Friday, June 4, 2021

ಆಹಾ ! ಗುಲಗಂಜಿ!!

ಆಹಾ ! ಗುಲಗಂಜಿ!! 

ಲೇಖಕರು:    ರಾಮಚಂದ್ರ ಭಟ್ ಬಿ.ಜಿ.

ವಿಜ್ಞಾನ ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ, ಬ್ಯಾಟರಾಯನಪುರ,

ಮೈಸೂರು  ರಸ್ತೆ, ಬೆಂಗಳೂರು

ಮೂಡಣದಲ್ಲಿ ಅರುಣನೆದ್ದು ಬೆಳ್ಳನೆಯ ಬೆಳಗನ್ನು ಚೆಲ್ಲುವ ಹೊತ್ತನ್ನು ಎಲ್ಲರೂ ಕಾತರದಿಂದ ಕಾಯುತ್ತಿದ್ದರು. ಕಾಲಭೈರವೇಶ್ವರ ಸ್ವಾಮಿಯ ನೆಲೆವೀಡಾದ ಆದಿಚುಂಚನಗಿರಿಯ ಹಸಿರು ಸಿರಿ ನಮ್ಮನ್ನು ಕೈಬೀಸಿ ಕರೆಯುತ್ತಿತ್ತು. ಹಸಿರು ಹೊದ್ದ ಭೂರಮೆಯ ಸೌಂದರ‍್ಯವನ್ನು ಮಳೆಯ ತುಂತುರು ಇಮ್ಮಡಿಸಿತ್ತು. ಇಂತಿಪ್ಪ ಇಳೆಯ ಮಡಿಲಿಗೆ ಮಳೆಯೊಡನೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ವಿಜ್ಞಾನ ಸಂಪನ್ಮೂಲ ಶಿಕ್ಷಕರು ತರಬೇತಿಗಾಗಿ ಆಗಮಿಸಿದ್ದರು. ರಾಜ್ಯಮಟ್ಟದ ಈ ತರಬೇತಿಯನ್ನು ಹೆಚ್ಚು ಆಕರ್ಷಣೀಯವಾಗಿಸುವ ಮತ್ತು ಅರ್ಥಪೂರ್ಣಗೊಳಿಸುವ ಜವಾಬ್ದಾರಿ ನಮ್ಮದಾಗಿತ್ತು. ಈ ಉದ್ದೇಶದಿಂದ ನಾವು ವೈವಿಧ್ಯಮಯ ಚಟುವಟಿಕೆಗಳನ್ನು ರೂಪಿಸಿಕೊಂಡಿದ್ದೆವು. ಅವುಗಳಲ್ಲಿ ಸ್ಥಳೀಯ ಪರಿಸರದ ಅಧ್ಯಯನವನ್ನೂ ಸೇರಿಸಿದ್ದೆವು.

ಸ್ಥಳೀಯ ಸಸ್ಯಪ್ರಬೇಧಗಳ ಅಧ್ಯಯನ, ಹೆಜ್ಜೆ ಗುರುತಿನ ಮೂಲಕ ಪ್ರಾಣಿಗಳನ್ನು ಗುರುತಿಸುವುದು, ಕೀಟಗಳ ಅಧ್ಯಯನ ಮೊದಲಾದವನ್ನೊಳಗೊಂಡ ಪರಿಸರ ಅಧ್ಯಯನವು ಜೀವಿಗಳ ನಡುವಣ ಪರಸ್ಪರಾವಲಂಬನೆಯ ಜೊತೆಗೆ ನಿಸರ್ಗದೊಡಲ ಸಂಕೀರ್ಣತೆಯನ್ನು ಅನಾವರಣಗೊಳಿಸುತ್ತದೆ.

ಅರುಣನ ಆಗಮನಕ್ಕೂ ಮೊದಲೇ ತುಂತುರು ಸೋನೆಮಳೆಯಲ್ಲಿ ಆರು ಗಂಟೆಗೇ ಸಾಕಷ್ಟು ಸಂಖ್ಯೆಯಲ್ಲಿ ಆಸಕ್ತ ಶಿಕ್ಷಕರು ಬೆಟ್ಟದ ಮೇಲೆ ನಮ್ಮ ನಿರೀಕ್ಷೆಯಲ್ಲಿದ್ದರು. ನಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ಸಸ್ಯ ಪ್ರಬೇಧಗಳನ್ನು ಗುರುತಿಸಲು ಸಹಾಯ ನೀಡುವ ಮೊಬೈಲ್ ಆ್ಯಪ್ ಬಗ್ಗೆ ತಿಳಿಸುತ್ತಾ ವೈಜ್ಞಾನಿಕ ಹೆಸರುಗಳಿಂದ ಸಸ್ಯಗಳನ್ನು ಗುರುತಿಸುತ್ತಾ ಚರ್ಚಿಸುತ್ತಾ ಸಾಗಿದೆವು. ಬಂಡೆ ಏರಿ ತಗ್ಗು ಇಳಿದು ಜೀವವೈವಿಧ್ಯವನ್ನು ಅರಿಯುತ್ತಾ ಮುಂದುವರೆದೆವು. ಗಡಿಯಾರದ ಹೂಗಳು, ವೆಲ್ವೆಟ್ ಕೀಟ, ಪ್ರಾಣಿ-ಪಕ್ಷಿಗಳ ಹೆಜ್ಜೆಗುರುತುಗಳು ಹೀಗೆ ನಿಸರ್ಗದೊಡಲ ಪಾಲಿಗೊದಗುವ ಪಂಚಾಮೃತವನ್ನು ಆಸ್ವಾದಿಸುತ್ತಾ ಸಾಗುತ್ತಿದ್ದೆವು. ಇದ್ದಕ್ಕಿದ್ದಂತೆ ಬಂಡೆಯೊಂದರ ಹಿಂದಿನಿಂದ ಕೆನ್ನೆತ್ತರ ಬಣ್ಣದ ಸುಂದರವಾದ ಆಕರ್ಷಕ ಬೀಜಗಳು ನನ್ನನ್ನು ಕೈಬೀಸಿ ಕರೆದಂತಾಯ್ತು.

ಬಂಡೆ ಏರಿ ನಿಧಾನವಾಗಿ ಅವಲೋಕಿಸಿದರೆ  ಬಳ್ಳಿಯೊಂದು ಆಕರ್ಷಕ ಬೀಜಗಳ ಮೂಲಕ ತನ್ನ  ಸೌಂದರ್ಯವನ್ನು  ಅನಾವರಣಗೊಳಿಸಿತ್ತು. ಅಷ್ಟರಲ್ಲಿ ಬಂಡೆ ಏರಿದ ವಿಜಯಪುರದ ಕೆಲ ಸ್ನೇಹಿತರು ಭಟ್ರೇ ಇದು ಗುಲಗಂಜಿ ಇದರ ಎಲೆಗಳನ್ನು ತಿನ್ನಿ ಎನ್ನುತ್ತಾ ಎಲೆಗಳನ್ನು ತಾವು ಸವಿಯುತ್ತಾ ನನಗೆ ಕೆಲವು ಎಲೆಗಳನ್ನು ನೀಡಿದರು. ಮೊದಲಿಗೆ ಸ್ವಲ್ಪ ಒಗರೆನಿಸಿತು. ನಂತರ  ನಿಧಾನಕ್ಕೆ ಎಲೆಗಳು ಅತಿಮಧುರ  ರುಚಿಯನ್ನು ನೀಡಿದವು.

ಅರ್ಧತಾಸು ಕಳೆದರೂ ಸಿಹಿಯ ರುಚಿ ಹಾಗೇ ಇತ್ತು. ಆದ್ಭುತ ಎನಿಸಿದ ಈ ಸಕ್ಕರೆಯ ಎಲೆಗಳು ಎಲ್ಲರಿಗೂ ಅಚ್ಚರಿಯನ್ನು ಉಂಟುಮಾಡಿದವು. ಸ್ಟೀವಿಯ ಎಲೆಗಳ ಸಿಹಿ ಹಾಗೂ ಬೆಟ್ಟದ ನೆಲ್ಲಿಕಾಯಿ ತಿಂದು ನೀರುಕುಡಿದಾಗ ಆಗುವ ಅನುಭವವನ್ನು ನೆನಪಿಗೆ ತಂದಿತು.

 ಸ್ಟೀವಿಯ ಗಿಡ

ಬೆಟ್ಟದ ನೆಲ್ಲಿ

ಆಗ ಪಾಟೀಲರು ನೀವು ಈಗ ನೀರು ಕುಡಿದರೆ ಸಿಹಿಯ ಅನುಭವ ಇನ್ನೂ ಹೆಚ್ಚಾಗುತ್ತದೆ ಎಂದರು. ಇನ್ನೊಬ್ಬ  ಸ್ನೇಹಿತರು, ನಮ್ಮಲ್ಲಿ ಇವುಗಳನ್ನು ಸ್ವೀಟ್‌ ಪಾನ್‌ ಬೀಡಾದಲ್ಲಿ ಬಳಸುತ್ತಾರೆ ಎನ್ನುವ ಮಾಹಿತಿ ಒದಗಿಸಿದರು. ಗುಲಗಂಜಿ ಎಂದಾಗ ಮತ್ತಷ್ಟು ಅಚ್ಚರಿಯಾಯಿತು. ದಕ್ಷಿಣ ಕನ್ನಡ , ಕೊಡಗು, ಕಾಸರಗೋಡು ಪರಿಸರದಲ್ಲಿ ಹೇರಳವಾಗಿರುವ ಮಂಜೊಟ್ಟಿ ಎಂದು ಕರೆಯಲಾಗುವ ದೊಡ್ಡ ಗುಲಗಂಜಿ ಅಥವಾ ರೆಡ್ ಸ್ಯಾಂಡಲ್ ಅಥವಾ ಆನೆ ಗುಲಗಂಜಿ ಎಂದು ಕರೆಯಲಾಗುವ ಸಸ್ಯವನ್ನೇ ಗುಲಗಂಜಿ ಎಂದು ಅಲ್ಲಿಯವರೆಗೂ ನಾನು ಭಾವಿಸಿದ್ದೆ. Adenanthera povinina ಎಂಬ ಹೆಸರಿನಿಂದ ಕರೆಯುವ ಮಂಜೊಟ್ಟಿ ಬಹುವಾರ್ಷಿಕ ದ್ವಿದಳ ಸಸ್ಯವಾಗಿದ್ದು ಇದರ ಬೀಜಗಳನ್ನು ಸಾಮಾನ್ಯವಾಗಿ ಚನ್ನಮಣೆ ಅಥವಾ ಅಳಗುಳಿಮನೆ ಆಟದಲ್ಲಿ ಬಳಸುತ್ತಾರೆ.

By Hari Prasad Nadig from Bangalore, India - AttaguNi maNe, CC BY-SA 2.0, https://commons.wikimedia.org/w/index.php?curid=74189961 

ನಮ್ಮ ಸ್ಥಳೀಯ ಜನಪದ ಸಂಸ್ಕೃತಿಯೊಡನೆ ಸಸ್ಯ ಸಂಸ್ಕೃತಿಯ ಸಂಕರವನ್ನು ಅಧ್ಯಯನ ಮಾಡುವ ಸಂಶೋಧಕರಿಗೆ ತಿಳಿವಿನ ತೇಜವನ್ನೊದಗಿಸೀತು. ಹೀಗೆ ಸಂಸ್ಕೃತಿಯ ಅವಿಭಾಜ್ಯ ಅಂಗವಾಗುತ್ತಾ ಕಲ್ಲು ಮಣ್ಣುಗಳು ಗಿರಿಕಂದರಗಳು ದೇವರಾಗುತ್ತಾ ಸಾಗಿರುವ ಅಚ್ಚರಿಯ ಅನಾವರಣವಾದೀತು . ಪರಿಸರ ರಕ್ಷಣೆಯಲ್ಲಿ ಜನಪದರ ಸಹಭಾಗಿತ್ವವುಳ್ಳ ದೇವರ ಕಾಡುಗಳನ್ನು ಸ್ಮರಿಸಿಕೊಳ್ಳಬಹುದೇನೋ?

ಮಂಜೊಟ್ಟಿಯಲ್ಲಿ ಅನೇಕ ಔಷಧೀಯ ರಾಸಾಯನಿಕಗಳಿದ್ದು, ಇದು ಹಲವಾರು ಕಾಯಿಲೆಗಳಿಗೆ ರಾಮಬಾಣವಾಗಿದೆ. ಕೇರಳದಲ್ಲಿ ಮಂಜೊಟ್ಟಿ ಕೃಷಿ ಲಾಭದಾಯಕ ಕೃಷಿ ಉದ್ಯಮವಾಗಿ ಬೆಳೆಯುತ್ತಿದೆ.  ಮರಮಟ್ಟುಗಳು ಬಹು ಉಪಯೋಗಿ. ಕೆನ್ನೆತ್ತರ ಬಣ್ಣದ ಬೀಜಗಳು ಆಭರಣ ತಯಾರಿಕೆಯಲ್ಲಿ, ಅಳತೆ ಮಾನಗಳಾಗಿ ಉಪಯೋಗಿಸಲ್ಪಟ್ಟಿವೆ. ಹಾಗೆಯೇ ತಾಳವಾದ್ಯಗಳಲ್ಲೂ ಬೀಜಗಳನ್ನು ಬಳಸುತ್ತಾರೆ.

By Gabriela Ruellan - Own work, CC BY 4.0, https://commons.wikimedia.org/w/index.php?curid=63819057

 
ಅಪೂರ್ವ ಸೌಂದರ್ಯದೊಂದಿಗೆ ಆಧಾರ ಗಿಡದ ನಡುವಿನಿಂದ ಲಾಸ್ಯವಾಡುತ್ತಿದ್ದ ಗುಲಗಂಜಿ ಬಳ್ಳಿಯ ಹಿಂದೆ ಪತ್ತೆದಾರಿಕೆ ಮಾಡಲು ಹೊರಟಾಗ ನನಗೆ ಅನೇಕ ಅಪೂರ್ವ ಮಾಹಿತಿಗಳು ದೊರೆತವು. 

ಅಬ್ರಸ್ ಪ್ರಿಕಟೋರಿಯಸ್ (Abrus precatorius) ಎಂದು ವೈಜ್ಞಾನಿಕವಾಗಿ ಗುರುತಿಸಲ್ಪಡುವ ಪಾಶ್ಚಾತ್ಯ ದೇಶಗಳೂ ಸೇರಿದಂತೆ ವಿಶ್ವದೆಲ್ಲೆಡೆ ಕಂಡುಬರುವ ಗುಲಗಂಜಿ ಭಾರತೀಯ ಮೂಲದ ಸಸ್ಯವಾಗಿದೆ. ಗುಲಗಂಜಿ ಸಸ್ಯ ಸಾಮ್ರಾಜ್ಯದ ಆವೃತಬೀಜ ಸಸ್ಯವರ್ಗದ ಫೆಬೇಸಿ ಎಂಬ ಕುಟುಂಬಕ್ಕೆ ಸೇರಿದೆ. ಚೂಡಾಮಣಿ, ಶಿಖಂಡಿಕಾ, ಚಕ್ರಶಲ್ಯ, ಶ್ವೇತ ಕಾಂಭೋಜಿ ಮೊದಲಾದ ಸಂಸ್ಕೃತನಾಮಗಳಿAದ ಕರೆಯಲ್ಪಡುವ ಗುಲಗಂಜಿಯಲ್ಲಿ ಪ್ರಮುಖವಾಗಿ ಬಿಳಿ ಹಾಗೂ ಕೆಂಪು ಬಣ್ಣದ ಬೀಜಗಳನ್ನು ಉತ್ಪಾದಿಸುವ 2 ಪ್ರಬೇಧಗಳಿವೆ. ಬಳ್ಳಿಯಲ್ಲಿ ಸುಮಾರು 10 ಸೆ.ಮೀ ಉದ್ದದ ಪ್ರತಿಯೊಂದು ಸಂಯುಕ್ತಪತ್ರದಲ್ಲಿ 12-20 ಜೊತೆ ಕಿರು ಎಲೆಗಳನ್ನು ನೋಡಬಹುದು. ಕೆಂಪು ಗುಲಗಂಜಿಯಲ್ಲಿ ಪಾಡ್ ಎನ್ನಲಾಗುವ ಕಾಯಿಯಲ್ಲಿ ರಕ್ತವರ್ಣದ 2-6 ಬೀಜಗಳನ್ನು ನೋಡಬಹುದು. ಬೀಜಗಳ ತೂಕವು ಹೆಚ್ಚು ಕಡಿಮೆ ಒಂದೇ ರೀತಿ ಇದ್ದು ಒಂದು ರತ್ತಿ (ratti) ಅಂದರೆ ಸುಮಾರು 125 ಮಿ.ಗ್ರಾಮ್‌ನಷ್ಟು ತೂಗುತ್ತದೆ. ಅಚ್ಚರಿ ಎಂದರೆ ನಿಸರ್ಗ ಅದೆಷ್ಟು ನಿಖರತೆಯನ್ನು ಹೊಂದಿದೆ ಎನ್ನಲು ಬೀಜಗಳ ಏಕರೂಪದ ತೂಕವೇ ಸಾಕ್ಷಿ. ಆದ್ದರಿಂದಲೇ ಭಾರತೀಯರು ಗುಲಗಂಜಿಯನ್ನು ಬಂಗಾರದಂತಹ ಅಮೂಲ್ಯ ವಸ್ತುಗಳನ್ನು ತೂಕಹಾಕಲು ಬಳಸುತ್ತಿದ್ದರು. ಎಂಟು ರತ್ತಿಗಳು ಸೇರಿ ಒಂದು ಮಾಷ, 12 ಮಾಷಗಳು ಸೇರಿದರೆ ಒಂದು ತೊಲವಾಗುತ್ತದೆ. ತೊಲ ಎಂದರೆ ಸುಮಾರು 11.6 ಗ್ರಾಮ್‌ಗಳಿಗೆ ಸಮ.

ಪುರಾಣ ಕಾಲದಿಂದಲೂ ಜನಪದಗಳಲ್ಲಿ ಬೆರೆತು ಹೋದ ಗುಲಗಂಜಿ ಐತಿಹಾಸಿಕ, ಸಾಮಾಜಿಕ, ಸಾಂಸೃತಿಕ ಪರಂಪರೆಯ ಪ್ರತೀಕವಾಗಿದ್ದು ಕೆಲವೊಮ್ಮೆ ಖಳನಾಯಕನ ಅವತಾರದಲ್ಲೂ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ.  ಏಡಿಯ ಕಣ್ಣು, ಪ್ರಾರ್ಥನಾಮಣಿ, ಗುಂಜಿ ಮೊದಲಾದ ಹಲವಾರು ಹೆಸರುಗಳಿಂದ ಪರಿಚಿತವಾದ ಗುಲಗಂಜಿಯ ಕುರಿತು ಅನೇಕ ಐತಿಹ್ಯಗಳಿವೆ.

ಗುಲಗಂಜಿಯ  ಆಕರ್ಷಕ ರಕ್ತವರ್ಣದ ಹೊಳಪು 30 ವರ್ಷಗಳವರೆಗೂ ಮಾಸದೇ ಉಳಿಯುವುದರಿಂದ ಇದರಿಂದ ತಯಾರಿಸಲಾದ ಆಭರಣಗಳು ಹೆಂಗಳೆಯರ ಮನಸೂರೆಗೊಂಡಿದ್ದವು. ಈ ಆಭರಣಗಳನ್ನು ಧರಿಸುವುದೂ ಪ್ರತಿಷ್ಟೆಯಾಗಿತ್ತು.

19ನೇ ಶತಮಾನದಲ್ಲಿ ಇಂಗ್ಲೆಂಡ್‌ನ ಕುಲೀನ ಸ್ತ್ರೀಯರಲ್ಲಿ ಇದ್ದಕ್ಕಿದ್ದಂತೆ ರೋಗವೊಂದು ಕಾಣಿಸಿಕೊಂಡಿತು. ಇದ್ದಕ್ಕಿದ್ದಂತೆ ಹೊಟ್ಟೆನೋವು, ವಾಂತಿ - ಬೇಧಿ, ನಿಶ್ಯಕ್ತಿಗಳಿಂದ ಬಳಲರಾಂಭಿಸಿದರು. ಇದಕ್ಕೆ ಕಾರಣ ಪತ್ತೆ ಹಚ್ಚುವುದೇ ದೊಡ್ಡ ಸವಾಲಾಗಿತ್ತು. ಸುದೀರ್ಘ ಸಂಶೋಧನೆ- ಅಧ್ಯಯನಗಳ ನಂತರ ಗುಲಗಂಜಿಯ ಆಭರಣ ಧರಿಸುತ್ತಿದ್ದ ಸ್ತ್ರೀಯರಲ್ಲಿ ಮಾತ್ರ ಈ ಲಕ್ಷಣಗಳು ಸಾಮಾನ್ಯವಾಗಿರುವುದು ಕಂಡುಬಂತು. ಈ ಸ್ತ್ರೀಯರು ಆಭರಣದಲ್ಲಿದ್ದ ಗುಲಗಂಜಿ ಬೀಜಗಳನ್ನು ಚೀಪುವ ಅಭ್ಯಾಸವನ್ನು ಹೊಂದಿದ್ದರು!!!. ಗುಲಗಂಜಿಯ ಕಾರ್ಕೋಟಕ ವಿಷವಾದ ಅಬ್ರಿನ್ ಎಂಬ ರಾಸಾಯನಿಕವೇ ಇದಕ್ಕೆ ಪ್ರಮುಖ ಕಾರಣ ಎಂದು ಕಂಡುಕೊಂಡ ವೈದ್ಯರು ಸೂಕ್ತ ಚಿಕಿತ್ಸೆ ನೀಡಿ ನಾರಿಯರನ್ನು ವಿಚಿತ್ರ ರೋಗಲಕ್ಷಣಗಳಿಂದ ಮುಕ್ತಗೊಳಿಸಿದರು.

1881ರ ಬ್ರಿಟಿಷ್ ಬಂಗಾಳದ ಜಿಲ್ಲಾ ಪೋಲಿಸ್ ಅಧೀಕ್ಷಕರ ವರದಿಯ ಪ್ರಕಾರ ಇದನ್ನು ಆಯುಧಗಳಲ್ಲಿ ಬಳಸುತ್ತಿರುವುದು ತಿಳಿದು ಬರುತ್ತದೆ. ಬುಡಕಟ್ಟು ಜನರು ಗುಲಗಂಜಿಯ ಬೀಜಗಳಿಂದ ತಯಾರಿಸಿದ ಲೇಪನವನ್ನು ಆಯುಧಗಳಿಗೆ ಸವರಿ ಒಣಗಿಸಿ ಅವುಗಳನ್ನು ಬೇಟೆಯಾಡಲು ಬಳಸುತ್ತಿದ್ದರೆಂಬುವುದು ಇತಿಹಾಸದ ದಾಖಲೆಗಳಿಂದ ತಿಳಿಯುತ್ತದೆ. ಈ ವಿಷವನ್ನು ಬಳಸಿ ತಮ್ಮ ಹುಲ್ಲುಗಾವಲುಗಳಿಗೆ ನುಗ್ಗಿದ ವಿರೋಧಿಗಳ ಪಶುಗಳನ್ನು ಸಾಯಿಸುತ್ತಿದ್ದರಂತೆ. ಅದೇರೀತಿ ವಿರೋಧಿಗಳ ಜೀವಹರಣಕ್ಕೂ ಬಳಸುತ್ತಿದ್ದರಂತೆ.

ಗುಲಗಂಜಿಯಲ್ಲಿ ಅನೇಕ ಅತ್ಯಮೂಲ್ಯ ಅಲ್ಕಲೈಡ್‌ಗಳಿರುವುದರಿಂದ ಅದು ಔಷಧಿಗಳ ಗಣಿಯಾಗಿದೆ ಅಬ್ರಿನ್, ಅಬ್ರಿಕ್‌ಆಮ್ಲ, ಪ್ರಿಕೋಲ್, ಅಬ್ರೋಲ್, ಅಬ್ರಸೀನ್, ಪ್ರಿಕಸೀನ್ , ಅಬ್ರಸ್ ಲ್ಯಾಕ್ಟೋನ್ , ಟ್ರಿಪ್ಟೋಫ್ಯಾನ್, ಹೆಡೆರಾಜೆನಿನ್ ಮೊದಲಾದ ಅನೇಕ ರಾಸಾಯನಿಕಗಳಿದ್ದು ಹತ್ತು ಹಲವು ರೋಗಗಳಲ್ಲಿ ಔಷಧಿಯಾಗಿ ಬಳಸಲ್ಪಡುತ್ತಿದೆ. ಸಂತಾನ ನಿಯಂತ್ರಣ, ಸಂಧಿವಾತ, ಜ್ವರ, ಚರ್ಮರೋಗ, ಮಾನಸಿಕ ಕಾಯಿಲೆಗಳು, ಅಲ್ಸರ್, ಶ್ವಾಸಕೋಶ ಸಂಬಂಧಿ ಕಾಯಿಲೆಗಳು, ನೆಗಡಿ ಹೀಗೆ ಅನೇಕ ಸಮಸ್ಯೆಗಳಿಗೆ ಗುಲಗಂಜಿಯ ಬೇರು, ಬೀಜ, ಎಲೆಗಳು ರಾಮಬಾಣವಾಗಿವೆ.

ಅತಿಯಾದರೆ ಅಮೃತವೂ ವಿಷ ಎಂದ ಮೇಲೆ ಗುಲಗಂಜಿ ಇದರಿಂದ ಹೇಗೆ ಹೊರತಾದೀತು? ಹೀಗೆ ಕೆಲವೊಮ್ಮೆ ಹೀರೋ ಆಗಿ ಇನ್ನು ಕೆಲವು ಸಲ ವಿಲನ್ ಆಗಿ ಮೆರೆಯುತ್ತಿರುವ ಈ ಗುಲಗಂಜಿಯ ಮಹಿಮೆ ಅಪಾರವಾದದ್ದು. ಒಟ್ಟಿನಲ್ಲಿ ತರಬೇತಿಯ ಮುಂಜಾವು ಸೋನೆಮಳೆಯ ಆಸ್ವಾದನೆಯ ಜೊತೆಗೆ ಗುಲಗಂಜಿಯ ಪ್ರಾತ್ಯಕ್ಷಿಕೆಯನ್ನು ನೀಡಿದ್ದಲ್ಲದೇ ಪತ್ತೆದಾರಿಕೆಗೆ ಪ್ರೇರಣೆ ನೀಡಿತು. ಅಲ್ಲವೇ? ಓಹ್ ಸರೆಂಡಿಪಿಟಿಯ ನೆನಪಾಯಿತು. ವಿಜ್ಞಾನವೇ ಹೀಗೆ. ಅನೇಕ ಆವಿಷ್ಕಾರಗಳು ಸರೆಂಡಿಪಿಟಿಯಿಂದಲೇ ಆಗಿವೆ. ಇಂತಹ ಅನೇಕ ವೈಚಾರಿಕ, ವೈಜ್ಞಾನಿಕ ಲೇಖನಗಳನ್ನು ನೀವು ಮುಂದಿನ ದಿನಗಳಲ್ಲಿ ಸವಿಯಲಿದ್ದೀರಿ.

ಕನ್ನಡದ ಬಾವುಟವನ್ನು ಮುಗಿಲೆತ್ತರಕ್ಕೆ ಒಯ್ದ , ಕನ್ನಡದ ಕಸ್ತೂರಿ ಕಂಪನ್ನು ಜಗದಗಲಕೆ ಪಸರಿಸಿದ  ಭಾರತದ ಹೆಮ್ಮೆಯ ಸಸ್ಯಶಾಸ್ತ್ರಜ್ಞ ಡಾ: ಬಿ.ಜಿ.ಎಲ್ ಸ್ವಾಮಿಯವರು ತಮ್ಮ ಜೀವಿತಾವಧಿಯನ್ನು ಹಸಿರುಹೊನ್ನಿನ ಅಧ್ಯಯನದಲ್ಲಿ ತೊಡಗಿಸಿಕೊಂಡು ಪಂಡಿತರಿಗೋಸ್ಕರ ಮಾತ್ರವೇ ಎನ್ನಬಹುದಾದ ಸಸ್ಯಶಾಸ್ತ್ರವನ್ನು ಉಲ್ಲಾಸದಾಯಕವಾಗಿಸಿ ಪಾಮರರೆಡೆಗೆ ಒಯ್ದು ಸಾಹಿತ್ಯಕ್ಕೆ ಹೊಸಭಾಷ್ಯವನ್ನು ಬರೆದರು. ಸಾಕ್ಷಾತ್ಕಾರದ ಹಾದಿಯನ್ನು ಹಾಕಿಕೊಟ್ಟ ಇಂತಹ ಸಾಹಿತಿ, ವಿಜ್ಞಾನಿಯನ್ನು   ಈ ಸಂದರ್ಭದಲ್ಲಿ ಸ್ಮರಿಸುತ್ತಾ ಕಿರು ಲೇಖನದ ಮೂಲಕ ಬಿ.ಜಿ.ಎಲ್ ಸ್ವಾಮಿಯವರ ಚರಣಗಳಿಗೆ ನುಡಿನಮನಗಳನ್ನು ಸಲ್ಲಿಸುತ್ತಿದ್ದೇನೆ.

ಈ ಲೇಖನದ ಪಿ.ಡಿ.ಎಫ಼್. ಫೈಲ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ: 

63 comments:

  1. Very nice article .it will be useful to us.Thank u Ram sr.
    .

    ReplyDelete
  2. Nice article sir, ನಿಮ್ಮ ಲೇಖನದಲ್ಲಿನ ಪಾಟೀಲ್ ನಾನೆ👏

    ReplyDelete
    Replies
    1. ಹೌದು ಸರ್. ತರಬೇತಿಯ ನೆನಪುಗಳು ಮರುಕಳಿಸಿದವು

      Delete
  3. ಲೇಖನ, ಬಳಸಿರುವ ಭಾಷೆ, ವಿಷಯ ಸಂಗ್ರಹಣೆ ಎಲ್ಲವು ತುಂಬಾ ಅದ್ಭುತ ವಾಗಿದೆ.

    ReplyDelete
  4. Very nice presentation and more informative..

    ReplyDelete
  5. Very good article. Language is very nice.

    ReplyDelete
  6. ತುಂಬಾ ಉಪಯುಕ್ತವಾದ ಲೇಖನ ಸರ್.. ಧನ್ಯವಾದಗಳು

    ReplyDelete
  7. ಲೇಖನ ತುಂಬಾ ಚೆನ್ನಾಗಿದೆ ಸರ್. ನನಗೆ ನನ್ನ ಎಂಎಸ್ಸಿ ನೆನಪಾಯಿತು. ಅಬ್ರಸ್ ಮೇಲೆ ಟಿಶ್ಯೂ ಕಲ್ಚರ್ ನಲ್ಲಿ ಪ್ರಾಜೆಕ್ಟ್ ಮಾಡಿದ್ದೆ.

    ReplyDelete
    Replies
    1. Great madam. ನೀವೂ ಕೂಡಾ ಬರೆಯಿರಿ

      Delete
  8. Useful information
    Good job sir🙏

    ReplyDelete
  9. ಗುಲಗಂಜಿಯ ಬಗ್ಗೆ ಉತ್ತಮವಾದ ಲೇಖನ ಸರ್

    ReplyDelete
  10. ಎಲ್ಲಾ ಓದುಗ ಬಂಧುಗಳಿಗೂ ಹೃತ್ಪೂರ್ವಕ ಧನ್ಯವಾದಗಳು.
    ನಿಮ್ಮ ಮುಕ್ತ ಅಭಿಪ್ರಾಯಗಳು ಸದಭಿರುಚಿಯ ಲೇಖನಗಳ ಹಿಂದಿನ ನೈಜ ಸ್ಫೂರ್ತಿ 🙏🙏🙏

    ReplyDelete
  11. Very informative, knowledgeable and interesting narrative. ��

    ReplyDelete
  12. ಅದ್ಭುತ.. ಮೆಚ್ಚುವಂತಹದು.. ತುಂಬಾ ರೂಚಕತೆಯೂ ಇದೆ. ನಮಸ್ತೇ.

    ReplyDelete
  13. ಸರ್, ನಿಮಗೆ ಈ ವಿಷಯದ ಬಗ್ಗೆ ಇರುವ ಕುತೂಹಲ ಮತ್ತು ಆಸಕ್ತಿಯನ್ನು ಕಂಡು ನಾನು ನಿಬ್ಬೆರಗಾದೆ. ನೀವು ಕಲೆಹಾಕಿರುವ ಆಸಕ್ತಿದಾಯಕ ವಿಷಯಗಳು ನಿಜವಾಗಲೂ ನಮಗೆ ಜ್ಞಾನ ದಾಹವನ್ನು ಹೆಚ್ಚಿಸಿದೆ. ತಮ್ಮ ಈ ಲೇಖನ ನಿಜವಾಗಲೂ ನಮಗೆ ಖುಷಿ ತಂದಿದೆ

    ReplyDelete
  14. ಅದ್ಭುತ ಲೇಖನ..ರೋಮಾಂಚನಕಾರಿ.. ವಿಷಯದೇಡೆಗೆ ಸೇಳೆಯುವ ಬರಹಗಳು.. 👌👏👏👍🙏

    ReplyDelete
  15. ಮನೋಜ್ಞ ಬರಹ, ಮಾಹಿತಿ ಅತ್ಯುತ್ತಮ

    ReplyDelete
  16. Very informative Sir. Had seen this seed once upon a time when I was young. Could recall the same after reading your article. Nice that you shared this information Sir.

    ReplyDelete
  17. Superb sir ...very informative....felt lively while reading it....and really astonished at the beauty of nature

    ReplyDelete
  18. Devaraju H D. Very useful information

    ReplyDelete
  19. ನನ್ನ ಪ್ರೀತಿಯ ಗುರುಗಳೇ...
    ತಾವು ಕ್ಷೇಮ ಎಂದು ನಾ ಭಾವಿಸಿರುವೆ.. ❤
    ನಿಮ್ಮ ಅನುಭವದ ಮಾತುಗಳನ್ನು ಕೇಳಿ ಒಂದು ರೀತಿ ಸಂತೋಷ ಆಯ್ತು.. ಮತ್ತು ಗುಲಗಂಜಿ ಬಗ್ಗೆ ಕೇಳಿ ಇನ್ನೂ ತುಂಬಾ ನಿಮ್ಮ ಸಾರಾಂಶ ವನ್ನು ಪೂರ್ಣವಾಗಿ ಓದುವಂತೆ ಮಾಡಿತು . ನಾನು ನಮ್ಮೂರಿನಲ್ಲಿ ಗುಲಗಂಜಿ ಬಳ್ಳಿ ನೋಡಿದ್ದೇ. ಅದನ್ನು ತಗೊಂಡು ಹೋಗಿ.. ಮಣ್ಣಿನಿಂದ ಎತ್ತು ಇತರೆ ಆಟಿಕೆ ಗಳನ್ನು ಮಾಡಿ.. ಆ ಗುಲಗಂಜಿ ಯನ್ನು ಕಣ್ಣು ಮಾಡುತ್ತಿದ್ದೆವು.. ನೋಡಲು ಬಹಳ ಸುಂದರ ವಾಗಿರುತ್ತೆ ಮತ್ತು ಇನ್ನೊಂದು ಎಂದರೆ ಗುರುಗಳೇ... ಆ ಗುಲಗಂಜಿ ಯಲ್ಲಿ 2 ರೀತಿ ಇದೆ... ಕೆಂಪು ಮತ್ತು ಬಿಳಿ..2 ಬಗೆ ಇವೆ
    ಆ ಗುಲಗಂಜಿ ಬಳ್ಳಿಯ ಎಲೆ ಸೇವಿಸಿದರೆ ನೀಚ ಮನುಷ್ಯರಿಗೆ ಇರುವಂತ ಕಾಮವನ್ನು ಹೋಗಲಾಡಿಸುತ್ತದೆ ಎಂದು ನಾನು ಹಿರಿಯರಿಂದ ಕೇಳಿರುವೆ. ನನ್ನ ಮಾವ ಇನ್ನೂ ಇಂತಹ ಹಲವು ಆಕರ್ಷಕ ಗಿಡ ಬಳ್ಳಿಗಳ ಬಗ್ಗೆ ಹೇಳುತ್ತಿರುತ್ತಾರೆ . ನಾ ಊರಿಗೆ ಹೋದರೆ.. ಅವರ ಬಳಿ ಏನಾದರೂ ಕೇಳಿ ಕಲಿಯುವ ಮನಸ್ಸಗುತ್ತದೆ..

    By Manjunatha B
    Govt scl Byatarayanapura Bangalore..
    2016 to 2018 Im Your student ��

    ReplyDelete
    Replies
    1. ಮಂಜು, ಇಂದಿನ ತಲೆಮಾರಿನ ಮಕ್ಕಳು ಸಾಮಾನ್ಯವಾಗಿ ಓದುವ ಹವ್ಯಾಸ ಕಡಿಮೆ ಎನ್ನುವಾಗ ನೀನೊಬ್ಬ ಓದುವ ಹವ್ಯಾಸ ಇಟ್ಟುಕೊಂಡಿರುವುದು ಸಂತೋಷ. ಪಾಠದ ನಡುವೆ ತೇಜಸ್ವಿಯವರ ಕಾಡಿನ ಕತೆಗಳನ್ನು ಹೇಳುತ್ತಿದ್ದೆ. ಈಗ ಬಿಡುವಿನ ಸಂದರ್ಭದಲ್ಲಿ ಇಂತಹ ಪುಸ್ತಕಗಳನ್ನು ಓದು . ನಿನ್ನ ಸ್ನೇಹಿತರಲ್ಲೂ ಓದುವ ಹವ್ಯಾಸ ಬೆಳೆಯಲಿ. ಹಾಗೆಯೇ ಬರೆಯುವ ಹವ್ಯಾಸವೂ ಬೆಳೆಯಲಿ.

      Delete
  20. Namaste sir
    Thank you for walking us through the rich forests of your search and research in both history and science

    ReplyDelete
  21. ಅದ್ಭುತ ಸರ್... ನಿಜವಾದ ಪರಿಸರ ಪ್ರೇಮಿ ನೀವು... ಎಲ್ಲಿಯೂ ಸಿಗದ ಮಾಹಿತಿ ಇಂದೆನೆಗೆ ಸಿಕ್ಕಿತು.. ಧನ್ಯವಾದಗಳು ತಮಗೆ

    ReplyDelete
  22. ಪ್ರಿಯ ರಾಮಚಂದ್ರಭಟ್ ರವರೆ, ನೀವು ಒಬ್ಬ ಉತ್ತಮ ಸಂಪನ್ಮೂಲ ವ್ಯಕ್ತಿಯಾಗಿಯಾಗಿದ್ದೀರಿ.ನೀವು ಬರವಣಿಗೆ ಪ್ರಾರಂಭಮಾಡಿರುವುದು ಉತ್ತಮ ಬೆಳವಣಿಗೆ. ಇದರಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಸಾವಿರಾರು ಶಿಕ್ಷಕರಿಗೆ ಅನುಕೂಲವಾಗಲಿದೆ. ಈ ನಿಮ್ಮ ಕಾರ್ಯಕ್ಕೆ ಶುಭ ಹಾರೈಸುತ್ತೇನೆ.

    ReplyDelete
  23. ಉತ್ತಮ ಮಾಹಿತಿ ನೀಡಿದ್ದೀರಿ ಸರ್ ನಿಮಗೆ ಧನ್ಯವಾದಗಳು

    ReplyDelete
  24. ಉಪಯುಕ್ತ ಮಾಹಿತಿ ನೀಡಿದ್ದೀರಿ, ಓದಲು ಆಸಕ್ತಿ ಕಾಯಕವಾಗಿತ್ತು ಸಾರ್

    ReplyDelete
  25. ಉತ್ಸಾಹದಿಂದ ಓದುವಂತೆ ಬರೆದಿದ್ದೀರಿ. ತುಂಬಾ ಚೆನ್ನಾಗಿದೆ ಸರ್.

    ReplyDelete