Sunday, July 4, 2021

ವಿಜ್ಞಾನಿ, ಸುಧೀಂದ್ರ ಹಾಲ್ದೊಡ್ಡೇರಿ ಅವರಿಗೊಂದು ನುಡಿನಮನ

 ವಿಜ್ಞಾನಿ, ಸುಧೀಂದ್ರ ಹಾಲ್ದೊಡ್ಡೇರಿ ಅವರಿಗೊಂದು ನುಡಿನಮನ

ಸರಳತೆ, ಸಜ್ಜನಿಕೆಯ ಸಾಕಾರಮೂರ್ತಿ

ಸವಿಜ್ಞಾನ’ದ ಜುಲೈ ತಿಂಗಳ ಸಂಚಿಕೆಯ ಸಂಪಾದಕೀಯವನ್ನು ಅಂತಿಮಗೊಳಿಸುತ್ತ ಕುಳಿತಿದ್ದಾಗ ಬರಸಿಡಿಲಿನಂತೆ ಬಂದೆರಗಿತ್ತು. ಕನ್ನಡ ವಿಜ್ಞಾನ ಲೇಖಕ, ಜನಪ್ರಿಯ ಅಂಕಣಕಾರ, ಸುಧೀಂದ್ರ ಹಾಲ್ದೊಡ್ಡೇರಿ ಅವರ ನಿಧನದ ವಾರ್ತೆ. ಎಂಬತ್ತರ ದಶಕದಲ್ಲಿ ವಿಜಯ ಕಾಲೇಜಿನಲ್ಲಿ ಪದವಿಪೂರ್ವ ತರಗತಿಯಲ್ಲಿ ನನ್ನ ವಿದ್ಯಾರ್ಥಿಯಾಗಿದ್ದ ಸುಧೀಂದ್ರ, ನಂತರ ಯು.ವಿ.ಸಿ.ಇ. ಯಲ್ಲಿ ಇಂಜಿನೀರಿಂಗ್ ವಿದ್ಯಾಭ್ಯಾಸ ಮುಗಿಸಿ, ಮದರಾಸಿನ ಐ.ಐ.ಟಿ.ಯಲ್ಲಿ ಎಂ.ಟೆಕ್. ಪದವಿ ಗಳಸಿದರು. ಬೆಂಗಳೂರಿನ ತಾತಾ ವಿಜ್ಞಾನ ಮಂದಿರದಲ್ಲಿ ಏರೋ ಸ್ಪೇಸ್ ಇಂಜಿನೀರಿಂಗ್ ವಿಭಾಗದಲ್ಲಿ ವೈಜ್ಞಾನಿಕ ಸಲಹೆಗಾರರರಾಗಿ ವೃತ್ತಿ ಜೀವನ ಆರಂಭಿಸಿದ ಸುಧೀಂದ್ರ, ನಂತರ ರಕ್ಷಣಾ ಇಳಾಖೇಯ ಡಿ.ಆರ್.ಡಿ.ಒ. ನಲ್ಲಿ ವಿಜ್ಞಾನಿಯಾಗಿ ಆಯ್ಕೆಯಾದರು. ಹೆಚ್.ಎ.ಎಲ್.ನಲ್ಲಿ ವಿಮಾನಗಳ ತಯಾರಿಕೆಗೆ ಸಂಬಂಧಿಸಿದ ಗುಣಮಟ್ಟ ನಿಯಂತ್ರಣ ವಿಭಾಗದಲ್ಲಿಯೂ ಕೆಲಸ ಮಾಡಿದರು. ಈ ಸಂದರ್ಭದಲ್ಲಿ, ವಾಯುಪಡೆಯ ಚೀತಾ ಹೆಲಿಕಾಪ್ಟರ್‌ಗಳು ಹಿಮಾವೃತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವಾಗ ಉಂಟಾಗುವ ತಾಂತ್ರಿಕ ಸಮಸ್ಯೆಗಳ ನಿವಾರಣೆಯಲ್ಲಿ ಅವರ ಕೊಡುಗೆ ಸ್ಮರಣೀಯ. ಸ್ವಯಂ ನಿವೃತ್ತಿಯ ನಂತರ ಜೈನ್ ಡೀಮ್ಡ್ ಯೂನಿವರ್ಸಿಟಿ ಹಾಗೂ ಅಲಿಯೆನ್ಸ್ ಯೂನಿವರ್ಸಿಟಿಯಲ್ಲಿ ಏರೋಸ್ಪೇಸ್ ಇಂಜಿನೀರಿಂಗ್ ವಿಷಯದಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು.

ವಿಜ್ಞಾನಿಯಾಗಿ ಸೇವೆಯಲ್ಲಿದ್ದಾಗಲೇ ಕನ್ನಡ ವಿಜ್ಞಾನ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಬರಹಗಳ ಮೂಲಕ ಪ್ರವೇಶಿಸಿದ ಸುಧೀಂಧ್ರ, ಎರಡು ದಶಕಗಳಿಗೂ ಹೆಚ್ಚು ಕಾಲ ಕನ್ನಡದಲ್ಲಿ ಬರೆದು ವಿಜ್ಞಾನಾಸಕ್ತರ ಮೆಚ್ಚುಗೆ ಗಳಿಸಿದರು. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಅವರು ಬರೆಯುತ್ತಿದ್ದ ಸಾಪ್ತಾಹಿಕ ಅಂಕಣ ಲೇಖನಗಳನ್ನು ತಪ್ಪದೇ ಓದುತ್ತಿದ್ದ ಅಸಂಖ್ಯಾತ ಓದುಗರಲ್ಲಿ ನಾನೂ ಒಬ್ಬ. ಅಕ್ಟೋಬರ್ ೨೦೦೧ರಲ್ಲಿ ‘ದೃಷ್ಟಿಕೋನ’ ಎಂಬ ಶೀರ್ಷಿಕೆಯಲ್ಲಿ ಪ್ರಾರಂಭವಾದ ಈ ಅಂಕಣ ಲೇಖನ ಮುಂದೆ ‘ನೆಟ್ ನೋಟ’ ಎಂಬ ಶೀರ್ಷಿಕೆಯಲ್ಲಿ ಮುಂದುವರೆಯಿತು.ಇದರಲ್ಲಿ ಅವರ ಕೊನೆಯ ಲೇಖನ ಕಳೆದ ಜೂನ್ ತಿಂಗಳ ೨೨ರಂದು ಪ್ರಕಟವಾಗಿತ್ತು. ಸಂಯುಕ್ತ ಕರ್ನಾಟಕ ಪತ್ರಿಕೆಯಲಿ ‘ಸೈನ್ಸ್ ಕ್ಲಾಸ್’ ಎಂಬ ಅಂಕಣ ಹಾಗೂ ಕಸ್ತೂರಿ ಮಾಸ ಪತ್ರಿಕೆಯಲ್ಲಿ ‘ನವನವೋನ್ಮೇಷ’ ಎಂಬ ಅಂಕಣಗಳನ್ನೂ ಬರೆಯುತ್ತಿದ್ದರು. ಗ್ರಾಮೀಣ ಪ್ರದೇಶದಲ್ಲಿರುವ ಓದುಗರನ್ನೂ ತಲುಪಬೇಕೆಂಬ ಆಶಯದಿಂದ ಸರಳವಾಗಿ, ಸುಂದರವಾದ ಶೈಲಿಯಲ್ಲಿ ಬರೆಯುವುದರಲ್ಲಿ ಸುಧೀಂದ್ರ ಸಿದ್ಧಹಸ್ತರು.

ಸುಧೀಂದ್ರ ಅವರ ಲೇಖನಗಳಲ್ಲಿ ಕಾಣಬಹುದಾದ ವೈಶಿಷ್ಟ್ಯವೆಂದರೆ, ವಿಜ್ಞಾನ ಹಾಗೂ ಸಾಹಿತ್ಯಗಳ ಸಂಗಮ. ಲೇಖನಗಳಿಗೆ ಅವರು ಕೊಡುತ್ತಿದ್ದ ಶೀರ್ಷಿಕೆಗಳು ಸ್ವಾರಸ್ಯಕರವಾಗಿರುತ್ತಿದ್ದು, ಪ್ರಾಸಬದ್ಧವಾಗಿರುತ್ತಿದ್ದುವು. ಲೇಖನಗಳು ಸರಸ ಸಂವಹನವಾಗಿರುತ್ತಿದ್ದುವು. ನ್ಯಾನೋ ತಂತ್ರಜ್ಞಾನದ ಬಗ್ಗೆ ಅವರ ಲೇಖನವೊಂದರ ಶೀರ್ಷಿಕೆ ‘ನನ್ನೊಳು ನೀನೋ, ನಿನ್ನೊಳು ನ್ಯಾನೋ’. ಅವರ ಕೊನೆಯ ಬರಹವಿರಬಹುದಾದ ಲೇಖನದ ಶೀರ್ಷಿಕೆ ‘ಮೀರಬಹುದೆ ಸದ್ದನೂ, ವೇಗದ ಸರಹದ್ದನೂ’.ಇದು ಈ ಜುಲೈ ೧ರ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ತಮ್ಮ ಮೂರು ಸಾವಿರಕ್ಕೂ ಹೆಚ್ಚು ಇಂಥ ವೈವಿಧ್ಯಮಯ ಬರಹಗಳ ಮೂಲಕ ಕನ್ನಡ ವಿಜ್ಞಾನ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದರು.

ನನ್ನ ಮತ್ತು ಸುಧೀಂದ್ರ ಅವರ ಒಡನಾಟ, ಗುರು-ಶಿಷ್ಯ ಸಂಬಂಧಕ್ಕೂ ಮೀರಿದ್ದು. ವಿಜ್ಞಾನಿಯಾಗಿ ಸೇವೆಯಲ್ಲಿದ್ದಾಗಲೂ ಅವರನ್ನು ಹಲವು ಸಂದರ್ಭಗಳಲ್ಲಿ ಭೇಟಿಯಾಗಿದ್ದೆ, ನಂತರವೂ ನಿರಂತರ ಸಂಪರ್ಕದಲ್ಲಿದ್ದೆ. ನನ್ನದೊಂದು ಪುಸ್ತಕದ ಲೋಕಾರ್ಪಣೆಯ ಸಮಾರಂಭಕ್ಕೂ ಮುಖ್ಯ ಅತಿಥಿಯಾಗಿ ಬಂದಿದ್ದರು. ನಾವು ‘ಸವಿಜ್ಞಾನ’ ಇ-ಪತ್ರಿಕೆಯ ಮೊದಲ ಸಂಚಿಕೆಯನ್ನು ಕಳೆದ ಜನವರಿಯಲ್ಲಿ ಲೋಕಾರ್ಪಣೆ ಮಾಡಿಸಿದ್ದೂ ಅವರಿಂದಲೇ. ಅವರ ಮನೆಯಿಂದಲೇ. ನಮ್ಮ ಪ್ರಯತ್ನವನ್ನು ತುಂಬು ಮನಸ್ಸಿನಿಂದ ಶ್ಲಾಘಿಸಿ, ಮೊದಲ ಸಂಚಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ, ಕೆಲವು ಸಲಹೆಗಳನ್ನೂ ನೀಡಿದ್ದರು. ತಾವೂ ಲೇಖನ ಬರೆದು ಕಳಿಸುವುದಾಗಿ ಹೇಳಿದ್ದರು. ಕಳೆದ ತಿಂಗಳು ಈ ಬಗ್ಗೆ ಅವರನ್ನೊಮ್ಮೆ ನೆನಪಿಸಿದಾಗ ‘ಮೇಷ್ಟ್ರೇ, ಕೊಂಚ ಸಮಯ ಕೊಡಿ, ಬರೆದು ಕಳಿಸುತ್ತೇನೆ’ ಎಂದಿದ್ದರು. ಆದರೆ ಆ ದಿನ ಬರಲೇ ಇಲ್ಲ.

ಸುಧೀಂದ್ರ ಅವರು ಹಲವಾರು ಪ್ರಶಸ್ತಿ, ಪ್ರಶಂಸೆಗಳಿಗೆ ಭಾಜನರಾಗಿದ್ದರು. ಇತ್ತೀಚೆಗೆ, ಕನ್ನಡ ಪುಸ್ತಕ ಪ್ರಾಧಿಕಾರದಿಂದ ಅವರ ವಿಜ್ಞಾನ ಸಾಹಿತ್ಯ ಕೃಷಿಗೆ ‘ ಡಾ. ಅನುಪಮಾ ನಿರಂಜನ ಪ್ರಶಸ್ತಿ ‘ ಘೋಷಣೆಯಾಗಿತ್ತು. ಈ ಸುದ್ದಿ ಪ್ರಕಟವಾದ ದಿನವೇ ಅವರು ನಿಧನರಾಗಿದ್ದು ದುರ್ದೈವ. ಕನ್ನಡ ವಿಜ್ಞಾನ ಬರಹ ಕ್ಷೇತ್ರದಲ್ಲಿ ಜನರ ಮನಸ್ಸನ್ನು ಗೆದ್ದಿದ್ದ ಕೆಲವೇ ಬರಹಗಾರರಲ್ಲಿ ಒಬ್ಬರಾಗಿದ್ದ ಸುಧೀಂದ್ರ ಅವರ ನಿಧನ ದೊಡ್ಡ ಶೂನ್ಯವನ್ನೇ ಸೃಷ್ಟಿಸಿದೆ ಅಂದರೆ ತಪ್ಪಾಗಲಾರದು. ‘ಸವಿಜ್ಞಾನ’ ತಂಡದ ಪರವಾಗಿ ಹಾಗೂ ವೈಯುಕ್ತಿಕವಾಗಿ, ಸುಧೀಂದ್ರ ಹಾಲ್ದೊಡ್ಡೇರಿ ಅವರಿಗೆ ಇದು ನನ್ನ ನುಡಿನಮನ.





15 comments:

  1. ನನ್ನ ಆತ್ಮೀಯ ಗೆಳೆಯರಾಗಿದ್ದ ಹಾಲ್ದೊಡ್ಡೇರಿ ಸುಧೀಂದ್ರ ಅವರಿಗೆ ಈ ಮೂಲಕ ನನ್ನ ಅಂತಿಮ ನಮನ

    ReplyDelete
  2. ಅವರಿಂದ ಪ್ರೇರಣೆ ಪಡೆದು ಮುನ್ನಡೆಯೋಣ ವಿಜ್ಞಾನ ಕ್ಷೇತ್ರದಲ್ಲಿ. ಅದೇ ಅವರಿಗೆ ಶ್ರದ್ಧಾಂಜಲಿ. ಆತ್ಮೀಯ ನುಡಿನಮನಕ್ಕೆ ತಮಗೆ ಧನ್ಯವಾದಗಳು. ಉತ್ತಮ ಶಿಷ್ಯರನ್ನು ಪಡೆದ ನೀವೆ ಧನ್ಯರು🙏

    ReplyDelete
  3. ನುಡಿನಮನಕ್ಕೊಂದು ನಮನ

    ReplyDelete
  4. Nimma nudi namanadondige ee agalida chetanakke nanna namana.

    ReplyDelete
  5. ಕೆಲವೇ ದಿನಗಳ ಹಿಂದೆ ನಡೆದ ಕನಸೋ?ಕಾರ್ಯಕ್ರಮವೋ ಎನ್ನುವಂತೆ ಭಾಸವಾಗುತ್ತಿದೆ. ಸವಿಜ್ಞಾನದ ಕೆಲವು ಸದಸ್ಯರು ಅವರ ಮನೆಯಲ್ಲಿ ನಮ್ಮ ಕಲ್ಪನೆಯ ಕೂಸಾದ ಸವಿಜ್ಞಾನದ ಲೋಕಾರ್ಪಣೆಗಾಗಿ ಅವರ ಮನೆಯಲ್ಲಿ ಸೇರಿದ್ದೆವು.
    ಆತ್ಮೀಯ ಮಾತುಕತೆ ಹರಟೆ ಹಳೆಯ ನೆನಪುಗಳ ಮೆರವಣಿಗೆ ಯೇ ಆಯಿತು. ನಮ್ಮ ಗುರುಗಳು ಪ್ರಧಾನ ಸಂಪಾದಕರಾದ Dr. TAB ಸರ್ ರವರ ಅಚ್ಚುಮೆಚ್ಚಿನ ಶಿಷ್ಯರಾದ ಹಾಲ್ದೊಡ್ಡೇರಿಯವರು ಅಂದಿನ ದಿನಗಳನ್ನು ಮೆಲುಕು ಹಾಕಿದರು. ಬಹುಷಃ ಲೇಖನ ವ್ಯವಸಾಯ ರಕ್ತಗತವಾಗಿಯೇ ಬಂದಿತ್ತು. ಎಷ್ಟು ಸರಾಗವಾಗಿ ಲೀಲಾಜಾಲವಾಗಿ ಕನ್ನಡದ ತಾಂತ್ರಿಕ ಪದಗಳನ್ನು ಬಳಸುತ್ತಿದ್ದರು ಎಂದರೆ ನಾವೇ ಅವಾಕ್ಕಾಗಬೇಕಾಯಿತು. ಬಾಲ್ಯದಿಂದಲೇ ಕನ್ನಡದಲ್ಲಿ ಓದುವ ಬರೆಯುವ ಗೀಳೆ ಕನ್ನಡಕ್ಕೊಂಡು ಆಸ್ತಿಯಾಯಿತು.

    ನಮ್ಮ ಇಂಟರ್ವ್ಯೂ ಗೆ, ತಾತನ ಅಪ್ಪನ ಹಾದಿಯಲ್ಲಿ ನಡೆಯುತ್ತಿರುವ ಲೇಖಕರಾಗಿ ಹೆಸರು ಮಾಡಿದ ಅವರ ಮಗಳೇ ಕ್ಯಾಮರಾ(ವು)ಮನ್. ಮನೆಯ ಎಲ್ಲರನ್ನೂ ತುಂಬಾ ಆತ್ಮೀಯತೆಯಿಂದಲೇ ಪರಿಚಯಿಸಿದ್ದರು ಜ್ಞಾನ ಸುಧಾಂಶು ಸುಧೀಂದ್ರ . ಮೊಗ್ಗಿನ ರೂಪದ ಸವಿಜ್ಞಾನವನ್ನು ಅರಳಿಸಲು ತಾವೂ ಲೇಖನ ಬರೆಯುವುದಾಗಿ ಹೇಳಿದ್ದರು. ಆದ್ರೆ ಆ ಅದೃಷ್ಟ ನಮ್ಮದಾಗಲಿಲ್ಲ ಎನ್ನುವುದು ದುರ್ವಿಧಿಯೇ.
    ಮತ್ತೊಮ್ಮೆ ಎಲ್ಲವನ್ನು ನಿಮ್ಮ ಲೇಖನ ನೆನಪಿಸಿದೆ ಸರ್. ಪ್ರತಿಯೊಂದು ಪದದಲ್ಲೂ ಶಿಷ್ಯ ವಾತ್ಸಲ್ಯ ತೊಟ್ಟಿಕ್ಕುತ್ತಿದೆ. ಅಗಲಿದ ಶಿಷ್ಯನಿಗೆ ಅಭಿಮಾನದೊಂದಿಗೆ ನುಡಿ ನಮನ ಸಲ್ಲಿಸಿದ ನಮ್ಮ ಪ್ರೀತಿಯ ಗುರುಗಳಿಗೆ ಧನ್ಯವಾದಗಳು.

    ReplyDelete
  6. ಕನ್ನಡ ವಿಜ್ಞಾನ ಸಾಹಿತ್ಯ ಲೋಕ ಅಪ್ರತಿಮ ಲೇಖಕನನ್ನು ಕಳೆದುಕೊಂಡು ಬಡವಾಯಿತು. ಸುಧೀಂದ್ರ ಹಾಲ್ದೊಡ್ಡೇರಿ ಯವರ ಚೈತನ್ಯ, ಸ್ಫೂರ್ತಿಯ ಸೆಲೆಯ ಕಿರು ಪರಿಚಯ ಮಾಡಿಕೊಟ್ಟ ಅಡಿಗ ಸರ್ ಅವರಿಗೆ ಧನ್ಯವಾದಗಳು.

    ReplyDelete
  7. Sir,
    I was also commerce student of Vijaya College from 1971 to 1976. Read articles. The depth of knowledge in their respective fields is profound. It very sad to learn that great man is no more. 🙏🙏🙏

    ReplyDelete

  8. Very touching write up for great scientist.

    ReplyDelete
  9. ಸುಧಿಂದ್ರ ಅವರೊಂದಿಗೆ ತಮ್ಮ ಒಡನಾಟ.... ಅವರು ತಮ್ಮ ವಿದ್ಯಾರ್ಥಿ....ಎಂಬ ವಿಷಯ ನನಗೆ ಗೊತ್ತಿರಲಿಲ್ಲ..... ಇಂಥಹ ವಿದ್ಯಾರ್ಥಿಯನ್ನು ಸಮಾಜಕ್ಕೆ ನೀಡಿದ ತಮಗೂ ಧನ್ಯವಾದಗಳು ಸರ್...

    ReplyDelete
  10. ಸುಧೀಂದ್ರ ಅವರ ಬರವಣಿಗೆಯ ಶೈಲಿ ಎಂಥವರಿಗೂ ವಿಜ್ಞಾನದ ಬಗ್ಗೆ ಆಸಕ್ತಿ ಮೂಡುವಂತೆ ..ಓದಿಸಿಕೊಂಡು ಹೋಗುತ್ತಿತ್ತು......
    ಅವರನ್ನು ಕಳೆದುಕೊಂಡ ನಾವು ನಿಜಕ್ಕೂ ನ್ರತದ್ರಷ್ಟರು...

    ReplyDelete
  11. ಸರ್, ತಾವು ಪ್ರೊ. ಸುಧೀಂದ್ರ ಅವರಿಗೆ ಬರೆದಿರುವ ನುಡಿ ನಮನ ಬಹಳ ಚೆನ್ನಾಗಿ ಮೂಡಿಬಂದಿವೆ. ಅವರು ಅಗಾಧ ಪಾಂಡಿತ್ಯದ ಸರಳ, ಸಜ್ಜನಿಕೆಯ ಸಾಕಾರ ಮೂರ್ತಿ ಆಗಿದ್ದರು. ಸದಾ ನಗು ಮುಖದೊಂದಿಗೆ ಎಲ್ಲರೊಂದಿಗೂ ಬೆರೆಯುತ್ತಿದ್ದರು. ನನಗೆ ಒಬ್ಬ ಒಳ್ಳೆಯ ಮಾರ್ಗದರ್ಶಕರು ಮತ್ತು ಸ್ನೇಹಿತರಾಗಿದ್ದರು.ಅವರ ಅಗಲುವಿಕೆ ಬಹಳ ಬೇಸರ ತಂದಿದೆ. ಅವರ ಆತ್ಮಕ್ಕೆ ಶಾಂತಿಸಿಗಲಿ ಹಾಗೂ ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲೆಂದು ಪ್ರಾರ್ಥಿಸುತ್ತೇನೆ

    ReplyDelete
  12. Sir's incredible work for science will be with us. 🙏

    ReplyDelete
  13. A teacher is so proud of his student and this is really heart touching.

    ReplyDelete
  14. ಪ್ರೊ.ಸುಧೀಂದ್ರರವರ ಅಗಲಿಕೆ ವಿಜ್ಞಾನ ಹಾಗು ಸಾಹಿತ್ಯ ಲೋಕಕ್ಕೆ ಬಹುದೊಡ್ಡ ನಷ್ಟ.ಅಗಲಿದ ಆತ್ಮಕ್ಕೆ ತಾವು ಸಲ್ಲಿಸಿರುವ ನುಡಿನಮನ ಬಹಳ ಚೆನ್ನಾಗಿ ಮೂಡಿ ಬಂದಿದೆ. ತಮ್ಮ ಬರಹವನ್ನು ಮೆಚ್ಚಿ, ಶ್ಲಾಘಿಸಿದರು ಎಂದು ತಾವು ಬರೆದಿರುವ ಸಾಲುಗಳು, ನಿಮಗೆ ನಿಮ್ಮ ವಿದ್ಯಾರ್ಥಿಯ ಬಗೆಗಿರುವ ಹೆಮ್ಮೆ, ಪ್ರೀತಿಯ ಅಭಿಮಾನ, ನಮ್ಮ ಸಂಸ್ಕೃತಿಯ ಗುರು ಶಿಶ್ಯರ ಅವಿನಾಭಾವ ಸಂಬಂಧವನ್ನು ನಾವು ಮೆಲಕು ಹಾಕುವಂತೆ ಮಾಡಿದೆ.

    ReplyDelete