸ್‌ನ ಅತಿ ಹತ್ತಿರದಲ್ಲಿ ಸುತ್ತುತ್ತಿರುವ ಮೊದಲ ಕಕ್ಷೆಯ ಒಂದು ಎಲೆಕ್ಟ್ರಾನ್ ಅನ್ನು, ಪಾದರಸದ ನ್ಯೂಕ್ಲಿಯಸ್ ಬಲವಂತವಾಗಿ ತನ್ನೊಳಗೇ ಎಳೆದುಕೊಳ್ಳುತ್ತದೆ! ಈ ಋಣಾತ್ಮಕ ಎಲೆಕ್ಟ್ರಾನ್, ಧನಾತ್ಮಕ ಪ್ರೋಟಾನ್ ಜೊತೆ ಸೇರಿ ತಟಸ್ಥ ನ್ಯೂಟ್ರಾನ್ ಆಗಿ ಪರಿವರ್ತನೆಗೊಳ್ಳುತ್ತದೆ.

197Hg + e⁻ → 197Au + ν (ನ್ಯೂಟ್ರಿನೋ)

ಒಂದು ಪ್ರೋಟಾನ್ ಕಣ್ಮರೆಯಾಗಿ ನ್ಯೂಟ್ರಾನ್ ಆಗಿದ್ದರಿಂದ, 80 ಪ್ರೋಟಾನ್‌ಗಳಿದ್ದ ಪಾದರಸ ಈಗ 79 ಪ್ರೋಟಾನ್‌ಗಳಿರುವ ವಸ್ತುವಾಗಿ ಬದಲಾಯಿತು. 79 ಪ್ರೋಟಾನ್‌ಗಳುಳ್ಳ ಧಾತುವೇ ನಮ್ಮ ಪ್ರೀತಿಯ ಅಚ್ಚಹಳದಿಯ, ಸ್ಥಿರವಾದ ಚಿನ್ನ (197Au)!

ಒಂದು ಕ್ವಾಡ್ರಿಲಿಯನ್ ಡಾಲರ್ ಚಿನ್ನ ಮತ್ತು ಬ್ರಹ್ಮಾಂಡದ ರಹಸ್ಯ!

ಇಲ್ಲಿ ಕೆಲವು ಅಪರೂಪದ ಹಾಗೂ ಬೆರಗುಗೊಳಿಸುವ ವಾಸ್ತವಗಳನ್ನು ನಾವು ವಿಶ್ಲೇಷಿಸಬೇಕು. ಭೂಮಿಯ ಮೇಲಿರುವ ಚಿನ್ನವೆಲ್ಲವೂ ಭೂಮಿಯಲ್ಲಿಯೇ ಸೃಷ್ಟಿಯಾದದ್ದಲ್ಲ! ಕೋಟ್ಯಂತರ ವರ್ಷಗಳ ಹಿಂದೆ ಬಾಹ್ಯಾಕಾಶದಲ್ಲಿ ಎರಡು ನ್ಯೂಟ್ರಾನ್ ನಕ್ಷತ್ರಗಳು ವಿಲೀನಗೊಂಡಾಗ, ಅವುಗಳಿಂದ ಹೊರಚಿಮ್ಮಿದ ನ್ಯೂಟ್ರಾನ್-ಸಮೃದ್ಧ ವಸ್ತುಗಳಲ್ಲಿ ಚಿನ್ನದಂತಹ ಭಾರವಾದ ಧಾತುಗಳು ರೂಪುಗೊಂಡವು. ಈ ವಿಲೀನದ ನಂತರ ಸಂಭವಿಸುವ ಪ್ರಕಾಶಮಾನವಾದ ಖಗೋಳ ವಿದ್ಯಮಾನವನ್ನು ಕಿಲೋನೋವಾ (Kilonova) ಎಂದು ಕರೆಯುತ್ತಾರೆ. ಇಂತಹ ಪ್ರಾಚೀನ ಖಗೋಳ ಘಟನೆಗಳಲ್ಲಿ ಸೃಷ್ಟಿಯಾದ ಚಿನ್ನದ ಒಂದು ಭಾಗವು ಸೌರವ್ಯೂಹದ ರಚನೆಯಲ್ಲಿ ಸೇರಿ, ಅಂತಿಮವಾಗಿ ಭೂಮಿಯನ್ನೂ ತಲುಪಿತು. ಅಂದರೆ, ನಿಮ್ಮ ಕೈಬೆರಳಿನ ಉಂಗುರದಲ್ಲಿರುವ ಚಿನ್ನದ ಪರಮಾಣುಗಳು ಬ್ರಹ್ಮಾಂಡದ ಪ್ರಾಚೀನ ನಕ್ಷತ್ರಗಳ ವಿಲೀನದ ಕಥೆಯನ್ನು ತಮ್ಮೊಳಗೆ ಅಡಗಿಸಿಕೊಂಡಿರಬಹುದು! ಲ್ಯಾಬ್‌ನಲ್ಲಿ ಚಿನ್ನ ಮಾಡುವುದು ಹೊಸದೇನಲ್ಲ. 1924ರಲ್ಲೇ ಜಪಾನಿನ ಹಂಟಾರೋ ನಾಗವೋಕ ಎಂಬಾತ ಈ ಸಾಹಸ ಮಾಡಿದ್ದ. 1980ರ ದಶಕದಲ್ಲಿ ಗ್ಲೆನ್ ಸೀಬೋರ್ಗ್ ಎಂಬ ನೊಬೆಲ್ ಪುರಸ್ಕೃತ ವಿಜ್ಞಾನಿಯೂ ಚಿನ್ನ ಮಾಡಿದ್ದ. ಆದರೆ, ಕೇವಲ 28 ಗ್ರಾಂ (ಒಂದು ಔನ್ಸ್) ಕೃತಕ ಚಿನ್ನ ತಯಾರಿಸಲು ಆತ ಬಳಸಿದ ವಿದ್ಯುತ್ ಮತ್ತು ಯಂತ್ರಗಳ ಖರ್ಚು ಎಷ್ಟು ಗೊತ್ತೇ? ಬರೋಬ್ಬರಿ ಒಂದು ಕ್ವಾಡ್ರಿಲಿಯನ್ ಡಾಲರ್! ಅಂದರೆ ಒಂದರ ಪಕ್ಕ ಹದಿನೈದು ಸೊನ್ನೆಗಳು. ನೈಸರ್ಗಿಕವಾಗಿ ಒಂದು ಗ್ರಾಂ ಚಿನ್ನಕ್ಕೆ ಇವತ್ತು ಕೆಲವು ಸಾವಿರ ರೂಪಾಯಿಗಳಿದ್ದರೆ, ಲ್ಯಾಬ್‌ನಲ್ಲಿ ಮಾಡಲು ಕೋಟ್ಯಂತರ ರೂಪಾಯಿ ಸುರಿಯಬೇಕು. ಅಷ್ಟೇ ಅಲ್ಲ, ಲ್ಯಾಬ್‌ನಲ್ಲಿ ಹುಟ್ಟುವ ಬಹಳಷ್ಟು ಕೃತಕ ಚಿನ್ನ ವಿಕಿರಣಶೀಲವಾಗಿರುತ್ತದೆ (ರೇಡಿಯೋಆಕ್ಟಿವ್). ಅದನ್ನು ಕತ್ತಿಗೆ ಹಾಕಿಕೊಂಡು ಓಡಾಡಿದರೆ, ಕೆಲವು ದಿನಗಳಲ್ಲೇ ಕ್ಯಾನ್ಸರ್ ಬರುವುದು ಗ್ಯಾರಂಟಿ. ಆದರೆ ಮ್ಯಾರಥಾನ್ ಫ್ಯೂಷನ್‌ನವರ ಅತಿದೊಡ್ಡ ಸಾಧನೆ ಎಂದರೆ, ಅವರು ಸೃಷ್ಟಿಸಿರುವ ಈ ಚಿನ್ನ-197 ಸಂಪೂರ್ಣ ಸ್ಥಿರವಾಗಿದೆ (Stable) ಮತ್ತು ವಿಕಿರಣಶೀಲವಲ್ಲ.

ಮುಂದೇನು? ಗಣಿಗಳೆಲ್ಲ ಮುಚ್ಚುತ್ತವೆಯೇ?

ಒಂದು ಕಾಲದಲ್ಲಿ ಅಲ್ಯೂಮಿನಿಯಂ ಚಿನ್ನ ಮತ್ತು ಬೆಳ್ಳಿಗಿಂತಲೂ ಅತ್ಯಮೂಲ್ಯವಾದ ಲೋಹವಾಗಿತ್ತು. 19ನೇ ಶತಮಾನದ ಮಧ್ಯಭಾಗದಲ್ಲಿ ಫ್ರಾನ್ಸ್‌ನ ಚಕ್ರವರ್ತಿ ಮೂರನೇ ನೆಪೋಲಿಯನ್ ತನ್ನ ಅತಿ ಗಣ್ಯ ಅತಿಥಿಗಳಿಗೆ ಅಲ್ಯೂಮಿನಿಯಂ ತಟ್ಟೆಗಳಲ್ಲಿ ಊಟ ಬಡಿಸಿದರೆ, ಸಾಮಾನ್ಯ ಅತಿಥಿಗಳಿಗೆ ಕೇವಲ 'ಚಿನ್ನ'ದ ತಟ್ಟೆಗಳನ್ನು ನೀಡುತ್ತಿದ್ದನಂತೆ! ತಂತ್ರಜ್ಞಾನ ಬೆಳೆದಂತೆ ದುಬಾರಿ ಅಲ್ಯೂಮಿನಿಯಂ ಕವಡೆ ಕಾಸಿಗೆ ಸಿಗುವಂತಾಯಿತು. ಹಾಗಾದರೆ, ಲ್ಯಾಬ್-ಗ್ರೋನ್ ವಜ್ರಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಾಗ ನೈಸರ್ಗಿಕ ವಜ್ರದ ಬೆಲೆ ಪಾತಾಳಕ್ಕಿಳಿದಂತೆ, ಭವಿಷ್ಯದಲ್ಲಿ ಕೃತಕ ಚಿನ್ನವೂ ಮಾರುಕಟ್ಟೆಯನ್ನು ಆಳುತ್ತದೆಯೇ? ನಾಳೆಯಿಂದ ಕೋಲಾರ, ಹಟ್ಟಿ ಚಿನ್ನದ ಗಣಿಗಳೆಲ್ಲ ಬಾಗಿಲು ಮುಚ್ಚುತ್ತವೆಯೇ? ಮಕ್ಕಳಿಗೆ, ಪ್ರೀತಿಪಾತ್ರರಿಗೆ ಚಿನ್ನದೊಡವೆಗಳ ಖಜಾನೆಯನ್ನೇ ನೀಡುವ ಕನಸು ಚಿಗುರೊಡೆಯುತ್ತಿದೆಯೇ? ಖಂಡಿತಾ ನಾವು-ನೀವು ಖುಷಿಪಡುವುದೋ ಗಾಬರಿಯಾಗುವುದೋ ಬೇಕಿಲ್ಲ! ಏಕೆಂದರೆ, ಮ್ಯಾರಥಾನ್ ಲ್ಯಾಬ್‌ನಲ್ಲಿ ಸದ್ಯಕ್ಕೆ ಸೃಷ್ಟಿಯಾಗಿರುವ ಕೃತಕ ಚಿನ್ನದ ಪ್ರಮಾಣ ಬರಿಗಣ್ಣಿಗೆ ಕಾಣದಷ್ಟು; ಅಂದರೆ ಕೇವಲ ಪಿಕೋಗ್ರಾಮ್ ಅಥವಾ ಮೈಕ್ರೋಗ್ರಾಮ್‌ಗಳಷ್ಟಿದೆ. ಒಂದು ಗ್ರಾಂ ಕೃತಕ ಚಿನ್ನವನ್ನು ಒಟ್ಟುಗೂಡಿಸಲು ಸುಡಬೇಕಾದ ವಿದ್ಯುತ್‌ನ ವೆಚ್ಚಕ್ಕೆ ಬೆಲೆಯೇ ಕಟ್ಟಲಾಗದು. ಈ ಪ್ರಕ್ರಿಯೆಯು ಆರ್ಥಿಕವಾಗಿ ಲಾಭದಾಯಕವಲ್ಲ. ಆದರೆ, ಇದರ ನಿಜವಾದ ಮಹತ್ವ ಇರುವುದು ಆರ್ಥಿಕತೆಯಲ್ಲಲ್ಲ; ಬದಲಾಗಿ ಮನುಷ್ಯನ ಬುದ್ಧಿಮತ್ತೆ ಮತ್ತು ವಿಜ್ಞಾನದ ಅಗಾಧ ಸಾಧ್ಯತೆಗಳಲ್ಲಿ. ಕಂಪನಿಯ ಅಂದಾಜಿನ ಪ್ರಕಾರ, ಭವಿಷ್ಯದಲ್ಲಿ ವಾಣಿಜ್ಯ ಮಟ್ಟದಲ್ಲಿ 'ಫ್ಯೂಷನ್ ಪವರ್ ಪ್ಲಾಂಟ್'ಗಳು ತಲೆ ಎತ್ತಿದಾಗ, ಅವು ಒಂದು ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸುವಾಗ, ವರ್ಷಕ್ಕೆ ಉಪ-ಉತ್ಪನ್ನವಾಗಿ ಸುಮಾರು 2 ಟನ್ ಚಿನ್ನವನ್ನು ಉಚಿತವಾಗಿ ನೀಡಬಲ್ಲವು! ಅಂದರೆ, ಸ್ವಚ್ಛ ಇಂಧನದ ಜೊತೆಗೆ ಬೋನಸ್ ಆಗಿ ಬಂಗಾರ.  

ಸಾವಿರಾರು ವರ್ಷಗಳ ಹಿಂದೆ ಮರದ ಬೇರು, ಮೂಲಿಕೆ, ಸೀಸ, ಪಾದರಸಗಳನ್ನು ಕುದಿಸುತ್ತಾ ರಸವಾದಿಗಳು ಕಂಡಿದ್ದ ಕನಸನ್ನು, ಇಂದು ವಿಜ್ಞಾನಿಗಳು ಕ್ವಾಂಟಮ್ ಭೌತಶಾಸ್ತ್ರದ ನೆರವಿನಿಂದ ಲ್ಯಾಬ್‌ನಲ್ಲಿ ನನಸಾಗಿಸಿದ್ದಾರೆ. ಪಾದರಸ ಕುದಿಸಿ ಚಿನ್ನ ಮಾಡುವ ಪರುಷಮಣಿಯ ಕತೆ ಈಗ ಅಕ್ಷರಶಃ ನಿಜವಾಗಿದೆ. ವಿಜ್ಞಾನ ಮತ್ತು ಮ್ಯಾಜಿಕ್ ನಡುವಿನ ಗೆರೆ ಅಳಿಸಿಹೋಗುತ್ತಿರುವ ರೋಮಾಂಚಕಾರಿ ಘಟ್ಟವಿದು. ಆದರೆ ಈ ಲ್ಯಾಬ್ ಚಿನ್ನ ಮಾರುಕಟ್ಟೆಗೆ ಬಂದು, ಆಭರಣವಾಗಿ ರೂಪಾಂತರಗೊಂಡು ನಮ್ಮವರ ಕುತ್ತಿಗೆಗೇರಲು ಇನ್ನೂ ಸಾಕಷ್ಟು ದಶಕಗಳೇ ಕಾಯಬೇಕು. ಅಲ್ಲಿಯವರೆಗೆ ನಮ್ಮ ವಿಜ್ಞಾನ ವಸ್ತುಪ್ರದರ್ಶನಗಳಲ್ಲಿನ ಮಕ್ಕಳ ಕೌತುಕದ ಕಣ್ಣುಗಳು ಮತ್ತು ವಿಜ್ಞಾನದ ಈ ನಾಗಾಲೋಟ ಎರಡೂ ಸದಾ ಬೆರಗು ಮೂಡಿಸುತ್ತಲೇ ಇರುತ್ತವೆ!

 

No comments:

Post a Comment