Sunday, July 4, 2021

ಸಂಪಾದಕರ ಡೈರಿಯಿಂದ

 ಇದು ‘ಸವಿಜ್ಞಾನ’ದ ಏಳನೆಯ ಸಂಚಿಕೆ. ಕಳೆದ ವರ್ಷಾಂತ್ಯದ ಎರಡು, ಮೂರು ತಿಂಗಳ ಕಾಲ ವಿಸ್ತೃತ ಚರ್ಚೆ ನಡೆಸಿ, ವಿಜ್ಞಾನ ಶಿಕ್ಷಕರಿಗೆ ಹಾಗೂ ವಿಜ್ಞಾನಾಸಕ್ತರಿಗೆ ಮೆಚ್ಚುಗೆಯಾಗುವಂಥ, ಉಪಯುಕ್ತವಾಗುವಂಥ ಇ-ಪತ್ರಿಕೆಯೊಂದನ್ನು ಬ್ಲಾಗ್‌ನ ರೂಪದಲ್ಲಿ ಪ್ರಕಟಿಸಬೇಕೆಂಬ ನಮ್ಮ ತಂಡದ ನಿರ್ಧಾರ ಮಡುಗಟ್ಟಿ, ಕೊನೆಗೆ ಕಳೆದ ಜನವರಿಯಲ್ಲಿ ಕಾರ್ಯರೂಪಕ್ಕೆ ಬಂದಿತು. ಇದೀಗ ಆರು ಸಂಚಿಕೆಗಳು ಪ್ರಕಟವಾಗಿವೆ. ಶಿಕ್ಷಕರು ಮತ್ತು ವಿಜ್ಞಾನ ಓದುಗರು ನಮ್ಮ ಈ ಪ್ರಯತ್ನಕ್ಕೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಜೊತೆಗೆ, ವಿಜ್ಞಾನ ಪರಿಚಾರಿಕೆಯ ನಮ್ಮ ಈ ಪ್ರಯತ್ನದಲ್ಲಿ ತಮ್ಮ ಲೇಖನಗಳ ಮೂಲಕ ಕೈ ಜೋಡಿಸುತ್ತಿದ್ದಾರೆ. ಸಂತೋಷದ ವಿಷಯವೆಂದರೆ, ವಿದೇಶಗಳಲ್ಲಿರುವ ವಿಜ್ಞಾನಾಸಕ್ತ ಕನ್ನಡಿಗರಿಂದಲೂ ಈ ನಮ್ಮ ಪತ್ರಿಕೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಜುಲೈ ತಿಂಗಳ ಈ ಸಂಚಿಕೆಯಲ್ಲಿಯೂ ವೈವಿಧ್ಯಮಯ ಮಾಹಿತಿಗಳನ್ನು ನೀಡುವ ಪ್ರಯತ್ನ ಮಾಡಲಾಗಿದೆ. ಬಹುಕಾಲ ಚಲಾವಣೆಯಲ್ಲಿದ್ದ ಆನುವಂಶೀಯತೆಯ ಅಸಂಬದ್ಧ ಪರಿಕಲ್ಪನೆಗಳನ್ನು ದೂರಮಾಡಿ, ತಳಿಶಾಸ್ತ್ರಕ್ಕೆ ವೈಜ್ಞಾನಿಕ ಬುನಾದಿಯನ್ನು ಹಾಕಿಕೊಟ್ಟ ಗ್ರೆಗೊರ್ ಜೊಹಾನ್ ಮೆಂಡೆಲ್‌ನ 199ನೇ ಜನ್ಮ ದಿನ, ಜುಲೈ ತಿಂಗಳ 22ರಂದು. ಈ ಹಿನ್ನೆಲೆಯಲ್ಲಿ, ಮೆಂಡೆಲ್ ಬಗ್ಗೆ ಒಂದು ವಿಶೇಷ ಲೇಖನವಿದೆ. ಕಳೆದ ಸಂಚಿಕೆಗಳಲ್ಲಿ ನಿಮಗೆ ನಾವು ಪರಿಚಯಿಸಿದ ಗಣಿತಜ್ಞ ವಿ.ಎಸ್.ಶಾಸ್ತ್ರೀ ಅವರೊಡನೆ  ನಮ್ಮ ತಂಡ ನಡೆಸಿದ ಸಂವಾದದ ಬಗ್ಗೆ ಒಂದು ಲೇಖನವಿದೆ. ಒಂದು ಉತ್ತಮ ಹವ್ಯಾಸವಾದ ಪಕ್ಷಿ ವೀಕ್ಷಣೆಯ ಬಗ್ಗೆ ಉಪಯುಕ್ತ ಮಾಹಿತಿ ಕೊಡುವ ಲೇಖನವಿದೆ. ಇರುವೆ ಸಿಂಹ ಎಂದು ಕರೆಯಲಾಗುವ ಕುತೂಹಲಕಾರಿ ಕೀಟವೊಂದರ ಬಗ್ಗೆ ಒಂದು ಲೇಖನವಿದೆ. ಎಂದಿನಂತೆ, ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳೂ ನಿಮಗೆ ರಂಜನೆ ನೀಡಲಿವೆ.

ನಮ್ಮ ಮೊದಲ ಸಂಚಿಕೆಯನ್ನು ಲೋಕಾರ್ಪಣೆ ಮಾಡಿ, ನಮ್ಮನ್ನು ಹರಸಿದ್ದ ಜನಪ್ರಿಯ ವಿಜ್ಞಾನಿ ಹಾಗೂ ಕನ್ನಡ ವಿಜ್ಞಾನ ಲೇಖಕ ಸುಧೀಂದ್ರ ಹಾಲ್ದೊಡ್ಡೇರಿ ಅವರು ಹಠಾತ್ತನೆ ನಮ್ಮನ್ನಗಲಿದ್ದಾರೆ. ಈ ಸಂಚಿಕೆಯಲ್ಲಿ ಅವರಿಗೊಂದು ನುಡಿನಮನವನ್ನು ಸಲ್ಲಿಸಿ, ಆ ಮೂಲಕ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದೇವೆ. ಅವರೊಡನೆ ನಮ್ಮ ತಂಡ ನಡೆಸಿದ್ದ ಸಂವಾದವನ್ನು ಅವರ ಸ್ಮರಣೆಗಾಗಿ ಮತ್ತೊಮ್ಮೆ ಪ್ರಕಟಿಸುತ್ತಿದ್ದೇವೆ.

ಡಾ. ಟಿ.ಎ.ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು

No comments:

Post a Comment