Sunday, July 4, 2021

ಜ್ಞಾನದ ಗರಡಿಯಲ್ಲಿ ಒಂದು ದಿನ – ವಿ.ಎಸ್.ಶಾಸ್ತ್ರೀ ಅವರೊಂದಿಗೆ ಒಂದು ಆತ್ಮೀಯ ಸಂದರ್ಶನ

ಜ್ಞಾನದ ಗರಡಿಯಲ್ಲಿ ಒಂದು ದಿನ – ವಿ.ಎಸ್.ಶಾಸ್ತ್ರೀ ಅವರೊಂದಿಗೆ ಒಂದು ಆತ್ಮೀಯ ಸಂದರ್ಶನ   

ಕೋಲಾರದ ಶಾಸ್ತ್ರೀಜಿಯವರ ಪರಿಚಯ ನಿಮ್ಮೆಲ್ಲರಿಗೂ ಈಗಾಗಲೇ ಆಗಿದೆ. ಅವರ ಜೀವನೋತ್ಸಾಹ, ಕಲಿಕೆಯಲ್ಲಿರುವ ಶ್ರದ್ಧೆ, ಬೇರೆಯವರಿಗೂ ತಮ್ಮ ಜ್ಞಾನವನ್ನು ಧಾರೆ ಎರೆಯುವ ಗುಣ, ಎಲ್ಲವೂ ಅನುಕರಣೀಯ, ಅನನ್ಯ. ಅಂಥ ಜ್ಞಾನದ ಗಣಿಯಲ್ಲಿ ಒಂದು ದಿನ ಕಳೆಯುವ ಅವಕಾಶ ನಮಗೆ ದೊರೆಯಿತು. ಶಾಸ್ತ್ರೀಜಿಯವರ ಮನೆಯೇ ಅಗಣಿತ ಕಲಿಕಾ ಮಂದಿರ. ಹೀಗಾಗಿ, ‘ಸವಿಜ್ಞಾನ’ದ ಓದುಗರಿಗೂ ಅದನ್ನು ತಲುಪಿಸುವ ಸಲುವಾಗಿ ಶ್ರೀನಿವಾಸ್, ವಿಜಯಕುಮಾರ್ ಹಾಗೂ ರಾಮಚಂದ್ರಭಟ್ ಅವರನ್ನೊಳಗೊಂಡ ನಮ್ಮ ಸವಿಜ್ಞಾನ ತಂಡ ಅವರ ಸಂದರ್ಶನ ಮಾಡಿತು. ಸುಮಾರು 2 ತಾಸುಗಳಿಗೂ ಹೆಚ್ಚಿನ ಕಾಲದವರೆಗೆ ನಮ್ಮ ಜೊತೆಗಿದ್ದು ಹಲವಾರು ವಿಚಾರಗಳ ಕುರಿತು ಮಾಹಿತಿ ನೀಡಿದರು. ಅವರ ಮನೆಯಲ್ಲಿ ಅವರನ್ನು ಸಂದರ್ಶಿಸಿದ್ದೂ ಅಲ್ಲದೇ, ಅವರೊಂದಿಗೆ ಕುಪ್ಪಂಗೂ ತೆರಳಿ ಅಲ್ಲಿನ ‘ಗಣಿತವನ’ವನ್ನೂ ವೀಕ್ಷಿಸಿದೆವು. ಮನೆಯಲ್ಲಿ ನಡೆಸಿದ ಸಂದರ್ಶನದ ಜೊತೆ, ದಾರಿಯುದ್ದಕ್ಕೂ ಶೈಕ್ಷಣಿಕ ದೃಷ್ಟಿಕೋನಕ್ಕೆ ಸಂಬಂಧಿಸಿದ ವಿಚಾರಗಳನ್ನು ಚರ್ಚಿಸಿದೆವು. ಇಳಿ ವಯಸ್ಸಿನಲ್ಲೂ ತುಂಬಾ ಉತ್ಸಾಹದಿಂದಲೇ ಯಾವುದೇ ಆಯಾಸವಿಲ್ಲದೆ, ನಮಗೆ ಹಲವಾರು ವಿಷಯಗಳ ಬಗ್ಗೆ ಕುತೂಹಲಭರಿತ ಮಾಹಿತಿಗಳನ್ನು ತಿಳಿಸಿಕೊಟ್ಟರು.


ಸಂದರ್ಶಕರು : ನಮಸ್ಕಾರ ಸರ್, ‘ಸವಿಜ್ಞಾನ’ ತಂಡದ ಪರವಾಗಿ ಸ್ವಾಗತ ಕೋರುತ್ತೇವೆ. ಗಣಿತ ಶಿಕ್ಷಣದಲ್ಲಿ ಇತ್ತೀಚೆಗೆ ಬಹಳಷ್ಟು ಬದಲಾವಣೆಗಳನ್ನು ನೋಡುತ್ತಿದ್ದೇವೆ. ನಿಮ್ಮ ಪ್ರಕಾರ ವಿದ್ಯಾರ್ಥಿಗಳಲ್ಲಿ ಗಣಿತ ಕಲಿಕೆಯ ಬಗ್ಗೆ ಹೇಗೆ ಅಭಿರುಚಿ ಮೂಡಿಸಬಹುದು?

ಶಾಸ್ತ್ರಿ ಸರ್:- ಭಾರತದ ಉದ್ದಗಲ್ಲಕ್ಕೂ ಸುತ್ತಿದಾಗ ನನಗೆ ಸ್ಪಷ್ಟಗೊಂಡ ಅಂಶವೆಂದರೆ ಮಕ್ಕಳಲ್ಲಿ ಗಣಿತ ವಿಷಯದ ಕುರಿತ ಅವ್ಯಕ್ತ ಭಯ !!!!!!! ವಿದ್ಯಾರ್ಥಿಗಳಲ್ಲಿ, ಗಣಿತದ ವಿಮುಖತೆಯನ್ನು ಹೋಗಲಾಡಿಸದ ನಿಮ್ಮ ಗಣಿತ pedagogy ವ್ಯರ್ಥವೇ ಸರಿ. ಇದಕ್ಕೆ ಪೂರಕವಾಗಿ ಹೇಳಬೇಕೆಂದರೆ, ನಮ್ಮ ಐ.ಟಿ. ಇಂಡಸ್ಟಿçಯಲ್ಲಿ ಕಾರ್ಯ ನಿರ್ವಹಿಸುವ ಇಂಜಿನಿಯರಗಳು ಬುದ್ಧಿವಂತರಿರುತ್ತಾರೆ. ಅವರು ತಮ್ಮ engineering courseನಲ್ಲಿ ಗಣಿತದಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಹೋಗಿರುತ್ತಾರೆ. ಅವರಲ್ಲಿಯೂ, ಗಣಿತದ ಬಗ್ಗೆ ವಿಮುಖತೆ ಕಂಡುಬರುತ್ತದೆ. ಏಕೆಂದರೆ, ಗಣಿತ ವಿಷಯ ಆರ್ಕಷಣೀಯವಾಗಿಲ್ಲ. ಎಲ್ಲಿಯವರೆಗೆ ಗಣಿತ ವಿಷಯವನ್ನು ಆರ್ಕಷಣೀಯವಾಗಿ ಮಾಡುವುದಿಲ್ಲವೊ ಅಲ್ಲಿಯವರೆಗೆ, ಮಕ್ಕಳಿಗೆ ಅದು ಅರ್ಥವಾಗುವುದಿಲ್ಲ, ಅರ್ಥವಿಲ್ಲದ ಭೋಧನೆಯಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಗಣಿತವನ್ನು ಆಕರ್ಷಣೀಯವಾಗಿ ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ, ಶಿಕ್ಷಕರು ಹಾಗೂ ಸರ್ಕಾರಗಳು ಮಾಡಬೇಕಾದದ್ದು ಬಹಳಷ್ಟಿದೆ.

ಸಂದರ್ಶಕರು:  ಸರ್ ಹಾಗಾದರೆ ವಿದ್ಯಾರ್ಥಿಗಳಲ್ಲಿನ ಈ ಗಣಿತಬಗ್ಗೆ ಇರುವ ವಿಮುಖತೆಯನ್ನು ಹೋಗಲಾಡಿಸುವುದು ಹೇಗೆ?

ಶಾಸ್ತ್ರಿ ಸರ್: ಸಮಸ್ಯೆಯನ್ನು ಅರಿತುಕೊಳ್ಳವುದು ಬಹಳ ಮುಖ್ಯ, ಸಮಸ್ಯೆ ಅರಿಯದಿದ್ದರೆ  ವಿದ್ಯಾರ್ಥಿಗಳಲ್ಲಿರುವ ವಿಮುಖತೆಯನ್ನು ಹೋಗಲಾಡಿಸಲು ಸಾದ್ಯವಿಲ್ಲ. ಅಡುಗೆಯ ರುಚಿಗೆ ಉಪ್ಪು ಎಷ್ಟು ಮುಖ್ಯವೆಂದು ಅರಿಯದೆ, ಅಡುಗೆಯನ್ನು ರುಚಿಕರವಾಗಿಸಲು ಸಾದ್ಯವಿಲ್ಲ, ಅದೆರೀತಿ, ಗಣಿತ ವಿಷಯ ಬದುಕಿಗೆ ಬಹಳ ಅಗತ್ಯ ಎಂದು ಮನಗಂಡಿದ್ದರೂ, ಗಣಿತದಿಂದ ದೂರ ಸರಿಯುತ್ತಿದ್ದಾರೆ.

ಸಂದರ್ಶಕ: ಇತ್ತೀಚೆಗೆ DSERT ಗಣಿತದ ಆಟಿಕೆಗಳನ್ನು ತಯಾರಿಸುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ನೀವು ಆ ಕಾರ್ಯಕ್ರಮದಲ್ಲಿ ಮೆಂಟರ್ ಆಗಿದ್ದಿರಿ, ಇಂಥ ಪ್ರಯತ್ನ, ಯಾವ ರೀತಿಯಾಗಿ ಗಣಿತ ಕಲಿಕೆಯಲ್ಲಿ ಬದಲಾವಣಿ ಉಂಟುಮಾಡುತ್ತದೆ?

ಶಾಸ್ತ್ರಿ ಸರ್: ಸರಿ ಸುಮಾರು 10 ವರ್ಷಗಳಿಂದ 250 ಗಣಿತ ಕಾರ್ಯಗಾರಗಳಲ್ಲಿ ಗಣಿತ ಶಿಕ್ಷಕರು ಕೆಲವೊಂದು ಮೂಲ ಪರಿಕಲ್ಪನೆಗಳನ್ನು ಚರ್ಚಿಸುತ್ತಿದ್ದರು. ಉದಾಹರಣೆಗೆ, -1 X -1 = +1 ಹೇಗೆ ನಿರೂಪಿಸುವುದು? xo = 1 ಹೇಗೆ ಆಗುತ್ತದೆ? ಈ ರೀತಿಯ ಮೂಲಭೂತ ಪ್ರಶ್ನೆಗಳನ್ನು ಕೇಳುತ್ತಿದ್ದರು. ಈ ರೀತಿಯ ಸಾಮಾನ್ಯ ಅಂಶಗಳನ್ನು ಪಟ್ಟಿ ಮಾಡಿಕೊಂಡೆ. ಯಾವುದೇ ಪಠ್ಯಕ್ರಮವಾದರೂ ಇಡೀ ಭಾರತದಲ್ಲಿ ಗಣಿತದಲ್ಲಿ ಇದೇ ಬಗೆಯ ೨೫ ಅಂಶಗಳನ್ನು ಆಧರಿಸಿದ ಪ್ರಶ್ನೆಗಳಿರುತ್ತವೆ. ಇದಕ್ಕೆ ಮುಖ್ಯಕಾರಣ ಪರಿಕಲ್ಪನೆಯ ಸ್ಪಷ್ಟತೆಯ ಕೊರತೆ ಕಂಡುಬರುತ್ತದೆ. ಗಣಿತ ಪಠ್ಯಪುಸ್ತಕಗಳಲ್ಲಿಯು ಸಹ ಕೆಲವೊಂದು ಪರಿಕಲ್ಪನೆಗಳಿಗೆ ಸರಿಯಾದ ವಿವರಣೆ ಇರುವುದಿಲ್ಲ. ಅದಲ್ಲದೆ, ಕಳೆದ ೫೦ ವರ್ಷಗಳಲ್ಲಿ ಇತರ ದೇಶಗಳಲ್ಲಿ ಗಣಿತ ಭೋಧನೆಯಲ್ಲಿ ಉಂಟಾಗಿರುವ ಬದಲಾವಣೆ ಭಾರತದಲ್ಲಿ ಕಂಡುಬAದಿಲ್ಲ . ಈ ಎಲ್ಲಾ ವಿಧಾನಗಳು ಅಂರ್ತಜಾಲದಲ್ಲಿ ಲಭ್ಯವಿದೆ, ಸಿಂಗಪೂರ್ ವಿಧಾನ ಆಥವಾ ಫಿನ್‌ಲ್ಯಾಂಡ್‌ನ ಶಿಕ್ಷಣ ವಿಧಾನ, ಇವುಗಳ ಬಗ್ಗೆ ಅರಿವಿಲ್ಲ, ಶಿಕ್ಷಣ ತಜ್ಞರು ಈ ವಿಧಾನಗಳನ್ನು ಅಭ್ಯಸಿಸಿದರು. ನಮ್ಮಲ್ಲಿ ಇನ್ನೂ ಈ ವಿಧಾನಗಳನ್ನು ಬಳಸುತ್ತಿಲ್ಲ. ಎಲ್ಲಾಗಣಿತ ಶಿಕ್ಷಕರು ಅಂತರ್ಜಾಲದಲ್ಲಿ ಉಚಿತವಾಗಿ ದೊರೆಯುವ ಈ ವಿಫುಲವಾದ ಜ್ಞಾನವನ್ನು ಬಳಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಕಾರಣ, ಅವರಲ್ಲಿÀ ಗಣಿತz ಬಗ್ಗೆ ಇರುವ ವಿಮುಖತೆ. ಗಣಿತ ಶಿಕ್ಷಕರಲ್ಲಿನ ಪ್ರಾಮಾಣಿಕತೆಯನ್ನು ನಾನು ಪ್ರಶ್ನಿಸುತ್ತಿಲ್ಲ, ಅವರಲ್ಲಿ ವಿದ್ಯಾರ್ಥಿಗಳ ಬಗ್ಗೆ ಅಪಾರವಾದ ಕಾಳಜಿ ಇದೆ, ಅವರು ವಿಶೇಷ ತರಗತಿಗಳನ್ನು ತೆಗೆದುಕೊಂಡು ಬೋಧಿಸುವುದನ್ನು ಕಂಡಿದ್ದೇನೆ. ಶಿಕ್ಷಕರು ಹೆಚ್ಚು ಪರಿಶ್ರಮ ಪಡುತ್ತಿದ್ದಾರೆ, ಶಿಕ್ಷಕರು ತಮಗೆ ತಿಳಿದ ಜ್ಞಾನವನ್ನು ನಿರ್ವಂಚನೆಯಿAದ ವಿದ್ಯಾರ್ಥಿಗಳಿಗೆ ಮುಟ್ಟಿಸುತ್ತಿದ್ದಾರೆ. ಆದರೆ, ವಿದ್ಯಾರ್ಥಿಗಳಲ್ಲಿನ ವಿಮುಖತೆಯನ್ನು ಹೋಗಲಾಡಿಸದೆ ಪ್ರಯೋಜನವಿಲ್ಲ.

ಸಂದರ್ಶಕ: ಹಾಗಾದರೆ ಈ ವಿಮುಖತೆಯನ್ನು ಹೋಗಲಾಡಿಸಲು ನೀವು ಹೇಳಿದ ಸಿಂಗಪೂರ್ ವಿಧಾನ ಅಥವಾ ಫಿನ್‌ಲ್ಯಾಂಡ್ ವಿಧಾನ ಇವುಗಳ ಬಗ್ಗೆ ಮಾಹಿತಿ ಇರುವ websiteಗಳ ವಿವರ ನೀಡುತ್ತೀರ?

ಶಾಸ್ತ್ರಿ ಸರ್: ಬೇಕಾದಷ್ಟು ಮಾಹಿತಿ ಅಂತರ್ಜಾಲದಲ್ಲಿ ವಿವಿಧ websiteಗಳಲ್ಲಿ ಸಾಮಗ್ರಿಗಳು ಲಭ್ಯವಿದೆ, ಉದಾಹರಣೆಗೆ, ಸಂಗೀತಕ್ಕೆ ಸಂಬಂದಿಸಿದಂತೆ ಹಲವು ಕಾರ್ಯಕ್ರಮಗಳು ಮಾಧ್ಯಮಗಳಲ್ಲಿ ಬರುತ್ತಿರುತ್ತದೆ. ಈ ಕಾರ್ಯಕ್ರಮಗಳಲ್ಲಿ ಸಣ್ಣ ಮಕ್ಕಳು ಅಪಾರವಾದ ಪ್ರತಿಭೆ ಹೊಂದಿರುವುದನ್ನು, ಪ್ರದರ್ಶಿಸುವುದನ್ನು ಕಂಡಿದ್ದೇವೆ, ಇಂತಹ ಕೌಶಲ್ಯವನ್ನು ಹೊರ ಹೊಮ್ಮಿಸುವ ಕಾರ್ಯಕ್ರಮಗಳು ಗಣಿತ ವಿಷಯದಲ್ಲಿ ಪ್ರಸಾರವಾಗಬೇಕು. ಪೋಷಕರಿಗೆ ತಮ್ಮ ಮಕ್ಕಳು ಒಳ್ಳೆಯ ಅಂಕಗಳನ್ನು ಪಡೆಯಬೇಕು, ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸ್ಥಾನ ಪಡೆಯಬೇಕು ಎಂಬ ನಿರೀಕ್ಷೆ ಇರುತ್ತದೆ. ಶಿಕ್ಷಕರು, ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯಲಿ ಎಂದು ನೀರಸವಾಗಿ ಭೋಧಿಸದೆ, ಕೌಶಲ್ಯ ಭರಿತರಾಗಿರಬೇಕು ಹಾಗೂ ವಿದ್ಯಾರ್ಥಿಗಳಲ್ಲಿ ಆಸಕ್ತಿ ಉಂಟುಮಾಡುವ ಹಾಗೂ ಸ್ವಾಧ್ಯಾಯಕ್ಕೆ ಪ್ರೇರೇಪಿಸಿಬೇಕು. ಎಲ್ಲಿಯವರೆಗೆ ಗಣಿತ ವಿಷಯವನ್ನು ಆಕರ್ಷಕವಾಗಿಸುವುದಿಲ್ಲವೋ, ಅಲ್ಲಿಯವರೆಗೆ ವಿಮುಖತೆ ಹೋಗಲಾಡಿಸಲು ಸಾದ್ಯವಿಲ್ಲ. ಇದನ್ನು ಶಿಕ್ಷಕರು ಮನಗಾಣಬೇಕು. ಉದಾಹರಣೆಗೆ,  ನಾವು ಶಾಲೆಗಳಲ್ಲಿ ಹಲವಾರು ವಿಶೇಷ ದಿನಗಳನ್ನು ಆಚರಿಸುತ್ತೇವೆ. ಆದರೆ, ಅಂತರಾಷ್ಟ್ರೀಯ ಗಣಿತ ದಿನದ ಪ್ರಯುಕ್ತ ಯಾರೂ ಶುಭಾಶಯಗಳನ್ನು ತಿಳಿಸುವುದಿಲ್ಲ, ಆ ದಿನವನ್ನು ಸಂಭ್ರಮಿಸುವುದಿಲ್ಲ, ಇಂತಹ ಅವಕಾಶಗಳನ್ನು ಬಳಸಿಕೊಂಡು ವಿಮುಖತೆಯನ್ನು ಹೋಗಲಾಡಿಸಬೇಕು. ಗಣಿತವನ್ನು ಆಕರ್ಷಣೀಯವಾಗಿಸಲು ಹಲವು ಅಂಶಗಳಿವೆ, ಹಲವು ಗಣಿತಜ್ಞರಿದ್ದಾರೆ, ಆದರೆ, ನಮಗೆ ತಿಳಿದಿರುವುದು ಶ್ರೀನಿವಾಸ ರಾಮಾನುಜಮ್ ಮಾತ್ರ, ಇತರರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿದಿಲ್ಲ, ಆ ಕಾರ್ಯವನ್ನು ಶಿಕ್ಷಕರು ಮಾಡಬೇಕು. ಗಣಿತಜ್ಞರನ್ನು ಮಾದರಿಯಾಗಿಸಿಕೊಳ್ಳವಂತಹ ವಾತಾವರಣವನ್ನು ಶಿಕ್ಷಕರು ಮಾಡಬೇಕು. ಬೇರೆ ಕೌಶಲ್ಯಗಳನ್ನು ಪಡೆಯಲು ಖರ್ಚು ಹೆಚ್ಚು ಆದರೆ, ಗಣಿತ ಕೌಶಲ್ಯವನ್ನು ಪಡೆಯಲು ಯಾವ ಖರ್ಚೂ ಆಗುವುದಿಲ್ಲ. ಕೇವಲ, ನಿಮ್ಮ ಬುದ್ಧಿ ಮಾತ್ರ. ಇಷ್ಟೆಲ್ಲಾ ಅನುಕೂಲತೆ ಇದ್ದರೂ, ಗಣಿತ ನಮ್ಮಿಂದ ದೂರ.


ಸಂದರ್ಶಕ: ನೀವು ಬ್ಯಾಂಕ್ ಉದ್ಯೋಗಿಯಾಗಿದ್ದರೂ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಅಪಾರವಾದ ಸಾಧನೆ ಮಾಡಿದ್ದೀರಿ, ರಾಷ್ಟ್ರ ಮಟ್ಟದಲ್ಲೂ ಮನ್ನಣೆ ಪಡೆದಿದ್ದೀರಿಇದು ಹೇಗೆ ಸಾಧ್ಯವಾಯಿತು?

ಶಾಸ್ತ್ರಿ ಸರ್: ಬ್ಯಾಂಕ್ ಉದ್ಯೋಗ ಉದರ ನಿಮಿತ್ತ, ಆದರೆ, ಮೊದಲಿನಿಂದಲೂ ಓದಿನ ಬಗ್ಗೆ ಆಸಕ್ತಿ, ಸಹಜವಾಗಿ ವಿಜ್ಞಾನ ಗಣಿತಗಳ ಬಗ್ಗೆ ಆಸಕ್ತಿ ಬೆಳೆಯಿತು. ಭೂಪಾಲ್ ಅನಿಲ ದುರಂತದ ನಂತರ ಜನಜಾಗೃತಿಗಾಗಿ ವಿಜ್ಞಾನ ಅಭಿಯಾ ಮತ್ತು ಜಾಥಾ ನಡೆಯಿತು. ಆಗ ನಮ್ಮ ನೌಕರರ ಸಂಘವೂ ಭಾಗವಹಿಸಿತ್ತು. ನಾನೂ ಪಾಲ್ಗೊಂಡಿದ್ದೆ, ತುಮಕೂರಿನಲ್ಲಿ ಸಮಾವೇಶ ನಡೆಯಿತು, ಹಲವು ಶಿಕ್ಷಕರು ಭಾಗವಹಿಸಿದ್ದರು, ಆಗ ರಾತ್ರಿಯ ಸಮಯ ಶಿಕ್ಷಕರು ಗಣಿತದಲ್ಲಿನ ಕ್ಲಿಷ್ಟಾಂಶಗಳ ಬಗ್ಗೆ ಚರ್ಚಿಸುತ್ತಿದ್ದರು. ಆಗ, ನಮಗೆ ಲಭ್ಯವಿದ್ದದ್ದು ಕೇವಲ ಕಾಗದ. ಕಾಗದದ ಮಡಿಕೆಗಳ ಮೂಲಕ ಪರಿಹಾರ ತಿಳಿಸುತ್ತಿದ್ದೆ, ಇದನ್ನು ಗಮನಿಸಿದ ಪ್ರೊ. ಎಂ. ಆರ್. ನಾಗರಾಜ್, ಇದನ್ನೆಲ್ಲಾ ಬರೆದಿಡಿ ಎಂದರು, ಆ ಕಾರ್ಯವನ್ನು ಮಾಡುತ್ತಿದ್ದೆ, ಅದಲ್ಲದೆ, ಸಮಾನ ಮನಸ್ಕರ study circle ಇತ್ತು. ಓದಿದ ಪುಸ್ತಕಗಳಲ್ಲಿನ ಹೊಸ ವಿಷಯಗಳ ಮೇಲೆ ಚರ್ಚೆ ನಡೆಸುತ್ತಿದ್ದೆವು. ಈ ರೀತಿ, ಗಣಿತ ವಿಜ್ಞಾನ ವಿಷಯಾಸಕ್ತಿ ಬೆಳೆಯಿತು ಅದಲ್ಲದೆ, ಪ್ರೊ|| ಎಂ. ಆರ್. ನಾಗರಾಜ್ರವರು ಕ.ರಾ.ವಿ.ಪ ಕಾರ್ಯದರ್ಶಿಗಳಾದಾಗ, ಆಗ ನಾನು ಬರೆದಿಟ್ಟ ಈ ಎಲ್ಲಾ ಬರಹಗಳನ್ನು ತರಲು ತಿಳಿಸಿದರು. ಅವರ ಪ್ರೋತ್ಸಾಹದಿಂದ ಅನೇಕ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಯಿತು ಮತ್ತು ನನಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವ ಅವಕಾಶ ದೊರೆಯಿತು. ಇದರ ಜೊತೆಗೆ, ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮ ಜಾರಿಯಾಯಿತು, ಅಲ್ಲಿ ತಾಲ್ಲೂಕು, ಜಿಲ್ಲೆ, ರಾಜ್ಯ ಮಟ್ಟದ ವಿಜ್ಞಾನ ಪ್ರದರ್ಶನ ಆಯೋಜಿಸುತ್ತಿದ್ದರು. ಅದರಲ್ಲಿ,  ವಿನೂತನ ಮಾದರಿಗಳನ್ನು ಪ್ರದರ್ಶಿಲು ನನ್ನ ಕಾರ್ಯಗಾರಗಳು ಸಹಕಾರಿಯಾದವು. ಪ್ರೊಫೆಸರ್‌ರವರ ಸಹಯೋಗದಿಂದ ನನಗೂ ಅವರಜೊತೆ ಭಾಗವಹಿಸುವ ಅವಕಾಶಗಳು ಹೆಚ್ಚಾದವು. ಈ ರೀತಿಯಾಗಿ, ರಾಜ್ಯಾದ್ಯಂತ ಹಲವು ಕಾರ್ಯಗಾರಗಳಲ್ಲಿ ಭಾಗವಹಿಸಲು ಅವಕಾಶ ದೊರೆಯಿತು.

ಸಂದರ್ಶಕ: ನೀವು ಗಣಿತ ಭೋಧನೆಯಲ್ಲಿ ಓರಿಗಾಮಿ ಹಾಗೂ ಕಿರಿಗಾಮಿಗಳನ್ನು ಬಳಸುತ್ತಿದ್ದೀರಿ, ಇಂತಹ ಯೋಚನೆ ನಿಮಗೆ ಹೇಗೆ ಬಂತು?

ಶಾಸ್ತ್ರಿ ಸರ್: ನಾನು ಓರಿಗಾಮಿ, ಕಿರಿಗಾಮಿ, ಚಿತ್ರಕಲೆ ಮುಂತಾದ ಹಲವು ಹವ್ಯಾಸಗಳನ್ನು ರೂಡಿಸಿಕೊಂಡಿದ್ದೆ. ಸಾಂಪ್ರದಾಯಿಕ ಕಲಿಕೆಯಲ್ಲಿ ಪ್ರಮೇಯ, ವಿಧಾನ, ನಿರೂಪಣೆ, ಎಂದು ಹಲವು ಹಂತಗಳಿದ್ದು ಇಲ್ಲಿ ವಿದ್ಯಾರ್ಥಿಗಳು ಸಾಮಾನ್ಯವಾಗಿ ಆಸಕ್ತಿ ಕಳೆದುಕೊಳ್ಳುತ್ತಾರೆ, ಅದಲ್ಲದೆ, ಗಣಿತದಲ್ಲಿನ ಅಮೂರ್ತ ಪರಿಕಲ್ಪನೆಗಳನ್ನು ಕೇವಲ ನಿರೂಪಣಿಗಳ ಮೂಲಕ ತಿಳಿಸುವ ಪ್ರಯತ್ನವು ಎಲ್ಲಾ ವಿದ್ಯಾರ್ಥಿಗಳಿಗೂ ಆಸಕ್ತಿದಾಯಕವಾಗಿರುವುದಿಲ್ಲ. ಆದ್ದರಿಂದ, ವಿಧಾನ, ನಿರೂಪಣೆಗಳನ್ನು ಮೀರಿ ಸುಲಭವಾಗಿ ಅರ್ಥೈಸಿಕೊಳ್ಳಲು, ಕೇವಲ ಕಾಗದ ಮಡಚುವಂತ ಚಟುವಟಿಕೆಗಳನ್ನು ನಿರೂಪಿಸಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇಷ್ಟಪಟ್ಟರು. ಓರಿಗಾಮಿಯಲ್ಲಿ ಕಡಿಮೆ ಸಂವಹನಕಾರರಾಗಿ ಶಿಕ್ಷಕರು ಪಾತ್ರವಹಿಸಿ ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಸಾಧ್ಯವಿದೆ. ಬೋಧನೆ ಎಂದರೆ, ವಿಷಯವನ್ನು ಹಲವು ವಿಧಾನಗಳಲ್ಲಿ ಪ್ರಸ್ತುತ ಪಡಿಸುವುದು ಎಂದು ಪ್ರೊ. ಎಂ. ಆರ್. ನಾಗರಾಜ್ ತಿಳಿಸುತ್ತಿದ್ದರು. ಇದರಿಂದ  ಪ್ರೇರಿತನಾಗಿ ಓರಿಗಾಮಿಯನ್ನು ಗಣಿತ ಭೋಧನೆಯಲ್ಲಿ ಬಳಸುವುದು ಕರ್ನಾಟಕ ರಾಜ್ಯಾದ್ಯಂತ ಪ್ರಖ್ಯಾತವಾಯಿತು, ಇದು ವಿಜ್ಞಾನ ಪ್ರಸಾರ ಎಂಬ ರಾಷ್ಟ್ರೀಯ ಮಾಧ್ಯಮದಿಂದ ದೇಶಾದ್ಯಂತ ಪ್ರಚಾರವಾಯಿತು, ಈ ರೀತಿಯಾಗಿ ಹಲವು ರಾಜ್ಯಗಳಲ್ಲಿ ಈ ವಿಧಾನ ಹೆಚ್ಚು ಬಳಕೆಗೆ ಬಂತು. 


ಸಂದರ್ಶಕ: ತಾವು ಬರೆದಿರುವ ಓರಿಗಾಮಿ ಮೂಲಕ ಗಣಿತ ಎಂಬ ಪುಸ್ತಕದಲ್ಲಿ ರೇಖಾಗಣಿತವಲ್ಲದೆ, ಬೀಜಗಣಿತ ಹಾಗೂ ಗಣಿತದ ಇತರ ವಿಭಾಗಗಳಲ್ಲಿಯೂ ಒರಿಗಾಮಿ ಬಳಕೆ ಬಗ್ಗೆ ತಿಳಿಸಿದ್ದೀರಿ.

ಶಾಸ್ತ್ರಿ ಸರ್: ಕ.ರಾ.ವಿ.ಪ ಮೊದಲು ನನ್ನ ಒರಿಗಾಮಿ ಪುಸ್ತಕ ಪ್ರಕಟಿಸಿದರು. ನಾನು ಗಣಿತದ ಕ್ಲಿಷ್ಟಾಂಶಗಳನ್ನು ಪಟ್ಟಿಮಾಡಿಕೊಂಡೆ. ಉದಾಹರಣೆಗೆ (a + b)3 ಸೂತ್ರವನ್ನು ನಿರೂಪಿಸುವ ಮಾದರಿಗಳು ಬಹಳ ವಿರಳ, ಅದೇ ರೀತಿಯಾಗಿ geometric progression, ಪೈ ಬೆಲೆ ನಿರೂಪಣೆ , ಭಿನ್ನರಾಶಿ ಮುಂತಾದವುಗಳನ್ನು ಸುಲಭವಾಗಿ ಅರ್ಥೈಸಲು ಒರಿಗಾಮಿ ಬಳಸಿಕೊಳ್ಳಲಾಯಿತು. ಹೀಗಾಗಿ, ಆ ಪುಸ್ತಕ ಜನಪ್ರಿಯತೆಯೊಂದಿಗೆ ಯಶಸ್ವಿಯಾಯಿತು. ಗಣಿತ ಸಂವಹನದಲ್ಲಿದ್ದ ತೊಡಕನ್ನು ಹೋಗಲಾಡಿಸಲು, ಸುಲಭವಾಗಿ ಪರಿಕಲ್ಪನೆಗಳನ್ನು ಅರ್ಥೈಸಿಕೊಳ್ಳಲು ಇದು ಸಹಾಯಕವಾಯಿತು. ಉತ್ತರ ಭಾರತದಲ್ಲೂ ಪ್ರಖ್ಯಾತವಾಯಿತು. ಕಾರ್ಯಗಾರಗಳಲ್ಲಿ ಹೆಚ್ಚು ಚರ್ಚೆಗಳಿಗೆ ಅವಕಾಶವಿದ್ದುದರಿಂದ ಮೌಲಿಕ ಜ್ಞಾನ ಸಂಪಾದನೆ ಉಂಟಾಗುತ್ತದೆ ಎಂದು ಶಿಕ್ಷಕರು ಮನಗಂಡರು. ಆದ್ದರಿಂದ, ಹೆಚ್ಚು ಪ್ರಖ್ಯಾತವಾಯಿತು. ಕೇಂದ್ರೀಯ ವಿದ್ಯಾಲಯಗಳು ಹಲವಾರು ಕಾರ್ಯಗಾರಗಳನ್ನು ಆಯೋಜಿಸಿದರು. ಪಠ್ಯದಲ್ಲಿದ mathematics of counting and mathematics of measuring ಇಂತಹ ವಿಷಯಗಳು ಸಹ ಚರ್ಚೆಗೆ ಒಳಪಡುತ್ತಿದ್ದವು. ಗೋವಾದ ಶಿಕ್ಷಣ ಮಂತ್ರಿಗಳೆ ಕಾರ್ಯಗಾರ ಆಯೋಜೆಸಲು ತಿಳಿಸಿದರು. 2011ರಲ್ಲಿ ರಾಮಾನುಜಮ್ ಅವರ ಜನ್ಮದಿನವನ್ನು ‘ಗಣಿತ ದಿನ’ ಎಂದು ಆಚರಿಸಲು ಸರ್ಕಾರದಿಂದ ನಿರ್ಧರಿಸಲಾಯಿತು, ಆಗ, ಗಣಿತದ ಸಂವೇದನಾಶೀಲತೆ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಇದು ಸಹ ಗಣಿತದ ಬಗ್ಗೆ ಇರುವ ವಿಮುಖತೆಯನ್ನು ಹೋಗಲಾಡಿಸುವಒಂದು ಪ್ರಯತ್ನ.

ಸಂದರ್ಶಕ: ವಿದ್ಯಾರ್ಥಿ ಗಣಿತ ವಿಷಯ ಅರ್ಥೈಸಿಕೊಳ್ಳುವಲ್ಲಿ ಕಷ್ಟ ಪಡುತ್ತಾರೆ ಎಂಬುದು ಸಾಮಾನ್ಯ ಅಭಿಪ್ರಾಯ. ಗಣಿತ  ಕಷ್ಟ ಎಂಬ ಮನೊಭಾವವನ್ನು ಹೋಗಲಾಡಿಸುವುದು ಹೇಗೆ?

ಶಾಸ್ತ್ರಿ ಸರ್: ವಿದ್ಯಾರ್ಥಿಗಳಿಗೆ ಶಿಕ್ಷಕರೇ ಸಂಪನ್ಮೂಲ ವ್ಯಕ್ತಿಗಳು. ಭಾರತದಲ್ಲಿ ಗಣಿತ ಸಾಹಿತ್ಯ ಕಡಿಮೆ ಆದ್ದರಿಂz,À ಶಿಕ್ಷಕರಿಗೂ ಮಾಹಿತಿ ಕೊರತೆ, ಅಧ್ಯಯನದ ಕೊರತೆ, ಇತರೆ ಮೂಲಗಳಲ್ಲಿ ಲಭ್ಯವಿದ್ದರೂ ಅಧ್ಯಯನಶೀಲತೆಯ ಕೊರತೆಯಿಂದ ಸಾಧ್ಯವಾಗುತ್ತಿಲ್ಲ. ಕೇರಳದಲ್ಲಿ compendium ನೀಡುತ್ತಾರೆ. ಇದು, ಪಠ್ಯಪುಸ್ತಕಕ್ಕೆ ಪೂರಕವಾಗಿರುತ್ತದೆ. ಉದಾಹರಣಿಗೆ, ರೈಲ್ವೆ ಇಲಾಖೆಯಲ್ಲಿ ಗಣಿತದ ಉಪಯೋಗ. ಗಣಿತದ ಕಥೆಗಳು, ಗಣಿತಜ್ಞರ ಜೀವನಚರಿತ್ರೆ, ಗಣಿತದ ಅನ್ವಯ ಮುಂತಾದವುಗಳನ್ನು ತಿಳಿಸಿದರೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಬಹುದು. ಗಣೆತದಲ್ಲಿ ವ್ಯಂಗ್ಯಚಿತ್ರ, ಗಣಿತದಲ್ಲಿ ಹಾಸ್ಯ, ಗಣಿತದಲ್ಲಿ ಪದ್ಯಗಳ ರಚನೆ, ಮುಂತಾದವು ವಿದ್ಯಾರ್ಥಿಗಳಿಗೆ ಹೆಚ್ಚು ಆಕರ್ಷಕ.


 ಇದುವರೆಗೂ ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲದವರೆಗೆ ವಿವಿಧ ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದಂತೆ ಹಲವಾರು ಸ್ಫೂರ್ತಿಯುತ ವಿಷಯಗಳನ್ನು ತಿಳಿಸಿಕೊಟ್ಟಿರಿ. ನಮ್ಮ  ‘ಸವಿಜ್ಞಾನದ ಎಲ್ಲ ಓದುಗರ ಪರವಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್.


ಈ ಲೇಖನದ ಪಿ. ಡಿ. ಎಫ್. ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ - ಜ್ಞಾನದ ಗರಡಿಯಲ್ಲಿ ಒಂದು ದಿನ

1 comment:

  1. ಸಂದರ್ಶನ ಬಹಳ ಮಾಹಿತಿ ಪೂರ್ಣವಾಗಿದೆ

    ReplyDelete