Wednesday, August 4, 2021

ಅಂತರಿಕ್ಷದ ಅಲೆಮಾರಿಗಳು

ಅಂತರಿಕ್ಷದ ಅಲೆಮಾರಿಗಳು

ಲೇಖಕರು: ಆರ್. ಬಿ. ಗುರುಬಸವರಾಜ
ಆಂಗ್ಲ ಭಾಷಾ ಶಿಕ್ಷಕರು 
ಸರ್ಕಾರಿ ಪ್ರೌಢಶಾಲೆ ಬಸರಕೋಡು. 
ಹಗರಿಬೊಮ್ಮನಹಳ್ಳಿ(ತಾ) ವಿಜಯನಗರ(ಜಿ)


ಮೋಡಗಳಿಲ್ಲದ ರಾತ್ರಿ ಆಗಸ ನೋಡುವುದೇ ಒಂದು ಸೊಗಸು. ನಮ್ಮ ಸೌರವ್ಯೂಹದಲ್ಲಿ ಅನೇಕ ಕುತೂಹಲಕಾರಿ ವಿದ್ಯಮಾನಗಳು ನಡೆಯುತ್ತಲೇ ಇರುತ್ತವೆ. ಹಗಲಿನಲ್ಲಿ ಸೂರ್ಯನ ಪ್ರಖರವಾದ ಬೆಳಕು ಇರುವುದರಿಂದ ಇಂತಹ ವಿದ್ಯಮಾನಗಳನ್ನು ನೋಡಲಾಗುವುದಿಲ್ಲ. ರಾತ್ರಿಯಾದರೆ ಇಂತಹ ಎಲ್ಲಾ ವಿದ್ಯಮಾನಗಳನ್ನು ಬರಿಗಣ್ಣಿನಿಂದ ನೋಡಬಹುದು. ಅವುಗಳ ಹಿಂದಿರುವ ವಿಜ್ಞಾನವನ್ನು ತಿಳಿಯಬಹುದು ಅಲ್ಲವೇ? ಈಗ ನಾವು ಅಂತರಿಕ್ಷಕದ ಕಲ್ಲುಗಳ ಬಗ್ಗೆ ಒಂದಿಷ್ಟು ಚರ್ಚಿಸೋಣ.

ಏನು! ಅಂತರಿಕ್ಷದಲ್ಲಿ ಕಲ್ಲುಗಳೆ? ಅವೆಲ್ಲಿವೆ? ಹೇಗಿವೆ? ಎಂಬ ಪ್ರಶ್ನೆಗಳು ಕಾಡುವುದು ಸಹಜ. ನಮ್ಮ ಅಂತರಿಕ್ಷದಲ್ಲಿ ತೇಲಾಡುವ ಕಲ್ಲುಗಳಿವೆ. ಒಂದೆರಡು ಕಲ್ಲುಗಳು ಮಾತ್ರ ಇಲ್ಲ. ಸಾವಿರಾರು ಸಂಖ್ಯೆಯ ಕಲ್ಲುಗಳಿವೆ. ಭೂಮಿ ಮತ್ತು ಇನ್ನಿತರೇ ಗ್ರಹಗಳ ಸುತ್ತ ತಿರುಗುತ್ತಲೇ ಇವೆ. ಅವುಗಳಲ್ಲಿ ಪ್ರತಿದಿನ ಸುಮಾರು ೧೦೦ ಟನ್‌ಗಳಷ್ಟು ಕಲ್ಲುಗಳು ಭೂಮಿಯ ಮೇಲೆ ಬೀಳುತ್ತವೆ. ಹೀಗೆ ಬಿದ್ದ ಬಾಹ್ಯಾಕಾಶದ ಕಲ್ಲುಗಳೆಲ್ಲಿ? ಎಂಬ ಪ್ರಶ್ನೆ ಮೂಡುವುದು ಸಹಜ. ಬಹುತೇಕ ಕ್ಷುದ್ರಗಳು ಭೂಮಿಯನ್ನು ತಲುಪುವ ಮೊದಲೇ ಆಕಾಶದಲ್ಲಿಯೇ ಉರಿದು ಬೂದಿಯಾಗುತ್ತವೆ. ರಾತ್ರಿಯ ಆಕಾಶದಲ್ಲಿ ಹಠಾತ್ತನೇ ಪ್ರಜ್ವಲಿಸುವ ವಸ್ತುವೊಂದು ಭೂಮಿಯ ಕಡೆಗೆ ವೇಗವಾಗಿ ಬರುವುದನ್ನು ನೀವು ನೋಡಿರಬಹುದು. ಇದೇ ಕ್ಷುದ್ರಗ್ರಹ.

ಚಿಕ್ಕ ಗ್ರಹಗಳಂತಿರುವ ಆಕಾಶಕಾಯಗಳೇ ಕ್ಷುದ್ರಗಹಗಳು. ಇವುಗಳನ್ನು ಬಾಹ್ಯಾಕಾಶದ ಕಲ್ಲುಗಳು ಎನ್ನುತ್ತಾರೆ. ಕ್ಷುದ್ರಗ್ರಹಗಳು ಸೌರವ್ಯೂಹ ನಿರ್ಮಾಣದ ನಂತರದ ಶೇಷ ವಸ್ತುಗಳನ್ನು ಪ್ರತಿನಿಧಿಸುತ್ತವೆ. ಅವು ಮಂಗಳ ಮತ್ತು ಗುರು ಗ್ರಹಗಳ ನಡುವೆ   ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರೀಕೃತಗೊಂಡಿವೆ. ಗಾತ್ರದಲ್ಲಿ ೧೦ ಮೀಟರ್‌ನಿಂದ ೧೦೦೦ ಕಿ.ಮೀ ಅಗಲ ಹೊಂದಿವೆ. ೧೮೦೧ರಲ್ಲಿ ಮೊಟ್ಟಮೊದಲಿಗೆ ಇಟಲಿಯ ಪಿಯಜ್ಜಿ ಎಂಬ ಖಗೋಳಶಾಸ್ತ್ರಜ್ಞನು ಸಿರಿಸ್ ಎಂಬ ಕ್ಷುದ್ರಗ್ರಹವನ್ನು ಕಂಡುಹಿಡಿದನು. ಇದು ಎಲ್ಲ ಕ್ಷುದ್ರ ಗ್ರಹಗಳಲ್ಲೇ ಅತ್ಯಂತ ದೊಡ್ಡ ಕ್ಷುದ್ರಗ್ರಹ. ವಿಜ್ಞಾನಿಗಳು ಇಂದಿನ ವರೆಗೆ ಸುಮಾರು ೭,೦೦೦ ಕ್ಷುದ್ರ ಗ್ರಹಗಳನ್ನು ಗುರುತಿಸಿರುವರು. ಇತ್ತೀಚಿನ ಅಂದಾಜಿನ ಪ್ರಕಾರ ಸೂರ್ಯನ ಸುತ್ತ ತಿರುಗುವ ಕ್ಷುದ್ರ ಗ್ರಹಗಳ ಸಂಖ್ಯೆ ಸುಮಾರು ೪೦,೦೦೦ಕ್ಕಿಂತ ಹೆಚ್ಚಾಗಿದೆ.

ಉಂಡಾಡಿ ಗುಂಡನಂತೆ ಸ್ವತಂತ್ರವಾಗಿ ತಿರುಗಾಟಿಕೊಂಡಿರುವ ಕ್ಷುದ್ರಗ್ರಹಗಳಿಗೆ ಗ್ರಹಗಳಂತೆ ನಿರ್ದಿಷ್ಟ ಕಕ್ಷೆಯಿಲ್ಲ. ಎಲ್ಲೆಂದರಲ್ಲಿ ಅಂಡಲೆಯುವ ಅಲೆಮಾರಿ ಕ್ಷುದ್ರಗ್ರಹಗಳು ಯಾವ ಆಕಾಶಕಾಯವನ್ನಾದರೂ ಡಿಕ್ಕಿ ಹೊಡೆಯಬಹುದು. ಹಾಗೆಯೇ ಭೂಮಿಗೂ ಡಿಕ್ಕಿ ಹೊಡೆಯುವ ಸಂಭವ ಇಲ್ಲ ಎನ್ನುವಂತಿಲ್ಲ. ಹೀಗೆ ಅಂಡಲೆಯುವ ಕ್ಷುದ್ರಗ್ರಹ ಒಂದುವೇಳೆ ಭೂಮಿಗೆ ಡಿಕ್ಕಿ ಹೊಡೆದರೆ ಏನಾಗುತ್ತದೆ? ಎಂಬುದು ಇಂದಿನ ಚರ್ಚಾ ವಿಷಯ.

ಸೌರವ್ಯೂಹ ನಿರ್ಮಾಣಗೊಂಡಾಗಿನಿಂದ ಇಂದಿನವರೆಗೂ ಕ್ಷುದ್ರಗ್ರಹಗಳು ಭೂಮಿಗೆ ಡಿಕ್ಕಿ ಹೊಡೆಯುತ್ತಲೇ ಇವೆ. ಲಕ್ಷಾಂತರ ವರ್ಷಗಳ ಹಿಂದೆ ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸಿದ್ದರಿಂದ ಡೈನೋಸಾರ್‌ಗಳ ನಾಶವಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ. ಜೂನ್ ೩೦೧೯೦೮ರಲ್ಲಿ  ಸೈಬೀರಿಯಾದ  ತುಂಗುಸ್ಕಾ  ಪ್ರದೇಶದಲ್ಲಿ  ೪೦  ಮೀಟರ್  ವಿಸ್ತಾgದ ಕ್ಷುದ್ರಗ್ರಹವೊಂದು ಅಪ್ಪಳಿಸಿತು. ಇದರ ಪ್ರಭಾವ ಎಷ್ಟಿತ್ತೆಂದರೆ ಲಂಡನ್ ನಗರದಷ್ಟು ಕಾಡು ಪ್ರದೇಶವು ನಾಶವಾಯಿತು.

೨೦ ಮತ್ತು ೨೧ ನೇ ಶತಮಾನದಲ್ಲಿ ಒಟ್ಟು ೧೮ ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸಿವೆ. ಅವುಗಳಲ್ಲಿ ಬಹುತೇಕ ಕ್ಷುದ್ರಗ್ರಹಗಳು ತೀವ್ರ ಪರಿಣಾಮಕಾರಿಯಾಗಿಲ್ಲ. ೨೦೦೪ರಲ್ಲಿ ಅಪೋಫಿಸ್ ಎಂಬ ಕ್ಷುದ್ರಗ್ರಹವನ್ನು ಬಾಹ್ಯಾಕಾಶ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಇದು ೨೦೬೮ರಲ್ಲಿ ಭೂಮಿಯತ್ತ ಬರಲಿದೆಯಂತೆ. ಇದು ಲಕ್ಷದಲ್ಲಿ ಒಂದರಷ್ಟು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ೨೦೦೧ ಎಫ್.ಒ.೩೨ ಹೆಸರಿನ ಕ್ಷುದ್ರಗ್ರಹವೊಂದು ೨೦೨೧ರ ಮಾರ್ಚ್ನಲ್ಲಿ ಭೂಮಿಯ ಸಮೀಪ ಹಾದು ಹೋಯಿತು. ಆದರೆ ಅದು ಯಾವುದೇ ಹಾನಿಯನ್ನುಂಟು ಮಾಡಲಿಲ್ಲ.  

ಕ್ಷುದ್ರಗ್ರಹದ ದ್ರವ್ಯರಾಶಿಯನ್ನು ಆಧರಿಸಿ ವೇಗದಲ್ಲಿ ಬದಲಾವಣೆಗಳಿರುತ್ತವೆ. ಕ್ಷುದ್ರಗ್ರಹಗಳು ಭೂ ವಾತಾವರಣದಲ್ಲಿ ಗಂಟೆಗೆ ಸುಮಾರು ೩೦,೦೦೦ ಕಿ.ಮೀ ವೇಗದಲ್ಲಿ ಭೂಮಿಯನ್ನು ಅಪ್ಪಳಿಸುತ್ತವೆ. ಇದು ಒಂದು ಮಿಲಿಯನ್ ಮೆಗಾಟನ್ ಬಾಂಬ್‌ನ ಶಕ್ತಿಗೆ ಸಮನಾಗಿರುತ್ತದೆ. ಒಂದು ಮಿಲಿಯನ್ ಮೆಗಾಟನ್ ಊಹಿಸಿಕೊಳ್ಳುವುದು ಕಷ್ಟ. ಒಂದು ಸಣ್ಣ ಉದಾಹರಣೆ ಮೂಲಕ ಅದನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡೋಣ. ಒಂದು ಸಾಮಾನ್ಯ ಮನೆಯ(೨ಬಿ.ಎಚ್.ಕೆ) ಗಾತ್ರದ ಕ್ಷುದ್ರಗ್ರಹವು ಗಂಟೆಗೆ ೩೦,೦೦೦ಕಿ.ಮೀ ವೇಗದಲ್ಲಿ ಭೂಮಿಗೆ ಅಪ್ಪಳಿದರೆ ೧೯೪೫ರಲ್ಲಿ ಹಿರೋಶಿಮಾದ ಮೇಲೆ ಬಿದ್ದ ಲಿಟ್ಲ್ಬಾಯ್ ಬಾಂಬ್‌ನ ಶಕ್ತಿಗೆ ಸಮನಾಗಿರುತ್ತದೆ. ಅಂದಾಜು ೨೦ ಕಿಲೋಟನ್‌ಗಳು. ಕ್ಷುದ್ರಗ್ರಹವು ಇಷ್ಟೊಂದು ವೇಗದಲ್ಲಿ ಭೂಮಿಗೆ ಅಪ್ಪಳಿದರೆ ಭೂಮಿಯ ಮೇಲೆ ಏನಾದರೂ ಉಳಿದೀತೇ?. ಆಧುನಿಕ ಅಬೇಧ್ಯ ಕೋಟೆಗಳೆನಿಸಿದ ನೂರಾರು ಗಗನಚುಂಬಿ ಕಟ್ಟಡಗಳನ್ನು ನೆಲಸಮ ಮಾಡುವಷ್ಟು ಶಕ್ತಿ ಒಂದು ಕ್ಷುದ್ರಗ್ರಹಕ್ಕಿರುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಕ್ಷುದ್ರಗ್ರಹಗಳ ಚಲನೆಯ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಕ್ಷುದ್ರಗ್ರಹಗಳ ಅಧ್ಯಯನ ಒಂದು ಹೊಸ ಶಾಖೆಯಾಗಿ ಬೆಳೆದಿದೆ. ಹವ್ಯಾಸಿಗಳೇ ಹೆಚ್ಚಾಗಿ ಪಾಲ್ಗೊಳ್ಳುತ್ತಿರುವ ಈ ಚಟುವಟಿಕೆಯಲ್ಲಿ ತಾಳ್ಮೆಯಿಂದ ಸೂಕ್ಷ್ಮ ಕಾಯಗಳನ್ನು ಅಭ್ಯಸಿಸಲಾಗುತ್ತದೆ. ಇದಕ್ಕೆ 'ನೀಟ್' (NEAT-ನಿಯರ್ ಅರ್ತ್ ಆಸ್ಟರಾಯ್ಡ್ ಟ್ರಾಕಿಂಗ್) ಎಂಬ ಹೆಸರಿದೆ.  ಇಂದಿನ ಸುಧಾರಿತ ತಂತ್ರಜ್ಞಾನದಿಂದ ಕ್ಷುದ್ರಗ್ರಹಗಳು ಭೂಮಿಯನ್ನಪ್ಪಳಿಸದಂತೆ ಮಾಡುವುದೇ ಈ ಕಾರ್ಯಕ್ರಮದ ಉದ್ದೇಶ.

5 comments:

  1. ಧನ್ಯವಾದಗಳು ಸರ್ ನಿಮ್ಮ ಉಪಯುಕ್ತ ಮಾಹಿತಿಗೆ.

    ReplyDelete
    Replies
    1. I do not know you. But I thank you for the good reaction.

      Delete