Wednesday, August 4, 2021

ಏನೋ ಮಾಡಲು ಹೋಗಿ .....................

ಏನೋ ಮಾಡಲು ಹೋಗಿ .....................

ಡಾ. ಎಂ.ಜೆ. ಸುಂದರ ರಾಮ್

ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು ಹಾಗು ವಿಜ್ಞಾನ ಸಂವಹನಕಾರರು


ಸನ್ಯಾಸಿಯೊಬ್ಬ ಸಂಸಾರಿಯಾದ ಕತೆಯನ್ನು ನಾವೆಲ್ಲಾ ಓದಿದ್ದೇವೆ, ಅಲ್ಲವೇ ? ಕಶೇರುಕಗಳ ವಿಕಾಸದ ಇತಿಹಾಸದಲ್ಲಿ ಅಂತಹುದೇ ಒಂದು ಕುತೂಹಲಕಾರಿ ಬೆಳವಣಿಗೆ ನಡೆದಿದೆ ಎಂದರೆ ಅಚ್ಚರಿಯಾಗುತ್ತದೆ. ಕಶೇರುಕಗಳ ವಿಕಾಸದ ಏಣಿಯಲ್ಲಿ ಮೀನುಗಳು ಅತ್ಯಂತ ಕೆಳಗಿನ ಹಂತದಲ್ಲಿವೆ. ಮುಂದೆ, ಉಭಯಜೀವಿಗಳು, ಸರೀಸೃಪಗಳು. ನಂತರ ಹಕ್ಕಿಗಳು ಹಾಗೂ ಸ್ತನಿಗಳು. ಮಿಲಿಯನ್ ಗಟ್ಟಲೆ  ವರ್ಷಗಳನ್ನು ತೆಗೆದುಕೊಂಡ ಈ ವಿಕಾಸ ಪ್ರಕ್ರಿಯೆಯ ಹಿಂದಿನ ಕತೆ ರೋಚಕ ಹಾಗೂ ಕುತೂಹಲಕಾರಿ. 

ಜಲಚರಗಳಾದ ಮೀನುಗಳು ಅದಕ್ಕೆ ಪೂರಕವಾದ ಅನೇಕ ಹೊಂದಾಣಿಕೆಗಳನ್ನು ಪ್ರದರ್ಶಿಸುತ್ತವೆ ಎಂಬುದು ನಮಗೆಲ್ಲಾ ತಿಳಿದೇ ಇದೆ. ವಿಶೇಷವಾಗಿ, ಸಂತಾನೋತ್ಪತ್ತಿ ಸಮಯದಲ್ಲಿ ಹೆಣ್ಣು ಮೀನುಗಳು ಗೊಂಚಲಾಗಿ ಮೊಟ್ಟೆಗಳನ್ನಿಡುತ್ತವೆ. ನೀರಿನಲ್ಲಿಯೇ ಈ ಮೊಟ್ಟೆಗಳ ನಿಶೇಚನ ಕ್ರಿಯೆ (ಬಾಹ್ಯ ನಿಶೇಚನ) ಗಂಡು ಮೀನಿನಿಂದ ನಡೆಯುತ್ತದೆ. ಹೀಗೆ, ಎಲ್ಲ ರೀತಿಯಿಂದಲೂ ಸಂತೃಪ್ತವಾಗಿ ಸಂತೋಷದಿಂದ ಜೀವನ ನಡೆಸುತ್ತಿದ್ದ ಸಿಹಿ ನೀರಿನ ಮೀನುಗಳಿಗೆ, ಶನಿಕಾಟ ಪ್ರಾರಂಭವಾಯಿತು. ಅವುಗಳ ಪರಿಸರದಲ್ಲಿ ಬದಲಾವಣೆಗಳು ಆಗತೊಡಗಿದುವು. ಮಳೆಗಾಲದ ನಂತರ ಬೇಸಿಗೆ ಬಂದಿತು. ಬಿಸಿಲಿನ ಝಳಕ್ಕೆ ನದಿಗಳು ಬತ್ತಲಾರಂಭಿಸಿದುವು. ನದಿಗಳ ನೀರು ಅಲ್ಲಲ್ಲೇ ಸಣ್ಣ ಪುಟ್ಟ ಕುಂಟೆಗಳಾಗಿ ತಂಗತೊಡಗಿತು. ನಿಂತ ನೀರಿನಲ್ಲಿ ಆಕ್ಸಿಜನ್‌ನ ಪ್ರಮಾಣ ಕ್ಷೀಣಿಸಿ, ಮೀನುಗಳಿಗೆ ಉಸಿರಾಡುವುದೇ ಕಷ್ಟವಾಯಿತು. ನೀರು ಕೊಳೆತು ನಾರತೊಡಗಿತು. ಸನ್ಯಾಸಿಯ ಬಟ್ಟೆಯನ್ನು ಇಲಿ ಕಚ್ಚಿತ್ತು !

ಕೆಲವು ಮೀನುಗಳು ಪರಿಸರದ ಬದಲಾವಣೆಗಳನ್ನು ಎದುರಿಸಲಾಗದೆ ಅಸು ನೀಗಿದುವು. ಮತ್ತೆ ಕೆಲವು ಪ್ರಭೇದದ ಮೀನುಗಳು ಉಸಿರ್ಚೀಲ(air sacs) ಅಥವಾ ಶ್ವಾಸಕೋಶಗಳನ್ನು(lungs) ಬೆಳೆಸಿಕೊಂಡು, ವಾತಾವರಣದ ಗಾಳಿಯನ್ನು ಹೀರಿಕೊಂಡು ಬದುಕತೊಡಗಿದುವು. ಕ್ರಮೇಣ, ತಮ್ಮ ಈಜುರೆಕ್ಕೆ(fins)ಗಳಿಂದ ಜಲತಳದ ನೆಲವನ್ನು ಮೀಟಿ, ಚಲಿಸಲು ಪ್ರಯಾಸಪಟ್ಟುವು.

ಈ ಮೀನುಗಳಿಗೆ ಚಲಿಸುವ ಅವಶ್ಯಕತೆಯಾದರೂ ಏನಿತ್ತು? ಗಾಳಿಯನ್ನು ಉಸಿರಾಡಲು ಅವು ವಿಹಾರಕ್ಕೆ ಚಲಿಸಬೇಕಿತ್ತೆ? ಇಲ್ಲ. ನೀರಿನಲ್ಲಿ ಇದ್ದುಕೊಂಡೇ ಗಾಳಿಯನ್ನು ಉಸಿರಾಡಬಹುದಿತ್ತು. ಆಹಾರದ ಕೊರತೆಯಿತ್ತೆ? ಅದೂ ಇಲ್ಲ. ಅವು ಇದ್ದಲ್ಲೇ ಸಣ್ಣ, ಪುಟ್ಟ ಜಲಚರಗಳನ್ನು ತಿಂದು ಜೀವಿಸುತ್ತಿದ್ದುವು. ಶತ್ರುಗಳಿಗೆ ಹೆದರಿ ಪಲಾಯನ ಮಾಡಲು ಈಜುರೆಕ್ಕೆಗಳನ್ನು ಬಳಸಿರಬಹುದೇ? ಊಹಂ, ಅದೂ ಇಲ್ಲ. ಈ ಕುಂಟೆಗಳಲ್ಲಿ ಇವಕ್ಕಿಂತ ದೊಡ್ಡ ಮೀನುಗಳೇ ಇರಲಿಲ್ಲವಾದ್ದರಿಂದ ಶತ್ರುಗಳೇ ಇರಲಿಲ್ಲ. ಹಾಗಾದರೆ, ಇವು ಚಲಿಸಲು ಪ್ರಯತ್ನಿಸಿದ್ದು ಯಾವ ಕಾರಣಕ್ಕಾಗಿ? ಅವು, ತಮ್ಮ ಈಜುರೆಕ್ಕೆಗಳನ್ನು ಬಳಸಿಕೊಂಡಿದ್ದು ತಮ್ಮನ್ನು ನೀರಿನಲ್ಲೇ ಉಳಿಸಿಕೊಳ್ಳಲಿಕ್ಕಾಗಿ !

ಇದೆಂಥಾ ವಿಪರ್ಯಾಸ ! ನೀರು ಕೊಳೆತು ಆಕ್ಸಿಜನ್ ಪ್ರಮಾಣ ಕ್ಷೀಣಿಸಿದಾಗ, ಜೀವ ಉಳಿಸಿಕೊಳ್ಳಲೆಂದೇ ಉಸಿರ್ಚೀಲಗಳು ಬೆಳೆದುಕೊಢವಲ್ಲ? ಮತ್ತೇಕೆ ಈಜುರೆಕ್ಕೆಗಳ ಈ ದುರ್ಬಳಕೆ? ಆ ಕೊಳಚೆ ನೀರೂ ಬತ್ತಿ ಹೋದರೆ, ದೇಹದ ಒಳದ್ರವಗಳೂ ಬತ್ತಿಹೋಗುವ ಸಾಧ್ಯತೆ ಇದೆಯಲ್ಲವೇ? ಆದ್ದರಿಂದ, ತಮ್ಮ ದೇಹವನ್ನು ತೋಯಿಸಿಕೊಂಡು ಒಳ ದ್ರವಗಳನ್ನು ಕಾಪಾಡಿಕೊಂಡರೆ ಹೇಗಾದರೂ ಜೀವನ ಸಾಗಿಸಬಹುದಾಗಿತ್ತು. ಇಂತ ವಿಷಮ ಪರಿಸ್ಥಿತಿಯಲ್ಲಿ ಅವು ತೆವಳುತ್ತಾ ಪಕ್ಕದಲ್ಲೇ ಇದ್ದ ಮತ್ತೊಂದು ಕುಂಟೆಯನ್ನು ಹೊಕ್ಕು ಜೀವ ಉಳಿಸಿಕೊಳ್ಳುವುದಕ್ಕಾಗಿಯೇ ಅವು ತಮ್ಮ ಈಜುರೆಕ್ಕೆಗಳನ್ನು ‘ದುರುಪಯೋಗ’ ಮಾಡಿಕೊಂಡುವು ! ಇಲಿ ಕಾಟ ತಪ್ಪಿಸಿಕೊಳ್ಳಲು ಸನ್ಯಾಸಿ ಬೆಕ್ಕು ಸಾಕಲು ಪ್ರಾರಂಭಿಸಿದ !

ಈ ಮೀನುಗಳು ತೆವಳುತ್ತಾ, ತೆವಳುತ್ತಾ ಪಕ್ಕದ ಮತ್ತೊಂದು ಕುಂಟೆಯನ್ನು ತಲುಪುವ ಹಾದಿಯಲ್ಲಿ ಕೆಲವೊಮ್ಮೆ ತುಂಬಾ ಸುಸ್ತಾಗಿ, ಕೆಲಕಾಲ ನೀರಿನ ಹೊರಗೆ ‘ಮಲಗಿ, ಸುಧಾರಿಸಿಕೊಳ್ಳಲು’ ಪ್ರಾರಂಭಿಸಿದುವು. ಹೀಗೆ, ನೀರ ಹೊರಗೆ ತಂಗಲಾರಂಭಿಸಿದ ಮೀನುಗಳಿಗೆ ಹೊಸ ಅನುಭವ ಉಂಟಾಗತೊಡಗಿತು. ಗಾಳಿಯಲ್ಲಿ ಆಕ್ಸಿಜನ್ ಪ್ರಮಾಣ ನೀರಿಗಿಂತಲೂ ಅನೇಕ ಪಟ್ಟು ಹೆಚ್ಚಾಗಿತ್ತು. ಸಸ್ಯಗಳು ಇವುಗಳನ್ಮು ಕೈ ಬೀಸಿ ಕರೆಯುತ್ತಿದ್ದುವು. ಸಸ್ಯಗಳ ಮೇಲೆ ತಂಗಿದ್ದ ಕೀಟಗಳನ್ನು ಸುಲಭವಾಗಿ ಹಿಡಿದು ತಿಂದು ಜೀವಿಸಬಹುದಿತ್ತು. ಈ ಜೀವನ ಬಹು ಆರಾಮವೆನಿಸಿತ್ತು. ನೆಲ ಜೀವನದ ರುಚಿ ಹತ್ತತೊಡಗಿತ್ತು. ಪಕ್ಕದ ಕುಂಟೆಗೆ ತೆವಳಿಕೊಂಡು ಹೋಗಿ ಆ ನೀರನ್ನು ಸೇರಿಕೊಳ್ಳಲೆಂದೇ ಬಳಸಿಕೊಂಡ ಈಜುರೆಕ್ಕೆಗಳನ್ನು ‘ದುರುಪಯೋಗ’ ಪಡಿಸಿಕೊಂಡು ಈ ಮೀನುಗಳು ಒಂದು ಸಸ್ಯದಿಂದ ಮತ್ತೊಂದು ಸಸ್ಯಕ್ಕೆ ಆಕರ್ಷಿತವಾಗಿ, ತಮ್ಮ ಪಯಣದ ದಿಕ್ಕನ್ನೇ ಬದಲಿಸಿಕೊಂಡು ನೀರಿನ ಸಾಮೀಪ್ಯವನ್ನು ತೊರೆದು ಬಲುದೂರ ‘ವಾಕಿಂಗ್’ ಹೊರಟುಬಿಟ್ಟುವು. ಏನೋ ಮಾಡಲು ಹೋಗಿ, ಕೊನೆಗೆ ಮತ್ತೇನನ್ನೋ ಮಾಡಿಕೊಂಡ ಈ ಮೀನುಗಳ ಸಾಹಸವೇ ಒಂದು ‘ಆಹ್ಲಾದಕರ ಆಕಸ್ಮಿಕ’ (ಸೆರೆಪಿಂಡಿಟಿ-serependity) ಆಗಿತ್ತು !

‘ಆತುರಗಾರನಿಗೆ ಬುದ್ಧಿ ಮಟ್ಟ’ ಎಂಬ ಗಾದೆ ಮಾತಿನಂತೆ ಈ ಮೀನುಗಳು ಅತ್ಯುತ್ಸಾಹದಿಂದ ಅವಸರವಾಗಿ, ನೀರಿನಿಂದ ಬಹುದೂರ ನಡೆದುವು. ನೀರಿನ ಪರಿಸರಕ್ಕೆ ಅಚ್ಚುಕಟ್ಟಾಗಿ ಹೊಂದಿಕೊಂಡಿದ್ದ ಇವುಗಳಿಗೆ ಕೆಟ್ಟ ಯೋಚನೆಗಳು ಬರಲಾರಂಬಿಸಿದುವು. ‘ದೇಹ ಭಾರವಾಗಿರುವುದರಿಂದ ನಮಗೆ ನೆಲದ ಮೇಲೆ ಸಲೀಸಾಗಿ ಓಡಾಡಲು ಪ್ರಯಾಸವಾಗುತ್ತಿದೆ. ದೇಹದ ತೂಕವನ್ನು ಕಡಿಮೆ ಮಾಡಿಕೊಂಡರೆ, ಇನ್ನೂ ವೇಗವಾಗಿ ಮುಂದುವರೆದು, ಇನ್ನೂ ಹೆಚ್ಚು ಸುಖ ಪಡಬಹುದು’ ಎಂದು ಯೋಚಿಸಿದುವು. ಈ ನಿಟ್ಟಿನಲ್ಲಿ ಇವುಗಳ ಕಣ್ಣಿಗೆ ಗೋಚರಿಸಿದ್ದು, ದೇಹವನ್ನು ರಕ್ಷಿಸುತ್ತಿರುವ ಹುರುಪೆಗಳು(scales). ಅಹಂಕಾರದಿAದ ಬೀಗುತ್ತಾ, ದೇಹವನ್ನು ಕೊಡವಿ, ಹುರುಪೆಗಳನ್ನು ತರಿದು ಬಿಸಾಡಿದುವು. ದೇಹ ಹಗುರವಾಯಿತು. ಸುಲಭವಾಗಿ ತೆವಳುತ್ತ ನೀರಿನಿಂದ ಇನ್ನಷ್ಟು ದೂರ ಬಂದು ಬಿಟ್ಟವು. ಜೋಡಿ ಈಜುರೆಕ್ಕೆಗಳು ಕ್ರಮೇಣ ಬದಲಾಗಿ ಕಾಲುಗಳಾದುವು. ಸಮೃದ್ಧ ಗಾಳಿ ಮತ್ತು ಯಥೇಚ್ಚ ಆಹಾರದ ಜೊತೆಗೆ ಶತ್ರುಗಳೇ ಇಲ್ಲದ ನೆಲದ ಜೀವನ ಇವುಗಳಿಗೆ ಅತ್ಯಂತ ಹಿತಕರವಾಗಿಯೂ, ಆಕರ್ಷಕವಾಗಿಯೂ ಕಂಡಿತ್ತು. ಕಿವಿರುಗಳು ಮುದುರಿಕೊಂಡು ಶ್ವಾಸಕೋಶಗಳಾದುವು. ಹೀಗೇ ಮುಂದುವರೆಯುತ್ತ ಸಂಪೂರ್ಣ ನೆಲ ಜೀವಿಗಳಂತೆ ವರ್ತಿಸಲಾರಂಬಿಸಿದುವು.

ಬೇಸಿಗೆ ತೀವ್ರವಾಗುತ್ತಿದ್ದಂತೆ, ಬಿಸಿಲಿನ ಝಳ ಏರುತ್ತ ಹೋಯಿತು. ಈ ನೆಲಚರ ಪ್ರಾಣಿಗಳಿಗೀಗ ಗಂಟಲು ಒಣಗಲು ಪ್ರಾರಂಭವಾಯಿತು. ನೀರಿನಿಂದ ಬಲೂ ದೂರ ಬಂದಾಗಿದ್ದ ಕಾರಣ, ಬಾಯಾರಿಕೆಯನ್ನು ಸಹಿಸಿಕೊಳ್ಳಬೇಕಿತ್ತು. ಹುರುಪೆಗಳಿಲ್ಲದ ಬೋಳು ಚರ್ಮದಿಂದಾಗಿ, ದೇಹದ್ರವಗಳೆಲ್ಲ ಬತ್ತಿಹೋದುವು. ನೀರಿಗಾಗಿ ಹಾಹಾಕಾರ ಪ್ರಾರಂಭವಾಯಿತು. ತಾವಾಗಿಯೇ ಮಾಡಿಕೊಂಡ ಘೋರ ತಪ್ಪುಗಳು ಮನವರಿಕೆಯಾಗಿ, ಪಶ್ಚಾತ್ತಾಪ ಶುರುವಾಗಿತ್ತು.

ಇದೇ ಸಮಯಕ್ಕೆ, ಸಂತಾನೋತ್ಪತ್ತಿಯ ಕಾಲ ಸನ್ನಿಹಿತವಾಯಿತು. ಗಂಡು ಹೆಣ್ಣು ಪರಸ್ಪರ ಮಿಲನಕ್ರಿಯೆ ನಡೆಸಿದುವು. ಹೆಣ್ಣು, ಗೊಂಚಲು, ಗೊಂಚಲಾಗಿ ಮೊಟ್ಟೆಗಳನ್ನಿಟ್ಟರೆ, ಗಂಡು, ಪುರುಷಾಣುಗಳನ್ನು ವಿಸರ್ಜಿಸಿದುವು. ಆದರೆ, ಪುರುಷಾಣುಗಳು ಮೊಟ್ಟೆಗಳನ್ನು ತಲುಪಲಿಲ್ಲ. ಏಕೆಂದರೆ, ಮೊಟ್ಟೆಗಳನ್ನು ತಲುಪಲು ಈಜಿಕೊಂಡು ಹೋಗಲು ನೀರು ಇರಲಿಲ್ಲ. ಕೆಲವೇ ಸಮಯದಲ್ಲಿ ಮೊಟ್ಟೆಗಳು ಮತ್ತು ಪುರುಷಾಣುಗಳು ಬಿಸಿಲಿನ ಝಳಕ್ಕೆ ಒಣಗಿ ಸತ್ತವು. ನಿಶೇಚನ ಕ್ರಿಯೆ ನಡೆಯಲಿಲ್ಲ. ಸಂತತಿಯೇ ನಿರ್ಮೂಲವಾಗಿಬಿಡುವ ಸೂಚನೆಗಳು ಕಂಡುಬಂದುವು. ಬೋಳಾದ ಚರ್ಮ ಮತ್ತು ನೀರಿನ ಆಧಾರವಿಲ್ಲದ ಮೊಟ್ಟೆಗಳು, ಈ ಪ್ರಾಣಿಗಳ ಪ್ರಮುಖ ಸಮಸ್ಯೆಗಳಾದುವು. 

ತಮ್ಮ ತಪ್ಪು ಅರಿವಾಗಿದ್ದೇ ತಡ, ಇವು ನೀರನ್ನು ಅರಸುತ್ತ ದೌಡಾಯಿಸಿದುವು. ನೀರನ್ನು ಕಂಡೊಡನೆ, ‘ಬದುಕಿದೆಯಾ ಬಡ ಜೀವವೇ’ ಎನ್ನುತ್ತಾ ನೀರಿಗೆ ನೆಗೆದು ನಿಟ್ಟುಸಿರು ಬಿಟ್ಟವು. ‘ಮತ್ತೆಂದೂ ನೀರನ್ನು ಬಿಟ್ಟು ಹೋಗೆವು’ ಎಂದು ಶಪಥ ಮಾಡಿದುವು. ನೀರನ್ನು ತ್ಯಜಿಸಿ, ನೆಲವನ್ನು ಗೆದ್ದು, ಬಾವುಟ ಹಾರಿಸಿ, ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಬೇಕೆಂಬ ಹುಚ್ಚಿನಲ್ಲಿ, ಯಾವ ಪೂರ್ವ ಸಿದ್ಧತೆಯೂ ಇಲ್ಲದೆ, ಆತುರಾತುರವಾಗಿ ‘ದಂಡಯಾತ್ರೆ’ ಹೊರಟಿದ್ದ ಈ ಪ್ರಾಣಿಗಳು ಎದುರಾದ ಪ್ರತಿಕೂಲ ಸನ್ನಿವೇಶಗಳನ್ನು ನಿಭಾಯಿಸಲಾಗದೆ, ಹೀನಾಯವಾಗಿ ಸೋತು, ನೀರಿಗೇ ಹಿಂತಿರುಗಿದುವು. ಈ ಪ್ರಾಣಿಗಳ ಗುಂಪೇ ಮುಂದೆ ‘ಉಭಯಜೀವಿ’(amphibians) ಗಳಾಗಿ ಉಳಿದುವು. ‘ಇಲ್ಲಾದರೂ ಇರು, ಅಲ್ಲಾದರೂ ಇರು, ಎಂದೆಂದಿಗೂ ನೀ ನೀರಿಗೆ ಅಂಟಿಕೊಂಡೇ ಇರು’ ಎಂಬುದೇ ಈ ಪ್ರಾಣಿಗಳ ಜೀವನ ಮಂತ್ರ. ಹೀಗಾಗಿ, ಅವು ಇಂದಿಗೂ ನೀರಿನ ಬಂಧಿಯಾಗಿಯೇ ಉಳಿದಿವೆ.

ಉಭಯಜೀವಿಗಳಲ್ಲಿ ಕೆಲವು ತಾವು ಅನುಭವಿಸಿದ ಹೀನಾಯ ಸೋಲಿಗೆ ಕಾರಣಗಳನ್ನು ಗುರುತಿಸಿ, ಅವನ್ನು ಒಂದೊಂದಾಗಿ ನಿವಾರಿಸಿಕೊಂಡುವು. ಬೋಳಾಗಿದ್ದ ಮೈಚರ್ಮವನ್ನು ಮತ್ತೆ ಹುರುಪೆಗಳಿಂದ ಹೊದ್ದುಕೊಂಡವು. ಬೇಸಿಗೆಯ ಬಿಸಿಲಿನ ಝಳವನ್ನು ಎದುರಿಸಲು ಸಿದ್ಧವಾದವು. ಇದಕ್ಕೂ ಮಿಗಿಲಾಗಿ, ಮೊಟ್ಟೆಗಳಲ್ಲಿ ಕೆಲವು ಪ್ರಮುಖ ಪರಿವರ್ತನೆಗಳ ಅವಶ್ಯಕತೆಯಿತ್ತು. ಗುರುತ್ವಾಕರ್ಷಣ ಶಕ್ತಿಯ ವಿರುದ್ಧ ಮೊಟ್ಟೆಗಳಿಗೆ ಆಧಾರ ಕೊಡಲು ಮತ್ತು ಒಳಗಿನ ದ್ರವ ಬತ್ತದಂತೆ ಕಾಪಾಡಲು, ಮೊಟ್ಟೆಯ ಸುತ್ತ ಸೂಕ್ಷ್ಮ ರಂಧ್ರಗಳಿರುವ ಸುಣ್ಣದ ಚಿಪ್ಪು(shell) ನಿರ್ಮಾಣವಾಯಿತು. ಮೊಟ್ಟೆ ಬೆಳೆದು ಭ್ರೂಣವಾಗುವ ತನಕ ಬೇಕಾಗುವಷ್ಟು ಆಹಾರವನ್ನು ಬಂಡಾರದ(yolk) ರೂಪದಲ್ಲಿ ಒದಗಿಸಲಾಯುತು. ಭ್ರೂಣದ ಬೆಳವಣಿಗೆಗೆ ಸಾಕಾಗುವಷ್ಟು ನೀರಿನ ವ್ಯವಸ್ಥೆ ಮಾಡಲಾಯಿತು. ಉಂಟಾಗುವ ಮಲಿನ ವಸ್ತುಗಳನ್ನು ಬೇರ್ಪಡಿಸಿ, ಶೇಖರಿಸಿ ಇಟ್ಟುಕೊಳ್ಳಲು ಒಂದು ಚೀಲದ ವ್ಯವಸ್ಥೆಯನ್ನೂ ಮಾಡಲಾಯಿತು. ಭ್ರೂಣಕ್ಕೆ ಯಾವ ಆಘಾತವೂ ಆಗದಂತೆ ವಿಶೇಷ ರಕ್ಷಣೆ ಒದಗಿಸಲು, ಅದು ಸದಾ ತೇಲುತ್ತಿರುವಂತೆ ಸುತ್ತಲೂ ಲೋಳೆಯನ್ನು ತುಂಬಲಾಯಿತು. ಈ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡು ಈ ಪ್ರಾಣಿಗಳು ಈಗ ನೆಲದ ಮೇಲೆ ನಿರ್ಭಯವಾಗಿ ಜೀವಿಸತೊಡಗಿದುವು. ಹೀಗೆ, ನೆಲದ ಮೇಲೆ ಯಶಸ್ವಿಯಾಗಿ ಜೀವಿಸಲು ಸಜ್ಜುಗೊಂಡ ಈ ಗುಂಪಿನ ಪ್ರಾಣಿಗಳೇ ಸರೀಸೃಪಗಳು(reptiles). ನೆಲದ ಮೇಲೆ ವಾಸಿಸಲು ಇಷ್ಟೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಸರೀಸೃಪಗಳು ಅನುಸರಿಸಬೇಕಾಯಿತು. 

ಸಮಸ್ಯೆ ಇಷ್ಟಕ್ಕೇ ಬಗೆಹರಿಯಿತೇ? ಇಲ್ಲ. ಮೊಟ್ಟೆಯ ಸುತ್ತ ಬೆಳೆಸಿಕೊಂಡ ಚಿಪ್ಪಿನ ಒಳಗೆ ಪುರುಷಾಣು ಪ್ರವೇಶಿಸಿ ನಿಶೇಚನ ನಡೆಸುವುದು ಹೇಗೆ? ಆದ್ದರಿಂದ, ಮೊದಲಿಗೆ ನಿಶೇಚನವಾಗುವಂತೆ ನೋಡಿಕೊಂಡು ನಂತರ ಚಿಪ್ಪಿನಿಂದ ಆವೃತವಾಗುವಂತೆ ಮಾಡಬೇಕಾಯಿತು. ಇದಕ್ಕಾಗಿ ಮೊಟ್ಟೆಯನ್ನು ಹೆಣ್ಣಿನ ದೇಹದಲ್ಲೇ ಉಳಿಸಿಕೊಂಡು, ಅಲ್ಲಿಯೇ ನಿಶೇಚನಕ್ಕೆ ಅನುವು ಮಾಡಿಕೊಡಬೇಕಾಗಿ ಬಂದಿತು. ಅಂದರೆ, ಆಂತರಿಕ ನಿಶೇಚನ (internal fertilization) ಅವಶ್ಯವಾಯಿತು. ಆಹಾರ ಭಂಡಾರವನ್ನು ಶೇಖರಿಸಿ ಇಡಲು ಭಂಡಾರ ಸಂಚಿ (yolk sac) ಸೃಷ್ಟಿಯಾಯಿತು. ಭ್ರೂಣ ವಿಸರ್ಜಿಸುವ ಮಲಿನ ವಸ್ತುಗಳನ್ನು ಶೇಖರಿಸಿಟ್ಟುಕೊಳ್ಳಲು ಹೊಕ್ಕಳು ಚೀಲ (allantois) ಸೃಷ್ಟಿಯಾಯಿತು. ಜೊತೆಗೆ, ಬೆಳೆಯುತ್ತಿರುವ ಭ್ರೂಣದ ಸುತ್ತ ಆಮ್ನಿಯಾನ್(amnion) ಎಂಬ ಮತ್ತೊಂದು ಪೊರೆ ಸೃಷ್ಟಿಯಾಯಿತು. ಅದರ ಒಳಗೆ ನೀರಿನಂಥ ದ್ರವವೊಂದನ್ನು ತುಂಬಿಸಿ, ಭ್ರೂಣಕ್ಕೆ ತನ್ನದೇ ಆದ ನೀರಿನ ಕುಂಟೆಯೊಂದನ್ನು ಒದಗಿಸಲಾಯಿತು. ಈ ಎಲ್ಲ ಪೊರೆಗಳನ್ನೂ ಮತ್ತು ಭ್ರೂಣವನ್ನೂ ಆವರಿಸಿದ ಜರಾಯು (chorion) ಎಂಬ ಇನ್ನೊಂದು ಪೊರೆ ರಚನೆಯಾಯಿತು. ಇವೆಲ್ಲದರ ಜೊತೆಗೆ, ಗಡುಸಾದ ಚಿಪ್ಪೊಂದು ಮೊಟ್ಟೆಯನ್ನು ಸುತ್ತುವರೆದು ರಕ್ಷಣೆ ನೀಡಲು ಸಜ್ಜಾಗಿತ್ತು. ಇಂಥ ಒಂದು ಮೊಟ್ಟೆಗೆ, ನೆಲ ಮೊಟ್ಟೆ (land egg or cleidoic egg) ಎಂಬ ಹೆಸರು ಬಂದಿತು. ಬೆಕ್ಕು ಸಾಕಿದ ಪಾಪಕ್ಕಾಗಿ ಸನ್ಯಾಸಿಯ ಪರಿವಾರ ಬೆಳೆಯತೊಡಗಿತ್ತು. ಈಗ, ಹಸುವಿನ ಸೇರ್ಪಡೆಯಾಗಿತ್ತು ! ಸರೀಸೃಪಗಳು ಬೆಳೆಸಿಕೊಂಡ ಈ ವ್ಯವಸ್ಥೆ ಮುಂದೆ ವಿಕಾಸಗೊಂಡ ಹಕ್ಕಿಗಳಲ್ಲಿಯೂ ಮುಂದುವರೆದುಕೊಂಡು ಬಂದಿತ್ತು.

ಇಷ್ಟಾದರೂ, ನೆಲವಾಸಿ ಪ್ರಾಣಿಗಳ ಕಷ್ಟ ಪೂರ್ತಿ ಪರಿಹಾರವಾಗಲಿಲ್ಲ. ಇಂಥ ಮೊಟ್ಟೆಗಳ ಬೆಳವಣಿಗೆ ದೇಹದ ಹೊರಗೇ ಆಗುತ್ತಿತ್ತು. ನೆಲದ ಮೇಲೆ ಇಟ್ಟ, ಈ ಮೊಟ್ಟೆಗಳನ್ನು ಕಾಪಾಡುವುದು ಬಹು ಪ್ರಯಾಸದ ಕೆಲಸವಾಯಿತು. ಇತರ ಪ್ರಾಣಿಗಳು ಈ ಮೊಟ್ಟೆಗಳನ್ನು ಒಂದೋ ತುಳಿದು ಧ್ವಂಸ ಮಾಡುತ್ತಿದ್ದವು, ಇಲ್ಲವೇ ಆಹಾರವಾಗಿ ಭಕ್ಷಿಸುತ್ತಿದ್ದವು. ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಲಲು ಸಜ್ಜಾದ ಪ್ರಾಣಿಗಳೇ ಸ್ತನಿಗಳು (mammals).

ಮೊಟ್ಟೆಗಳು ದೇಹದ ಹೊರಗೆ ಬೆಳೆದರೆ, ಅವು ವಿವಿಧ ಹಂತಗಳಲ್ಲಿ ಅಪಾಯವನ್ನು ಎದುರಿಸಬೇಕಾಗಿತ್ತು. ಆದ್ದರಿಂದ, ಅವು ಬೆಳೆದು ಮರಿಗಳಾಗುವ ತನಕ ಹೆಣ್ಣಿನ ದೇಹದೊಳಗಡೆಯೇ ಅಡಗಿಸಿಟ್ಟುಕೊಂಡುಬಿಟ್ಟರೆ ಶತ್ರುಗಳ ಭಯವೇ ಇರುವುದಿಲ್ಲ, ಅಲ್ಲವೇ? ಆದ್ದರಿಂದ ಈ ಪ್ರಾಣಿಗಳು ಮೊಟ್ಟೆಗಳನ್ನು ತಮ್ಮ ದೇಹದ ಒಳಗೇ ಉಳಿಸಿಕೊಂಡು, ಅಲ್ಲಿಯೇ ನಿಶೇಚನವಾಗುವಂತೆ ಮಾಡಿಕೊಂಡವು. ಭ್ರೂಣವನ್ನು ಒಳಗೇ ಇರಿಸಿಕೊಳ್ಳಲು ಇನ್ನಷ್ಟು ಬದಲಾವಣೆಗಳ ಅವಶ್ಯಕತೆ ಉಂಟಾಯಿತು. ಅದಕ್ಕಾಗಿ ಗರ್ಭಕೋಶ ಸೃಷ್ಟಿಯಾಯಿತು. ಭ್ರೂಣಕ್ಕೆ ಆಹಾರ ಮತ್ತು ಆಕ್ಸಿಜನ್ ಒದಗಿಸಲು, ಹಾಗೂ ಮಲಿನ ವಸ್ತುಗಳನ್ನು ವಿಸರ್ಜಿಸಲು ಒಂದು ಹೊಸ ಅಂಗ ಸೃಷ್ಟಿಯಾಯಿತು. ಅದೇ ಮಾಸು (placenta). ಬೆಕ್ಕಿಗಾಗಿ ಹಸು ಸಾಕಿದ ಸನ್ಯಾಸಿ ಕೊನೆಗೆ ಮದುವೆಯಾಗಲೇ ಬೇಕಾಯಿತು ! ಕಶೇರುಕಗಳ ವಿಕಾಸದ ಏಣಿಯ ತುದಿಯಲ್ಲಿರುವ ಸ್ತನಿಗಳ ವಿಕಾಸವಾಗಿದ್ದು ಹೀಗೆ !

ನೀರು ಬತ್ತಿದಾಗ ಪಕ್ಕದ ಮತ್ತೊಂದು ಕುಂಟೆಗೆ ಅತಿ ಪ್ರಯಾಸದಿಂದ ತೆವಳಿಕೊಂಡು ಹೋಗುವುದಕ್ಕಾಗಿ ಬಳಸಿಕೊಂಡ ಈಜುರೆಕ್ಕೆ ಹಾಗೂ ಶ್ವಾಸಕೋಶಗಳನ್ನು ‘ದುರುಪಯೋಗ’ ಪಡಿಸಿಕೊಂಡ ಮೀನುಗಳು ಅಗತ್ಯಕ್ಕೆ ತಕ್ಕಂತೆ ಕ್ರಮೇಣ ಕೆಲವು ಅಂಗಗಳನ್ನು ಬೆಳೆಸಿಕೊಂಡು, ಕೆಲವನ್ನು ಕಳೆದುಕೊಂಡು, ಅಂತೂ ಇಂತೂ ನೆಲವನ್ನು ಗೆದ್ದವು ! ಈ ಗೆಲುವಿನ ಮೂಲ ಕಾರಣ ನೀರಿನಿಂದ ಹೊರಗೆ ಬದುಕಬಲ್ಲ ನೆಲ ಮೊಟ್ಟೆಗಳ ವಿಕಾಸ. ಇದು ಮೀನುಗಳಲ್ಲಿ ನಡೆದ ಒಂದು ‘ಸೆರೆಪಿಂಡಿಟಿ’ಯ ಫಲಿತಾಂಶ !


25 comments:

  1. ವಿಕಾಸದ ಹಾದಿಯ ಸಂಪೂರ್ಣ ಚಿತ್ರಣ ಅದ್ಭುತ ಸರ್

    ReplyDelete
  2. Nice information about evolutionary relationships sir

    ReplyDelete
  3. ಸುಂದರ್‌ ರಾಮ್‌ ಸರ್‌, ಮಿಲಿಯಾಂತರ ವರ್ಷಗಳ ವಿಕಾಸದ ಜಟಿಲ ವಿಷಯವನ್ನು ಸೊಗಸಾಗಿ ನಿರೂಪಿಸಿದ್ದೀರಿ.
    ಲೇಖನದ ಪರಿಮಿತಿಯಲ್ಲಿ ಪರಿಪೂರ್ಣ ಮಾದರಿ ಲೇಖನ. ಪಠ್ಯಕ್ಕೆ ಪೂರಕವಾದ ಇಂತಹ ಸರಳ ಸುಂದರ ಲೇಖನಗಳು ಮಕ್ಕಳಲ್ಲೂ ಆಸಕ್ತಿ ಮೂಡಿಸಿ. ಕಲಿಕೆಗೆ ಪ್ರೇರೇಪಿಸುವುದರಲ್ಲಿ ಸಂಶಯವಿಲ್ಲ. ಧನ್ಯವಾದಗಳು ಉತ್ತಮ ಲೇಖನಕ್ಕೆ.

    ReplyDelete
  4. 'ಕಶೇರುಕಾಯಣ' ತುಂಬಾ ರಸವತ್ತಾಗಿ ಮೂಡಿಬಂದಿದೆ.ಧನ್ಯವಾದಗಳು ಸರ್

    ReplyDelete
  5. ವಿವರಣೆ ಚೆನ್ನಾಗಿದೆ.

    ReplyDelete
  6. Very nice sir..so informative...

    ReplyDelete
  7. ಮಾಹಿತಿ, ಮಾರ್ಗದರ್ಶನಕ್ಕಾಗಿ ಧನ್ಯವಾದಗಳು ಸರ್. ನಾವು ಅರಿಯಬೇಕಾದುದು ಬಹಳಷ್ಟಿದೆ.

    ReplyDelete
  8. I had forgotton about my zoology. MJS reminded me. He was our most favorite teacher. After 50 years of Teacher- student relationship, we are still the same

    ReplyDelete
  9. Very nice story about evolution thank you sir

    ReplyDelete
  10. Simply *very nice information*...Dr Venkatesha Babu KR prof of Physics

    ReplyDelete
  11. Sir.I have totally lost the subject.with your article I totally refreshed my zoology. Thank you very much MJS Sir.Iam your student 50 years and Now also.

    ReplyDelete
  12. ಸರ್ ಲೇಖನ ತುಂಬಾ ಸರಳ ಹಾಗೂ ಆಸಕ್ತಿಕರವಾಗಿ ಮೂಡಿಬಂದಿದೆ ಧನ್ಯವಾದಗಳು

    ReplyDelete
  13. ತುಂಬಾ ಚೆನ್ನಾಗಿದೆ. ವಿವರಣೆ ತರ್ಕ ಬದ್ಧವಾಗಿದೆ. ಎಳೆಯರಿಗೆ ಉಪಯುಕ್ತ.
    JNL Sharma

    ReplyDelete
  14. Fantastic article. Inspirational to my young minds.

    ReplyDelete
  15. ಸೆರೆಹಿಡಿಯಿತು 'ಸೆರೆಪಿಂಡಿಟಿ'🙏

    ReplyDelete
  16. I am proud to say that I was a your student 50 years ago. Your simple City and method of teaching were simply extraordinary. I am speechless. The article reminds our Golden days that I spent with you sir. Thank you.

    ReplyDelete
  17. ಮಲತಾಯಿ ಭಾಷೆಯಲ್ಲಿ ಕಲಿತದ್ದು ಅಷ್ಟೊಂದು ಮನವರಿಕೆಯಾಗಿರಲಿಲ್ಲ ಆದರೆ ಮಾತೃ ಭಾಷೆಯಲ್ಲಿ ಓದಿದ ನಿಮ್ಮ ಬರವಣಿಗೆ ಬಹಳ ಅರ್ಥವೋತ್ತಗಿತ್ತು

    ReplyDelete
  18. ತುಂಬಾ ವಿಭಿನ್ನವಾಗಿ,ಅತ್ಯಂತ ಸುಲಭವಾಗಿ ಜೀವ ಸಂಕುಲದ ಉಗಮವನ್ನು ಅದೆಷ್ಟು ಸರಳವಾಗಿ ವಿವರಿಸಿದಿರಿ sir.... ನಿಜವಾಗಲೂ ನಿಮ್ಮ ಪ್ರಯತ್ನಕ್ಕೆ, ನಿಮ್ಮ ಈ ಹೊಸ ಪ್ರಯತ್ನಕ್ಕೆ ನಮ್ಮದು ಒಂದು ಸಲಾಂ.... ಈ ರೀತಿಯಲ್ಲಿ ಕೂಡ ವಿಜ್ಞಾನ ವನ್ನು ಕಲಿಯಬಹುದು ಎಂದು ತಿಳಿದೆ... ಇದೇ ರೀತಿಯಲ್ಲಿ ಮಕ್ಕಳಿಗೆ ಕಲಿಸಿದರೆ ತಮ್ಮ ಬಾಲ್ಯದಲ್ಲಿಯೇ ವಿಜ್ಞಾನದ ರುಚಿ ಹೊತ್ತಿಸಿಕೊಳ್ಳುತ್ತಾರೆ. ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಅಸಕ್ತಿವಹಿಸಿ ಕಲಿಯುತ್ತಾರೆ.... ಈಗೆ ಕಲಿತ ಮಕ್ಕಳೇ ಮುಂದಿನ ಭವಿಷ್ಯವನ್ನೂ ಹಸಿರಾಗಿಸುತ್ತಾರೆ.....

    ReplyDelete
  19. Very nice article...thank very much for sharing...

    ReplyDelete
  20. Sir, simple language, informative article, taking me back 50 years, reminiscent of your lectures, your teaching, reading the article I had the feeling of your voice in my years, thank you very much
    Ravikumar 1st batch

    ReplyDelete