Friday, January 1, 2021

ವಿಜ್ಞಾನಿಗಳ ಬದುಕಿನ ರಸನಿಮಿಷಗಳು

 ವಿಜ್ಞಾನಿಗಳ ಬದುಕಿನ ರಸನಿಮಿಷಗಳು


ಲೇಖಕರು:    ರಾಮಚಂದ್ರ ಭಟ್ ಬಿ.ಜಿ.
ವಿಜ್ಞಾನ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ, ಬ್ಯಾಟರಾಯನಪುರ,
ಮೈಸೂರು  ರಸ್ತೆ, ಬೆಂಗಳೂರು

 



ಆಚೆ ಮನೆಯ ಸುಬ್ಬಮ್ಮನಿಗೆ
ಏಕಾದಶಿ ಉಪವಾಸ |
ಎಲ್ಲೊ ಸ್ವಲ್ಪ ತಿಂತಾರಷ್ಟೇ
ಉಪ್ಪಿಟ್ಟು ಅವಲಕ್ಕಿ ಪಾಯಸ ||

.

ವಿಜ್ಞಾನಿಗಳ ಬದುಕಿನ ಬಗ್ಗೆ ಹೇಳ ಹೊರಟವನು ಹೀಗೆ ದಾರಿ ತಪ್ಪಿದೆ ಎಂದು ಅಂದುಕೊಂಡಿರಾ?  ಬಾಲ್ಯದ  ನೆನಪಾಯ್ತೇ ?  ವಿಜ್ಞಾನಕ್ಕೂ, ವಿಜ್ಞಾನಿಗಳ ಬದುಕಿಗೂ ಬಾಲ್ಯದಲ್ಲಿ ಹಾಡುತ್ತಾ ಕುಣಿದ ಈ ಹಾಡಿಗೂ ಏನು ಸಂಬಂಧ? ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯಾ? ಅಂತ ಯೋಚಿಸುತ್ತಿದ್ದೀರಾ?

ಹೌದು. ಇದು ಬಾಹ್ಯಾಕಾಶ ವಿಜ್ಞಾನಿ ಒಬ್ಬರು ತಮ್ಮ ಹದಿಹರೆಯದಲ್ಲಿ ಬರೆದ ತರ್ಲೆ ಹಾಡು !!!  ತಮ್ಮ 17ರ ಹರೆಯದಲ್ಲಿ ಬರೆದ ಈ  ಹಾಡು  1959 ರ ನವಂಬರ್ ತಿಂಗಳ ಕೊರವಂಜಿ ಹಾಸ್ಯ ಪತ್ರಿಕೆಯಲ್ಲಿ ಪ್ರಕಟವಾಯಿತು. ಈ ಹಾಡು ಇಂದಿಗೂ ನಮ್ಮ ಮಕ್ಕಳ ಅಚ್ಚುಮೆಚ್ಚಿನ ಅಭಿನಯಗೀತೆ. ಇಂತಹ ಹಾಸ್ಯಭರಿತ ಗೀತೆಯ ರಚನೆಕಾರರೇ ರಾಕೆಟ್ ತಂತ್ರಜ್ಞಾನಿಯಾಗಿ ಖ್ಯಾತರಾದ ಕನ್ನಡಿಗ ಇಸ್ರೋ ವಿಜ್ಞಾನಿ ಡಾಕ್ಟರ್ ಸಿ.ಆರ್. ಸತ್ಯ . ಇವರು  ಸುಮಾರು ಐದು ದಶಕಗಳ ಕಾಲ ಎಪಿಜೆ ಅಬ್ದುಲ್ ಕಲಾಂ ಮೇಷ್ಟ್ರ ಒಡನಾಡಿಯಾಗಿ ಕೆಲಸ ಮಾಡಿದರು. ಡಾಕ್ಟರ್ ಸಿ.ಆರ್. ಸತ್ಯರವರ ತಾತ ಕನ್ನಡದ ಮೇರು ಸಾಹಿತಿ ಎ. ಆರ್. ಕೃಷ್ಣಶಾಸ್ತ್ರಿಗಳು.  ಹೀಗಾಗಿ ಸಾಹಿತ್ಯವೂ ರಕ್ತಗತವಾಗಿತ್ತು. ಇವರು  ಕನ್ನಡದಲ್ಲಿ ಅನೇಕ ಲೇಖನಗಳನ್ನು ಪುಸ್ತಕಗಳನ್ನು ಬರೆದಿದ್ದಾರೆ. ಸಾಹಿತ್ಯಕ್ಕಾಗಿ ಅಕಾಡೆಮಿ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡ ಸವ್ಯಸಾಚಿ.  ತಿರುವನಂತಪುರದ ಅನಂತ ಪದ್ಮನಾಭ ದೇಗುಲದ ಬಗ್ಗೆಯೂ ಸಂಶೋಧನೆ ನಡೆಸಿದ ಸಂಶೋಧಕ. ಜೊತೆಗೆ ಮಲಯಾಳಿ ನೆಲದಲ್ಲಿ   ಕನ್ನಡದ  ಕಂಪು ಹರಡಿದ ಭಾಷಾಪ್ರೇಮಿ.

ವಿಜ್ಞಾನಿಗಳ ಬದುಕು ಹೂವಿನ ಹಾಸಿಗೆಯಲ್ಲ . ಹಾಗೆಯೇ ವಿಜ್ಞಾನಿಗಳು ಎಂದರೆ ಹಗಲಿರುಳು ಸಂಶೋಧನೆಯಲ್ಲಿ ಮುಳುಗಿ ಜನಸಾಮಾನ್ಯರಿಂದ ದೂರವಿರುವ ಯಂತ್ರಮಾನವರೂ ಅಲ್ಲ. ಅವರಲ್ಲೂ  ನಮ್ಮಂತೆಯೇ ಭಾವನೆಗಳಿವೆ. ವೈವಿಧ್ಯಮಯ ಆಸಕ್ತಿಗಳಿವೆ. ಅನೇಕ ವಿಜ್ಞಾನಿಗಳು ಬಹುಶ್ರುತ ವಿದ್ವಾಂಸರು,  ಸಾಹಿತಿಗಳು,  ಸಂಗೀತಜ್ಞರು. ವ್ಯವಹಾರ ಚತುರರು. ರಾಜನೀತಿ ನಿಪುಣರೂ ಹೌದು .

ಅದೃಷ್ಟವಶಾತ್ ಸಿ.ಆರ್. ಸತ್ಯ ರವರನ್ನು ಭೇಟಿ ಮಾಡುವ ಅವಕಾಶವನ್ನು ದೊರೆಯಿತು. ರಾಜ್ಯಮಟ್ಟದ ಜ್ಞಾನ-ವಿಜ್ಞಾನ ಮೇಳವೊಂದರಲ್ಲಿ  ಮಾತಿಗೆ ಸಿಕ್ಕ  ಸತ್ಯರವರಿಂದ ವಿಜ್ಞಾನಿಗಳ  ಬದುಕಿನ ಹಲವಾರು ಮಾಹಿತಿಗಳನ್ನು ಪಡೆದುಕೊಂಡೆ. ಎಪಿಜೆ ಅಬ್ದುಲ್ ಕಲಾಂ ರವರ ವ್ಯಕ್ತಿತ್ವವನ್ನು ಡಾ|| ಸಿ.ಆರ್ ಸತ್ಯ ರವರ ಬಾಯಲ್ಲೇ ಕೇಳಬೇಕು. ತನ್ನ ಸಹೋದ್ಯೋಗಿಗಳ ಅಚ್ಚುಮೆಚ್ಚಿನ ಅಧಿಕಾರಿ. ಅಷ್ಟೇ ಅಲ್ಲ ವ್ಯಕ್ತಿತ್ವವನ್ನು ತಿದ್ದಿ-ತೀಡಿ ಕೆಲಸವನ್ನು ಕಲಿಸಿದ ಮೇಷ್ಟ್ರು.

ಶ್ರೀಯುತ ಸಿ.ಆರ್ ಸತ್ಯ ಹಾಗೂ ಶ್ರೀಯುತ ಜಗದೀಶ್ ರವರೊಂದಿಗೆ ಲೇಖಕರು 

( ಚಿತ್ರ ಕೃಪೆ : ಎಂ.ಎನ್‌. ರಾಘವೇಂದ್ರ ಮಯ್ಯ)

ಆಗಿನ್ನೂ ಇಸ್ರೋ ಅಂಬೆಗಾಲಿಡುತ್ತಿತ್ತು. ಮೂಲಸೌಕರ್ಯಗಳಿಗೇ ತತ್ವಾರ. ದೇಶದ ಸ್ವಾಭಿಮಾನಕ್ಕಾಗಿ ಹಗಲಿರುಳು ಯಂತ್ರಮಾನವರಂತೆ ಕೆಲಸ ಮಾಡಲೇಬೇಕಾದ ಅನಿವಾರ್ಯತೆ. ಬಹುಶಃ ಈ ವಿಜ್ಞಾನಿಗಳ ಪಾಡು ನೋಡಿ ನಕ್ಕ ವಿದೇಶಿ ವಿಜ್ಞಾನಿಗಳೆಷ್ಟೋ!!!. ಸೈಕಲ್ ಎತ್ತಿನಗಾಡಿಯಲ್ಲೇ ಸೂಕ್ಷ್ಮಾತಿ ಸೂಕ್ಷ್ಮ ಉಪಕರಣಗಳ ಸಾಗಾಟ. ಸೈಕಲಿನಲ್ಲಿ ನೋಸ್ ಕೋನನ್ನು ಸಜ್ಜುಗೊಳಿಸಿ ಉಡಾವಣಾ ಕೇಂದ್ರಕ್ಕೆ ಕೊಂಡೊಯ್ಯುವ ಚಿತ್ರವೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನವನ್ನೇ ಉಂಟು ಮಾಡಿತ್ತು . ಈ ಐತಿಹಾಸಿಕ ಚಿತ್ರಕ್ಕಾಗಿ ಈ ಕೆಳಗಿನ  ಲಿಂಕ್ ಬಳಸಿ . ಇಸ್ರೋ ಯಾವ ಹಂತದಿಂದ ಯಾವ ಮಟ್ಟಕ್ಕೆ ಬೆಳೆಯಿತು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಇದು ಆಗಿನ ವಿಜ್ಞಾನಿಗಳ ಪರಿಶ್ರಮ ಎಂಥದ್ದು ಎನ್ನುವುದಕ್ಕೆ ನಿದರ್ಶನವಾಗಿದೆ.

ಇನ್ನೂ ಹೆಚ್ಚಿನ ವಿವರಗಳಿಗೆ ಕೆಳಗಿನ ಲಿಂಕ್ ನೋಡಿ

https://thiruvananthapuramupdates.wordpress.com/2012/01/02/a-recollection-on-the-birth-of-indias-first-rocket-launching-station/  

ಈ ಛಾಯಾಚಿತ್ರವನ್ನು ತೆಗೆದವರು ಫ್ರಾನ್ಸಿನ ಖ್ಯಾತ ಕಪ್ಪುಬಿಳುಪು  ಫೋಟೋಗ್ರಾಫರ್‌ ಹೆನ್ರಿ ಕಾರ್ಟಿಯರ್‌ ಬ್ರೆಸ್ಸನ್‌ (Henri Cartier-Bresson). ಸೈಕಲ್ ನಲ್ಲಿ ರಾಕೆಟಿನ ಅತ್ಯಮೂಲ್ಯ ಸೂಕ್ಷ್ಮ ತಾಂತ್ರಿಕ  ಸಲಕರಣೆಗಳು ಇರುವ ನೋಸ್ ಕೋನ್ ಅನ್ನು ಸೈಕಲಿನಲ್ಲಿ ಸಾಗಿಸುತ್ತಿರುವ ಈ ಚಿತ್ರ ಇಡೀ ಪ್ರಪಂಚವನ್ನೇ ಬೆರಗುಗೊಳಿಸಿತ್ತು.

ಅಂದು ಸಂಜೆ 6.30 ರ ಸುಮಾರಿಗೆ ರಾಕೆಟಿನ ಉಡಾವಣೆಗೆ ಸಮಯ ನಿಗದಿಯಾಗಿತ್ತು. ರಾಕೆಟ್ ಉಡಾವಣೆಯನ್ನು ವೀಕ್ಷಿಸಲು VVIP ಗಳ ದಂಡೇ ಬರುತ್ತಿತ್ತು.  ಅಬ್ದುಲ್ ಕಲಾಂರವರು ರಾಕೆಟ್ ಉಡಾವಣೆಗೆ ಬೇಕಾಗಿರುವಂತಹ ನೋಸ್ ಕೋನನ್ನು ಸಿದ್ಧಪಡಿಸಿ ಉಡಾವಣಾ ತಾಣಕ್ಕೆ ತರುವಂತಹ ಜವಾಬ್ದಾರಿಯನ್ನು ಸತ್ಯರವರ ತಂಡಕ್ಕೆ ನೀಡಿದ್ದರು.  ನೋಸ್ ಕೋನನ್ನು  ಸಿದ್ಧಪಡಿಸುವ ಕಾರ್ಯ ಮುಗಿಯುತ್ತಿದ್ದಂತೆ ಜೀಪನ್ನು ಕಳುಹಿಸುವುದಾಗಿ ತಿಳಿಸಿದರು.ಇದ್ದ ಒಂದೇ ಒಂದು ಜೀಪು VVIPಗಳ ಸೇವೆಗಾಗಿ ಓಡಾಡುತ್ತಿತ್ತು. ನೋಸ್ ಕೋನ್ ನಲ್ಲಿರುವ ಸ್ಫೋಟಕಗಳನ್ನು ಪರೀಕ್ಷಿಸಿ ಸಿದ್ಧಪಡಿಸಿ ಕಾಯುತ್ತಿದ್ದರು.  ಗಂಟೆ 2 ಆಯಿತು 3 ಆಯಿತು.  ಆದರೂ ಕೂಡ ಜೀಪಿನ ಸುಳಿವೇ ಇಲ್ಲ!!!. ನಿರಂತರ ಉನ್ನತಮಟ್ಟದ ಮೀಟಿಂಗ್ ಗಳಿಂದಾಗಿ ಅಬ್ದುಲ್ ಕಲಾಂರವರು ಇವರನ್ನು ಮರೆತುಬಿಟ್ಟಿದ್ದರು.

ಕೊನೆಗೆ ಸತ್ಯ ಮತ್ತು ಅವರ ಸ್ನೇಹಿತರಾದ ನಾಯರ್ ಅವರು ಸುತ್ತಮುತ್ತ ಓಡಾಡಿ ದೂರದಲ್ಲೆಲ್ಲೋ ಇದ್ದ ಬೆಸ್ತರ ಮನೆಗೆ ತಡಕಾಡಿ ಒಂದು ಸೈಕಲನ್ನು ಪಡೆದುಕೊಂಡರು. ಕ್ಷಣ ಕ್ಷಣಕ್ಕೂ ಆತಂಕ ಹೆಚ್ಚಾಗುತ್ತಲೇ ಇತ್ತು. ಹೇಗೋ ಮಾಡಿ ಸೈಕಲ್ ಹಿಂಭಾಗದಲ್ಲಿ ನೋಸ್ ಕೋನನ್ನು ಇಟ್ಟು ನಿಧಾನವಾಗಿ ಸೈಕಲನ್ನು ತಳ್ಳುತ್ತಾ ನೋಸ್ ಕೋನನ್ನು ಉಡಾವಣಾ ಸ್ಥಳಕ್ಕೆ ಹೊರಟರು. ಅತ್ತ ಉಡಾವಣಾ ಕೇಂದ್ರದಲ್ಲಿಯೂ ಕೂಡ ನೋಸ್ ಕೋನ್  ಇನ್ನೂ ಬರಲಿಲ್ಲವೆಂದು ಆತಂಕದಿಂದ ಎಲ್ಲರೂ ಇವರನ್ನೇ ಕಾಯುತ್ತಿದ್ದರು. ಆಗ ಈಗಿನಂತೆ ಮೊಬೈಲ್  ಇದ್ದಿರಲಿಲ್ಲವಲ್ಲ !!!. ಹಾಗಾಗಿ ಕಾಯುವುದು ಅನಿವಾರ್ಯವಾಗಿತ್ತು .  ಇದೇ ಸಂದರ್ಭದಲ್ಲೇ ಫ್ರಾನ್ಸಿನ ಖ್ಯಾತ ಛಾಯಾಗ್ರಾಹಕ ನಾವೆಲ್ಲರೂ ಇಂದು ನೋಡುತ್ತಿರುವ  ಅಪರೂಪದ ಛಾಯಾಚಿತ್ರವನ್ನು ಕ್ಲಿಕ್ಕಿಸಿದ್ದು. ಅಂತೂ ಸಮಯಕ್ಕೆ ಸರಿಯಾಗಿ  ಕ್ಷೇಮವಾಗಿ ನೋಸ್ ಕೋನ್  ಉಡಾವಣಾ ಸ್ಥಳವನ್ನು ತಲುಪಿತು. ಎಲ್ಲರೂ ನೆಮ್ಮದಿಯ  ನಿಟ್ಟುಸಿರುಬಿಟ್ಟರು.

ಎಪಿಜೆರವರ ಜೊತೆಗೆ ಕೆಲಸ ಮಾಡುವುದೆಂದರೆ ಅದಕ್ಕೆ ಸಮಯದ ಮಿತಿ ಇರುತ್ತಲೇ ಇರಲಿಲ್ಲ.  ಅಷ್ಟರಮಟ್ಟಿಗೆ ಊಟ, ತಿಂಡಿ, ನಿದ್ರೆ ಮರೆತು ಕೆಲಸದಲ್ಲಿ ನಿರತವಾಗಿದ್ದ ಕರ್ಮಯೋಗಿ. ರಾತ್ರಿ 12 ಗಂಟೆಯಾದರೂ ಮುಗಿಯದ ಕೆಲಸ. ಹೀಗಿತ್ತು ನಮ್ಮ ಹೆಮ್ಮೆಯ ಇಸ್ರೋ ವಿಜ್ಞಾನಿಗಳ ದಿನಚರಿ.

ಒಮ್ಮೆ ಎಪಿಜೆರವರ ಮಾರ್ಗದರ್ಶನದಲ್ಲಿ ಊಟ, ನಿದ್ದೆಗಳ ಪರಿವೆಯೇ ಇಲ್ಲದೇ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ. ಥುಂಬಾ ಉಡಾವಣಾ ಕೇಂದ್ರದ ನಿರ್ದೇಶಕರಾಗಿದ್ದ ಕನ್ನಡಿಗ ಶ್ರೀಯುತ ಮೂರ್ತಿಯವರು ಎಲ್ಲರನ್ನೂ ಪ್ರಯೋಗಾಲಯದಿಂದ ಹೊರಗೆ ಹಾಕಿ, ಈಗಲೇ ಮನೆಗೆ ನಡೆಯಿರಿ. ಹೀಗೆ ಕೆಲಸ ಮಾಡಿದರೆ ನಿಮ್ಮ ಆರೋಗ್ಯದ ಪರಿಸ್ಥಿತಿ ಏನಾಗಬೇಡ?  ನಾಳೆ ಆಫೀಸ್ ವೇಳೆಯವರೆಗೂ ಪ್ರಯೋಗಾಲಯಕ್ಕೆ ಕಾಲಿಡುವಂತಿಲ್ಲ. ಯಾರನ್ನೂ ಒಳಗೆ ಬಿಡಬಾರದೆಂದು ಸೆಕ್ಯೂರಿಟಿಯವರಿಗೂ ಕೂಡ ಹೇಳಿದ್ದೇನೆ. ಈಗ ನೀವು ಯಾರೂ ಇಲ್ಲಿ ಇರುವಂತಿಲ್ಲ ಎಂದು ಅವರನ್ನು ಮನೆಕಡೆಗೆ ಓಡಿಸಿದರು.  ನಿರ್ದೇಶಕರೇ ಕೆಲಸ ಮಾಡಬೇಡಿ . ಈ ಪ್ರಾಜೆಕ್ಟನ್ನು ಇನ್ನೊಂದಷ್ಟು ದಿನ ಮುಂದಕ್ಕೆ ಹಾಕಿದ್ದೇನೆ ಎಂದು  ಈ ಆದೇಶ ನೀಡುತ್ತಾರೆ ಎಂದರೆ ಪರಿಸ್ಥಿತಿ ಹೇಗಿರಬೇಡ?  ಅನಿವಾರ್ಯವಾಗಿ ಮನೆಗೆ ಹೋಗಲೇಬೇಕಾದ ಪರಿಸ್ಥಿತಿಯಲ್ಲಿ ಎಪಿಜೆ ಅವರು ಹೇಳಿದರಂತೆ. “ಬಡ್ಡೀಸ್ !!!  ನಾಳೆ ಬೆಳಿಗ್ಗೆ  6 ಗಂಟೆಗೆ ಎಲ್ಲರೂ ಬರೋಣ ಎಂದು”!!!!!

ಮತ್ತೊಮ್ಮೆ ತಮ್ಮ ತಂಡ ಹಗಲು-ರಾತ್ರಿಯೆನ್ನದೆ ಕೆಲಸ ಮಾಡುತ್ತಿರುವುದನ್ನು ನೋಡಿದ ಎಪಿಜೆಯವರು ತಾವೇ ರೋಸಿ ಹೋದರು!!! ಎಲ್ಲರನ್ನೂ ಕರೆದು ನಿಮಗೆಲ್ಲರಿಗೂ ಕೂಡ ಒಂದು ವಾರದ ರಜೆ ನೀಡಿದ್ದೇನೆ. ನೀವು ಈ ಥುಂಬಾವನ್ನು ಬಿಟ್ಟು ತಕ್ಷಣವೇ ನಿಮ್ಮೂರಿಗೆ ಹೊರಟು ಹೋಗಬೇಕು. ಯಾರೂ ಕೂಡಾ  ಒಂದು ವಾರಗಳ ಕಾಲ ನಿಮ್ಮ ಮುಖವನ್ನು ನನಗೆ ತೋರಿಸಲೇಬಾರದು ಎಂದು ಆದೇಶಿಸಿ ಜೀಪನ್ನು ಹತ್ತಿಸಿ ಕಳಿಸಿಬಿಟ್ಟರು. ಈ ವಿಜ್ಞಾನಿಗಳಿಗೂ ರಜೆ ತೆಗೆದುಕೊಳ್ಳುವ ಮನಸ್ಸಿಲ್ಲ. ಒಲ್ಲದ ಮನಸ್ಸಿಂದ ಹೊರಟ ಅವರು ಥುಂಬಾದ ಸುತ್ತುಮುತ್ತು ಜೀಪಿನಲ್ಲಿ ಒಂದು ರೌಂಡ್ ಹೊಡೆದರು . ಅಲ್ಲೇ ಎಲ್ಲೋ ಗೂಡಂಗಡಿಯಲ್ಲಿ ಚಹ ಕುಡಿದು ವಾಪಸ್ ಥುಂಬಾದ ವಿಕ್ರಮ್ ಸಾರಾಭಾಯಿ ಪ್ರಯೋಗಾಲಯಕ್ಕೆ ಹಿಂದಿರುಗುವ ತೀರ್ಮಾನ ಕೈಗೊಂಡರು!! ಜೀಪಿನ ಚಾಲಕನಿಗೆ ಮತ್ತೆ ಥುಂಬಾದ ಪ್ರಯೋಗಶಾಲೆಗೆ ಗಾಡಿಯನ್ನು ತಿರುಗಿಸು ಎಂದರು . ಇದು ಗುರು ಶಿಷ್ಯರ ನಡುವಿನ ಬಾಂಧವ್ಯ!!!

ಆಜನ್ಮ ಬ್ರಹ್ಮಚಾರಿಯಾದ ಎಪಿಜೆಯವರಿಗಂತೂ ಸಂಸಾರದ ತಾಪತ್ರಯಗಳು ಇರಲಿಲ್ಲ.  ಆದರೆ ಅವರ ಕೈಕೆಳಗಿನ ಯುವ ಎಂಜಿನಿಯರುಗಳ ಜೀವನ ಹಾಗೆ ಇರುತ್ತದೆಯೇನು? ಒಬ್ಬೊಬ್ಬರಾಗಿಯೇ ಗೃಹಸ್ಥಾಶ್ರಮ ಸೇರಿದರು. ಆದರೆ ಎಪಿಜೆಯವರ ಜೊತೆ ಕೆಲಸ ಮಾಡುವುದೆಂದರೆ ಮೊದಲಿನಂತೆ ಕೆಲಸ ಮಾಡಬೇಕಿತ್ತು!!!  ನವವಿವಾಹಿತರುಗಳಿಗೂ ಹಾಗೆಯೇ ಎಪಿಜೆಯವರನ್ನು ಬಿಟ್ಟು ಹೋಗೋ ಮನಸ್ಸಿಲ್ಲ. ಹಾಗಂತ ಅವರ ಪತ್ನಿಯರು ತಮ್ಮ ತಂದೆ ತಾಯಿಗಳನ್ನು ಬಿಟ್ಟು ದೂರದ ಕೊಂಪೆಯಂತಹ ಥುಂಬಾಕ್ಕೆ ಬಂದ ಅವರು ಸುಮ್ಮನಿರಬೇಕೆಂದು ನಿರೀಕ್ಷಿಸುವುದು ಎಷ್ಟರ ಮಟ್ಟಿಗೆ ಸಾಧು ?

ಒಂದು ದಿನ ಈ ವಿಜ್ಞಾನಿಗಳ ಪತ್ನಿಯಂದಿರು ಪರಸ್ಪರ ಮಾತನಾಡಿಕೊಂಡು ಸೀದಾ ಥುಂಬಾದ ಪ್ರಯೋಗಶಾಲೆಗೆ ನುಗ್ಗಿ ಎಪಿಜೆ ಅಬ್ದುಲ್ ಕಲಾಂರವರಿಗೆ ಘೆರಾವ್  ಹಾಕಿಯೇ ಬಿಟ್ಟರು!!!  ಎಷ್ಟು ದಿನ ಆಯಿತು ಸರಿಯಾಗಿ  ನಮ್ಮ ಯಜಮಾನರ ಮುಖ ನೋಡಿ!!! ಒಂದು ದಿನವೂ ಸರಿಯಾದ ಹೊತ್ತಿಗೆ ಮನೆಗೆ ಬಂದು ಊಟ-ತಿಂಡಿ ಮಾಡುತ್ತಿಲ್ಲ ನಿದ್ರೆ ಮಾಡುತ್ತಾರೋ ? ಆರೋಗ್ಯವಾಗಿದ್ದಾರೋ ಎನ್ನುವುದೂ ನಮಗೆ ತಿಳಿಯದು  ಎಂದು  ಎಪಿಜೆ ಅಬ್ದುಲ್ ಕಲಾಂರವರನ್ನು ತರಾಟೆ ತೆಗೆದುಕೊಂಡೇ ಬಿಟ್ಟರು.  ಇರಿಸು-ಮುರುಸಿಗೆ ಒಳಗಾದ ಎಪಿಜೆಯವರು ಖಂಡಿತ ನಾಳೆಯಿಂದ ಬೇಗ ಕಳಿಸುವುದಾಗಿ ಮಾತುಕೊಟ್ಟರು. ಮರುದಿನ ಈ ಹೆಂಗಳೆಯರು ತಮ್ಮ ಗಂಡಂದಿರು ಈಗ ಬರುತ್ತಾರೆ, ಬಂದೇ ಬಿಟ್ಟರು ಎಂದೆಲ್ಲ ಪತಿದೇವರ ನಿರೀಕ್ಷೆಯಲ್ಲಿ ಕಾದು ಕಾದು  ಕೂತಲ್ಲೇ ನಿದ್ದೆ ಹೋದರು.  ಆದರೆ ಯಥಾಪ್ರಕಾರ ಕೆಲಸದಲ್ಲಿ ಮುಳುಗಿದ ವಿಜ್ಞಾನಿಗಳು ಮನೆ ತಲುಪಿದ್ದು ಸಾಯಂಕಾಲದ ಬದಲು ಅಪರಾತ್ರಿಯೇ!!!!

ಎಪಿಜೆಯವರೊಂದಿಗೆ ಕೆಲಸ ಮಾಡಿದವರೆಲ್ಲರೂ ಕೂಡ ಅದೇ ಮಟ್ಟದ ಕರ್ಮಯೋಗಿಗಳೇ ಆಗುತ್ತಿದ್ದರು. ಎಂತಹ ಚುಂಬಕ ವ್ಯಕ್ತಿತ್ವ ಎಪಿಜೆ ಅಬ್ದುಲ್ ಕಲಾಂರವರದ್ದು !!! 

ಹಾಗೆಯೇ ನಮ್ಮ ಹೆಮ್ಮೆಯ ಕನ್ನಡಿಗ  ವಿಜ್ಞಾನಿ  ಸಿ.ಆರ್.‌ ಸತ್ಯರವರು ಬೆಂಗಳೂರಿನ ಅನೇಕ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿ ಮತ್ತು ಶಿಕ್ಷಕರಲ್ಲೂ  ವೈಜ್ಞಾನಿಕ ಮೂಲತತ್ವಗಳ ಪರಿಕಲ್ಪನೆಗಳನ್ನು ಮೂಡಿಸಿರುವುದು ಅನುಕರಣೀಯ.  ಹೆಬ್ಬಾಳದ ಕೆರೆಯ ಪುನರುಜ್ಜೀವನಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಟಾಟಾ ಸಂಸ್ಥೆಯ ಉಪಾಧ್ಯಕ್ಷರಾಗಿಯೂ ಕೈಗಾರಿಕಾಭಿವೃದ್ಧಿಗೂ ಕೊಡುಗೆ ನೀಡಿದ್ದಾರೆ ಎನ್ನುವುದೂ ಹೆಮ್ಮೆಯ ವಿಷಯವೇ.  

ನಮ್ಮ ವಿದ್ಯಾರ್ಥಿಗಳೂ ಇದೇ ಹಾದಿಯಲ್ಲಿ ಮುನ್ನಡೆಯಲಿ . ಇಂತಹ ರೋಚಕ ಘಟನೆಗಳನ್ನು ನಾವು ವಿದ್ಯಾರ್ಥಿಗಳಿಗೆ ಹೇಳುವ  ಮೂಲಕ ನಮ್ಮ ಬಾಲಪ್ರತಿಭೆಗಳಲ್ಲಿ  ಬಾಲ್ಯದಿಂದಲೇ ಉದಾತ್ತ ಮೌಲ್ಯಗಳನ್ನು ಮೊಳೆಸಬಹುದು. ಸ್ಫೂರ್ತಿಯುತ ಕತೆಗಳು ಬಾಲಪ್ರತಿಭೆಗಳಲ್ಲಿ  ಭವಿಷ್ಯದ ಕುರಿತು ಉನ್ನತ ಚಿಂತನೆಗಳು ಹಾಗೂ ಭವಿಷ್ಯದ ಕನಸು ಕಾಣಲು ಕಾರಣವಾಗುತ್ತದೆ.

***

ಈ ಲೇಖನದ  ಆವೃತ್ತಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

28 comments:

  1. Dr. APJ Kalam has been always a weirdly interesting n mesterious personality for me.. and this elegant writing giving me another impression of dr. Kalam...

    ReplyDelete
  2. ಸೂಪರ್ ಸರ್ ಅಂತು ಕವಿಗಳಾಗಿದ್ದೀರಿ

    ReplyDelete
  3. ಸೂಪರ್ ಸರ್ ಅಂತು ಕವಿಗಳಾಗಿದ್ದೀರಿ

    ReplyDelete
  4. ಸೂಪರ್ ಸರ್ ಅಂತು ಕವಿಗಳಾಗಿದ್ದೀರಿ

    ReplyDelete
  5. ಬಹಳ ಸೊಗಸಾಗಿದೆ ವಿಜ್ಞಾನಿಗಳೊಂದಿಗೆ ರಸನಿಮಿಷಗಳು.. ಧನ್ಯವಾದಗಳು.

    ReplyDelete
  6. ಬಹಳ ಸೊಗಸಾಗಿದೆ.ಧನ್ಯವಾದಗಳು.

    ReplyDelete
  7. Nice and very good article sir. Thank you for sharing an inspirational write up

    ReplyDelete
  8. ಬಹಳ ಚನ್ನಾಗಿ ಅರ್ಥೈಸಿದ್ದೀರಾ,ಸ್ಪೂರ್ತಿದಾಯಕವಾಗಿದೆ ಸರ್...best of luck ...

    ReplyDelete
  9. ಕುತೂಹಲಕಾರಿ ವಿಷಯ ತುಂಬಾ ಧನ್ಯವಾದಗಳು ಸರ್

    ReplyDelete
  10. ಕುತೂಹಲಕಾರಿ ವಿಷಯ ತುಂಬಾ ಧನ್ಯವಾದಗಳು ಸರ್

    ReplyDelete
  11. ಎಲ್ಲಾ ಓದುಗರಿಗೂ ಹೃತ್ಪೂರ್ವಕ ಧನ್ಯವಾದಗಳು.

    ReplyDelete
  12. ಉತ್ತಮವಾದ ಬರಹ ,ವಿಷಯಗಳು ಬಹಳ ತಿಳಿಸಿದ್ದೀರಿ ಧನ್ಯವಾದಗಳು

    ReplyDelete