Wednesday, August 4, 2021

ಸುವರ್ಣ ಅನುಪಾತಕ್ಕೆ ಮಾನವ ದೇಹವೂ ಹೊರತಲ್ಲ !

ಸುವರ್ಣ ಅನುಪಾತಕ್ಕೆ ಮಾನವ ದೇಹವೂ ಹೊರತಲ್ಲ !


ಲೇಖಕರು:
 ಡಾ. ಟಿ.ಎ.ಬಾಲಕೃಷ್ಣ ಅಡಿಗ 

ನಿವೃತ್ತ ಪ್ರಾಂಶುಪಾಲರು ಮತ್ತು ವಿಜ್ಞಾನ ಸಂವಹನಕಾರರು



ನಿಸರ್ಗದ ಎಲ್ಲ ಕಡೆ ಕಂಡು ಬರುವ ಫಿಬೋನಾಚಿ ಸಂಖ್ಯಾ ಅನುಕ್ರಮಣಿಕೆ ಹಾಗು ಸುವರ್ಣ ಅನುಪಾತದ ಬಗ್ಗೆ ಕಳೆದ ಮೂರು ಸಂಚಿಕೆಗಳಲ್ಲಿ ಪ್ರಕಟವಾದ ಲೇಖನಗಳನ್ನು ನೀವು ಓದಿರಬಹುದು. ಸಸ್ಯಗಳ ಹಾಗು ಪ್ರಾಣಿಗಳ ದೇಹದ ವಿವಿಧ ಭಾಗಗಳಲ್ಲಿ ಸುವರ್ಣ ಅನುಪಾತದ ಪ್ರಭಾವ ಹೇಗೆ ಹಾಸು ಹೊಕ್ಕಾಗಿದೆ ಎಂಬುದಕ್ಕೆ ಅನೇಕ ಉದಾಹರಣೆಗಳನ್ನೂ ನೀವು ನೊಡಿದಿರಿ. ಮಾನವ ದೇಹವೂ ಈ ಕುತೂಹಲಕಾರಿ ಅನುಪಾತಕ್ಕೆ ಹೊರತಲ್ಲ. ಇದೇ ಸುವರ್ಣ ಅನುಪಾತದ ಪ್ರಭಾವ ಮಾನವ ದೇಹ ರಚನೆಯ ವಿವಿಧ ಪ್ರಕಾರಗಳಲ್ಲಿ ಹೇಗೆ ತನ್ನ ಅಚ್ಚೊತ್ತಿದೆ ಎಂಬುದನ್ನು ಈ ಬಾರಿಯ ಲೇಖನದಲ್ಲಿ ತಿಳಿದುಕೊಳ್ಳೋಣ.

ಮಾನವಾ ದೇಹವೂ ಮೂಳೆ ಮಾಂಸದ ತಡಿಕೆ.....ಅದರ ಮೇಲಿದೆ ತೊಗಲಿನ ಹೊದಿಕೆ.,,,,,” ‘ಭಕ್ತ ಕುಂಬಾರ’ ಚಿತ್ರದ ಈ ಜನಪ್ರಿಯ ಹಾಡನ್ನು ನೀವೆಲ್ಲ ಕೇಳಿರಬಹುದು. ಒಬ್ಬ ತತ್ವಜ್ಞಾನಿಯ ನೆಲೆಗಟ್ಟಿನಲ್ಲಿ ನೋಡಿದಾಗ ಇದು ನಿಜ. ಆದರೆ, ಒಬ್ಬ ಜೀವ ವಿಜ್ಞಾನಿಯ ದೃಷ್ಟಿಯಲ್ಲಿ ನೋಡಿದಾಗ ಗೋಚರಿಸುವ ಸತ್ಯವೇ ಬೇರೆ. ಮಾನವ ದೇಹದ ಮೂಳೆ, ಮಾಂಸಗಳು ಮಾತ್ರವಲ್ಲ, ಎಲ್ಲ ಭಾಗಗಳ ಜೋಡಣೆಯಲ್ಲಿ ಗಣಿತೀಯ ತತ್ವಗಳು ಹಾಸು ಹೊಕ್ಕಾಗಿವೆ. ಅದರಲ್ಲಿ, ಬಹಳಷ್ಟರಲ್ಲಿ ಫಿಬೋನಾಚಿ ಸಂಖ್ಯೆಗಳ ಇಲ್ಲವೇ ಸುವರ್ಣ ಅನುಪಾತದ ಪ್ರಭಾವ ಎದ್ದು ಕಾಣುತ್ತದೆ !

ಮಾನವ ದೇಹದ ವಿವಿಧ ಅಂಗಗಳ ಸಂಖ್ಯೆಯನ್ನೊಮ್ಮೆ ಗಮನಿಸಿ ನೋಡಿ. ಒಂದು ತಲೆ, ಒಂದು ಹೃದಯ, ಎರಡೆರಡು ಮೂತ್ರ ಪಿಂಡಗಳು ಮತು ಪ್ರಜನನಾಂಗಗಳು ತಲೆಯಲ್ಲಿ ತಲಾ ಎರಡು ಕಣ್ಣುಗಳು ಹಾಗೂ ಕಿವಿಗಳು. ಬಾಯಿ, ಮೂಗು ಒಂದೊಂದೇ. ಮೂಗಿನಲ್ಲಿ ಎರಡು ಹೊಳ್ಳೆಗಳು. ಒಟ್ಟಾರೆ, ತಲೆಯಲ್ಲಿ ಐದು ರಂಧ್ರಗಳು. ದೃಶ್ಯ, ಶ್ರವಣ, ರುಚಿ, ವಾಸನೆ ಮತ್ತು ಸ್ಪರ್ಶಕ್ಕೆ ಸಂಬಂಧಿಸಿದ ಐದು ಸಂವೇದನಾಂಗಗಳು. ಎರಡೆರಡು ಕೈಗಳು ಮತು ಕಾಲುಗಳು. ಪ್ರತಿ ಕೈನಲ್ಲಿ ತೋಳು, ಮುಂಗೈ ಹಾಗೂ ಹಸ್ತ ಎಂಬ ಮೂರು ಭಾಗ.  ಅದೇ ರೀತಿ, ಪ್ರತಿ ಕಾಲಿನಲ್ಲಿಯೂ ಮೂರು ಭಾಗ. ಪ್ರತಿಯೊಂದು ಕೈನ ಹಸ್ತ ಭಾಗದಲ್ಲಿ ೫ ಮೂಳೆಗಳಿವೆ. ಬೆರಳುಗಳಲ್ಲಿ ಹೆಬ್ಬೆರಳನ್ನು ಹೊರತುಪಡಿಸಿ, ಉಳಿದ ನಾಲ್ಕು ಬೆರಳುಗಳಲ್ಲಿ ತಲಾ  ಮೂರು ಮೂಳೆಗಳಿವೆ. ಹಾಗೆಯೇ, ಪ್ರತಿಯೊಂದು ಕಾಲಿನ ಪಾದ ಭಾಗದಲ್ಲಿ ೫ ಮೂಳೆಗಳಿದ್ದು ಹೆಬ್ಬೆಟ್ಟು ಹೊರತು ಪಡಿಸಿ ಉಳಿದ ನಾಲ್ಕು ಬೆರಳುಗಳಲ್ಲಿ ತಲಾ ೩ ಮೂಳೆಗಳಿವೆ. ಗಮನಿಸಿ ನೋಡಿ, ಈ ೧, , , , ಸಂಖ್ಯೆಗಳು ಫಿಬೋನಾಚಿ ಸಂಖ್ಯೆಗಳೇ ಅಲ್ಲವೇ ?

ದೇಹದ ವಿವಿಧ ಭಾಗಗಳ ಉದ್ದವನ್ನು ಅಳೆದು ನೋಡಿ (ಚಿತ್ರ ೧). ಅಲ್ಲಿ ವಿವಿಧ ಅಳತೆಗಳ ಮದ್ಯೆ ಇರುವ ಅನುಪಾತವನ್ನು ಗಮನಿಸಿದರೆ, ಎಲ್ಲವೂ ಸುವರ್ಣ ಅನುಪಾತದ(೧ : ೧.೬೧೮) ಸಮೀಪವೇ ಸುಳಿದಾಡುತ್ತಿರುವುದನ್ನು ಗಮನಿಸಬಹುದು ! ಹೊಕ್ಕುಳಿಂದ ತಲೆಯ ತುದಿ ಮತ್ತು ಭುಜದ ಮಟ್ಟದಿಂದ ತಲೆಯ ತುದಿ, ಇವೆರಡರ ಮಧ್ಯೆ ಇರುವ ಅನುಪಾತ ೧ ; ೧. ೬೧೮. ಹೊಕ್ಕಳ ಬಿಂದುವಿನಿಂದ ಮೊಣಕಾಲುಗಳಿಗೆ ಮತ್ತು ಮೊಣಕಾಲುಗಳಿಂದ ಪಾದದವರೆಗೆ ಇರುವ ಅನುಪಾತ ೧ : ೧. ೬೧೮. ಬೆರಳ ತುದಿಯಿಂದ ಮಣಿಕಟ್ಟಿನವರೆಗೆ ಮತ್ತು ಮೊಣಕೈಗೆ ಇರುವ ಅನುಪಾತ ೧ : ೧.೬೧೮  ಭುಜದ ಮಟ್ಟದಿಂದ ತಲೆಯ ತುದಿ ಮತ್ತು ತಲೆಯ ಗಾತ್ರಕ್ಕೆ ಇರುವ ಅನುಪಾತವೂ ೧ : ೧.೬೧೮

ಎರಡೂ ಕೈಗಳನ್ನು ಪರಿಶೀಲಿಸಿ. ಪ್ರತಿಯೊಂದು ಕೈನಲ್ಲೂ ಐದು ಬೆರಳುಗಳಿವೆ. ಹೆಬ್ಬೆರಳನ್ನು ಹೊರತು ಪಡಿಸಿ, ಉಳಿದ ಒಂದೊಂದು ಬೆರಳಿನಲ್ಲಿಯೂ ತಲಾ ಮೂರು ಭಾಗಗಳಿವೆ ಅಲ್ಲವೇ?. ಮೊದಲ ಎರಡು ಭಾಗಗಳ ಉದ್ದವನ್ನು ಇಡೀ ಬೆರಳಿನ ಉದ್ದಕ್ಕೆ ಹೋಲಿಸಿ ನೋಡಿ. ಇದರಲ್ಲಿಯೂ ಸುವರ್ಣ ಅನುಪಾತವನ್ನು ಗಮನಿಸಿ. ಅಷ್ಟೇ ಅಲ್ಲ, ಮಧ್ಯಬೆರಳಿನ ಉದ್ದಕ್ಕೂ, ಕಿರುಬೆರಳಿನ ಉದ್ದಕ್ಕೂ ಇರುವ ಅನುಪಾತವೂ ಸುವರ್ಣ ಅನುಪಾತದ ಸಮೀಪವಿದೆ.

ಚಿತ್ರದಲ್ಲಿ ತೋರಿಸಿರುವಂತೆ ತೋರು ಬೆರಳನ್ನು ಮಡಚಿ. ಆಗ ಉಂಟಾಗುವ ಆಯತಾಕಾರದ ರಚನೆಯಲ್ಲಿ ಅಗಲ ಮತ್ತು ಉದ್ದಗಳ ಅನುಪಾತವೂ ಕೂಡ ಸುವರ್ಣ ಅನುಪಾತವಾಗಿರುತ್ತದೆ ! (ಚಿತ್ರ ೨.)

ಚಿತ್ರ ೧. ಮಾನವ ದೇಹದ ಉದ್ದ, ಅಗಲಗಳಲ್ಲಿ ಸುವರ್ಣ ಅನುಪಾತ. ಚಿತ್ರದಲ್ಲಿ ತೋರಿಸಿರುವ ನೀಳ ಪಟ್ಟಿಗಳಲ್ಲಿ ಕೆಂಪು ಭಾಗಕ್ಕೂ, ನೀಲಿ ಭಾಗಕ್ಕೂ ಇರುವ ಅನುಪಾತ ೧ : ೧.೬೮(  )




                    ಚಿತ್ರ ೨. ಮಾನವನ ಹಸ್ತದ ವಿವಿಧ ಭಾಗಗಳಲ್ಲಿ ಸುವರ್ಣ ಅನುಪಾತ              

ಮುಖಾರವಿಂದದಲ್ಲಿ ಸುವರ್ಣ ಅನುಪಾತ !

ಸುಂದರವಾದ ಒಬ್ಬ ವ್ಯಕ್ತಿಯ ಮುಖವನ್ನೇ ಪರಿಶೀಲಿಸಿದಾಗ, ವ್ಯಕ್ತಿಯ ಮುಖದ ವೈಶಿಷ್ಯಗಳ ರಚನೆಯ ಬಹುತೇಕ ಅಂಶಗಳು ಸುವರ್ಣ ಅನುಪಾತದ ಸಮೀಪ ಇರುವುದನ್ನು ಗಮನಿಸಬಹುದು. ಕೆಲವು ಉದಾಹರಣೆಗಳನ್ನು ನೋಡೋಣ. ಗಲ್ಲದ ತುದಿಯಿಂದ ಮೇಲ್ತುಟಿಯ ತುದಿಗೆ ಮತ್ತು ಅಲ್ಲಿಂದ ಮೂಗಿನ ಹೊಳ್ಳೆಗೆ ಇರುವ  ಅನುಪಾತ, ಗಲ್ಲದ ತುದಿಯಿಂದ ಹುಬ್ಬುಗಳ ಮೇಲಿನ ಸಾಲಿಗೆ ಮತ್ತು ಅಲ್ಲಿಂದ ತಲೆಯ ತುದಿಗೆ ಇರುವ ಅನುಪಾತವೂ ಸುವರ್ಣ ಅನುಪಾತದ ಸಮೀಪವಿದೆ.(೧ : ೧.೬೧೮) ಮುಖದ ಉದ್ದ ಮತ್ತು ಅಗಲದ ನಡುವಿನ ಅನುಪಾತ, ಹಣೆಯ ಎಡತುದಿಯಿಂದ ಬಲತುದಿಯವರೆಗಿನ ಅಗಲ ಹಾಗು ಗಲ್ಲದಿಂದ ತಲೆಯ ತುದಿಯವರೆಗಿನ ಅಗಲದ ಮಧ್ಯೆ ಇರುವ ಅನುಪಾತ, ಹುಬ್ಬುಗಳ ಮಧ್ಯದಿಂದ ತುಟಿಗಳವರೆಗೆ ಹಾಗು ಮೂಗಿನ ಉದ್ದಕ್ಕೆ ಇರುವ ಅನುಪಾತ, ಮೂಗಿನ ಅಗಲ ಮತ್ತು ಹೊಳ್ಳೆಗಳ ಮಧ್ಯೆ ಇರುವ ಅಂತರಕ್ಕೆ ಇರುವ ಅನುಪಾತ ಮತ್ತು ಹುಬ್ಬುಗಳ ಮಧ್ಯೆ ಇರುವ ಅಂತರಕ್ಕೂ ಕಣ್ಣಿನ ಪಾಪೆಗಳ ಮಧ್ಯೆ ಇರುವ ಅಂತರಕ್ಕೂ ಮಧ್ಯದ ಅನುಪಾತ, ಇವೆಲ್ಲವೂ ಸುವರ್ಣ ಅನುಪಾತಕ್ಕೆ ಅತ್ಯಂತ ಸಮೀಪ ಇರುವುದನ್ನು ಗಮನಿಸಬಹುದು. ಅಷ್ಟೆ ಅಲ್ಲ, ಮುಂಭಾಗದ ಎರಡು ಹಲ್ಲುಗಳ ಉದ್ದ ಮತ್ತು ಅಗಲದ ಅನುಪಾತ, ಮತ್ತು ಒಂದು ಹಲ್ಲಿನ ಮಧ್ಯದಿಂದ ಪಕ್ಕದ ಇನ್ನೊಂದು ಹಲ್ಲಿನ ಕೇಂದ್ರ ಭಾಗಕ್ಕಿರುವ ದೂರ, ಇವುಗಳು ಸುವರ್ಣ ಅನುಪಾತಕ್ಕೆ ಸಮೀಪ ಇವೆ. ಹೊಸ ಹಲ್ಲುಗಳನ್ನು ಕಟ್ಟುವಾಗ ದಂತ ಚಿಕಿತ್ಸಕರು ಈ ಎಲ್ಲ ಅಂತರಗಳ ಮಾಪನವನ್ನು ಮಾಡಿಕೊಳ್ಳುತ್ತಾರೆ. ಬೇಕಿದ್ದರೆ, ನಿಮ್ಮ ದಂತ ವೈದ್ಯರನ್ನು ಕೇಳಿ ನೋಡಿ !  

ಚಿತ್ರ ೩. ಮುಖದ ವಿವಿದ ಭಾಗಗಳಲ್ಲಿ ಸುವರ್ಣ ಅನುಪಾತ 

ಸುವರ್ಣ ಅನುಪಾತದ ಪ್ರಭಾವ ಮಾನವ ದೇಹದ ಬಾಹ್ಯ ಲಕ್ಷಣಗಳಿಗೆ ಮಾತ್ರ ಸೀಮಿತವಾಗಿದೆ ಎಂದುಕೊಂಡಿರಾ? ಇಲ್ಲ, ದೇಹದ ಆಂತರಿಕ ರಚನೆಯ ಕೆಲವು ಅಂಶಗಳಲ್ಲಿಯೂ ಇದರ ಛಾಯೆಯನ್ನು ನೋಡಬಹುದು.

ಮಾನವನ ಕಿವಿಯ ಆಂತರಿಕ ರಚನೆಯನ್ನು ನಾವು ತಿಳಿದುಕೊಂಡಿದ್ದೇವೆ, ಅಷ್ಟೇ ಅಲ್ಲ, ಅದನ್ನು ಮಕ್ಕಳಿಗೂ ವಿವರಿಸಿದ್ದೇವೆ, ಒಳಕಿವಿಯಲ್ಲಿ ಶಬ್ದದ ಕಂಪನಗಳನ್ನು ಪಸರಿಸುವ ಕಾಕ್ಲಿಯಾ ಎಂಬ ಭಾಗವಿದೆ. ಅದರ ರಚನೆಯನ್ನು ಗಮನಿಸಿ. ಅದು ಕೆಲ ಮೃದ್ವಂಗಿಗಳ ಚಿಪ್ಪಿನಂತೆ ಸುರುಳಿಯಾಗಿದೆ, ಅಲ್ಲವೇ? (ಚಿತ್ರ ೪). ಈ ಸುರುಳಿಯೂ ಸುವರ್ಣ ಅನುಪಾತದ ಮೇಲೆ ಆಧಾರಿತವಾಗಿದ್ದು, ಈ ಸುರುಳಿಯಾಕಾರವು ಶಬ್ದ ತರಂಗಗಳಲ್ಲಿನ ಶಕ್ತಿಯು ಕ್ರೋಢೀಕರಣಗೊಳ್ಳಲು ನೆರವಾಗುತ್ತದೆ ಎಂದು ಹೇಳಲಾಗಿದೆ. ಇದರ ಮಾಪನವನ್ನು ಶ್ರವಣ ಚಿಕಿತ್ಸೆಯಲ್ಲಿ, ಕಾಕ್ಲಿಯಾ ನೆಡುಗಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

            


ಚಿತ್ರ ೪. ಕಿವಿಯ ಅಡ್ಡ ಸೀಳಿಕೆ : ಕಾಕ್ಲಿಯಾದ ಸುರುಳಿಯನ್ನು ಗಮನಿಸಿ

ಮಾನವನ ಹೃದಯದ ರಚನೆಯ ಕೆಲವು ಸೂಕ್ಷ್ಮ ಅಂಶಗಳಲ್ಲಿ ಸುವರ್ಣ ಅನುಪಾತದ ಅಂಶ ಇರುವುದನ್ನು ಸಂಶೋಧನೆಗಳಿಂದ ತಿಳಿದುಕೊಳ್ಳಲಾಗಿದೆ. ಬಲ ಹೃತ್ಕುಕ್ಷಿಯ ಮಧ್ಯಭಾಗದಿಂದ ಮಹಾಅಪದಮನಿ ಮತ್ತು ಶ್ವಾಸಕೋಶೀಯ ಅಪಧಮನಿಗಳಿಗೆ ನೇರ ಗೆರೆಗಳನ್ನು ಎಳೆದಲ್ಲಿ ಉಂಟಾಗುವ ಕೋನ 37.50. ಅದೇ ರೀತಿ, ಬಲಹೃತ್ಕರ್ಣ ಹಾಗೂ ಶ್ವಾಸಕೋಶೀಯ ಅಪಧಮನಿಗಳ ಮಧ್ಯಭಾಗಕ್ಕೆ ನೇರ ಗೆರೆಗಳನ್ನು ಎಳೆದರೆ, ಅಲ್ಲಿ ಉಂಟಾಗುವ ಕೋನವೂ 37.50. (ಚಿತ್ರ ೫). ಅಂದರೆ, ರಕ್ತ ಹೃದಯದಿಂದ ಹೊರಹೋಗುವ ಮತ್ತು ಒಳಕ್ಕೆ ಬರುವ ಈ ಎರಡು ಮಾರ್ಗಗಳಲ್ಲಿಯೂ ಉಂಟಾಗುವ ಕೋನಗಳ ಅಳತೆ ಒಂದೇ ಇರುತ್ತದೆ. ಈ ಎರಡು ಕೋನಗಳೂ ಸುವರ್ಣ ಕೋನದೊಂದಿಗೆ ನೇರ ಸಂಬಂಧ ತೋರುತ್ತವೆ. ಇದನ್ನು ಆರೋಗ್ಯವಂತ ಹೃದಯದ ಪ್ರಶಸ್ತ ಕಾರ್ಯಕ್ಷಮತೆಯ ಸೂಚಕ ಎಂದು ಪರಿಗಣಿಸಲಾಗುತ್ತದೆ.

ಮಾನವನ ಹೃದಯದ ಬಡಿತ ಸರಾಸರಿ ಒಂದು ನಿಮಿಷಕ್ಕೆ ೭೨ ರಷ್ಟಿರುತ್ತದೆ. ವಿಶ್ರಾಂತ ಅಥವಾ ನಿದ್ರಾ ಸ್ಥಿತಿಯಲ್ಲಿ ಈ ಸರಾಸರಿ ೬೦ ರ ಸಮೀಪ ಇರುತ್ತದೆ. ಉಂಟಾಗುವ ಒತ್ತಡವನ್ನು ಹೃದಯದ ಎಡ ಹೃತ್ಕುಕ್ಷಿಯ ಸಂಕೋಚನದಿಂದಾಗಿ ಹೊರತಳ್ಳಲಾಗುವ ರಕ್ತವು ಮಹಾ ಅಪಧಮನಿಯ ಮೂಲಕ ದೇಹದ ಎಲ್ಲ ಅಪಧಮನಿಗಳಲ್ಲಿ ಹರಿಯತೊಡಗುತ್ತದೆ. ಈ ಪ್ರಕ್ರಿಯೆಯಲ್ಲಿ, ಅಪಧಮನಿಗಳ ಭಿತ್ತಿಯ ಮೇಲೆ ಬೀಳುವ ಒತ್ತಡವನ್ನು ರಕ್ತದೊತ್ತಡ ಎಂದು ಕರೆಯಲಾಗುತ್ತದೆ. ಸಂಕೋಚನ(ಸಿಸ್ಟೋಲ್) ಸ್ಥಿತಿಯಲ್ಲಿ ರಕ್ತದೊತ್ತಡ ೧೧೫ ರಿಂದ ೧೨೫ mm Hg ಇದ್ದರೆ, ವಿಕಸನ (ಡಯಾಸ್ಟೋಲ್) ಸ್ಥಿತಿಯಲ್ಲಿ ಇದು ೭೦ ರಿಂದ ೮೦ mm Hg ಇರುತ್ತದೆ. ಸಿಸ್ಟೋಲಿಕ್ ಒತ್ತಡದ ಗರಿಷ್ಟ ಮಾಪನ ಹಾಗು ಡಯಸ್ಟೋಲಿಕ್ ಒತ್ತಡದ ಕನಿಷ್ಟ ಮಾಪನದ ನಡುವಿನ ಅನುಪಾತವೂ ಸುವರ್ಣ ಅನುಪಾತಕ್ಕೆ ಸಮೀಪವಿದೆ. !

ಹೃದಯದ ಆರೋಗ್ಯದ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಇ,ಸಿ.ಜಿ ಮಾಡಲಾಗುತ್ತದೆಯಲ್ಲವೇ?. ಒಬ್ಬ ಶಾಂತಿಯುತ, ಆರೋಗ್ಯವಂತ ವ್ಯಕ್ತಿಯ ಹೃದಯದ ಇ.ಸಿ.ಜಿ. ದಾಖಲೆಯನ್ನು ನೋಡಿ (ಚಿತ್ರ ೫ಬಿ.),. ಅದರ ಮುಖ್ಯ ಘಟಕಗಳೆಂದರೆ., ಹೃತ್ಕರ್ಣದಲ್ಲಿ ಉದ್ಭವವಾಗುವ ವಿದ್ಯುತ್ ಪ್ರವಾಹದಿಂದ ಉಂಟಾಗುವ ಪಿ-ಅಲೆ(p-wave), ವಿದ್ಯುತ್ ಪ್ರವಾಹ ಹೃತ್ಕುಕ್ಷಿಗಳಿಗೆ ಹರಿಯುವುದನ್ನು ಸೂಚಿಸುವ ಕ್ಯೂಆರೆಸ್ ಸಂಕೀರ್ಣ(qrs complex) ಹಾಗೂ ಹೃತ್ಕುಕ್ಷಿಗಳು ಸಹಜ ಸ್ಥಿತಿಗೆ ಮರಳುವುದನ್ನು ಸೂಚಿಸುವ ಟಿ-ಅಲೆ(t-wave). ಇದರಲ್ಲಿ, ಎರಡು ಅನುಕ್ರಮ qrs ಗಳ ನಡುವೆ ಇರುವ ಅಂತರದಲ್ಲಿ ಸುವರ್ಣ ಅನುಪಾತ ಸ್ಪಷ್ಟವಾಗಿ ವ್ಯಕ್ತವಾಗಿದೆ.                                                                           

ಚಿತ್ರ ೫. ಎ. ಹೃದಯದ ಹೊರ ನೋಟ ಮತ್ತು ಅಡ್ಡ ಸೀಳಿಕೆ.
 

ಚಿತ್ರ ೫. ಬಿ. ಇ.ಸಿ.ಜಿ. ಮುದ್ರಿತ ದಾಖಲೆ

ಉಸಿರಾಟ ವ್ಯವಸ್ಥೆಯಲ್ಲಿಯೂ ಸುವರ್ಣ ಅನುಪಾತದ  ಪ್ರಭಾವವನ್ನು ಗುರುತಿಸಲಾಗಿದೆ. ಪ್ರಮುಖ ಉಸಿರ್ನಾಳವಾದ ಟ್ರೇಕಿಯಾ ವಕ್ಷ ಪ್ರದೇಶದ ಮಧ್ಯದಲ್ಲಿ ಮತ್ತು ಬಲ ಬ್ರಾಂಕಸ್ ಎಂಬ ಎರಡು ಶಾಖೆಗಳಾಗಿ ಒಡೆದು ಸಂಬಂಧಿಸಿದ ಶ್ವಾಸಕೋಶಗಳನ್ನು ಸೇರುತ್ತವೆ. ಎಡ ಬದಿಯ ಬ್ರಾಂಕಸ್ ನೀಳವಾಗಿದ್ದು, ಬಲ ಬದಿಯ ಬ್ರಾಂಕಸ್ ಗಿಡ್ಡವಾಗಿದೆ. ಇವೆರಡರ ನಡುವಿನ ಉದ್ದದ ಅಳತೆಯು ಸುವರ್ಣ ಅನುಪಾತವನ್ನು ಹೊಂದಿದೆ. ಪ್ರತಿಯೊಂದು ಬ್ರಾಂಕಸ್ ಮುಂದುವರೆದು ಮತ್ತೆ ಶಾಖೆಗಳಾಗಿ ಬ್ರಾಂಕಿಯೋಲ್‌ಗಳು ಎಂಬ ಸೂಕ್ಷ್ಮ ರಚನೆಗಳ ಜಾಲವನ್ನೇ ನಿರ್ಮಿಸುತ್ತವೆ. ಎಡಗಡೆಯ ಮತ್ತು ಬಲಗಡೆಯ ಈ ಶಾಖೆಗಳ ಅಳತೆಯ ಮಧ್ಯೆಯೂ ಇದೇ ಸುವರ್ಣ ಅನುಪಾತ ಕಂಡುಬರುತ್ತದೆ.

ಚಿತ್ರ ೬. ಶ್ವಾಸಕೋಶಗಳ ಅಟ್ಟ ಸೀಳಿಕೆ. ಎಡ ಮತ್ತು ಬಲ ಭಾಗದ ಬ್ರಾಂಕಸ್ ನ ಉದ್ದದಲ್ಲಿರುವ ವ್ಯತ್ಯಾಸವನ್ನು ಗಮನಿಸಿ

ಈ ರೀತಿಯ ಹಲವಾರು ನಿದರ್ಶನಗಳು ಮಾನವ ದೇಹರಚನೆಯಲ್ಲಿಯೂ ಸುವರ್ಣ ಅನುಪಾತದ ಪ್ರಭಾವ ಇರುವುದನ್ನು ತೋರಿಸಿಕೊಡುತ್ತವೆ. ಸುವರ್ಣ ಅನುಪಾತ ವ್ಯಕ್ತವಾಗಿರುವ ವ್ಯವಸ್ಥೆಗಳಲ್ಲಿ ಅದು ಹೆಚ್ಚಿನ ಕಾರ್ಯಕ್ಷಮತೆಗೆ ಪೂರಕವಾಗಿರುತ್ತದೆ ಎಂಬ ಅಭಿಪ್ರಾಯವೂ ಇದೆ. ಈ ಬಗ್ಗೆ ಪರ ಮತ್ತು ವಿರೋಧ ಅಭಿಪ್ರಾಯಗಳಿದ್ದು ಹೆಚ್ಚಿನ ಸಂಶೋಧನೆಗಳ ಅವಶ್ಯಕತೆ ಇದೆ.

ಪ್ರಕೃತಿಯಲ್ಲಿ ಹಾಸುಹೊಕ್ಕಾಗಿರುವ ಸುವರ್ಣ ಅನುಪಾತ ಮತ್ತು ಸುವರ್ಣ ಕೋನಗಳ ಪ್ರಭಾವ ಮಾನವ ದೇಹದ ಮೇಲೆಯೂ ಇದೆ ಎಂಬುದನ್ನು ನೀವೇ ಪರೀಕ್ಷಿಸಿ ನೋಡಿಕೊಳ್ಳಬಹುದು. ಅದಕ್ಕೆ, ನಿಮ್ಮ ಮುಖ, ಕೈ ಮತ್ತು ಕಾಲುಗಳ ವಿವಿಧ ಭಾಗಗಳ ಅಳತೆ ಮಾಡಿಕೊಳ್ಳಬೇಕಾಗುತ್ತದೆ ಅಷ್ಟೆ !  ಹೇಗೆ ? ಎಂದು ಯೋಚಿಸುತ್ತಿದ್ದೀರೇನುಸುವರ್ಣ ಅನುಪಾತದ ಮಾಪನ ಮಾಡಲು ಬಳಸಲಾಗುವ ‘ಗೋಲ್ಡನ್ ಮೀನ್ ಗೇಜ್ (golden mean gaugeಎಂಬ ಸಲಕರಣೆಯ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಲೇಖನವೊಂದನ್ನು ನಿರೀಕ್ಷಿಸಿ !

10 comments:

  1. Interesting information.
    natural creation is simply superb....

    ReplyDelete
  2. Well researched and extremely interesting article.

    ReplyDelete
  3. Very much excited to know about the influence of golden ratio not only in the external structure but also in internal structure of human beings. Nature's creations are really wonderful. Thank you sir.

    ReplyDelete
  4. ಬಹಳ ಉಪಯುಕ್ತ ಮಾಹಿತಿ

    ReplyDelete
  5. ಪ್ರಕೃತಿ ಧತ್ತ ಮಾನವನ ದೇಹಕ್ಕೆ ಇಸ್ಟೋಂದು ಅದ್ಬುತ ಸುವರ್ಣ ಅನುಪಾತದ ವಿಭಿನ್ನ ಕೋನಗಳು ಇವೆ..ಎಂದು ತಿಳಿಸಿದಕ್ಕೆ ಧನ್ಯವಾದಗಳು ಗುರೂಜಿ 🙏🙏

    ReplyDelete
  6. ನಿಜವಾಗಿಯೂ ಮೇಲಿನ ವಿಷಯ ವಿಶ್ಲೇಷಣೆ ಮಾಡಿರುವ ಬಗೆಯು ಬಹಳ ಇಷ್ಟವಾಗಿದೆ ಹಾಗೂ ವಿಷಯದ ಮೇಲಿನ ಹಿಡಿತದಿಂದ ಇಷ್ಟು ಉತ್ತಮ ವಿಷಯವನ್ನು ಅಷ್ಟೇ ನಾಜೂಕಾಗಿ ವಿಶ್ಲೇಷಿಸಿದ್ದಿರ ಧನ್ಯವಾದಗಳು 🙏ನಿಮ್ಮ ಇಂದಿನ ಉಪಯುಕ್ತ ಮಾಹಿತಿಗೆ.

    ReplyDelete
  7. ಅದ್ಭುತ. ಗೊತ್ತಿಲ್ಲದ ವಿಷಯ ತಿಳಿಯುವಂತಾಯಿತು ಸರ್. ತಮಗೆ ಧನ್ಯವಾದಗಳು.

    ReplyDelete
  8. ಯೋಜನಾ ಬದ್ಧ ಶರೀರ ವಿಕಾಸ!ಧನ್ಯವಾದಗಳು ಸರ್

    ReplyDelete
  9. ನಾನು ಬರೀ ಕೈ ಅಳತೆ ಬಗ್ಗೆ ಗೊತ್ತಿತ್ತು ಆದರೆ ನಮ್ಮ ದೇಹದಲ್ಲಿ ಇಷ್ಟೊಂದು ಆಳವಾಗಿ ಸುವರ್ಣ ಅನಪಾತದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು

    ReplyDelete