Sunday, July 4, 2021

ನೆಲದ ಬಿಲದ ಸಿಂಹ

ನೆಲದ ಬಿಲದ ಸಿಂಹ 

ಲೇಖಕರು: ವಿಜಯಕುಮಾರ್‌ ಹುತ್ತನಹಳ್ಳಿ

ಸಹ ಶಿಕ್ಷಕರು

.ಪ್ರೌ.ಶಾಲೆಕಾವಲ್‌ ಭೈರಸಂದ್ರ.

ಬೆಂಗಳೂರು ಉತ್ತರ ವಲಯ  3


ಸಿಂಹ ಎಲ್ಲಿ ವಾಸಿಸುತ್ತೆ ಅಂದರೆ ಎಳೆ ಮಗು ಕೂಡ ಹೇಳುತ್ತೆ ಕಾಡಿನಲ್ಲಿ ಅಥವಾ ಗುಹೆಯಲ್ಲಿ ಅಂತ. ಆದರೆ ಮಣ್ಣಿನಲ್ಲಿ ವಾಸಿಸುವ ಸಿಂಹದ ಬಗ್ಗೆ ಗೊತ್ತ? ಅಂದರೆ ಕ್ಷಣ ಗಲಿಬಿಲಿಗೊಳ್ಳೋದು ಸಹಜ. ನಾನು ಈ ಲೇಖನದಲ್ಲಿ ಹೇಳ ಹೊರಟಿರುವುದು ಹಾಗೆ ಮಣ್ಣಿನಲ್ಲಿ ವಾಸಿಸುವ ಸಿಂಹದ ಬಗ್ಗೆ. ಆದರೆ ಇದು ನಿಜವಾದ ಸಿಂಹವಲ್ಲ. ಇರುವೆಗಳಿಗೆ ಸಿಂಹ ಸ್ವರೂಪವಾದ “ಇರುವೆಸಿಂಹ” ಅಂದರೆ Antlion ಎಂಬ ಸಣ್ಣ ಕೀಟದ ಬಗ್ಗೆ.

ಇರುವೆ ಸಿಂಹ ಅಪರೂಪವೇನೂ ಅಲ್ಲ. ಸಾಮಾನ್ಯವಾಗಿ ಮಳೆ ಹನಿಗಳು ಬೀಳದ ಮತ್ತು ನೆರಳಿರುವ ಜಾಗಗಳ ನುಣುಪಾದ ಮಣ್ಣಿನಲ್ಲಿ ಆಲಿಕೆಯಾಕಾರದ ಸಣ್ಣ ಕುಳಿ ನಿರ್ಮಿಸಿಕೊಂಡು ಇವು ವಾಸಿಸುತ್ತವೆ. ಚಿಕ್ಕಂದಿನಲ್ಲಿ ನಾವುಗಳೆಲ್ಲಾ ಮೊಣಕಾಲೂರಿ ಕೂತು ಬಾಯಿಯಿಂದ ಜೋರಾಗಿ ಗಾಳಿ ಊದಿ ಇವನ್ನು ಆಚೆ ತಂದು ಆಟವಾಡಿಸಿದ್ದು ನೆನಪಿಸಿಕೊಳ್ಳಿ. ಹಾಗೆ ಆಚೆ ಬರುವಂತೆ ಮಾಡಿದರೆ ಇದು ಕೂಡಲೇ ತನ್ನ ಮೃದುವಾದ ಹಿಂಬದಿಯಿಂದ ಮಣ್ಣನ್ನು ಬಗೆಯುತ್ತಾ ಒಳಗೆ ಸೇರಿಕೊಳ್ಳುವುದನ್ನು ನೋಡುವುದೇ ಸೊಗಸು. ಆದರೆನಗರದ ಮಕ್ಕಳಿಗೆ ಈ ಅವಕಾಶ ಅಪರೂಪ.

ಬರೀ ಇಷ್ಟೇ ಆಗಿದ್ದಿದ್ದರೆ ನಾನು ಈ ಲೇಖನ ಬರೆಯುವ ಮನಸು ಮಾಡುತ್ತಿರಲಿಲ್ಲ. ಇದರಲ್ಲಿ ಮತ್ತೊಂದು ಸೋಜಿಗ ಇದೆ. ಅದೇನೆಂದರೆ ನಾವು ಈ ಇರುವೆ ಸಿಂಹವನ್ನು ನೋಡಿದ್ದರೂ ಕೂಡ, ಅದೊಂದು ಸ್ವತಂತ್ರ ಜೀವಿಯಾದ ಯಾವುದೋ ಹುಳು ಎಂದು ತಿಳಿಯುವುದೇ ಹೆಚ್ಚು. ಆದರೆ ಇದು ಕೀಟವೊಂದರ ಲಾರ್ವ ಅವಸ್ಥೆ ಎಂಬುದು ವಿಶೇಷವೇ ಸರಿ. 

ನಂತರ ಇದು ಅಂಟಾದ ನೂಲನ್ನು ತನ್ನ ಸುತ್ತ ಸುತ್ತಿಕೊಂಡು ಅದಕ್ಕೆ ಮಣ್ಣನ್ನೇ ಅಂಟಿಸಿಕೊಂಡು ಉಂಡೆಯಾಕಾರದ ಕೋಶಾವಸ್ಥೆ ತಲುಪಿ ಮುಂದೆ ಸ್ವತಂತ್ರ ಕೀಟವಾಗಿ ಹಾರಿ ಹೋಗುತ್ತೆ ಎಂಬುದು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಈ ಕೀಟವನ್ನು ನೋಡಿದ್ದರೂ ಅದೊಂದು ಡ್ರ್ಯಾಗನ್‌ ಫ್ಲೈ (ಏರೋಪ್ಲೇನ್‌ ಚಿಟ್ಟೆ) ಎಂದು ತಪ್ಪು ತಿಳಿಯುವ ಸಾಧ್ಯತೆ ಹೆಚ್ಚು.




ಇರುವೆಸಿಂಹ ಹೆಸರೇ ಸೂಚಿಸುವಂತೆ ಹೆಚ್ಚಿನಂಶ ಇರುವೆ ಮತ್ತಿತರ ಸಣ್ಣ ಕೀಟಗಳನ್ನೇ ಆಹಾರವಾಗಿ ಬಳಸುತ್ತದೆ. ಬಾಲ್ಯದಲ್ಲಿ ಇದರ ಆಲಿಕೆಯಾಕಾರದ ಗೂಡಿಗೆ ಇರುವೆಗಳನ್ನು ದಬ್ಬಿ ಒಳಗೆ ಹುದುಗಿದ್ದ ಇರುವೆ ಸಿಂಹ ತನ್ನ ಕೊಂಡಿಯಿಂದ ಮಣ್ಣನ್ನು ಚಿಮ್ಮಿ ಮೇಲೆ ಏರಲು ವಿಫಲ ಯತ್ನ ನಡೆಸುತ್ತಿರುವ ಇರುವೆಯನ್ನು ಕೆಡವಿ ಬಲಿಷ್ಠ ಕೊಂಡಿಗಳಿಂದ ಹಿಡಿಯುವುದನ್ನು ನೋಡುವುದು ಥ್ರಿಲ್ಲರ್‌ ಸಿನಿಮಾ ನೋಡಿದ ರೋಮಾಂಚಕ ಅನುಭವವಾಗುತ್ತಿತ್ತು.

ಪರಿಸರದ ಬಗ್ಗೆ ಕುತೂಹಲಕಾರಿಯಾಗಿ ಲೇಖನಗಳನ್ನು ಬರೆದು, ಪ್ರಾಣಿ ಪಕ್ಷಿಗಳ ಸುಂದರ ಫೋಟೋ ತೆಗೆದು ತೋರಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಪೂರ್ಣಚಂದ್ರ ತೇಜಸ್ವಿ, ಅಭಿಮಾನಿಗಳು “ಸರ್‌ ನಿಮ್ಮೂರಿಗೆ ಬರ್ತೀವಿ ಅವನ್ನೆಲ್ಲಾ ತೋರಿಸಿ” ಅಂದರೆ “ಅಲ್ರಯ್ಯ ನೀವು ಬಂದ್ರೆ ತೋರ್ಸಕ್ಕೆ ಅವೇನು ಫೋಸ್‌ ಕೊಟ್ಕೊಂಡು ಕೂತಿರ್ತಾವ?” ನಿಮ್ಮ ಸುತ್ತ ಮುತ್ತ ನೋಡಿದರೆ ಅಲ್ಲೇ ನಿಮಗೆ ಸಿಗುತ್ತವೆ, ನೋಡೋ ತಾಳ್ಮೆ ಆಸಕ್ತಿ ಇರಬೇಕಷ್ಟೆ ಎನ್ನುತ್ತಿದ್ದರಂತೆ. ಅವರ ಮಾತಿನಂತೆ ನಾವು ಈ ಇರುವೆಸಿಂಹವನ್ನು ಗಮನಿಸಬಹುದು. ಅಷ್ಟೇ ಅಲ್ಲ ಪ್ರಕೃತಿಯ ವಿಸ್ಮಯಗಳನ್ನು ಗಮನಿಸಲು ಮಕ್ಕಳಿಗೆ ಪ್ರೇರಣೆ ನೀಡಬಹುದು ಎಂಬುದು ಆಶಯ.

ನೋಡಿದ್ದಷ್ಟೇ ನಿಜವಲ್ಲ ತಿಳಿಯದ ಕೌತುಕಗಳು ಬಹಳ ಅಡಗಿರುತ್ತವೆ. ಇರುವೆಸಿಂಹ ತನ್ನ ಗೂಡನ್ನು ನಿರ್ಮಿಸುವುದು ಅಂತಹ ಒಂದು ಸೋಜಿಗ ತನ್ನ ಬಲವಾದ ಕೊಂಡಿಯಿಂದ ಮಣ್ಣನ್ನು ಚಿಮ್ಮುತ್ತಾ ಸುರುಳಿಯಾಕಾದಲ್ಲಿ ತಿರುಗುತ್ತಾ 450 ಕೋನದ ಇಳಿಜಾರಿರುವಂತೆ ಆಲಿಕೆಯಾಕಾರದ ಕುಳಿ ಮಾಡಿ 900 ಗೋಡೆ ಮೇಲೂ ಸರಾಗವಾಗಿ ಏರುವ ಇರುವೆ. ಇಲ್ಲಿ ಜಾರುವ ನುಣುಪಾದ ಮಣ್ಣಿನಲ್ಲಿ ಏರಲಾಗದೆ, ಒಂದೊಮ್ಮೆ ಏರುವ ಪ್ರಯತ್ನ ಮಾಡುತ್ತಿದ್ದರೂ ಇರುವೆಸಿಂಹ ಕೆಳಗಿನಿಂದ ಪಿರಂಗಿಯ ಗುಂಡಿನಂತೆ ಚಿಮ್ಮುವ ಮಣ್ಣಿನ ಹೊಡೆತದಿಂದ ಏರಲಾಗದೆ ಇರುವೆಸಿಂಹಕ್ಕೆ ಆಹಾರವಾಗುವುದು ನೋಡಲು ರೋಚಕ. ಹೀಗೆ ಹಿಡಿದ ಇರುವೆಗೆ ನಿಶ್ಚೇಶ್ಟಿತವಾಗುವಂತೆ ರಾಸಾಯನಿಕವನ್ನು ಚುಚ್ಚಿ ಅದರ ರಸವನ್ನೆಲ್ಲಾ ಹೀರಿ ಒಣ ದೇಹವನ್ನು ಹೊರಕ್ಕೆಸೆದು ಮತ್ತೊಂದು ಬೇಟೆಗೆ ಸಿದ್ಧವಾಗಿ ಅಡಗಿ ಕುಳಿತುಕೊಳ್ಳುತ್ತದೆ.

ಪ್ರಪಂಚದಾದ್ಯಂತ ಇರುವ ಇರುವೆಸಿಂಹವು “ಮೈರಮೆಲಿಯೋನ್‌ಟಿಡೆ” ಕುಟುಂಬಕ್ಕೆ ಸೇರಿದೆ. ಇದರಲ್ಲಿ ಸುಮಾರು 2000 ಪ್ರಬೇಧಗಳಿವೆ. ಇರುವೆಸಿಂಹದ ಪ್ರೌಢ ಕೀಟದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಕಾರಣ ಅವುಗಳ ಅತ್ಯಂತ ಕಡಿಮೆ ಜೀವಿತಾವಧಿ. ಹೀಗೆ ನಮ್ಮ ಸುತ್ತಮುತ್ತಲಲ್ಲೇ ಕಾಣುವ ಕುತೂಹಲಕರ ಜೀವ ಜಗತ್ತಿಗೆ ನಾವು ಸೂಕ್ಷ್ಮತೆಯಿಂದ ತೆರೆದುಕೊಳ್ಳೋಣ. ಮಕ್ಕಳಲ್ಲೂ ಈ ಪ್ರಜ್ಞೆ ಮೂಡಿಸೋಣ. ಇಲ್ಲಿ ಯಾವುದೂ ಮಹತ್ತ್ವದ್ದಲ್ಲ ಯಾವುದೂ ಯಃಕಶ್ಚಿತವಲ್ಲ. ಅಲ್ಲವೆ?

ಇನ್ನು ಮುಂದೆ ನಿಮ್ಮ ಸುತ್ತಮುತ್ತ ನಮ್ಮನ್ನು ಕಂಡರೆ ತುಸು ಗಮನಿಸುತ್ತೀರಲ್ಲವೆ?






ಈ ಲೇಖನದ ಪಿ. ಡಿ. ಎಫ್. ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ. - ನೆಲದ ಬಿಲದ ಸಿಂಹ 

8 comments:

  1. ಕಣ್ಣಿಗೆ ಕಟ್ಟುವಂತಹ ಸುಂದರ ನಿರೂಪಣೆ

    ReplyDelete
  2. This shows your keen interest in nature
    Friend very interesting fact🙂👍

    ReplyDelete
  3. ಲೇಖನ ಸುಂದರವಾಗಿದೆ. ಜೀವಿಗಳ ಬಗ್ಗೆ ಬಹಳ ಆಳ ಅಧ್ಯಯನ ಮಾಡಿ ಬರೆದಿದ್ದೀರಿ

    ReplyDelete
  4. ಇರುವೆ ಸಿಂಹದ ಪರಿಚಯ ಸೊಗಸಾಗಿದೆ ಸರ್
    ಧನ್ಯವಾದಗಳು

    ReplyDelete